samachara
www.samachara.com
ಪರಿಷತ್ ಚುನಾವಣೆ: ಪದವೀಧರ ನಿರುತ್ಸಾಹ ಧೋರಣೆ, ಶಿಕ್ಷರಿಂದ ಉತ್ತಮ ಸ್ಪಂದನೆ
ರಾಜ್ಯ

ಪರಿಷತ್ ಚುನಾವಣೆ: ಪದವೀಧರ ನಿರುತ್ಸಾಹ ಧೋರಣೆ, ಶಿಕ್ಷರಿಂದ ಉತ್ತಮ ಸ್ಪಂದನೆ

ಕರ್ನಾಟಕದ ಒಟ್ಟು 14 ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಪೈಕಿ 6 ಸ್ಥಾನಗಳಿಗೆ ಶುಕ್ರವಾರ ಯಶಸ್ವಿಯಾಗಿ ಮತದಾನ ನಡೆದಿದೆ. ಆದರೆ ಪದವಿ ಪಡೆದ ವಿದ್ಯಾವಂತರೇ ಮತದಾನಕ್ಕೆ ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ. ಯಾಕೆ ಹೀಗೆ? 

ಕರ್ನಾಟಕದ ಒಟ್ಟು 14 ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಪೈಕಿ 6 ಸ್ಥಾನಗಳಿಗೆ ನಿನ್ನೆ ಯಶಸ್ವಿಯಾಗಿ ಮತದಾನ ನಡೆದಿದೆ. ಆದರೆ ಪದವಿ ಪಡೆದ ವಿದ್ಯಾವಂತರೇ ಮತದಾನಕ್ಕೆ ನಿರಾಸಕ್ತಿ ವ್ಯಕ್ತಪಡಿಸಿದ್ದು ಕಂಡು ಬಂತು.

ಮೂರು ಶಿಕ್ಷಕರ ಕ್ಷೇತ್ರಗಳು ಹಾಗೂ ಮೂರು ಪದವೀಧರ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಈಗಾಗಲೇ ಮತಪಟ್ಟಿಗೆಯಲ್ಲಿ ಸಂಚಯಗೊಂಡಿದೆ. ಕರ್ನಾಟಕ ಆಗ್ನೇಯ ಶಿಕ್ಷಕರ ಮತಕ್ಷೇತ್ರ, ದಕ್ಷಿಣ ಶಿಕ್ಷಕರ ಮತಕ್ಷೇತ್ರ, ನೈಋತ್ಯ ಶಿಕ್ಷಕರ ಮತಕ್ಷೇತ್ರ, ನೈಋತ್ಯ ಪದವೀಧರ ಮತಕ್ಷೇತ್ರ, ಬೆಂಗಳೂರು ಪದವೀಧರ ಮತಕ್ಷೇತ್ರ ಹಾಗೂ ಈಶಾನ್ಯ ಪದವೀಧರ ಕ್ಷೇತ್ರಗಳು ಚುನಾವಣಾ ವ್ಯಾಪ್ತಿಯಲ್ಲಿದ್ದವು. ನೈರುತ್ಯ ಕ್ಷೇತ್ರದಲ್ಲಿ ಮಳೆಯ ಕಾರಣ ಮತದಾನ ಮಂದ ಗತಿಯಲ್ಲಿ ಸಾಗಿತು. ಉಳಿದ ಕ್ಷೇತ್ರಗಳಲ್ಲಿ ಮಧ್ಯಾಹ್ನದ ನಂತರ ಚುರುಕಾಗಿ ನಡೆಯಿತು.

ಪದವೀಧರರನ್ನು ಹಿಂದೆ ಹಾಕಿದ ಶಿಕ್ಷಕರು..!

