samachara
www.samachara.com
ರಾಜ್ಯದಲ್ಲಿ ದಾಖಲೆಯ ಗರಿಷ್ಠ ಮತದಾನ; ರಾಜಧಾನಿಯಲ್ಲಿ ದಾಖಲಾಗಿದ್ದು ಕನಿಷ್ಠ!
ರಾಜ್ಯ

ರಾಜ್ಯದಲ್ಲಿ ದಾಖಲೆಯ ಗರಿಷ್ಠ ಮತದಾನ; ರಾಜಧಾನಿಯಲ್ಲಿ ದಾಖಲಾಗಿದ್ದು ಕನಿಷ್ಠ!

ರಾಜ್ಯದ ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಪ್ರಮಾಣದ ಮತದಾನ ನಡೆದಿದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

samachara

samachara

ರಾಜ್ಯ ವಿಧಾನಸಭಾ ಚುನಾವಣೆಗೆ ನಡೆದ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತದಾನ ನಡೆದಿದೆ. ಒಟ್ಟು ಶೇಕಡ 72.13ರಷ್ಟು ಮತದಾನವಾಗಿದೆ. ಈ ಪೈಕಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಕಡಿಮೆ ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ.

ಬೆಂಗಳೂರಿನ ಬಿಬಿಎಂಪಿ ಉತ್ತರ, ದಕ್ಷಿಣ, ಕೇಂದ್ರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ದಾಸರಹಳ್ಳಿಯಲ್ಲಿ ಶೇಕಡ 48.03ರಷ್ಟು ಮತದಾನ ನಡೆದಿದೆ.

ಬೆಂಗಳೂರಿನ ಒಟ್ಟು 28 ವಿಧಾನಸಭಾ ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆದಿದೆ. ಚುನಾವಣಾ ಅಕ್ರಮದ ಕಾರಣಕ್ಕೆ ರಾಜರಾಜೇಶ್ವರಿನಗರ ಮತ್ತು ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ನಿಧನದ ಕಾರಣಕ್ಕೆ ಜಯನಗರ ವಿಧಾನಸಭಾ ಕ್ಷೇತ್ರಗಳ ಮತದಾನವನ್ನು ಮುಂದೂಡಲಾಗಿದೆ. ಆದರೆ, ಮತದಾನ ನಡೆದಿರುವ 26 ಕ್ಷೇತ್ರಗಳಲ್ಲೂ ಮತದಾನಕ್ಕೆ ಜನರ ನಿರಾಸಕ್ತಿ ಕಂಡುಬಂದಿದೆ.

Also read: ಚುನಾವಣಾ ರಾಜಕೀಯದ ಬಗ್ಗೆ ‘ಪ್ರಜಾಪ್ರಭು’ವಿನ ನಿರಾಸಕ್ತಿ ಏಕೆ?

ವಿದ್ಯಾವಂತರೇ ಹೆಚ್ಚಿರುವ ಬೆಂಗಳೂರಿನಲ್ಲಿ ಮತದಾನ ನೀರಸವಾಗಿದೆ. ಯಾವ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನದ ಶೇಕಡಾವಾರು ಪ್ರಮಾಣ 65 ಮೀರಿಲ್ಲ. ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 63.99 ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ 63.01ರಷ್ಟು ಮತದಾನ ನಡೆದಿರುವುದೇ ಹೆಚ್ಚು.

ಈ ಬಾರಿಯ ಚುನಾವಣೆಯಲ್ಲಿ ಮಾತ್ರವಲ್ಲ ಹಿಂದಿನ ಚುನಾವಣೆಯಲ್ಲಿ ಕೂಡಾ ರಾಜಧಾನಿಯ ಜನ ಮತದಾನಕ್ಕೆ ತೋರಿರುವ ಪ್ರತಿಕ್ರಿಯೆ ನೀರಸವಾಗಿಯೇ ಇತ್ತು. 2013ರ ವಿಧಾನಸಭಾ ಚುನಾವಣೆಯಲ್ಲೂ ಒಟ್ಟು ಮತದಾರರ ಪೈಕಿ ಸುಮಾರು ಅರ್ಧದಷ್ಟು ಜನ ಮಾತ್ರ ಮತ ಚಲಾಯಿಸಿದ್ದರು. 2013ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮತದಾನ ಪ್ರಮಾಣ ಶೇಕಡ 57.33 ಮಾತ್ರ.

