ಸಿಎಂ ಚಂಡಿಕಾ ಪಾರಾಯಣ, ಸ್ಪೀಕರ್‌ ಪಾದಪೂಜೆ: ಹೊಸ ಸರಕಾರದ ‘ನಂಬಿಕೆ’ಗಳ ಅನಾವರಣ!
ರಾಜ್ಯ

ಸಿಎಂ ಚಂಡಿಕಾ ಪಾರಾಯಣ, ಸ್ಪೀಕರ್‌ ಪಾದಪೂಜೆ: ಹೊಸ ಸರಕಾರದ ‘ನಂಬಿಕೆ’ಗಳ ಅನಾವರಣ!

ಹೊಸ ಸರಕಾರದಲ್ಲಿರುವವರ ನಂಬಿಕೆಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಂಡಿಕಾ ಪಾರಾಯಣದ ಮೊರೆ ಹೋಗಿದ್ದರೆ, ಸ್ಪೀಕರ್‌ ರಮೇಶ್‌ ಕುಮಾರ್ ಬಾಲಸ್ವಾಮೀಜಿಯ ಪಾದಪೂಜೆ ನಡೆಸಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇನ್ನು ಮುಂದೆ ಪ್ರತಿ ಶುಕ್ರವಾರ ಚಂಡಿಕಾ ಪಾರಾಯಣ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕುಮಾರಸ್ವಾಮಿ ಅವರ ನಿವಾಸಕ್ಕೆ ಬಂದ ಪುರೋಹಿತರು ಶುಕ್ರವಾರ ಚಂಡಿಕಾ ಪಾರಾಯಣ ಮತ್ತು ವಿಶೇಷ ಪೂಜೆ ನಡೆಸಿದ್ದಾರೆ.

ಇತ್ತ ಸಿಎಂ ಮನೆಯಲ್ಲಿ ಚಂಡಿಕಾ ಪಾರಾಯಣದ ಸದ್ದು ಕೇಳುತ್ತಿದ್ದರೆ, ಅತ್ತ ಸ್ಪೀಕರ್‌ ರಮೇಶ್‌ ಕುಮಾರ್‌ ಬಾಲಸ್ವಾಮೀಜಿಯೊಬ್ಬರಿಗೆ ಆರತಿ ಬೆಳಗಿ, ಪಾದಕ್ಕೆ ನಮಸ್ಕರಿಸುತ್ತಿರುವ ವಿಡಿಯೊ ಹರಿದಾಡುತ್ತಿದೆ.

Also read: ಎಚ್‌ಡಿಕೆ ಟೆಂಪಲ್‌ ರನ್: ಸಾರ್ವಜನಿಕವಾಗಿ ವಿಜೃಂಭಿಸುತ್ತಿರುವ ವೈಯಕ್ತಿಕ ನಂಬಿಕೆಗಳು!

ಪ್ರತಿ ಶುಕ್ರವಾರ ಪೂಜೆಯ ಕಾರಣಕ್ಕೆ ಕುಮಾರಸ್ವಾಮಿ ಸರಕಾರಿ ಕಾರ್ಯಕ್ರಮಗಳಿಂದ ಬಿಡುವು ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಚಂಡಿಕಾ ಪಾರಾಯಣ ಮಾಡುವುದರಿಂದ ಮನೋಕಾಮನೆಗಳು ಈಡೇರುತ್ತವೆ ಎಂಬ ಅಭಿಪ್ರಾಯವನ್ನು ಜ್ಯೋತಿಷಿಗಳು ಈಗಾಗಲೇ ಸುದ್ದಿವಾಹಿನಿಗಳ ಮೂಲಕ ಹರಿಬಿಡುತ್ತಿದ್ದಾರೆ.

