samachara
www.samachara.com
‘ಮಾತಿನ ಮಾಲಿನ್ಯ’ವೇ ಇಲ್ಲದ ಮೆಟ್ರೊದಲ್ಲಿ ಚುನಾವಣಾ ಕಾವನ್ನು ಹುಡುಕುತ್ತಾ…
ರಾಜ್ಯ

‘ಮಾತಿನ ಮಾಲಿನ್ಯ’ವೇ ಇಲ್ಲದ ಮೆಟ್ರೊದಲ್ಲಿ ಚುನಾವಣಾ ಕಾವನ್ನು ಹುಡುಕುತ್ತಾ…

ಹವಾನಿಯಂತ್ರಣ ವ್ಯವಸ್ಥೆ ಇರುವ ಮೆಟ್ರೊದಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಗಳಿಂದ ಹಿಡಿದು ಹೂ ಮಾರುವವರ ವರೆಗೆ ಎಲ್ಲಾ ವರ್ಗದ ಜನರೂ ಪ್ರಯಾಣಿಸುತ್ತಾರೆ. ಆದರೆ, ಮಾತು ಎಂಬುದು ಮೆಟ್ರೊದಲ್ಲಿ ಕಾಣೆಯಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನದ ದಿನ ಸಮೀಪಿಸಿದೆ. ಚುನಾವಣಾ ಕಣದಲ್ಲಿರುವ 2,655 ಅಭ್ಯರ್ಥಿಗಳ ಭವಿಷ್ಯ ಶನಿವಾರ ಮತಯಂತ್ರಗಳಲ್ಲಿ ದಾಖಲಾಗಲಿದೆ. ಆದರೆ, ಚುನಾವಣೆಯ ದಿನಾಂಕ ಘೋಷಣೆಯಾದ ದಿನದಿಂದ ಹಿಡಿದು ಮತದಾನದ ಮುನ್ನಾ ದಿನದವರೆಗೂ ‘ನಮ್ಮ ಮೆಟ್ರೊ’ದಲ್ಲಿ ರಾಜಕೀಯದ ಮಾತುಗಳು ಕಿವಿ ಮೇಲೆ ಬಿದ್ದಿದ್ದೇ ಕಡಿಮೆ.

ಈ ಹೊತ್ತಿನ ಬೆಂಗಳೂರು ಮಹಾನಗರದ ಸಾರಿಗೆ ವ್ಯವಸ್ಥೆಯ ದೊಡ್ಡ ಅಂಗವಾಗಿರುವ ‘ನಮ್ಮ ಮೆಟ್ರೊ’ದಲ್ಲಿ ನಿತ್ಯ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಗಳೆರಡರಲ್ಲೂ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನ ಪ್ರಯಾಣದ ಅವಧಿ ಗರಿಷ್ಠ 40ರಿಂದ 45 ನಿಮಿಷ. ಇದರಲ್ಲಿ ಸುಮಾರು 20 ನಿಮಿಷ ಪ್ರಯಾಣಿಸುವ ಜನರ ಸಂಖ್ಯೆಯೇ ಹೆಚ್ಚು. ಆದರೆ, ಎಲ್ಲಾ ವರ್ಗದ ಜನರೂ ಓಡಾಡುವ ಮೆಟ್ರೊ ರೈಲಿನಲ್ಲಿ ಅಪ್ಪಿತಪ್ಪಿಯೂ ದೊಡ್ಡ ದನಿಗಳು ಕೇಳುವುದಿಲ್ಲ.

ಹವಾನಿಯಂತ್ರಣ ವ್ಯವಸ್ಥೆ ಇರುವ ಮೆಟ್ರೊದಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಗಳಿಂದ ಹಿಡಿದು ಹೂ ಮಾರುವವರ ವರೆಗೆ ಎಲ್ಲಾ ಬಗೆಯ ಜನರೂ ಪ್ರಯಾಣಿಸುತ್ತಾರೆ. ಆದರೆ, ಬಿಎಂಟಿಸಿ ಬಸ್‌ಗಳಲ್ಲಿ ಹರಿದಾಡುವ ಮಾತುಗಳು ಮೆಟ್ರೊದಲ್ಲಿ ಕಾಣೆಯಾಗಿವೆ.

