‘ಪುನಶ್ಚೇತನ’ ಮರೆತ ಸರಕಾರ: ಚಿತ್ರದುರ್ಗದಲ್ಲಿ ದಾಳಿಂಬೆ ಬೆಳೆದು ಬೀದಿಗೆ ಬಿದ್ದ ರೈತರು 
ರಾಜ್ಯ

‘ಪುನಶ್ಚೇತನ’ ಮರೆತ ಸರಕಾರ: ಚಿತ್ರದುರ್ಗದಲ್ಲಿ ದಾಳಿಂಬೆ ಬೆಳೆದು ಬೀದಿಗೆ ಬಿದ್ದ ರೈತರು 

ದಿವಾಳಿಯಾಗಿರುವ ದಾಳಿಂಬೆ ರೈತರ ನೆರವಿಗೆ ಬರಬೇಕಿದ್ದ ಸರಕಾರ ನಾಲ್ಕು ತಿಂಗಳಾದರೂ ಇನ್ನೂ ತಾನೇ ‘ಸ್ಥಿರ’ಗೊಳ್ಳಲು ಹೆಣಗಾಡುತ್ತಿದೆ.

ಐದಾರು ವರ್ಷದ ಹಿಂದೆ ದಾಳಿಂಬೆ ಗಿಡಗಳಿಂದ ತುಂಬಿದ್ದ ಚಿತ್ರದುರ್ಗ ಜಿಲ್ಲೆಯ ಹಲವು ಭಾಗದ ಹೊಲಗಳು ಈಗ ಬರಡಾಗಿ ನಿಂತಿವೆ. ರೋಗ ಹಾಗೂ ಕೀಟ ಬಾಧೆಗೆ ಸಿಲುಕಿದ್ದ ದಾಳಿಂಬೆ ಗಿಡಗಳನ್ನು ಹಲವು ಕಡೆಗಳಲ್ಲಿ ರೈತರೇ ಕಿತ್ತು ಹಾಕಿದ್ದಾರೆ. ವಾಣಿಜ್ಯ ಬೆಳೆಯಿಂದ ಒಂದಷ್ಟು ಹಣ ಮಾಡಿಕೊಳ್ಳುವ ಆಸೆಯಿಂದ ದಾಳಿಂಬೆ ಬೆಳೆಯಲು ಕೈ ಹಾಕಿದ್ದ ಸಣ್ಣ ಹಾಗೂ ಅತಿ ಸಣ್ಣ ರೈತರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಆದರೆ, ಇವರ ಕೈ ಹಿಡಿಯಬೇಕಿದ್ದ ಪುನಶ್ಚೇತನ ಕಾರ್ಯಕ್ರಮ ಇನ್ನೂ ಹಾಳೆಗಳ ಮೇಲಿದೆ.

2001ರ ಸುಮಾರಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ದಾಳಿಂಬೆ ಕೃಷಿ ನಡೆಯುತ್ತಿತ್ತು. 2008ರ ವೇಳೆಗೆ ದಾಳಿಂಬೆ ಬೆಳೆಯುತ್ತಿದ್ದ ಈ ಭಾಗದ ದೊಡ್ಡ ರೈತರಿಗೆ ಉತ್ತಮ ಲಾಭವಾಗುತ್ತಿತ್ತು. ಇದನ್ನು ಕಂಡ ಸಣ್ಣ ಹಿಡುವಳಿದಾರರು ಒಂದು, ಅರ್ಧ ಎಕರೆಯಲ್ಲೂ ದಾಳಿಂಬೆ ಗಿಡ ಹಾಕಲು ಮುಂದಾದರು. ಕೃಷಿ ಭೂಮಿ ಇಲ್ಲದವರೂ ಬರಡು ಬಿದ್ದಿದ್ದ ಜಮೀನನ್ನು ಭೋಗ್ಯಕ್ಕೆ ಪಡೆದು ಕೊಳವೆಬಾವಿ ಕೊರೆಸಿ ದಾಳಿಂಬೆ ಕೃಷಿಗೆ ಮುಂದಾಗಿದ್ದರು.

