samachara
www.samachara.com
ಹಿಂದಿನ ಸಾಧನೆ, ಹೊಸ ಭರವಸೆಗಳ ಸುತ್ತ ಗಿರಕಿ ಹೊಡೆದ ಕಾಂಗ್ರೆಸ್‌ ಪ್ರಣಾಳಿಕೆ
ರಾಜ್ಯ

ಹಿಂದಿನ ಸಾಧನೆ, ಹೊಸ ಭರವಸೆಗಳ ಸುತ್ತ ಗಿರಕಿ ಹೊಡೆದ ಕಾಂಗ್ರೆಸ್‌ ಪ್ರಣಾಳಿಕೆ

ಆಡಳಿತರೂಢ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆ ಶುಕ್ರವಾರ ಬಿಡುಗಡೆಯಾಗಿದೆ. ರಾಜ್ಯ ಸರಕಾರವನ್ನು ‘ಪ್ರಗತಿಪರ ಸರಕಾರ’ ಎಂದು ಹೇಳಿಕೊಂಡಿದೆ. ಈವರೆಗಿನ ಸಾಧನೆ ಹಾಗೂ ಭವಿಷ್ಯದ ಭರವಸೆಗಳು ಹೈಲೈಟ್ಸ್‌. 

ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಮಂಗಳೂರಿನಲ್ಲಿ ಬಿಡುಗಡೆ ಮಾಡಿದ್ದಾರೆ.

ಹಲವು ದಿನಗಳಿಂದ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆಯ ಬಗ್ಗೆ ಮಾತುಗಳು ಕೇಳಿ ಬಂದಿತ್ತಾದರೂ, ಅಧಿಕೃತ ದಿನಾಂಕ ತಿಳಿದು ಬಂದಿರಲಿಲ್ಲ. ಈ ಬಗ್ಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಎರಡು ದಿನಗಳೊಳಗೆ ಪ್ರಣಾಳಿಕೆ ಬಿಡುಗಡೆಯಾಗಲಿದೆ ಎಂದಿದ್ದರು.

ಪ್ರಣಾಳಿಕೆ ಆರಂಭದಲ್ಲಿಯೇ ‘ಕಾಂಗ್ರೆಸ್‌ ಪ್ರಗತಿ’ಯ ಪಕ್ಷ ಎಂಬುದಾಗಿ ಹೇಳಿಕೊಂಡಿರುವ ಕಾಂಗ್ರೆಸ್‌ ಐದು ವರ್ಷಗಳಲ್ಲಿ ತಂದ ಯೋಜನೆಗಳನ್ನು ಪ್ರಣಾಳಿಕೆಯ ಮೂಲಕ ಜನರ ಮುಂದಿಟ್ಟಿದೆ. ಕಳೆದ ಬಾರಿ ಚುನಾವಣೆಗೂ ಮುನ್ನ ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು ಪೂರೈಸಲಾಗಿದೆ ಎಂದು ಪ್ರಣಾಳಿಕೆ ಹೇಳುತ್ತದೆ.

2014ರ ಲೋಕಸಭೆ ಚುನಾವಣೆಯಲ್ಲಿ ‘ಗುಜರಾತ್‌ ಮಾದರಿ’ಯನ್ನು ಮುಂದಿಟ್ಟು ಬಿಜೆಪಿ ಪ್ರಚಾರ ಕಾರ್ಯ ಮಾಡಿತ್ತು. ಈ ಬಾರಿ ‘ಕರ್ನಾಟಕ ಮಾದರಿ’ಯನ್ನು ಕರ್ನಾಟಕ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಗೆ ಮುಂದಿಡಲು ಕಾಂಗ್ರೆಸ್‌ ಚಿಂತಿಸಿರುವುದು ಪ್ರಣಾಳಿಕೆಯಿಂದ ಸಾಭೀತಾಗುತ್ತಿದೆ.

