samachara
www.samachara.com
‘ಗೋಕರ್ಣದಲ್ಲಿ ಒಂದು ದಿನ’: ಇದು ಉಪಾಧಿವಂತ ವರ್ಸಸ್‌ ರಾಘವೇಶ್ವರ ಸ್ವಾಮಿ ಫೈಟ್...
ರಾಜ್ಯ

‘ಗೋಕರ್ಣದಲ್ಲಿ ಒಂದು ದಿನ’: ಇದು ಉಪಾಧಿವಂತ ವರ್ಸಸ್‌ ರಾಘವೇಶ್ವರ ಸ್ವಾಮಿ ಫೈಟ್...

ರಾಘವೇಶ್ವರ ಸ್ವಾಮಿಗಳು ಪೀಠಾಧಿಪತಿಯಾಗಿರುವ ಮಠದಿಂದ ಗೋಕರ್ಣ ದೇವಸ್ಥಾನವನ್ನು ಸರಕಾರ ವಾಪಸ್‌ ಪಡೆದುಕೊಳ್ಳಬೇಕು ಎಂಬ ಹೈಕೋರ್ಟ್ ಆದೇಶ ಉಪಾಧಿವಂತರಲ್ಲಿ ಹೊಸ ಉತ್ಸಾಹ ತಂದಿದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಗೋಕರ್ಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪವೇ ಬಂದು ನಿಂತಿತು ಖಾಸಗಿ ಬಸ್‌. ಇಳಿದಾಗ ಸಣ್ಣ ಮಳೆ ಸುರಿಯುತ್ತಿತ್ತು. ಬೆಳಿಗ್ಗೆ 6 ಗಂಟೆ ಸಮಯವಾದರೂ ಬೆಳಕು ಇನ್ನೂ ಸರಿಯಾಗಿ ಹರಿದಿರಲಿಲ್ಲ. ಬೀದಿಗಳಲ್ಲಿ ಬೆಳಗ್ಗಿನ ಕೆಲಸಗಳಿಗೆ ತೆರಳಲು ಹೊರಟ ಕೂಲಿಯಾಳುಗಳು, ಬಸ್‌ನಿಂದ ಬಂದಿಳಿದ ಅಲ್ಲೊಂದು ಇಲ್ಲೊಂದು ಜನರಷ್ಟೇ ಕಣ್ಣಿಗೆ ಬೀಳುತ್ತಿದ್ದರು.

ಬಸ್‌ ನಿಲ್ದಾಣದ ಒಳಗಡೆ ಹೋಗದೆ ನೇರ ಮುಂದೆ ಹೋಗಿ ಬಲಕ್ಕೆ ತಿರುಗಿಕೊಂಡರೆ ಅದೇ ದೇವಸ್ಥಾನದ ರಥ ಬೀದಿ. ಅಲ್ಲಿ ಕಚ್ಚೆ ಹಾಕಿಕೊಂಡಿದ್ದ ಒಂದಷ್ಟು ಬ್ರಾಹ್ಮಣರು ತರಾತುರಿಯಲ್ಲಿ ಮಹಾಬಲೇಶ್ವರ ದೇವಸ್ಥಾನದತ್ತ ಧಾವಿಸುತ್ತಿದ್ದರು. ಕೈಯಲ್ಲಿ ತಟ್ಟೆ, ಅದರಲ್ಲೊಂದಿಷ್ಟು ಹೂವು ಮೊದಲಾದ ಪೂಜಾ ಪರಿಕರಗಳನ್ನು ಹಿಡಿದಿದ್ದ ಅವರ ಸಂಖ್ಯೆ ಬೆಳೆಯುತ್ತಲೇ ಇತ್ತು. ಇದರಲ್ಲಿ ಆರೇಳು ವರ್ಷದ ಪುಟ್ಟ ಪುಟ್ಟ ಮಕ್ಕಳೂ ಇದ್ದರು.

