ಮಲ್ಲಿಕಾ ಶೆರಾವತ್ ಗೋಕರ್ಣಕ್ಕೆ ಬಂದಾಗ ‘ಗುರೂಜಿ’ ಕಟ್ಟಿದ ಗಾಡಿ ಬಾಡಿಗೆ ಎಷ್ಟು ಗೊತ್ತಾ?
ರಾಜ್ಯ

ಮಲ್ಲಿಕಾ ಶೆರಾವತ್ ಗೋಕರ್ಣಕ್ಕೆ ಬಂದಾಗ ‘ಗುರೂಜಿ’ ಕಟ್ಟಿದ ಗಾಡಿ ಬಾಡಿಗೆ ಎಷ್ಟು ಗೊತ್ತಾ?

ಇದು 9 ವರ್ಷಗಳ ಹಿಂದೆ ಮಠವೊಂದು ನಟಿಮಣಿಯನ್ನು ಆಂಜನೇಯ ಮೂರ್ತಿ ಉದ್ಘಾಟನೆಗೆ ಕರೆಸಿಕೊಂಡ ಕತೆ. ಆ ಸಮಯದಲ್ಲಿ ಆಕೆಯ ಓಡಾಟಕ್ಕೆ ಲಕ್ಷ ರೂಪಾಯಿ ಖರ್ಚು ಮಾಡಲಾಗಿತ್ತು ಎಂಬುದನ್ನು ಇ-ಮೇಲ್ ಒಂದು ಬಯಲು ಮಾಡುತ್ತಿದೆ.

ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನಟಿ ಮಲ್ಲಿಕಾ ಶೆರಾವತ್‌ಳನ್ನು ‘ಪವಿತ್ರ ಆತ್ಮ’ ಎಂದು ಕರೆದರು. ಹೀಗಂತ ಸುದ್ದಿಯಾಗಿದ್ದು 2009ರಲ್ಲಿ.

ಆಗಿನ್ನೂ ಹೊಸನಗರ ಮೂಲದ ರಾಮಚಂದ್ರಾಪುರ ಮಠದ 36ನೇ ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿ ತಮ್ಮ ‘ಇಮೇಜ್ ಮೇಕ್‌ಓವರ್‌’ಗೆ ಇಳಿದಿದ್ದ ಕಾಲಘಟ್ಟ. ಗೋಕರ್ಣದಲ್ಲಿ ನಿರ್ಮಿಸಿದ್ದ ಆಂಜನೇಯ ಮೂರ್ತಿ ಉದ್ಘಾಟನೆಗೆ ನಟಿ ಮಲ್ಲಿಕಾಳನ್ನು ಕರೆಸಿದ್ದರು. ಆಕೆ ಅವತ್ತಿಗೆ ‘ಮರ್ಡರ್’ ಖ್ಯಾತಿಯ ಉತ್ತುಂಗದಲ್ಲಿದ್ದ ನಟಿ. ಅದರ ಜತೆ ಜತೆಗೆ ವಿಶ್ವ ಗೋ ಸಮ್ಮೇಳನದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಒಟ್ಟಾರೆ, ಗೋವನ್ನು ಇಟ್ಟುಕೊಂಡು ಪ್ರವರ್ಧಮಾನಕ್ಕೆ ಬರುವ ಹವಣಿಕೆ ಅವರಲ್ಲಿತ್ತು.

ಸುಮಾರು 9 ವರ್ಷಗಳ ನಂತರ ‘ಸಮಾಚಾರ’ಕ್ಕೆ ಸೋರಿಕೆಯಾಗಿರುವ ಮಠದ ಇ-ಮೇಲ್‌ ಒಂದು ಅಂದು ನಟಿ ಮಲ್ಲಿಕಾ ಬಂದಿದ್ದಾಗ ಆಗಿದ್ದ ಸಾರಿಗೆ ವೆಚ್ಚ ಎಷ್ಟು ಎಂಬುದನ್ನು ಬಯಲಿಗಿಟ್ಟಿದೆ. ಜತೆಗೆ ಇನ್ನೊಂದಿಷ್ಟು ಪೂರಕ ಮಾಹಿತಿ ಲಭ್ಯವಾಗಿದೆ.

