samachara
www.samachara.com
ಕನಸಿನ ಕಂಪನಿ ಓಲಾ ಸಾಗಿ ಬಂದ ಹಾದಿ & 6 ತಿಂಗಳ ಪರವಾನಗಿ ರದ್ದಿನ ಸಂಕಟ
ರಾಜ್ಯ

ಕನಸಿನ ಕಂಪನಿ ಓಲಾ ಸಾಗಿ ಬಂದ ಹಾದಿ & 6 ತಿಂಗಳ ಪರವಾನಗಿ ರದ್ದಿನ ಸಂಕಟ

ಕಂಪನಿ ಬೆಳೆದರೂ ತನ್ನ ವಾರ್ಷಿಕ ಲಾಭವನ್ನು ಹೆಚ್ಚಿಸಿಕೊಳ್ಳಲಾಗದ ಒತ್ತಡಕ್ಕೆ ಓಲಾ ಸಿಲುಕಿರುವ ಸಾಧ್ಯತೆ ಇದೆ. ಹೀಗಾಗಿ ಬೈಕ್‌ ಟ್ಯಾಕ್ಸಿಗಳನ್ನು ರಸ್ತೆಗಿಳಿಸುವ ಸಾಹಸಕ್ಕೆ ಕೈ ಹಾಕಿತ್ತು. ಪರಿಣಾಮ 6 ತಿಂಗಳ ನಿಷೇಧಕ್ಕೆ ಗುರಿಯಾಗಿದೆ.

samachara

samachara

ಆಗಿನ್ನೂ 2010. ದೇಶದಲ್ಲಿ 3ಜಿ ಸೇವೆ ಆರಂಭವಾಗಿದ್ದ ದಿನಗಳು. ಆನ್ ಲೈನ್ ಮಾರಾಟದ ತಾಣಗಳು, ಆ್ಯಪ್ ಆಧಾರಿತ ಸೇವೆಗಳೆಲ್ಲಾ ಒಂದೊಂದಾಗಿ ಕಾಣಿಸಿಕೊಳ್ಳುತ್ತಿದ್ದ ಕಾಲಮಾನವದು. 2011, ಡಿಸೆಂಬರ್ 17ರಂದು 'ಇ-ಸ್ಪಾರ್ಕ್ಸ್' ಎಂಬ ಮೇಳವೊಂದು ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು.

ದೇಶದಲ್ಲಿ ಇ-ಕಾಮರ್ಸ್ ಸ್ಟಾರ್ಟ್ ಅಪ್ ಗಳಿಗೆ ಬಂಡವಾಳ ಒದಗಿಸಿಕೊಡುವ ವೇದಿಕೆ ಅದು. ಎಲ್ಲರೂ ಒಬ್ಬೊಬ್ಬರಾಗಿ ಬಂದು ತಮ್ಮ ಆಲೋಚನೆ, ಯೋಜನೆಗಳನ್ನು ನೆರೆದಿದ್ದ ಉದ್ಯಮಿಗಳ ಮುಂದೆ ತೆರೆದಿಡುತ್ತಿದ್ದರು. ಕೊನೆಗೆ ಆ ಹುಡುಗನ ಸರದಿ ಬಂತು. ಎಲ್ಲರಂತೆ ಆತ ವೇದಿಕೆ ಹತ್ತಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಆರಂಭಿಸಿದ. ಇನ್ ಶರ್ಟ್ ಮಾಡಿದ ಮಾಮೂಲು ಅಂಗಿ, ನಾರ್ಮಲ್ ಪ್ಯಾಂಟ್ ತೊಟ್ಟಿದ್ದ ಯುವಕ ಮಾತು ಆರಂಭಿಸಿದ.

"ನಾನು ಭವಿಷ್, ಓಲಾದ ಸಹ ಸಂಸ್ಥಾಪಕ ಮತ್ತು ಸಿಇಒ. ಪ್ರಶ್ನೆಯಿಂದಲೇ ನಾನು ಮಾತು ಆರಂಭಿಸುತ್ತೇನೆ,'' ಎಂದು ಶುರುವಿಟ್ಟುಕೊಂಡ. ಅಲ್ಲಿ ನೆರೆದಿದ್ದವರ ಬಳಿ “ಎಷ್ಟು ಜನ ಟಾಕ್ಸಿ ಬಳಸುತ್ತೀರಿ..? …ಎಲ್ಲರೂ?" ಎಂದು ಪ್ರಶ್ನೆ ಎಸೆದ. "ಯಾರಿಗೆಲ್ಲಾ ಕೆಟ್ಟ ಟ್ಯಾಕ್ಸಿ ಅನುಭವವಾಗಿದೆ?" ಎಂದು ಸಭಿಕರನ್ನು ಮತ್ತೆ ಕೇಳಿದ. "ನನಗೂ ಕೆಟ್ಟ ಟ್ಯಾಕ್ಸಿ ಅನುಭವ ತುಂಬಾ ಸಲ ಆಗಿದೆ" ಎಂದವರೇ, ಅದನ್ನು ನಿವಾರಿಸಲು ತನ್ನ ಬಳಿ ಇರುವ ಯೋಜನೆಯ ವಿವರಣೆ ಆರಂಭಿಸಿದ.

