samachara
www.samachara.com
ಊಟಕ್ಕೆ ಹಣವಿಲ್ಲದೇ ‘ಉಪವಾಸ ಸತ್ಯಾಗ್ರಹ’ ನಡೆಸಲು ಮುಂದಾಗಿದ್ದಾರೆ ಹೊರಗುತ್ತಿಗೆ ಕಾರ್ಮಿಕರು
ರಾಜ್ಯ

ಊಟಕ್ಕೆ ಹಣವಿಲ್ಲದೇ ‘ಉಪವಾಸ ಸತ್ಯಾಗ್ರಹ’ ನಡೆಸಲು ಮುಂದಾಗಿದ್ದಾರೆ ಹೊರಗುತ್ತಿಗೆ ಕಾರ್ಮಿಕರು

ಆಗಸ್ಟ್‌ 20ರಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿರುವ ಹೊರಗುತ್ತಿಗೆ ಕಾರ್ಮಿಕರ ಬಳಿ ಈಗ ಊಟಕ್ಕೂ ಕೂಡ ಹಣವಿಲ್ಲ. ಬೆಂಗಳೂರಿಗೆ ಬರಲು ತಗಲುವ ಸಾರಿಗೆ ವೆಚ್ಚವನ್ನೂ ಕೂಡ ಇತರರಿಂದ ಸಾಲ ಪಡೆಯುವ ಸ್ಥಿತಿಗೆ ಕಾರ್ಮಿಕರು ತಲುಪಿದ್ದಾರೆ.

ಹಲವಾರು ದಿನಗಳಿಂದ ತಮ್ಮ ದುಡಿಮೆಯ ಹಣವನ್ನು ನೀಡುವಂತೆ ಸರಕಾರಕ್ಕೆ, ಇಲಾಖೆಗಳಿಗೆ, ಗುತ್ತಿಗೆದಾರರಿಗೆ ಒತ್ತಾಯ ಮಾಡುತ್ತಲೇ ಬಂದಿರುವ ಹೊರಗುತ್ತಿಗೆ ಕಾರ್ಮಿಕರು ಆಗಸ್ಟ್‌ 20ರಿಂದ ‘ಅನಿರ್ದಿಷ್ಟಾವಧಿ ಅನಿವಾರ್ಯ ಉಪಾವಾಸ ಸತ್ಯಾಗ್ರಹ’ವನ್ನು ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ಉಪವಾಸ ಸತ್ಯಾಗ್ರಹ ಬೇಕು ಅಂತಲೇ ಮಾಡುತ್ತಿರುವುದೇನಲ್ಲ. ಸಂಬಳ ಸಿಗದ ಕಾರಣ ಅನಿವಾರ್ಯವಾಗಿ ಉಪವಾಸ ಮಾಡುವಂತಾಗಿದ್ದು, ಉಪವಾಸ ಮಾಡುತ್ತಲೇ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.

ಆಗಸ್ಟ್‌ 20ರಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿರುವ ಹೊರಗುತ್ತಿಗೆ ಕಾರ್ಮಿಕರು ಹಾಸಿಗೆ ಬಟ್ಟೆಗಳನ್ನಷ್ಟೇ ಹೊತ್ತು ಬರಲಿದ್ದಾರೆ. ಅಹಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡು ತರಲೂ ಕೂಡ ಈಗ ಸಹಸ್ರಾರು ಕಾರ್ಮಿಕರ ಬಳಿ ಹಣವಿಲ್ಲ. ಬೆಂಗಳೂರಿಗೆ ಬರಲು ತಗಲುವ ಸಾರಿಗೆ ವೆಚ್ಚವನ್ನೂ ಕೂಡ ಇತರರಿಂದ ಸಾಲ ಪಡೆಯುವ ಅನಿವಾರ್ಯ ಸ್ಥಿತಿಗೆ ರಾಜ್ಯದ ಇಲಾಖೆಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಕಾರ್ಮಿಕರು ತಲುಪಿದ್ದಾರೆ.

