samachara
www.samachara.com
 ಕೊಲೆ ಮಾಡಿ ಜೈಲು ಸೇರಿದ  ಗುರು; ಕೊನೆಗೆ ಶರಣಾಗಿದ್ದು ಆತ್ಮಹತ್ಯೆಗೆ 
PRISON STORIES

ಕೊಲೆ ಮಾಡಿ ಜೈಲು ಸೇರಿದ ಗುರು; ಕೊನೆಗೆ ಶರಣಾಗಿದ್ದು ಆತ್ಮಹತ್ಯೆಗೆ 

ತಾಯಿಗೂ ಮತ್ತೊಂದು ಕುಟುಂಬಕ್ಕೂ ಸಣ್ಣ ಹಣಕಾಸಿನ ವಿಚಾರದಲ್ಲಿ ಜಗಳವಾಗಿತ್ತು. ಸಣ್ಣ ಹಣಕಾಸು ವಿವಾದವಾದರೂ ಅದು ಅವರಿಗೆ ದೊಡ್ಡ ವಿಚಾರವೇ ಆಗಿತ್ತು.

ಅವನದು ಈಗ ಹದಿನೈದರ ವಯಸ್ಸು. ಹೆಸರು ಗುರು. ತನ್ನವರು ಅಂತ ಇರುವುದು ತಾಯಿ ಅಷ್ಟೇ. ತಂದೆ ಕುಡಿತದಿಂದಾಗಿ ಖಾಯಿಲೆ ಬಿದ್ದು ಈತ ಚಿಕ್ಕವನಿರುವಾಗಲೇ ತೀರಿಕೊಂಡಿದ್ದರು. ಇವನೊಬ್ಬನೇ ಮಗ. ಪ್ರಾಥಮಿಕ ಅಕ್ಷರಾಭ್ಯಾಸ ಮಾತ್ರ ಮಾಡಿದ್ದ. ಇರಲಿಕ್ಕೆ ಒಂದು ಗುಡಿಸಲು ರೀತಿಯ ಮನೆ ಇದೆ. ಬದುಕು ಸಾಗುತ್ತಿರುವುದು ತಾಯಿ ಮಾಡುವ ಕೂಲಿಯಿಂದಲೇ. ಗುರುವನ್ನು ಗಮನಿಸುತ್ತಾ ಬೆಳೆಸಲು ಆ ತಾಯಿಗೆ ಬದುಕಿನ ಅನಿವಾರ್ಯತೆಗಳಿಂದಾಗಿ ಸಾಧ್ಯವಾಗಿರಲಿಲ್ಲ. ಹಾಗಾಗಿ ಗುರು ಹೇಗೇಗೋ ಬೆಳೆಯುತ್ತಾ ಬಂದಿದ್ದ. ಪುಂಡರ ಪಟಾಲಂ ಜೊತೆಯೇ ತಿರುಗುತ್ತಿದ್ದ.

ಆಗಾಗ ಏನಾದರೂ ಕೆಲಸ ಮಾಡಿ ತನ್ನ ಖರ್ಚಿಗೆ ಬೇಕಾದಷ್ಟು ಸಂಪಾದನೆ ಮಾಡುತ್ತಿದ್ದ. ಆದರೆ ತಾಯಿಯ ಕೈಗೇನೂ ಕೊಡುತ್ತಿರಲಿಲ್ಲ. ಉಳಿದಂತೆ ಬೀದಿ ಸುತ್ತಾಟವೇ ಅವನ ಕೆಲಸ. ಬೀಡಿ ಗಾಂಜಾ, ಸರಾಯಿಯ ಚಟ ಅಂಟಿಸಿಕೊಂಡಿದ್ದ. ಅವನ ಚಿಂತನೆಗಳಲ್ಲಿ ಭಾರಿ ನಿರೀಕ್ಷೆಗಳೇನೂ ಮೂಡುತ್ತಿರಲಿಲ್ಲ. ಅಂದಿನ ಬದುಕು, ಅಂದಿನ ಊಟ, ಅಂದಿನ ಸುತ್ತಾಟಗಳು ಮಾತ್ರ ಅವನ ಚಿಂತನೆಯ ವಿಚಾರಗಳಲ್ಲಿ ಮುಖ್ಯ ಸ್ಥಾನ ಪಡೆಯುತ್ತಿದ್ದವು.

