samachara
www.samachara.com
ಕೇರಳದಲ್ಲಿ ಭೀಕರ ಪ್ರವಾಹಕ್ಕೆ 26 ಬಲಿ; ಕರ್ನಾಟಕದ ಕರಾವಳಿ, ಮಲೆನಾಡಿನಲ್ಲೂ ಮಳೆಯ ಅಬ್ಬರ
ರಾಜ್ಯ

ಕೇರಳದಲ್ಲಿ ಭೀಕರ ಪ್ರವಾಹಕ್ಕೆ 26 ಬಲಿ; ಕರ್ನಾಟಕದ ಕರಾವಳಿ, ಮಲೆನಾಡಿನಲ್ಲೂ ಮಳೆಯ ಅಬ್ಬರ

ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಕೇರಳ ರಾಜ್ಯಕ್ಕೆ ಭಾರೀ ಮಳೆಯನ್ನು ಹೊತ್ತು ತಂದಿದ್ದು, ರಾಜ್ಯದ ಹಲವು ಭಾಗಗಳು ಜಲಾವೃತವಾಗಿ ಭೀಕರ ಪ್ರವಾಹ ಸೃಷ್ಟಿಯಾಗಿದೆ.

ಕೇರಳದಲ್ಲಿ ಭಾರೀ ಭೂಕುಸಿತಗಳೂ ಸಂಭವಿಸಿವೆ. ಇಡುಕ್ಕಿ ಜಿಲ್ಲೆ ಸೇರಿದಂತೆ ರಾಜ್ಯದ ಉತ್ತರ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಇಲ್ಲಿಯವರೆಗೆ 26 ಜನರು ಸಾವಿಗೀಡಾಗಿದ್ದಾರೆ. ಇವರಲ್ಲಿ 17 ಜನರು ಇಡುಕ್ಕಿ ಮತ್ತು ಮಲ್ಲಪುರಂ ಜಿಲ್ಲೆಯಲ್ಲಿ ಕೇವಲ ಭೂಕಿಸತದಿಂದಲೇ ಸಾವನ್ನಪ್ಪಿದ್ದಾರೆ.

26 ವರ್ಚಗಳ ಬಳಿಕ ಇಡುಕ್ಕಿ ಅಣೆಕಟ್ಟಿನಿಂದ ಹರಿದ ನೀರು
26 ವರ್ಚಗಳ ಬಳಿಕ ಇಡುಕ್ಕಿ ಅಣೆಕಟ್ಟಿನಿಂದ ಹರಿದ ನೀರು
ಚಿತ್ರ ಕೃಪೆ: ಬೋಡೋಲ್ಯಾಂಡ್

ಪರಿಸ್ಥಿತಿ ಕೈ ಮೀರುತ್ತಿದ್ದು ಇಡುಕ್ಕಿ, ಕೋಝಿಕ್ಕೋಡ್‌, ವಯನಾಡ್‌ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ರಕ್ಷಣಾ ಕಾರ್ಯಕ್ಕಾಗಿ ಸೇನೆ ಮತ್ತು ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಕೇರಳದ 24 ಅಣೆಕಟ್ಟುಗಳ ಕ್ರಸ್ಟ್‌ಗೇಟ್‌ಗಳಿಂದ ನೀರನ್ನು ಬಿಡಲಾಗುತ್ತಿದ್ದು, ನದಿ ಪಾತ್ರಗಳಲ್ಲಿ ಪ್ರವಾಹದ ಪರಿಸ್ಥಿತಿಯನ್ನು ಸೃಷ್ಟಿಯಾಗಿದೆ. ಅದರಲ್ಲೂ ಬಿಲ್ಲಿನಾಕಾರದ ಏಷ್ಯಾದ ಅತೀ ದೊಡ್ಡ ಅಣೆಕಟ್ಟು ಇಡುಕ್ಕಿ ಕಳೆದ 26 ವರ್ಷಗಳಲ್ಲಿ ಇದೇ ಮೊದಲ ಭಾರಿಗೆ ಭರ್ತಿಯಾಗಿರುವುದು ಕೇರಳದಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣವನ್ನು ಸೂಚಿಸುತ್ತಿದೆ.