ಆರಂಭದಲ್ಲಿ ದಾಳಿಂಬೆ ಕೃಷಿ ಈ ಭಾಗದಲ್ಲಿ ಲಾಭದಾಯಕವಾಗಿಯೇ ಇತ್ತು. ಕೆಲವು ರೈತರು ದಾಳಿಂಬೆ ಬೆಳೆಯಿಂದ ಪ್ರತಿ ಎಕರೆಗೆ ಸುಮಾರು 8 ಲಕ್ಷ ರೂಪಾಯಿವರೆಗೆ ಆದಾಯ ಕಂಡಿದ್ದಾರೆ. ಆದರೆ, ದಾಳಿಂಬೆ ಕೃಷಿ ಪ್ರದೇಶ ಹೆಚ್ಚಾದಂತೆ ದುಂಡಾಣು ಅಂಗಮಾರಿ ರೋಗ (ಬ್ಯಾಕ್ಟೀರಿಯಲ್‌ ಬ್ಲೈಟ್‌) ಮತ್ತು ಸೊರಗು ರೋಗ ಹೆಚ್ಚಾಯಿತು. ಕಳೆದ ಐದಾರು ವರ್ಷಗಳಿಂದ ನಿಯಂತ್ರಣಕ್ಕೆ ಬಾರದ ಮಟ್ಟಿಗೆ ರೋಗ ಬಾಧೆ ದಾಳಿಂಬೆಯನ್ನು ಪೀಡಿಸಲು ಶುರು ಮಾಡಿತ್ತು. ಲಾಭದ ಆಸೆಯಿಂದ ಬಂಡವಾಳ ಹಾಕಿದ್ದ ಸಣ್ಣ ರೈತರು ಕೈ ಸುಟ್ಟಿಕೊಂಡು ಬೀದಿಗೆ ಬಿದ್ದರು. ಕೆಲವರು ದಾಳಿಂಬೆ ಗಿಡ ಕಡಿದು ಹಾಕಿ, ರಾಗಿ, ಜೋಳ ಬೆಳೆಯಲು ಮುಂದಾದರೆ, ಇನ್ನೂ ಕೆಲವರು ಒಣಗಿದ ದಾಳಿಂಬೆ ಗಿಡಗಳನ್ನು ಹಾಗೆಯೇ ಬಿಟ್ಟು ಊರನ್ನೇ ಬಿಡಬೇಕಾಯಿತು.

ಸುಮಾರು ಹತ್ತು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 18 ಸಾವಿರ ಎಕರೆಯಲ್ಲಿ ಬೆಳೆಯುತ್ತಿದ್ದ ದಾಳಿಂಬೆ ಈಗ ಸುಮಾರು ಮೂರು ಸಾವಿರ ಎಕರೆಯಷ್ಟು ಭಾಗಕ್ಕೆ ಬಂದಿದೆ. ಸಣ್ಣ ಪ್ರಮಾಣದಲ್ಲಿ ಅಚ್ಚುಕಟ್ಟಾಗಿ ತೋಟ ನೋಡಿಕೊಳ್ಳುವವರು ಮಾತ್ರ ಬೆಳೆ ಉಳಿಸಿಕೊಂಡಿದ್ದಾರೆ. ಬೆಳೆಯಿಂದ ನಷ್ಟ ಅನುಭವಿಸಿದ ಸಾಕಷ್ಟು ಸಣ್ಣ ಹಿಡುವಳಿದಾರರು ಸಾಲ ಮಾಡಿಕೊಂಡು ಊರು ಬಿಡುವ ಸ್ಥಿತಿಗೆ ಬಂದಿದ್ದಾರೆ. ಆದರೆ, ಸರಕಾರ ಮಾತ್ರ ಈ ರೈತರ ನೆರವಿಗೆ ಬರುತ್ತಿಲ್ಲ.

