ಹೋಂ ಸ್ಟೇಯಿಂದ ಸಿಲ್ವರ್ ಮರದವರೆಗೆ: ವಿಕೋಪಕ್ಕೆ ಬಲಿಯಾದ ಕೊಡಗಿನ ‘ಶವಪರೀಕ್ಷೆ’!
ರಾಜ್ಯ

ಹೋಂ ಸ್ಟೇಯಿಂದ ಸಿಲ್ವರ್ ಮರದವರೆಗೆ: ವಿಕೋಪಕ್ಕೆ ಬಲಿಯಾದ ಕೊಡಗಿನ ‘ಶವಪರೀಕ್ಷೆ’!

ಪ್ರಕೃತಿ ನೀಡಿದ ಮುನ್ಸೂಚನೆಯನ್ನು ಕೊಡಗು ಹೇಗೆ ಅರ್ಥ ಮಾಡಿಕೊಳ್ಳುತ್ತದೆ? ಎಷ್ಟರ ಮಟ್ಟಿಗೆ ಆತ್ಮಾವಲೋಕನ ಮಾಡಿಕೊಳ್ಳುತ್ತದೆ? ಎಂಬುದರ ಮೇಲೆ ಭವಿಷ್ಯ ನಿಂತಿದೆ.

ರಾಜ್ಯದ ಗುಡ್ಡಗಾಡು ಜಿಲ್ಲೆ, ಪುಟ್ಟ ಕೊಡಗು ಈ ಶತಮಾನದಲ್ಲಿ ಕಂಡು ಕೇಳರಿಯದ ಭೀಕರ ಭೂ ಕುಸಿತಕ್ಕೆ ಸಿಲುಕಿ ಅಕ್ಷರಶಃ ನೆಲ ಕಚ್ಚಿದೆ. ದಕ್ಷಿಣದ ಕಾಶ್ಮೀರ, ಪ್ರವಾಸಿಗರ ಸ್ವರ್ಗ ಎಂದೆಲ್ಲಾ ಹೊಗಳಿಸಿಕೊಳ್ಳುತಿದ್ದ ಜಿಲ್ಲೆ ಇಂದು ವ್ಯಾಪಕ ಭೂ ಕುಸಿತದ ಕಾರಣದಿಂದಾಗಿ ಸೂತಕದ ಮನೆಯಂತಾಗಿದೆ.

ಜಿಲ್ಲೆಯಲ್ಲಿ ಸುಮಾರು 5 ಸಾವಿರ ಮಂದಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ; ಅಷ್ಟೇ ಸಂಖ್ಯೆಯ ಜನ ನೆಂಟರು, ಬಂಧು- ಮಿತ್ರರ ಮನೆಯಲ್ಲಿ ಆಸರೆ ಪಡೆದಿದ್ದಾರೆ. ಜಿಲ್ಲೆಯ ಒಟ್ಟು ಜನಸಂಖ್ಯೆ 5.64 ಲಕ್ಷ. ಇದರಲ್ಲಿ ಶೇಕಡಾ 13ರಷ್ಟು ಜನ ಮಾತ್ರ ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದರು. ಉಳಿದ ದೊಡ್ಡ ಸಂಖ್ಯೆಯ ಜನವರ್ಗ ಬದುಕಿ ಬಾಳುತ್ತಿದ್ದದ್ದು ಗ್ರಾಮೀಣ ಭಾಗದಲ್ಲಿ.

ಈ ಬಾರಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣವೂ ಅಧಿಕವೇ ಅಗಿದ್ದು ಬಹಳ ಪ್ರದೇಶಗಳಲ್ಲಿ ಎರಡು ವರ್ಷಕ್ಕೆ ಬೀಳುವ ಒಟ್ಟು ಮಳೆ ಈಗಾಗಲೇ ಬಿದ್ದಿದೆ. ಮುಂದಿನ ದಿನಗಳಲ್ಲಿ ಬೀಳುವ ಮಳೆ ಗರಿಷ್ಠ ಮಟ್ಟವನ್ನು ಇನ್ನಷ್ಟು ಹೆಚ್ಚುಸುತ್ತದೆ. ಜತೆಗೆ, ಈ ಬಾರಿ ಮಳೆಯಿಂದಾಗಿ ಆಗಿರುವ ಆಸ್ತಿ ಪಾಸ್ತಿಗಳ, ಜೀವಗಳ ಹಾನಿಯನ್ನು ಹೆಚ್ಚುವರಿಯಾಗಿ ಭರಿಸಬೇಕಾಗಿದೆ.

