ಜೇಟ್ಲಿ ಕೃಷಿ ಬಜೆಟ್‌’: ಕೃಷಿ ಕ್ಷೇತ್ರಕ್ಕೆ ಭಾರೀ ಕೊಡುಗೆ ಸಿಗಬಹುದೆಂಬ ನಿರೀಕ್ಷೆಯನ್ನು ಈ ಬಜೆಟ್ ಹುಸಿಯಾಗಿಸಿದೆ!
ರಾಜ್ಯ

ಜೇಟ್ಲಿ ಕೃಷಿ ಬಜೆಟ್‌’: ಕೃಷಿ ಕ್ಷೇತ್ರಕ್ಕೆ ಭಾರೀ ಕೊಡುಗೆ ಸಿಗಬಹುದೆಂಬ ನಿರೀಕ್ಷೆಯನ್ನು ಈ ಬಜೆಟ್ ಹುಸಿಯಾಗಿಸಿದೆ!

Summarytoggle summary

2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು, ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗೆ ರೂ. 2,000 ಕೋಟಿ, ಕಾರೀಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಒಂದೂವರೆ ಪಟ್ಟು ಏರಿಕೆ, ‘ಆಪರೇಷನ್ ಗ್ರೀನ್’ ಘೋಷಣೆ, 4 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ, 8 ಕೋಟಿ ಮಹಿಳೆಯರಿಗೆ ‘ಉಜ್ವಲಾ ಯೋಜನೆ’ಯಡಿ ಉಚಿತ ಎಲ್ ಪಿ ಜಿ ಸಂಪರ್ಕ... ಹೀಗೆ ಕೃಷಿ ಹಾಗೂ ಗ್ರಾಮೀಣ ಭಾರತವನ್ನು ಗುರಿಯಾಗಿಸಿಕೊಂಡು ಈ ಬಾರಿಯ ಕೇಂದ್ರ ಬಜೆಟ್ ಮಂಡನೆಯಾಗಿದೆ. ಆದರೆ, ಕೃಷಿ ಕ್ಷೇತ್ರಕ್ಕೆ ಭಾರೀ ಕೊಡುಗೆ ಸಿಗಬಹುದೆಂಬ ನಿರೀಕ್ಷೆಯನ್ನು ಈ ಬಜೆಟ್ ಹುಸಿಯಾಗಿಸಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.

ಈ ಬಾರಿಯ ಬಜೆಟ್ ನಲ್ಲಿ ಕೃಷಿ ಹಾಗೂ ಕೃಷಿಕರ ಮೂಲ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಗಮನ ನೀಡಲಾಗಿಲ್ಲ. ಇದು ಕೃಷಿ ಉತ್ಪಾದನೆಯನ್ನು ಗುರಿಯಾಗಿಸಿಕೊಂಡ ಬಜೆಟ್ ಹೊರತು ಕೃಷಿಕರಿಗೆ ಉಪಯೋಗವಾಗುವ ಬಜೆಟ್ ಅಲ್ಲ. ಕೃಷಿಯ ದೀರ್ಘಾವಧಿ ಪರಿಣಾಮಗಳ ಮೇಲೆ ಈ ಬಜೆಟ್ ಗಮನ ಹರಿಸಿಲ್ಲ ಎನ್ನುತ್ತಾರೆ ವಿತ್ತ ವಿಶ್ಲೇಷಕರು.

"ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮೂಲಸೌಕರ್ಯ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಇದೆ. ಕೃಷಿ ಉತ್ಪನ್ನಗಳ ಸಾಗಣೆ, ಸಂಸ್ಕರಣೆ ಹಾಗೂ ಮಾರುಕಟ್ಟೆಯ ಸರಿಯಾದ ವ್ಯವಸ್ಥೆ ಇಲ್ಲ. ಗುಣಮಟ್ಟದ ಶೇಖರಣಾ ಘಟಕಗಳಿಲ್ಲ. ವ್ಯವಸಾಯದ ವಿಧಾನಗಳು ಬದಲಾಗಬೇಕು. ಕೃಷಿಯ ಮೂಲ ಸಮಸ್ಯೆಗಳನ್ನು ಸರ್ಕಾರ ಮೊದಲು ಗುರುತಿಸಬೇಕು. ಮೂಲ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಹೆಚ್ಚು ಒತ್ತು ನೀಡಬೇಕು," ಎಂಬುದು ಕೃಷಿ ಆರ್ಥಿಕ ತಜ್ಞ ಪ್ರೊ. ಗೋಪಾಲ್ ನಾಯಕ್ ಅವರ ಮಾತು.