ಕೆಲವರು ಕಿವಿಗೆ ಇಯರ್‌ ಫೋನ್‌ ಸಿಕ್ಕಿಸಿಕೊಂಡೋ, ಯೂಟ್ಯೂಬ್‌ನಲ್ಲಿ ವಿಡಿಯೊ ನೋಡಿಕೊಂಡೋ, ಮೊಬೈಲ್‌ನಲ್ಲಿ ಷೇರು ಮಾರುಕಟ್ಟೆಯ ಏರಿಳಿತಗಳನ್ನು ನೋಡಿಕೊಂಡೋ ತಮ್ಮ ಪ್ರಯಾಣದ ಅವಧಿಯನ್ನು ಕಳೆದರೆ, ಇನ್ನು ಕೆಲವರು ಎಲ್ಲಿ ಸೀಟ್‌ ಖಾಲಿಯಾಗುತ್ತದೆ, ಎಲ್ಲಿ ನಿಲ್ಲಲು ಜಾಗ ಸರಿಯಾಗಿದೆ, ನಾವು ಇಳಿಯಬೇಕಾದ ನಿಲ್ದಾಣ ಯಾವಾಗ ಬರುತ್ತದೆ ಎಂಬ ಎಣಿಕೆಯಲ್ಲೇ ತಮ್ಮ ಮೆಟ್ರೊ ಪ್ರಯಾಣ ಮುಗಿಸಿ ಬಿಡುತ್ತಾರೆ. ಈ ನಡುವೆ ಒಬ್ಬರಿಗೊಬ್ಬರ ನಡುವೆ ಮಾತು ಎಂಬುದು ಕಾಣುವುದೇ ಇಲ್ಲ.

ಮೆಟ್ರೊದಲ್ಲಿ ಪ್ರಯಾಣಿಸುವವರ ಪೈಕಿ ಚುನಾವಣೆಯ ಬಗ್ಗೆ, ರಾಜಕಾರಣದ ಬಗ್ಗೆ ಅಪ್ಪಿತಪ್ಪಿಯೂ ಯಾರೂ ತುಟಿ ಎರಡು ಮಾಡುವುದಿಲ್ಲ. ಒಂದಷ್ಟು ಜನ ಮೆಟ್ರೊ ರೈಲಿನಲ್ಲಿ ಮತದಾನದ ಬಗ್ಗೆ ಜಾಗೃತಿಯ ಮಾತುಗಳನ್ನಾಡಿರುವುದು ಬಿಟ್ಟರೆ ಮೆಟ್ರೊ ಪ್ರಯಾಣಿಕರು ತಾವಾಗಿಯೇ ಸಹ ಪ್ರಯಾಣಿಕರ ಜತೆ ರಾಜಕೀಯದ ಬಗ್ಗೆ ಮಾತನಾಡುವುದು ಕಡಿಮೆ. ಅದು ಚುನಾವಣೆಯ ಸಂದರ್ಭವೇ ಇರಲಿ ಅಥವಾ ಇಲ್ಲದಿರಲಿ, ಮಾತಿನ ಮಾಲಿನ್ಯ ಮೆಟ್ರೊದಲ್ಲಿ ಕಾಣದು.

“ಮೆಟ್ರೊದಲ್ಲಿ ಜನ ಪ್ರಯಾಣಿಸುವ ಸಮಯವೇ ಕಡಿಮೆ. ಕೆಲವರು ಸೀಟ್‌ ಸಿಕ್ಕರೆ ತಮ್ಮ ಪಾಡಿಗೆ ತಾವು ಕಣ್ಣು ಮುಚ್ಚಿ ಕುಳಿತರೆ ಕಣ್ಣು ಬಿಡುವುದೇ ತಮ್ಮ ನಿಲ್ದಾಣ ಬಂದಾಗ. ಬಹುತೇಕ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಮುಳುಗಿರುತ್ತಾರೆ. ಇಯರ್‌ ಫೋನ್‌ ಹಚ್ಚಿಕೊಂಡವರೇ ಹೆಚ್ಚಿನ ಜನರಿರುವಾಗ ರಾಜಕಾರಣದ ಬಗ್ಗೆ ಅಲ್ಲ, ಸಾಮಾನ್ಯ ಮಾತಿಗೂ ಇಲ್ಲಿ ಅವಕಾಶವೇ ಇರುವುದಿಲ್ಲ” ಎನ್ನುತ್ತಾರೆ ನಮ್ಮ ಮೆಟ್ರೊದ ಭದ್ರತಾ ಸಿಬ್ಬಂದಿಯೊಬ್ಬರು.