ಇವನ ತಾಯಿಗೂ ಮತ್ತೊಂದು ಕುಟುಂಬಕ್ಕೂ ಸಣ್ಣ ಹಣ ಕಾಸಿನ ವಿಚಾರದಲ್ಲಿ ಜಗಳವಾಗಿತ್ತು. ಸಣ್ಣ ಹಣಕಾಸು ವಿವಾದವಾದರೂ ಅದು ಅವರಿಗೆ ದೊಡ್ಡ ವಿಚಾರವೇ ಆಗಿತ್ತು. ವಿವೇಚನೆಗೆ ಅವಕಾಶ ಕೊಡದೇ ಹೋದರೆ ಕೋಪ ಅನ್ನೋದು ಯಾರಿಂದಲೂ ಊಹಿಸಲಾರದ್ದನ್ನೆಲ್ಲಾ ಹೇಳಿಸಿ ಬಿಡುತ್ತದೆ. ಇಲ್ಲಿ ಅದೇ ಆಯಿತು. ಪರಸ್ಪರ ಮಣಿಸಬೇಕೆಂದು ಕೆಟ್ಟದಾದ ಶಬ್ದಗಳನ್ನು ಹಂಚಿಕೊಂಡರು. ಈ ಕತೆಯೆಲ್ಲಾ ಗುರುವಿಗೂ ತಿಳಿದಿತ್ತು. ತಂದೆ ತೀರಿದ ಬಳಿಕ ತಾಯಿ ಬಗ್ಗೆ ಹಲವರು ತುಚ್ಚವಾಗಿ ಆಡುತ್ತಿದ್ದ ಮಾತುಗಳನ್ನು ಕೇಳುತ್ತಾ ಬಂದಿದ್ದ ಗುರು ಈ ಮಾತುಗಳನ್ನು ಸಹಿಸಲು ಸಾಧ್ಯವಾಗಿರಲಿಲ್ಲ.

ಇದೆಲ್ಲಾ ಆಗಿ ವಾರ ಕಳೆದಿರಬಹುದು. ಅದೊಂದು ದಿನ ಗುರುವಿನ ತಾಯಿಯೊಂದಿಗೆ ಜಗಳವಾದ ಕುಟುಂಬದ ಮೂರು ವರ್ಷ ಪ್ರಾಯದ ಹೆಣ್ಣು ಮಗು ಕಾಣಿಸುತ್ತಿಲ್ಲ ಎಂಬ ಸುದ್ದಿ ಹರಡಿತು. ಆ ಕುಟುಂಬದ ಮುದ್ದಿನ ಕೂಸಾಗಿತ್ತು ಅದು. ಮನೆಯವರು ಗಾಬರಿ ದುಃಖಗಳಿಂದ ಕಂಗಾಲಾಗಿ ಬಿಟ್ಟಿದ್ದರು. ವಿಷಯ ತಿಳಿದು ಅಕ್ಕಪಕ್ಕದವರು ಮಗುವನ್ನು ಹುಡುಕತೊಡಗಿದ್ದರು. ಗುರು ಕೂಡ ಅವರೊಂದಿಗೆ ಸೇರಿ ಮಗುವನ್ನು ಹುಡುಕತೊಡಗಿದ್ದ. ಆ ಮಗು ಗುರುವನ್ನು ಅಣ್ಣ ಎಂದು ಕರೆಯುತ್ತಿತ್ತು. ಗುರು ಅದನ್ನು ಹಿಂದೆ ಎತ್ತಿಟ್ಟು ಆಡಿಸಿದ್ದ.

