ಮೈಸೂರಿನ ಮೊದಲ ಭೂ ಹಗರಣ ಬಯಲಿಗೆಳೆದಿದ್ದ ವಿಜಯ್ ಭಾಸ್ಕರ್‌ ನೂತನ ಮುಖ್ಯ ಕಾರ್ಯದರ್ಶಿ
ರಾಜ್ಯ

ಮೈಸೂರಿನ ಮೊದಲ ಭೂ ಹಗರಣ ಬಯಲಿಗೆಳೆದಿದ್ದ ವಿಜಯ್ ಭಾಸ್ಕರ್‌ ನೂತನ ಮುಖ್ಯ ಕಾರ್ಯದರ್ಶಿ

ಮೈಸೂರಿನ ಮೊದಲ ಭೂ ಹಗರಣವನ್ನು ಬಯಲಿಗೆಳೆದಿದ್ದ ಹಿರಿಯ ಐಎಎಸ್‌ ಅಧಿಕಾರಿ ಟಿ.ಎಂ. ವಿಜಯ್‌ ಭಾಸ್ಕರ್‌ ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

1983ನೇ ಬ್ಯಾಚ್‌ನ ಹಿರಿಯ ಐಎಎಸ್‌ ಅಧಿಕಾರಿ ಟಿ.ಎಂ. ವಿಜಯ್‌ ಭಾಸ್ಕರ್‌ ಅವರನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಶನಿವಾರ ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಈವರೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ವಿಜಯ್‌ ಭಾಸ್ಕರ್‌, ಕೆ. ರತ್ನಪ್ರಭಾ ಅವರ ನಿವೃತ್ತಿಯಿಂದ ತೆರವಾಗುವ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಿದ್ದಾರೆ.

1993ರಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವಿಜಯ್‌ ಭಾಸ್ಕರ್‌ ಮೈಸೂರಿನ ಮೊದಲ ಭೂ ಹಗರಣವನ್ನು ಬಯಲಿಗೆಳೆದಿದ್ದರು. ಮೈಸೂರಿನ ಭೂ ಕಬಳಿಕೆಯ ಬಗ್ಗೆ ವಿಜಯ್‌ ಭಾಸ್ಕರ್‌ ವರದಿಯೊಂದನ್ನು ಸರಕಾರಕ್ಕೆ ಸಲ್ಲಿಸಿದ್ದರು.

ಮೈಸೂರಿನ ಭೂ ಹಗರಣದಲ್ಲಿ ಬಿಜೆಪಿಯ ಮಾಜಿ ಶಾಸಕ ರಾಮ್‌ದಾಸ್‌ ನೇರ ಪಾಲುದಾರಿಕೆ ಇದೆ ಎಂದು ವರದಿ ಹೇಳಿತ್ತು. ಇದಲ್ಲದೆ ಎಲ್ಲಾ ಪಕ್ಷಗಳ ಮುಖಂಡರ ಮೇಲೂ ಭೂ ಹಗರಣದ ಆರೋಪ ಕೇಳಿಬಂದಿತ್ತು. ಅದೇ ಒತ್ತಡದಿಂದ ವಿಜಯ್‌ ಭಾಸ್ಕರ್‌ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಲಾಗಿತ್ತು.

Also read: ಮೈಸೂರಿನ ‘ಎಲೆ ತೋಟ’ಗಳ ಸಮಾಧಿ ಮೇಲೆ ಎದ್ದು ನಿಂತ ಜೆಎಸ್ಎಸ್ ಹಾಸ್ಪಿಟಲ್

ವಿಜಯ್‌ ಭಾಸ್ಕರ್ ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿ ಸರಕಾರ ಹೊರಡಿಸಿರುವ ಆದೇಶ
ವಿಜಯ್‌ ಭಾಸ್ಕರ್ ಅವರನ್ನು ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿ ಸರಕಾರ ಹೊರಡಿಸಿರುವ ಆದೇಶ

ಇದಾದ ನಂತರ ಮೈಸೂರಿನ ಭೂಗರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ವರದಿ ಭೂ ಹಗರಣದ ವಿಚಾರದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿತ್ತು. ಆ ನಂತರ ಮೈಸೂರಿನ ಭೂ ಹಗರಣ ಹಿನ್ನೆಲೆಗೆ ಸರಿದಿತ್ತು.

ಇಂತಹ ಸಂದರ್ಭದಲ್ಲಿ ವಿಜಯ್‌ ಭಾಸ್ಕರ್‌ ಸರಕಾರದ ಅಧಿಕಾರಿ ವರ್ಗದ ಅತ್ಯುನ್ನತ ಹುದ್ದೆಗೆ ನೇಮಕವಾಗಿದ್ದಾರೆ. ಮೈಸೂರು ಭಾಗದ ಮೊದಲ ಭೂ ಅಕ್ರಮವನ್ನು ಬಯಲಿಗೆಳೆದಿದ್ದ ಅಧಿಕಾರಿ ಇಂತಹ ದೊಡ್ಡ ಹುದ್ದೆಗೇರಿರುವುದು ಸಹಜವಾಗಿಯೇ ಮೈಸೂರು ಭಾಗದ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

2017ರ ನವೆಂಬರ್‌ 30ರಂದು ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಕೆ.ರತ್ನಪ್ರಭಾ ಅವರ ಸೇವಾವಧಿ 2018ರ ಮಾರ್ಚ್‌ 31ಕ್ಕೆ ಕೊನೆಯಾಗಬೇಕಿತ್ತು. ಈ ಹಿಂದೆ ಇದ್ದ ಸರಕಾರ ಚುನಾವಣೆಯ ಕಾರಣಕ್ಕೆ ರತ್ನಪ್ರಭಾ ಅವರ ಸೇವಾವಧಿಯನ್ನು ಮೂರು ತಿಂಗಳು ವಿಸ್ತರಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.

ರಾಜ್ಯ ಸರಕಾರದ ಮನವಿಯಂತೆ ರತ್ನಪ್ರಭಾ ಸೇವಾವಧಿಯನ್ನು ಕೇಂದ್ರ ಸರಕಾರ ಮೂರು ತಿಂಗಳು ವಿಸ್ತರಿಸಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ರತ್ನಪ್ರಭಾ ಅವರ ಸೇವಾವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸುವಂತೆ ಪ್ರಧಾನಮಂತ್ರಿಯವರಿಗೆ ಪತ್ರ ಬರೆದಿದ್ದರು.

ಆದರೆ, ಈ ಪ್ರಸ್ತಾವಕ್ಕೆ ಪ್ರಧಾನಮಂತ್ರಿ ಕಾರ್ಯಾಲಯ ಒಪ್ಪಿಗೆ ಸೂಚಿಸದ ಕಾರಣ ಸರಕಾರ ವಿಜಯ್‌ ಭಾಸ್ಕರ್‌ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದೆ.

Also read: ಮೈಸೂರಿನ ‘ಎಲೆ ತೋಟ’ಗಳ ಸಮಾಧಿ ಮೇಲೆ ಎದ್ದು ನಿಂತ ಜೆಎಸ್ಎಸ್ ಹಾಸ್ಪಿಟಲ್