ವಿದ್ಯಾವಂತರೇ ಮತದಾರರಾಗಿರುವ ಪರಿಷತ್ ಚುನಾವಣೆಯಲ್ಲಿ ಪಧವೀದರನ್ನು ಹಿಂದೆ ಹಾಕುವಂತೆ ಶಿಕ್ಷಕರು ಮತ ಚಲಾಯಿಸಿದ್ದಾರೆ. ಸರಾಸರಿ ನೋಡುವುದಾದರೆ ಆಜ್ಞೇಯ ಶಿಕ್ಷಕರ ಕ್ಷೇತ್ರದಲ್ಲಿ ಮಧ್ಯಾಹ್ನದ 1 ಗಂಟೆ ವೇಳೆಗೆ ಶೇ.49ರಷ್ಟು ಮತದಾನವಾಗಿತ್ತು. 3 ಗಂಟೆಯ ಹೊತ್ತಿಗೆ ಶೇ.67ರಷ್ಟಿದ್ದ ಮತದಾನ 5 ಗಂಟೆಗೆ 80.45ಕ್ಕೆ ಮುಟ್ಟಿತು. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಇದೇ ಸಮಯಕ್ಕೆ ಶೇ.46ರಷ್ಟು ಮತದಾನವಾಗಿದ್ದರೆ, 3 ಗಂಟೆಗೆ 70ರಷ್ಟು ಮತದಾನವಾಗಿತ್ತು. 5 ಗಂಟೆಗೆ ಇದು ಶೇ.79.91ಕ್ಕೆ ತಲುಪಿತು

ಇನ್ನು ನೈರುತ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಇದೇ ವೇಳೆಗೆ ಕ್ರಮವಾಗಿ ಶೇ.52 – 79ರಷ್ಟು 91.84ರಷ್ಟು ದಾಖಲಿಸಿತು. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಶೇ.36- 55ರಷ್ಟು ಸಂಜೆ ವೇಳೆಗೆ ಶೇ.70.13ಕ್ಕೆ ಅಂತ್ಯವಾಯಿತು. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಇದೇ ವೇಳೆಗೆ ಶೇ.41-56-70.04ರಷ್ಟಕ್ಕೆ ಮುಗಿಯಿತು. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಈ ವೇಳೆಗೆ ಶೇ.34.63 -47.84ರಷ್ಟು ಇತ್ತು 5 ಗಂಟೆಗೆ 64.11ರಷ್ಟು ಮಾತ್ರ ಮತದಾನವಾಯಿತು. ಒಟ್ಟು ಸರಾಸರಿ ಮತದಾನವನ್ನು ಗಮನಿಸಿದರೆ ಪದವೀಧರರು ಮತದಾನಕ್ಕೆ ಹೆಚ್ಚು ನಿರಾಸಕ್ತಿ ತೋರಿದಂತೆ ಕಂಡು ಬಂದಿದೆ.

ಈ ಕುರಿತು ಮಾತನಾಡಿದ ಮೈಸೂರು ವಿವಿಯ ಪ್ರಾಧ್ಯಾಪಕ ಅರವಿಂದ ಮಾಲಗತ್ತಿ ಬಹುಷಃ ಏಕಕಾಲಕ್ಕೆ ಒಂದರ ಹಿಂದೆ ಒಂದು ಚುನಾವಣೆಗಳು ನಡೆಯುತ್ತಿರುವ ಕಾರಣದಿಂದ ಪದವೀಧರರು ಮತ ಚಲಾಯಿಸಲು ನಿರಾಸಕ್ತಿ ತೋರಿಸಿರಬಹುದು. ಆದರೂ ವಿದ್ಯಾವಂತರು ಮತ ಹಾಕದೆ ಇರುವುದನ್ನು ಸಮರ್ಥಿಸಿಕೊಳ್ಳಲಾಗದು, ಎಂದರು.