ಪುನಶ್ಚೇತನ ಕಾರ್ಯಕ್ರಮದ ಪ್ರಸ್ತಾವದ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕರೆಸಿ ಮಾತನಾಡುತ್ತೇನೆ. ದಾಳಿಂಬೆ ಬೆಳೆಯಿಂದ ಕೈ ಸುಟ್ಟಿಕೊಂಡಿರುವ ರೈತರ ನೆರವಿಗೆ ಸರಕಾರ ಬರಲಿದೆ.
- ಎಂ.ಸಿ. ಮನಗೂಳಿ, ತೋಟಗಾರಿಕೆ ಸಚಿವ

“ಆರಂಭದಲ್ಲಿ ಲಾಭ ಮಾಡಿಕೊಂಡವರನ್ನು ನೋಡಿ ಸಣ್ಣ ರೈತರೆಲ್ಲಾ ದಾಳಿಂಬೆ ಹಾಕಲು ಶುರುಮಾಡಿದರು. ನಾವೂ ಎರಡು ಎಕರೆಗೆ ದಾಳಿಂಬೆ ಹಾಕಿದ್ದೆವು. ಆರಂಭದಲ್ಲಿ ಒಳ್ಳೆಯ ಬೆಲೆ ಸಿಕ್ಕಿತ್ತು. ನಂತರದ ವರ್ಷಗಳಲ್ಲಿ ರೋಗ ಬಾಧೆ ಹೆಚ್ಚಾಯಿತು. ಬೆಳೆ ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ರೈತರು ವಿಪರೀತ ಔಷಧಗಳನ್ನು ಹೊಡೆಯಲು ಶುರುಮಾಡಿದರು. ಇದರಿಂದ ಔಷಧಿ, ಕೀಟನಾಶಕಗಳ ಅಂಗಡಿಗಳವರು ಉದ್ಧಾರವಾದರು. ರೈತರು ಬೆಳೆ ಕಳೆದುಕೊಂಡು ಕಂಗಾಲಾದರು” ಎನ್ನುತ್ತಾರೆ ದಾಳಿಂಬೆ ಬೆಳೆದು ಕೈ ಸುಟ್ಟಿಕೊಂಡಿರುವ ಹೊಸದುರ್ಗ ಭಾಗದ ರೈತ ಪ್ರಸನ್ನ ಕುಮಾರ್‌.

“ಬರ ಬಂದ ಕಾಲದಲ್ಲಿ ದಾಳಿಂಬೆ ಬೆಳೆ ಉಳಿಸಿಕೊಳ್ಳಲು ಎಕರೆಗೆ ಐದಾರು ಕೊಳವೆಬಾವಿಗಳನ್ನು ಕೊರೆಸಿದ್ದರು. ಇದರ ಪರಿಣಾಮ ಇಂದು ಅಂತರ್ಜಲ ಬರಿದಾಗಿದೆ. ಹೊಲ, ತೋಟಗಳು ನೀರಿಲ್ಲದೆ ಒಣಗುತ್ತಿವೆ. ಲಾಭದ ಆಸೆಯಿಂದ ದಾಳಿಂಬೆ ಕೃಷಿಯ ಬೆನ್ನು ಬಿದ್ದ ಸಣ್ಣ ರೈತರು ಇಂದು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ನೆರವಿಗೆ ಬರಬೇಕಿದ್ದ ಸರಕಾರ ಸದ್ಯಕ್ಕೆ ಸುಮ್ಮನೆ ಕುಳಿತಿದೆ” ಎಂಬ ಅಸಮಾಧಾನ ಅವರದ್ದು.

ನಾನು ಅಧಿಕಾರ ವಹಿಸಿಕೊಂಡು ನಾಲ್ಕು ದಿನವಷ್ಟೇ ಆಗಿದೆ. ದಾಳಿಂಬೆ ಬೆಳೆಯ ಪುನಶ್ಚೇತನ ಕಾರ್ಯಕ್ರಮದ ಬಗ್ಗೆ ಈ ಹಿಂದೆ ಇದ್ದ ಅಧಿಕಾರಿಗಳು ಪ್ರಸ್ತಾವ ಕಳಿಸಿರುವ ಬಗ್ಗೆ ಪರಿಶೀಲಿಸುತ್ತೇನೆ.
- ಸವಿತಾ, ಉಪ ನಿರ್ದೇಶಕಿ, ತೋಟಗಾರಿಕೆ ಇಲಾಖೆ, ಚಿತ್ರದುರ್ಗ