ಸ್ವಲ್ಪ ಹೊತ್ತಿಗೆ ದೇವಸ್ಥಾನ ಸಮೀಪಿಸಿತು. ಮೊದಲಿಗೆ ಮಹಾಗಣಪತಿ ದೇವಸ್ಥಾನ ಸಿಗುತ್ತದೆ. ಮಹಾಗಣಪತಿ ದೇವಸ್ಥಾನದ ಸುತ್ತಾ ಹಾಲಕ್ಕಿ ಮತ್ತು ಸ್ಥಳೀಯ ಸಮುದಾಯಗಳ ಮಹಿಳೆಯರು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಹೂವು ಮಾರುತ್ತಾ ನಿಂತಿದ್ದರು. ಕಾಡು ಹೂವುಗಳಿಂದ ವಿವಿಧ ಮಾಲೆ, ಸಣ್ಣ ಸಣ್ಣ ಗುಚ್ಛಗಳನ್ನು ಅವರದ್ದೇ ರೀತಿಯಲ್ಲಿ ಅಂದವಾಗಿ ತಯಾರಿಸಿ ಸಣ್ಣ ಸಣ್ಣ ಬುಟ್ಟಿಗಳಲ್ಲಿ ಹಿಡಿದು ನಿಂತಿದ್ದರು. ‘ಗಣಪತಿ ದೇವರಿಗೆ ಈ ಹೂವು ಇಷ್ಟ ತೆಗೆದುಕೊಳ್ಳಿ’ ಎಂದು ಅವರಲ್ಲೊಬ್ಬರು ಕೈ ಮುಂದೆ ಮಾಡಿದರು. ಮುಂದೆ ಬಂದರೆ ಅಲ್ಲಿ ಮಹಾಬಲೇಶ್ವರ ದೇವಸ್ಥಾನದ ದ್ವಾರ ಕಾಣಿಸುತ್ತದೆ.

ವಿವಾದಿತ ಮಹಾಬಲೇಶ್ವರ ದೇವಸ್ಥಾನ:

ಇದೇ ಮಹಾಬಲೇಶ್ವರ ದೇವಸ್ಥಾನವೇ ಕಳೆದ 10 ವರ್ಷಗಳಿಂದ ವಿವಾದದ ಕೇಂದ್ರ ಬಿಂದುವಿನಲ್ಲಿತ್ತು. ಮೊದಲಿಗೆ ಈ ದೇವಸ್ಥಾನವನ್ನು ‘ಬಾಂಬೆ ಟ್ರಸ್ಟ್‌ ಆಕ್ಟ್‌’ ಅಡಿಯಲ್ಲಿ ಸಮಿತಿಯೊಂದು ನಿರ್ವಹಣೆ ಮಾಡಿಕೊಂಡು ಬರುತ್ತಿತ್ತು. ಮುಂದೆ 2004ರಲ್ಲಿ ಇದ್ದ ಟ್ರಸ್ಟ್‌ನ ಏಕೈಕ ಟ್ರಸ್ಟಿ ವಿ.ಡಿ. ದೀಕ್ಷಿತರು ತೀರಿಕೊಂಡ ನಂತರ ದೇವಸ್ಥಾನ ಅನಾಥವಾಯಿತು. ಹೀಗಿದ್ದೂ ಪೂಜಾದಿ ಕರ್ಮಗಳು ಸುಸೂತ್ರವಾಗಿಯೇ ನಡೆಯುತ್ತಿದ್ದವು. ಈ ಸಂದರ್ಭ ಇಲ್ಲಿನ ಸ್ಥಳೀಯರನ್ನು ಆತಂಕಕ್ಕೆ ದೂಡುವ ಘಟನೆಯೊಂದು 2008ರಲ್ಲಿ ನಡೆಯಿತು.

