samachara
www.samachara.com
‘ಹೇ ರಾಘವೇಶ್ವರ...’: ಗೋಕರ್ಣ ಹಸ್ತಾಂತರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ‘ಸುಪ್ರಿಂ’ ಗ್ರೀನ್ ಸಿಗ್ನಲ್!
ರಾಜ್ಯ

‘ಹೇ ರಾಘವೇಶ್ವರ...’: ಗೋಕರ್ಣ ಹಸ್ತಾಂತರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ‘ಸುಪ್ರಿಂ’ ಗ್ರೀನ್ ಸಿಗ್ನಲ್!

ಹೈಕೋರ್ಟ್ ವಿಭಾಗಿಯ ಸಂಚಾರ ಪೀಠ ಧಾರವಾಡದಲ್ಲಿ ವಾದ ವಿವಾದಗಳು ನಡೆದಿದ್ದವು. ‘ರಿವ್ಯೂ ಪಿಟಿಷನ್’ನನ್ನು ಯಾರು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂಬ ವಿಚಾರವೂ ಅಲ್ಲಿ ಚರ್ಚೆಗೆ ಬಂದಿತ್ತು.

ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು, ಶಿವಮೊಗ್ಗ ಜಿಲ್ಲೆ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಇದೀಗ ರಾಘವೇಶ್ವರ ಸ್ವಾಮಿಗೆ ಸುಪ್ರಿಂ ಕೋರ್ಟಿನಲ್ಲಿ ಹಿನ್ನಡೆಯಾಗಿದೆ.

ಹೈಕೋರ್ಟ್ ನೀಡಿದ್ದ ಸ್ಟೇ ಆದೇಶವನ್ನು ಉಲ್ಲಂಘಿಸಿ 2008ರಲ್ಲಿ ಐವರು ಅಧಿಕಾರಿಗಳು ಗೋಕರ್ಣ ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸಿದ್ದರು. ಈ ಕುರಿತು ಅಧಿಕಾರಿಗಳ ವಿರುದ್ಧ 'ನ್ಯಾಯಾಂಗ ನಿಂದನೆ' ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣದ ವಿಚಾರಣೆ ನಡೆಸದಂತೆ ಅಧಿಕಾರಿಗಳು ಸರ್ವೋಚ್ಛ ನ್ಯಾಯಾಲಯದಿಂದ ತಡೆ ಪಡೆದುಕೊಂಡಿದ್ದರು; ಆ ತಡೆ ಶುಕ್ರವಾರ ತೆರವಾಗಿದ್ದು ಸದ್ಯದಲ್ಲೇ ವಿಚಾರಣೆ ಆರಂಭವಾಗಲಿದೆ.

ಹಸ್ತಾಂತರ ವಿವಾದದ ಮೂಲ:

ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು, 'ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ಉಪಾಧಿವಂತ ಮಂಡಳಿ' ನಡೆಸಿಕೊಂಡು ಬರುತ್ತಿತ್ತು. ಆದರೆ ಈ ಟ್ರಸ್ಟಿನಲ್ಲಿದ್ದ ಐವರಲ್ಲಿ ನಾಲ್ವರು ಕಾಲಾನಂತರ ತೀರಿಕೊಂಡರು. ಕೊನೆಗೆ ಪರಂಪರಾಗತವಾಗಿ ದೇವಾಲಯದ ಆಡಳಿತ ನೋಡಿಕೊಂಡು ಬಂದ ಶ್ರೀ ವಿ.ಡಿ ದೀಕ್ಷಿತರು ಮಾತ್ರ ಉಳಿದುಕೊಂಡಿದ್ದರು. ಮುಂದೆ 2004ರಲ್ಲಿ ದೀಕ್ಷಿತರು ತೀರಿಕೊಂಡಾಗ ದೇವಾಲಯ ಅನಾಥವಾಯಿತು. ನಂತರ ಬಾಲಚಂದ್ರ ವಿಘ್ನೇಶ್ವರ ದೀಕ್ಷಿತರ ಮುಂದಾಳತ್ವದಲ್ಲಿ ಅಲ್ಲಿನ ಜನರ ಒಟ್ಟುಗೂಡುವಿಕೆಯಿಂದ ಮೂರು ನಾಲ್ಕು ವರ್ಷಗಳ ಕಾಲ ದೇವಾಲಯ ಆಡಳಿತ ಸಾಂಗವಾಗಿಯೇ ನಡೆಯಿತು.

