samachara
www.samachara.com
ಧರ್ಮರಾಜ್ ಎನ್‌ಕೌಂಟರ್‌ಗೂ ಮೊದಲೇ ಹಂತಕರ ಪಾಲಾಗಿದ್ದ ಗಂಗಾಧರ ಚಡಚಣ!
ರಾಜ್ಯ

ಧರ್ಮರಾಜ್ ಎನ್‌ಕೌಂಟರ್‌ಗೂ ಮೊದಲೇ ಹಂತಕರ ಪಾಲಾಗಿದ್ದ ಗಂಗಾಧರ ಚಡಚಣ!

ಭೀಮಾ ತೀರದ ರಕ್ತಪಾತ ಪ್ರಕರಣದಲ್ಲಿ ದಿನದಿನಕ್ಕೆ ಸ್ಫೋಟಕ ಮಾಹಿತಿಗಳು ಹೊರ ಬೀಳುತ್ತಿವೆ. ಧರ್ಮರಾಜ್‌ ಎನ್‌ಕೌಂಟರ್‌ಗೂ ಮುನ್ನವೇ ಗಂಗಾಧರನನ್ನು ಹಂತಕರಿಗೆ ಒಪ್ಪಿಸಿದ್ದಾಗಿ ಈಗ ಆರೋಪಿ ಸ್ಥಾನದಲ್ಲಿರುವ ಪೊಲೀಸರು ತಪ್ಪೊಪ್ಪಿಕೊಂಡಿದ್ದಾರೆ.

ಪರಶುರಾಮ ಶಿವಶರಣ

ಪರಶುರಾಮ ಶಿವಶರಣ

ಗಂಗಾಧರ ಚಡಚಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಪೇದೆಗಳಿಂದ ದಿನದಿನಕ್ಕೆ ಸ್ಫೋಟಕ ಮಾಹಿತಿಗಳು ಹೊರ ಬೀಳುತ್ತಿವೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಸ್ಪಿ ಆನಂದಕುಮಾರ ಎದುರು, ಬಂಧಿತ ಮೂವರು ಪೇದೆಗಳು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಎನ್‌ಕೌಂಟರ್‌ಗೂ ಮುನ್ನವೆ ಗಂಗಾಧರನನ್ನು ವಶಕ್ಕೆ ಪಡೆದು ಬೇರೆ ಕಡೆ ಕಳುಹಿಸಲಾಗಿತ್ತು.

ಪಿಎಸ್‌ಐ ಗೋಪಾಲ ಹಳ್ಳೂರ ಅವರ ಡಸ್ಟರ್ ಕಾರಲ್ಲಿ ಗಂಗಾಧರನನ್ನು ಕರೆದುಕೊಂಡು ಹೋಗಲಾಗಿತ್ತು ಎಂದು ಪೇದೆಗಳಾದ ಚಂದ್ರಶೇಖರ ಜಾಧವ, ಸಿದ್ದೇಶ್ವರ ರೂಗಿ ಹಾಗೂ ಗದ್ದೆಪ್ಪ ನಾಯ್ಕೋಡಿ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

“ಇಂಡಿ ತಾಲೂಕಿನ ಕೊಂಕಣಗಾಂವ ಸಮೀಪ ಸ್ಕಾರ್ಪಿಯೋ ವಾಹನದ ಜೊತೆ ಅಂದಿನ ಸಿಪಿಐ ಮಲ್ಲಿಕಾರ್ಜುನ ಅಸೋಡೆ ಕಾಯುತ್ತಿದ್ದರು. ಅವರಿಗೆ ಗಂಗಾಧರನನ್ನು ಒಪ್ಪಿಸಿ ಎಂದು ಪಿಎಸ್‌ಐ ಹಳ್ಳೂರ ಹೇಳಿ ಕಳಿಸಿದ್ದರು. ಸ್ಕಾರ್ಪಿಯೋ ಕಾರ್ ಬಳಿ ಬಂದಾಗ ವಾಹನದಲ್ಲಿ ಹಂತಕ ಹನುಮಂತ ಪೂಜಾರಿ ಇರುವುದರಿಂದ ತಕ್ಷಣ ಸಿಪಿಐ ಅಸೋಡೆಗೆ ಪೋನ್ ಮಾಡಿ ತಿಳಿಸಲಾಗಿತ್ತು. ಆಗ ಸ್ವತಃ ಸಿಪಿಐ ಅಸೋಡೆ, ಗಂಗಾಧರನನ್ನು ಅವರ ಕೈಯಲ್ಲಿ ಒಪ್ಪಿಸಿ ಹೋಗಿರಿ ಎಂದು ನಮಗೆ ಹೇಳಿದ್ದರು,” ಎಂದು ಬಂಧಿತ ಪೇದೆಗಳು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಬಂಧಿತರಿಂದ ಎಲ್ಲ ಮಾಹಿತಿಗಳನ್ನು ಕಲೆ ಹಾಕಿ ಸಿಐಡಿ ಅಧಿಕಾರಿಗಳು ಅಂತಿಮ ವರದಿಗೆ ಸಿದ್ಧತೆ ಮಾಡುತ್ತಿದ್ದಾರೆ.

ಸಿಐಡಿ ಎಸ್ಪಿ ಆನಂದಕುಮಾರ ನೇತೃತ್ವದಲ್ಲಿ ಗಂಗಾಧರ ಚಡಚಣ ಶವ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಭೀಮಾತೀರದ ಹಿಂಗಣಿ ಬ್ಯಾರೇಜ್ ಸುತ್ತ ಮುತ್ತ ಹಾಗೂ ಅಲ್ಲಿನ ವಸ್ತಿ ಇರುವ ಸ್ಥಳೀಯರನ್ನು ವಿಚಾರಿಸಿ ಶವ ಹುಡುಕಾಟಕ್ಕೆ ಮುಂದಾಗಿದ್ದಾರೆ.

Also read: ಉತ್ತರ ಕರ್ನಾಟಕದ ‘ರಕ್ತ ಚರಿತ್ರೆ’; ಭೀಮೆಯಲ್ಲಿ ನೀರಿಗಿಂತಲೂ ನೆತ್ತರು ಹರಿದಿದ್ದೇ ಜಾಸ್ತಿ!

ನ್ಯಾಯಾಂಗ ಬಂಧನಕ್ಕೆ:

ಗಂಗಾಧರ ಚಡಚಣ ಹತ್ಯೆ ಪ್ರಕರಣದ ಆರು ಜನ ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜೂನ್ 28ರ ವರೆಗೆ ಆರು ಜನ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಐದು ದಿನಗಳವರೆಗೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಸಿಐಡಿ ವಶಕ್ಕೆ ಪಡೆದಿತ್ತು. ಶುಕ್ರವಾರ ಇಂಡಿ ನ್ಯಾಯಾಲಯಕ್ಕೆ ಆರು ಜನ ಆರೋಪಿಗಳನ್ನು ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಮೂವರು ಪೇದೆ ಮತ್ತು ಮಹಾದೇವ ಸಾಹುಕಾರನ ಇಬ್ಬರು ಸಹಚರರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶ ಅರವಿಂದ ಹಾವರಗಿ ಅವರು ಆದೇಶ ಜಾರಿಗೊಳಿಸಿದ್ದಾರೆ. ಆರು ಜನ ಆರೋಪಿಗಳನ್ನು ವಿಜಯಪುರ ನಗರ ದರ್ಗಾ ಜೈಲಿಗೆ ಕಳುಹಿಸಲಾಗಿದೆ.