ಹೇಗೆ ಒಂದು ಸೀಸನ್‌ ಮಳೆಗೆ ಕೊಡಗು ಜಿಲ್ಲೆ ಈ ಪ್ರಮಾಣದಲ್ಲಿ ನಲುಗಿತು? ಯಾಕೆ ಇಲ್ಲಿನ ಗುಡ್ಡಗಳು ಮಳೆ ನೀರಿಗೆ ಕುಸಿದವು? ಇಂತಹ ಹಲವು ಪ್ರಶ್ನೆಗಳೀಗ ಇಲ್ಲಿ ಸಾಮಾನ್ಯವಾಗಿವೆ.

ಹೋಂ ಸ್ಟೇ ಸುತ್ತ:

ಕೊಡಗಿನಲ್ಲಿ ಎಲ್ಲೆಂದರಲ್ಲಿ ಗುಡ್ಡಗಳನ್ನು ಕೊರೆದು ಹೋಂ ಸ್ಟೇ, ರೆಸಾರ್ಟ್ ನಿರ್ಮಾಣವಾಗಿವೆ. ಈ ಹೋಂ ಸ್ಟೇ ಸಂಸ್ಕೃತಿ ಕೊಡಗಿಗೆ ಕಾಲಿಟ್ಟು ಸುಮಾರು 10- 15 ವರ್ಷಗಳಾಗಿರಬಹುದು. ಇದಕ್ಕೂ ಮೊದಲು ಪ್ರವಾಸಿಗರು ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತಿದ್ದರು. ಪ್ರವಾಸಿಗರ ಹರಿವು ಹೆಚ್ಚಾಗುತಿದ್ದಂತೆ ಕಾಫಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಹೋಂ ಸ್ಟೇಗಳನ್ನು ನಿರ್ಮಿಸಿದರು. ಇದರಿಂದ ಹೋಂ ಸ್ಟೇಗಳ ಮಾಲೀಕರಿಗೆ ಕೈತುಂಬಾ ಆದಾಯ ಬರುವಂತಾಯಿತು. ಅನೇಕರು ಕೋಟ್ಯಾಧಿಪತಿಗಳೇ ಆಗಿ ಹೋದರು. ಮಾನವನ ಆಸೆಯೂ ಹೆಚ್ಚುತ್ತಲೇ ಹೋಯಿತು. ಜತೆಗೇ ಪ್ರವಾಸಿಗರ ಸಂಖ್ಯೆಯೂ ಕೂಡ.

ಒಂದು ವರ್ಷದಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ 18ರಿಂದ 20 ಲಕ್ಷಕ್ಕೆ ತಲುಪಿದೆ. ಆದರೆ ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರವಾಸಿಗರ ಹರಿವನ್ನು ತಡೆದುಕೊಳ್ಳಲು ಜಿಲ್ಲೆ ನಿಜಕ್ಕೂ ಶಕ್ತವಾಗಿದೆಯೇ? ಖಂಡಿತಾ ಇಲ್ಲ. ಏಕೆಂದರೆ ಪ್ರವಾಸಿಗರ ಹರಿವಿನಿಂದಾಗಿ ಜಿಲ್ಲೆಯಲ್ಲಿ ಮಾಲಿನ್ಯ ಮಿತಿ ಮೀರಿದೆ. ಮಡಿಕೇರಿ ನಗರವೂ ಸೇರಿದಂತೆ ಅನೇಕ ಕಾಡುಗಳೂ ಕಸದ ತೊಟ್ಟಿಯಾಗಿದೆ.

