ಚಿತ್ರ ಕೃಪೆ: ಟಿವಿ5/ಸ್ಕ್ರೀನ್ ಗ್ರಾಬ್
ರಾಜ್ಯ

ಕೋಲಾರದ ಲಕ್ಷ್ಮೀಸಾಗರ ಕೆರೆಯಲ್ಲಿ ಬಿಳಿನೊರೆ: ರಮೇಶ್ ಕುಮಾರ್ ಏನಂತಾರೆ? 

ಕೆಸಿ ವ್ಯಾಲಿಯಲ್ಲಿ ಹರಿದಿದ್ದ ‘ಸೋಕಾಲ್ಡ್ ಶುದ್ಧೀಕರಿಸಿದ’ ನೀರಿನ ಬಗ್ಗೆ ಈ ಹಿಂದೆಯೇ ಪ್ರಶ್ನೆಗಳು ಎದ್ದಿದ್ದವು. ಅವುಗಳಿಗೆ ಉತ್ತರ ಎಂಬಂತೆ ಕಾಲುವೆಯಲ್ಲೀಗ ಬಿಳಿ ನೊರೆ ಹಾರಲಾರಂಭಿಸಿದೆ. 

ಅದು ಜೂನ್ 2ನೇ ತಾರೀಕು. ಕೆ.ಸಿ. ವ್ಯಾಲಿ (ಕೋರಮಂಗಲ- ಚಲ್ಲಘಟ್ಟ) ಮೂಲಕ ಶುದ್ಧೀಕರಿಸಿದ ಬೆಂಗಳೂರು ನಗರದ ಕೊಳಚೆ ನೀರು ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿದಿತ್ತು. ಒಣಗಿದ ಭೂಮಿಗೆ ಜಲ ಹರಿದಿದ್ದನ್ನು ಕಂಡು ಅಂದು ಕಣ್ಣೀರು ಹಾಕಿದ್ದರು ಹಾಲಿ ಸ್ಪೀಕರ್ ಕೆ. ರಮೇಶ್ ಕುಮಾರ್.

ಇದಾಗಿ ಸುಮಾರು ಒಂದೂವರೆ ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಕಣಿವೆಯಲ್ಲಿ ಸಾಕಷ್ಟು ‘ಸೋಕಾಲ್ಡ್ ಶುದ್ಧೀಕರಿಸಿದ’ ನೀರು ಹರಿದು ಹೋಗಿದೆ. ಈ ಅವಧಿಯಲ್ಲಿ ಈ ನೀರಿನ ಶುದ್ಧತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದವು. ಆ ಪ್ರಶ್ನೆಗಳಿಗೆ ಉತ್ತರವೋ ಎಂಬಂತೆ ಕಾಲುವೆಯಲ್ಲೀಗ ನೊರೆಗಳು ಹಾರಲಾರಂಭಿಸಿವೆ. ಇವು ಬೆಂಗಳೂರಿನ ವರ್ತೂರು, ಬೆಳ್ಳಂದೂರು ಕೆರೆಗಳ ನೊರೆಗಳನ್ನು ನೆನಪಿಸುತ್ತಿವೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ಸಂದರ್ಭ ‘ಸಮಾಚಾರ’ಕ್ಕೆ ಪ್ರತಿಕ್ರಿಯೆ ನೀಡಿರುವ ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ, “ಮುಂದಿನ 6 ತಿಂಗಳಿನಲ್ಲಿ ಇಂಥಹ ದುಸ್ಥಿತಿ ಬರುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ಈ ಕ್ಷೇತ್ರದಲ್ಲಿ ಅನುಭವ ಇರುವ ವಿಜ್ಞಾನಿಗಳು ಈ ಹಿಂದೆಯೇ ಹೇಳಿದ್ದರು. ನಾವು ಇದನ್ನು ಸರಕಾರ, ಇಲಾಖೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೆವು. ಆದರೆ ಇದರ ಬಗ್ಗೆ ನಿರ್ಲಕ್ಷ್ಯವಹಿಸಿ ‘ನೀರು ಕೊಡುತ್ತೇವೆ, ಪೈಪ್ ಹಾಕುತ್ತೇವೆ’ ಎಂದು ಜನರಿಗೆ ಮರಳು ಮಾಡಿದ ಪರಿಣಾಮ ಇವತ್ತು ಕಣ್ಣಿಗೆ ರಾಚುತ್ತಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ನಾವು ಉಚ್ಛ ನ್ಯಾಯಾಲಯದಲ್ಲಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದೇವೆ ಎಂಬುದನ್ನು ಅವರು ಇದೇ ಸಂದರ್ಭದಲ್ಲಿ ಗಮನಕ್ಕೆ ತಂದರು. ಈ ಅರ್ಜಿ ಸಂಬಂಧ ತುರ್ತಾಗಿ ವಿಚಾರಣೆ ನಡೆಸಲು ಹೈಕೋರ್ಟ್‌ ಪ್ರತ್ಯೇಕ ನ್ಯಾಯಪೀಠವನ್ನೂ ರಚಿಸಿದೆ.