ಕೆಲದಿನಗಳ ಹಿಂದೆ ಹೊರಗುತ್ತಿಗೆ ಕಾರ್ಮಿಕರು ಕೆಲಸಕ್ಕೆ ತೆರಳಲು ಬಸ್‌ ಚಾರ್ಜಿಗೆ ಹಣವಿಲ್ಲದ ಕಾರಣ ಒಂದು ತಿಂಗಳು ರಜೆಯನ್ನು ನೀಡುವಂತೆ ಕೋರಿ ಪತ್ರ ಬರೆದಿದ್ದರು. ಸಂಬಳವನ್ನು ನೀಡುವಂತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರ ಬಳಿ ಮನವಿ ಮಾಡಿದ್ದರು. ಆದರೆ ಇಲಾಖೆಗಳಲ್ಲಿ ಹಣವಿಲ್ಲದ ಕಾರಣವನ್ನು ನೀಡಿರುವ ಕುಮಾರಸ್ವಾಮಿ, ಇನ್ನೂ ಸ್ವಲ್ಪ ದಿನಗಳ ಕಾಲಾವಕಾಶವನ್ನು ಕೇಳಿದ್ದಾರೆ. ಜತೆಗೆ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಕಲ್ಪಿಸುವ ಬಗ್ಗೆ ಕೂಡ ನಿರಾಸಕ್ತಿ ತೋರ್ಪಡಿಸಿದ್ದಾರೆ.

‘ಸಮಾಚಾರ’ದ ಜತೆ ಮಾತನಾಡಿದ ಹೊರಗುತ್ತಿಗೆ ಕಾರ್ಮಿಕರ ಸಂಘಟನೆ ಅಧ್ಯಕ್ಷ ಮತ್ತು ಹೊರಗುತ್ತಿಗೆ ಕಾರ್ಮಿಕ ಕೃಷ್ಣಮೂರ್ತಿ, ಹೊರಗುತ್ತಿಗೆ ಕಾರ್ಮಿಕ ಸಮಸ್ಯೆಗಳನ್ನು ಇಂಚಿಂಚಾಗಿ ಬಿಡಿಸಿಟ್ಟರು. ಅವರೇ ಹೇಳುವಂತೆ ಕೆಲವು ದಿನಗಳ ಹಿಂದೆ ಕೃಷ್ಣಮೂರ್ತಿ ಹೊರಗುತ್ತಿಗೆ ಕಾರ್ಮಿಕಳೊಬ್ಬಳ ಕರೆಯನ್ನು ಸ್ವೀಕರಿಸಿದ್ದರು. ಆಕೆಯ ಪುಟ್ಟ ಮಗುವಿಗೆ ಅದಾಗ ತಾನೇ ಹಲ್ಲು ಮೂಡುತ್ತಿದ್ದ ಸಮಯ. ಇದರಿಂದಾಗಿ ಆ ಮಗು ತೀವ್ರ ಅನಾರೋಗ್ಯಕ್ಕೆ ಒಳಗಾಗಿತ್ತು. ಅದಕ್ಕೆ ಚಿಕಿತ್ಸೆ ಕೊಡಿಸಲೂ ಕೂಡ ಆಕೆಯ ಬಳಿ ಹಣವಿರಲಿಲ್ಲ. ಹೇಗಾದರೂ ಮಾಡಿ ಸಂಬಳ ಕೊಡಿಸಿ ಎಂದಾಕೆ ರೋಧಿಸಿದ್ದಳು. ಇದಾಗಿ ತಿಂಗಳುಗಳು ಕಳೆದರೂ ಕೂಡ ಆಕೆಯ ಸಂಬಳದ ಹಣ ಅವಳ ಕೈಸೇರಿಲ್ಲ.

ಹೊರಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿರುವವರ ಪೈಕಿ ವಿಧವೆಯರ ಸಂಖ್ಯೆ ಸಾಕಷ್ಟಿದೆ. ಬೇರೆ ಯಾವ ಆರ್ಥಿಕ ಮೂಲವೂ ಇಲ್ಲದ ಈ ಹೆಂಗಸರು ದೊರೆಯುವ ಸಂಬಳವನ್ನೇ ನೆಚ್ಚಿಕೊಂಡು ಕುಳಿತಿದ್ದಾರೆ. ಹಲವಾರು ವರ್ಷಗಳಿಂದ ಇಲ್ಲಿಯೇ ಕೆಲಸ ನಿರ್ವಹಿಸಿ ಒಗ್ಗಿಕೊಂಡಿರುವ ಇವರಿಗೆ ಈಗ ಬೇರೆ ಕೆಲಸಗಳನ್ನೂ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ. ಸಂಬಳವೂ ಕೂಡ ಸರಿಯಾದ ದೊರೆಯದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕಿರಲಿ, ಒಂದೊತ್ತಿನ ಊಟಕ್ಕೂ ಕೂಡ ಪರದಾಡುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.