ಪದವೀಧರ ಕ್ಷೇತ್ರದಲ್ಲೂ ಸಾಕಷ್ಟು ಹಣ ಖರ್ಚು ಮಾಡುತ್ತಿರುವ ವಾತಾವರಣ ಸರಿಯಲ್ಲ. ಇದಕ್ಕೆ ಮತದಾರರು, ಚುನಾವಣಾ ಆಯೋಗ, ವ್ಯವಸ್ಥೆಗಳೆಲ್ಲವೂ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ಕಾಣಬಹುದು.
ಅರವಿಂದ ಮಾಲಗತ್ತಿ, ಪ್ರಾಧ್ಯಾಪಕರು, ಮೈಸೂರು ವಿವಿ

ಸಂಜೆ ಐದು ಗಂಟೆ ವೇಳೆಗೆ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.91.84, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಶೇ. 79.91, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.80.45ರಷ್ಟು ಉತ್ತಮ ಮತದಾನವಾಗಿದೆ. ಇನ್ನು ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಶೇ. 64.11, ನೈರುತ್ಯ ಪದವೀಧರ ಕ್ಷೇತ್ರದಲ್ಲಿ 70.04, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಶೇ. 70.13ರಷ್ಟು ಮತದಾನವಾಗಿದೆ.

ಪರಿಷತ್ ಚುನಾವಣೆ: ಪದವೀಧರ ನಿರುತ್ಸಾಹ ಧೋರಣೆ, ಶಿಕ್ಷರಿಂದ ಉತ್ತಮ ಸ್ಪಂದನೆ

ಪದವೀಧರರು ಶಿಕ್ಷಕರಂತೆ ಮತದಾನದಲ್ಲಿ ಆಸಕ್ತಿ ತೋರಿಲ್ಲ. ಶಿಕ್ಷಕರು ಪದವೀಧರರಿಗಿಂತ ಶೇ.12ರಿಂದ 15ರಷ್ಟು ಹೆಚ್ಚು ಮತದಾನ ಮಾಡಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರವಾದ ಕೋಲಾರ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆಯಲ್ಲಿ ಶೇ.20ರಷ್ಟು ಹೆಚ್ಚು ಮತದಾನವಾಗಿರೋದು ವಿಶೇಷವಾಗಿದೆ.

ಚುನಾವಣೆ ನಡೆಯುತ್ತಿರುವ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು, ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿದ್ದವು. ಆದರೆ ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿನ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿತ್ತು. ಅದರ ಬಲದಿಂದ ಪರಿಷತ್ ಚುನಾವಣೆಯಲ್ಲೂ ಪ್ರಾಬಲ್ಯ ಕಾಪಾಡಿಕೊಳ್ಳಲು ಅದು ಕಾರ್ಯ ತಂತ್ರ ರೂಪಿಸಿತ್ತು.

ಇನ್ನೊಂದೆಡೆ ಆಡಳಿತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗೂ ಪರಿಷತ್ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಹೀಗಾಗಿ ಕಾಂಗ್ರೆಸ್ ನಾಲ್ಕೂ ಸ್ಥಾನಗಳನ್ನು ಉಳಿಸಿಕೊಳ್ಳಲು ಯತ್ನಿಸಿದ್ದರೆ, ಜೆಡಿಎಸ್ ಮತ್ತೆರಡು ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲು ಹೋರಾಟ ಮಾಡಿದೆ. ಆದರೆ ಮತ ಪೆಟ್ಟೆಗೆಯಲ್ಲಿರುವ ವಿಜಯಲಕ್ಷ್ಮಿ ಯಾರ ಪರವಾಗಿದ್ದಾಳೆ ಎಂಬುದು ಮುಂದಿನ ಸೋಮವಾರ ಬಹಿರಂಗವಾಗಲಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ರಮೇಶ್‌ ಬಾಬು, ದಕ್ಷಿಣ ಶಿಕ್ಷಕರ ಕ್ಷೇತ್ರದ ಮರಿತಿಬ್ಬೇಗೌಡ, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಗಣೇಶ್‌ ಕಾರ್ಣಿಕ್‌, ಬೆಂಗಳೂರು ಪದವೀಧರ ಕ್ಷೇತ್ರದ ರಾಮಚಂದ್ರೇಗೌಡ ಮತ್ತು ಈಶಾನ್ಯ ಪದವೀಧರ ಕ್ಷೇತ್ರದ ಅಮರನಾಥ ಪಾಟೀಲ ಜೂನ್‌ಗೆ ನಿವೃತ್ತಿ ಆಗುತ್ತಿದ್ದಾರೆ. ಇದರಲ್ಲಿ ಬಹಳಷ್ಟು ಅಭ್ಯರ್ಥಿಗಳು ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಪರಿಷತ್ ಚುನಾವಣೆ: ಪದವೀಧರ ನಿರುತ್ಸಾಹ ಧೋರಣೆ, ಶಿಕ್ಷರಿಂದ ಉತ್ತಮ ಸ್ಪಂದನೆ