'ಯಥಾಸ್ಥಿತಿ'ಯ ಆದೇಶ:

ಈ ಅವಧಿಯಲ್ಲಿ ಮಹಾಬಲೇಶ್ವರ ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸುವ ಸುದ್ದಿಗಳು ಓಡಾಡುತ್ತಿತ್ತು. ಈ ಸಂದರ್ಭ 2006ರಲ್ಲಿ ಹೈಕೋರ್ಟ್ ಮೊರೆ ಹೋಗುತ್ತಾರೆ ಬಾಲಚಂದ್ರ ವಿಘ್ನೇಶ್ವರ ದೀಕ್ಷಿತರು. ಈ ಸಂದರ್ಭ ಕೋರ್ಟ್ 12/12/2006 ಮತ್ತು 19/12/2006ರಂದು 'ದೇವಸ್ಥಾನದ ಆಡಳಿತದಲ್ಲಿ ಯಥಾಸ್ಥಿತಿ ಕಾಪಾಡುವ' ಆದೇಶ ನೀಡಿತ್ತು.

ಹೀಗಿದ್ದೂ ಹಸ್ತಾಂತರ ಪ್ರಕ್ರಿಯೆಗಳು ಚುರುಕು ಪಡೆದುಕೊಂಡವು.

ಆದೇಶ ಉಲ್ಲಂಘನೆ, ದೇವಸ್ಥಾನ ಹಸ್ತಾಂತರ:

ಕೊನೆಗೆ ಸರಕಾರ ಮತ್ತು ಮಠದ ನಡುವೆ ಹಲವು ಬೆಳವಣಿಗೆಗಳು ನಡೆದವು. ಸರಣಿಯಾಗಿ ಅರ್ಜಿ ಸಲ್ಲಿಸುವ ಕೆಲಸಗಳು ಚಾಲ್ತಿ ಪಡೆದುಕೊಂಡವು. ಎಲ್ಲಾ ಬೆಳವಣಿಗೆಗಳ ನಂತರ ಕರ್ನಾಟಕ ರಾಜ್ಯಪಾಲರ ಆಜ್ಞೆಯನುಸಾರ ದಿನಾಂಕ 12/08/2008ರಂದು ಕಂದಾಯ ಇಲಾಖೆ ಪೀಠಾಧಿಪತಿ ಎಲ್.ಎಸ್. ಶ್ರೀಕಂಠಯ್ಯ ದೇವಸ್ಥಾನವನ್ನು ಪೂರ್ತಿಯಾಗಿ ಮಠಕ್ಕೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು. ಹೀಗೆ ರಾಮಚಂದ್ರಾಪುರದ ಕೈಗೆ ಗೋಕರ್ಣದ ಚುಕ್ಕಾಣಿ ಸಿಗುತ್ತದೆ.

ಅಧಿಕಾರಿಗಳ ವಿರುದ್ಧ ಕೋರ್ಟಿಗೆ ದೂರು:

ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸಿದ್ದರ ವಿರುದ್ಧ ಬಾಲಚಂದ್ರ ದೀಕ್ಷಿತರು 'ಕರ್ನಾಟಕ ಹೈಕೋರ್ಟ್ ಧಾರವಾಡ ವಿಭಾಗೀಯ ಸಂಚಾರಿ ಪೀಠ' (ಆವತ್ತಿಗೆ ಖಾಯಂ ಪೀಠವಾಗಿರಲಿಲ್ಲ) ದಲ್ಲಿ ಐವರು ಅಧಿಕಾರಿಗಳ ವಿರುದ್ಧ 02/02/2009ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಂದಾಯ ಇಲಾಖೆಯ ಪೀಠಾಧಿಪತಿ ಎಚ್.ಎಸ್. ಶ್ರೀಕಂಠ ಬಾಬು (ಎ1), ಕಂದಾಯ ಇಲಾಖೆ ಕಾರ್ಯದರ್ಶಿ ಜಿ.ಎಸ್.ನಾರಾಯಣಸ್ವಾಮಿ (ಎ2), ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತ ಪಿ. ಪ್ರಭಾಕರ್ (ಎ3), ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಗೋವಿಂದ್ರಾಜ್ (ಎ4) ಮತ್ತು ಕುಮಟಾ ಸಹಾಯಕ ಆಯುಕ್ತರಾಗಿದ್ದ ಡಾ.ವಿ.ಎಸ್.ಚೌಗ್ಲಾ (ಎ5) ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಕುರಿತು ಹೈಕೋರ್ಟ್ ವಿಭಾಗೀಯ ಪೀಠ ದಿನಾಂಕ 27/05/2009ರಂದು ಆದೇಶ ನೀಡಿದ ವಿಭಾಗೀಯ ಪೀಠ 'ನ್ಯಾಯಾಂಗ ನಿಂದನೆ' ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿ ಮುಂದಿನ ವಿಚಾರಣೆ ವೇಳೆ 'ಎ4' ಬಿಟ್ಟು ಉಳಿದವರೆಲ್ಲರೂ ಹಾಜರಿರಬೇಕೆಂದು ಆದೇಶ ನೀಡಿತ್ತು. ಹೀಗೆ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಆರಂಭವಾಗಿತ್ತು.