ಇನ್ನು ಇವುಗಳ ನಿರ್ಮಾಣ ಸ್ಥಳಗಳೂ ಗಮನ ಸೆಳೆಯುತ್ತವೆ. ಹೋಂ ಸ್ಟೇಗಳನ್ನು ನಿರ್ಮಿಸುತ್ತಿರುವ ಮಾಲೀಕರು ಹೆಚ್ಚು ಹೆಚ್ಚು ಎತ್ತರದ ಗುಡ್ಡಗಳನ್ನೇ ಆಯ್ಕೆ ಮಾಡಿಕೊಂಡರು. ಏಕೆಂದರೆ ಎತ್ತರದ ಪ್ರದೇಶಗಳಿಗೆ ಬೇಡಿಕೆ ಹೆಚ್ಚು. ಜತೆಗೇ ದಿನ ಬಾಡಿಗೆಯೂ ಹೆಚ್ಚೇ. ಆದರೆ ಕಟ್ಟಡ ನಿರ್ಮಾಣದಿಂದಾಗಿ ಪ್ರಕೃತಿಗೆ ಆಗುತ್ತಲೇ ಬಂದಿರುವ ಹಾನಿಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ, ಸರ್ಕಾರವೂ ಕೂಡ.

ಅದರ ಪರಿಣಾಮವೇ ಇವತ್ತಿನ ಭೂ ಕುಸಿತ ಎನ್ನುತ್ತಾರೆ ಜಿಲ್ಲೆಯ ಪರಿಸರವಾದಿಗಳು. ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಸಿ. ನಾಣಯ್ಯ, “ಇನ್ನು ಮುಂದೆ ಜಿಲ್ಲೆಯಲ್ಲಿ ಯಾವುದೇ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಅನುಮತಿ ಕೊಡುವುದನ್ನೇ ಸಂಪೂರ್ಣವಾಗಿ ನಿಲ್ಲಿಸಬೇಕೆಂದು,” ಆಗ್ರಹಿಸಿದರು.

ಈ ಭೀಕರ ದುರಂತ ಸಂಭವಿಸಲು ಕಾರಣ ಅವೈಜ್ಞಾನಿಕ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣ ಎಂಬುದು ಪರಿಸರವಾದಿಗಳ ವಾದ. ಸಾಮಾನ್ಯವಾಗಿ ಹೋಂ ಸ್ಟೇಗಳನ್ನು ನಿರ್ಮಿಸುವಾಗ ಎತ್ತರದ ಪ್ರದೇಶಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಉದ್ಯಮದ ಆಯಾಮದಲ್ಲಿ ಲಾಭಕರ ಅನ್ನಿಸುತ್ತದೆ.

ಹೋಂ ಸ್ಟೇಯಿಂದ ಸಿಲ್ವರ್ ಮರದವರೆಗೆ: ವಿಕೋಪಕ್ಕೆ ಬಲಿಯಾದ ಕೊಡಗಿನ ‘ಶವಪರೀಕ್ಷೆ’!

ಆದರೆ, “ಬೆಟ್ಟಗಳಲ್ಲಿ ರಸ್ತೆ ಮತ್ತು ಕಟ್ಟಡ ನಿರ್ಮಿಸುವಾಗ ಯಾವುದೇ ತಡೆಗೋಡೆ ನಿರ್ಮಿಸಿರುವುದಿಲ್ಲ. ಬಹುತೇಕ ಕಡೆಗಳಲ್ಲಿ ಗುಡ್ಡ ಕೊರೆದು ಕಟ್ಟಡ ನಿರ್ಮಿಸಿ ಇಳಿಜಾರಾಗಿ ಬರೆ ನಿರ್ಮಾಣವಾಗುತ್ತದೆ. ಹೆಚ್ಚು ಮಳೆಯಾದಾಗ ಕುಸಿತ ಸಹಜ. ಹೆದ್ದಾರಿಗಳಲ್ಲಿ ಹೆಚ್ಚಿನ ಭೂ ಕುಸಿತ ಆಗಿದ್ದು. ಹೀಗಾಗಿ, ಅವೈಜ್ಞಾನಿಕ ರೀತಿಯಲ್ಲಿ ಗುಡ್ಡಗಳ ಮೇಲೆ ಹೋಂ ಸ್ಟೇ ನಿರ್ಮಿಸಿದ್ದೇ ಕೊಡಗಿನ ಗುಡ್ಡಗಳು ಹೀಗೆ ಮಳೆಗೆ ಸುರಿಯಲು ಕಾರಣ,” ಎನ್ನುತ್ತಾರೆ ಜಿಲ್ಲೆಯ ಪರಿಸರವಾದಿಯೊಬ್ಬರು.

