samachara
www.samachara.com
‘ನಾನು ಸಾಂಧರ್ಭಿಕ ಶಿಶು, ಜೆಡಿಎಸ್‌ ಕಾಂಗ್ರೆಸ್‌ ಶಾಸಕರೇ ನನ್ನ ಅಪ್ಪ-ಅಮ್ಮ’: ಸಿಎಂ ಕುಮಾರಸ್ವಾಮಿ 
ರಾಜ್ಯ

‘ನಾನು ಸಾಂಧರ್ಭಿಕ ಶಿಶು, ಜೆಡಿಎಸ್‌ ಕಾಂಗ್ರೆಸ್‌ ಶಾಸಕರೇ ನನ್ನ ಅಪ್ಪ-ಅಮ್ಮ’: ಸಿಎಂ ಕುಮಾರಸ್ವಾಮಿ 

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಗೆ ಅಪಾರ ವಿರೋಧ ವ್ಯಕ್ತವಾಗಿತ್ತು. ಇದು ‘ಅಪವಿತ್ರ ಮೈತ್ರಿ’ ಎಂದು ಬಿಎಸ್‌ವೈ ಕರೆದಿದ್ದರು. ಅದಕ್ಕೆ ಉತ್ತರ ನೀಡಿರುವ ಸಿಎಂ ಕುಮಾರಸ್ವಾಮಿ ತಮ್ಮನ್ನು ತಾವು ‘ಸಾಂದರ್ಭಿಕ ಶಿಶು’ ಎಂದು ಮತ್ತೆ ಕರೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ವಾರ್ಷಿಕ ಬಜೆಟ್‌ ಮಂಡನೆ ಮಾಡಿದ ನಂತರದಲ್ಲೇ ಹಲವಾರು ವಿರೋಧಗಳನ್ನು ಎದುರಿಸಬೇಕಾಯಿತು. ಕುಮಾರಸ್ವಾಮಿ ಮಂಡಿಸಿದ ಅಯವ್ಯಯಕ್ಕೆ ಅಪ್ಪ ಮಕ್ಕಳ ಬಜೆಟ್‌, ಅಣ್ಣ- ತಮ್ಮಂದಿರ ಬಜೆಟ್‌ ಎಂದೆಲ್ಲಾ ಹೆಸರು ನೀಡಲಾಗಿತ್ತು. ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರ ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ತಾನು ಯಾವುದೇ ಜಾತಿಗೆ ಸೀಮಿತವಾದ ಮುಖ್ಯಮಂತ್ರಿಯಲ್ಲ ಎಂದು ಹೇಳಿದ್ದಾರೆ.

ಸೋಮವಾರ ಬೆಳಗ್ಗೆ ವಿಧಾನಸಭೆಯಲ್ಲಿ ತಿಳಿಹಾಸ್ಯ ಬೆರೆಸಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಧಾನಸಭೆಯ ಸದಸ್ಯರೆಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ಅಷ್ಟೇ ಅಲ್ಲದೇ ಬಜೆಟ್‌ ಕುರಿತು ನಡೆದ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು. ಸರಕಾರ ರಚನೆಗೆ ಮುಂದಾದ ಸಮಯದಿಂದಲೂ ಕೂಡ ‘ಅಪವಿತ್ರ ಮೈತ್ರಿ’ ಎಂದು ಗೇಲಿ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಚಾಟಿ ಬೀಸಿದರು.

ಬೆಳಗ್ಗೆ ಆರಂಭವಾದ ಕಲಾಪದಲ್ಲಿ ಕುಮಾರಸ್ವಾಮಿ ಬಜೆಟ್‌ನಲ್ಲಿ ನೀಡಲು ನಿರ್ಧರಿಸಿರುವ ಅನುದಾನಗಳ ಬಗ್ಗೆ ಪ್ರಶ್ನೆ ಎದ್ದಿತ್ತು. ಹಾಸನ ಜಿಲ್ಲೆಗೆ ಹೆಚ್ಚಿನ ಅನುದಾನ, ರೈತರ ಸಾಲಮನ್ನಾ, ವಿದ್ಯುತ್‌ ಬೆಲೆ ಏರಿಕೆ, ಒಕ್ಕಲಿಗರಿಗೆ ಹೆಚ್ಚಿನ ಮಾನ್ಯತೆ ಇತ್ಯಾದಿಗಳು ಚರ್ಚೆಯ ಮುನ್ನೆಗೆ ಬಂದಿದ್ದವು.

ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನಾನು ಮೊದಲನೇ ಹಂತದಲ್ಲಿ ರೈತರ 34,000 ಕೋಟಿ ಸಾಲವನ್ನು ಮನ್ನಾ ಮಾಡುವುದಾಗಿ ತಿಳಿಸಿದ್ದೇನೆ, ಸಾಲಮನ್ನಾದ ಬಗ್ಗೆ ಜನರಲ್ಲಿ ಅಪಾರ್ಥಗಳನ್ನು ಬಿತ್ತಬೇಡಿ ಎಂದರು. ವಿದ್ಯುತ್‌ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವ ಸರಕಾರದ ಕೈಯಲ್ಲೂ ಕೂಡ ಉಚಿತ ವಿದ್ಯುತ್‌ ನಿಡಲು ಸಾಧ್ಯವಿಲ್ಲ ಎಂದರು. ನಮ್ಮ ಬಜೆಟ್‌ಅನ್ನು ಅಪ್ಪ ಮಕ್ಕಳ ಬಜೆಟ್‌, ಅಣ್ಣ ತಮ್ಮಂದಿರ ಬಜೆಟ್‌ ಎಂದು ಗೇಲಿ ಮಾಡುವುದು, ಸುಮ್ಮನೆ ಆರೋಪಗಳನ್ನು ನಡೆಸುವುದು ತರವಲ್ಲ ಎಂದು ಕುಮಾರಸ್ವಾಮಿ ವಿಪಕ್ಷ ನಾಯಕರಿಗೆ ತಿಳಿಸಿದರು.

ದಗಲ್ಬಾಜಿ ಅಪ್ಪ ಮಕ್ಕಳು ಎಂಬ ಆರೋಪದ ಕುರಿತು, ಯಾರಿಗೂ ಕೂಡ ಅಧಿಕಾರ ಶಾಶ್ವತವಲ್ಲ ಎಂದು ಮಾರ್ಮಿಕ ಮಾತುಗಳನ್ನಾಡಿದರು. ನಾನು ಭಯಗ್ರಸ್ತ ಮುಖ್ಯಮಂತ್ರಿಯಲ್ಲ ಎಂದ ಕುಮಾರಸ್ವಾಮಿ, 104 ಶಾಸಕರ ಬಲವಿದ್ದ ನಿಮಗೆ 113ಕ್ಕೇ ಏರಲು ಬಲವೆಲ್ಲಿತ್ತು ಎಂದು ಬಿಜೆಪಿ ಪಾಳಯವನ್ನು ಕುಟುಕಿದರು.

ಜಾತಿ ರಾಜಕಾರಣ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಮುಖ್ಯಮಂತ್ರಿಗಳು, ಒಕ್ಕಲಿಗರಿಗೆ ಶೇ.34ರಷ್ಟು ಅನುದಾನ ನೀಡಲಾಗುತ್ತಿದೆ ಎಂಬ ಆರೋಪವನ್ನು ತಿರಸ್ಕರಿಸಿದರು. ನಾನು ಯಾವುದೇ ಜಾತಿಯೊಂದರ ಮುಖ್ಯಮಂತ್ರಿಯಲ್ಲ. ವೀಭೂತಿ ಬಳಿದುಕೊಂಡು ಬಂದವರನ್ನು ದೂರ ತಳ್ಳಿಲ್ಲ ಎಂದರು.

ಸರಕಾರ ರಚನೆಯ ಪ್ರಾರಂಭದಿಂದಲೂ ಕೂಡ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರವನ್ನು ‘ಅಪವಿತ್ರ ಮೈತ್ರಿ’ ಎಂದೇ ಕರೆದುಕೊಂಡು ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರನ್ನು ಪ್ರಶ್ನಿಸಿದ ಕುಮಾರಸ್ವಾಮಿ, ಅಂದು ಬಿಜೆಪಿ-ಜೆಡಿಎಸ್‌ ಮೈತ್ರಿಯಾದಾಗ ಅಪವಿತ್ರ ಎನಿಸಲಿಲ್ಲವೇ ಎಂದು ಕುಟುಕಿದರು.

