samachara
www.samachara.com
ಮಳೆಗೆ ತತ್ತರಿಸಿದ ಕಡಲತಡಿ: ‘ಚಂಡಮಾರುತ ಅಲ್ಲ, ಮಾನ್ಸೂನ್ ಮಳೆ’
ರಾಜ್ಯ

ಮಳೆಗೆ ತತ್ತರಿಸಿದ ಕಡಲತಡಿ: ‘ಚಂಡಮಾರುತ ಅಲ್ಲ, ಮಾನ್ಸೂನ್ ಮಳೆ’

ರಾಜ್ಯಕ್ಕೆ ಕಾಲಿಡುತ್ತಲೇ ಅಬ್ಬರಿಸಿರುವ ಮುಂಗಾರು ಮಳೆಗೆ ಕರಾವಳಿ ನಗರಗಳಾದ ಮಂಗಳೂರು ಮತ್ತು ಉಡುಪಿ ನಡುಗಿಹೋಗಿವೆ. ಹಲವಾರು ಜನ ಪ್ರವಾಹಕ್ಕೆ ಸಿಲುಕಿದ್ದಾರೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚಿಂತೆಗೊಳಗಾಗಿದ್ದಾರೆ.

ಕಾಲಿಡುತ್ತಲೇ ಅಬ್ಬರಿಸುತ್ತಿರುವ ಮುಂಗಾರು ಮಳೆಗೆ ರಾಜ್ಯದ ಕರಾವಳಿ ಭಾಗ ಅಕ್ಷರಸಹ ತತ್ತರಿಸುತ್ತಿದೆ. ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಮಳೆ ಮಂಗಳೂರು ಮತ್ತು ಉಡುಪಿ ಭಾಗದ ಜನರ ನಿದ್ದೆಗೆಡಿಸಿದೆ.

ಕಳೆದ ಒಂದು ದಶಕದ ಅವಧಿಯಲ್ಲಿ ಮಂಗಳೂರು ಮಹಾನಗರ 100 ಮಿಲಿಮೀಟರ್‌ಗಿಂತಲೂ ಹೆಚ್ಚಿನ ಮಳೆಯನ್ನು ಕಂಡಿರಲಿಲ್ಲ. ಆದರೆ ಈಗ ಬೀಳುತ್ತಿರುವ ಮಳೆ 10 ವರ್ಷಗಳ ರೆಕಾರ್ಡ್‌ ಬ್ರೇಕ್‌ ಮಾಡಿದೆ. ಮಂಗಳೂರು ಮತ್ತು ಉಡುಪಿ ಜೆಲ್ಲೆಗಳಲ್ಲಿ ಬರೋಬ್ಬರಿ 340 ಮಿಲಿಮೀಟರ್‌ ಮಳೆಯಾಗಿದೆ.

ಇದು ಮೆಕ್ನು ಚಂಡಮಾರುತದ ಕಾರಣದಿಂದಾಗಿ ಸುರಿಯುತ್ತಿರುವ ಮಳೆಯೇ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕುಮಾರ್‌ ಸೆಂಥಿಲ್‌ ಸ್ಪಷ್ಟೀಕರಣ ನೀಡಿದ್ದಾರೆ. ಇದು ಚಂಡಮಾರುತವಲ್ಲ, ಮಾನ್‌ಸೂನ್‌ ಮಳೆ ಎಂದಿದ್ದು, ಜನರು ಭಯಪಡಬಾರದು ಎಂದು ಸೂಚಿಸಿದ್ದಾರೆ.

ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಸ್ತೆಗಳೆಲ್ಲಾ ನದಿಗಳಂತಾಗಿವೆ. ಹಲವಾರು ಮನೆಗೋಡೆಗಳು ಕುಸಿದು ಬಿದ್ದಿವೆ. ಮರಗಳು ನೆಲಕ್ಕುರುಳಿವೆ. ಕುಂಭದ್ರೋಣ ಮಳೆಗೆ 40 ಜನ ಬಲಿಯಾಗಿದ್ದಾರೆ.