ಅದೇನೆಂದರೆ ದೇವಸ್ಥಾನವನ್ನು ನಮ್ಮ ವಶಕ್ಕೆ ನೀಡಿ ಎಂದು ಶಿವಮೊಗ್ಗ ಜಿಲ್ಲೆ ಹೊಸನಗರ ಮೂಲದ ರಾಮಚಂದ್ರಾಪುರ ಮಠದವರು ಸರಕಾರಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಭಾರೀ ವಿರೋಧ ಮತ್ತು ಸರಕಾರದ ಕಡೆಯಿಂದ ಆಕ್ಷೇಪಣೆಗಳು ಇದ್ದರೂ 2008ರ ಆಗಸ್ಟ್‌ 12ರಂದು ದೇವಸ್ಥಾನವನ್ನು ಅಂದಿನ ಯಡಿಯೂರಪ್ಪ ಸರಕಾರ ಮಠಕ್ಕೆ ಹಸ್ತಾಂತರಿಸಿತು. ಅಲ್ಲಿಂದ ಇಲ್ಲಿನ ಸ್ಥಳೀಯ ಉಪಾಧಿವಂತರಿಗೂ ಮಠದವರಿಗೆ ಸುದೀರ್ಘ ಸಂಘರ್ಷ ಆರಂಭವಾಯಿತು. ಇದು ದೇವಸ್ಥಾನವನ್ನು ಮಠಕ್ಕೆ ನೀಡಿದ ತೀರ್ಮಾನವನ್ನು ಪ್ರಶ್ನಿಸಿ ಹಲವರು ಕೋರ್ಟ್‌ ಮೊರೆ ಹೋದಾಗ ಕೇಸು, ಹೊಡೆದಾಟದ ಹಂತವನ್ನೂ ತಲುಪಿತು. ಅದಕ್ಕೆ ದೇವಸ್ಥಾನದ ಆವರಣವೂ ಹೊರತಾಗಿರಲಿಲ್ಲ. ಹೀಗಾಗಿ ಇವತ್ತಿಗೂ ಇಲ್ಲಿ ದೇವಸ್ಥಾನದ ಒಳಗೆಯೇ ಪೊಲೀಸ್‌ ಠಾಣೆ ಇರುವುದನ್ನು ಗಮನಿಸಬಹುದು.

ದೇವಸ್ಥಾನದಲ್ಲಿ ಪೂಜೆ ಮಾಡುವುದು ಬ್ರಾಹ್ಮಣರ ಒಂದು ಸಂಪ್ರದಾಯವಾದರೆ ಇಲ್ಲಿನ ಕೋಟಿ ತೀರ್ಥ ಕೆರೆಯಲ್ಲಿ ಸತ್ತವರ ಕರ್ಮಗಳನ್ನು ನೆರವೇರಿಸುವುದು ಇವರ ವೃತ್ತಿ.

ಕೋಟಿ ತೀರ್ಥ ಕೆರೆ

ದೇವಸ್ಥಾನದ ರಥ ಬೀದಿಯ ಕೊನೆಯಲ್ಲಿ ಬಲಕ್ಕೆ ಹೊರಳಿಕೊಂಡರೆ ಅದು ಕೋಟಿ ತೀರ್ಥ ಕೆರೆಗೆ ಕರೆದೊಯ್ಯುತ್ತದೆ. ಬೆಳಿಗ್ಗೆ 8 ಗಂಟೆ ಹೊತ್ತಿಗೆ ಅಲ್ಲಿಗೆ ಹೋದಾಗ ಇಬ್ಬರು ಆಳುಗಳು ದೋಣಿಯಲ್ಲಿ ತೆರಳಿ ಕೆರೆಯಲ್ಲಿದ್ದ ಪಾಚಿಗಳನ್ನು ತೆಗೆಯುತ್ತಿದ್ದರು. ಕೆರೆಯ ಸುತ್ತ ಕಟ್ಟಿದ್ದ ಕ್ರಿಯಾ ಮಂಟಪಗಳಿಂದ ಹೊಗೆ ಮೇಲೇರುತ್ತಿತ್ತು. ಮಂತ್ರೋಚ್ಛಾರಣೆ ಕಿವಿಗೆ ಸಣ್ಣದಾಗಿ ಅಪ್ಪಳಿಸುತ್ತಿದ್ದವು. ಒಂದಷ್ಟು ಜನರು ಕೆರೆಯಲ್ಲಿ ಮುಳುಗು ಹಾಕುತ್ತಿದ್ದರು, ಇನ್ನೊಂದಷ್ಟು ಜನರು ಪೂರ್ವಜರಿಗೆ ಪಿಂಡ ಪ್ರಧಾನ ಮಾಡುತ್ತಿದ್ದರು.