ಮಳೆಯ ಕಾರಣದಿಂದ ನೈರುತ್ಯ ಕ್ಷೇತ್ರದ ಕರಾವಳಿ ಭಾಗಗಳಲ್ಲಿ ನಿರೀಕ್ಷಿತ ಮತದಾನ ಆಗಿಲ್ಲದಿರುವುದನ್ನು ಹೊರತುಪಡಿಸಿದರೆ ರಾಜ್ಯದ ಉಳಿದೆಡೆ ಸಾಕಷ್ಟು ಮತದಾನವಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿ ಶೇ.84ರಷ್ಟು ಮತದಾನವಾಗಿದ್ದರೆ. ಪದವೀಧರರ ಕ್ಷೇತ್ರಗಳಲ್ಲಿ ಶೇ.68ಕ್ಕೆ ಸೀಮಿತಗೊಂಡಿದೆ. ಅಂದರೆ ಪದವೀಧರ ಕ್ಷೇತ್ರದಲ್ಲಿ ಶೇ.16ರಷ್ಟು ಮತದಾನ ಕುಸಿದಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ದಾವಣಗೆರೆ ವ್ಯಾಪ್ತಿಯನ್ನು ಹೊಂದಿದೆ. ಮುಖ್ಯವಾಗಿ ಈ ಕ್ಷೇತ್ರಗಳಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ಜೆಡಿಎಸ್ನ ರಮೇಶ್ ಬಾಬು ಕಾಂಗ್ರೆಸ್ನ ಎಂ.ರಾಮಪ್ಪ ನಡುವೆ ತ್ರಿಕೋನ ಸ್ಪರ್ಧೆ ಇತ್ತು.

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್‌, ಕಾಂಗ್ರೆಸ್ನ ಎಸ್.ಪಿ.ದಿನೇಶ್, ಜೆಡಿಎಸ್‌ನ ಅರುಣ ಕುಮಾರ್ ಇದ್ದು, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ವ್ಯಾಪ್ತಿಯ ಮತದಾರರು ತಮ್ಮ ಮತ ಚಲಾಯಿಸಿದರು.

ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕಾಂಗ್ರೆಸ್‌ನಿಂದ ಕೆ.ಕೆ.ಮಂಜುನಾಥ್, ಜೆಡಿಎಸ್ ನಿಂದ ಎಸ್.ಎಲ್ ಬೋಜೇಗೌಡ ಹಾಗೂ ಹತ್ತಕ್ಕೂ ಹೆಚ್ಚು ಮಂದಿ ಪಕ್ಷೇತರಿದ್ದಾರೆ. ಇನ್ನು ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳೆಂದರೆ ಹಾಲಿ ಸದಸ್ಯರಾದ ಕಾಂಗ್ರೆಸ್ನ ಎಂ.ಲಕ್ಷ್ಮಣ್, ಜೆಡಿಎಸ್ನ ಮರಿತಿಬ್ಬೇಗೌಡ, ಬಿಜೆಪಿಯ ನಿರಂಜನಮೂರ್ತಿ. ಇವರಿಗೆ ಪಕ್ಷೇತರ ಅಭ್ಯರ್ಥಿಗಳಾಗಿ ಎ.ಹೆಚ್.ಗೋಪಾಲಕೃಷ್ಣ, ಡಿ.ಕೆ.ತುಳಸಪ್ಪ ಮುಂತಾದ ಐದಕ್ಕೂ ಹೆಚ್ಚು ಸ್ಪರ್ಧಿಗಳಿದ್ದಾರೆ.