ಅವತ್ತಿಗಾಗಲೇ ಆತನ ಓಲಾ ಕಂಪೆನಿಗೆ ಒಂದು ವರ್ಷ. ಭವಿಷ್ ಅವತ್ತು ಅಲ್ಲಿ ವಿವರಿಸಿದ್ದೇನು? ಅದಿಲ್ಲಿ ಮುಖ್ಯವಲ್ಲ. ಆದ್ರೆ ಅಲ್ಲಿದ್ದ ಭವಿಷ್ ಎಲ್ಲರಿಗೂ ಇಷ್ಟವಾಗಿದ್ದ. ಮಾತಾಡುವ ದಾಟಿ, ಕಂಪೆನಿಯನ್ನು ಯಶಸ್ವಿ ಉದ್ದಿಮೆಯಾಗಿಸಬೇಕೆಂಬ ಹಂಬಲ, ಮಾತಿನಲ್ಲಿ, ನಡವಳಿಕೆಯಲ್ಲಿದ್ದ ವಿನಯಕ್ಕೆ ಎಲ್ಲರೂ ಮರುಳಾಗಿದ್ದರು.

ದೇಶದಲ್ಲಿ ಆ್ಯಪ್ ಆಧಾರಿತ ಸೇವೆಗಳು ಇಲ್ಲದ ಕಾಲದಲ್ಲಿ ಟ್ಯಾಕ್ಸಿ ಸೇವೆ ನೀಡುವ ಓಲಾ ಆರಂಭಿಸಿದ್ದ ಭವಿಷ್. 2008ರಲ್ಲಿ ಐಐಟಿ ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಟೆಕ್ ಪದವಿ ಪಡೆದು ಹೊರಬಿದ್ದ ಹುಡುಗ ಭವಿಷ್ ಸೇರಿದ್ದು ಮೈಕ್ರೋಸಾಫ್ಟ್. ಅಲ್ಲಿ ಎರಡು ವರ್ಷ ಕೆಲಸ. ಮುಂದಿನದ್ದು ಸ್ವಂತ ಉದ್ಯಮ ಓಲಾ ಕ್ಯಾಬ್ಸ್.

ಇನ್ನೊಬ್ಬ ಐಐಟಿ ಹುಡುಗ ಅಂಕಿತ್ ಭಾಟಿ ಜೊತೆಗೂಡಿ ಬೆಂಗಳೂರನಲ್ಲಿ (ಇವತ್ತಿಗೂ ಓಲಾದ ಕೇಂದ್ರ ಕಚೇರಿ ಕೋರಮಂಗಲದಲ್ಲಿದೆ) ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಕಂಪೆನಿ ಆರಂಭಿಸಿದರು. ಓಲಾ ನಿಧಾನವಾಗಿ ಬೆಳೆಯುತ್ತಾ ಹೋಯಿತು. ನಾಲ್ಕೇ ನಾಲ್ಕು ವರ್ಷ, ಓಲಾ ಬೃಹತ್ ಕಂಪೆನಿಯಾಯ್ತು, ಭವಿಷ್ ಬದುಕೇ ಬದಲಾಯ್ತು. ಏನು ಇಲ್ಲದ ಭವಿಷ್ ಆಸ್ತಿ ನೂರು ಸಾವಿರ ಕೋಟಿಗೆ ಏರಿತು.