ನ್ಯಾಯಾಂಗ ನಿಂದನೆ ಪ್ರಕರಣ ಕೈಗೆತ್ತಿಕೊಂಡ ಧಾರವಾಡದ ಕರ್ನಾಟಕ ಹೈಕೋರ್ಟ್ನ ವಿಭಾಗಿಯ ಸಂಚಾರಿದ ಪೀಠದ ಪ್ರತಿ. 
ನ್ಯಾಯಾಂಗ ನಿಂದನೆ ಪ್ರಕರಣ ಕೈಗೆತ್ತಿಕೊಂಡ ಧಾರವಾಡದ ಕರ್ನಾಟಕ ಹೈಕೋರ್ಟ್ನ ವಿಭಾಗಿಯ ಸಂಚಾರಿದ ಪೀಠದ ಪ್ರತಿ. 

ಇದಾದ ನಂತರ 21/07/2009ರಲ್ಲಿ ಎಲ್.ಎಸ್.ಶ್ರೀಕಂಠಬಾಬು ನ್ಯಾಯಮೂರ್ತಿಗಳಿಗೆ ಕ್ಷಮೆ ಕೇಳಿ ಅಫಿದವಿತ್ತು ಸಲ್ಲಿಸಿದ್ದರು. ಈ ಅಫಿದವಿತ್ತಿನಲ್ಲಿ "ನಮ್ಮಿಂದ ತಪ್ಪಾಗಿದೆ; ನಾವು ಒಳ್ಳೆ ಉದ್ದೇಶಕ್ಕಾಗಿ ಹೀಗೆ ಮಾಡಿದ್ದೇವೆ" ಎಂದು ಹೇಳಿರುತ್ತಾರೆ.

 ಕ್ಷಮೆ ಕೇಳಿ ಕಂದಾಯ ಇಲಾಖೆ ಪೀಠಾಧಿಕಾರಿ ಎಲ್.ಎಸ್. ಶ್ರೀಕಂಠಬಾಬು ಸಲ್ಲಿಸಿದ್ದ ಅಫಿದವಿತ್ತು.
ಕ್ಷಮೆ ಕೇಳಿ ಕಂದಾಯ ಇಲಾಖೆ ಪೀಠಾಧಿಕಾರಿ ಎಲ್.ಎಸ್. ಶ್ರೀಕಂಠಬಾಬು ಸಲ್ಲಿಸಿದ್ದ ಅಫಿದವಿತ್ತು.

ಆದರೆ ಅಧಿಕಾರಿಗಳು ಅಫಿದವಿತ್ತಿಗೆ ಸುಮ್ಮನಾಗದೆ, 'ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನಮ್ಮ ವಿರುದ್ಧ ನೀಡಿರುವ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕು,' ಎಂದು ಕೋರಿ ರಿವ್ಯೂ ಪಿಟಿಷನ್ ಸಲ್ಲಿಸಿರುತ್ತಾರೆ.

ಇದರ ಕುರಿತು ಹೈಕೋರ್ಟ್ ವಿಭಾಗಿಯ ಸಂಚಾರ ಪೀಠ ಧಾರವಾಡದಲ್ಲಿ ವಾದ ವಿವಾದಗಳು ನಡೆದಿದ್ದವು. 'ರಿವ್ಯೂ ಪಿಟಿಷನ್'ನನ್ನು ಯಾರು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂಬ ವಿಚಾರವೂ ಅಲ್ಲಿ ಚರ್ಚೆಗೆ ಬಂದಿತ್ತು. ಇದೆಲ್ಲಾ ಆದ ನಂತರ ನ್ಯಾಯಮೂರ್ತಿ ಎನ್. ಕುಮಾರ್ ಮತ್ತು ನ್ಯಾಯಮೂರ್ತಿ ಶ್ರೀನಿವಾಸೆ ಗೌಡ ಅವರಿದ್ದ ನ್ಯಾಯಪೀಠ 107 ಪುಟಗಳು ಸುದೀರ್ಘ ಆದೇಶವನ್ನು 26/03/2010ರಂದು ನೀಡಿತ್ತು. ಇದರಲ್ಲಿ 'ರಿವ್ಯೂ ಪಿಟಿಷನ್'ನ್ನು ಮೂಲ ಆದೇಶ ನೀಡಿದ ಪೀಠವೇ ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಿತ್ತು.


       ನ್ಯಾಯಮೂರ್ತಿ ಕುಮಾರ್ ಮತ್ತು ಶ್ರೀನಿವಾಸೆ ಗೌಡ ನೀಡಿದ ಆದೇಶದ ಮೊದಲ ಪುಟ..
ನ್ಯಾಯಮೂರ್ತಿ ಕುಮಾರ್ ಮತ್ತು ಶ್ರೀನಿವಾಸೆ ಗೌಡ ನೀಡಿದ ಆದೇಶದ ಮೊದಲ ಪುಟ..

