samachara
www.samachara.com
85,000 ಮತದಾರರನ್ನು ಸೆಳೆದ ಹೀರಾ ಬ್ರಾಂಡ್‌ನ ‘ಬೂಬಮ್ಮನ ಪಾರ್ಟಿ’!
ರಾಜ್ಯ

85,000 ಮತದಾರರನ್ನು ಸೆಳೆದ ಹೀರಾ ಬ್ರಾಂಡ್‌ನ ‘ಬೂಬಮ್ಮನ ಪಾರ್ಟಿ’!

ಇದ್ದಕ್ಕಿದ್ದಂತೆಯೇ ಕರ್ನಾಟಕ ಕದನ ಕಣಕ್ಕಿಳಿದು ಖರ್ಚಿನ ಕಾರಣಕ್ಕೆ ಚಲಾವಣೆಗೆ ಬಂದವರು ನೌಹೀರಾ ಶೇಖ್‌. ಅವರ ಪಕ್ಷ ಈಗ 85,000ಕ್ಕೂ ಹೆಚ್ಚು ಮತಗಳನ್ನು ಪಡೆದಿದೆ. ವಿವರ ಇಲ್ಲಿದೆ. 

ಚುನಾವಣೆ ಬಂದಾಗ ಎಂದೂ ಕೇಳದ ಪಕ್ಷಗಳ ಹೆಸರುಗಳು ಕಿವಿಯ ಮೇಲೆ ಬೀಳುತ್ತವೆ. ಹಣ ಖರ್ಚು ಮಾಡುವವರು ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆದರೆ ಫಲಿತಾಂಶ ಹೊರಬಿದ್ದಾಗ ಇಂತವರ ಸುಳಿವೂ ಇರುವುದಿಲ್ಲ. ಆದರೆ ಇದೇ ಸಾಲಿನಲ್ಲಿದ್ದ ಎಂಇಪಿ ಪಕ್ಷ ರಾಜ್ಯಾದ್ಯಂತ ಒಟ್ಟು 85,342 ಮತಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದೆ. 

ಇದ್ದಕ್ಕಿದ್ದಂತೆಯೇ ಕರ್ನಾಟಕದ ಕದನ ಕಣಕ್ಕಿಳಿದು ಕೋಟ್ಯಾಂತರ ರೂಪಾಯಿಗಳನ್ನು ಚೆಲ್ಲಿದ ನೌಹೀರಾ ಶೇಖ್‌ ಒಡೆತನದ ಪಕ್ಷ ಇದು; ಎಂಇಪಿ ಅಥವಾ ಮಹಿಳಾ ಸಬಲೀಕರಣ ಪಕ್ಷ. ಕರ್ನಾಟಕದಲ್ಲೇ ಹುಟ್ಟಿ, ಇಲ್ಲಿಯೇ ಬೇರುಗಳನ್ನು ಹೊಂದಿರುವ ಪಕ್ಷಗಳು ಪಡೆಯದಷ್ಟು ಮತಗಳು ಎಂಇಪಿ ಪಾಲಾಗಿವೆ. ಇದಕ್ಕೆ ಚುನಾವಣಾ ಪೂರ್ವದಲ್ಲಿ ಅದರ ಪ್ರಚಾರ ತಂತ್ರ ಹಾಗೂ ಸ್ಥಳೀಯ ಕಾರಣಗಳು ಇರಬಹುದು.

ಹೀರಾ ಜ್ಯುವೆಲ್ಲರ್ಸ್, ಹೀರಾ ಪ್ಯೂರ್‌ ಡ್ರಾಪ್, ಹೀರಾ ಟೆಕ್ಸ್‌ಟೈಲ್ಸ್, ಹೀರಾ ಗ್ರಾನೈಟ್ಸ್, ಹೀರಾ ರೈಸ್, ಹೀರಾ ಎಲೆಕ್ಟ್ರಾನಿಕ್ಸ್, ಹೀರಾ ರಿಯಲ್ ಎಸ್ಟೇಟ್ಸ್, ಹೀರಾ ಡೆವೆಲಪ್ಪರ್ಸ್ ಹೀಗೆ ಇನ್ನೂ ಹಲವಾರು ಸಂಸ್ಥೆಗಳ ಒಡತಿ ನೌಹೀರಾ ಶೇಖ್‌. 2017ರ ಸೆಪ್ಟೆಂಬರ್‌ ತಿಂಗಳಿನಲ್ಲಿ ದೆಹಲಿಯಲ್ಲಿ ಸಿದ್ಧವಾದ ಬೃಹತ್‌ ವೇದಿಕೆಯ ಮೇಲೆ ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್‌ ಪಕ್ಷವನ್ನು ಉದ್ಘಾಟಿಸಿದ್ದರು. ಮಹಿಳೆಯರ ಹಾಗೂ ಶೋಷಿತ ವರ್ಗದ ಪರವಾಗಿ ಪಕ್ಷ ಶ್ರಮಿಸುತ್ತದೆ ಎಂದು ಭಾಷಣ ಮಾಡಿದ್ದರು. ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಹಲವಾರು ಸಲೆಬ್ರೆಟಿಗಳ ದಂಡು ಉದ್ಘಾಟನಾ ಕಾರ್ಯಕ್ರಮದಲ್ಲಿ ನೆರೆದಿತ್ತು.

