samachara
www.samachara.com
‘ಕರ್-ನಾಟಕ’ಕ್ಕೆ ವಾರಾಂತ್ಯದಲ್ಲಿ ತೆರೆ: ಸದನದಲ್ಲಿ ಶನಿವಾರದ ಬೆಳವಣಿಗೆಗಳು
ರಾಜ್ಯ

‘ಕರ್-ನಾಟಕ’ಕ್ಕೆ ವಾರಾಂತ್ಯದಲ್ಲಿ ತೆರೆ: ಸದನದಲ್ಲಿ ಶನಿವಾರದ ಬೆಳವಣಿಗೆಗಳು

ಇಂತಹದೊಂದು ಘಟ್ಟವನ್ನು ತಲುಪಿದ ಕರ್ನಾಟಕದ ರಾಜಕೀಯ ಶನಿವಾರ ಬೆಳಗ್ಗೆಯಿಂದಲೇ ಹಲವು ಕುತೂಹಲಕಾರಿ ಸಂಗತಿಗಳಿಗೆ ಸಾಕ್ಷಿಯಾಯಿತು. ಒಟ್ಟಾರೆ, ವಾರಾಂತ್ಯದಲ್ಲಿ ನಡೆದ ಬೆಳವಣಿಗೆಗಳ ಮೇಲೊಂದು ಪಕ್ಷಿನೋಟ ಇಲ್ಲಿದೆ.

govindaby chaguppe

govindaby chaguppe

ನಾಲ್ಕು ದಿನಗಳ ‘ಶಾಸನಬದ್ಧ ಹೈಡ್ರಾಮ’ಕ್ಕೆ ವಾರಾಂತ್ಯದಲ್ಲಿ ತೆರೆ ಬಿದ್ದಿದೆ. ಕರ್ನಾಟಕವನ್ನು ಯಾವ ಸರ್ಕಾರ ಆಳಬೇಕು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲವಾದರೂ, ಬಿಜೆಪಿಯಂತೂ ಆಳಬಾರದು ಎಂಬುದು ಖಾತ್ರಿಯಾಗಿದೆ. ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವ ಪ್ರಬಲ ನಂಬಿಕೆಯೊಂದಿಗೆ ಮುಖ್ಯಮಂತ್ರಿಯಾಗಿ ತರಾತುರಿಯಲ್ಲಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ.

ಇಂತಹದೊಂದು ಘಟ್ಟವನ್ನು ತಲುಪಿದ ಕರ್ನಾಟಕದ ರಾಜಕೀಯ ಶನಿವಾರ ಬೆಳಗ್ಗೆಯಿಂದಲೇ ಹಲವು ಕುತೂಹಲಕಾರಿ ಸಂಗತಿಗಳಿಗೆ ಸಾಕ್ಷಿಯಾಯಿತು. ಒಟ್ಟಾರೆ, ವಾರಾಂತ್ಯದಲ್ಲಿ ನಡೆದ ಬೆಳವಣಿಗೆಗಳ ಮೇಲೊಂದು ಪಕ್ಷಿನೋಟ ಇಲ್ಲಿದೆ.

ಸುಪ್ರೀಂ ಸುತ್ತಿಗೆ:

ಶನಿವಾರ 4 ಗಂಟೆಯೊಳಗೆ ವಿಶ್ವಾಸ ಮತಯಾಚನೆ ಮುಗಿಯಬೇಕು ಎಂಬ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿಯೇ ಶನಿವಾರದ ರಾಜಕೀಯ ಚಟುವಟಿಕೆಗಳು ನಡೆದವು.

ಬಿಜೆಪಿ ತನ್ನ ಶಾಸಕರನ್ನು ಸೆಳೆಯಬಹುದು ಎಂಬ ಆತಂಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ತಮ್ಮ ಶಾಸಕರನ್ನು ಈಗಲ್ ಟನ್ ಹಾಗೂ ಶಾಂಗ್ರೀಲಾ ಹೊಟೆಲ್ ಗಳಿಂದ ಹೈದ್ರಾಬಾದ್ ನ ರೆಸಾರ್ಟ್‌ಗಳಿಗೆ ಸಾಗಿಸಿದ್ದವು. ಬೆಂಗಳೂರಿಗೆ ಹೊರಡುವುದಕ್ಕೂ ಮೊದಲು ಬೆಳಿಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆರಿಸಲಾಯಿತು. ಅವರು, ‘ಬಿಜೆಪಿ ಮತ ಹಾಕಿದರೆ ಆಗುವ ತೊಂದರೆಗಳನ್ನು ಬಿಡಿಸಿ ಹೇಳಿ ಎಲ್ಲರೂ ಜೆಡಿಎಸ್ ನೇತೃತ್ವದ ಸರಕಾರವನ್ನೇ ಬೆಂಬಲಿಸಬೇಕು’ ಎಂದು ಶಾಸಕರಿಗೆ ಕಿವಿ ಮಾತು ಹೇಳಿದರು.