ಅಂದೂ ಕೂಡ ಅಧಿಕಾರ ಸ್ಥಾಪಿಸಿ 2 ತಿಂಗಳ ಕಳೆಯುವ ಮೊದಲೇ 150 ಕೋಟಿ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದರು. ನನ್ನ ಸ್ನೇಹಿತರ, ಪಕ್ಷದ ಶಾಸಕರ, ಯಾರ ಬೆಂಬಲವನ್ನೂ ಕೂಡ ಪಡೆಯದೇ ಒಬ್ಬನೇ ಆ ಸಂಧರ್ಭವನ್ನು ಎದುರಿಸಿದೆ. ನಾನು ಭ್ರಷ್ಟಾಚಾರ ಮಾಡಿದ್ದೇ ಅಗಿದ್ದಿದ್ದರೆ ಅಂದೇ ಸರಕಾರದಿಂದ ಇಳಿಸುವ ಬದಲು ಇನ್ನೂ 18 ತಿಂಗಳು ಮುಖ್ಯಮಂತ್ರಿಯಾಗಿ ಮುಂದುವರೆಯಲು ಏಕೆ ಅವಕಾಶ ಕೊಟ್ಟರು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಅಂದಿನ ದಿನಗಳನ್ನು ನೆನಪಿಸಿಕೊಂಡರು.

ಅಂದು ಅಧಿಕಾರ ಸ್ಥಾಪಿಸುವಾಗ ರಾಜ್ಯದಲ್ಲಿನ ಬಿಜೆಪಿ-ಜೆಡಿಎಸ್‌ ಶಾಸಕರಷ್ಟೇ ಇದ್ದೆವು. ದೆಹಲಿಯಿಂದ ಯಾರೂ ಕೂಡ ಬಂದಿರಲಿಲ್ಲ. ಆದರೆ ನನ್ನ 20 ತಿಂಗಳ ಅವಧಿ ಮುಗಿದ ಕೂಡಲೇ ಅಧಿಕಾರದಿಂದ ಕೆಳಗಿಳಿಸಲು ದೆಹಲಿಯಿಂದ ಎಲ್ಲರೂ ಬಂದರು ಎಂಬ ಮಾತಿನಿಂದಾಗಿ ಇಡೀ ಸದನ ಹಾಸ್ಯದಲ್ಲಿ ಮುಳುಗಿತು. ವಿಧಾನ ಸಭೆಯ ಸ್ಪೀಕರ್‌ ರಮೇಶ್ ಕುಮಾರ್‌ ಕೂಡ ನಕ್ಕಾಗ ‘ನಿಮಗೆ ತಮಾಶೆ ಎನಿಸುತ್ತದೆ, ನನಗೆ ಪ್ರಾಣ ಸಂಕಟವಾಗಿತ್ತು,’ ಎಂಬ ಪ್ರತಿಕ್ರಿಯೆ ನೀಡಿ ಮತ್ತಷ್ಟು ಹಾಸ್ಯ ಮಾಡಿದರು.

ಚುನಾವಣೆಗೂ ಮುಂಚೆ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದ ಸಿದ್ಧರಾಮಯ್ಯ – ಕುಮಾರಸ್ವಾಮಿ ಈಗ ದೋಸ್ತಿ ಸರಕಾರ ರಚಿಸಿದ್ದಾರೆ ಎಂಬ ಆರೋಪಕ್ಕೆ ಉತ್ತರವಾಗಿ ಕುಮಾರಸ್ವಾಮಿ ಹಲವಾರು ಘಟನೆಗಳನ್ನು ನೆನಪಿಸಿದರು. ಸದಾನಂದಗೌಡರು ಅಂದು ಬಿಜೆಪಿಯಲ್ಲಿ ಸ್ವಾರ್ಥಿಗಳು ಲೋಟಿಕೋರರಿದ್ದಾರೆ, ಬಿಎಸ್‌ವೈ ಭ್ರಷ್ಟ ರಾಜಕಾರಣಿ ಎಂಬ ಆರೋಪಗಳನ್ನು ಮಾಡಿದ್ದರು. ಬಿ.ಎಸ್‌.ಯಡಿಯೂರಪ್ಪ ಜಗದೀಶ್‌ ಶೆಟ್ಟರ್‌ ಕುರಿತು ಮಾತನಾಡುವಾಗ ಅವರ ಕುಟುಂಬ ಹಗಲು ಧರೋಡೆ ಮಾಡುತ್ತಿದೆ ಎಂದಿದ್ದರು. ಅದರೆ ಇವರೆಲ್ಲಾ ಒಂದೇ ಪಕ್ಷದವರು. ಅಂದಿನ ಮಾತುಕತೆಗಳನ್ನೆಲ್ಲಾ ಮರೆತು ಇಂದು ಜತೆಯಾಗಿಲ್ಲವೇ? ಸಿದ್ಧರಾಮಯ್ಯ-ಕುಮಾರಸ್ವಾಮಿ ದೋಸ್ತಿ ಕೂಡ ಅದೇ ತೆರನಾದದ್ದೇ ಎಂದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮನ್ನು ತಾವು ಮತ್ತೊಮ್ಮೆ ‘ಸಾಂಧರ್ಭಿಕ ಶಿಶು’ ಎಂದು ಕರೆದುಕೊಂಡರು. ‘ನಾನೊಬ್ಬ ಸಾಂಧರ್ಭಿಕ ಶಿಶುವಾಗಿದ್ದು, ಕಾಂಗ್ರೆಸ್‌ ಜಿಡಿಎಸ್‌ ಶಾಸಕರೇ ನನ್ನ ಅಪ್ಪ ಅಮ್ಮ’ ಎಂದು ಕುಮಾರಸ್ವಾಮಿ ಹೇಳಿದರು.

