ಕಾವೇರಿ ತೀರ್ಪಿತ್ತ ಸಿಜೆಐ ವಿರುದ್ಧ ದೂರು; ಮಂಡ್ಯದ ರಾಜಣ್ಣನಿಗೆ 6 ತಿಂಗಳ ಜೈಲು
ರಾಜ್ಯ

ಕಾವೇರಿ ತೀರ್ಪಿತ್ತ ಸಿಜೆಐ ವಿರುದ್ಧ ದೂರು; ಮಂಡ್ಯದ ರಾಜಣ್ಣನಿಗೆ 6 ತಿಂಗಳ ಜೈಲು

ಕಾವೇರಿ ನೀರು ಹಂಚಿಕೆ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 3 ಮಂದಿ ನ್ಯಾಯಮೂರ್ತಿಗಳು, ಇಬ್ಬರು ಮುಖ್ಯಮಂತ್ರಿಗಳು, ಕೇಂದ್ರ ನೀರಾವರಿ ಇಲಾಖೆ ಕಾರ್ಯದರ್ಶಿ ವಿರುದ್ಧ ರಾಜಣ್ಣ ದೂರು ದಾಖಲಿಸಿದ್ದರು.

ಕಾವೇರಿ ನೀರು ಹಂಚಿಕೆ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಮತ್ತು ಇಬ್ಬರು ನ್ಯಾಯಮೂರ್ತಿಗಳ ವಿರುದ್ಧ ದೂರು ದಾಖಲಿಸಿದ್ದ ಮಂಡ್ಯದ ಎಂ.ಡಿ. ರಾಜಣ್ಣ ಎಂಬುವರಿಗೆ ಕರ್ನಾಟಕ ಹೈಕೋರ್ಟ್‌ ನ್ಯಾಯಾಂಗ ನಿಂದನೆ ಆರೋಪದಡಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ ತೀರ್ಪಿನಿಂದ ಕರ್ನಾಟಕದ ಜನತೆಗೆ ಅನ್ಯಾಯವಾಗಿದೆ ಎಂದು ಕೋಪಗೊಂಡಿದ್ದ ರಾಜಣ್ಣ, ಪ್ರಕರಣದ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಒಟ್ಟು ಮೂರು ಮಂದಿ ನ್ಯಾಯಮೂರ್ತಿಗಳ ವಿರುದ್ಧ ಮಂಡ್ಯದ ಜಿಲ್ಲಾ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಿದ್ದರು.

ಕಾವೇರಿ ತೀರ್ಪು ಪ್ರಕಟಿಸಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್‌, ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಮತ್ತು ಉದಯ್‌ ಲಲಿತ್‌ ಅವರ ಜತೆಗೆ ಅಂದಿನ ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು, ಕೇಂದ್ರ ನೀರಾವರಿ ಇಲಾಖೆಯ ಕಾರ್ಯದರ್ಶಿ ಹಾಗೂ ರಾಜ್ಯ ನೀರಾವರಿ ಸಚಿವರನ್ನೂ ಈ ಪ್ರಕರಣದ ಆಪಾದಿತರೆಂದು ರಾಜಣ್ಣ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

“ಅಂತರ ರಾಜ್ಯ ನೀರು ಹಂಚಿಕೆ ವಿವಾದಗಳಲ್ಲಿ ನ್ಯಾಯ ತೀರ್ಮಾನ ಮಾಡಲು ಸುಪ್ರೀಂಕೋರ್ಟ್‌ಗೆ ಅಧಿಕಾರವಿಲ್ಲ. ಇಂತಹ ಪ್ರಕರಣಗಳಲ್ಲಿ ಕಾನೂನು ರೂಪಿಸಲು ಸಂಸತ್ತಿಗೆ ಮಾತ್ರ ಅಧಿಕಾರವಿದೆ. ಈ ವಿಚಾರ ಗೊತ್ತಿದ್ದರೂ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ನೀರಾವರಿ ಸಚಿವರು ಹಾಗೂ ಕೇಂದ್ರ ನೀರಾವರಿ ಕಾರ್ಯದರ್ಶಿಯವರು ಸುಪ್ರೀಂಕೋರ್ಟ್‌ನ ಮೊರೆ ಹೋದರು. ಇದು ಕರ್ನಾಟಕದ ಜನತೆಗೆ ಮಾಡಿದ ದ್ರೋಹ” ಎಂದು ರಾಜಣ್ಣ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.