ಸುಮಾರು ನಾಲ್ಕೈದು ಗಂಟೆಗಳ ಕಾಲ ಎಲ್ಲರೂ ಹುಡುಕಾಡಿದ ನಂತರ ಅಲ್ಲೊಂದು ಕಡೆ ಗೋಡೆಯೊಂದರ ಬದಿಯಲ್ಲಿ ಮಗು ಗೋಣು ಮುರಿದು ಬಿದ್ದಿದ್ದು ಕಾಣಿಸಿತು. ಅದನ್ನು ಮೊದಲು ಕಂಡವನು ಕೂಡ ಗುರುವೇ ಆಗಿದ್ದ. ಆತನೇ ಎಲ್ಲರಿಗೂ ಅದನ್ನು ತೋರಿಸಿದ. ಮಗುವಿನ ಕೈಕಾಲುಗಳು ಎಲ್ಲಾ ಜಜ್ಜಿ ಮುರಿದಿದ್ದವು. ಮಗುವನ್ನು ಆ ಸ್ಥತಿಯಲ್ಲಿ ಕಂಡವರೆಲ್ಲರ ಹೃದಯವೂ ವಿಲವಿಲ ಒದ್ದಾಡಿ ಬಿಟ್ಟಿತ್ತು. ಎಲ್ಲರ ಮುಖವೂ ದುಃಖದಿಂದ ಬಾಡಿ ಮಂಕಾಗಿ ಹೋಗಿತ್ತು. ಮಗುವಿನ ಮನೆಯವರ ದುಃಖಕ್ಕೆ ತಡೆಯೇ ಇರಲಿಲ್ಲ.

ಮಗು ಕೊಲೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ಆರಂಭವಾಯಿತು. ಘಟನೆ ನಡೆದು ಸುಮಾರು ಮೂರು ದಿನಗಳಾಗಿರಬಹುದು. ಪೊಲೀಸರು ಗುರುವನ್ನು ಬಂಧಿಸಿದ್ದರು. ಗುರು ತನ್ನನ್ನು ಅಣ್ಣ ಎಂದು ಕರೆಯುತ್ತಿದ್ದ ಆ ಪುಟ್ಟ ಮಗುವನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಮುಗಿಸಿ ಬಿಟ್ಟಿದ್ದ.ಅದೂ ಕೂಡ ಬಹಳ ವಿಕೃತವಾದ ರೀತಿಯಲ್ಲಿ. ಮಗುವಿನ ಕಾಲು ಹಿಡಿದೆತ್ತಿ ಕಾಂಪೌಂಡ್ ಗೋಡೆಗೆ ಜೋರಾಗಿ ಬಡಿದು ಬಿಟ್ಟಿದ್ದ. ಆ ಎಳೆಕೂಸು ಈತ ಬೀಸಿ ಬಡಿದ ರಭಸಕ್ಕೆ ಮೂಳೆಗಳೆಲ್ಲಾ ಪುಡಿಯಾಗಿ ತನ್ನ ಪ್ರಾಣ ಕಳೆದುಕೊಂಡಿತ್ತು. ತನ್ನ ತಾಯಿಗೆ ಬೈದು ನಿಂದಿಸಿದ್ದ ಆ ಮಗುವಿನ ತಾಯಿಯ ಮೇಲಿನ ಸೇಡನ್ನು ಈ ರೀತಿಯಲ್ಲಿ ತೀರಿಸಿಕೊಂಡೆನೆಂದು ಗರ್ವ ಹಾಗೂ ಸಮಾಧಾನ ಗುರುವಿನದಾಗಿತ್ತು.

ಸೇಡೇನೋ ತೀರಿಸಿಕೊಂಡೆ ಎಂದುಕೊಂಡಿದ್ದ ಗುರು ಜೈಲಿಗೆ ಬಂದು ಬಿದ್ದ. ಜೈಲಿನಲ್ಲಿ ಇವನು ಮಾಡಿದ ಕೃತ್ಯದ ಬಗ್ಗೆ ಟಿ. ವಿ ಪತ್ರಿಕೆಗಳ ಮೂಲಕ ಮೊದಲೇ ತಿಳಿದಿದ್ದರು. ಅದು ರಾಜ್ಯದಾದ್ಯಂತ ಭಾರಿ ಸಿಟ್ಟನ್ನು ಹುಟ್ಟಿ ಹಾಕಿತ್ತು. ಗುರು ಜೈಲು ಪ್ರವೇಶವಾದಾಗಿನಿಂದ ಹೊಡೆತಗಳು ಬೀಳಲು ಶುರುವಾದವು. ಅವನನ್ನು ಕಂಡವರೆಲ್ಲಾ ಮಗುವನ್ನು ಕೊಂದ ಕ್ರೂರಿ ಎಂಬ ಸಿಟ್ಟಿನಿಂದ ಹೊಡೆಯುತ್ತಿದ್ದರು.