"ಕೃಷಿ ಕ್ಷೇತ್ರದಲ್ಲಿ ಮಾಹಿತಿ ಕೊರತೆ ಹೆಚ್ಚಾಗಿದೆ. ರೈತರು ಏನು ಮಾಡುತ್ತಿದ್ದಾರೆ, ರೈತರಿಗೆ ಏನು ಬೇಕು ಎಂಬುದು ತಂತ್ರಜ್ಞರಿಗೆ ಗೊತ್ತಾಗುತ್ತಿಲ್ಲ. ತಂತ್ರಜ್ಞಾನ ಯಾವ ರೀತಿ ಬೆಳೆಯುತ್ತಿದೆ. ಯಾವ ಬೆಳೆಗಳಿಗೆ ಬೇಡಿಕೆ ಇದೆ, ಯಾವ ಬೆಳೆಗಳನ್ನು ಹೇಗೆ ಬೆಳೆಯಬೇಕು ಎಂಬ ಮಾಹಿತಿ ರೈತರಿಗಿಲ್ಲ. ಈ ಮಾಹಿತಿ ವಿನಿಮಯದ ದೊಡ್ಡ ಕಂದರದಿಂದ ಕೃಷಿ ಕ್ಷೇತ್ರ ನಲುಗುತ್ತಿದೆ. ರೈತರಿಗೆ ಹವಾಮಾನದ ಮಾಹಿತಿ, ತಂತ್ರಜ್ಞಾನದ ಮಾಹಿತಿ, ಮಾರುಕಟ್ಟೆಯ ಮಾಹಿತಿ ಸರಿಯಾಗಿ ಸಿಗುತ್ತಿಲ್ಲ. ಕೃಷಿ ಮಾರುಕಟ್ಟೆ ವ್ಯವಸ್ಥೆ ಬಲಪಡಿಸಲು ಸರ್ಕಾರ ಮುಂದಾಗಬೇಕು. ನಮ್ಮ ದೇಶದಲ್ಲಿ ಕೃಷಿಯ ನೀರಾವರಿ ವ್ಯವಸ್ಥೆ ಸರಿಯಿಲ್ಲ. ನೀರಿನ ಹಂಚಿಕೆಯಲ್ಲಿ ಅಸಮತೋಲನವಿದೆ. ಕೆಲವೆಡೆ ನೀರು ಹೆಚ್ಚಾಗಿದ್ದರೆ, ಕೆಲವೆಡೆ ಒಣಭೂಮಿ ಹೆಚ್ಚಾಗಿದೆ. ಈ ಅಸಮತೋಲನ ನಿವಾರಣೆಯ ಪ್ರಯತ್ನಗಳು ಹೆಚ್ಚಾಗಬೇಕು," ಎನ್ನುತ್ತಾರೆ ಅವರು.

"ದೇಶದ ಶೇಕಡ 49ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ, ಕೃಷಿ ಮೂಲಸೌಕರ್ಯಕ್ಕೆ ಸರ್ಕಾರ ಈ ಬಜೆಟ್ ನಲ್ಲಿ ಹೆಚ್ಚಿನ ಗಮನ ನೀಡಿಲ್ಲ. ನೀರಾವರಿ ಯೋಜನೆಗಳ ಸಮರ್ಪಕ ಜಾರಿ, ಒಣಭೂಮಿ ಕೃಷಿ ಅಭಿವೃದ್ಧಿಯಂಥ ದೀರ್ಫಾವಧಿ ಪರಿಹಾರ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಇತ್ತೀಚೆಗೆ ಮಹಿಳೆಯರು ಹೆಚ್ಚಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ರೈತ ಮಹಿಳೆಯರನ್ನು ಉತ್ತೇಜಿಸುವಂಥ ಯಾವ ಘೋಷಣೆಗಳೂ ಈ ಬಜೆಟ್ ನಲ್ಲಿಲ್ಲ. ತಂತ್ರಜ್ಞಾನ ಬಳಕೆ ಹೇಗೆ ಮಾಡಿಕೊಳ್ಳಬೇಕೆಂಬ ಬಗ್ಗೆ ಸರ್ಕಾರಗಳು ಇನ್ನೂ ರೈತರಿಗೆ ಪೂರ್ವ ತಯಾರಿ ಮಾಡಿಸಿಲ್ಲ. ರೈತರ ಸಂಘಟನೆಗಳ ಮೂಲಕ ಕೃಷಿ ಪರಿಕರಗಳ ಸಮರ್ಪಕ ಬಳಕೆಗೆ ಸರ್ಕಾರ ಉತ್ತೇಜನ ನೀಡಬೇಕು. ದೀರ್ಘಾವಧಿಯಲ್ಲಿ ರೈತರು ಹಾಗೂ ಕೃಷಿ ವಲಯಕ್ಕೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನ ಈ ಬಜೆಟ್ ನಲ್ಲಿ ಆಗಿಲ್ಲ," ಎಂಬುದು ಆರ್ಥಿಕ ವಿಶ್ಲೇಷಕ ಪ್ರೊ. ಎಸ್.ಆರ್.ಕೇಶವ.

ದೇಶದ ದೊಡ್ಡ ಮತಬ್ಯಾಂಕ್ ಆಗಿರುವ ಗ್ರಾಮೀಣ ಭಾರತವನ್ನು ಗುರಿಯಾಗಿಸಿಕೊಂಡು, ಮುಂಬರುವ ವಿಧಾನಸಭಾ ಚುನಾವಣೆಗಳು ಮತ್ತು ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಬಜೆಟ್ ಮಂಡನೆಯಾಗಿರುವಂತಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಈ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಉದ್ದೇಶ ಸರ್ಕಾರದ್ದು ಎಂದಿದ್ದಾರೆ ಜೇಟ್ಲಿ.

ಕೃಷಿ ಮತ್ತು ಕೃಷಿ ಸಂಬಂಧಿತ ವೆಚ್ಚಗಳಿಗಾಗಿ 2018-19ನೇ ಸಾಲಿನ ಬಜೆಟ್ ನಲ್ಲಿ ರೂ.63,836 ಕೋಟಿ ಮತ್ತು ಗ್ರಾಮೀಣಾಭಿವೃದ್ಧಿಗೆ ರೂ. 1,38,097 ಕೋಟಿ ಮೀಸಲಿಡಲಾಗಿದೆ. ರೈತರಿಗೆ ನೀಡುವ ಸಾಂಸ್ಥಿಕ ಸಾಲದ ಮೊತ್ತವನ್ನು ರೂ. 10 ಕೋಟಿಯಿಂದ ರೂ. 11 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಹನಿ ನೀರಾವರಿ ಯೋಜನೆಗಳಿಗಾಗಿ ರೂ. 2,600 ಕೋಟಿ ಮೀಸಲಿಡಲಾಗಿದೆ.

"ದೇಶದಲ್ಲಿ ಶೇಕಡ 86ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಈ ಸಣ್ಣ ರೈತರು ನೇರವಾಗಿ ದೊಡ್ಡ ಮಾರುಕಟ್ಟೆಗೆ ತಮ್ಮ ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಬರುವುದು ಸಾಧ್ಯವಿಲ್ಲ. ಹೀಗಾಗಿ 22 ಸಾವಿರ ಸಂತೆಗಳನ್ನು ‘ಗ್ರಾಮೀಣ ಕೃಷಿ ಮಾರುಕಟ್ಟೆ’ಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ದೇಶದ ಎಲ್ಲಾ ಕೃಷಿ ಮಾರುಕಟ್ಟೆಗಳ ಉನ್ನತೀಕರಣಕ್ಕಾಗಿ ರೂ. 2,000 ಕೋಟಿ ಮೀಸಲಿಡಲಾಗುವುದು," ಎಂದು ಜೇಟ್ಲಿ ಹೇಳಿದ್ದಾರೆ.

