samachara
www.samachara.com
‘ಕೊಡಗಿನ ದುರಂತಕ್ಕೆ ಮಾನವ ಕಾರಣ ಎಂಬ ವಾದದಲ್ಲಿ ಹುರುಳಿಲ್ಲ’: ಎ. ಕೆ. ಸುಬ್ಬಯ್ಯ ಸಂದರ್ಶನ
ರಾಜ್ಯ

‘ಕೊಡಗಿನ ದುರಂತಕ್ಕೆ ಮಾನವ ಕಾರಣ ಎಂಬ ವಾದದಲ್ಲಿ ಹುರುಳಿಲ್ಲ’: ಎ. ಕೆ. ಸುಬ್ಬಯ್ಯ ಸಂದರ್ಶನ

ಕಸ್ತೂರಿ ರಂಗನ್, ಮಾಧವ ಗಾಡ್ಗೀಳ್ ವರದಿ ಖಂಡಿತವಾಗಿಯೂ ಕೊಡಗಿನ ಪರಿಸರದ ಉಳಿವಿಗೆ ಪೂರಕವಾಗಿಲ್ಲ. ಬದಲಿಗೆ ಅವು ತಲೆ ತಲಾಂತರಗಳಿಂದ ಸ್ವಯಂ ಪ್ರೇರಿತವಾಗಿ ಕಾಡಿನ ರಕ್ಷಣೆ ಮಾಡಿಕೊಂಡು ಬಂದಿರುವ ಕೊಡಗಿನ ಮೂಲ ನಿವಾಸಿಗಳ ಹಕ್ಕುಗಳನ್ನು ಕಸಿಯುತ್ತವೆ.

ನೇರ ನಡೆನುಡಿಯ, ನಿಷ್ಟುರವಾದಿ ಎಂದು ಹೆಸರಾಗಿರುವ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಕೊಡಗಿನ ಈ ಶತಮಾನದ ಭೀಕರ ದುರಂತಕ್ಕೆ ಕಸ್ತೂರಿ ರಂಗನ್ ಅವರ ವರದಿಯನ್ನು ಜಾರಿಗೊಳಿಸದಿದ್ದುದೇ ಕಾರಣವಲ್ಲ ಎಂದಿದ್ದಾರೆ. ಈ ಮೂಲಕ ಪರಿಸರವಾದಿಗಳ ವಾದಕ್ಕೆ ವಿರುದ್ಧವಾದ ಒಳನೋಟವನ್ನು ಎ. ಕೆ. ಸುಬ್ಬಯ್ಯ ನೀಡಿದ್ದಾರೆ.

ಕೊಡಗಿನ ಈ ಭೀಕರ ದುರಂತದಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು 13 ಹಳ್ಳಿಗಳು ಸಂಪೂರ್ಣ ಆಸ್ತಿತ್ವ ಕಳೆದುಕೊಂಡಿವೆ. ಸುಮಾರು 1200 ಮನೆಗಳು ಭಾಗಶಃ ಹಾನಿಗೀಡಾಗಿವೆ. ಸದ್ಯ ಪರಿಹಾರ ಕಾರ್ಯಾಚರಣೆ ಬಿರುಸಿನಿಂದ ಸಾಗಿದ್ದು ಈ ಹಿಂದೆ ಇಲ್ಲಿ ಸೇವೆ ಸಲ್ಲಿಸಿದ್ದ ಜಿಲ್ಲಾಧಿಕಾರಿಗಳಾದ ಚಾರುಲತಾ ಸೋಮಲ್, ರಿಚರ್ಡ್ ಡಿಸೋಜ, ರಾಜ್ಯ ವಸತಿ ಇಲಾಖೆಯ ನಿರ್ದೇಶಕ ಅನ್ಬು ಕುಮಾರ್ ಅವರು ಕೊಡಗಿನಲ್ಲೇ ಮೊಕ್ಕಾಂ ಹೂಡಿದ್ದಾರೆ. ಸುಮಾರು 2,560 ಸಂತ್ರಸ್ತರು ಇನ್ನೂ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು ರಾಜ್ಯದ ವಿವಿಧೆಡೆಗಳಿಂದ ಸಂತ್ರಸ್ತರಿಗೆ ನೆರವಿನ ಮಹಾಪೂರ ಹರಿದು ಬರುತ್ತಿದೆ. ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಖಾತೆಗೆ ತುರ್ತು ಪರಿಹಾರವಾಗಿ 115 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ಇಂಥಹದ್ದೊಂದು ಸಂದರ್ಭದಲ್ಲಿ ‘ಸಮಾಚಾರ’ದೊಂದಿಗೆ ಮಾತನಾಡಿದ ಹಿರಿಯ ವಕೀಲ ಎ. ಕೆ. ಸುಬ್ಬಯ್ಯ, ‘ಈ ಸಂಕಷ್ಟ ಪರಿಸ್ಥಿತಿಯಲ್ಲಿ ಜನತೆಗೆ ಚಿಕ್ಕಾಸಿನ ಸಹಾಯವನ್ನು ಮಾಡದೇ, ಈ ದುರಂತವನ್ನು ಮಾನವ ನಿರ್ಮಿತ ಎಂದು ಬಿಂಬಿಸುತ್ತಾ ಪರಿಸರವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ’ ಎಂದು ಗುಡುಗಿದ್ದಾರೆ.

