‘ಮಾಧ್ಯಮಗಳಲ್ಲಿ ಖಾತೆ ಹಂಚಿಕೆ’: ಉಗಿದು ಉಪ್ಪಿನಕಾಯಿ ಹಾಕಿದ ಸಿಎಂ, ಡಿಸಿಎಂ!
ರಾಜ್ಯ

‘ಮಾಧ್ಯಮಗಳಲ್ಲಿ ಖಾತೆ ಹಂಚಿಕೆ’: ಉಗಿದು ಉಪ್ಪಿನಕಾಯಿ ಹಾಕಿದ ಸಿಎಂ, ಡಿಸಿಎಂ!

ಎರಡೂ ಪಕ್ಷಗಳ ಪ್ರಣಾಳಿಕೆ ಭರವಸೆಗಳನ್ನು ಇಟ್ಟುಕೊಂಡು ‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’ಗಳನ್ನು ರೂಪಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಇದೇ ಸಮಯದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಸಮ್ಮಿಶ್ರ ಸರಕಾರದ ಸಂಪುಟ ರಚನೆ ಬೆನ್ನಲ್ಲೇ ಮಾಧ್ಯಮಗಳ ಬಗೆಗಿನ ಅಸಮಾಧಾನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೊರಹಾಕಿದ್ದಾರೆ.

ಬುಧವಾರ ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ವಿಧಾನಸೌಧದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ ರಾಜ್ಯದಲ್ಲಿ ಹೊಸ ಸರಕಾರದ ರಚನೆ ನಂತರ ಪೂರ್ಣ ಪ್ರಮಾಣದಲ್ಲಿ ಮಂತ್ರಿ ಮಂಡಲ ರಚನೆ ತಡವಾಯಿತು. ಆಡಳಿತಕ್ಕೆ ಚಾಲನೆ ಕೊಡುವಲ್ಲಿ ಸರಕಾರ ಜವಾಬ್ಧಾರಿಯುತ ನಿರ್ವಹಣೆ ಮಾಡುತ್ತಿಲ್ಲ ಎಂಬ ಕೆಲವು ಮಾಧ್ಯಮಗಳಲ್ಲಿ ಬಂದ ಟೀಕೆಗಳನ್ನು ಗಮನಿಸಿದ್ದೇನೆ. ಮಾಧ್ಯಮಗಳಲ್ಲಿ ಖಾತೆ ಹಂಚಿಕೆ ಮಾಡುತ್ತಿದ್ದೀರಿ. ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನು ಅಂದರೆ, ಒಂದೇ ಪಕ್ಷದ ಸರಕಾರ ರಚನೆಗೂ ಸಮಸ್ಯೆಗಳು ಇರುತ್ತವೆ. ಅಂತದ್ದರಲ್ಲಿ ಸಮ್ಮಿಶ್ರ ಸರಕಾರದ ರಚನೆಗೆ ಸ್ವಲ್ಪ ಸಮಯಾವಕಾಶ ನೀಡಬೇಕು,’’ ಎಂದರು.

ಹಾಗಂತ ರಾಜ್ಯದಲ್ಲಿ ಸರಕಾರ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅವರು ಹೇಳಲು ಮರೆಯಲಿಲ್ಲ. ಜತೆಗೆ, ಹಲವು ವಿಚಾರಗಳಲ್ಲಿ ಈಗಾಗಲೇ ಆಡಳಿತಾತ್ಮಕ ಸ್ಪಂದನೆ ನೀಡಲಾಗುತ್ತಿದೆ ಎಂಬುದನ್ನು ಅವರು ಮಾಧ್ಯಮಗಳ ಮುಂದಿಟ್ಟರು.

“ಅಧಿಕಾರಿಗಳು ಕಾರಿಡಾರ್‌ನಲ್ಲಿ ಬರುವಾಗ ಬೆಂಗಳೂರು ನಗರದ ಪಾಟ್‌ಹೋಲ್‌ ಬಗ್ಗೆ ವಿಷಯ ಪ್ರಸ್ತಾಪ ಮಾಡಿದರು. ಈ ಬಗ್ಗೆ ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಲಾಗಿದೆ. ಇನ್ನೂ ಬಾಕಿ ಇರುವ 3800 ಪಾಟ್ ಹೋಲ್‌ಗಳನ್ನು ಮುಚ್ಚಬೇಕಿದೆ. ಅದಕ್ಕಾಗಿ ಸೂಚನೆ ನೀಡಲಾಗಿದೆ,’’ ಎಂದರು.

"ಹೊಸ ಸಂಪುಟ ರಚನೆಯಾಗಿದೆ. ಕೆಲವರು ಅನುಭವಿಗಳು, ಇನ್ನು ಕೆಲವರು ಹೊಸಬರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಗೆ ಕೊಂಚ ಸಮಯ ನೀಡಬೇಕಿದೆ. ಅಸಮಾಧಾನಗಳು ಸಹಜ. ಆದರೆ ಅದನ್ನು ಏನೋ ದೊಡ್ಡ ಭೂಕಂಪ ಆಗಿ ಹೋಗುತ್ತದೆ, ಏನೋ ಒಡಕು ಉಂಟಾಗುತ್ತಿದೆ ಎಂದು ತೋರಿಸುತ್ತಿದ್ದೀರಿ,’’ ಎಂದು ಮಾಧ್ಯಮಗಳ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದರು.