ಕಾರೀಫ್ ಬೆಳೆಗಳ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗಿದೆ. ಮೀನುಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ ರೂ. 10,000 ಕೋಟಿ ಮೀಸಲಿಡಲಾಗಿದೆ.

ಪ್ರಧಾನಮಂತ್ರಿ ಸೌಭಾಗ್ಯ ಯೋಜನೆಯಡಿ ರೂ. 16,000 ಕೋಟಿ ವೆಚ್ಚದಲ್ಲಿ 4 ಕೋಟಿ ಬಡಜನರಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದಿದ್ದಾರೆ ಜೇಟ್ಲಿ. ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಒದಗಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಘೋಷಣೆ ಈ ಮೂಲಕ ಬಜೆಟ್ ನಲ್ಲಿ ಸಾಕಾರವಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ 6 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ 2 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದು ಜೇಟ್ಲಿ ತಿಳಿಸಿದ್ದಾರೆ.

ಸ್ವಉದ್ಯೋಗ ಮಹಿಳಾ ಸಂಘಗಳಿಗೆ ನೀಡುವ ಸಾಲವನ್ನು ಮಾರ್ಚ್ 2019ರಿಂದ ರೂ. 75,000 ಕೋಟಿಗೆ ಹೆಚ್ಚಿಸುವುದಾಗಿ ಘೋಷಿಸಿರುವ ಜೇಟ್ಲಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನಕ್ಕೆ (ಎನ್ ಆರ್ ಎಲ್ ಎಂ) ರೂ. 5,750 ಕೋಟಿ ಮೀಸಲಿಟ್ಟಿದ್ದಾರೆ.

‘ಆಪರೇಷನ್ ಗ್ರೀನ್’?

ತರಕಾರಿ ಬೆಳೆಗಳ ಮಾರಾಟ ಉತ್ತೇಜನಕ್ಕಾಗಿ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ‘ಆಪರೇಷನ್ ಗ್ರೀನ್’ ಘೋಷಣೆಯಾಗಿದೆ. ಇದಕ್ಕಾಗಿ ಬಜೆಟ್ ನಲ್ಲಿ ರೂ. 500 ಕೋಟಿ ಮೀಸಲಿಡಲಾಗಿದೆ. ಟೊಮೇಟೊ, ಆಲೂಗಡ್ಡೆ, ಈರುಳ್ಳಿ ಸೇರಿದಂತೆ ತರಕಾರಿ ಬೆಳೆಗಳ ಸಂಸ್ಕರಣೆ ಮತ್ತು ಸಾಗಣೆಯನ್ನು ವ್ಯವಸ್ಥಿತಗೊಳಿಸುವ ಉದ್ದೇಶ ‘ಆಪರೇಷನ್ ಗ್ರೀನ್’ನದ್ದು ಎಂದಿದ್ದಾರೆ ಜೇಟ್ಲಿ.

ಈ ಎಲ್ಲಾ ಘೋಷಣೆಗಳ ಮೂಲಕ ದೇಶದ ಅನ್ನದಾತ, ಗ್ರಾಮೀಣ ಭಾರತೀಯ ಮತ್ತು ಮಧ್ಯಮವರ್ಗವನ್ನು ಓಲೈಸಿಕೊಳ್ಳುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ವಿಧಾನಸಭಾ ಚುನಾವಣೆಗಳು ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ತಂತ್ರವಾಗಿ ಈ ಬಜೆಟ್ ಅನ್ನು ಬಳಸಿಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