ಕೋಟಿ ತೀರ್ಥದಲ್ಲಿ ಶಿಷ್ಯ ವರ್ಗದ ಪೂಜಾದಿ ಕರ್ಮಗಳನ್ನು ನೆರವೇರಿಸುತ್ತಿರುವ ಉಪಾಧಿವಂತರು
ಕೋಟಿ ತೀರ್ಥದಲ್ಲಿ ಶಿಷ್ಯ ವರ್ಗದ ಪೂಜಾದಿ ಕರ್ಮಗಳನ್ನು ನೆರವೇರಿಸುತ್ತಿರುವ ಉಪಾಧಿವಂತರು

ಇವರೆಲ್ಲಾ ರಾಜ್ಯ, ದೇಶದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಬಂದವರು; ಇಲ್ಲಿನ ಬ್ರಾಹ್ಮಣ ಕುಟುಂಬಗಳ ಶಿಷ್ಯರು. ಇವರು ತಮ್ಮ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದಾಗ ಮತ್ತು ಪೂರ್ವಜರ ವರ್ಷಾವಧಿ ಕ್ರಿಯೆಗಳನ್ನು ನಡೆಸಲು ಗೋಕರ್ಣಕ್ಕೆ ಬರುತ್ತಾರೆ. ಇದನ್ನು ನೆರವೇರಿಸುವುದು ಈ ಬ್ರಾಹ್ಮಣರ ಕೆಲಸ.

ಅಲ್ಲಿಂದ ತಿರುಗಿ ಬಂದಾಗ ಸುಮಾರು 9 ರಿಂದ 10 ಗಂಟೆ ಹೊತ್ತಿಗೆ ದೇವಸ್ಥಾನದ ಬೀದಿಗಳಲ್ಲಿ ಅಂಗಡಿಗಳೆಲ್ಲಾ ತೆಗೆದಿದ್ದವು. ಪೂಜಾ ಸಾಮಾಗ್ರಿ, ಹಣ್ಣುಕಾಯಿ, ಬಟ್ಟೆ ಅಂಗಡಿಯವರೆಲ್ಲಾ ಗಿರಾಕಿಗಳನ್ನು ಎದುರು ನೋಡುತ್ತಾ ಕುಳಿತಿದ್ದರು.

ಈ ಅಂಗಡಿಗಳನ್ನೇ ಹಾದು ಮಹಾಬಲೇಶ್ವರ ದೇವಸ್ಥಾನ ಮತ್ತು ಮಹಾಗಣಪತಿ ದೇವಸ್ಥಾನದ ಮಧ್ಯದಲ್ಲಿರುವ ಓಣಿಯಲ್ಲಿ ಸ್ವಲ್ಪ ದೂರ ಹೋದಾಗ ಎದುರಾದರು ಗಜಾನನ ಕೃಷ್ಣ ಹಿರೇ ಭಟ್ಟರು. ತಮ್ಮ ಜಗಲಿಯ ಮೇಲೆ ಕಚ್ಚೆ ಹಾಕಿ ಕುಳಿತಿದ್ದ ಅವರು ಕೈಯಲ್ಲಿ ಅಡಿಕೆಯ ಸಿಪ್ಪೆ ಸುಲಿಯುತ್ತಾ, ತೆಲುಗಿನಲ್ಲಿ ತಮ್ಮ ಭಕ್ತರ ಜೊತೆ ಚರ್ಚಿಸುತ್ತಿದ್ದರು. ಅವರ ನಡುಮನೆಗೆ ಹೋಗಿ ಕುಳಿತುಕೊಂಡಾಗ, ಮಾತಿಗೆ ಜತೆಯಾದ ಭಟ್ಟರು ಗೋಕರ್ಣದ ಪ್ರವರಗಳನ್ನೆಲ್ಲಾ ಎಳೆ ಎಳೆಯಾಗಿ ಬಿಚ್ಚಿಡುತ್ತಾ ಸಾಗಿದರು.