ಗುರು ಈಗ ನಿಜವಾಗಲೂ ಕಂಗಾಲಾಗಿಬಿಟ್ಟ. ಬಹುಶಃ ಪೊಲೀಸರು ಬಂಧಿಸಿದಾಗಲೂ ಅವನು ಇಷ್ಟೊಂದು ಗಾಬರಿಯಾಗಿರಲಿಲ್ಲ ಅನಿಸುತ್ತದೆ. ಎಲ್ಲರಿಂದಲೂ ಬೀಳುತ್ತಿರುವ ಹೊಡೆತಗಳನ್ನು ತಾಳಲು ಬಹಳ ಕಷ್ಟಪಟ್ಟ. ಆಗಲೂ ತಾನು ಎಳೆ ಕೂಸನ್ನು ಅಷ್ಟೊಂದು ಕ್ರೂರವಾಗಿ ಕೊಂದಿದ್ದರ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದನೋ ಗೊತ್ತಿಲ್ಲ. ನಂತರದ ದಿನಗಳ ಅವನ ಮಾತು ಹಾಗೂ ವರ್ತನೆಗಳಲ್ಲಿ ಅವನು ಮಾಡಿದ ಆ ಘೋರ ಕೃತ್ಯದ ಬಗ್ಗೆ ಅವನಿಗೆ ಪಶ್ಚಾತ್ತಾಪವಾಗಲೀ, ವಿಷಾಧವಾಗಲೀ ಕಾಣಿಸಿರಲಿಲ್ಲ. ಅವನ ಮಾನಸಿಕತೆ ಅಷ್ಟೊಂದು ವಿಕೃತ ಸ್ಥಿತಿಯಲ್ಲಿತ್ತು.

ಅವಕಾಶ ಸಿಕ್ಕಾಗಲೆಲ್ಲಾ ತಾನು ಆ ಮಗುವನ್ನು ಹೇಗೆಲ್ಲಾ ಹಿಡಿದು ಬಡಿದು ಕೊಂದೆ ಎನ್ನುವುದನ್ನು ಬೇರೆಯವರಿಗೆ ವಿವರಿಸುತ್ತಿದ್ದ ರೀತಿಯಲ್ಲಿ ತಾನು ಮಾಡಿದ್ದು ಘನಂಧಾರಿ ಕೆಲಸ ಎನ್ನುವ ಧೋರಣೆ ಎದ್ದು ಕಾಣುತ್ತಿತ್ತು. ಬಂದ ಒಂದೆರಡು ತಿಂಗಳುಗಳಲ್ಲಿ ಗುರು ಜೈಲಿಗೆ ಒಗ್ಗಿಬಿಟ್ಟ. ಜೈಲು ಅವನಿಗೆ ಇನ್ನಷ್ಟು ವಿಕೃತತೆಯನ್ನು ಬೆಳೆಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿತು. ಇಂತಹವರಿಗಾಗೆ ಕಾದು ಕುಳಿತಿರುವ ತಂಡಗಳು ಅಲ್ಲಿರುತ್ತವೆ. ಜೈಲಿನ ವಾತಾವರಣವೇ ಅಂತಹುದು. ಮಾನಸಿಕ ಹಾಗೂ ವೈಚಾರಿಕ ದೃಢತೆ ಇಲ್ಲದೇ ಹೋದರೆ ಅಂತಹವರು ಅಲ್ಲಿ ಏನೇನೋ ಆಗಿ ಬಿಡುತ್ತಾರೆ. ಜೀವಚ್ಚವಗಳ ರೀತಿ ಮಾರ್ಪಡಬಹುದು, ಉದಾರತೆ ಬದಲು ಸಂಕುಚಿತತೆ, ಒಳ್ಳೆಯದರ ಬದಲು ಕೆಟ್ಟತನಗಳನ್ನು ರೂಢಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ. ಗುರುವಿನಂತಹ ವ್ಯಕ್ತಿತ್ವ ಹೊಂದಿರುವವರು ಮತ್ತೂ ಅಪಾಯದ ಸ್ಥಿತಿಗೆ ತಲುಪಿ ಬಿಡುತ್ತಾರೆ. ಜೈಲಿನಲ್ಲಿ ಇಂತಹವರಿಗೆ ಸಮಾಲೋಚನೆ ಮತ್ತು ಮಾನಸಿಕ ವೈದ್ಯರ ವ್ಯವಸ್ಥೆ ಇನ್ನೂ ಬಂದಿಲ್ಲ.

