samachara
www.samachara.com
ಪ್ರಧಾನಿ ಮೋದಿ ವೈಯಕ್ತಿಕ ಟೀಕೆಗಳಿಗೆ ಬುದ್ಧನಲ್ಲಿ ಉತ್ತರ ಕಂಡುಕೊಂಡ ರಾಹುಲ್ ಗಾಂಧಿ!
ರಾಜ್ಯ

ಪ್ರಧಾನಿ ಮೋದಿ ವೈಯಕ್ತಿಕ ಟೀಕೆಗಳಿಗೆ ಬುದ್ಧನಲ್ಲಿ ಉತ್ತರ ಕಂಡುಕೊಂಡ ರಾಹುಲ್ ಗಾಂಧಿ!

ಗುರುವಾರ ನಡೆದ ಕಾಂಗ್ರೆಸ್ ಪತ್ರಿಕಾಗೋಷ್ಠಿಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು ರಾಹುಲ್ ಗಾಂಧಿ. ಅವುಗಳ ಪೈಕಿ ಗಮನ ಸೆಳೆದಿದ್ದು ಬುದ್ಧನ ಕುರಿತು ಅವರು ಹೇಳದ ಕತೆ. ವಿವರ ಇಲ್ಲಿದೆ... 

“ನಾನು ಕತೆಯೊಂದರ ಮೂಲಕ ನಿಮ್ಮ ಪ್ರಶ್ನೆಗೆ ಉತ್ತರ ಕೊಡುತ್ತೇನೆ,’’ ಎಂದವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ.

ಕರ್ನಾಟಕ ಚುನಾವಣೆಗೆ ಬಹಿರಂಗ ಪ್ರಚಾರ ಕೊನೆಯಾಗಲು ಇನ್ನು ಕೆಲವೇ ಗಂಟೆಗಳಿವೆ. ಈ ಸಮಯದಲ್ಲಿ ಬೆಂಗಳೂರಿನಲ್ಲಿ ಗುರುವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿಗೆ ಖಾಸಗಿ ಪ್ರಶ್ನೆಯೊಂದು ಎದುರಾಯಿತು. ‘ಪ್ರಧಾನಿ ಮೋದಿ ನಿಮ್ಮ ವಿರುದ್ಧ ವೈಯಕ್ತಿಕ ಮಟ್ಟದ ಟೀಕೆಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷರಾಗಿ ಅಲ್ಲ, ಒಬ್ಬ ಸಾಮಾನ್ಯ ಮನುಷ್ಯನಾಗಿ ನಿಮಗೆ ಏನು ಅನ್ನಿಸುತ್ತದೆ?’ ಎಂಬುದು ಆ ಪ್ರಶ್ನೆ.

ಪ್ರಶ್ನೆಯನ್ನು ನಗುನಗುತ್ತಲೇ ಸ್ವಾಗತಿಸಿದ ರಾಹುಲ್ ಗಾಂಧಿ, ಪತ್ರಕರ್ತರಿಗೆ ಬುದ್ಧನ ಕತೆಯೊಂದನ್ನು ಹೇಳಿದರು. ಕತೆ ಹೀಗಿತ್ತು: ‘ಒಮ್ಮೆ ಬುದ್ಧ ತನ್ನ ಅನುಯಾಯಿಗಳ ಜತೆಯಲ್ಲಿ ಕುಳಿತಿರುತ್ತಾನೆ. ಈ ಸಮಯದಲ್ಲಿ ಅಲ್ಲಿಗೆ ಬರುವ ವ್ಯಕ್ತಿಯೊಬ್ಬ ಬುದ್ಧನನ್ನು ಬೈಯಲು ಶುರುಮಾಡುತ್ತಾನೆ. ಆತ ಸಿಟ್ಟನ್ನು ಕಾರಿಕೊಳ್ಳುತ್ತಾನೆ. ಇದು ಒಂದೆರಡು ಗಂಟೆಗಳ ಕಾಲ ನಡೆಯುತ್ತದೆ. ಆದರೆ ಬುದ್ಧ ಯಾವುದಕ್ಕೂ ಪ್ರತಿಕ್ರಿಯಿಸದೆ ಕುಳಿತಿರುತ್ತಾನೆ. ಬೈಯುತ್ತಿದ್ದ ವ್ಯಕ್ತಿ ಹೋದ ನಂತರ ಅನುಯಾಯಿಗಳು ಬುದ್ಧನನ್ನು ಕೇಳುತ್ತಾರೆ. ಯಾಕೆ ಆತ ಅಷ್ಟು ಬೈಯುತ್ತಿದ್ದರು ನೀವು ಸುಮ್ಮನಿದ್ದಿರಿ ಎಂದು. ಬುದ್ಧ ಉತ್ತರಿಸುತ್ತಾನೆ, ಆತ ತನ್ನ ಸಿಟ್ಟನ್ನು ನನಗೆ ಮಾರಾಟ ಮಾಡಲು ಬಂದಿದ್ದ. ಆದರೆ ಅದನ್ನು ಕೊಳ್ಳುವ ಆಸಕ್ತಿ ನನಗೆ ಇರಲಿಲ್ಲ.’