ದೇಶದ ಹಲವಾರು ರಾಜಕೀಯ ಪಕ್ಷಗಳು ಬಾಯ್ತೆರೆದು ನೋಡುವಂತೆ ಪಕ್ಷಕ್ಕೆ ಚಾಲನೆ ನೀಡಿದ ನೌಹೀರಾ ಶೇಖ್‌ ಮೊದಲು ತಮ್ಮ ಪಕ್ಷದ ರಾಜಕೀಯ ಪಯಣವನ್ನು ಆರಂಭಿಸಿದ್ದು ಕರ್ನಾಟಕದ ವಿಧಾನಸಭಾ ಚುನಾವಣೆಯಿಂದ.

85,000 ಮತದಾರರನ್ನು ಸೆಳೆದ ಹೀರಾ ಬ್ರಾಂಡ್‌ನ ‘ಬೂಬಮ್ಮನ ಪಾರ್ಟಿ’!

ಚುನಾವಣಾ ಕಣಕ್ಕೆ ಇಳಿದಿದ್ದ ನೌಹೀರಾ ಶೇಖ್, ರಾಜ್ಯದ 224 ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ತಿಳಿಸಿದ್ದರು. ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ನೀಡಿದ್ದ ಸಂದರ್ಶನದಲ್ಲಿ, “ಸುಮಾರು 5000ದಷ್ಟು ಜನ ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ,” ಎಂದಿದ್ದರು. “ರಾಜ್ಯದ 150 ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ್ದರು. ಒಂದು ವೇಳೆ ಎಮ್‌ಇಪಿಗೆ ಬಹುಮತ ದೊರೆತರೆ ಕರ್ನಾಟಕದ ವ್ಯಕ್ತಿಯನ್ನೇ ಮುಖ್ಯಮಂತ್ರಿಯ ಮಾಡಲಾಗುವುದು,’’ ಎಂದು ಮಿಸಸ್ ಶೇಖ್‌ ತಿಳಿಸಿದ್ದರು.

ರಾಜ್ಯದ ಜನರ ಬಾಯಿಯಲ್ಲಿ ನೌಹೀರಾ ಶೇಖ್‌ ಹೆಸರು ಕೇಳತೊಡಗಿದ ದಿನಗಳಲ್ಲೇ, ಎಂಇಪಿ ಪಕ್ಷ ಬಿಜೆಪಿ ಪ್ರಾಯೋಜಿತ ಎಂಬ ಮಾತುಗಳೂ ಚಲಾವಣೆಗೆ ಬಂದಿದ್ದವು. ನೌಹೀರಾ ಶೇಖ್‌ ಬಿಜೆಪಿಯ ಅಸ್ತ್ರ, ಕಾಂಗ್ರೆಸ್‌ನ ಅಲ್ಪ ಸಂಖ್ಯಾತರ ವೋಟ್‌ಬ್ಯಾಂಕ್‌ ವಿಭಜಿಸಲು ಬಿಜೆಪಿಯೇ ಈ ಪಕ್ಷವನ್ನು ಅಖಾಡದಲ್ಲಿ ಚೂ ಬಿಟ್ಟಿದೆ ಎಂಬ ಗುಮಾನಿಯೂ ದೊಡ್ಡ ಮಟ್ಟದಲ್ಲಿ ಕೇಳಿಬಂದಿತ್ತು. ಈ ಕುರಿತು ಮಾತನಾಡಿದ್ದ ನೌಹೀರಾ ಶೇಖ್‌, “ನಾನು ಕಾಂಗ್ರೆಸ್‌ ಅಥವಾ ಬಿಜೆಪಿ, ಯಾರ ಏಜೆಂಟ್‌ ಕೂಡ ಅಲ್ಲ,” ಎಂದು ಸಮರ್ಥನೆ ನೀಡಿದ್ದರು.

“ಕರ್ನಾಟಕದ ಜನರ ಮುಂದೆ ಕೇವಲ ಬಿಜೆಪಿ ಅಥವಾ ಕಾಂಗ್ರೆಸ್‌ ಎಂಬ 2 ಆಯ್ಕೆಗಳಷ್ಟೇ ಇವೆ. ಇದು ಪ್ರಜಾಪ್ರಭುತ್ವವಲ್ಲ. ದೇಶದಲ್ಲಿ ಯಾರು ಬೇಕಾದರೂ ಬದಲಾವಣೆ ತರಲು ಮುಂದಾಗಬಹುದು. ನಾವೂ ಅದೇ ಕೆಲಸವನ್ನು ಮಾಡುತ್ತಿದ್ದೇವೆ,” ಎಂದಿದ್ದ ನೌಹೀರಾ ಶೇಖ್ ಕರ್ನಾಟಕದ ಚುನಾವಣೆಯಲ್ಲಿ ಸ್ಪರ್ಧಿಸುವ ಮನಸು ಮಾಡಿರುವುದಾಗಿ ತಿಳಿಸಿದ್ದರು. ದೇಶದ 700 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಇಪಿ ಬಗ್ಗೆ ಈಗ ಕರ್ನಾಟಕದಲ್ಲಿರುವ ಎಲ್ಲರಿಗೂ ಗೊತ್ತು ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ನಿರುದ್ಯೋಗ, ವಿದ್ಯುತ್ ಕಡಿತ, ಕುಡಿಯುವ ನೀರಿನ ಸಮಸ್ಯೆ, ಶಿಕ್ಷಣ ಮತ್ತು ವಸತಿಗಳು ತಮ್ಮ ಪಕ್ಷದ ಪ್ರಾರ್ಥಮಿಕ ಗುರಿಗಳು ಎಂದು ನೌಹೀರಾ ಶೇಖ್‌ ತಿಳಿಸಿದ್ದರು. ಮಹಿಳಾ ಭಾಗವಹಿಸುವಿಕೆ ಕುರಿತು ಅಬ್ಬರಿಸಿ, ಕೇವ ಶೇ. 2ರಷ್ಟು ಮಹಿಳೆಯರಷ್ಟೇ ಚುನಾವಣಾ ಕಣದಲ್ಲಿದ್ದಾರೆ, ಇದು ನಾಚಿಕೆಗೇಡಿನ ಸಂಗತಿ ಎಂದಿದ್ದರು.

ಶೇ.70ರಷ್ಟು ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿರುವ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಸಾಧ್ಯವಾಗದಿದ್ದರೆ ಡಿಜಿಟಲ್‌ ಇಂಡಿಯಾ ಕೂಡ ಸಾಧ್ಯವಾಗುವುದಿಲ್ಲ ಎಂದಿದ್ದ ನೌಹೀರಾ ಶೇಖ್‌, ಬಡವರು, ರೈತರು ಸೇರಿದಂತೆ ಎಲ್ಲರ ಅಭ್ಯುದಯವೇ ನಮ್ಮ ಗುರಿ ಎಂದು ತಿಳಿಸಿದ್ದರು. ಕೊನೆಗೆ ಚುನಾವಣೆ ಸಮಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಎಂಇಪಿ ಅಭ್ಯರ್ಥಿಗಳು ಕಣದಲ್ಲಿದ್ದರು.

ಎಂಇಪಿ ಪಕ್ಷ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿದರೂ ಕೂಡ ಮತದಾರರು ಯಾವೊಂದು ಕ್ಷೇತ್ರದಲ್ಲೂ ಕೂಡ ನೌಹೀರಾ ಶೇಖ್‌ರ ಕೈಹಿಡಿದಿಲ್ಲ. 222 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ 1,000 ಮತಗಳನ್ನು ದಾಟಿರುವುದಷ್ಟೇ ಎಂಇಪಿ ಸಾಧನೆ. ಆದರೆ ರಾಜ್ಯಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಒಟ್ಟಾರೆ ಮತದಾನದಲ್ಲಿ ಸುಮಾರು 85,000ದಷ್ಟು ಜನರನ್ನು ಸೆಳೆಯುವ ಮೂಲಕ ಎಂಇಪಿ ಗಮನ ಸೆಳೆದಿದೆ. ‘ಬೂಬಮ್ಮ’ ಎಂದು ಪ್ರೀತಿಯಿಂದ ಕಾಲೆಳಿಸಿಕೊಳ್ಳುತ್ತಿರುವ ಮಿಸಸ್ ಶೇಖ್ ಪಾರ್ಟಿ ಲೋಕಸಭೆಗೂ ಜೀವಂತವಾಗಿರುವ ಸಾಧ್ಯತೆ ಇದೆ.