ಹಾಸ್ಟೆಲ್‌ ಜಾಗದಲ್ಲಿ ‘ಸ್ಪೂರ್ತಿ ಸೌಧ’: ವಿದ್ಯಾರ್ಥಿಗಳ ಕೋಪಕ್ಕೆ ಗುರಿಯಾದ ಸರಕಾರದ ನಡೆ
ರಾಜ್ಯ

ಹಾಸ್ಟೆಲ್‌ ಜಾಗದಲ್ಲಿ ‘ಸ್ಪೂರ್ತಿ ಸೌಧ’: ವಿದ್ಯಾರ್ಥಿಗಳ ಕೋಪಕ್ಕೆ ಗುರಿಯಾದ ಸರಕಾರದ ನಡೆ

ಎಂಜಿ ರಸ್ತೆಯ ಸರಕಾರಿ ವಿಜ್ಞಾನ ಕಾಲೇಜು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿ ನಿಲಯವಿರುವ ಜಾಗದಲ್ಲಿ ‘ಸ್ಪೂರ್ತಿ ಸೌಧ’ ಹೆಸರಿನ ಕಟ್ಟಡ ನಿರ್ಮಿಸಲು ಸರಕಾರ ಮುಂದಾಗಿದೆ. ಸರಕಾರದ ಈ ನಡೆ ವಿದ್ಯಾರ್ಥಿಗಳು ಆಕ್ರೋಶಕ್ಕೆ ಕಾರಣವಾಗಿದೆ. 

ಬೆಂಗಳೂರಿನ ಪ್ರತಿಷ್ಟಿತ ಎಂಜಿ ರಸ್ತೆಯಲ್ಲಿರುವ ಎಸ್‌ಸಿ/ಎಸ್‌ಟಿ ಸರಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಸಚಿವೆ ಪ್ರಿಯಾಂಕ ಖರ್ಗೆ ವಿರುದ್ಧ ಹರಿಹಾಯ್ದಿದ್ದಾರೆ. ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಲ್ಲುವ ಬದಲು, ಒಕ್ಕಲೆಬ್ಬಿಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಕೋಪಕ್ಕೆ ಕಾರಣವಾಗಿರುವುದು ಸದ್ಯ ವಿದ್ಯಾರ್ಥಿ ನಿಲಯ ಇರುವ ಜಾಗದಲ್ಲಿ ‘ಸ್ಪೂರ್ಥಿ ಸೌಧ’ ಎಂಬ ನಾಲ್ಕು ಅಂತಸ್ತಿನ ಕಟ್ಟಡ ಕಟ್ಟಿಸುವ ತೀರ್ಮಾನ. ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ಕಾರ್ಯಾಲಯಗಳನ್ನು ಒಂದು ಕಡೆಗೆ ಸ್ಥಳಾಂತರಿಸಲು ಹೊರಟಿದೆ ಸರಕಾರ. ಅದಕ್ಕಾಗಿ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳ ಹಾಸ್ಟೆಲ್ ಜಾಗವನ್ನು ಗುರುತು ಮಾಡಿದೆ.

ಕರ್ನಾಟಕದಲ್ಲಿ ನಿರ್ಮಾಣಗೊಂಡ ಎಸ್‌ಸಿ/ಎಸ್‌ಟಿ ಸರಕಾರಿ ವಿದ್ಯಾರ್ಥಿ ನಿಲಯಗಳ ಸಾಲಿನಲ್ಲಿ 2ನೇ ಹಳೆಯ ಕಟ್ಟಡವಿದು. ಎಂಜಿ ರಸ್ತೆಯ ಸರಕಾರಿ ವಿಜ್ಞಾನ ಕಾಲೇಜಿನ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ದಶಕಗಳ ಇತಿಹಾಸವಿದೆ. ದೇವರಾಜ್‌ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಿರ್ಮಾಣಗೊಂಡ ಈ ವಿದ್ಯಾರ್ಥಿ ನಿಲಯದಲ್ಲಿ ನೆಲೆ ಪಡೆದು ವಿದ್ಯಾಭ್ಯಾಸ ನಡೆಸಿದ ವಿದ್ಯಾರ್ಥಿಗಳು ಇವತ್ತು ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

“ಈಗ ಈ ವಿದ್ಯಾರ್ಥಿ ನಿಲಯದಲ್ಲಿ 10ರಿಂದ 15 ಕಾಲೇಜುಗಳಲ್ಲಿ ಓದುತ್ತಿರುವ ಬಿಎ, ಬಿಕಾಂ, ಬಿಎಸ್‌ಸಿ, ಎಂಎಸ್‌ಸಿ, ಎಂಜಿನಿಯರಿಂಗ್‌, ಎಂಬಿಬಿಎಸ್‌ ಸೇರಿದಂತೆ ಎಲ್ಲಾ ಪದವಿಗಳ ಸುಮಾರು 200 ವಿದ್ಯಾರ್ಥಿಗಳು ನೆಲೆ ಪಡೆದಿದ್ದಾರೆ. ಇಷ್ಟು ವಿದ್ಯಾರ್ಥಿಗಳಿಗೆ ನೆಲೆ ಒದಗಿಸಿರುವ ಈ ವಿದ್ಯಾರ್ಥಿ ನಿಲಯವನ್ನು ಧ್ವಂಸ ಮಾಡಿ, ‘ಸ್ಪೂರ್ತಿ ಸೌಧ’ ಹೆಸರಿನ ಸರಕಾರಿ ಕಟ್ಟಡ ಕಟ್ಟಲು ಸರಕಾರ ಮುಂದಾಗಿದೆ. ಇದೆಷ್ಟು ಸರಿ?” ಎಂದು ಪ್ರಶ್ನಿಸುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಯೊಬ್ಬರು.

“ಪ್ರತಿಯೊಂದು ಸರಕಾರ ಅಸ್ತಿತ್ವಕ್ಕೆ ಬಂದಾಗಲೂ ಕೂಡ ವಿದ್ಯಾರ್ಥಿ ನಿಲಯಗಳ ಸಂಖ್ಯೆಯನ್ನು ಹೆಚ್ಚಿಸಿ ಎಂದು ಒತ್ತಾಯಿಸುಲೇ ಬಂದಿದ್ದೇವೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ಇತರೆ ಹಿಂದುಳಿದ ವಿದ್ಯಾರ್ಥಿಗಳಿಗೂ ಕೂಡ ಹಾಸ್ಟೆಲ್‌ಗಳನ್ನು ಕಟ್ಟಿಸಿ ಎಂಬ ಬೇಡಿಕೆ ಇಡುತ್ತಿದ್ದೇವೆ. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರಕಾರ ಈಗ ಇರುವ ವಿದ್ಯಾರ್ಥಿ ನಿಲಯವನ್ನೂ ಕೂಡ ಕೆಡವಲು ಹೊರಟಿದೆ,” ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

“ಈಗಿರುವ ವಿದ್ಯಾರ್ಥಿ ನಿಲಯ ನಗರದ ಮಧ್ಯಭಾಗದಲ್ಲಿದ್ದು, ಎಲ್ಲಾ ಸೌಕರ್ಯಗಳನ್ನು ಒಳಗೊಂಡಿದೆ. ಕಾಲೇಜುಗಳಿಗೂ ಹತ್ತಿರವಿದೆ. ಮೆಟ್ರೋ, ಬಸ್‌ ಸೌಲಭ್ಯವೂ ಉತ್ತಮವಾಗಿದೆ. ಈಗ ಈ ಹಾಸ್ಟೆಲ್‌ನಲ್ಲಿನ ವಿದ್ಯಾರ್ಥಿಗಳನ್ನು ಪ್ರೈಮ್‌ ರೋಸ್‌ ರಸ್ತೆಯ ಸರಕಾರಿ ಕಾಲಾ ಕಾಲೇಜು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿ ನಿಲಯಕ್ಕೆ ವರ್ಗಯಿಸುವ ಯೋಚನೆಯಿದೆ ಎನ್ನಲಾಗುತ್ತದೆ. ಹೀಗೇನಾದರೂ ಆದರೆ ನಮ್ಮ ವಿದ್ಯಾಭ್ಯಾಸಕ್ಕೆ ಅಡ್ಡಿಯುಂಟಾಗುತ್ತದೆ,” ಎನ್ನುತ್ತಾರೆ ವಿದ್ಯಾರ್ಥಿಯೊಬ್ಬರು.

ಹಾಸ್ಟೆಲ್‌ನ ಆವರಣದಲ್ಲಿ ಸಾಕಷ್ಟು ಜಾಗ ಖಾಲಿಯಿದೆ. ವಿದ್ಯಾರ್ಥಿಗಳಿಗೆ ಗ್ರಂಥಾಲಯದ ವ್ಯವಸ್ಥೆಯಿಲ್ಲ. ಖಾಲಿ ಜಾಗದಲ್ಲಿ ಗ್ರಂಥಾಲಯ ನಿರ್ಮಿಸುವುದನ್ನು ಬಿಟ್ಟು ಇರುವ ಜಾಗವನ್ನೇ ಕಿತ್ತುಕೊಳ್ಳಲು ಸರಕಾರ ಮುಂದಾಗಿದೆ. ಇಲ್ಲಿ ನೆಲೆ ಪಡೆದಿರುವುದು ಶ್ರೀಮಂತ ವರ್ಗದವರಲ್ಲ. ಎಲ್ಲರೂ ಕೂಡ ಹಳ್ಳಿಗಳಿಂದ ಬಂದು ಕಷ್ಟ ಪಟ್ಟು ಓದುತ್ತಿರುವ ಬಡ ವರ್ಗದ ವಿದ್ಯಾರ್ಥಿಗಳು. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟುಮಾಡುವ ಕಾರ್ಯಕ್ಕೆ ಸರಕಾರ ಮುಂದಾಗಿದೆ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ.