ಮಳೆಯಿಂದಾಗಿ ಬಾಧಿತರಾದ ರಾಜ್ಯದ 10,000 ಕ್ಕೂ ಹೆಚ್ಚು ಜನರನ್ನು ಕಳೆದೆರಡು ದಿನಗಳಲ್ಲಿ 157 ಪರಿಹಾರ ಶಿಬಿರಗಳಿಗೆ ಸ್ಥಳಾಂತರ ಮಾಡಲಾಗಿದೆ. ಕೇರಳ ಪ್ರವಾಸಿಗರ ಸ್ವರ್ಗವಾಗಿದ್ದು, ಮಳೆ ಹಿನ್ನೆಲೆಯಲ್ಲಿ ಎತ್ತರದ ಪ್ರದೇಶಗಳು ಮತ್ತು ಅಣೆಕಟ್ಟು ಪ್ರದೇಶಗಳಿಗೆ ಹೋಗದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.

ಮಳೆ ಸಂಚಾರಕ್ಕೂ ತೊಡಕಾಗಿದ್ದು ಸಮೀಪದಲ್ಲೇ ತುಂಬಿ ಹರಿಯುತ್ತಿರುವ ಪೆರಿಯಾರ್‌ ನದಿಯಿಂದಾಗಿ ಕೊಚ್ಚಿ ವಿಮಾನ ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ರಾಜ್ಯದಾದ್ಯಂತ ಅಧಿಖಾರಿಗಳಿಂದ ವರದಿಗಳನ್ನು ತರಿಸಿಕೊಂಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ‘ಪರಿಸ್ಥಿತಿ ಗಂಭೀರವಾಗಿದೆ’ ಎಂದಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 24 ಅಣೆಕಟ್ಟುಗಳ ಗೇಟುಗಳನ್ನು ಏಕಕಾಲಕ್ಕೆ ತೆರಯಲಾಗುತ್ತಿದೆ ಇದು ಮಳೆಯ ತೀವ್ರತೆಯನ್ನು ತೋರಿಸುತ್ತಿದೆ ಎಂದವರು ವಿವರಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ನೈರುತ್ಯ ಮುಂಗಾರು ಮಾರುತಗಳು ಕೇರಳದಲ್ಲಿ ಭಾರೀ ಮಳೆಯನ್ನು ತರುತ್ತಿದ್ದು, ಮಲ್ಲಪುರಂ ಜಿಲ್ಲೆಯ ನಿಲಂಬುರ್‌ ಅತೀ ಹೆಚ್ಚಿನ ಮಳೆಗೆ ಗುರಿಯಾಗಿದೆ. ಇಲ್ಲಿ ನಿನ್ನೆ ಒಂದೇ ದಿನ 40 ಸೆಂಟಿ ಮೀಟರ್‌ ಮಳೆ ಸುರಿದಿದೆ. ಇನ್ನು ವಯನಾಡಿನ ಮನಂಥವಡ್ಯಿನ್‌ನಲ್ಲಿ 31 ಸೆಂಟಿ ಮೀಟರ್‌ ಮಳೆಯಾಗಿದೆ. ವಯನಾಡ್‌ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಲ್ಲಿ 39.87 ಸೆಂಟಿ ಮೀಟರ್‌ ಮಳೆಯಾಗಿದ್ದು ಬೆಳೆ ಸೇರಿದಂತೆ ಮನೆಗಳಿಗೆ ಭಾರೀ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ಹೇಳಿವೆ.

ಮಳೆ ದೇವರ ಸ್ವಂತ ನಾಡು ಕೇರಳದ ಪ್ರವಾಸೋದ್ಯಮಕ್ಕೂ ಹೊಡೆತ ನೀಡಿದ್ದು ಆಗಸ್ಟ್‌ 11ರಿಂದ ಅಲಪುಝದ ಪುನ್ನಮಡ ಕೆರೆಯಲ್ಲಿ ನಡೆಯಬೇಕಿದ್ದ ನೆಹರೂ ಟ್ರೋಫಿ ಬೋಟ್‌ ರೇಸ್‌ನ್ನು ಮುಂದೂಡಲಾಗಿದೆ,.