ಅದು ಸ್ವಸ್ವರ ರೆಸಾರ್ಟ್‌:

ಗೋಕರ್ಣಕ್ಕೆ ಬಂದಿಳಿದ ನಟಿ ಮಲ್ಲಿಕಾಳಿಗಾಗಿ ಐಷಾರಾಮಿ ಸ್ವಸ್ವರ ರೆಸಾರ್ಟ್ ಬುಕ್ ಮಾಡಲಾಗಿತ್ತು. “ಎರಡು ಕೋಣೆಗಳನ್ನು ಎರಡು ದಿನಗಳಿಗಾಗಿ ರೆಸಾರ್ಟ್‌ನಲ್ಲಿ ಬುಕ್ ಮಾಡಿದ್ದೆವು. ಅದಕ್ಕಾಗಿ ಸುಮಾರು 1.5 ಲಕ್ಷ ಮಠದ ಕಡೆಯಿಂದ ಸಂದಾಯ ಮಾಡಲಾಗಿತ್ತು,’’ ಎಂಬ ಮಾಹಿತಿ ನೀಡುತ್ತಾರೆ ಅಂದು ನಟಿಯ ಆತಿಥ್ಯಕ್ಕೆ ನಿಂತಿದ್ದ ಮಠದ ಕಡೆಯವರೊಬ್ಬರು.

ಇದರ ಜತೆಗೆ, ನಟಿ ಮಲ್ಲಿಕಾಳನ್ನು ಗೋಕರ್ಣ ಸುತ್ತ ಮುತ್ತ ಓಡಾಡಿಸಲು, ಎರಡು ಕಾರುಗಳನ್ನು ಮಠದ ಕಡೆಯಿಂದ ಬಾಡಿಗೆಗೆ ಪಡೆಯಲಾಗಿತ್ತು. ಇದರಲ್ಲಿ ಟಾಟಾ ಇಂಡಿಕಾ ಎಸಿ ಕಾರು ಸುಮಾರು 1,149 ಕಿ. ಮೀ ಸುತ್ತಾಡಿತ್ತು. ಪ್ರತಿ ಕಿ.ಮೀಗೆ 6. 5 ರೂಪಾಯಿ ಲೆಕ್ಕದಲ್ಲಿ ಸಂದಾಯವಾಗಬೇಕಾದ ಮೊತ್ತ 7,468 ರೂಪಾಯಿಗಳು.

ಇದರ ಜತೆಗೆ, ಫೋಕ್ಸ್‌ವ್ಯಾಗನ್ ಕಾರೊಂದನ್ನು ‘ಗುರೂಜಿ’ ಬಾಡಿಗೆಗೆ ಪಡೆದಿದ್ದರು. ಇದು ಎರಡು ದಿನಗಳಲ್ಲಿ ಸುಮಾರು 1,350 ಕಿ. ಮೀ ದೂರ ನಟಿ ಮಲ್ಲಿಕಾಳನ್ನು ಹೊತ್ತುಕೊಂಡು ಸುತ್ತಾಡಿತ್ತು. ಇದಕ್ಕೆ ಪ್ರತಿ ಕಿ. ಮೀಗೆ ಸುಮಾರು 70 ರೂಪಾಯಿಗಳ ಲೆಕ್ಕದಲ್ಲಿ ಒಟ್ಟು 94,500 ರೂಪಾಯಿಗಳನ್ನು ಸಂದಾಯ ಮಾಡುವಂತೆ (ಇದರಲ್ಲಿ 30 ಸಾವಿರ ಮುಂಗಡ ಪಾವತಿ ಆಗಿತ್ತು) ‘ಇಂಟರ್‌ನ್ಯಾಷನಲ್ ಟ್ರ್ಯಾವೆಲ್ ಝೋನ್’ ಹೆಸರಿನ ಕಂಪನಿ ‘ಗುರೂಜಿ’ಗೆ ಇ-ಮೇಲ್ ಕಳಿಸಿತ್ತು.