ಇಲ್ಲಿನ ಉಪಾಧಿವಂತರು ಎಂದು ಕರೆಯುವ ದೇವಸ್ಥಾನದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ 64 ಉಪಾಧಿವಂತ ಕುಟುಂಬಗಳಲ್ಲಿ ಗಜಾನನ ಕೃಷ್ಣ ಹಿರೇ ಭಟ್ಟರ ಕುಟುಂಬವೂ ಒಂದು. ದೇವಸ್ಥಾನದ ಬೇರೆ ಬೇರೆ ಜವಾಬ್ದಾರಿಗಳನ್ನು ನಿರ್ವಹಿಸುವ ಕುಟುಂಬಗಳೇ ‘ಉಪಾಧಿವಂತ’ ಕುಟುಂಬಗಳು. ಇದರಲ್ಲಿ ದೇವಸ್ಥಾನದ ಮುಖ್ಯಪೂಜೆಯನ್ನು ನೆರವೇರಿಸುವುದು ಹಿರೇ ಭಟ್ಟರ ಕುಟುಂಬ ಮತ್ತು ರಥಬೀದಿಯಲ್ಲಿರುವ ‘ಅಡಿ’ ಕುಟಂಬದವರ ಕರ್ತವ್ಯ. ಸರತಿಯಂತೆ ಆರು ತಿಂಗಳು ಅವರು, ಆರು ತಿಂಗಳು ಇವರು ಮಹಾಬಲೇಶ್ವರ ದೇವರಿಗೆ ಪೂಜೆ ಮಾಡಿಕೊಂಡು ಬರುತ್ತಿದ್ದರು. ಹೀಗಿರುವಾಗ ದೇವಸ್ಥಾನವನ್ನು ಹಸ್ತಾಂತರಿಸಿದ ನಂತರ ಮೊದಲ ಬಾರಿಗೆ ಈ ಪೂಜೆಗೆ ಅಡ್ಡಿಯಾಗುವ ಘಟನೆ 2014ರಲ್ಲಿ ನಡೆಯಿತು.

ಅದು 2014ನೇ ಇಸವಿ…

ಅಂದು ಶನಿ ಪ್ರದೋಷ; ಅಂದರೆ ತಿಂಗಳಿಗೊಂದು ಸಲ ಬರುವ ತ್ರಯೋದಶಿ, ಅವತ್ತು ಶನಿವಾರ ಬಂದಿತ್ತು. ತ್ರಯೋದಶಿ ಶನಿವಾರದ ದಿನ ಬಂದರೆ ಅದಕ್ಕೆ ‘ಶನಿ ಪ್ರದೋಷ’ ಎನ್ನುತ್ತಾರೆ. ಮತ್ತು ಈ ದಿನ ಈಶ್ವರ ದೇವರ ಪೂಜೆಗೆ ಒಳ್ಳೆಯ ದಿನ ಎಂಬುದು ನಂಬಿಕೆ.

ಅವತ್ತು ಗೋಕರ್ಣದ ಮಹಾಬಲೇಶ್ವರ ದೇವರ ಮುಖ್ಯಪೂಜೆಯ ಸರದಿ ಗಜಾನನ ಕೃಷ್ಣ ಹಿರೇ ಭಟ್‌ ಅವರದಾಗಿತ್ತು. ಅವರು ತಮ್ಮ ಪಾಳಿಯ ಬದಲಿಗೆ ಅಡಿ ಕುಟುಂಬದ ಅನಂತ ರಾಜ್‌ ಅಡಿಯವರನ್ನು ಪೂಜೆಗೆ ಕಳುಹಿಸಿದ್ದರು. ಯಾವತ್ತೂ ಪೂಜೆಗೆ ಹೋಗುತ್ತಿದ್ದ ಅನಂತರಾಜ್‌ ಅಡಿಯವರಿಗೆ ಅವತ್ತು ದೇವಸ್ಥಾನದಲ್ಲಿ ಪೂಜೆ ಮಾಡಲಾಗಲಿಲ್ಲ. ದೇವಸ್ಥಾನದಲ್ಲಿ ನೆರೆದಿದ್ದ ಸುಮಾರು 300 ಜನರು ಘೇರಾವ್‌ ಹಾಕಿದರು. “ಇವರೆಲ್ಲಾ ಎಸ್‌ಸಿ & ಎಸ್‌ಟಿ ಸಮುದಾಯಕ್ಕೆ ಸೇರಿದ್ದ ಜನ. ನಾವು ಇವರನ್ನು ತಡೆದರೆ ಜಾತಿ ನಿಂದನೆಯಂತ ಕೇಸು ಹಾಕಬಹುದು ಎಂಬ ಉಪಾಯದಿಂದ ಕರೆ ತರಲಾಗಿತ್ತು,” ಎಂದು ಆ ದಿನ ನಡೆದಿದ್ದನ್ನು ವಿವರಿಸಿದರು 60 ವರ್ಷ ಪ್ರಾಯದ ಅನಂತ್‌ ರಾಜ್‌ ಅಡಿ.