“2008ರಲ್ಲಿ ಬಿಜೆಪಿ ಸ್ವತಂತ್ರ ಸರಕಾರ ಬಂದಾಗ ಅವತ್ತು ರಾಜ್ಯದ ಕೆಲವು ಭಾಗದಲ್ಲಿ ಏನೇನಾಯಿತು ಎಂಬುದನ್ನು ನೆನಪಿಸಿಕೊಳ್ಳಿ. ಕೆಲವು ಕಡೆ ಸರಕಾರದ ವಾಹನಗಳನ್ನು ಸುಟ್ಟರು. ಆನೇಕಲ್, ಹುಬ್ಬಳ್ಳಿ ಧಾರವಾಡ, ಹಾವೇರಿಯಲ್ಲಿ ನಡೆದಿದ್ದೇನು ಎಂಬುದನ್ನು ನಾನಿನ್ನೂ ಮರೆತಿಲ್ಲ. ನೀವು ಮರೆತಿದ್ದರೆ ನೆನಪಿಸಿಕೊಡುತ್ತೇನೆ. ಭಾವೋದ್ವೇಗದಿಂದ ಕೆಲವರ ಅಭಿಮಾನಿಗಳ ಪ್ರತಿಭಟನೆ ಪ್ರಾರಂಭ ಮಾಡಿದ್ದಾರೆ. ಆದರೆ ಸರಕಾರ ಪಾಸಿಟಿವ್ ದಿಕ್ಕಿನಲ್ಲಿ ಹೋಗುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುತ್ತೇವೆ,’’ ಎಂದರು.

ಹಿಂದಿನ ಸರಕಾರ ತಂದ ಜನರಿಗೆ ಉಪಯೋಗವಾಗುವಂತ ‘ಭಾಗ್ಯ’ಗಳನ್ನು ಈ ಸರಕಾರವೂ ಮುಂದುವರಿಸಲಿದೆ. ಎರಡೂ ಪಕ್ಷಗಳ ನಡುವೆ ಹೊಂದಾಣಿಕೆಗಾಗಿ ಸಮನ್ವಯ ಸಮಿತಿಯೊಂದನ್ನು ಅಸ್ಥಿತ್ವಕ್ಕೆ ತರಲಿದ್ದೇವೆ. ಜತೆಗೆ ಎರಡೂ ಪಕ್ಷಗಳ ಪ್ರಣಾಳಿಕೆ ಭರವಸೆಗಳನ್ನು ಇಟ್ಟುಕೊಂಡು ‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’ಗಳನ್ನು ರೂಪಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಇದೇ ಸಮಯದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಮಾದ್ಯಮಗಳ ಜತೆ ಮಾತನಾಡಿದ ಡಿಸಿಎಂ ಡಾ. ಜಿ. ಪರಮೇಶ್ವರ್ ಕೂಡ ಆರಂಭದಲ್ಲಿಯೇ ಮಾರ್ಮಿಕವಾಗಿ ಮಾಧ್ಯಮಗಳಿಗೆ ಧನ್ಯವಾದಗಳನ್ನು ಹೇಳಿದರು. "ಸಂಪುಟ ವಿಸ್ತರಣೆಗೆ ಪ್ರಕ್ರಿಯೆಯನ್ನು ಜನರಿಗೆ ತೋರಿಸಿಕೊಟ್ಟಿದ್ದೀರಿ. ನೀವುಗಳು ಸಂಪುಟ ರಚನೆ ತಡವಾಗುತ್ತಿದೆ, ಗೊಂದಲ ಮೂಡಿದೆ, ಖಾತೆ ತೀರ್ಮಾನ ಆಗಿಲ್ಲ ಎಂದು ಹೇಳುತ್ತಿದ್ದರಿ. ಈಗ ರಾಜ್ಯದ ಜನ ಸಮಾಧಾನದ ನಿಟ್ಟುಸಿರು ಬಿಡುವ ರೀತಿಯಲ್ಲಿ ಸಂಪುಟ ರಚನೆ ಮಾಡಿದ್ದನ್ನು ತೋರಿಸಿದ್ದೀರಿ. ಅದಕ್ಕಾಗಿ ಧನ್ಯವಾದಗಳನ್ನು ಹೇಳುತ್ತೇನೆ,’’ ಎಂದರು.

“ಇದು ಸಮ್ಮಿಶ್ರ ಸರಕಾರ. ಯಾವುದೇ ತೀರ್ಮಾನ ತೆಗೆದುಕೊಳ್ಳಲು ಶುರುನಲ್ಲಿ ಸಮಯ ಆಗುತ್ತೆ. ತಾವು ಅರ್ಥ ಮಾಡಿಕೊಂಡಿದ್ದೀರಿ ಎಂದು ಅಂದುಕೊಂಡಿದ್ದೇನೆ. ಭರವಸೆಯ ಮಾತುಗಳನ್ನು ಆಡಿದ್ದೇವೆ, ಬದ್ಧತೆಯ ಮಾತುಗಳನ್ನು ಹೇಳಿದ್ದೇವೆ. ಇವತ್ತು ಸಂಪುಟ ವಿಸ್ತರಣೆ ಆಗಿದೆ. ಹೊಸಬರು ಮತ್ತು ಹಳಬರ ಸಮ್ಮಿಶ್ರ ಇದು. ಮುಂದಿನ ದಿನಗಳಲ್ಲಿ ಒಳ್ಳೆಯ ಆಡಳಿತ ನೀಡಲು ಬದ್ಧರಾಗಿದ್ದೇವೆ,’’ ಎಂದರು.

ಬುಧವಾರ ಸಂಜೆ ಅಥವಾ ಗುರುವಾರ ಬೆಳಗ್ಗೆ ಸಿಎಂ ಕುಮಾರಸ್ವಾಮಿ ಖಾತೆಗಳನ್ನು ಹಂಚಿಕೆ ಮಾಡಲಿದ್ದಾರೆ ಎಂದು ಅವರು ಇದೇ ವೇಳೆ ತಿಳಿಸಿದರು.