ಅಭಿಯೋಜನಾ ಇಲಾಖೆಯಲ್ಲಿನ ಹಲವು ಗುತ್ತಿಗೆ ಕಾರ್ಮಿಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿದ್ದಾರೆ. ಕಾರಣ ಶುಲ್ಕ ಕಟ್ಟಲು ಹಣವಿಲ್ಲ. ಶಾಲೆಯವರ ಬಳಿ ಮಾತನಾಡಲು ಹೋದರೆ ಕೋರ್ಟ್‌ನಲ್ಲಿ ದುಡಿಯುವ ನಿಮಗೇಕೆ ಸಂಬಳ ದೊರೆಯುವುದಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಆದ್ದರಿಂದ ಈಗ ಮಕ್ಕಳನ್ನು ಮನೆಯಲ್ಲಿಯೇ ಉಳಿಸಿಕೊಂಡಿದ್ದಾರೆ.

ಇವು ಇತರೆ ಕಾರ್ಮಿಕರ ಕತೆಯಾದರೆ, ಸಂಬಳಕ್ಕಾಗಿ ದನಿ ಎತ್ತುತ್ತಿರುವ ಕೃಷ್ಣಮೂರ್ತಿಯ ಮೇಲೆಯೂ ಕೂಡ ಇಲ್ಲದ ಸಲ್ಲದ ಅಪವಾದವನ್ನು ಹೊರಿಸಲು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಜಾಸ್ತಿ ಮಾತನಾಡಿದರೆ ಕೆಲಸದಿಂದಲೇ ತೆಗೆದುಹಾಕುವ ಬೆದರಿಕೆಗಳನ್ನು ಕೃಷ್ಣಮೂರ್ತಿ ಎದುರಿಸಬೇಕಾಗಿದೆ. ಹೀಗೆಯೇ ಹಲವರಿಗೆ ನೀವು ಕೆಲಸಕ್ಕೆ ಬರಬೇಡಿ ಎಂದು ಹೇಳಿ, ಕೆಲದಿನಗಳ ಕಾಲ ಬರದಿದ್ದರೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಕಾರಣ ನೀಡಿ ಕೆಲಸದಿಂದ ತೆಗೆಯಲಾಗುತ್ತಿದೆ. ಇಂತಹ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಹೊರಗುತ್ತಿಗೆ ಕಾರ್ಮಿಕರು ದಿನ ಸವೆಸುತ್ತಿದ್ದಾರೆ.

ಈ ಕಾರ್ಮಿಕರ ಸಮಸ್ಯೆಗಳೇನು?:

ಹೊರಗುತ್ತಿಗೆ ಕಾರ್ಮಿಕರು ದಿನನಿತ್ಯ ಬಂದು ಕೆಲಸವೇನೋ ಮಾಡುತ್ತಿದ್ದಾರೆ. ಆದರೆ ಹಲವಾರು ತಿಂಗಳುಗಳಿಂದ ದುಡಿದ ಹಣ ಕೈಸೇರಿಲ್ಲ. ಇದು ಈಗಿನ ಸಮಸ್ಯೆಯೇನೂ ಅಲ್ಲ. ಹಲವಾರು ವರ್ಷಗಳಿಂದ ಕಾರ್ಮಿಕರು ಸರಿಯಾದ ಸಮಯಕ್ಕೆ ಸಂಬಳ ದೊರೆಯದೆ ಪರಿತಪಿಸುತ್ತಲೇ ಇದ್ದಾರೆ.

ಇಲ್ಲಿ ಗುತ್ತಿಗೆದಾರರು ಮತ್ತು ಇಲಾಖೆಗಳೆರಡ ಸಮಸ್ಯೆಯೂ ಇದೆ. ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರಿಗೆ ನೀಡುವ ಹಣದ ಮೇಲೆ ಶೇಕಡವಾರು ಮೊತ್ತದಲ್ಲಿ ಕಮಿಷನ್‌ ಪಡೆಯುತ್ತಾರೆ. ಗುತ್ತಿಗೆದಾರರು ನಿರಾಕರಿಸಿದರೆ ಗುತ್ತಿಗೆದಾರರರಿಗೆ ಸೇರಬೇಕಾದ ಹಣ ತಲುಪುವುದು ನಿಧಾನವಾಗುತ್ತದೆ. ಕೆಲವು ಇಲಾಖೆಗಳಿಗೆ 2 ತಿಂಗಳಿಗೆಂದು ಅನುದಾನ ನೀಡಲಾಗಿರುತ್ತದೆ. ಈ ಅನುದಾನ ಖಾಲಿಯಾದ ನಂತರವೇ ಮತ್ತೆ ಸರಕಾರದ ಬಳಿ ಹಣ ಕೇಳಬಹುದು. ಗುತ್ತಿಗೆದಾರರೂ ಕೂಡ ಹಲವೊಮ್ಮೆ ಇಲಾಖೆಗಳಿಗೆ ಬಿಲ್‌ ಸಲ್ಲಿಸುವುದನ್ನು ವಿಳಂಬ ಮಾಡುತ್ತಾರೆ. ಇದರ ಹಿನ್ನಲೆಯೇನು ಎನ್ನುವುದು ಅವರಿಗೇ ಗೊತ್ತು ಎನ್ನುವುದು ಕೃಷ್ಣಮೂರ್ತಿಯವರ ಮಾತು.