ಮಂಗಳೂರಿನಲ್ಲಿ ಹಲವಾರು ಮನೆಗಳು ಜಲಾವೃತವಾಗಿದ್ದು ,ಮನೆಯೊಂದರ ಬಳಿ ಇದ್ದ ಆವರಣ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ಶಾಲಾ ಬಾಲಕಿ ನೀರುಪಾಲಾಗಿದ್ದಾಳೆ. ಸಿಡಿಲು ಬಡಿದು ಬೈಲೂರು ಗ್ರಾಮ ಪಂಚಾಯತ್‌ ಸದಸ್ಯೆ ಮೃತಪಟ್ಟಿದ್ದಾರೆ. ಕೊಡಿಯಲ್‌ಬೈಲ್‌ನ ಮನೆಯೊಂದಕ್ಕೆ ನೀರು ನುಗ್ಗಿ ಹಿರಿಯ ಮಹಿಳೆಯೊಬ್ಬರು ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಪಾದೆಬೆಟ್ಟು ಪಟ್ಲ ನೀರಿನ ಸೆಳೆತಕ್ಕೆ ಸಿಲುಕಿ ಉಮೇಶ್‌ ಆಚಾರ್ಯ-ಆಶಾ ಆಚಾರ್ಯ ದಂಪತಿಯ 9 ವರ್ಷದ ಪುತ್ರಿ ನಿಧಿ ಆಚಾರ್ಯ ನೀರುಪಾಲಾಗಿದ್ದಾಳೆ. ಕಾರ್ಕಳ ತಾಲೂಕಿನ ಬೈಲೂರು ಗ್ರಾಮ ಪಂಚಾಯಿತಿ ಸದಸ್ಯೆ 35ರ ಪ್ರಾಯದ ಶೀಲ ಸಿಡಿಲಿಗೆ ಬಲಿಯಾಗಿದ್ದಾರೆ. ಮಂಗಳೂರು ನಗರದ ಕರ್ನಾಟಕ ಪಾಲಿಟೆಕ್ನಿಕ್‌ ಸಮೀಪದ ಉದಯನಗರ ಬಳಿ ತನ್ನ ಮನೆಯ ಹಿಂಬದಿಯ ಧರೆ ಕುಸಿದು ಉದಯನಗರದ ನಿವಾಸಿ ಕೃಷ್ಣಪ್ಪ ಅವರ ಪತ್ನಿ 60 ವರ್ಷದ ಮೋಹಿನಿ ಮೃತಪಟ್ಟಿದ್ದಾರೆ. ಕೊಡಿಯಾಲ್‌ಬೈಲ್‌ ಕಂಬಧಿಳಧಿ ವಾರ್ಡ್‌ ಪಿವಿಎಸ್‌ ಕಲಾಕುಂಜ ಸಮೀಪದಲ್ಲಿ 80 ವರ್ಷದ ವೃದ್ಧೆ ಮುತ್ತಾಬಾಯಿ ಅಬ್ಬರದ ಮಳೆಯ ಕಾರಣದಿಂದಾಗಿ ಮೃತಪಟ್ಟಿದ್ದಾರೆ.