“ರಾಸಾಯನಿಕ ಬೆರೆತ ನೀರನ್ನು ಈ ರೀತಿ ಅರೆ ಶುದ್ಧೀಕರಿಸಿ ಹರಿಸಿದಲ್ಲಿ ನಮ್ಮ ಅಂತರ್ಜಲ ಹಾಳಾಗಲಿದೆ. ಇದನ್ನು ನಂಬಿಕೊಂಡಿರುವ ನಮ್ಮ ಜನರು, ಜಾನುವಾರುಗಳ ಸಾಯಲಿವೆ. ಜತೆಗೆ ಕೃಷಿ ಹಾಳಾಗಲಿದೆ. ಇದೇ ನೀರಲ್ಲಿ ಬೆಳೆದಿರುವ ತರಕಾರಿ, ಸೊಪ್ಪುಗಳು. ಹಾಲಿನಲ್ಲಿ ವಿಷ ಪದಾರ್ಥಗಳು ಉಳಿದುಕೊಳ್ಳಲಿವೆ. ಇದನ್ನೇ ನಾವು ಬೆಂಗಳೂರಿಗೆ ಪೂರೈಸಬೇಕಾಗುತ್ತದೆ,” ಎಂದು ಎಚ್ಚರಿಸುವ ಅವರು ಮುಂಬರಲಿರುವ ಅಪಾಯದ ಬಗ್ಗೆ ಗಮನ ಸೆಳೆಯುತ್ತಾರೆ.

“ಪೈಪ್‌ಲೈನ್ ಲಾಬಿಗೆ ಬಿದ್ದು ನೀರು ಕೊಡುತ್ತೇವೆ ಎಂದರೇ ಹೊರತು. ಅದರ ಸುರಕ್ಷತೆ ಬಗ್ಗೆ ಗಮನ ಹರಿಸಲಿಲ್ಲ,” ಎಂದು ದೂರುವ ಅವರು, ಹೀಗಾಗಿಯೆ ನಾವು ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಅಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ಇವತ್ತು ಲಕ್ಷ್ಮೀ ಸಾಗರಕ್ಕೆ ಹರಿಯುವ ನೀರಿನಲ್ಲಿ ನೊರೆ ಹಾರುತ್ತಿರುವ ದೃಶ್ಯಗಳು ಗಂಭೀರತೆಗೆ ಸಾಕ್ಷಿಯಾಗಿವೆ. ಮತ್ತು ಇದಕ್ಕೂ ಮೊದಲೇ ಈ ನೀರು ಕುಡಿಯಲು ಯೋಗ್ಯವೇ ಎಂಬ ಪ್ರಶ್ನೆ ಎದ್ದಿತ್ತು. ಈ ಹಿನ್ನೆಲೆಯಲ್ಲಿ ಇದೇ ಕೆರೆಗೆ ಕಳೆದ ಭಾನುವಾರ ಮತ್ತೊಮ್ಮೆ ಸ್ಪೀಕರ್ ಕೆ. ರಮೇಶ್ ಕುಮಾರ್‌ ಭೇಟಿ ನೀಡಿದ್ದರು. ಅವತ್ತು ಕೂಡ ಅವರು “ಕೆ.ಸಿ. ವ್ಯಾಲಿ ಯೋಜನೆ ನೀರಿನಿಂದ ಯಾವುದೇ ಸಮಸ್ಯೆ ಸಂಭವಿಸುವುದಿಲ್ಲ. ಅಂತರ್ಜಲ ವೃದ್ಧಿಗಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ರೈತರು ಮಧ್ಯವರ್ತಿಗಳ ಮಾತು ಕೇಳುವುದನ್ನು ಬಿಡಬೇಕು,” ಎಂದು ಪುನರುಚ್ಛರಿಸಿದ್ದರು.

ಕೆ.ಸಿ. ವ್ಯಾಲಿಯಲ್ಲಿ ನೀರು ಹರಿಯುತ್ತಿರುವುದನ್ನು ವೀಕ್ಷಿಸುತ್ತಿರುವ ರಮೇಶ್ ಕುಮಾರ್
ಕೆ.ಸಿ. ವ್ಯಾಲಿಯಲ್ಲಿ ನೀರು ಹರಿಯುತ್ತಿರುವುದನ್ನು ವೀಕ್ಷಿಸುತ್ತಿರುವ ರಮೇಶ್ ಕುಮಾರ್
ಚಿತ್ರಕೃಪೆ: ವಿಜಯ ಕರ್ನಾಟಕ

ಈ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ ಆಂಜನೇಯ ರೆಡ್ಡಿ, “ಇವತ್ತು ಅಲ್ಲಿಗೆ ಅವರು ಭೇಟಿ ನೀಡಲಿ. ನೀಡಿ ಲಕ್ಷ್ಮೀ ಸಾಗರದ ಹಳ್ಳಿಯವರನ್ನು, ರೈತರನ್ನು ಮಾತನಾಡಿಸಲಿ. ಮಾತನಾಡಿ ಏನೂ ತೊಂದರೆ ಇಲ್ಲ. ಇದು ಕೆ.ಆರ್.ಎಸ್‌ನಿಂದ ಬಂದ ನೀರು ಎಂದು ಹೇಳಲಿ ನೋಡೋಣ,” ಎಂದು ಸವಾಲು ಹಾಕಿದರು.

ಸವಾಲನ್ನು ಸ್ವೀಕರಿಸುವ, ಜತೆಗೆ ಶುದ್ಧೀಕರಿಸಿದ ನೀರನ್ನು ಕೋಲಾರದ ಬರಡು ನೆಲಕ್ಕೆ ಹರಿಸುವ ಜವಾಬ್ದಾರಿಯುತ ಸ್ಥಾನದಲ್ಲಿ ರಮೇಶ್ ಕುಮಾರ್‌ ಇದ್ದಾರೆ. ಇದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭರವಸೆ ಕೋಲಾರದ ಜನರಿಗೆ ಇದೆ. ಆ ಭರವಸೆಯನ್ನು ರಮೇಶ್ ಕುಮಾರ್ ಉಳಿಸಿಕೊಳ್ಳಬೇಕಿದೆ.