ಅವರ ಜತೆ ನಡೆಸಿದ ಸಂದರ್ಶನ ಇಲ್ಲಿದೆ:

ಸಮಾಚಾರ: ಕೊಡಗಿನ ಇಂದಿನ ದುರಂತಕ್ಕೆ ಪರಿಸರದ ಮೇಲೆ ಮಾನ ಎಸಗಿದ ಕೃತ್ಯಗಳು ಕಾರಣವೇ?

ಎ. ಕೆ. ಸುಬ್ಬಯ್ಯ: ಖಂಡಿತಾ ಅಲ್ಲ. ಇದು ಜಾಸ್ತಿ ಮಳೆ ಬಿದ್ದಿರುವ ಕಾರಣದಿಂದ ಆಗಿರುವ ಅನಾಹುತ. ಎರಡು ವರ್ಷಗಳಿಂದ ಕೊಡಗಿನಲ್ಲಿ ಬರಗಾಲ ಇತ್ತು. ಕೊಡಗಿನಲ್ಲಿ ಆಗಸ್ಟ್ ತಿಂಗಳಿನಲ್ಲೇ ದಾಖಲೆ ಪ್ರಮಾಣದ ಮಳೆ ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ. ಇದರಲ್ಲಿ ಮಾನವನದ್ದೇ ಸಂಪೂರ್ಣ ತಪ್ಪು ಎಂದು ಹೇಳಲಾಗದಿದ್ದರೂ, ಅಲ್ಪ ಕಾರಣ ಮಾತ್ರ ಇದ್ದೇ ಇದೆ.

ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದಿದ್ದರೆ ಕೊಡಗಿನ ಪರಿಸರ ಉಳಿಯುತ್ತಿತ್ತೇ?

ಕಸ್ತೂರಿ ರಂಗನ್ ವರದಿ ಮತ್ತು ಮಾಧವ ಗಾಡ್ಗೀಳ್ ವರದಿ ಖಂಡಿತವಾಗಿಯೂ ಕೊಡಗಿನ ಪರಿಸರದ ಉಳಿವಿಗೆ ಪೂರಕವಾಗಿಲ್ಲ. ಬದಲಿಗೆ ಅವು ತಲೆ ತಲಾಂತರಗಳಿಂದ ಸ್ವಯಂ ಪ್ರೇರಿತವಾಗಿ ಕಾಡಿನ ರಕ್ಷಣೆ ಮಾಡಿಕೊಂಡು ಬಂದಿರುವ ಕೊಡಗಿನ ಮೂಲ ನಿವಾಸಿಗಳ ಹಕ್ಕುಗಳನ್ನು ಕಸಿಯುತ್ತವೆ. ಅಲ್ಲದೆ ಪರಿಸರವಾದಿಗಳ ಅಣತಿಯ ಮೇರೆಗೆ ಈ ವರದಿ ತಯಾರಿಸಲಾಗಿದೆ.