ಚಿತ್ರ ನಿರ್ದೇಶಕ ಸಂತೋಷ್‌ ಶಟ್ಟಿ ಮಳೆಯ ರೌದ್ರ ನರ್ತನಕ್ಕೆ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಜಲಪಾತಕ್ಕೆ ಫೋಟೋ ಶೂಟ್ ಗೆಂದು ತೆರಳಿದ್ದ ಸಮಯದಲ್ಲಿ, ಅಚಾನಕ್ಕಾಗಿ ಕಾಲುಜಾರಿ ಬಿದ್ದು ಸಂತೋಷ್‌ ಶೆಟ್ಟಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಅವರ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ರಸ್ತೆಯುದ್ದಕ್ಕೂ ಮಳೆ ನೀರು ತುಂಬಿ ಹರಿಯುತ್ತಿರುವ ಕಾರಣ ದೋಣಿಗಳನ್ನು ಬಳಸಿ ಸಂಚರಿಸಲಾಗುತ್ತಿದೆ. ಹಲವೆಡೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕೆಲವು ದ್ವಿಚಕ್ರ ವಾಹನಗಳು ಮಳೆನೀರಿನಲ್ಲಿ ಕೊಚ್ಚಿಹೋಗಿವೆ. ಇಂತಹ ಮಳೆ ಮಂಗಳೂರಿಗೆ ಹೊಸದೇನಲ್ಲ. ಆದರೆ ಇದೇ ಮೊದಲ ಭಾರಿ ಮಂಗಳೂರು ಮುಂಗಾರು ಮಳೆಗೆ ನಡುಗಿದೆ. ಎಗ್ಗಿಲ್ಲದೆ ಬೆಳಯುತ್ತಿರುವ ನಗರ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಎದ್ದು ನಿಲ್ಲುತ್ತಿರುವ ಕಟ್ಟಡಗಳು ಸುತ್ತಮುತ್ತಲಿದ್ದ ಹಳ್ಳಕೊಳ್ಳಗಳ ಜಾಗವನ್ನೆಲ್ಲಾ ಆಕ್ರಮಿಸಿ ನೀರು ಹರಿಯಲು ಜಾಗವಿಲ್ಲಂತದಾಗಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಮಂಗಳೂರಿನ ಮಹಾಮಳೆ ಕೇವಲ ಸುದ್ದಿ ವಾಹಿನಗಳಲ್ಲಷ್ಟೇ ಅಲ್ಲದೇ ಸಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ಟ್ವಿಟ್ಟಿಗರು ಮಂಗಳೂರಿನ ಹಲವಾರು ಸಂಗತಿಗಳನ್ನು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ.

ಅಬ್ಬರಿಸಿ ಬಿದ್ದ ಮಹಾಮಳೆಗೆ ಸಮುದ್ರದಲ್ಲಿರಬೇಕಿದ್ದ ದೊಡ್ಡ ತಿಮಿಂಗಿಲವೊಂದು ಮಂಗಳೂರಿನ ರಸ್ತೆಗೆ ಬಂದು ಬಿದ್ದಿದೆ.

ರಸ್ತೆಯುದ್ಧಕ್ಕೂ ಹರಿಯುತ್ತಿದ್ದ ನೀರಿನಲ್ಲಿ ಹಾವೊಂದು ಕಂಡುಬಂದಿದ್ದು, ಆ ವೀಡಿಯೋವನ್ನು ಪ್ರಶಾಂತ್‌ ಭಟ್‌ ಎನ್ನುವವರು ಹಂಚಿಕೊಂಡಿದ್ದಾರೆ.

ಸೊಂಟದವರೆಗೂ ತುಂಬಿದ್ದ ನೀರಿನಲ್ಲಿ ಶಾಲಾ ಮಕ್ಕಳನ್ನು ಮನೆಗೆ ತಲುಪಿಸಲು ದೋಣಿಗಳನ್ನು ಬಳಸಲಾಯಿತು. ಮೊದಲ ಬಾರಿಗೆ ದೋಣಿಯಲ್ಲಿ ಮನೆ ಕಡೆ ಹೊರಟ ಮಕ್ಕಳ ಮಂದಹಾಸವನ್ನು ಈ ವಿಡಿಯೋ ಹಿಡಿದಿಟ್ಟಿದೆ.

ಮಂಗಳೂರಿನ ಸುತ್ತಮುತ್ತಲಿನ ಹಳ್ಳಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಬೋರ್ಗರೆದು ಹರಿಯುತ್ತಿರುವ ನೀರು ಪ್ರವಾಸವನ್ನು ಸೃಷ್ಟಿಸಿದೆ.

ನೀರಿನ ಮಧ್ಯೆ ಸಿಲುಕಿದ ವಾಹನಗಳನ್ನು ಹೊರತರಲು ಹರಸಾಹಸ ಪಟ್ಟ ವಾಹನಸವಾರರು.

ಮಂಗಳವಾರ ಬೆಳಗ್ಗೆ 8:30ರಿಂದ ಬುಧವಾರ ಬೆಳಗ್ಗೆ 8:30ವರಗೆ ಕರ್ನಾಟಕದ ಯಾವ್ಯಾವ ಭಾಗ ಎಷ್ಟೆಷ್ಟು ಮಳೆ ಪಡೆದಿದೆ ಎನ್ನುವುದನ್ನು ಈ ಚಿತ್ರ ಸೂಚಿಸುತ್ತದೆ.