ತಲಂಗಾಣ ಪೊಲೀಸ್ ಕಣ್ಗಾವಲಿನಲ್ಲಿ ಶಾಸಕರನ್ನು ನಾಲ್ಕು ಬಸ್‌ಗಳ್ಲಿ ಹೈದ್ರಾಬಾದಿನಿಂದ ಕರ್ನಾಟಕದ ಗಡಿವರೆಗೆ ಕರೆತರಲಾಯಿತು. ಅಲ್ಲಿಂದ ಮುಂದೆ ಸ್ಥಳೀಯ ಪೊಲೀಸರ ಬೆಂಗಾವಲಿನಲ್ಲಿ ರಾಜಧಾನಿಗೆ ತಂದು ಇಳಿಸಲಾಯಿತು.

ಈ ವೇಳೆಗೆ, ತಮ್ಮ ನಿವಾಸ ಡಾಲರ್ಸ್ ಕಾಲೋನಿಯ ‘ಧವಳಗಿರಿ’ಯಲ್ಲಿದ್ದ ಸಿ.ಎಂ.ಯಡಿಯೂರಪ್ಪ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಹಾಗೂ ನಗರ ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್‌ರನ್ನು ಕರಿಸಿಕೊಂಡರು. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದವು. ಪೊಲೀಸ್ ಭದ್ರತೆ ಸೇರಿದಂತೆ ಯಾವುದೇ ತೀರ್ಮಾನಗಳನ್ನು ಕೈಗೊಳ್ಳಲು ಸುಪ್ರೀಂ ನಿಷೇಧವಿದ್ದರೂ, ಯಡಿಯೂರಪ್ಪ ಯಾಕಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಕರೆಸಿಕೊಂಡರು ಎಂಬ ಪ್ರಶ್ನೆ ಮೂಡಿತ್ತು.

ವಿಧಾನಸೌಧದ ಸುತ್ತ ಪೊಲೀಸ್ ಬಲೆ:

ಈ ಹೊತ್ತಿಗೆ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ನೇತೃತ್ವದಲ್ಲಿ ನಗರ ಪೊಲೀಸ್ ಕಮೀಶನರ್ ಟಿ. ಸುನೀಲ್ ಕುಮಾರ್ ಸೆಕ್ಷನ್ ವಿಧಾನಸೌಧದ ಸುತ್ತ 144 ಜಾರಿಗೊಳಿಸಿದ್ದರು. ಶಕ್ತಿಸೌಧದ ಸುತ್ತ 3 ಸಾವಿರ ಪೊಲೀಸರ ನಿಯೋಜನೆ ಮಾಡಿ ಭದ್ರತೆ ಕೈಗೊಂಡಿದ್ದರು. ಅಲ್ಲದೆ 2 ಕಿಲೋಮೀಟರ್ ಸುತ್ತ ಎಲ್ಲ ರೀತಿಯ ವಾಹನಗಳಿಗೂ ನಿರ್ಭಂಧ ವಿಧಿಸಲಾಗಿತ್ತು. ವಿಧಾನಸಭೆಯ ಒಳಗೂ ಸುಮಾರು ನೂರು ಪೊಲೀಸರು ಮುಫ್ತಿಯಲ್ಲಿದ್ದರು.

ಇನ್ನೊಂದೆಡೆ ವಿಧಾನಸಭೆ ಕಾರ್ಯದರ್ಶಿ ವಿಶ್ವಾಸ ಮತ ಯಾಚನೆಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಹಂಗಾಮಿ ಸ್ಪೀಕರ್ ಕೆ. ಜಿ. ಬೋಪಯ್ಯ ಸರಿಯಾದ ಸಮಯಕ್ಕೆ ವಿಧಾನಸಭೆಗೆ ಆಗಮಿಸಿ ಎಲ್ಲ 222 ಶಾಸಕರಿಗೆ ಪ್ರಮಾಣ ವಚನ ಭೋದಿಸುವುದಕ್ಕೆ ಪ್ರಕ್ರಿಯೆ ಆರಂಭಿಸಿದರು.

