ಮುಗಿದ ಖಾತೆ ಹಂಚಿಕೆ ಲೆಕ್ಕಾಚಾರ: ಸಂಪುಟ ರಚನೆ ಮುಹೂರ್ತ ಫಿಕ್ಸ್!
ರಾಜ್ಯ

ಮುಗಿದ ಖಾತೆ ಹಂಚಿಕೆ ಲೆಕ್ಕಾಚಾರ: ಸಂಪುಟ ರಚನೆ ಮುಹೂರ್ತ ಫಿಕ್ಸ್!

ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ಖಾತೆ ಹಂಚಿಕೆ ಲೆಕ್ಕಾಚಾರ ಕೊನೆಗೂ ಮುಗಿದಿದೆ. ಬುಧವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಿಗದಿಯಾಗಿದೆ.

ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದ 15 ದಿನಗಳ ಬಳಿಕ ಸಂಪುಟ ರಚನೆಗೆ ಮುಹೂರ್ತ ನಿಗದಿಯಾಗಿದೆ. ಜೆಡಿಎಸ್‌- ಕಾಂಗ್ರೆಸ್‌ ಪಕ್ಷಗಳು ಖಾತೆ ಹಂಚಿಕೆ ಲೆಕ್ಕಾಚಾರ ಮುಗಿಸಿ ಬುಧವಾರ ಮಧ್ಯಾಹ್ನ 2 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಜ್ಜಾಗಿವೆ.

ಜೆಡಿಎಸ್‌ಗೆ ಐದು ವರ್ಷಗಳ ಪೂರ್ಣಾವಧಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲು ಕಾಂಗ್ರೆಸ್‌ ಒಪ್ಪಿದೆ. ಜತೆಗೆ ಹಣಕಾಸು, ಇಂಧನ, ಲೋಕೋಪಯೋಗಿ ಖಾತೆಗಳು ಜೆಡಿಎಸ್‌ ಪಾಲಾಗಿವೆ. ಉಪ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಗೃಹ, ಕಂದಾಯ, ಕೃಷಿ, ನೀರಾವರಿ, ಬೃಹತ್‌ ಕೈಗಾರಿಕೆ, ಆರೋಗ್ಯ ಖಾತೆಗಳು ಕಾಂಗ್ರೆಸ್‌ ಪಾಲಿಗೆ ಸಿಕ್ಕಿವೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರ ಜತೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಚರ್ಚಿಸಿ ಖಾತೆ ಹಂಚಿಕೆ ಪೂರ್ಣಗೊಳಿಸಿರುವುದಾಗಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ತಿಳಿಸಿದ್ದಾರೆ.

ರಾಜ್ಯಪಾಲರ ಭೇಟಿಯ ಬಳಿಕ ಶುಕ್ರವಾರ ಸಂಜೆ ಜಂಟಿ ಸುದ್ದಿಗೋಷ್ಠಿ ನಡೆಸಿದ ವೇಣುಗೋಪಾಲ್‌ ಮತ್ತು ಎಚ್‌.ಡಿ. ಕುಮಾರಸ್ವಾಮಿ ಖಾತೆ ಹಂಚಿಕೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

“ಬುಧವಾರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ” ಎಂದ ಕುಮಾರಸ್ವಾಮಿ, ಒಂದೇ ಹಂತದಲ್ಲಿ ಸಂಪುಟ ರಚನೆ ಆಗಲಿದೆಯೇ? ಎಂಬ ಪ್ರಶ್ನೆಗೆ, “ಈ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದರು.

ಜೆಡಿಎಸ್‌ - ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್ ಮತ್ತು ಡಾ. ಜಿ. ಪರಮೇಶ್ವರ್‌ ಇರಲಿದ್ದಾರೆ.

ಯಾರಿಗೆ ಯಾವ ಖಾತೆ?

ಕಾಂಗ್ರೆಸ್‌:

ಗೃಹ

ನೀರಾವರಿ

ಕಂದಾಯ

ಬೆಂಗಳೂರು ನಗರಾಭಿವೃದ್ಧಿ

ಕೈಗಾರಿಕೆ ಮತ್ತು ಸಕ್ಕರೆ

ಆರೋಗ್ಯ

ಮುಜರಾಯಿ

ನಗರಾಭಿವೃದ್ಧಿ

ಸಮಾಜ ಕಲ್ಯಾಣ

ಗ್ರಾಮೀಣಾಭಿವೃದ್ಧಿ

ಪಂಚಾಯತ್‌ ರಾಜ್‌

ಕಾರ್ಮಿಕ

ಗಣಿ ಮತ್ತು ಭೂ ವಿಜ್ಞಾನ

ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಆಹಾರ ಮತ್ತು ನಾಗರಿಕ ಪೂರೈಕೆ

ಹಜ್‌, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರ

ಕಾನೂನು ಮತ್ತು ಸಂಸದೀಯ

ಯುವಜನ ಸೇವೆ ಮತ್ತು ಕ್ರೀಡೆ

ಅರಣ್ಯ ಮತ್ತು ಪರಿಸರ

ವಿಜ್ಞಾನ ಮತ್ತು ತಂತ್ರಜ್ಞಾನ

ಕನ್ನಡ ಮತ್ತು ಸಂಸ್ಕೃತಿ

ಜೆಡಿಎಸ್‌:

ಹಣಕಾಸು

ಲೋಕೋಪಯೋಗಿ

ಇಂಧನ

ಸಹಕಾರಿ

ಶಿಕ್ಷಣ

ಪಶುಸಂಗೋಪನೆ

ತೋಟಗಾರಿಕೆ ಮತ್ತು ರೇಷ್ಮೆ

ಸಣ್ಣ ಕೈಗಾರಿಕೆ

ಮಾಹಿತ ತಂತ್ರಜ್ಞಾನ

ಯೋಜನೆ ಮತ್ತು ಸಾಂಖ್ಯಿಕ

ಗುಪ್ತಚರ

ಪ್ರವಾಸೋದ್ಯಮ

ಸಣ್ಣ ಕೈಗಾರಿಕೆ

ಸಾರಿಗೆ

ಸಣ್ಣ ನೀರಾವರಿ