"ಕೃಷಿಗೆ ಬೆಂಬಲ ಬೆಲೆ ಘೋಷಣೆ, ಟೊಮೇಟೊ, ಈರುಳ್ಳಿ, ಆಲೂಗಡ್ಡೆ ಬೆಳೆಗಳ ಮಾರುಕಟ್ಟೆ ಮೂಲಸೌಕರ್ಯಕ್ಕೆ ಹಣ ಮೀಸಲಿಟ್ಟಿರುವುದು ಈ ಬಜೆಟ್ ನ ಸಕಾರಾತ್ಮಕ ಅಂಶಗಳು. ಆದರೆ, ಕೃಷಿಗೆ ಅಗತ್ಯವಾದ ರಾಷ್ಟ್ರೀಯ ಮಾರುಕಟ್ಟೆ, ಅಂತರ ರಾಜ್ಯ ಮಾರುಕಟ್ಟೆಯ ಮೂಲಸೌಕರ್ಯ ಅಭಿವೃದ್ಧಿ ವಿಷಯಗಳನ್ನು ಕಡೆಗಣಿಸಲಾಗಿದೆ. ರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆ ಅಗತ್ಯವಾಗಿ ಜಾರಿಗೆ ಬರಬೇಕು," ಎನ್ನುತ್ತಾರೆ ಐಸೆಕ್‌ನ ಆರ್ಥಿಕ ತಜ್ಞ ಆರ್.ಎಸ್. ದೇಶಪಾಂಡೆ.

"ರೈತರ ಹೆಸರಿನಲ್ಲಿ ಘೋಷಣೆಯಾಗುವ ಯೋಜನೆಗಳ ಪ್ರಯೋಜನ ರೈತರಿಗೆ ಸಿಗಬೇಕು. ಆದರೆ, ಅಂಕಿ ಸಂಖ್ಯೆಗಳಲ್ಲಿ ಮಾತ್ರ ಕೃಷಿ ವಲಯಕ್ಕೆ ಕೋಟಿ ಕೋಟಿ ರೂಪಾಯಿ ಘೋಷಣೆಯಾಗುತ್ತದೆ. ಈ ಘೋಷಣೆಗಳಲ್ಲಿ ಎಷ್ಟು ಅನುಷ್ಠಾನಕ್ಕೆ ಬರುತ್ತವೆ ಎಂಬುದು ಮುಖ್ಯ. ಈ ಹಿಂದೆ ಘೋಷಣೆಯಾಗಿರುವ ಎಷ್ಟು ರೈತ ಯೋಜನೆಗಳನ್ನು ಸರ್ಕಾರಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿವೆ?," ಎಂಬುದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಅಭಿಪ್ರಾಯ.

‘ಈ ಬಜೆಟ್ ಮೂಲಕ ಹಣಕಾಸು ಸಚಿವರು ರೈತರ ಏಳಿಗೆಗಾಗಿ ಪ್ರಯತ್ನ ಮಾಡಿದ್ದಾರೆ. ಆದರೆ, ರೈತರ ಮತ್ತು ಗ್ರಾಮೀಣ ಜನರ ನಿಜವಾದ ಸಮಸ್ಯೆಗಳು ಸಾಕಷ್ಟಿವೆ’
- ಎಚ್. ಡಿ. ದೇವೇಗೌಡ, ಮಾಜಿ ಪ್ರಧಾನಿ
‘ಇದು ರೈತನಿಗೆ ಪೂರಕವಲ್ಲದ ಬಜೆಟ್. ಪ್ರತಿ ವರ್ಷ ಸರ್ಕಾರಗಳು ರೈತರ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಂಕಿ ಸಂಖ್ಯೆಯನ್ನು ಘೋಷಿಸುತ್ತಲೇ ಇವೆ. ಆದರೆ, ಘೋಷಣೆಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಕೃಷಿ ಹಾಗೂ ಗ್ರಾಮೀಣ ಭಾರತಕ್ಕೆ ಹೆಚ್ಚು ಹಣ ಮೀಸಲಿಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ನಿಜವಾಗಿ ರೈತರ ಉದ್ಧಾರ ಹಾಗೂ ಗ್ರಾಮೀಣ ಬಡಜನರ ಜೀನವಮಟ್ಟ ಸುಧಾರಣೆ ಇನ್ನೂ ಆಗಿಲ್ಲ’
- ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ರೈತ ಸಂಘದ ಅಧ್ಯಕ್ಷ.