ರಾಜ್ಯದ ಹೆಚ್ಚಿನ ಭಾಗಗಳು ಜಲಾವೃತವಾಗಿದ್ದು, ಪರಿಹಾರ ಕಾರ್ಯಚರಣೆಗಳನ್ನು ನಿಯಂತ್ರಿಸಲು ಮುಖ್ಯಮಂತ್ರಿ ಕಾರ್ಯಾಲಯದಲ್ಲಿ 24*7 ಹೆಲ್ಪ್‌ಲೈನ್‌ ಆರಂಭಿಸಲಾಗಿದೆ. ಪ್ರವಾಹ ಪೀಡಿತ ಕೇರಳಕ್ಕೆ ಕರ್ನಾಟಕ 10 ಕೋಟಿ ರೂಪಾಯಿ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದೆ. ಪಕ್ಕದ ತಮಿಳುನಾಡು ಕೂಡ ಸಹಾಯಕ್ಕೆ ಧಾವಿಸಿದ್ದು 5 ಕೋಟಿ ರೂಪಾಯಿ ಮೌಲ್ಯದ ಆಹಾರ, ಬಟ್ಟೆ ಮೊದಲಾದ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಸಹಾಯ ನೀಡಿದೆ.

ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿಯೂ ಮಳೆಯ ಅಬ್ಬರ

ಕರ್ನಾಟಕದಲ್ಲಿಯೂ ಮತ್ತೆ ಮಳೆ ಚುರುಕು ಪಡೆದುಕೊಂಡಿದೆ. ಮುಖ್ಯವಾಗಿ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಉತ್ತರ ಕನ್ನಡದಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಮಳೆಯಾಗುತ್ತಿದೆ.

ಜಲಾವೃತವಾಗಿರುವ ಶಿಶಿಲೇಶ್ವರ ದೇವಸ್ಥಾನ
ಜಲಾವೃತವಾಗಿರುವ ಶಿಶಿಲೇಶ್ವರ ದೇವಸ್ಥಾನ
ಚಿತ್ರ ಕೃಪೆ: ಸುದಿನ್‌ ಶಿಶಿಲ/ಫೇಸ್ಬುಕ್

ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ಮತ್ತು ಸಾಗರ, ದಕ್ಷಿಣ ಕನ್ನಡದ ಪುತ್ತೂರು ಮತ್ತು ಬೆಳ್ತಂಗಡಿ, ಚಿಕ್ಕಮಗಳೂರಿನ ಶೃಂಗೇರಿ, ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಹಾಗೂ ಉಡುಪಿ ಜಿಲ್ಲೆಯ ಕುಂದಾಪುರದ ಕೆಲವು ಪ್ರದೇಶಗಳಲ್ಲಿ ಸರಾಸರಿ 6 ಸೆಂಟಿಮೀಟರ್‌ಗಿಂತ ಹೆಚ್ಚಿನ ಮಳೆಯಾಗಿದೆ.

ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡದ ಪ್ರಮುಖ ನದಿಗಳಾದ ಕುಮಾರಧಾರ, ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿದ್ದು, ಬೆಳ್ತಂಗಡಿಯ ಶಿಶಿಲೇಶ್ವರ ದೇವಸ್ಥಾನ ಕಪಿಲಾ ನದಿಯಿಂದ ಗುರುವಾರ ಜಲಾವೃತವಾಗಿತ್ತು. ಮಡಿಕೇರಿ - ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುರುವಾರ ಭೂ ಕುಸಿತ ಸಂಭವಿಸಿದ್ದು ರಸ್ತೆ ಸಂಚಾರ ಬಂದ್‌ ಮಾಡಲಾಗಿದೆ.

ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರಿಯಲಿದ್ದು, ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.