ಈಶಾನ್ಯ ಪದವೀಧರ ಕ್ಷೇತ್ರವಾದ ಕಲಬುರಗಿ, ಬಳ್ಳಾರಿ, ರಾಯಚೂರು, ಬೀದರ, ಕೊಪ್ಪಳ, ಯಾದಗಿರಿಯಲ್ಲಿ ದಲ್ಲಿ ಕೊನೆ ಗಳಿಗೆಯಲ್ಲಿ ಬಿರುಸಿನ ಮತದಾನ ಆಗಿದೆ. ಇಲ್ಲಿ ಕಾಂಗ್ರೆಸ್‌ನ ಡಾ. ಚಂದ್ರಶೇಖರ್ ಪಾಟೀಲ್, ಬಿಜೆಪಿಯ ಕೆ.ಬಿ.ಶ್ರೀನಿವಾಸ್, ಜೆಡಿಎಸ್‌ನಿಂದ ಪ್ರತಾಪರೆಡ್ಡಿ ಕಣದಲ್ಲಿದ್ದಾರೆ. ಗೆಲುವಿನ ವಿಶ್ವಾಸ ಹೊಂದಿರುವ ಅಭ್ಯರ್ಥಿಗಳಿಗೆ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಡಾ. ರಜಾಕ್ ಪಕ್ಷೇತರರಾಗಿ ಸ್ಪರ್ಧೆ ಒಡ್ಡಿದ್ದಾರೆಯೇ ಕಾದು ನೋಡಬೇಕು.

ಇಡೀ ಪರಿಷತ್ ಚುನಾವಣೆಯಲ್ಲಿ ಭಾರಿ ಕುತೂಹಲ ಹಾಗೂ ಪ್ರತಿಷ್ಠೆಯ ಕಣವಾಗಿದ್ದು ಬೆಂಗಳೂರು ಪದವೀಧರ ಕ್ಷೇತ್ರ. ಬೆಂಗಳೂರು ನಗರ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮೀಣ, ರಾಮನಗರ ಜಿಲ್ಲೆಯ ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಿದರು. ಬಿಜೆಪಿಯಿಂದ ಅ.ದೇವೇಗೌಡ, ಕಾಂಗ್ರೆಸ್‌ನಿಂದ ರಾಮೋಜಿಗೌಡ, ಜೆಡಿಎಸ್‌ನಿಂದ ಅಚ್ಚೇಗೌಡ ಶಿವಣ್ಣ, ಸಿಪಿಐನಿಂದ ಪ್ರಕಾಶ ಕೆ, ಜೆಡಿಎಸ್‌ನಿಂದ ವಿ.ಸುರೇಶ್ ಬಾಬು ಇಲ್ಲಿ ಪ್ರಮುಖ ಸ್ಪರ್ಧಿಗಳಾಗಿದ್ದರು.

2019ಕ್ಕೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ವಿದ್ಯಾವಂತ ಮತದಾರರ ಮನಸ್ಥಿತಿ ಯಾವ ಪಕ್ಷದೆಡೆಗೆ ಇದೆ ಎಂಬ ಹಿನ್ನೆಯಲ್ಲಿ ಶಿಕ್ಷಕ ಮತ್ತು ಪದವೀಧರ ಚುನಾವಣೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಜೂನ್ 12ರಂದು ಮತ ಎಣಿಕೆ ನಡೆಯಲಿದ್ದು ಅಂದು ಮಧ್ಯಾಹ್ನ 11 ಗಂಟೆಗೆ ಅಭ್ಯರ್ಥಿಗಳ ಭವಿಷ್ಯ ನಿಚ್ಚಳವಾಗಲಿದೆ.