ಹೊರಗುತ್ತಿಗೆ ಕಾರ್ಮಿಕರಿಗೆ ವರ್ಷಕ್ಕೆ 2 ಅಥವಾ 3 ಬಾರಿಯಷ್ಟೇ ಸಂಬಳ ದೊರೆಯುತ್ತದೆ. ಅದೂ ಕೂಡ ಪೂರ್ತಿ ಮೊತ್ತವಲ್ಲ. 5 ತಿಂಗಳ ಸಂಬಳ ನೀಡಬೇಕಿದ್ದ ಜಾಗದಲ್ಲಿ 2 ಅಥವಾ 3 ತಿಂಗಳ ಸಂಬಳವನ್ನಷ್ಟೇ ನೀಡಲಾಗುತ್ತದೆ. ಮತ್ತೆ ಸಂಬಳ ನೀಡುವುದು 4-5 ತಿಂಗಳ ನಂತರವೇ. ಆ ವೇಳೆಗೆ ಕಡಿಮೆ ಎಂದರೂ ಕೂಡ 6-7 ತಿಂಗಳ ಸಂಬಳ ಬಾಕಿ ಇರುತ್ತದೆ. ಆದರೆ ಆಗಲೂ ಕೂಡ 3-4 ತಿಂಗಳ ಸಂಬಳವಷ್ಟೇ ದೊರೆಯುತ್ತದೆ. ಹೊರಗುತ್ತಿಗೆ ಕಾರ್ಮಿಕರಾಗಿರುವವರು ಬಹುಪಾಲು ಜನ ಪ್ರತಿ ತಿಂಗಳು ಸಂಬಳದ ಮುಖವನ್ನು ನೊಡಿಯೇ ಇಲ್ಲ.
ಕೃಷ್ಣ ಮೂರ್ತಿ, ಹೊರಗುತ್ತಿಗೆ ಕಾರ್ಮಿಕರ ಸಂಘಟನೆ ಅಧ್ಯಕ್ಷರು.

ಕಾರ್ಮಿಕ ಕಾನೂನು ಹೇಳುವ ಪ್ರಕಾರ ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ಸಂಬಳ ದೊರೆಯಬೇಕು. ದೊರೆಯದಿದ್ದರೆ ಸಂಬಳ ನೀಡುವುದಕ್ಕಾಗಿ 7 ದಿನಗಳ ಅವಕಾಶ ಇರುತ್ತದೆ. ಅದೂ ಕೂಡ ಸಾಧ್ಯವಾಗದಿದ್ದರೆ ಇಲಾಖೆಯ ಮುಖ್ಯಸ್ಥರು ಸಂಬಳ ದೊರೆಯುವಂತೆ ಮಾಡುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಇಲಾಖೆ ವತಿಯಿಂದಲೇ ಕಾರ್ಮಿಕರ ಖಾತೆಗಳಿಗೆ ಹಣ ವರ್ಗಾಯಿಸಬಹುದು ಎಂಬ ಕಾನೂನುಗಳೂ ಕೂಡ ಇವೆ. ಆದರೆ ಇದುವರೆಗೂ ಕೂಡ ಯಾವ ಅಧಿಕಾರಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪ್ರಶ್ನಿಸಿದರೆ ಉತ್ತರವೂ ದೊರೆಯುವುದಿಲ್ಲ ಎನ್ನುವುದು ಕೃಷ್ಣಮೂರ್ತಿಯವರ ಅಳಲು.