ಕಸ್ತೂರಿ ರಂಗನ್ ವರದಿಯ ಯಥಾವತ್ ಜಾರಿ ಪಶ್ಚಿಮ ಘಟ್ಟಗಳ ಅರಣ್ಯ ನಾಶವನ್ನು ತಪ್ಪಿಸಬಲ್ಲುದೆ?

ನಾನು ಮೊದಲೇ ಹೇಳಿದಂತೆ ಈ ವರದಿ ದೋಷಪೂರಿತವಾಗಿದ್ದು ವರದಿಯ ಬಗ್ಗೆ ಪಶ್ಚಿಮ ಘಟ್ಟಗಳ ಮೂಲನಿವಾಸಿಗಳನ್ನು ಸಂಪೂರ್ಣ ಕತ್ತಲೆಯಲ್ಲಿ ಇಡಲಾಗಿತ್ತು. ಕಸ್ತೂರಿ ರಂಗನ್ ಅವರು ಇಲ್ಲಿನ ಮೂಲ ನಿವಾಸಿಗಳ ಜತೆ ಯಾವುದೇ ಚರ್ಚೆ ಮಾಡಿಲ್ಲ, ಖುದ್ದು ಪರಿಶೀಲನೆ ನಡೆಸಿಲ್ಲ. ಬದಲಿಗೆ ನಕಲಿ ಪರಿಸರವಾದಿಗಳ ಜತೆ ಸೇರಿಕೊಂಡು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತುಕೊಂಡು ತಯಾರಿಸಿದ ವರದಿ ಇದಾಗಿದೆ.

ಗುಡ್ಡ ಕುಸಿದಿರುವ ಸ್ಥಳ ವಾಸ ಯೋಗ್ಯ ಅಲ್ಲ ಎಂಬ ಕೆಲ ಭೂ ವಿಜ್ಞಾನಿಗಳ ಮಾತನ್ನು ಒಪ್ಪುತ್ತೀರೋ?

ಕೊಡಗಿನಲ್ಲಿ ಈ ಹಿಂದೆಯೂ ನೂರಾರು ಇಂಚು ಮಳೆ ಬೀಳುತಿತ್ತು. ಮಣ್ಣು ಕುಸಿದಾಕ್ಷಣ ವಾಸಕ್ಕೆ ಅಯೋಗ್ಯ ಎಂದು ಹೇಳುವುದು ಆಷಾಢಭೂತಿತನವಲ್ಲದೇ ಬೇರೇನೂ ಅಲ್ಲ. ವಿಜ್ಞಾನಿಗಳು ವಾಸ ಯೋಗ್ಯ ಎಂದು ಹೇಳುವ ಸ್ಥಳಗಳಲ್ಲಿಯೂ ಇಮ್ಮಡಿ ಮಳೆ ಬಿದ್ದರೆ ಅವೂ ವಾಸಕ್ಕೆ ಅಯೋಗ್ಯ ಆಗುತ್ತವೆ.

ಹಾಗಿದ್ದರೆ ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಹೇಗೆ ಮಾಡಬಹುದು?

ಪಶ್ಚಿಮ ಘಟ್ಟಗಳ ಮೊದಲ ಶತ್ರುಗಳೆಂದರೆ ವಿದೇಶಿ ಏಜೆಂಟರಾಗಿರುವ ಡೋಂಗಿ ಪರಿಸರವಾದಿಗಳು ಮತ್ತು ಭ್ರಷ್ಟ ಅರಣ್ಯಾಧಿಕಾರಿಗಳು. ಪರಿಸರ ಸಂರಕ್ಷಣೆ ಎನ್ನುವುದು ಸರ್ಕಾರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತಿರುವ ಮೂಲ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇವನ್ನು ರಕ್ಷಿಸಬೇಕಿದೆ. ಹಾಗಾದರೆ ಮಾತ್ರ ಅರಣ್ಯ ನಾಶ ನಿಲ್ಲಲಿದ್ದು, ಕಾಡು ಹಸಿರಿನಿಂದ ನಳನಳಿಸುತ್ತದೆ.