ರಾಜಕಾರಣದಲ್ಲಿ ಪರಸ್ಪರ ಟೀಕೆಗಳು, ಕಿತ್ತಾಟಗಳು ನಡೆದೇ ನಡೆಯುತ್ತವೆ. ಅವೆಲ್ಲಾ ಸಾಮಾನ್ಯ. ಹಿಂದೊಮ್ಮೆ ಯಡಿಯೂರಪ್ಪನವರ ಜತೆಗೂ ಕೂಡ ಜಗಳವಾಗಿತ್ತು. ಆದರೂ ಕೂಡ ಸಮ್ಮಿಶ್ರ ಸರಕಾರ ರಚಿಸಿದ್ದೆವು. ಸರಕಾರ ಬೀಳುವಾಗಲೂ ಕೂಡ ಜಗಳ ನಡೆದಿತ್ತು. ಆದರೆ ಅಂದು ನಡೆದದ್ದೆಲ್ಲಾ ಯಡಿಯೂರಪ್ಪನವರಿಗೆ ಅಪವಿತ್ರವಾಗಿ ಕಾಣಿಸಲಿಲ್ಲ. ಚುನಾವಣೆಗೂ ಮುಂಚೆ ಸಿದ್ಧರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಅಬ್ಬರಿಸುತ್ತಿದ್ದ ಯಡಿಯೂರಪ್ಪ, ಇಂದು ಸಿದ್ಧರಾಮಯ್ಯ ಮೂಲೆಗುಂಪಾಗಿದ್ದಾರೆ ಎಂದು ಅನುಕಂಪ ತೋರಿಸುತ್ತಿದ್ದಾರೆ ಎಂದು ಕುಹಕವಾಡಿದರು.

ಹಾಸನ ಜಿಲ್ಲೆಗೆ ನೀಡಿರುವ ಹೆಚ್ಚಿನ ಅನುದಾನದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಹಾಸನದ ಬಿಜೆಪಿ ಶಾಸಕರು ಒಪ್ಪದಿದ್ದರೆ ಆ ಅನುದಾನವನ್ನು ಉತ್ತರ ಕರ್ನಾಟಕಕ್ಕೆ ನೀಡಲೂ ಕೂಡ ಸಿದ್ಧ ಎಂದರು. ಹಲವಾರು ಸದಸ್ಯರು ಹಲವಾರು ವಿಚಾರಗಳನ್ನು ಮಂಡಿಸಿದ್ದಾರೆ. ನಾವು ಕೂಡ ಹಲವಾರು ಭರವಸೆಗಳನ್ನು ನೀಡಿದ್ದೇವೆ. ಅವೆಲ್ಲವನ್ನೂ ಕೂಡ ಚರ್ಚಿಸಿ ಅನುಷ್ಠಾನಕ್ಕೆ ತರಬೇಕಿದೆ. ಆದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕು. ಒಂದೇ ತಿಂಗಳಿನಲ್ಲಿ ಎಲ್ಲವನ್ನೂ ಕೂಡ ಮಾಡಲು ಸಾಧ್ಯವಿಲ್ಲ. ರಾಜ್ಯಕ್ಕೆ ಉತ್ತಮವಾದ ಆಡಳಿತ ನೀಡಬೇಕೆಂಬ ಉದ್ದೇಶ ನಮ್ಮ ಸಮ್ಮಿಶ್ರ ಸರಕಾರಕ್ಕಿದೆ. ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದ ಕುಮಾರಸ್ವಾಮಿ, ಸದನದಲ್ಲಿ ತಮ್ಮ ಮಾತುಗಳನ್ನು ಮುಗಿಸಿದರು.