ಸುಪ್ರಿಂ ಕೋರ್ಟ್ ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ಆದೇಶವನ್ನು ಹೊರಡಿಸಿ ಒಂದುವರೆ ವರ್ಷವಾಯಿತು. ‘ಸಮಾನ ವೇತನ ನೀಡುವುದಾದರೆ ಟೈಪಿಸ್ಟ್‌ ಆಗಿ ಕಾರ್ಯ ನಿರ್ವಹಿಸುವವನೊಬ್ಬ ತಿಂಗಳಿಗೆ 21,000 ವೇತನ ಪಡೆಯುತ್ತಾನೆ. ಎಲ್ಲಾ ಕಡಿತಗಳ ನಂತರ ಕಡಿಮೆ ಎಂದರೂ 17,000 ರೂಪಾಯಿ ಅವನ ಕೈತಲುಪುತ್ತದೆ. ಆದರೆ ಈ ಆದೇಶ ಕೇವಲ ಆದೇಶವಾಗಿಯಷ್ಟೇ ಉಳಿದಿದೆ. ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ವೇತನ ನೀಡಲಾಗುತ್ತಿದೆ. 7,000ದಿಂದ 9,000ವರೆಗಷ್ಟೇ ವೇತನವನ್ನು ಕಾರ್ಮಿಕರಿಗೆ ನಿಗಧಿಪಡಿಸಲಾಗಿದೆ. ಆದರೆ ಈ ಹಣವನ್ನೇ ಸರಿಯಾಗಿ ನೀಡುತ್ತಿಲ್ಲ.

ಉದ್ಯೋಗ ಭದ್ರತೆ ಇಲ್ಲದಿರುವುದು ಹೊರಗುತ್ತಿಗೆ ಕಾರ್ಮಿಕರ ಮತ್ತೊಂದು ದೊಡ್ಡ ಸಮಸ್ಯೆ. ಈ ಕಾರ್ಮಿಕರನ್ನು ಯಾವಾಗ ಬೇಕಾದರೂ ಕೂಡ ಕೆಲಸದಿಂದ ಕಿತ್ತೊಗೆಯಬಹುದು. ಅದಕ್ಕೆ ನಿರ್ದಿಷ್ಟವಾದ ಕಾರಣಗಳು ಇರಬೇಕು ಎಂದೇನಿಲ್ಲ. ಕೆಲವರನ್ನು ಇಲಾಖೆಗಳಲ್ಲಿ ಹಣವಿಲ್ಲ ಎಂಬ ಕಾರಣದಿಂದ ಕೆಲಸದಿಂದ ತೆಗೆದರೆ ಮತ್ತೆ ಕೆಲವರನ್ನು ಯಾವ ಕಾರಣವೂ ಇಲ್ಲದೆ ಹೊರದಬ್ಬಲಾಗುತ್ತಿದೆ. ಗುತ್ತಿಗೆದಾರರನ್ನು, ಅಧಿಕಾರಿಗಳನ್ನು ಪ್ರಶ್ನಿಸಿದವರಿಗೂ ಕೂಡ ಇದೇ ಗತಿ.

ಏಕಾಏಕಿ ಕೆಲಸದಿಂದ ತೆಗೆಯುವುದು ಮತ್ತೊಂದು ದೊಡ್ಡ ಸಮಸ್ಯೆ. ಹಲವಾರು ವರ್ಷಗಳ ಕಾಲ ಇಲ್ಲಿಯೇ ಕೆಲಸ ಮಾಡುತ್ತಿರುವವರಿಗೆ ಯಾವ ಸೂಚನೆಯನ್ನೂ ಕೂಡ ನೀಡದೆ ಕೆಲಸದಿಂದ ತೆಗೆಯಲಾಗುತ್ತದೆ. ಜತೆಗೆ ಕೆಲಸದಿಂದ ತೆಗೆಯುವ ವೇಳೆ ಬಾಕಿ ಉಳಿದ ಸಂಬಳವನ್ನೂ ಕೂಡ ನೀಡುವುದಿಲ್ಲ. ಕೆಲಸ ಕಳೆದುಕೊಳ್ಳುವುದರ ಜತೆಗೆ ದುಡಿದ ಹಣಕ್ಕಾಗಿ ವರ್ಷಗಳ ಕಾಲ ತಿರುಗುವ ಪರಿಸ್ಥಿತಿಯಲ್ಲಿ ಗುತ್ತಿಗೆ ಕಾರ್ಮಿಕರಿದ್ದಾರೆ.