ತಂದಿದ್ದ ಪಂಚಾಮೃತವನ್ನು ಚಪ್ಪಲಿಗೆ ಹಾಕಿ ಎಂದು ಧಮಕಿ ಹಾಕಿದರು. ಗೂಂಡಾಗಿರಿ ಮಾಡಿ ಹೊರ ಹಾಕಿದರು. ಸ್ವಾಮೀಜಿ ವಿರುದ್ಧ ಇದ್ದವರನ್ನು ಪೂಜೆಯಿಂದ ದೂರವಿಡಬೇಕು ಎಂದು ಹೀಗೆ ಮಾಡಲಾಗಿತ್ತು ಎಂಬುದು ಅಡಿ ಅವರ ಆರೋಪ.

ಈ ಘೇರಾವ್‌ ಘಟನೆ ನಂತರ ಅನಂತ್‌ ರಾಜ್‌ ಅಡಿ ಮತ್ತು ನಾನು ಮಹಾಪೂಜೆ, ತ್ರಿಕಾಲ ಪೂಜೆ ಮಾಡುವುದು ನಿಂತು ಹೋಯಿತು. ಇಬ್ಬರೂ ಪೂಜೆಗೆ ಹೋಗುವುದನ್ನು ನಿಲ್ಲಿಸಿದೆವು ಎನ್ನುತ್ತಾರೆ ಗಜಾನನ ಕೃಷ್ಣ ಹಿರೇ ಭಟ್ಟರು. ದೇವಸ್ಥಾನವನ್ನು ಮತ್ತೆ ಸರಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್‌ ಮೊರೆ ಹೋದ ಅರ್ಜಿದಾರರಲ್ಲಿ ಇವರೂ ಒಬ್ಬರು.

ಗಜಾನನ ಕೃಷ್ಣ ಹಿರೇ ಭಟ್
ಗಜಾನನ ಕೃಷ್ಣ ಹಿರೇ ಭಟ್

ಸರಕಾರದ ಸುಪರ್ದಿಯಲ್ಲಿದ್ದರೆ ನಮ್ಮ ಹಕ್ಕುಗಳಿಗೆ ಯಾವುದೇ ಚ್ಯುತಿ ಬರುವುದಿಲ್ಲ ಎಂಬುದು ಇಲ್ಲಿನ ಉಪಾಧಿವಂತರ ವಾದ. ‘200-300 ವರ್ಷಗಳಿಂದ ನಮ್ಮ ಪೂರ್ವಜರು ಇಲ್ಲಿ ಪೂಜೆ ಮಾಡಿಕೊಂಡು ಬಂದಿದ್ದಾರೆ. ಹೀಗೆ ತಲೆತಲಾಂತರದಿಂದ ಬಂದ ಹಕ್ಕನ್ನು ನಾವು ಯಾಕೆ ಬಿಟ್ಟುಕೊಡಬೇಕು” ಎಂದು ಪ್ರಶ್ನಿಸುತ್ತಾರೆ ಅಡಿ ಕುಟುಂಬದ ಸುಬ್ರಹ್ಮಣ್ಯ ಚಂದ್ರಶೇಖರ್ ಅಡಿ.

ಆರೋಪ.. ಪ್ರತ್ಯಾರೋಪ..

ಈ ಉಪಾಧಿವಂತರು ಮಹಾಬಲೇಶ್ವರ ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದ ಕಾಲದಲ್ಲಿ ದೇಗುಲ ಪರಿಸರ ಕೊಳಕಾಗಿತ್ತು ಎಂಬ ಆರೋಪಗಳಿವೆ. ಜತೆಗೆ ಇಲ್ಲಿನ ಅರ್ಚಕರು ಸುಲಿಗೆಯಲ್ಲಿ ತೊಡಗಿದ್ದರು ಎಂದೂ ಹಲವರು ದೂರುತ್ತಾರೆ.