ಸದನದೊಳಗೆ ಸಮಯಕ್ಕೆ ಸರಿಯಾಗಿ:

ಬೆಳಿಗ್ಗೆ 11 ಗಂಟೆಗೆ ಬಿಜೆಪಿ ಶಾಸಕರು ವಿಧಾನಭೆಗೆ ಆಗಮಿಸಿದರು. ಮತ್ತೊಂದೆಡೆ ಬಿ.ಎಸ್.ಯಡಿಯೂರಪ್ಪ ಅವರು ಪೂಜೆ ಪುನಸ್ಕಾರ ಮುಗಿಸಿ ಅದೇ ವೇಳೆಗೆ ಶಕ್ತಿಸೌಧಕ್ಕೆ ಕಾಲಿಟ್ಟರು. ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧಗಳ ನಡುವೆಯೂ ಸಭಾಧ್ಯಕ್ಷರಾಗಿ ನೇಮಕಗೊಂಡಿದ್ದ ಕೆ. ಜಿ. ಬೋಪಯ್ಯ ಅವರು ತಲಾ ಮೂರು ಮೂರು ಮಂದಿಗೆ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇದರ ನಡುವೆ ಸುಪ್ರಿಂ ಕೋರ್ಟ್‌ ಸ್ಪೀಕರ್ ಬದಲಾವಣೆಗೆ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿತು. ಹೀಗಾಗಿ ಮಧ್ಯಾಹ್ನ 2 ಗಂಟೆಗೆ ಬೋಪಯ್ಯ ಸರಾಗವಾಗಿ ಕಲಾಪವನ್ನು ನಡೆಸಿ, ಮಧ್ಯಾಹ್ನ 3.30ಕ್ಕೆ ಮುಂದೂಡಿದರು.

ಮಧ್ಯಾಹ್ನ ಕಲಾಪ ಆರಂಭವಾಗುವ ಹೊತ್ತಿಗೆ, ಗೈರಾಗಿದ್ದ ಕಾಂಗ್ರೆಸ್‌ ಶಾಸಕರು ಬಂದು ಸೇರಿಕೊಳ್ಳುತ್ತಿದ್ದಂತೆ ಬಿಜೆಪಿ ಉತ್ಸಾಹ ಮಂಕಾಯಿತು.ಆದರೂ ಟಿವಿ ಸ್ಟುಡಿಯೋಗಳಲ್ಲಿ ಕುಳಿತಿದ್ದ ಬಿಜೆಪಿ ವಕ್ತಾರರು ತಾವು ಬಹುಮತ ಸಾಬೀತು ಮಾಡುವುದು ಗ್ಯಾರಂಟಿ ಎಂದೇ ವಾದಿಸುತ್ತಿದ್ದರು.

ಆಡಿಯೋ ರಿಲೀಸರ್ ಆದ ಉಗ್ರಪ್ಪ:

ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಸಾಬೀತು ಮಾಡುತ್ತದೆ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಳ್ತಿದ್ದರೆ, ಇತ್ತ ಕಾಂಗ್ರೆಸ್ ನಾಯಕ ಉಗ್ರಪ್ಪ ಒಂದಾದ ಮೇಲೊಂದರಂತೆ ಆಡಿಯೋಗಳನ್ನು ಬಿಡುಗಡೆ ಮಾಡುತ್ತಾ ಹೋದರು. ಶುಕ್ರವಾರ ಕಾಂಗ್ರೆಸ್ ಶಾಸಕರೊಬ್ಬರಿಗೆ ಜನಾರ್ದನ ರೆಡ್ಡಿ ಆಮಿಷ ಒಡ್ಡುವ ಆಡಿಯೋ ಬಿಡುಗಡೆ ಮಾಡಿ ಗಮನ ಸೆಳೆದಿದ್ದ ಉಗ್ರಪ್ಪ, ಇಂದೂ ತಮ್ಮ ಬಿಜೆಪಿ ನಾಯಕರ ‘ಗುಜರಾತಿ ವ್ಯಾಪಾರ’ಕ್ಕೆ ಸಾಕ್ಷಿ ರೂಪದಲ್ಲಿ ಆಡಿಯೋಗಳನ್ನು ಬಿಡುಗಡೆ ಮಾಡಿದರು.