ಗುರೂಜಿಗೆ ಕಳುಹಿಸಿದ ಇ-ಮೇಲ್. 
ಗುರೂಜಿಗೆ ಕಳುಹಿಸಿದ ಇ-ಮೇಲ್. 

ಹೀಗೊಂದು ಇ-ಮೇಲ್‌ನಲ್ಲಿ ಸಿಕ್ಕ ಮಾಹಿತಿಯನ್ನು ಪರಿಶೀಲನೆಗೆ ಒಳಪಡಿಸಿದಾಗ, ‘ಗುರೂಜಿ’ ನಟಿ ಮಲ್ಲಿಕಾ ಶೆರಾವತ್‌ಗಾಗಿ ಎರಡು ಕಾರುಗಳನ್ನು ಬಳಸಿದ್ದು ಖಾತ್ರಿಯಾಗಿದೆ. ಜತೆಗೆ, ನಟಿ ಗೋಕರ್ಣದಲ್ಲಿ ಉಳಿದುಕೊಂಡಿದ್ದನ್ನು ರೆಸಾರ್ಟ್‌ ಮೂಲಗಳು ಖಚಿತ ಪಡಿಸುತ್ತವೆ.

ಸರ್ವಸಂಗ ಪರಿತ್ಯಾಗಿ ಸ್ವಾಮಿಗಳು, ತಮ್ಮ ಪ್ರತಿಷ್ಠೆಗಾಗಿ ನಟಿಯೊಬ್ಬಳನ್ನು ಕರೆಸುತ್ತಾರೆ ಮತ್ತು ಆಕೆಯ ಓಡಾಟಕ್ಕೆ ಒಟ್ಟು 1,06,819 ರೂಪಾಯಿ ಬಿಲ್ ಮಾಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೆ. ಅದೂ ಸುಮಾರು 9 ವರ್ಷಗಳ ಹಿಂದೆ ಎಂಬುದು ಗಮನಾರ್ಹ.

ಲಭ್ಯ ಮಾಹಿತಿ ಪ್ರಕಾರ, “ಮಠ ಮೊದಲು ಅಮೆರಿಕಾದ ಖ್ಯಾತ ಟಿವಿ ಪತ್ರಕರ್ತೆ ಓಪ್ರಾ ವಿನ್‌ಫ್ರೇ ಕರೆಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸಾಧ್ಯವಾಗದೆ ಮಲ್ಲಿಕಾ ಶೆರಾವತ್‌ಳನ್ನು ಕರೆಸಲಾಯಿತು. ಆಕೆಯನ್ನು ಇಟ್ಟುಕೊಂಡು ಅಮೆರಿಕಾದಲ್ಲಿ ಗೋ ಸಂರಕ್ಷಣೆ ಹೆಸರಿನಲ್ಲಿ ಚಂದಾ ಎತ್ತುವ ಯೋಜನೆ ಇದಾಗಿತ್ತು. ಅಂದ ಹಾಗೆ, ಮಲ್ಲಿಕಾ ಶೆರಾವತ್‌ ಗೋಕರ್ಣಕ್ಕೆ ಬರಲು ಮುಖ್ಯಕಾರಣ ಚಂದಾ ಎಂಬ ಮುಂಬೈ ಮೂಲದ, ಸದ್ಯ ಅಮೆರಿಕಾದಲ್ಲಿರುವ ಒಬ್ಬ ಹೆಂಗಸು.’’ ಎಂಬ ಇನ್ನಷ್ಟು ಅಂತರಂಗದ ಮಾಹಿತಿ ಲಭ್ಯವಾಗುತ್ತದೆ.