ಭೂ ವಿಜ್ಞಾನಿಯೊಬ್ಬರ ಪ್ರಕಾರ, ಪಶ್ಚಿಮ ಘಟ್ಟ ಶ್ರೇಣಿಗಳ ಸಂರಚನೆ ವಿಶಿಷ್ಟವಾಗಿದ್ದು ಅತೀ ಸೂಕ್ಷ್ಮದ್ದಾಗಿದೆ. ಇಲ್ಲಿ ಶೀಥಲೀಕರಣ ಪ್ರಕ್ರಿಯೆ ಬಹುಬೇಗನೆ ನಡೆಯುತ್ತದೆ. ಈ ಶೀಥಲೀಕರಣದಲ್ಲಿ ಕಲ್ಲು ಮಣ್ಣಾಗುತ್ತ ಹೋಗುತ್ತದೆ. ಮಣ್ಣಿನ ಪದರವು ನೂರಾರು ಅಡಿಗಳಷ್ಟು ಆಳಕ್ಕೆ ಹರಡಿಕೊಂಡಿರುತ್ತದೆ. ಅಲ್ಲಿ ಅವೈಜ್ಞಾನಿಕ ಕಟ್ಟಡಗಳನ್ನು ನಿರ್ಮಾಣ ಮಾಡಿದಾಗ ಮತ್ತು ಅತ್ಯಂತ ಹೆಚ್ಚು ಮಳೆಯಾದ ಸಂದರ್ಭದಲ್ಲಿ ನೆಲದಾಳಕ್ಕೆ ನೀರು ಹೋಗುತ್ತದೆ. ಅದರಿಂದಲೂ ಭೂ ಕುಸಿತ ಆಗಿರುವ ಸಾಧ್ಯತೆಗಳಿವೆ ಎಂಬ ವಾದಗಳೂ ಇಲ್ಲಿ ಕೇಳಿಬರುತ್ತಿವೆ.

ಈ ಹಿಂದೆ ಜಿಲ್ಲೆಯಲ್ಲಿ ಹೇರಳವಾದ ಹುಲ್ಲು ಹಾಸಿತ್ತು. ಇದು ನಿರ್ದಿಷ್ಟ ಪ್ರಮಾಣದ ನೀರು ಮಾತ್ರ ಭೂಮಿಯೊಳಗೆ ಇಂಗುವಂತೆ ಮಾಡುತಿತ್ತು. ಹೆಚ್ಚಾದ ನೀರು ಮುಂದೆ ಹರಿದು ಹೋಗುತ್ತಿತ್ತು. ಆದರೆ ಹುಲ್ಲು ಹಾಸಿನ ಪ್ರಮಾಣ ಕಡಿಮೆಯಾಗಿದೆ. ಇದು ಕೂಡ ಮಳೆಯ ಹಾನಿಯ ತೀವ್ರತೆಯನ್ನು ಹೆಚ್ಚಿಸಿರುವ ಸಾಧ್ಯತೆಗಳಿವೆ.

