‘ಶಾಡೋ ಸಿಎಂ ಯಡಿಯೂರಪ್ಪ’: ಸಮ್ಮಿಶ್ರ ಸರಕಾರಕ್ಕೆ  ಹೀಗೊಬ್ಬ ವಿರೋಧ ಪಕ್ಷದ ನಾಯಕ!
ರಾಜ್ಯ

‘ಶಾಡೋ ಸಿಎಂ ಯಡಿಯೂರಪ್ಪ’: ಸಮ್ಮಿಶ್ರ ಸರಕಾರಕ್ಕೆ ಹೀಗೊಬ್ಬ ವಿರೋಧ ಪಕ್ಷದ ನಾಯಕ!

ಸರಕಾರ ಅಸ್ಥಿತ್ವಕ್ಕೆ ಬಂದ ಮೊದಲ ದಿನವೇ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿರುವ ಯಡಿಯೂರಪ್ಪ ಸಾಲ ಮನ್ನಾ ವಿಚಾರವನ್ನು ಮುಂದಿಟ್ಟು ಸದನದ ಹೊರಗೂ ಹೋರಾಟಕ್ಕೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರ 24 ಗಂಟೆಯೊಳಗೆ ರೈತರ ಸಾಲಮನ್ನಾ ಘೋಷಣೆ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಕರೆ ನೀಡಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಈ ಮೂಲಕ ಶುಕ್ರವಾರ ವಿಶ್ವಾಸಮತದ ಮೂಲದ ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂದ ಸಮ್ಮಿಶ್ರ ಸರಕಾರಕ್ಕೆ ಪ್ರಬಲ ವಿರೋಧ ಪಕ್ಷದ ನಾಯಕರೊಬ್ಬರು ಸಿಕ್ಕಂತಾಗಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷಕ್ಕೆ ಇರುವಷ್ಟೆ ಮಹತ್ವ ವಿರೋಧ ಪಕ್ಷಗಳಿಗೂ ಇರುತ್ತದೆ. ಆಡಳಿತ ಪಕ್ಷದ ನಾಯಕ ಮುಖ್ಯಮಂತ್ರಿ ಎಂದು ಕರೆಸಿಕೊಂಡರೆ ವಿರೋಧ ಪಕ್ಷದ ನಾಯಕರು ಶಾಡೋ ಸಿಎಂ ಎಂದು ಕರೆಸಿಕೊಳ್ಳುತ್ತಾರೆ.

ಸರಕಾರ ಅಸ್ಥಿತ್ವಕ್ಕೆ ಬಂದ ಮೊದಲ ದಿನವೇ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿರುವ ಯಡಿಯೂರಪ್ಪ ಸಾಲ ಮನ್ನಾ ವಿಚಾರವನ್ನು ಮುಂದಿಟ್ಟು ಸದನದ ಹೊರಗೂ ಹೋರಾಟಕ್ಕೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ.

ವಿಶ್ವಾಸಮತ ಯಾಚನೆ ಪ್ರಸ್ತಾವ ಮೇಲೆ ವಿಧಾನಸಭೆಯಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, “ಜೆಡಿಎಸ್ ಪ್ರಣಾಳಿಕೆಯಲ್ಲಿ ಹೇಳಿರುವಂತೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡಬೇಕು. ಅದಕ್ಕಾಗಿ 24 ಗಂಟೆಗಳ ಸಮಯಾವಕಾಶ ಇದೆ. ಒಂದು ವೇಳೆ ಸಾಲ ಮನ್ನಾ ಆಗದಿದ್ದರೆ ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು,’’ ಎಂದಿದ್ದಾರೆ.

ಸಾಲ ಮನ್ನಾ ಎಂಬ ಅಸ್ತ್ರ?:

ರೈತರ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ‘ಸದ್ಯಕ್ಕಿಲ್ಲ’ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, “ರೈತರ ಬೆಳೆ ಸಾಲ ಮನ್ನಾ ವಿಚಾರದಲ್ಲಿ ನಮ್ಮ ಬಳಿ ನೀಲನಕ್ಷೆ ಇದೆ. ಒಂದೇ ಬಾರಿಗೆ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಸಮ್ಮಿಶ್ರ ಸರಕಾರವಾಗಿರುವುದರಿಂದ ಮಿತ್ರ ಪಕ್ಷದ ಬೆಂಬಲವೂ ಅಗತ್ಯವಿದೆ,’’ ಎಂದಿದ್ದರು.

ಈ ಮೂಲಕ ಸರಕಾರ ಸದ್ಯಕ್ಕೆ ರೈತರ ಸಾಲ ಮನ್ನಾದ ವಿಚಾರವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ಸ್ವಷ್ಟಪಡಿಸಿದ್ದರು. ಇದೀಗ ಬಿಜೆಪಿ ಅದೇ ವಿಚಾರವಾಗಿ ಹೋರಾಟಕ್ಕೆ ಅಣಿಯಾಗುತ್ತಿರುವುದು ಸಹಜವಾಗಿಯೇ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಕಾಣದ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ಹಣಾಹಣಿಗೆ ವೇದಿಕೆ ಸಜ್ಜಾಗುವ ಸಾಧ್ಯತೆಯನ್ನು ಮುಂದೆ ಮಾಡಿದೆ.

ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದು ಅಪಾರ ಅನುಭವ ಹೊಂದಿರುವ ಬಿ. ಎಸ್. ಯಡಿಯೂರಪ್ಪ ಸಾಲ ಮನ್ನಾವನ್ನೇ ಆರಂಭಿಕ ಅಸ್ತ್ರವಾಗಿ ಆಡಳಿತ ಸರಕಾರದ ವಿರುದ್ಧ ಬಳಸಿಲು ತೀರ್ಮಾನಿಸಿದಂತಿದೆ. 1998 ಹಾಗೂ 2004ರಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನವರು ನಿಭಾಯಿಸಿದ್ದರು.

ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು ಜೆಡಿಎಸ್ ಚುನಾವಣೆಗೂ ಮುನ್ನ ನೀಡಿದ ಪ್ರಣಾಳಿಕೆಯನ್ನು ನೆನಪಿಸಿದರು. "ಸಾಲಮನ್ನಾ ಬಗ್ಗೆ ರಾಜ್ಯದ ರೈತರು ವಿಶ್ವಾಸ ಇಟ್ಟುಕೊಂಡಿದ್ದು, ಮನ್ನಾ ಮಾಡುವ ಮೂಲಕ ಅವರ ನಂಬಿಕೆ ಉಳಿಸಿಕೊಳ್ಳಬೇಕಾಗಿದೆ,’’ ಎಂದವರು ಆಗ್ರಹಿಸುವ ಮೂಲಕ ಸಮ್ಮಿಸ್ರ ಸರಕಾರಕ್ಕೆ ಆರಂಭದಿಂದಲೇ ವಿರೋಧ ಪಕ್ಷದ ಪ್ರತಿಭಟನೆಯ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಆಡಳಿತದ ವಾಚ್‌ ಡಾಗ್‌:

ಆಡಳಿತ ನಡೆಸುವಾಗ ಪ್ರಬಲ ವಿರೋಧ ಪಕ್ಷ ಇಲ್ಲದಿದ್ದರೆ ಪ್ರಜಾಪ್ರಭುತ್ವದಲ್ಲಿ ಅಧಿಕಾರದ ಸಮತೋಲನ ಕಷ್ಟಸಾಧ್ಯ. ಈ ಹಿಂದೆ, ಸಿದ್ದರಾಮಯ್ಯ ಅವಧಿಯಲ್ಲಿ ಕರ್ನಾಟಕ ಅಂತಹದೊಂದು ಪ್ರಬಲ ವಿರೋಧ ಪಕ್ಷವನ್ನು ಕಾಣಲು ಸಾಧ್ಯವಾಗಿರಲಿಲ್ಲ. ಆಗ ವಿಧಾನಸಭೆಯಲ್ಲಿ ವಿರೋಧ ನಾಯಕರಾಗಿ ಬಿಜೆಪಿಯ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಇದ್ದರಾದರೂ ಯಾವ ವಿಚಾರದಲ್ಲಿಯೂ ತಾರ್ಕಿಕ ಹೋರಾಟ ನಡೆಸಲೇ ಇಲ್ಲ. ಸದನದ ಒಳಗೆ ಹಾಗೂ ಹೊರಗೆ ಅವರ ನಡವಳಿಕೆ ವಿರೋಧ ಪಕ್ಷದ ಅಸ್ಥಿತ್ವವನ್ನು ಅಣಕಿಸುವಂತಿದ್ದವು.

ಇದ್ದುದರಲ್ಲಿ ಕುಮಾರಸ್ವಾಮಿ, ದುಬಾರಿ ವಾಚ್‌ನಂತಹ ವಿಚಾರಗಳಲ್ಲಿ ಆಡಳಿತ ಸರಕಾರದ ವಿರುದ್ಧ ಗುಡುಗಿದರಾದರೂ ಕೊನೆಯ ಹಂತದಲ್ಲಿ ತಣ್ಣಗಾಗುತ್ತಿದ್ದರು. ಇನ್ನು, ವಿಧಾನ ಪರಿಷತ್‌ನಲ್ಲಿ ಬಿಜೆಪಿ ಇನ್ನೊಬ್ಬ ಹಿರಿಯ ನಾಯಕ ಕೆ. ಎಸ್. ಈಶ್ವರಪ್ಪ ವಿರೋಧ ಪಕ್ಷದ ನಾಯಕರಾಗಿದ್ದರೂ, ಅಲ್ಲಿಯೂ ಹೇಳಿಕೊಳ್ಳುವಂತಹ ಪಾತ್ರ ಕಾಣಿಸಿರಲಿಲ್ಲ.

ಆದರೆ, ಈ ಬಾರಿಯ ಪರಿಸ್ಥಿತಿ ಭಿನ್ನವಾಗುವ ಸಾಧ್ಯತೆಗಳಿವೆ. ಬಿ. ಎಸ್. ಯಡಿಯೂರಪ್ಪ ಮತ್ತೆ ವಿಧಾನಸಭೆಗೆ ವಿರೋಧ ಪಕ್ಷದ ನಾಯಕರಾಗಿ ಕಾಲಿಟ್ಟಿದ್ದಾರೆ. ಅವರಿಗೆ ಆಡಳಿತ ನಡೆಸುವುದಕ್ಕಿಂತ ವಿರೋಧ ಪಕ್ಷದಲ್ಲಿ ಕುಳಿತುಕೊಂಡ ಅನುಭವ ಹೆಚ್ಚಿದೆ. ಈಗ ಮತ್ತೊಮ್ಮೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಅವರು ಸರಕಾರವನ್ನು ತರಾಟೆ ತೆಗೆದುಕೊಳ್ಳುವ ಮೂಲಕ ಜನರ ದನಿಯಾಗಿ ವಿರೋಧ ಪಕ್ಷದ ಕೆಲಸವನ್ನು ಅವರು ನಿರ್ವಹಿಸಬೇಕಿದೆ.