ಕರ್ನಾಟಕವೇ ಮೊದಲು:

ಈ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಕರ್ನಾಟಕ ಭೇಟಿ ಸಂದರ್ಭದಲ್ಲಿ ಬೆಂಗಳೂರಿನ ಹಲವೆಡೆ ಕಾಂಗ್ರೆಸ್‌ ಜಾಹೀರಾತು ಹಾಕಿತ್ತು. ದೇಶದ ನಂಬರ್‌ 1. ರಾಜ್ಯಕ್ಕೆ ಸ್ವಾಗತ ಎಂಬ ಸಾಲುಗಳು ಜಾಹೀರಾತಿನಲ್ಲಿದ್ದವು. ಅದೇ ಛಾಯೆ ಪ್ರಣಾಳಿಕೆಯಲ್ಲೂ ಕಾಣಿಸುತ್ತಿದೆ. ಕರ್ನಾಟಕ ರಾಜ್ಯ ಹಲವು ಮೊದಲುಗಳನ್ನು ಹೊಂದಿದೆ ಎಂಬ ಅಂಶಗಳನ್ನು ಅದು ಒಳಗೊಂಡಿದೆ.

ಏಕೀಕೃತ ಕೃಷಿ ಇ- ಮಾರುಕಟ್ಟೆ, ಮಹಿಳೆಯರಿಗೆ ಮೀಸಲಾದ ಕೈಗಾರಿಕಾ ಕೇಂದ್ರ, ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯ ಆರಂಭ, ಬಂಡವಾಳ ಹೂಡಿಕೆ, ಐಟಿ ರಫ್ತು, ಜೈವಿಕ ತಂತ್ರಜ್ಞಾನ ಕೇಂದ್ರ, ಉತ್ಪಾದನಾ ಉತ್ಕೃಷ್ಟತೆ, ಸ್ಟಾರ್ಟ್‌ಅಪ್ಸ್‌, ಇಂಟೆಲಿಜೆಂಟ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್‌ ಮೊದಲಾದ ವಲಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎನ್ನುತ್ತದೆ ಪ್ರಣಾಳಿಕೆ.

ಜತೆಗೆ ಪ್ರಣಾಳಿಕೆಯಲ್ಲಿ ಪರೋಕ್ಷವಾಗಿ ಬಿಜೆಪಿ ಕೋಮು ಸೌಹಾರ್ದತೆ ಕದಡುವ ಪಕ್ಷವಾಗಿದ್ದು, ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್‌ ಆರಿಸಲೇ ಬೇಕು ಎನ್ನಲಾಗಿದೆ. ಕಾಂಗ್ರೆಸ್‌ ಪ್ರಗತಿಪರ ಪಕ್ಷವಾಗಿದ್ದು, ಜಾತ್ಯತೀತ ಚಿಂತನೆಯುಳ್ಳ ಕನ್ನಡಿಗರು ಕಾಂಗ್ರೆಸ್‌ನ್ನು ಮರು ಆಯ್ಕೆ ಮಾಡಬೇಕು ಎಂಬ ಮನವಿ ಮಾಡಿದೆ. ಒಂದೆಡೆ ಜಾತ್ಯತೀತ ತತ್ವದ ಬಗ್ಗೆ ಮಾತನಾಡುತ್ತ ಇನ್ನೊಂದೆಡೆ ಅಸ್ಪೃಶ್ಯತೆ ಇನ್ನೂಜಾರಿಯಲ್ಲಿರುವ ಮಠ ಮಾನ್ಯಗಳಿಗೆ ಸಿದ್ದರಾಮಯ್ಯ ಮತ್ತು ರಾಹುಲ್‌ ಗಾಂಧಿ ಭೇಟಿ ನೀಡುತ್ತಿದ್ದಾರೆ.

ಮುಂದಿಟ್ಟ ಆಶ್ವಾಸನೆಗಳು:

 • ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸ್ಟಾರ್ಟ್‌ ಅಪ್‌ ಸಂಸ್ಥೆ ನಿರ್ಮಾಣಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ.
 • ಸಫಾಯಿ ಕರ್ಮಚಾರಿಗಳ ಸಂಬಳವನ್ನು ಬ್ಯಾಂಕ್‌ ಖಾತೆಗೆ ಜಮೆ. ಉದ್ಯೋಗ ಸುರಕ್ಷತೆ ಕಲ್ಪಿಸುವ ಆಶ್ವಾಸನೆ.
 • ಸಾಮಾಜಿಕ ಭದ್ರತೆ ಸ್ಕೀಂ ಕಾರ್ಪೊರೇಷನ್‌ಗಳ ಸ್ಥಾಪನೆ.
 • ಬಡತನದ ರೇಖೆಗಿಂತ ಕೆಳಗಿರುವವರಿಗೆ ಆರೋಗ್ಯ ವಿಮೆ, ಗೃಹ ನಿರ್ಮಾಣ.
 • ಮಲ ಹೊರುವ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ.
 • ಸಫಾಯಿ ಕರ್ಮಚಾರಿಗಳಿಗೆ ಸಾರ್ವಜನಿಕ ಶೌಚಾಲಯ.
 • ವಸತಿ ಯೋಜನೆಯಡಿ ನಿರ್ಮಾಣವಾಗುವ ಶೇಕಡ 10% ಮನೆಗಳು ಸಫಾಯಿ ಕರ್ಮಚಾರಿಗಳಿಗೆ ಮತ್ತು ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ನೀಡಿಕೆ.
 • ಮದರಸಾಗಳ ನಿರ್ವಹಣೆಗೆ ಮದರಸಾ ಬೋರ್ಡ್‌, ಚರ್ಚ್‌ ನಿರ್ವಹಣೆಗೆ ಕ್ರಿಷ್ಚಿಯನ್‌ ಡೆವೆಲಪ್‌ಮೆಂಟ್‌ ಬೋರ್ಡ್‌ ನಿರ್ಮಾಣ.
 • ಕನ್ನಡ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ ಕನ್ನಡ ಭವನ ನಿರ್ಮಾಣ.
 • ಕನ್ನಡೇತರ ಮಕ್ಕಳಿಗೆ ಕನ್ನಡ ಸ್ಪೆಷಲ್‌ ಕ್ಲಾಸ್‌.
 • ಸರಕಾರಿ ಕೆಲಸದಲ್ಲಿರುವ ಮಹಿಳೆಯರಿಗೆ 50% ಸಬ್ಸಿಡಿ ದರದಲ್ಲಿ ಸ್ಕೂಟರ್‌ ಅಥವಾ 30,000 ರೂ. ಸಾಲ.
 • ವಿದ್ಯಾಕೇಂದ್ರಗಳ ಶೌಚಾಲಯಕ್ಕೆ ಉಚಿತ ನ್ಯಾಪ್ಕಿನ್‌.
 • ಬಡತನದ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ ವಿತರಣೆ.
 • ಕೌಶಲ್ಯರಹಿತ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಹೆಲ್ತ್‌ ಕಾರ್ಡ್‌.

ಇದೇ ರೀತಿಯ ಹಲವು ಆಶ್ವಾಸನೆಗಳನ್ನು ಪ್ರಣಾಳಿಕೆ ಒಳಗೊಂಡಿದ್ದು, ಅಸ್ಪೃಶ್ಯ ಸಮುದಾಯ ಮತ್ತು ಅಲ್ಪಸಂಖ್ಯಾತರ ಓಲೈಕೆ ಮೇಲ್ನೋಟಕ್ಕೆ ಕಂಡು ಬರುತ್ತದೆ. ಮದರಸಾ ಮತ್ತು ಚರ್ಚ್‌ಗಳ ನಿರ್ವಹಣೆಗಾಗಿ ಮಂಡಳಿ ರಚಿಸುವ ಆಶ್ವಾಸನೆಯಿಂದ ಅಲ್ಪಸಂಖ್ಯಾತರ ಓಲೈಕೆ ಸ್ಪಷ್ಟವಾಗುತ್ತದೆ.

ಒಟ್ಟಿನಲ್ಲಿ ಹೊಸ ಆಶ್ವಾಸನೆಗಳೊಂದಿಗೆ ಕಾಂಗ್ರೆಸ್‌ ಮತ್ತೆ ಜನರ ಮುಂದೆ ನಿಂತಿದೆ. ಐದು ವರ್ಷಗಳಲ್ಲಿ ಸರಕಾರ ಮಾಡಿದ ಕೆಲಸಗಳನ್ನು ತೂಕಹಾಕಿ ಜನ ಮತದಾನ ಮಾಡಲಿದ್ದಾರೆ. ಬಿಜೆಪಿ ಕೂಡ ಸದ್ಯದಲ್ಲೇ ಪ್ರಣಾಳಿಕೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಪ್ರಣಾಳಿಕೆಗಳು ಮಹತ್ವ ಕಳೆದುಕೊಂಡಿದ್ದರೂ, ರಾಜಕೀಯ ಪಕ್ಷಗಳ ಆಲೊಚನೆ ಹಾಗೂ ಭವಿಷ್ಯದ ಬಗೆಗಿನ ಅವುಗಳ ಯೋಜನೆಗಳನ್ನು ಇವು ನಿರೂಪಿಸುತ್ತವೆ.