ಮೇಲಿನ ಕತೆಯನ್ನು ವಿವರಿಸಿದ ರಾಹುಲ್ ಗಾಂಧಿ, “ಪ್ರಧಾನಿ ನರೇಂದ್ರ ಮೋದಿ ಒಳಗೆ ಸಿಟ್ಟಿದೆ. ಅವರ ನಡಳಿಕೆಯಲ್ಲಿ ಸಿಟ್ಟು ಎದ್ದು ಕಾಣಿಸುತ್ತದೆ. ಅದು ಎಲ್ಲರ ಬಗ್ಗೆಯೂ ಇದೆ. ಆದರೆ ಅದನ್ನು ಹೆಚ್ಚು ಆಕರ್ಷಿಸುತ್ತಿರುವುದು ನಾನು. ಆದರೆ ಅದಕ್ಕೆ ಉತ್ತರ ಕೊಡಲು ಹೋಗುವುದಿಲ್ಲ. ಅದು ಅವರ ಸಮಸ್ಯೆ. ಅದರಿಂದ ಹೊರಬರಲು ಸಹಾಯ ಮಾಡಬಹುದಷ್ಟೆ,’’ ಎಂದರು.

‘ನಿಮ್ಮ ಹುಟ್ಟಿನ ಹಿನ್ನೆಲೆ, ಇಟಾಲಿಯನ್ ತಾಯಿಯ ಬಗ್ಗೆಯೂ ಟೀಕೆ ಕೇಳಿಬರುತ್ತದೆ’ ಎಂಬ ವಿಚಾರಕ್ಕೆ ಮುಂದುವರಿದು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಹೌದು ನನ್ನ ತಾಯಿ ಇಟಾಲಿಯನ್. ಆಕೆ ಹಲವು ವರ್ಷಗಳಿಂದ ಭಾರತದಲ್ಲಿ ವಾಸ ಮಾಡುತ್ತಿದ್ದಾರೆ. ನಾನು ನೋಡಿದ ಹಲವು ಭಾರತೀಯರಿಗಿಂತ ಆಕೆ ಹೆಚ್ಚು ಭಾರತೀಯಳಾಗಿ ಬದುಕುತ್ತಿದ್ದಾರೆ. ಈ ದೇಶಕ್ಕಾಗಿ ನಷ್ಟವನ್ನು ಅನುಭವಿಸಿದ್ದಾರೆ, ತ್ಯಾಗ ಮಾಡಿದ್ದಾರೆ. ಆದರೆ ಆಕೆಯ ಹುಟ್ಟನ್ನು ಇಟ್ಟುಕೊಂಡು ಮೋದಿ ಮಾತನಾಡುವುದರಿಂದ ಅವರಿಗೆ ಖುಷಿ ಸಿಗುತ್ತಿರಬಹುದು. ಲೆಟ್ ಹಿಮ್ ಟು ಬಿ ಹ್ಯಾಪಿ, ಹ್ಯಾವ್ ಎ ನೈಸ್ ಡೇ,’’ ಎಂದು ಭಾವುಕರಾದರು.

ಫಾರಿನ್ ಪಾಲಿಸಿ, ಮತ್ತಿತರ ವಿಚಾರಗಳು:

LIVE: Addressing the Press in Bengaluru. #CongressForNavaKarnataka

Posted by Rahul Gandhi on Wednesday, May 9, 2018

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಜತೆಯಲ್ಲಿ ರಾಹುಲ್ ನಡೆಸಿದ ಪತ್ರಿಕಾಗೋಷ್ಠಿಯ ಪ್ರಶ್ನೋತ್ತರ ಕಲಾಪ ಗಮನ ಸೆಳೆಯುವಂತಿತ್ತು. ಅನೇಕ ವಿಚಾರಗಳು ಇಲ್ಲಿ ಪ್ರಸ್ತಾಪವಾದವು.

ರಫೆಲ್ ವಿಚಾರದ ಬಗೆಗೆ ಪ್ರತಿಕ್ರಿಯಿಸಿದ ರಾಹುಲ್, “ರಫೆಲ್ ಹೆಲಿಕಾಪ್ಟರ್ ಯೋಜನೆ ಅತ್ಯುತ್ತಮ ಅಲೋಚನೆ. ಅದರಿಂದ ತಾಂತ್ರಿಕ ಪರಿಣತಿ ಪಡೆದ ಲಕ್ಷಾಂತರ ಸ್ಥಳೀಯ ಯುವಕ ಯುವತಿಯರಿಗೆ ಕೆಲಸ ಸಿಗುವ ಸಾಧ್ಯತೆ ಇತ್ತು. ಆದರೆ ಅದನ್ನು ಮೋದಿ ತನ್ನ ಸ್ನೇಹಿತನ ಮಡಿಲಿಗೆ ಹಾಕಿದರು,’’ ಎಂದು ಆರೋಪಿಸಿದರು.

ಉಳಿದಂತೆ, ದಲಿತ ವಿಚಾರದಲ್ಲಿ ಪ್ರಧಾನಿ ಮಾತನಾಡದಿರುವುದು, ಉದ್ಯೋಗ ಸೃಷ್ಟಿಯ ವಿಚಾರ, ಕಾರ್ಪೊರೇಟ್ ಸಂಸ್ಥೆಗಳಿಗೆ ತೆರಿಗೆ ವಿನಾಯತಿ ನೀಡಿರುವುದು, ಪೆಟ್ರೋಲ್ ಬೆಲೆ ಏರಿಕೆ, ಲಿಂಗಾಯತ್ ವಿಚಾರ, ತಮ್ಮ ದೇವಸ್ಥಾನ, ಮಠ ಮಂದಿರಗಳ ಭೇಟಿ ವಿಚಾರಗಳ ಕುರಿತು ಸ್ಪಷ್ಟೀಕರಣ ನೀಡಿದರು. ಇವುಗಳ ಪೂರ್ಣ ವಿವರ ಮೇಲಿನ ವಿಡಿಯೋದಲ್ಲಿ ಲಭ್ಯವಿದೆ.