ಇದೇ ಪ್ರಶ್ನೆಯನ್ನು ಉಪಾಧಿವಂತರ ಮುಂದಿಟ್ಟರೆ ‘ದೇವಸ್ಥಾನ ಶುದ್ಧವಾಗಿರಲಿಲ್ಲ’ ಎಂಬ ಆರೋಪವನ್ನು ಅವರೂ ಒಪ್ಪಿಕೊಳ್ಳುತ್ತಾರೆ. ರಾಮಚಂದ್ರಾಪುರ ಮಠದವರು ಆಡಳಿತ ವಹಿಸಿಕೊಂಡ ನಂತರ ದೇವಸ್ಥಾನ ಶುದ್ಧವಾಗಿದೆ. ಜತೆಗೆ ದೇವಸ್ಥಾನಕ್ಕೆ ಬೆಳ್ಳಿಯ ಬಾಗಿಲನ್ನು ಮಾಡಿಸಲಾಗಿದೆ ಎಂಬ ಬದಲಾವಣೆಗಳ ಬಗ್ಗೆ ಅವರಲ್ಲಿ ಮುಕ್ತ ಸಮ್ಮತಿ ಇದೆ. ಆದರೆ, ‘ಸುಲಿಗೆ ಮಾಡುತ್ತಿದ್ದಾರೆ’ ಎಂಬ ಆರೋಪವನ್ನು ಒಪ್ಪಲಾಗದು ಎನ್ನುತ್ತಾರೆ ಉಪಾಧಿವಂತರ ಕುಟುಂಬದವರು.

ಮೊದಲೇ ಹೇಳಿದ ಹಾಗೆ ಇಲ್ಲಿನ ಪ್ರತಿ ಕುಟುಂಬಕ್ಕೂ ಶಿಷ್ಯ ವರ್ಗವಿದೆ. “ಅವರು ಇಲ್ಲಿಗೆ ಬಂದು ನಮ್ಮದೇ ಮನೆಗಳಲ್ಲಿ ಉಳಿದುಕೊಂಡು ಪೂಜಾದಿ ಕರ್ಮಗಳನ್ನು ನೆರವೇರಿಸಿ ತೆರಳುತ್ತಾರೆ. ಹೀಗೊಂದು ಹೋಮ್‌ಸ್ಟೇ ಕಲ್ಪನೆ ಇಲ್ಲಿ ಹಿಂದೆಯೇ ಆರಂಭಗೊಂಡಿತ್ತು. ಅವರ ಬಳಿಯಲ್ಲಿ ಕೇಳುವ ಸಂಪ್ರದಾಯವಿಲ್ಲ. ಅವರು ಪ್ರೀತಿಯಿಂದ ಕೊಟ್ಟಿದ್ದಷ್ಟೇ ದಕ್ಷಿಣೆ. ಇದಕ್ಕೆ ಕೆಲವರು ಅಪವಾದವಿರಬಹುದು. ಆದರೆ ಎಲ್ಲರೂ ಹಾಗಲ್ಲ,” ಎಂಬುದು ಸುಬ್ರಹ್ಮಣ್ಯ ಚಂದ್ರಶೇಖರ್ ಅಡಿ ಅವರ ಅಭಿಪ್ರಾಯ. ರಥಬೀದಿಯ ತಮ್ಮ ಮನೆಯ ಜಗುಲಿಯ ಮೇಲೆ ಕುಳಿತುಕೊಂಡು ಅವರು ಮಾತನಾಡುತ್ತಿದ್ದರೆ ಒಳಾಂಗಣದಲ್ಲಿ ಅವರ ಶಿಷ್ಯ ವರ್ಗದವರು ನೆರೆದಿದ್ದರು. ಮಧ್ಯಾಹ್ನದ ಹೊತ್ತಾಗಿದ್ದರಿಂದ ಊಟ ಮತ್ತು ಹರಟೆಯಲ್ಲಿ ಅವರು ನಿರತರಾಗಿದ್ದರು.

ವಿಶೇಷವೆಂದರೆ ಇದೇ ಮನೆಗೆ ಗೋಕರ್ಣದಲ್ಲಿ ವೇದಾಧ್ಯಯನ ಮಾಡುತ್ತಿದ್ದಾಗ ರಾಘವೇಶ್ವರ ಸ್ವಾಮಿಗಳು ವಾರನ್ನಕ್ಕೆ ಬರುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಬಾಲಕೃಷ್ಣ ಗೋಪಾಲ ಅಡಿಯವರು. ಅದೇ ಸ್ವಾಮಿಗಳು ಇವತ್ತು ನಮ್ಮ ಮೇಲೆ ದಬ್ಬಾಳಿಕೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಅವರು.