ಕೊಡಗಿನಲ್ಲಿ ಹೊಸ ಕಾಪಿತೋಟಗಳ ನಿರ್ಮಾಣ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಅದಕ್ಕಾಗಿ ಕಾಡು ನಾಶವಾಗುತ್ತಿದೆ. ಸಹಜ ಪ್ರಕೃತಿಯ ಜಾಗದಲ್ಲಿ ಅಸಹಜ ಹಸಿರನ್ನು ಸೃಷ್ಟಿಸುವ ಉದ್ಯಮ ಬೆಳೆಯುತ್ತಿದೆ. ಇದೂ ಕೂಡ ಕೊಡಗಿನ ಇವತ್ತಿನ ಸ್ಥಿತಿಗೆ ಕಾರಣ ಎಂಬ ವಾದವನ್ನು ಮಂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ಥಳಕ್ಕೆ ಭೇಟಿ ನೀಡುವ ತಜ್ಞರು ಏನಂತಾರೆ ಎಂಬುದನ್ನು ಕಾದು ನೋಡಬೇಕಿದೆ.

“ಮೂರು ದಿನಗಳ ಹಿಂದೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದು ಪರಿಶೀಲಿಸಿದ್ದೇವೆ. ಭೂ ಕುಸಿತವಾಗಿರುವ ಸ್ಥಳಗಳಿಗೆ ಹೋಗಿ ಪರಿಶೀಲಿಸಿ ಕುಸಿತಕ್ಕೆ ನಿಖರ ಕಾರಣವನ್ನು ತಿಳಿಸುತ್ತೇವೆ. ಸ್ವಲ್ಪ ಸಮಯ ಬೇಕು,” ಎಂದು ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಕೆ. ವಿ. ಮಾರುತಿ ತಿಳಿಸಿದರು.

ತಜ್ಞರ ವರದಿಗೆ ಸಮಯ ಬೇಕಾಗಬಹುದು. ಆದರೆ ಜನ ಈಗಾಗಲೇ ಹತ್ತು ಹಲವು ಕಾರಣಗಳನ್ನು ಅವರವರ ಅನುಭವಗಳ ಆಧಾರದ ಮೇಲೆ ಪಟ್ಟಿ ಮಾಡುತ್ತಿದ್ದಾರೆ. ಅವುಗಳನ್ನು ಈ ಸಮಯದಲ್ಲಿ ಗಮನಿಸಬೇಕಿದೆ. ಕೊಡಗಿನಲ್ಲಿ ಮಿತಿ ಮೀರಿದ ಹೋಂ ಸ್ಟೇಗಳ ಜತೆ, ಅಕ್ರಮ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆಗಳೂ ಎಗ್ಗಿಲ್ಲದೆ ನಡೆದಿವೆ. ಒಂದು ಕಾಲದಲ್ಲಿ ಪುಟ್ಟ ಜಿಲ್ಲೆಯಾಗಿದ್ದ ಕೊಡಗು ಪ್ರಕೃತಿಯ ಕಾರಣಕ್ಕೆ ಗಮನ ಸೆಳೆಯಿತು. ನಂತರ ಜನ ಬಂದರು. ಜನರ ಅಗತ್ಯಕ್ಕೆ ತಕ್ಕಹಾಗೆ ಉದ್ಯಮವೂ ಬೆಳೆಯಿತು. ಉದ್ಯಮದ ಅಗತ್ಯಕ್ಕೆ ರಸ್ತೆಗಳು ಬೇಕಾದವು. ಅದಕ್ಕೆ ಕಲ್ಲು, ಮರಳು ಗಣಿಗಾರಿಕೆ ನಡೆಯಿತು. ಕೊಂಚ ಹೆಚ್ಚು ಮಳೆ ಬಿತ್ತು. ಪರಿಣಾಮ ಈಗ ಮಳೆಯಿಂದ ಕೊಡಗು ತೊಳೆದುಕೊಂಡು ಹೋಗಿದೆ.

ಪ್ರಕೃತಿ ನೀಡಿದ ಮುನ್ಸೂಚನೆಯನ್ನು ಕೊಡಗು ಹೇಗೆ ಅರ್ಥ ಮಾಡಿಕೊಳ್ಳುತ್ತದೆ? ಎಷ್ಟರ ಮಟ್ಟಿಗೆ ಆತ್ಮಾವಲೋಕನ ಮಾಡಿಕೊಳ್ಳುತ್ತದೆ? ಎಂಬುದರ ಮೇಲೆ ಭವಿಷ್ಯ ನಿಂತಿದೆ.