ಇವು ಯಾವುದೇ ಒಂದು ಇಲಾಖೆಯಲ್ಲಿನ ಸಮಸ್ಯೆಯಲ್ಲ. ಎಲ್ಲಾ ಸರಕಾರಿ ಇಲಾಖೆಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಕಾರ್ಮಿಕರು ಇದೇ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಪಶುಸಂಗೋಪನಾ ಇಲಾಖೆಯ ಹೊರಗುತ್ತಿಗೆ ಕಾರ್ಮಿಕರಿಗೆ 5 ತಿಂಗಳಿಂದ, ಭೂಮಾಪನ ಇಲಾಖೆಯ ಕಾರ್ಮಿಕರಿಗೆ 4 ತಿಂಗಳಿನಿಂದ, ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ ಕಾರ್ಮಿಕರಿಗೆ 7 ತಿಂಗಳಿಂದ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ಕಾರ್ಮಿಕರಿಗೆ 7 ತಿಂಗಳಿಂದ, ಆಹಾರ ಮತ್ತು ನಾಗರಿಕ ಇಲಾಖೆ, ಅಕ್ಷರ ದಾಸೋಹ, ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಕಾರ್ಮಿಕರಿಗೆ 3 ತಿಂಗಳುಗಳಿಂದ, ತಾಲೂಕು ಪಂಚಾಯಿತಿ ಕಾರ್ಮಿಕರಿಗೆ 5 ತಿಂಗಳಿಂದ, ಆರೋಗ್ಯ ಇಲಾಖೆ ಕಾರ್ಮಿಕರಿಗೆ 4 ತಿಂಗಳಿಂದ ಮತ್ತು ಭಾಗ್ಯಲಕ್ಷ್ಮಿ ಯೋಜನೆಯ ಅಡಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ 9 ತಿಂಗಳಿನಿಂದ ಸಂಬಳವೇ ದೊರೆತಿಲ್ಲ.

ಊಟಕ್ಕೆ ಹಣವಿಲ್ಲದೇ ‘ಉಪವಾಸ ಸತ್ಯಾಗ್ರಹ’ ನಡೆಸಲು ಮುಂದಾಗಿದ್ದಾರೆ ಹೊರಗುತ್ತಿಗೆ ಕಾರ್ಮಿಕರು

ಹೀಗೆ ಹಲವಾರು ತಿಂಗಳುಗಳಿಂದ ಸಂಬಳವನ್ನೇ ಕಾಣದೆ ಕಂಗೆಟ್ಟಿರುವ ಹೊರಗುತ್ತಿಗೆ ಕಾರ್ಮಿಕರು ಈಗ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದಾರೆ. ಸರಕಾರದ ಮುಂದೆ ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ. ಆ ಬೇಡಿಕೆಗಳು ಹೀಗಿವೆ:

  • 1. ಎಲ್ಲಾ ಇಲಾಖೆಗಳಲ್ಲೂ ಗುತ್ತಿಗೆ ನೌಕರರಿಗೆ ಇದುವರೆಗೆ ಬಾಕಿಯಿರುವ ವೇತನವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಬೇಕು.
  • 2. ಯಾವ ಇಲಾಖೆಗಳಲ್ಲೂ ಗುತ್ತಿಗೆ ನೌಕರರನ್ನು ಕೆಲಸದಿಂದ ಕಿತ್ತು ಹಾಕದಂತೆ ಆದೇಶಿಸಬೇಕು.
  • 3. ಉದ್ಯೋಗಕ್ಕಾಗಿ ಯುವಜನರು ಆಂದೋಲನಕ್ಕೆ ಚುನಾವಣಾಪೂರ್ವದಲ್ಲಿ ನೀಡಿದ ಭರವಸೆಯಂತೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು, ಮುಖ್ಯಮಂತ್ರಿಗಳು ಕೂಡಲೇ ಸಭೆ ಕರೆದು ನಿರ್ದಿಷ್ಟ ಕ್ರಮಗಳಿಗೆ ಮುಂದಾಗಬೇಕು.

ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಉದ್ಯೋಗ ಭದ್ರತೆಯನ್ನು ನಿಡುವುದಾಗಿ ಹೇಳಿಕೊಂಡಿದ್ದರು. ಆದರೆ ಈಗ ತಮ್ಮ ಮಾತುಗಳನ್ನು ಮರೆತಂತಿದೆ. ತಾನೊಬ್ಬ ಸಾಂದರ್ಭಿಕ ಶಿಶು ಎಂದು ಹೇಳುತ್ತ, ಕಾಲಾವಕಾಶವನ್ನು ಬೇಡುತ್ತಲೇ ಇರುತ್ತಾರೆಯೇ ಅಥವಾ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೋ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.