ಸರ್ವತಂತ್ರ, ಸ್ವತಂತ್ರ ಮಹಾಬಲೇಶ್ವರ

ಸದ್ಯ ಆಗಸ್ಟ್‌ 10, 2018ರ ಕರ್ನಾಟಕ ರಾಜ್ಯ ಹೈಕೋರ್ಟ್‌ ಆದೇಶದ ನಂತರ ಬಾಲಕೃಷ್ಣ ಅಡಿ ಸೇರಿದಂತೆ ಇಲ್ಲಿನ ಉಪಾಧಿವಂತರೆಲ್ಲಾ ಸ್ವಲ್ಪ ನಿರಾಳರಾಗಿದ್ದಾರೆ. ರಾಘವೇಶ್ವರ ಸ್ವಾಮಿಗಳು ಪೀಠಾಧಿಪತಿಯಾಗಿರುವ ಮಠದಿಂದ ದೇವಸ್ಥಾನವನ್ನು ಸರಕಾರ ವಾಪಸ್‌ ಪಡೆದುಕೊಳ್ಳಬೇಕು ಎಂದು ನ್ಯಾಯಾಲಯ ನೀಡಿರುವ ಆದೇಶ ಇವರಲ್ಲಿ ಹೊಸ ಉತ್ಸಾಹ ತಂದಿದೆ. ಹೀಗಾಗಿ ಮತ್ತೆ ದೇವಸ್ಥಾನವನ್ನು ಪಡೆದುಕೊಂಡು ತಮ್ಮ ಹಕ್ಕುಗಳನ್ನು ಸ್ಥಾಪಿಸಲು ಇವರು ಸಿದ್ಧವಾಗಿ ನಿಂತಿದ್ದಾರೆ.

ದೇವಸ್ಥಾನ ಮುಂದೆ ಯಾವುದೇ ವಿವಾದಗಳಿಲ್ಲದೆ, ಸುಸೂತ್ರವಾಗಿ, ಪಾರದರ್ಶಕವಾಗಿ ಇದ್ದರೆ ಅಷ್ಟೇ ಸಾಕು ಎನ್ನುತ್ತಾರೆ ಗಜಾನನ ಕೃಷ್ಣ ಹಿರೇ ಭಟ್ಟರು. ಜತೆಗೆ ಈ ದೇವಸ್ಥಾನ ಒಬ್ಬರಿಗೇ ಸೇರಿದ್ದಲ್ಲ. ಬ್ರಾಹ್ಮಣರು, ಹಾಲಕ್ಕಿ ಗೌಡರು, ಅಂಬಿಗರು, ಆಚಾರ್ಯರು, ಕುಂಬಾರರು, ಸೂಳೆಯರು, ಮಡಿವಾಳರು. ಮೊಗೇರರು, ಬೋವೀರರು, ಹೊಲೆಯರು, ಹಳ್ಳೇರು, ಸೊನೆಗಾರರು, ಶೆಟ್ಟರು, ಗುಡಿಗಾರರು… ಹೀಗೆ ಎಲ್ಲರಿಗೂ ದೇವಸ್ಥಾನದ ಮೇಲೆ ಹಕ್ಕಿದೆ. ಮಠದ ಆಡಳಿತಾವಧಿಯಲ್ಲಿ ಇದು ಕೇವಲ ಹವ್ಯಕರಿಗೆ ಸೇರಿದ್ದು ಎಂಬಂತಾಗಿತ್ತು. ಇದನ್ನೀಗ ಮತ್ತೆ ಎಲ್ಲಾ ಸಮುದಾಯಗಳ ಬಾಗಿಲಿಗೆ ಕೊಂಡೊಯ್ಯಬೇಕಾಗಿದೆ ಎನ್ನುತ್ತಲೇ ಮಾತು ಮುಗಿಸಿದರು ಬಾಲಕೃಷ್ಣ ಅಡಿ. ಸಮಯ 3 ಗಂಟೆ ಕಳೆದು ಕೆಲವು ನಿಮಿಷಗಳಾಗಿತ್ತು. ಆಕಾಶದಲ್ಲಿ ಕವಿದಿದ್ದ ಮೋಡ ಸರಿದಿತ್ತು. ತಮ್ಮ ಬದುಕಿನಲ್ಲಿಯೂ ಹೀಗೆ ಕವಿದಿದ್ದ ಮೋಡ ಸರಿದ ಭಾವನೆಯಲ್ಲಿ ಇಲ್ಲಿನ ಉಪಾಧಿವಂತರಿದ್ದರು.