samachara
www.samachara.com
ರೈತರ ಸಾಲ ಮನ್ನಾ, ನೀರಾವರಿಗೆ 1.25 ಲಕ್ಷ ಕೋಟಿ ರೂಪಾಯಿ;  ಸಮನ್ವಯ ಸಮಿತಿ ಸಭೆಯಲ್ಲಿ ಸಮ್ಮತಿ
ರಾಜ್ಯ

ರೈತರ ಸಾಲ ಮನ್ನಾ, ನೀರಾವರಿಗೆ 1.25 ಲಕ್ಷ ಕೋಟಿ ರೂಪಾಯಿ; ಸಮನ್ವಯ ಸಮಿತಿ ಸಭೆಯಲ್ಲಿ ಸಮ್ಮತಿ

ಸಮ್ಮಿಶ್ರ ಸರಕಾರದಲ್ಲಿ ಬಿಕ್ಕಟ್ಟಿಗೆ ಕಾರಣವಾಗಬಹುದು ಎನ್ನಲಾಗಿದ್ದ ರೈತರ ಸಾಲ ಮನ್ನಾ ವಿಚಾರಕ್ಕೆ ಸಮನ್ವಯ ಸಮಿತಿ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.

Team Samachara

ರೈತರ ಸಾಲ ಮನ್ನಾ ಮಾಡಲು ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯ ಸಮ್ಮತಿ ಸಿಕ್ಕಿದೆ. ಭಾನುವಾರ ನಡೆದ ಸಭೆಯಲ್ಲಿ ಎರಡೂ ಪಕ್ಷಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಅಂತಿಮ ಒಪ್ಪಿಗೆ ನೀಡಲಾಗಿದೆ.

ರೈತರ ಕೃಷಿ ಸಾಲ ಮನ್ನಾ, ನೀರಾವರಿ ಯೋಜನೆಗಳಿಗೆ 1.25 ಲಕ್ಷ ಕೋಟಿ ರೂಪಾಯಿ ಮೀಸಲಿಡಲು ಸಮನ್ವಯ ಸಮಿತಿಯ ಒಪ್ಪಿಗೆ ದೊರೆತಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ತಿಳಿಸಿದ್ದಾರೆ.

“ವಸತಿ ರಹಿತರಿಗಾಗಿ ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಮನೆಗಳ ನಿರ್ಮಾಣ, ಕೌಶಲ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧರಿಸಲಾಗಿದೆ. 5 ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ” ಎಂದರು.

“ಆರೋಗ್ಯ ಕರ್ನಾಟಕ ಯೋಜನೆ ಹಾಗೂ ಹೊಸ ಕ್ರೀಡಾ ನೀತಿ ಜಾರಿಗೆ ತರಲಾಗುವುದು. ಈ ಕಾರ್ಯಕ್ರಮಗಳ ಜತೆಗೆ ಈ ಹಿಂದೆ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ಪ್ರಮುಖ ಕಾರ್ಯಕ್ರಮಗಳೂ ಮುಂದುವರಿಯಲಿವೆ. ನಿಗಮ, ಮಂಡಳಿಗಳ ಅಧ್ಯಕ್ಷರ ನೇಮಕಾತಿ ಬಗ್ಗೆ ಶೀಘ್ರವೇ ನಿರ್ಧಾರ ಹೊರ ಬೀಳಲಿದೆ” ಎಂದು ಹೇಳಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.