ಇದೆಲ್ಲ ಆದ ನಂತರ 2015ರಲ್ಲಿ ಇದೇ ಭವಿಷ್ ಮತ್ತೆ ವೇದಿಕೆ ಹತ್ತಿದರು. ಆದರೆ ಇಲ್ಲಿ ಭವಿಷ್ ಕುರ್ಚಿ ಮೇಲೆ ಆಸೀನರಾಗಿದ್ರು. ಎಳೆ ಹುಡುಗನ ಜಾಗದಲ್ಲಿ ಯಶಸ್ವೀ ಬಿಸಿನೆಸ್ ಮ್ಯಾನ್ ಅಲ್ಲಿದ್ದರು. ಚಹರೆ ಪೂರ್ತಿ ಬದಲಾಗಿತ್ತು. ಖಾಲಿ ಅಂಗಿಯ ಮೇಲೆ ಕರಿ ಕೋಟು ಬಂದು ಕುಳಿತಿತ್ತು. ಕಾಲ ಮೇಲೆ ಕಾಲು ಹಾಕಿಕೊಂಡೇ ಭವಿಷ್ ಸಂದರ್ಶನ ನೀಡುತ್ತಿದ್ದರು. ಸಜ್ಜನಿಕೆ, ವಿನಯತೆಗಳೆಲ್ಲಾ ಮಾಯವಾಗಿದ್ದವು. ಕನಿಷ್ಟ ಬಂಡವಾಳದಿಂದ ಆರಂಭವಾದ ಓಲಾ ಸಾವಿರಾರು ಕೋಟಿ ಕಂಪೆನಿಯಾಗಿ ಬೆಳೆದ ಮೇಲೆ ಬದಲಾದ ಬದುಕು ಅಲ್ಲಿತ್ತು.

ಓಲಾದ ಆದಾಯ ಎಷ್ಟು?

9,00,000 ಇದು ಇವತ್ತು ದೇಶಾದ್ಯಂತ ಓಲಾದ ಅಡಿ ಕಾರ್ಯನಿರ್ವಹಿಸುವ ವಾಹನಗಳ ಸಂಖ್ಯೆ. ಕಂಪೆನಿಯಲ್ಲಿ ಇಂದಿಗೆ 6,000 ಕ್ಕೂ ಹೆಚ್ಚು ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ರಸ್ತೆಗಳಲ್ಲಿ ವಾಹನಗಳನ್ನು ಓಡಿಸುವು ಚಾಲಕರ ಸಂಖ್ಯೆ ಬರೋಬ್ಬರಿ 10 ಲಕ್ಷ ಎಂಬುದಾಗಿ ಸ್ವತಃ ಓಲಾದ ವೆಬ್‌ಸೈಟ್‌ ಹೇಳುತ್ತದೆ. ಹೀಗೊಂದು ಬೃಹತ್‌ ಕಂಪನಿಯ ಇವತ್ತಿನ ಮಾರುಕಟ್ಟೆ ಮೌಲ್ಯ ಸುಮಾರು 41,000 ಕೋಟಿ ರೂಪಾಯಿ ಎಂಬುದಾಗಿ ಇತ್ತೀಚೆಗೆ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಹುಂಡೈ ಮೋಟರ್‌ ಗ್ರೂಪ್‌ ಅಂದಾಜಿಸಿತ್ತು.

ಬೆಂಗಳೂರಿನಲ್ಲಿ ಓಲಾದ ಅಂದಾಜು ಗಳಿಕೆ:

ಇದು ಬೆಂಗಳೂರು ಒಂದರ ಕತೆ. ಇದೇ ರೀತಿ ಭಾರತದ 110 ಹೆಚ್ಚು  ನಗರಗಳಲ್ಲಿ ಓಲಾ ಉದ್ಯಮವಿದೆ.
ಇದು ಬೆಂಗಳೂರು ಒಂದರ ಕತೆ. ಇದೇ ರೀತಿ ಭಾರತದ 110 ಹೆಚ್ಚು  ನಗರಗಳಲ್ಲಿ ಓಲಾ ಉದ್ಯಮವಿದೆ.
/2016 ಲೆಕ್ಕಾಚಾರ. ಇಂದಿಗೆ ಇದು ಮತ್ತಷ್ಟು ಹೆಚ್ಚಾಗಿದೆ.

ಓಲಾದ ವಾರ್ಷಿಕ ಗಳಿಕೆ:

2010ರಿಂದ 2019ರ ಅವಧಿಯಲ್ಲಿ ಓಲಾದ ವಹಿವಾಟು ವಿಸ್ತರಿಸಿದ್ದು ಮಾತ್ರವಲ್ಲದೆ ಟ್ಯಾಕ್ಸಿ ಫಾರ್‌ ಶೂರ್‌, ಫುಡ್‌ ಪಾಂಡಾದಂತ ಕಂಪನಿಗಳ ಖರೀದಿಯೂ ನಡೆಸಿದೆ. ಹಲವು ಬಹುರಾಷ್ಟ್ರೀಯ ಕಂಪೆನಿಗಳಿಂದ ಭಾರೀ ಹೂಡಿಕೆಯನ್ನೂ ಪಡೆದುಕೊಂಡಿದೆ. ಅಮೆರಿಕನ್ ದೈತ್ಯ ಉಬರ್ ಭಾರತದಲ್ಲಿ ಕಾಲಿಡುತ್ತಿದ್ದಂತೆ ಉಬರ್‌ನ ವೈರಿಗಳೆಲ್ಲಾ ಓಲಾದಲ್ಲಿ ಬಂದು ಹಣ ಹೂಡಿದ್ದಾರೆ.

ಅಮೆರಿಕಾ ಮೂಲದ ‘ಲೈಫ್ಟ್ ಇನ್ ಕಾರ್ಪೋರೇಟೆಡ್’ ಮತ್ತು ‘ಚೀನಾ ಮೂಲದ ಡಿಡಿ ಕ್ವೈಡಿ ಜಾಯಿಂಟ್ ಕಂಪೆನಿ’ ಇವುಗಳಲ್ಲಿ ಪ್ರಮುಖವಾದವು. ಇದೇ ಡಿಡಿ ಕ್ವೈಡಿ ಚೀನಾದಲ್ಲಿ ಉಬರ್ ಜೊತೆ ಸೆಣೆಸಾಡುತ್ತಿದ್ದರೆ, ಲೈಫ್ಟ್ ಇನ್ ಕಾರ್ಪೋರೇಟೆಡ್ ಅಮೆರಿಕಾದಲ್ಲಿ ಉಬರ್ ಗೆ ಸವಾಲೆಸೆಯುತ್ತಿದೆ. ಅಲ್ಲಿ ಉಬರ್ ಶತ್ರುಗಳು ಭಾರತದಲ್ಲಿ ಓಲಾ ಮಿತ್ರರಾಗಿದ್ದಾರೆ.

ಇದಿಷ್ಟೆ ಅಲ್ಲ, ಬೈಲಿ ಗಿಫ್ಫೋರ್ಡ್, ಫಾಲ್ಕನ್ ಎಡ್ಜ್ ಕ್ಯಾಪಿಟಲ್, ಟೈಗರ್ ಗ್ಲೋಬಲ್, ಸಾಫ್ಟ್ ಬ್ಯಾಂಕ್ ಗ್ರೂಪ್ ಮತ್ತು ಡಿಎಸ್ ಟಿ ಗ್ಲೋಬಲ್ ಕಂಪೆನಿಗಳೂ ಓಲಾದಲ್ಲಿ ಭಾರೀ ಹಣ ಹೂಡಿವೆ. ಇತ್ತೀಚಿನ ಬೆಳವಣಿಗೆಯಲ್ಲಿ ಹುಂಡೈ ಮೋಟಾರ್‌ ಗ್ರೂಪ್‌ನಿಂದ ಬರೋಬ್ಬರಿ 300 ಮಿಲಿಯನ್‌ ಡಾಲರ್‌ (ಸುಮಾರು 2,000 ಕೋಟಿ ರೂ.) ಹೂಡಿಕೆಯನ್ನು ಓಲಾ ಪಡೆದುಕೊಂಡಿದೆ. ಇದಲ್ಲದೆ ಫ್ಲಿಪ್‌ಕಾರ್ಟ್‌ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್‌ 650 ಕೋಟಿ ರೂಪಾಯಿಗಳನ್ನು ತಂದು ಓಲಾದಲ್ಲಿ ಹೂಡಿಕೆ ಮಾಡಿದ್ದಾರೆ.

ಇವೆಲ್ಲದರ ಪರಿಣಾಮ ಇಂದು ಹತ್ತಾರು ಸಾವರಿ ಕೋಟಿಯ ಕಂಪನಿಯಾಗಿ ಓಲಾ ಬೆಳೆದು ನಿಂತಿದೆ. ಆದರೆ 2018ರಲ್ಲಿ ಕಂಪನಿ ನಡೆಸಿದ ಒಟ್ಟಾರೆ ವಹಿವಾಟು ಕೇವಲ 2222.6 ಕೋಟಿ ರೂಪಾಯಿ ಮಾತ್ರ. ಇದೇ ಅವಧಿಯಲ್ಲಿ ಓಲಾ ಬರೋಬ್ಬರಿ 2,842.2 ಕೋಟಿ ರೂಪಾಯಿ ನಷ್ಟ ತೋರಿಸಿದೆ.

ಹೀಗೆ ಕಂಪನಿ ಬೆಳೆದರೂ ತನ್ನ ವಾರ್ಷಿಕ ಲಾಭವನ್ನು ಹೆಚ್ಚಿಸಿಕೊಳ್ಳಲಾಗದ ಒತ್ತಡಕ್ಕೆ ಓಲಾ ಸಿಲುಕಿರುವ ಸಾಧ್ಯತೆ ಇದೆ. ಹೀಗಾಗಿ ಬೈಕ್‌ ಟ್ಯಾಕ್ಸಿಗಳನ್ನು ರಸ್ತೆಗಿಳಿಸುವ ಸಾಹಸಕ್ಕೆ ಕೈ ಹಾಕಿತ್ತು. ಆದರೆ ನಿಯಮ ಮೀರಿ ಕಾರ್ಯಾಚರಣೆಗೆ ಇಳಿದು ಇದೀಗ 6 ತಿಂಗಳ ನಿಷೇಧಕ್ಕೆ ಗುರಿಯಾಗಿದೆ.

ನಿಯಮ ಉಲ್ಲಂಘನೆ ಆರೋಪ:

ಈ ಹಿಂದೆಯೂ ಒಮ್ಮೆ ಬೈಕ್‌ ಟ್ಯಾಕ್ಸಿಗಳನ್ನು ರಸ್ತೆಗಿಳಿಸಿ ನಂತರ ಅವುಗಳನ್ನು ಓಲಾ ಕಂಪನಿ ಹಿಂಪಡೆದಿತ್ತು. ಇದೀಗ ಮತ್ತೊಮ್ಮೆ ಅದೇ ದುಸ್ಸಾಹಸ ನಡೆಸಿದ ಓಲಾ, ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ಅಗ್ರಿಗೇಟರ್ಸ್‌ ನಿಯಮ’ಗಳನ್ನು ಉಲ್ಲಂಘಿಸಿದ ಆರೋಪವನ್ನು ಎದುರಿಸುತ್ತಿದೆ. ಈ ಕಾರಣಕ್ಕೆ ಮಾರ್ಚ್‌ 18ರಂದು ರಾಜ್ಯ ಸಾರಿಗೆ ಪ್ರಾಧಿಕಾರ ಓಲಾ ಕಂಪನಿಗೆ ನೀಡಿದ್ದ ಪರವಾನಗಿಯನ್ನು ಆರು ತಿಂಗಳ ಕಾಲ ಅಮಾನತು ಮಾಡಿದೆ.

ಕಂಪನಿಗೆ 2021ರ ಜೂನ್‌ 19ರವರೆಗೆ ನೀಡಿರುವ ಅನುಮತಿ ಪತ್ರವನ್ನು ಮೂರು ದಿನಗಳ ಒಳಗೆ ತಂದು ಪ್ರಾಧಿಕಾರಕ್ಕೆ ಒಪ್ಪಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಓಲಾಗೆ ನೀಡಲಾಗಿದೆ. ‘ಯಾವುದೇ ಕಾರಣಕ್ಕೂ ಮಾರ್ಚ್‌ 25ರ ನಂತರ ಕ್ಯಾಬ್‌ಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಒಂದೊಮ್ಮೆ ಇಳಿಸಿದರೆ ವಶಕ್ಕೆ ಪಡೆಯಲಾಗುವುದು’ ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ. ಇಕ್ಕೇರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಸದ್ಯಕ್ಕೆ ಬೆಂಗಳೂರು ಮಾತ್ರವಲ್ಲದೆ, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಗಳಲ್ಲಿ ಓಲಾ ಕಾರ್ಯಚರಿಸುತ್ತಿದೆ. ನಿಷೇಧದಿಂದ ಶ್ರೀಮಂತ ಕಂಪನಿ ಹೇಗೋ ಬದುಕಿಕೊಳ್ಳಬಹುದು. ಆದರೆ ಓಲಾವನ್ನೇ ನಂಬಿದ್ದ ಚಾಲಕರು ಮತ್ತು ಪ್ರಯಾಣಿಕರ ಗತಿ ಏನು ಎಂಬುದಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ.

Also read: ನಿಯಂತ್ರಣಕ್ಕೆ ಸಿಗದ 'ಓಲಾ ಸುಲಿಗೆ': ಕ್ಯಾಬ್ ಸೇವೆಯ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