ಒಂದು ವೇಳೆ ಚಂಡಿಕಾ ಪಾರಾಯಣದ ಕಾರಣಕ್ಕೆ ಕುಮಾರಸ್ವಾಮಿ ಪ್ರತಿ ಶುಕ್ರವಾರ ಸರಕಾರಿ ಕಾರ್ಯಕ್ರಮಗಳಿಂದ ಬಿಡುವು ಪಡೆಯುವುದೇ ನಿಜವಾದರೆ ವಿಧಾನಸೌಧದ ಮೂರನೇ ಮಹಡಿಯ ಸಿಎಂ ಕೊಠಡಿಗೂ ಪ್ರತಿ ಶುಕ್ರವಾರ ಬಿಡುವು ಸಿಕ್ಕಂತಾಗುತ್ತದೆ!

ಬಾಲಸ್ವಾಮೀಜಿ ಪಾದ ಮುಟ್ಟಿ ನಮಸ್ಕರಿಸುತ್ತಿರುವ ಸ್ಪೀಕರ್‌ ರಮೇಶ್ ಕುಮಾರ್
ಬಾಲಸ್ವಾಮೀಜಿ ಪಾದ ಮುಟ್ಟಿ ನಮಸ್ಕರಿಸುತ್ತಿರುವ ಸ್ಪೀಕರ್‌ ರಮೇಶ್ ಕುಮಾರ್

ಅಪಾರ ದೈವ ಭಕ್ತಿಯ ದೇವೇಗೌಡರ ಕುಟುಂಬದ ಕುಡಿ ಕುಮಾರಸ್ವಾಮಿ ಪ್ರತಿ ಶುಕ್ರವಾರ ಚಂಡಿಕಾ ಪಾರಾಯಣ ಮಾಡಿಸುವುದು ಅಚ್ಚರಿಯನ್ನೇನೂ ತರದಿರಬಹುದು. ಆದರೆ, ರಮೇಶ್‌ ಕುಮಾರ್‌ ಬಾಲಸ್ವಾಮೀಜಿ ಪಾದ ಮುಟ್ಟಿರುವುದು ಕುತೂಹಲ ಮೂಡಿಸುವ ಸುದ್ದಿಯೇ.

Also read: ‘ದೊಡ್ಡಗೌಡರ ದೈವಭಕ್ತಿ’: ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ ಸಂಖ್ಯಾಶಾಸ್ತ್ರ!

ರಾಜಕೀಯ ವಲಯದಲ್ಲಿ ಜಂಟಲ್‌ಮನ್‌ ಎಂದು ಕರೆಸಿಕೊಳ್ಳುವ ರಮೇಶ್‌ ಕುಮಾರ್‌ ಅವರ ಭಕ್ತಿ, ನಂಬಿಕೆಗಳು ಈವರೆಗೂ ಸುದ್ದಿಯಾಗಿದ್ದು ಕಡಿಮೆ. ಅದರಲ್ಲೂ ರಮೇಶ್ ಕುಮಾರ್‌ ಬಾಲಸ್ವಾಮೀಜಿ ಎಂಬ ಬಾಲಕನಿಗೆ ಆರತಿ ಬೆಳಗಿರುವುದು ಹಾಗೂ ಪಾದದಡಿ ಕುಳಿತು ಪಾದ ಮುಟ್ಟಿ ನಮಸ್ಕರಿಸಿರುವುದು ರಮೇಶ್‌ ಕುಮಾರ್‌ ಅವರ 'ನಂಬಿಕೆ'ಯನ್ನು ಅನಾವರಣಗೊಳಿಸಿದೆ.

ರಾಜಕಾರಣಿಗಳ ಇಂತಹ ನಂಬಿಕೆಗಳು ವೈಯಕ್ತಿಕವಾದರೂ, ಸಾರ್ವಜನಿಕ ಬದುಕಿನಲ್ಲಿ ಇರುವವರುಈ ರೀತಿಯ ಪೂಜೆ, ಪಾರಾಯಣಗಳ ಬೆನ್ನಿಗೆ ಬೀಳುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನಂತೂ ಈ ಬೆಳವಣಿಗೆ ಎತ್ತಿದೆ.