ಶಕುನ ಮರೆಯದ ರೇವಣ್ಣ: 
ಯಾವ ಪಕ್ಷದ ಯಾರು ಕೊನೆ ಗಳಿಗೆಯಲ್ಲಿ ಮಿಸ್ ಆಗ್ತಾರೋ ಎಂಬ ಅನುಮಾನಗಳಿದ್ದವು. ಆದರೆ ಎಲ್ಲರೂ ಸಮಸ್ಯೆ ಇಲ್ಲದೆ 11 ಗಂಟೆಗೆ ಬಂದು ವಿಧಾನಸಭೆಗೆ ಬಂದು ತಲುಪಿದ್ದರು. ಆದರೆ ಜೆಡಿಎಸ್ ನಾಯಕ ರೇವಣ್ಣ ಮಾತ್ರ 11.30 ಆದರೂ ಸದನಕ್ಕೆ ಆಗಮಿಸಲೇ ಇಲ್ಲ. ಸಭಾಪತಿ ವಿಧಿವಿಧಾನಗಳನ್ನು ಮುಗಿಸಿ ಪ್ರಮಾಣ ವಚನ ಬೋಧಿಸಲು ಆರಂಭಿಸಿದರೂ ರೇವಣ್ಣ ಪತ್ತೆ ಇರಲಿಲ್ಲ. ವಿಧಾನಸಭೆಯೊಳಗೆ ಗುಸುಗುಸು ಮಾತು ಆರಂಭವಾದವು. ಪತ್ನಿ ಭವಾನಿಯವರ ಯೋಜನೆಯಂತೆ ರೇವಣ್ಣ ಬಿಜೆಪಿ ಬೆಂಬಲಿಸಿ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತುಗಳು ಮತ್ತೆ ಹರಿದಾಡತೊಡಗಿದವು. ಆದರೆ ಇದೆಲ್ಲವೂ ಗೊತ್ತಿದ್ದ ಹೆಚ್ .ಡಿ.ಕೆ. ರೇವಣ್ಣವನವರ ಪೂಜೆಯ ವಿಚಾರ ಹೇಳಿ ಸುಮ್ಮನಿರಿಸಿದರು. ರೇವಣ್ಣ ಸಂಪ್ರದಾಯ ಗೊತ್ತಾದ ಕೂಡಲೆ ಎಲ್ಲರೂ ಸುಮ್ಮನಾದರು. ಕೊನೆಗೂ ರೇವಣ್ಣ ಶುಭ ವೇಳೆ ನೋಡಿಕೊಂಡು ಚಪ್ಪಲಿ ಧರಿಸದೆ ಬರಿಗಾಲಕ್ಕೆ ಶಕ್ತಿ ಸೌಧದ ಒಳಕ್ಕೆ ಕಾಲಿಡುವ ಮೂಲಕ ಎಲ್ಲರ ಆತಂಕವನ್ನು ದೂರ ಮಾಡಿದರು.

ಬಿಜೆಪಿ ಪಾಳಯದಲ್ಲಿ ಕಾರ್ಮೋಡ:

ಮಧ್ಯಾಹ್ನದ ನಂತರ ಆರಂಭವಾದ ಕಲಾಪದ ವೇಳೆ ಬಿಜೆಪಿ ನಾಯಕರ ಮುಖದಲ್ಲಿ ಬೆಳಿಗ್ಗೆ ಇದ್ದ ಉತ್ಸಾಹ ಕುಸಿದಿದ್ದು ಎದ್ದು ಕಾಣಿಸುತ್ತಿತ್ತು. ವಿಧಾನಸಭೆಯ ಆವರಣದ ಮುಂದಿನ ಸಾಲಿನಲ್ಲಿ ಕುಳಿತಿದ್ದ ಬಿ. ಎಸ್. ಯಡಿಯೂರಪ್ಪ ಮುಖ ನಿಸ್ತೇಜವಾಗಿತ್ತು. ಭಾರಿ ಭಾವಾವೇಶದಲ್ಲಿದ್ದ ಯಡಿಯೂರಪ್ಪ ನುಗ್ಗಿ ಬರುವ ದುಃಖವನ್ನು ತಡೆಯುತ್ತಿದ್ದಂತೆ ಕಾಣುತ್ತಿತ್ತು. ಬಿಜೆಪಿ ಪಾಳಯದಲ್ಲಿ ಕಾರ್ಮೋಡಗಳು ದಟ್ಟವಾಗತೊಡಗಿದವು. ಈ ವೇಳೆಗೆ ಉಳಿದ ಶಾಸಕರೂ ಪ್ರಮಾಣ ವಚನ ಸ್ವೀಕರಿಸಿದರು.

ಬೆಳಿಗ್ಗೆಯಿಂದಲೂ ಗೈರಾಗಿದ್ದ ಬಿಜೆಪಿ ಶಾಸಕರ ಸೋಮಶೇಖರೆಡ್ಡಿ ಆನಂದ್ ಸಿಂಗ್ ಅವರನ್ನು ಕರೆ ತರಬಹುದು ಎಂದೇ ಊಹಿಸಲಾಗಿತ್ತು. ಆದರೆ ಆನಂದ್ ಸಿಂಗ್ ಕಾಂಗ್ರೆಸ್ ಪಾಳಯಕ್ಕೆ ಬಂದು ಸೇರಿಕೊಳ್ಳುವುದರೊಂದಿಗೆ ಸೋಮಶೇಖರೆಡ್ಡಿ ಬರಿಗೈಲಿ ಬಂದು ಬಿಜೆಪಿ ಪಾಳಯವನ್ನು ಸೇರಿಕೊಂಡರು. ಇದರೊಂದಿಗೆ ಬಿಜೆಪಿ ಎಲ್ಲ ತಂತ್ರಗಳೂ ವಿಫಲವಾಗಿವೆ ಎಂಬ ಮಾತುಗಳು ಹರಿದಾಡತೊಡಗಿದವು.

ಗಮನ ಸೆಳೆದ ಗ್ಯಾಲರಿ:

ವಿಶ್ವಾಸ ಮತ ಯಾಚನೆಯ ವೇಳೆಗೆ ವಿಧಾನಸೌಧದ ಗ್ಯಾಲರಿಯಲ್ಲಿ ಪಕ್ಷಭೇದ ಮರತೆ ರಾಜಕಾರಣಿಗಳು ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಕೇಂದ್ರದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಶೋಭಾ ಕರಂದ್ಲಾಜೆ, ಅನಂತ್ ಕುಮಾರ್, ಗುಲಾಂ ನಬಿ ಆಜಾದ್ ನಗುನಗುತ್ತಾ ಅಕ್ಕಪಕ್ಕದಲ್ಲಿ ಕುಣಿಸಿಕೊಂಡಿದ್ದು ಗಮನ ಸೆಳೆಯುವಂತಿತ್ತು.

ಇನ್ನು ಶಾಸಕರ ಪ್ರಮಾಣ ವಚನದ ನಂತರ ಬರೆದುಕೊಂಡು ಬಂದಿದ್ದ ತಮ್ಮ ಮೂರು ಪುಟದ ಮಾತುಗಳನ್ನು ಬಿ. ಎಸ್. ಯಡಿಯೂರಪ್ಪ ಓದಿದರು. ಈ ವೇಳೆ ಅವರ ಗದ್ಗದಿತರಾಗಿದ್ದರು. ಅವರಲ್ಲಿ ದುಃಖ ಮನೆ ಮಾಡಿತ್ತು. ಮೋದಿ ಸಾಧನೆಗಳನ್ನು ನೆನಪು ಮಾಡಿಕೊಳ್ಳುವುದನ್ನು ಅವರು ಮರೆಯಲಿಲ್ಲ. ಜತೆಗೆ ತಮ್ಮ ರೈತ ಹೋರಾಟ, ಜನ ಪರ ಕೆಲಸಗಳನ್ನು ಒತ್ತಿ ಹೇಳಿದರು. ತಮ್ಮ ಜೀವ ಇರುವವರೆಗೂ ಹೋರಾಟ ಮಾಡುವುದಾಗಿ ಘೋಷಿಸಿದ ಬಿಎಸ್ ವೈ ತಾವು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು.

ಅಲ್ಲಿಗೆ ಫಲಿತಾಂಶದ ನಂತರವೂ ಮುಂದುವರಿದಿದ್ದ ರಾಜಕೀಯ ಅತಂತ್ರತೆಗೆ ಮೊದಲ ಹಂತದಲ್ಲಿ ತೆರೆ ಬಿದ್ದಂತಾಯಿತು. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದರು. ವಿಧಾನಸೌಧ ಹಲವು ದಿನಗಳ ನಂತರ ಮತ್ತೆ ಶಾಸಕ ಬಿಳಿ ಬಟ್ಟೆಗಳಿಗೆ, ಅವರು ‘ದೇವರ ಕೆಲಸ’ ಆರಂಭಿಸಲು ತೆಗೆದುಕೊಂಡ ಪ್ರತಿಜ್ಞಾ ವಿಧಿಗಳಿಗೆ ಸಾಕ್ಷಿಯಾಗಿ ರಾತ್ರಿ ಕವಿಯುವ ಮೊದಲೇ ಖಾಲಿಯಾಯಿತು.