ಇದೇ ವೇಳೆಗೆ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ತಡೆ ಕೋರಿ ಈ ಅಧಿಕಾರಿಗಳು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದರು. ಇದರನ್ವಯ ದಿನಾಂಕ 24/02/2012ರಂದು ಮಧ್ಯಂತರ ಆದೇಶ ನೀಡಿದ ಸುಪ್ರಿಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ತಡೆ ನೀಡಿತ್ತು.

ತಡೆ ಆದೇಶ ತೆರವು ಮಾಡಿದ ಸುಪ್ರಿಂ ಕೋರ್ಟ್

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ತಡೆ ನೀಡಿದ್ದನ್ನು ತೆರವುಗೊಳಿಸುವಂತೆ ಬಾಲಚಂದ್ರ ದೀಕ್ಷಿತರು ಮತ್ತೆ ಸುಪ್ರಿಂ ಕೋರ್ಟ್ ಮೊರೆ ಹೋಗುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಆದೇಶ ನೀಡಿರುವ ಮುಖ್ಯನ್ಯಾಯಮೂರ್ತಿ ತೀರಥ್ ಸಿಂಗ್ ಠಾಕೂರ್, ನ್ಯಾ. ಎಲ್. ನಾಗೇಶ್ವರ್ ರಾವ್, ನ್ಯಾ. ಡಿ. ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ ತಡೆಯಾಜ್ಞೆ ತೆರವುಗೊಳಿಸಿದೆ.

ಈ ಕುರಿತು 'ಸಮಾಚಾರ'ದ ಜತೆ ಮಾತನಾಡಿದ ಬಾಲಚಂದ್ರ ದೀಕ್ಷಿತ್ ಪರ ವಕೀಲ ಸುಬ್ರಮಣ್ಯ ಜೋಯಿಸ್ "ಧಾರವಾಡ ಪೀಠದಲ್ಲೇ ಈ ವಿಚಾರಣೆ ಮುಂದುವರಿಸಬೇಕು ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ಇನ್ನು ವಿಚಾರಣೆ ಆರಂಭವಾಗಬೇಕಾಗಿದೆ. ಈ ಹಿಂದೆ ರಿವ್ಯೂ ಆದೇಶವನ್ನು ಮೂಲ ಆದೇಶ ನೀಡಿದ ಪೀಠದಲ್ಲೇ ಪ್ರಶ್ನಿಸಬೇಕು ಎಂದು 'ಕುಮಾರ್ ಮತ್ತು ಶ್ರೀನಿವಾಸೆ ಗೌಡ ಪೀಠ' ಹೇಳಿತ್ತು. ಆದರೆ ನ್ಯಾಯಾಂಗ ನಿಂದನೆ ಪ್ರಕರಣ ಕೈಗೆತ್ತಿಕೊಂಡಿದ್ದ ಮೂಲ ಪೀಠದ ನ್ಯಾಯಮೂರ್ತಿಗಳು ಈಗ ನಿವೃತ್ತರಾಗಿರುವುದರಿಂದ ಈಗ ಹೊಸ ಪೀಠ ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕಾಗಿದೆ," ಎಂದು ಮಾಹಿತಿ ನೀಡಿದರು.

ಇದೀಗ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದಲ್ಲಿ ಎಚ್.ಎಸ್. ಶ್ರೀಕಂಠ ಬಾಬು, ಜಿ.ಎಸ್.ನಾರಾಯಣಸ್ವಾಮಿ, ಪಿ. ಪ್ರಭಾಕರ್, ಡಾ.ವಿ.ಎಸ್.ಚೌಗ್ಲಾ ಮತ್ತು ಗೋವಿಂದ್ರಾಜ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಆರಂಭವಾಗಬೇಕಾಗಿದೆ.

ಸದ್ಯ ಸುಪ್ರಿಂ ಕೋರ್ಟಿನ ಈ ತೀರ್ಪನ್ನು ರಾಘವೇಶ್ವರ ಮಠಕ್ಕೆ ದೊಡ್ಡ ಹಿನ್ನಡೆ ಎಂದೇ ಭಾವಿಸಲಾಗಿದ್ದು, 'ಬಾಲಚಂದ್ರ ದೀಕ್ಷಿತ್ V/S ಎಲ್.ಎಸ್.ಶ್ರೀಕಂಠಬಾಬು ಮತ್ತಿತರರು' ಪ್ರಕರಣ ಯಾವ ಹಂತ ಮುಟ್ಟಲಿದೆ ಕಾದು ನೋಡಬೇಕಷ್ಟೆ.

More on this topic: