samachara
www.samachara.com
ನಾಮಧಾರಿ, ಕಾಮಧಾರಿ, ಚರ್ವಿತ- ಚರ್ವಣ: ಮೋದಿ ಚುನಾವಣಾ ಭಾಷಣ
ರಾಜ್ಯ

ನಾಮಧಾರಿ, ಕಾಮಧಾರಿ, ಚರ್ವಿತ- ಚರ್ವಣ: ಮೋದಿ ಚುನಾವಣಾ ಭಾಷಣ

ಅಭಿವೃದ್ಧಿ, ಭ್ರಷ್ಟಾಚಾರ, ಅನಾಣ್ಯೀಕರಣ, ರೈತ ಯೋಜನೆಗಳು ಹೀಗೆ ನಾನಾ ವಿಚಾರಗಳನ್ನು ಮೋದಿ ಪ್ರಸ್ತಾಪಿಸಿದ್ದಾರೆ. ಅಪ್ಪಿ ತಪ್ಪಿ ಜೆಡಿಎಸ್‌ ವಿರುದ್ಧ ಒಂದೇ ಒಂದು ಅಕ್ಷರವೂ ಮೋದಿ ತಮ್ಮ ಭಾಷಣದಲ್ಲಿ ಆಡಲಿಲ್ಲ ಎಂಬುದು ಗಮನಾರ್ಹ.

samachara

samachara

ರಾಜ್ಯ ಬಿಜೆಪಿ ಪಾಲಿಗೆ ಬಹುನಿರೀಕ್ಷಿತ ಮೋದಿ ಪ್ರಚಾರ ಭಾ‍ಷಣದ ಮೊದಲ ಕಂತು ಮುಕ್ತಾಯವಾಗಿದೆ.

ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿಯಲ್ಲಿ ಪ್ರಧಾನಿ ಮೋದಿ ವಿದ್ಯುತ್ ಶಕ್ತಿಯನ್ನೇ ಕೇಂದ್ರವಾಗಿಟ್ಟುಕೊಂಡು ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ಗೆ ಶಾಕ್‌ ನೀಡುವ ಪ್ರಯತ್ನ ಮಾಡಿದ್ದಾರೆ. ಜತೆಗೆ, ಅಭಿವೃದ್ಧಿ, ಭ್ರಷ್ಟಾಚಾರ, ಹೆಸರು ಮಾಡಿರುವವರು, ಕೆಲಸ ಮಾಡುವವರು, ಅನಾಣ್ಯೀಕರಣ, ರೈತ ಯೋಜನೆಗಳು ಹೀಗೆ ನಾನಾ ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ಅಪ್ಪಿ ತಪ್ಪಿ ಜೆಡಿಎಸ್‌ ವಿರುದ್ಧ ಒಂದೇ ಒಂದು ಅಕ್ಷರವೂ ಮೋದಿ ತಮ್ಮ ಭಾಷಣದಲ್ಲಿ ಆಡಲಿಲ್ಲ ಎಂಬುದು ಗಮನಾರ್ಹ.

ಕನ್ನಡಕ್ಕೆ ಒತ್ತು:

ಕನ್ನಡದಲ್ಲಿಯೇ ಭಾ‍ಷಣ ಆರಂಭಿಸಿದ ಮೋದಿ, ಮಲೆ ಮಹದೇಶ್ವರ, ಮಂಟೆ ಸ್ವಾಮಿ, ರಾಜ್‌ ಕುಮಾರ್ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಸ್ಮರಣೀಯ ವ್ಯಕ್ತಿಗಳನ್ನು ನೆನಪಿಸಿಕೊಂಡರು.

ಎಂದಿನಂತೆ ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ಧಾಳಿಯನ್ನು ಆರಂಭಿಸಿದ ಮೋದಿ, ವಂದೇ ಮಾತರಂಗೆ ಗೌರವ ನೀಡಲಿಲ್ಲ ಎಂಬ ಭಾವನಾತ್ಮಕ ನೆಲೆಯಲ್ಲಿ ಟೀಕೆಗೆ ಇಳಿದರು. ನಂತರ, ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯ ವಿಚಾರವನ್ನು ಪ್ರಸ್ತಾಪಿಸಿದರು.

2009ರ ವೇಳೆಗೆ ಯುಪಿಎ ಸರಕಾರ ಹೇಳಿಕೊಂಡ ಪ್ರಕಾರ ದೇಶದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಮುಗಿಯಬೇಕಿತ್ತು. ಆದರೆ ಯೋಜನೆ ಕಾಗದದಲ್ಲಿ ಮಾತ್ರವೇ ಉಳಿದಿದೆ. ನಮ್ಮ ಸರಕಾರ ಬಂದ ನಂತರ ಕರ್ನಾಟಕದ 39 ಹಳ್ಳಿಗಳಿಗೆ ವಿದ್ಯುತ್ ನೀಡಿದೆ ಎಂದರು.

ಹೆಚ್ಚು ಕಡಿಮೆ ಮೋದಿ ಭಾಷಣದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ ತಕ್ಷಣ, ಬಿಜೆಪಿ ಟ್ವಟರ್ ಹ್ಯಾಂಡಲ್ ಮೂಲಕ ಯೋಜನೆಯ ಮಾಹಿತಿಯನ್ನು ಹರಿಯ ಬಿಡಲಾಯಿತು.

ಸಂತೆಮರಳ್ಳಿಯಲ್ಲಿ ತಮ್ಮ ಭಾ‍ಷಣವನ್ನು ಮುಂದುವರಿಸಿದ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನೇ ತಮ್ಮ ಟೀಕೆಯ ಕೇಂದ್ರಬಿಂದುವಾಗಿಟ್ಟುಕೊಂಡರು. “ಕರ್ನಾಟಕ ಸರಕಾರದ ಸಾಧನೆಗಳನ್ನು ಚೀಟಿಯಿಲ್ಲದೆಯೇ 15 ನಿಮಿಷ ನಿಮ್ಮಿಷ್ಟದ ಭಾ‍ಷೆಯಲ್ಲಿ ವಿವರಿಸಿ,’’ ಎಂದು ಸವಾಲು ಹಾಕಿದರು. ಈ ಸಮಯದಲ್ಲಿ ಮೋದಿ ಕೂಡ ಟಿಪ್ಪಣಿಗಳನ್ನು ನೋಡಿಕೊಂಡೇ ಮಾತನಾಡುತ್ತಿದ್ದರು ಎಂಬುದು ವಿಶೇಷ.

ಉಳಿದಂತೆ, ಕಾಂಗ್ರೆಸ್ ಎಂಬುದು ಹೆಸರು ಮಾಡಿದವರ ಪಕ್ಷ (ನಾಮಧಾರಿಗಳು), ನಮ್ಮದು ಕೆಲಸ ಮಾಡುವವರ ಪಕ್ಷ (ಕಾಮಧಾರಿಗಳು) ಎಂಬ ಉಪಮೇಯವನ್ನು ಮೋದಿ ಪರಿಚಯಿಸಿದರು. ಭಾ‍ಷಣದಲ್ಲಿ ಹಲವು ಬಾರಿ ಇದೇ ಉಪಮೇಯ ಪ್ರಸ್ತಾಪವಾಯಿತು.

ಅನಾಣ್ಯೀಕರಣದ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ಎಲ್ಲಿಯೂ ಸ್ಪಷ್ಟವಾಗಿ ಯೋಜನೆಯ ಲಾಭಗಳನ್ನು ವಿವರಿಸುವ ಗೋಜಿಗೆ ಹೋಗಲಿಲ್ಲ. ಬದಲಿಗೆ, ಅನಾಣ್ಯೀಕರಣದಿಂದ ನಾಮಧಾರಿಗಳ ಹಣಕ್ಕೆ ಹೊಡೆತ ಬಿತ್ತು ಎಂದು ತೇಲಿಸುವ ಪ್ರಯತ್ನ ಮಾಡಿದರು.

ಕುಟುಂಬ ರಾಜಕಾರಣ ಪ್ರಸ್ತಾಪಿಸಿದ ಮೋದಿ, ಕರ್ನಾಟಕದಲ್ಲಿ 2+1 ಫಾರ್ಮುಲಾ ನಡೆಯುತ್ತಿದೆ. ತಂದೆ ಮತ್ತು ಮಕ್ಕಳಿಗೆ ಟಿಕೆಟ್ ನೀಡುವ ಮೂಲಕ ಕುಟುಂಬ ರಾಜಕಾರಣ ನಡೆಯುತ್ತಿದೆ. ಸಿದ್ದರಾಮಯ್ಯ ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು, ಆತನನ್ನೂ ಬಲಿ ಹಾಕುಲು ಹೊರಟಿದ್ದಾರೆ ಎಂದರು. ಇಡೀ ಭಾ‍ಷಣದಲ್ಲಿ ನೇರವಾಗಿ ಸಿದ್ದರಾಮಯ್ಯ ಅವರನ್ನು ನೆನಪಿಸಿಕೊಂಡಿದ್ದು ಒಂದೇ ಬಾರಿ ಎಂಬುದು ಗಮನ ಸೆಳೆಯುವಂತಿತ್ತು.

ಬಿಟ್ಟರೆ, ಕಾಂಗ್ರೆಸ್ ಅಭಿವೃದ್ಧಿ ವಿರೋಧಿ, ಚಾಮರಾಜನಗರ ರೈಲು ಯೋಜನೆಗೆ ಭೂಮಿ ನೀಡುತ್ತಿಲ್ಲ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಯೋಜನೆ ಜಾರಿಯಾಗಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ, ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ, 10% ಸರಕಾರ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮುರಿದು ಬಿದ್ದಿದೆ, ಲೋಕಾಯುಕ್ತರ ಮೇಲೆಯೇ ಹಲ್ಲೆ ನಡೆದಿದೆ, ಪೊಲೀಸ್‌ ಅಧಿಕಾರಿ ಆತಂಕದಿಂದ ಪತ್ರ ಬರೆದಿದ್ದಾರೆ ಎಂದು ಮೋದಿ ಟೀಕೆಗಳನ್ನು ಮುಂದಿಟ್ಟರು.

ಕೊನೆಯಲ್ಲಿ ಮತ್ತೆ ಕನ್ನಡಕ್ಕೆ ಮರಳಿದ ಮೋದಿ, ‘ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ’ ಎಂದರು.

ಒಟ್ಟಾರೆ, ಬಹು ನಿರೀಕ್ಷಿತ ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ಮೊದಲ ಭಾ‍ಷಣ ಗೂಗ್ಲಿಗಳನ್ನೇನೂ ಹಾಕಲಿಲ್ಲ. ಎಂದಿನ ಶೈಲಿನಲ್ಲಿಯೇ ಟೀಕೆಗಳಿಗೆ ಸೀಮಿತವಾಗಿದ್ದ ಮೋದಿ ಭಾ‍ಷಣ ಬಿಜೆಪಿ ಪರವಾಗಿ ಯಾಕೆ ಮತ ಚಲಾವಣೆ ಮಾಡಬೇಕು ಎಂಬುದನ್ನೂ ಫೋಕಸ್‌ ಆಗಿ ಮುಂದಿಡಲಿಲ್ಲ. ಅಥವಾ, ಎದ್ದಿರುವ ಹಲವು ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಿಲ್ಲ.

ಮೋದಿ ಮುಂದಿನ ಭಾಷಣ ಉಡುಪಿಯಲ್ಲಿ ಆಯೋಜನೆಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಾದರೂ ಮೋದಿ ಭಾ‍ಷಣ ಮೋಡಿ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.