“ಮೆಟ್ರೊ ರೈಲಿನಲ್ಲಿ ಪ್ರತಿ ದಿನ, ಒಂದೇ ಸಮಯದಲ್ಲಿ ಓಡಾಡುವ ಪ್ರಯಾಣಿಕರೂ ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳಲು ಹೋಗುವುದಿಲ್ಲ. ಮೆಟ್ರೊ ಬರುತ್ತದೆ, ನಾವು ಹತ್ತುತ್ತೇವೆ, ನಮ್ಮ ನಿಲ್ದಾಣದಲ್ಲಿ ಇಳಿಯುತ್ತೇವೆ – ಇದಿಷ್ಟೇ ಪ್ರಯಾಣಿಕರ ಮನೋಭಾವ. ಮೆಟ್ರೊದಲ್ಲಿ ಮಾತೂ ಇಲ್ಲ, ಸಣ್ಣ ನಗುವೂ ಇಲ್ಲ. ಇಂಥದ್ದರಲ್ಲಿ ರಾಜಕೀಯದ ಬಗ್ಗೆ ಯಾರು ಮಾತನಾಡುತ್ತಾರೆ” ಎಂಬ ಪ್ರಶ್ನೆ ಅವರದ್ದು.

“ಹಿರಿಯ ನಾಗರಿಕರಿಗೆ ಎಲ್ಲಿ ಸೀಟ್‌ ಬಿಟ್ಟುಕೊಡಬೇಕಾಗುತ್ತದೆಯೋ ಎಂದು ಸೀಟ್‌ ಸಿಕ್ಕ ತಕ್ಷಣ ಕಣ್ಣು ಮುಚ್ಚಿ ಕುಳಿತುಕೊಳ್ಳುವವರೇ ಮೆಟ್ರೊದಲ್ಲಿ ಹೆಚ್ಚಾಗುತ್ತಿದ್ದಾರೆ. ಕಣ್ಣು ಮುಚ್ಚಿದವರಷ್ಟೇ ಅಲ್ಲ, ಕಣ್ಣು ಬಿಟ್ಟವರೂ ಹಿರಿಯರಿಗೆ, ಚಿಕ್ಕ ಮಕ್ಕಳನ್ನು ಎತ್ತಿಕೊಂಡಿರುವವರಿಗೆ ತಾವಾಗಿಯೇ ಸೀಟ್‌ ಬಿಟ್ಟುಕೊಡುವುದಿಲ್ಲ. ಒಂದೇ ಕುಟುಂಬದವರು, ಗೆಳೆಯರು ಸ್ವಲ್ಪ ದೊಡ್ಡದಲ್ಲಿ ಮಾತನಾಡಿದರೆ ಅದನ್ನೇ ದೊಡ್ಡ ಕಿರಿಕಿರಿ ಎಂದುಕೊಳ್ಳುವ ಮಟ್ಟಕ್ಕೆ ಮೆಟ್ರೊ ಪ್ರಯಾಣಿಕರು ವರ್ತಿಸುತ್ತಾರೆ. ಹೀಗಿರುವಾಗ ಯಾರಿಗೂ ಮಾತು ಬೇಡವಾಗಿದೆ” ಎಂಬುದು ಮೆಟ್ರೊ ಪ್ರಯಾಣಿಕರೊಬ್ಬರ ಮಾತು.

ಮಾತೇ ಕಡಿಮೆಯಾಗಿರುವ ಇಂಥ ಮೆಟ್ರೊದಲ್ಲಿ ರಾಜಕೀಯ ಮಾತಾಗಲೀ, ಚುನಾವಣಾ ಕಾವಾಗಲೀ ಕಾಣುವುದೇ ಇಲ್ಲ. ಎಲ್ಲರೂ ತಮ್ಮದೇ ಲೋಕದಲ್ಲಿ ಮುಳುಗಿರುವವರಂತೆ ಕಾಣುವ ಮೆಟ್ರೊ ಪ್ರಯಾಣಿಕರಿಗೆ ಮಾತು ಎಂಬುದೇ ಬೇಡವಾಗಿರುವಂತೆ ಕಾಣುತ್ತಿದೆ.