ಗ್ರಾಮಾಂತರ ಪ್ರದೇಶದ ಜನ, ರೈತರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ನಗರ ಪ್ರದೇಶದ ಜನ ಮತದಾನ ಮಾಡದೇ ಮೋಜು ಮಾಡಲು ಚುನಾವಣಾ ರಜಾ ಬಳಸಿಕೊಳ್ಳುತ್ತಾರೆ. ಅಧಿಕಾರಕ್ಕೆ ಬಂದ ಸರಕಾರ ಕೂಡ ನಗರಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಆದರೆ, ಹೆಚ್ಚು ಮತದಾನ ಮಾಡಿದ ಹಳ್ಳಿಯ ರೈತಾಪಿಗಳಿಗೆ ಸರಿಯಾದ ವಿದ್ಯುತ್ ಇಲ್ಲ, ರಸ್ತೆಗಳಿಲ್ಲ, ಕುಡಿಯುವ ನೀರು ಇಲ್ಲ, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯೂ ಇಲ್ಲ. ಇಂತಹ ತಾರತಮ್ಯ ನೀತಿ ಸರಿಯೆ? ಮತದಾನ ಮಾಡದೇ ನಿರ್ಲಕ್ಷ್ಯ ಮಾಡುವವರಿಗೆ ಸರಕಾರ ಸವಲತ್ತು ನಿಲ್ಲಿಸುವ ಕಾನೂನು ಜಾರಿಗೆ ಬರಬೇಕು.
- ಕುರುಬೂರು ಶಾಂತಕುಮಾರ್, ಅಧ್ಯಕ್ಷ, ರಾಜ್ಯ ರೈತಸಂಘಟನೆಗಳ ಒಕ್ಕೂಟ

ಮತದಾನಕ್ಕೆಂದು ವೇತನ ಸಹಿತ ರಜೆ ನೀಡಲಾಗುತ್ತದೆ. ಆದರೆ, ವಾರಾತ್ಯದಲ್ಲಿ ಮತದಾನ ಇದ್ದಿದ್ದರಿಂದ ಹಲವರು ಮತದಾನಕ್ಕಿಂತ ಮೋಜು ಮಾಡಲು, ಪಿಕ್‌ನಿಕ್‌ಗೆ ಹೋಗಲು ಈ ಶನಿವಾರವನ್ನೂ ಬಳಸಿಕೊಂಡಂತಿದೆ. ಅಲ್ಲದೆ, ಮತದಾನ ಮಾಡಿದರೆಷ್ಟು ಬಿಟ್ಟರೆಷ್ಟು ಎಂಬ ಮನೋಭಾವವೇ ನಗರಿಗರಲ್ಲಿ ಹೆಚ್ಚಾಗಿರುವಂತೆ ಕಾಣುತ್ತಿದೆ.

Also read: ‘ಮಾತಿನ ಮಾಲಿನ್ಯ’ವೇ ಇಲ್ಲದ ಮೆಟ್ರೊದಲ್ಲಿ ಚುನಾವಣಾ ಕಾವನ್ನು ಹುಡುಕುತ್ತಾ…

“ಮತಗಟ್ಟೆಗೆ ಬರುವವರ ಪೈಕಿ ಹೆಚ್ಚಿನವರು ಕೊಳೆಗೇರಿ ಹಾಗೂ ಮಧ್ಯಮ ವರ್ಗದ ಜನ. ಶ್ರೀಮಂತರು ಮತದಾನ ಮಾಡಲು ಬಂದಿದ್ದು ತುಂಬಾ ಕಡಿಮೆ. ಮತದಾನ ಹಕ್ಕಾಗಿ ಉಳಿದಿರುವುದು ಬಡವರು ಮತ್ತು ಮಧ್ಯಮವರ್ಗದವರಿಗೆ ಮಾತ್ರ ಎನಿಸುತ್ತದೆ. ಶ್ರೀಮಂತರಿಗೆ ಚುನಾವಣಾ ವ್ಯವಸ್ಥೆಯಲ್ಲೇ ನಂಬಿಕೆ ಇದ್ದಂತಿಲ್ಲ” ಎನ್ನುತ್ತಾರೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕೆಲಸ ಮಾಡಿದ ಚುನಾವಣಾಧಿಕಾರಿಯೊಬ್ಬರು.

ಈ ಬಾರಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನ ದಾಖಲಾಗಿದ್ದರೂ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಚುನಾವಣಾ ರಾಜಕೀಯದ ಬಗ್ಗೆ ನಗರ ಪ್ರದೇಶದ ವಿದ್ಯಾವಂತರು ನಿರಾಸಕ್ತಿ ತಾಳುತ್ತಿರುವುದು ಹೆಚ್ಚಾಗಿರುವಂತಿದೆ. ಇದರ ಪರಿಣಾಮವೇ ಮತದಾನ ಪ್ರಮಾಣದಲ್ಲಿ ಕಾಣುತ್ತಿರುವ ಇಳಿಮುಖ.