ವಾಯುಭಾರ ಕುಸಿತ, ಸೈಕ್ಲೋನ್‌ ಮತ್ತು ಮಳೆ: ಅಪರೂಪಕ್ಕೆ ನಿಜವಾದ  ಹವಾಮಾನ ಇಲಾಖೆ ಭವಿಷ್ಯ!
ರಾಜ್ಯ

ವಾಯುಭಾರ ಕುಸಿತ, ಸೈಕ್ಲೋನ್‌ ಮತ್ತು ಮಳೆ: ಅಪರೂಪಕ್ಕೆ ನಿಜವಾದ ಹವಾಮಾನ ಇಲಾಖೆ ಭವಿಷ್ಯ!

ಬೆಂಗಳೂರು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬುಧವಾರವೇ ಮಳೆ ಆರಂಭಗೊಂಡಿದೆ. ಅಕ್ಟೋಬರ್‌ 5 ರಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆ ಬಿರುಸುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆ ಮಳೆ ಬರುತ್ತದೆ ಎಂದಾಗ ಮಳೆ ಬರುವುದಿಲ್ಲ. ಮಳೆ ಬರುವ ಬಗ್ಗೆ ಮುನ್ಸೂಚನೆಯೇ ನೀಡದಿರುವಾಗ ಮಳೆ ಬಂದು ಪ್ರವಾಹ ಸೃಷ್ಟಿಯಾಗುತ್ತದೆ. ಹೀಗೊಂದು ವೈರುಧ್ಯದ ಹವಾಮಾನ ಮುನ್ಸೂಚನೆಗಳನ್ನು ನೀಡಿದ ಸಾಕಷ್ಟು ಉದಾಹರಣೆಗಳಿವೆ.

ಆದರೆ ಇತ್ತೀಚೆಗೆ ಸ್ವಲ್ಪ ಟ್ರೆಂಡ್‌ ಬದಲಾಗಿದ್ದು ಹವಾಮಾನ ಇಲಾಖೆ ಹೇಳಿದಾಗಲೇ ಕೊಡಗು ಮತ್ತು ಕರಾವಳಿ ಕರ್ನಾಟಕದಲ್ಲಿ ಮಳೆ ಬಿದ್ದಿತ್ತು. ಇದೀಗ ಈ ಬಾರಿಯೂ ಹವಾಮಾನ ಇಲಾಖೆ ಹೇಳಿದಂತೆ ಇಂದು ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಮಳೆ ಆರಂಭವಾಗಿದೆ. ಇದಕ್ಕೆ ಕಾರಣ ಅರಬ್ಬೀ ಸಮುದ್ರದಲ್ಲಿ ಉಂಟಾಗಲಿರುವ ವಾಯುಭಾರ ಕುಸಿತ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೇರಳ ಕರಾವಳಿಯ ಸಮೀಪ ಆಗ್ನೇಯ ಅರಬ್ಬೀ ಸಮುದ್ರದಲ್ಲಿ ಬಿಸಿಯ ವಾತಾವರಣ ಇದ್ದು ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇಲ್ಲಿ ಅಕ್ಟೋಬರ್‌ 5ರಂದು ವಾಯುಭಾರ ಕುಸಿತ ಉಂಟಾಗಲಿದ್ದು ಮುಂದೆ ಇದು ಚಂಡ ಮಾರುತದ ಸೃಷ್ಟಿಗೆ ಕಾರಣವಾಗಲಿದೆ ಎಂದು ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಅರಬ್ಬೀ ಸಮುದ್ರದಲ್ಲಿ ಆರಂಭಿಕ ಹಂತದಲ್ಲಿರುವ ಚಂಡಮಾರುತಕ್ಕೆ ‘ಸೈಕ್ಲೋನ್‌ ಲುಬಾನ್‌’ ಎಂದು ಹೆಸರಿಡಲಾಗಿದೆ. ಇದೇ ರೀತಿ ಕಡಿಮೆ ಒತ್ತಡದ ಪ್ರದೇಶ, ವಾಯುಭಾರ ಕುಸಿತ ಮತ್ತು ಚಂಡಮಾರುತ ಸೃಷ್ಟಿಯಾಗುವ ಪರಿಸ್ಥಿತಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿಯೂ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಂಗಾಳ ಕೊಲ್ಲಿಯ ಪರಿಸ್ಥಿತಿಗಳು ರಾಜ್ಯದ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಆದರೆ ಅರಬ್ಬೀ ಸಮುದ್ರದ ಈಗಿನ ಸ್ಥಿತಿ ರಾಜ್ಯದಲ್ಲಿ ಮಳೆಗೆ ಕಾರಣವಾಗಲಿದೆ. ಮತ್ತದರ ಆರಂಭಿಕ ಲಕ್ಷಣದಂತೆ ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನ ಹಲವೆಡೆ ಮಳೆ ಆರಂಭವಾಗಿದೆ.

ಇಂದಿನಿಂದ ಕರ್ನಾಟಕದ ಒಳನಾಡು ಕರಾವಳಿ ಭಾಗ ಮತ್ತು ಕೇರಳದಲ್ಲಿ ಹೆಚ್ಚಿನ ಮಳೆ ಆರಂಭವಾಗಲಿದೆ. ಮುಂದಿನ 48 ಗಂಟೆಗಳಲ್ಲಿ ಅರಬ್ಬೀ ಸಮುದ್ರದಲ್ಲಿ ಸೈಕ್ಲೋನ್‌ ಸೃಷ್ಟಿಯಾಗುತ್ತಿದ್ದಂತೆ ಕೇರಳದಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಕೇರಳದ ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು ಅಕ್ಟೋಬರ್‌ 7ರಂದು ರಾಜ್ಯಕ್ಕೆ ಕೇಂದ್ರ ವಿಕೋಪ ನಿರ್ವಹಣಾ ತಂಡದ ಐದು ತುಕಡಿಗಳನ್ನು ಕಳುಹಿಸುವಂತೆ ಪಿಣರಾಯಿ ವಿಜಯನ್‌ ಮನವಿ ಸಲ್ಲಿಸಿದ್ದಾರೆ. ಇಲ್ಲಿ ಬುಧವಾರದಿಂದಲೇ ಮಳೆ ಆರಂಭಗೊಂಡಿದ್ದು, ಅಕ್ಟೋಬರ್‌ 8ರಿಂದ ಒಮ್ಮಿಂದೊಮ್ಮೆಗೆ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದಲ್ಲಿಯೂ ಮಳೆ:

ಕರ್ನಾಟಕದ ಬೆಂಗಳೂರು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬುಧವಾರವೇ ಮಳೆ ಆರಂಭಗೊಂಡಿದೆ. ಅಕ್ಟೋಬರ್‌ 5 ರಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆ ಬಿರುಸುಗೊಳ್ಳಲಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ತಿಳಿಸಿದೆ.

ಮುಖ್ಯವಾಗಿ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಅಕ್ಟೋಬರ್‌ 5ರಿಂದ ಮಳೆಯಾಗಲಿದೆ. ಬೆಂಗಳೂರು ನಗರ ಮತ್ತು ಸುತ್ತ ಮುತ್ತಲಿನ ಭಾಗಗಳಲ್ಲಿ ದಟ್ಟ ಮೋಡ ಕವಿದಿದ್ದು ಅಕ್ಟೋಬರ್‌ 5 ಮತ್ತು 6ರಂದು ಹೆಚ್ಚಿನ ಮಳೆ ಸುರಿಯಲಿದೆ ಎಂದು ಇಲಾಖೆ ತಿಳಿಸಿದೆ. ಅಕ್ಟೋಬರ್‌ 8ರಿಂದ ಮಳೆ ಸ್ವಲ್ಪ ಕಡಿಮೆಯಾಗಲಿದ್ದು ಬೆಂಗಳೂರು ನಗರ, ಬೆಂಗಳೂರ ಗ್ರಾಮಾಂತರ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.