“ದಾಳಿಂಬೆ ಬೆಳೆಗೆ ದುಂಡಾಣು ಅಂಗಮಾರಿ ರೋಗ ಬಂದರೆ ಗಿಡ ಉಳಿಸಿಕೊಳ್ಳುವುದು ಕಷ್ಟ. ಈ ರೋಗ ಹೆಚ್ಚಾದ ಕಾರಣಕ್ಕೆ ದಾಳಿಂಬೆ ಕೃಷಿ ಹೊಸದುರ್ಗ ಭಾಗದಲ್ಲಿ ಹಾಳಾಯಿತು. ರೋಗ ನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನೂ ತೋಟಗಾರಿಕೆ ಇಲಾಖೆಯಿಂದ ಆಗ ನಡೆಸಿದ್ದೆವು. ಆದರೆ, ರೈತರು ಬೋಗಸ್‌ ಕೃಷಿ ತಜ್ಞರು ಹಾಗೂ ಔಷಧಿ ಅಂಗಡಿಗಳ ಮೊರೆ ಹೋಗುವುದು ಹೆಚ್ಚಾಗಿತ್ತು. ಹೀಗಾಗಿ ವರ್ಷದಿಂದ ವರ್ಷಕ್ಕೆ ದಾಳಿಂಬೆ ಬೆಳೆ ಸಂಪೂರ್ಣ ಹಾಳಾಯಿತು” ಎನ್ನುತ್ತಾರೆ ತೋಟಗಾರಿಗೆ ಇಲಾಖೆಯ ಹೊಸದುರ್ಗದ ಹಿರಿಯ ಸಹಾಯಕ ನಿರ್ದೇಶಕ ರೋಹಿತ್‌.

ರೋಗ ಬಾಧೆಯಿಂದ ಹಾಳಾದ ಗಿಡಗಳನ್ನು ಬಹುತೇಕ ರೈತರು ತೆಗೆದು ಹಾಕಿ ಈಗ ಬೇರೆ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಬರಡಾಗಿರುವ ಸಾವಿರಾರು ಎಕರೆ ಪ್ರದೇಶದಲ್ಲಿ ದಾಳಿಂಬೆ ಗಿಡಗಳು ಇನ್ನೂ ಒಣಗಿ ನಿಂತಿವೆ. ರೋಗ ಬಾಧೆಗೆ ತುತ್ತಾಗಿರುವ ಅದೆಷ್ಟೋ ತೋಟಗಳನ್ನು ರೈತರು ಹಾಗೆಯೇ ಕೈ ಚೆಲ್ಲಿ ಬಿಟ್ಟಿದ್ದಾರೆ.

ಇಚ್ಛಾಶಕ್ತಿ ಇಲ್ಲದ ಜನಪ್ರತಿನಿಧಿಗಳು, ಕರ್ತವ್ಯ ಬದ್ಧತೆ ಇಲ್ಲದ ಅಧಿಕಾರಿಗಳು ಹಾಗೂ ತಾವು ಸಂಘಟಿತರಾಗದ ಕಾರಣಕ್ಕೆ ಸಣ್ಣ ಹಿಡುವಳಿದಾರರು ಈ ಭಾಗದಲ್ಲಿ ದಾಳಿಂಬೆ ಬೆಳೆದು ಬದುಕನ್ನೇ ಬೀದಿಗೆ ತಂದುಕೊಂಡಿದ್ದಾರೆ. ದಿವಾಳಿಯಾಗಿರುವ ಈ ಸಣ್ಣ ರೈತರ ನೆರವಿಗೆ ಬರಬೇಕಿದ್ದ ಸರಕಾರ ನಾಲ್ಕು ತಿಂಗಳಾದರೂ ಇನ್ನೂ ತಾನೇ ‘ಸ್ಥಿರ’ಗೊಳ್ಳಲು ಹೆಣಗಾಡುತ್ತಿದೆ.