ಮೋದಿ ಹೇಳಿಕೆ ಪರಿಣಾಮ: ಕೊನೆಯ ಹಂತದಲ್ಲಿ ಜೆಡಿಎಸ್‌ ಕಡೆಗೆ ರಾಷ್ಟ್ರೀಯ ಗಮನ!
ರಾಜ್ಯ

ಮೋದಿ ಹೇಳಿಕೆ ಪರಿಣಾಮ: ಕೊನೆಯ ಹಂತದಲ್ಲಿ ಜೆಡಿಎಸ್‌ ಕಡೆಗೆ ರಾಷ್ಟ್ರೀಯ ಗಮನ!

ರಾಷ್ಟ್ರೀಯ ಮಾಧ್ಯಮಗಳು ದೇವೇಗೌಡರ ಮಾತಿಗೆ ವೇದಿಕೆ ಕಲ್ಪಿಸುತ್ತಿವೆ. ಅದನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿರುವ ಗೌಡರು, ಕೊನೆಯ ಹಂತದಲ್ಲಿ ಜೆಡಿಎಸ್‌ನ್ನು ಎರಡು ರಾಷ್ಟ್ರೀಯ ಪಕ್ಷಗಳ ಅಬ್ಬರ ನಡುವೆಯೂ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಾಕಿ ಉಳಿದಿರುವುದು ಕೇವಲ 9 ದಿನಗಳು. ಇದುವರೆಗೂ ಕರ್ನಾಟಕದ ಚುನಾವಣೆ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ನಡುವಿನ ನೇರ ಹಣಾಹಣಿಯಂತೆ ಕಾಣುತ್ತಿತ್ತು. ಈವರೆಗೂ ನಡೆದಿದ್ದ ಸಮೀಕ್ಷೆಗಳೆಲ್ಲವೂ ಎರಡು ರಾಷ್ಟ್ರೀಯ ಪಕ್ಷಗಳು ರೇಸ್‌ನಲ್ಲಿವೆ ಎಂದು ತಿಳಿಸಿದ್ದವು. ಆದರೆ ಕಳೆದ ಎರಡು ದಿನಗಳಲ್ಲಿ ಚುನಾವಣಾ ಹಣಾಹಣಿಯ ಸ್ವರೂಪ ಬದಲಾಗಿದೆ. ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಿದ್ದ ಜೆಡಿಎಸ್‌ ಹಾಗೂ ಅದರ ರಾಷ್ಟ್ರಾಧ್ಯಕ್ಷ ದೇವೇಗೌಡರು ಸುದ್ದಿ ಕೇಂದ್ರವನ್ನು ಆಕ್ರಮಿಸಿಕೊಂಡಿದ್ದಾರೆ.

ಮೇ. 1ರಂದು ಉಡುಪಿಯ ಚುನಾವಣಾ ಭಾಷಣದಲ್ಲಿ ಪ್ರಧಾನಿ ಮೋದಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಬ್ಯಾಟಿಂಗ್‌ ಮಾಡುತ್ತಲೇ, ಮಾತಿನ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದರು. ಮೋದಿ ಅಂದು ಆಡಿದ ಮಾತು ರಾಷ್ಟ್ರಮಟ್ಟದಲ್ಲಿ ಜೆಡಿಎಸ್‌ಗೆ ಎಲ್ಲಿಲ್ಲದ ಪ್ರಾಮುಖ್ಯತೆಯನ್ನು ತಂದುಕೊಟ್ಟಿದೆ. ಫೋಸಕ್‌ ಈಗ ದೇವೇಗೌಡರತ್ತ ತಿರುಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ದೇವೇಗೌಡ ಜತೆ ಸಂದರ್ಶನ ನಡೆಸಿದ 'ಫರ್ಸ್ಟ್‌ ಪೋಸ್ಟ್‌’ ಕರ್ನಾಟಕದ ಚುನಾವಣೆಯಲ್ಲಿ ಜೆಡಿಎಸ್‌ ಸಾಧ್ಯತೆಗಳ ಬಗ್ಗೆ ಗಮನಸೆಳೆದಿದೆ. ದೇವೇಗೌಡರ ಸಂದರ್ಶನದ ಪ್ರಮುಖ ಅಂಶಗಳು ಹೀಗಿವೆ:

  • ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಜತೆಗೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ.
  • ಬಿಜೆಪಿ ಜೆಡಿಎಸ್‌ ಮೈತ್ರಿಯ ಊಹೆಗಳಿಗೆ ಇಂಬು ತುಂಬಿಲ್ಲ. ಮೋದಿ ಒಬ್ಬ ಸ್ಮಾರ್ಟ್‌ ವ್ಯಕ್ತಿ. ಅವರಿಗೆ ಹಲವಾರು ಹೇಳಿಕೆಗಳನ್ನು ನೀಡುವ, ವಿಭಿನ್ನ ಬಾಷಣಗಳನ್ನು ಮಾಡುವ ಸಾಮರ್ಥ್ಯವಿದೆ. ನನ್ನ ಮೇಲಿನ ಗೌರವದಿಂದ ಅಥವಾ ಕಾರುಣ್ಯದಿಂದ ಮೋದಿ ಮಾತುಗಳನ್ನಾಡಿರಬಹುದು.
  • ಅಮಿತ್ ಶಾ ಮತ್ತು ಕುಮಾರಸ್ವಾಮಿ ವಿಮಾನದಲ್ಲಿ ಒಟ್ಟಾಗಿ ಸಂಚರಿಸಿದ್ದಾರೆ ಎಂಬುದು ಸಿದ್ಧರಾಮಯ್ಯರ ಆರೋಪ ಅಷ್ಟೆ. ಈ ಕುರಿತು ಕುಮಾರಸ್ವಾಮಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
  • ಮೋದಿ ಮನವೊಲಿಸಿದ ಕಾರಣದಿಂದಾಗಿ ಈಗಲೂ ಹಾಸನದ ಸಂಸದನಾಗಿ ಮುಂದುವರೆಯುತ್ತಿರುವೆ ಎಂದಿದ್ದಾರೆ.
  • ಜೆಡಿಎಸ್‌ ಪಕ್ಷವು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಸ್ಫರ್ಧೆಗೆ ನಿಂತಿದೆ. ಜೆಡಿಎಸ್‌ ಸರಕಾರ ರಚಿಸುತ್ತದೆ.
  • ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 50 ಕ್ಷೇತ್ರಗಳಲ್ಲಿ ಜೆಡಿಎಸ್‌ ಕೇವಲ 1,000-1,500 ಮತಗಳ ಅಂತರದಿಂದ ಸೋತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಬಿಎಸ್‌ಪಿ ಜತೆ ಮೈತ್ರಿಗೆ ಮುಂದಾಗಿದ್ದೇವೆ.
  • ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸಿದ್ಧರಾಮಯ್ಯ ಗೆಲ್ಲುವುದಿಲ್ಲಲಿಂಗಾಯತವನ್ನು ಇಬ್ಭಾಗವಾಗಿಸಿದ ಫಲವನ್ನು ಸಿದ್ಧರಾಮಯ್ಯ ಅನುಭವಿಸಲಿದ್ದಾರೆ. ಮುಸಲ್ಮಾನರೂ ಕೂಡ ಸಿದ್ಧರಾಮಯ್ಯ ತಮಗೆ ನೀಡಿರುವುದೇನು ಎಂಬ ಅರಿವನ್ನು ಹೊಂದಿದ್ದು, ಜೆಡಿಎಸ್‌ನ ಕೈ ಬಿಡುವುದಿಲ್ಲ.
  • ಯಡಿಯೂರಪ್ಪರಿಂತ ಸ್ಮಾರ್ಟ್ ಆಗಿರುವ ಸಿದ್ಧರಾಮಯ್ಯ ಲೋಕಾಯುಕ್ತವನ್ನು ಕೊನೆಗೊಳಿಸಿ ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಿದ್ದಾರೆ. ಇವೆಲ್ಲವನ್ನೂ ಕೂಡ ರಾಜ್ಯದ ಜನರು ಮತ ಚಲಾಯಿಸುವ ವೇಳೆಯಲ್ಲಿ ಪರಿಗಣಿಸತ್ತಾರೆ
  • ಯಾರೂ ಕೂಡ ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಮುಂದೆ ಬಾರದಿದ್ದಾಗ ಅನಿವಾರ್ಯವಾಗಿ ಕುಮಾರಸ್ವಾಮಿಗೆ ಪಟ್ಟ ನೀಡಬೇಕಾಯಿತು.
  • ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ವಿನಾಕಾರಣ ಕುಂಟುಂಬ ರಾಜಕಾರಣದ ಆರೋಪವನ್ನು ನಡೆಸುತ್ತಿದ್ದಾರೆ. ನನ್ನ ಕುಂಟುಂಬ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಆಸೆಯಿದ್ದದ್ದು ನಿಜ. ಆದರೆ ಕುಮಾರಸ್ವಾಮಿ ಮತ್ತು ರೇವಣ್ಣ ಮಾತ್ರ ಸ್ಫರ್ಧಿಸಲು ತೀರ್ಮಾನಿಸಲಾಗಿದೆ.

ಹೀಗೆ, ರಾಷ್ಟ್ರೀಯ ಮಾಧ್ಯಮಗಳು ದೇವೇಗೌಡ ಮಾತುಗಳಿಗೆ ವೇದಿಕೆ ಕಲ್ಪಿಸುತ್ತಿವೆ. ಅದನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿರುವ ಗೌಡರು, ಕೊನೆಯ ಹಂತದಲ್ಲಿ ಜೆಡಿಎಸ್‌ನ್ನು ಎರಡು ರಾಷ್ಟ್ರೀಯ ಪಕ್ಷಗಳ ಅಬ್ಬರ ನಡುವೆಯೂ ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದಾರೆ.

ಉಡುಪಿಯಲ್ಲಿ ಜೆಡಿಎಸ್‌ ಹೊಗಳಿದ್ದ ಪ್ರಧಾನಿ ಮೋದಿ ಗುರುವಾರ ಬೆಂಗಳೂರಿನಲ್ಲಿ ಜೆಡಿಎಸ್‌ ವಿರುದ್ಧ ಹರಿಹಾಯ್ದಿದ್ದಾರೆ. ಅಷ್ಟೊತ್ತಿಗಾಗಲೇ ಜೆಡಿಎಸ್‌ ಕಡೆಗೆ ಸೆಳೆದ ಗಮನ ಕೊನೆಯ ಹಂತದ ಪ್ರಚಾರಕ್ಕೆ ಸಹಾಯ ಮಾಡಿ ಆಗಿದೆ ಎಂಬುದು ಗಮನಾರ್ಹ.