ಶಿಕ್ಷಣ ವ್ಯವಸ್ಥೆ ಹೇಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ಶಿಕ್ಷಣ ಪಡೆದ ಎಷ್ಟೋ ವಿದ್ಯಾರ್ಥಿಗಳು ಉದ್ಯೋಗ ದೊರೆಯದೇ ನಿರುದ್ಯೋಗಿಗಳಾಗಿ ಪರಿತಪಿಸುತ್ತಿರುವುದು ಕಣ್ಣ ಮುಂದಿನ ಸತ್ಯ. ಇಂತಹ ಸಂದರ್ಭದಲ್ಲಿ ಸರಕಾರ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿ, ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಲ್ಲಬೇಕಿದೆ. ಅದನ್ನು ಬಿಟ್ಟು ಇರುವ ಸೌಲಭ್ಯಗಳನ್ನೇ ಕಿತ್ತುಕೊಳ್ಳುವುದಲ್ಲ. ಸರಕಾರ ಮುಂದುವರಿದು ವಿದ್ಯಾರ್ಥಿಗಳನ್ನು ಒಕ್ಕಲೆಬ್ಬಿಸಲು ಮುಂದಾದರೆ ಸಂಘಟನೆಗಳ ನೇತೃತ್ವದಲ್ಲಿ ಬೀದಿ ಹೋರಾಟವನ್ನು ಆರಂಭಿಸುತ್ತೇವೆ ಎಂಬ ಎಚ್ಚರಿಕೆಯನ್ನು ವಿದ್ಯಾರ್ಥಿಗಳು ನೀಡಿದ್ದಾರೆ.

ಈ ಹಿಂದೆಯೇ 2007ರ ಅವಧಿಯಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಮೆಟ್ರೋ ನಿರ್ಮಾಣಕ್ಕಾಗಿ ಇದೇ ವಿದ್ಯಾರ್ಥಿ ನಿಲಯದ ಜಾಗವನ್ನು ವಶಪಡಿಸಿಕೊಳ್ಳಲು ಮುಂದಾಗಿತ್ತು. ವಿದ್ಯಾರ್ಥಿಗಳು ಸರಕಾರದ ಈ ಕ್ರಮಕ್ಕೆ ಪ್ರತಿರೋಧ ವ್ಯಕ್ತ ಪಡಿಸಿದ್ದರು. ಈ ಸಂಬಂಧ 10 ಜನರ ಮೇಲೆ ಮೊಕದ್ದಮೆ ಕೂಡ ದಾಖಲಾಗಿತ್ತು. ಸತತ 9 ವರ್ಷಗಳ ಕಾಲ ಕೋರ್ಟು ಕಚೇರಿ ಎಂದು ವಿದ್ಯಾರ್ಥಿಗಳು ಅಲೆದಾಡಿ ಹಾಸ್ಟೆಲ್‌ ಜಾಗವನ್ನು ಉಳಿಸಿಕೊಂಡಿದ್ದಾರೆ. ಒಂದು ಸಮಸ್ಯೆ ಕಳೆಯಿತು ಎನ್ನುವ ವೇಳೆಗೆ ಮತ್ತೊಂದು ಸಮಸ್ಯೆ ವಿದ್ಯಾರ್ಥಿಗಳಿಗೆ ಎದುರಾಗಿದೆ.

ನಮಗೆ ಬೇಕಿರುವುದು ವಿದ್ಯಾರ್ಥಿ ನಿಲಯವೇ ಹೊರತು ‘ಸ್ಪೂರ್ಥಿ ಸೌಧ’ವಲ್ಲ ಎಂದು ಒಕ್ಕೊರಲಿನಿಂದ ಕೂಗುತ್ತಿರುವ ವಿದ್ಯಾರ್ಥಿಗಳು, ಈ ಸಂಬಂಧ ಸರಕಾರ ಪತ್ರವನ್ನು ತಲುಪಿಸುವ ಕೆಲಸಕ್ಕೂ ಮುಂದಾಗಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆಗೆ ಸರಕಾರದ ಪ್ರತಿಸ್ಪಂದನೆ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.