samachara
www.samachara.com
ವೈದ್ಯರಿಗೆ ಕಿರುಕುಳ ನೀಡುತ್ತಿದ್ದ ‘ಸ್ವಘೋಷಿತ ಐಜಿಪಿ’ ರಮಾನಂದ ಸಾಗರ್‌ ಬಂಧನ
ರಾಜ್ಯ

ವೈದ್ಯರಿಗೆ ಕಿರುಕುಳ ನೀಡುತ್ತಿದ್ದ ‘ಸ್ವಘೋಷಿತ ಐಜಿಪಿ’ ರಮಾನಂದ ಸಾಗರ್‌ ಬಂಧನ

ಹಲವು ಅವತಾರಗಳಲ್ಲಿ ಹಲವರಿಗೆ ಕಿರುಕುಳ ನೀಡುತ್ತಿದ್ದ ರಮಾನಂದ ಸಾಗರ್‌ನನ್ನು ಬೆಂಗಳೂರಿನ ತಿಲಕ್‌ನಗರ ಪೊಲೀಸರು ಬಂಧಿಸಿದ್ದಾರೆ.

ಜಯನಗರ ಜನರಲ್‌ ಆಸ್ಪತ್ರೆಯ ವೈದ್ಯರಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ತಿಲಕ್‌ನಗರ ಪೊಲೀಸರು ‘ಸ್ವಘೋಷಿತ ಐಜಿಪಿ’ ರಮಾನಂದ ಸಾಗರ್‌ನನ್ನು ಬಂಧಿಸಿದ್ದಾರೆ.

ತನ್ನನ್ನು ತಾನು ನಿವೃತ್ತ ಐಜಿಪಿ ಎಂದು ಕರೆದುಕೊಳ್ಳುತ್ತಿದ್ದ ರಮಾನಂದ ಸಾಗರ್‌ ಪೊಲೀಸ್‌ ಅಧಿಕಾರಿಗಳಂತೆ ಖಾಕಿ ಸಮವಸ್ತ್ರದಲ್ಲೇ ಇರುತ್ತಿದ್ದ. ಅಲ್ಲದೆ ಆರ್‌ಟಿಐ ಕಾರ್ಯಕರ್ತ, ಯುವ ಭಾರತ್‌ ಸೇನೆ ಅಧ್ಯಕ್ಷ ಮತ್ತಿತರ ಅವತಾರಗಳಲ್ಲಿ ಹಲವರಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಈತನ ಮೇಲಿತ್ತು. ಈತನ ಪೂರ್ವಾಪರದ ಬಗ್ಗೆ ಸಮಾಚಾರ ವಿಸ್ತೃತವಾಗಿ ವರದಿ ಮಾಡಿತ್ತು.

Also read: ಮೀಟ್‌ Mr. ‘ಸ್ವಘೋಷಿತ ಐಜಿಪಿ’ ರಮಾನಂದ ಸಾಗರ್‌; ಇದು ಕಳ್ಳ ಕಸುಬಿಯ ದುನಿಯಾ 

ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ರಮಾನಂದ ಸಾಗರ್ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ. ಆದರೆ ಸೆಷನ್ಸ್‌ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಬಳಿಕ ರಮಾನಂದ ಸಾಗರ್‌ ತಲೆಮರೆಸಿಕೊಂಡಿದ್ದ.

ರಮಾನಂದ ಸಾಗರ್‌ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದ ತಿಲಕ್‌ನಗರ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.