“ಕರ್ನಾಟಕದಿಂದ ತಮಿಳುನಾಡಿಗೆ 10 ದಿನಗಳ ಕಾಲ ಪ್ರತಿ ದಿನ 15 ಸಾವಿರ ಕ್ಯುಸೆಕ್ಸ್‌ ನೀರು ಬಿಡಲು ಸುಪ್ರೀಂಕೋರ್ಟ್‌ ಆದೇಶ ನೀಡಿದ್ದು ಕಾನೂನು ಬಾಹಿರ” ಎಂದು ವಾದಿಸಿದ್ದ ರಾಜಣ್ಣ ಸುಪ್ರೀಂಕೋರ್ಟ್‌ನ ಈ ತೀರ್ಪು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 219ರ ಪ್ರಕಾರ ಅಪರಾಧ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

‘ನ್ಯಾಯಾಂಗದಲ್ಲಿರುವ ಯಾವುದೇ ಜನಸೇವಕ ಭ್ರಷ್ಟನಾಗಿ ಕಾನೂನಿಗೆ ವಿರುದ್ಧವಾಗಿ ವರದಿ, ಆದೇಶ, ತೀರ್ಪು ನೀಡಿದರೆ ಅಂಥ ವ್ಯಕ್ತಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆಯ ಜತೆಗೆ ದಂಡ ವಿಧಿಸಬಹುದು’ ಎನ್ನುತ್ತದೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 219.

ಮಂಡ್ಯ ಜಿಲ್ಲಾ ನ್ಯಾಯಾಲಯ ರಾಜಣ್ಣ ಅವರ ಈ ಅರ್ಜಿಯನ್ನು ವಜಾಗೊಳಿಸಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳುವಂತೆ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಕೆಳ ನ್ಯಾಯಾಲಯದ ಮನವಿಯನ್ನು ಪರಿಗಣಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್‌, ನ್ಯಾಯಾಂಗ ನಿಂದನೆ ಆರೋಪಕ್ಕಾಗಿ ರಾಜಣ್ಣ ಅವರಿಗೆ ಗುರುವಾರ ಶಿಕ್ಷೆ ವಿಧಿಸಿದೆ.

“ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಇನ್ನಿಬ್ಬರು ನ್ಯಾಯಮೂರ್ತಿಗಳು ಭ್ರಷ್ಟಾಚಾರದಿಂದ ತೀರ್ಪು ನೀಡಿದ್ದಾರೆ ಎಂದು ರಾಜಣ್ಣ ಖಾಸಗಿ ಅರ್ಜಿಯಲ್ಲಿ ದೂರಿದ್ದಾರೆ. ಇದು ನ್ಯಾಯಾಂಗದ ನಿಂದನೆಯಾಗಿದೆ” ಎಂದು ನ್ಯಾಯಮೂರ್ತಿಗಳಾದ ಆರ್‌.ಬಿ. ಬೂದಿಹಾಳ್ ಮತ್ತು ಕೆ.ಎಸ್‌. ಮುದ್ಗಲ್‌ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

“ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೂಲಕ ನ್ಯಾಯಾಂಗ ವ್ಯವಸ್ಥೆಯ ಘನತೆಯನ್ನು ಕುಗ್ಗಿಸುವ ಪ್ರಯತ್ನ ನಡೆಸಲಾಗಿದೆ. ಅರ್ಜಿಯಲ್ಲಿ ಮಾಡಿರುವ ಆರೋಪಗಳು ನ್ಯಾಯದಾನ ಪ್ರಕ್ರಿಯೆಯ ಮಧ್ಯ ಪ್ರವೇಶಿಸುವಂಥ ಅಪರಾಧ” ಎಂದಿರುವ ನ್ಯಾಯಪೀಠ ರಾಜಣ್ಣ ಅವರಿಗೆ 6 ತಿಂಗಳ ಸಾಧಾರಣ ಸಜೆ ಹಾಗೂ 2000 ರೂಪಾಯಿ ದಂಡ ವಿಧಿಸಿದೆ.