ಪ್ರಕರಣದ ವಿಚಾರಣೆ ಮೂರು ವರ್ಷಗಳ ಕಾಲ ನಡೆಯಿತು. ಗುರು ಸ್ವಂತ ವಕೀಲರನ್ನು ಇಟ್ಟುಕೊಳ್ಳಲಿಲ್ಲ. ಕಾರಣ ಅದಕ್ಕೆ ಅವನ ಕೈಯಲ್ಲಿ ಹಣವಿರಲಿಲ್ಲ. ನ್ಯಾಯಾಂಗ ಒದಗಿಸುವ ಕಾನೂನು ನೆರವಿನ ಮೂಲಕ ತನ್ನ ಪರ ವಾದಿಸಲು ವಕೀಲರನ್ನು ಪಡೆದಿದ್ದ. ವಿಚಾರಣೆಯಲ್ಲಿ ಅಪರಾಧ ಸಾಬೀತಾಗಿ ಅದರ ಕ್ರೂರತೆ ಗಮನಿಸಿ ಗುರುವಿಗೆ ಮರಣದಂಡನೆ ವಿಧಿಸಿದ ತೀರ್ಪು ನ್ಯಾಯಾಲಯದಿಂದ ಹೊರ ಬಂತು.

ಆಗಲೂ ಗುರು ಚಿಂತಿತನಾದಂತೆ ಕಾಣಲಿಲ್ಲ. ಉಚ್ಚ ನ್ಯಾಯಾಲಯದಲ್ಲಿ ಈ ತೀರ್ಪನ್ನು ಪ್ರಶ್ನಿಸುವುದಾಗಿ ಮಾದ್ಯಮಗಳ ಮುಂದೆ ಹೇಳಿಕೆ ಬೇರೆ ಕೊಟ್ಟಿದ್ದ ಆತ. ಗುರುವನ್ನು ಬಿಗಿ ಭದ್ರತೆಯಲ್ಲಿ ಮರಣದಂಡನೆಗೆ ಈಡಾದ ಬಂಧಿಗಳನ್ನು ಇಡುವ ಬೆಳಗಾವಿ ಜೈಲಿಗೆ ಹಾಕಿದರು. ಸಾಮಾನ್ಯವಾಗಿ ಮರಣದಂಡನೆಗೆ ಗುರಿಯಾಗಿರುವ ಬಂಧಿಗಳನ್ನು ಬೇರೆಯವರಿಂದ ಪ್ರತ್ಯೇಕಿಸಿ ಇಡಲಾಗುತ್ತದೆ. ಗುರುವನ್ನು ಹಾಗೇ ಇಟ್ಟಿದ್ದರು.

ಗುರುವಿಗೆ ಈಗ ಶಿಕ್ಷೆಯ ಬಿಸಿಯ ಅರಿವಾಗತೊಡಗಿತೆಂದು ತೋರುತ್ತದೆ. ಆತ ಮೌನಿಯಾಗತೊಡಗಿದ. ಯಾವುದರಲ್ಲೂ ಆಸಕ್ತಿ ವಹಿಸುತ್ತಿರಲಿಲ್ಲ. ಜೈಲಿನ ನಿರ್ಬಂಧನೆಗಳು ಅವನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಘಾಸಿ ಮಾಡತೊಡಗಿದವು. ಅವನನ್ನು ಕಾಣಲು ಯಾರೂ ಬರುತ್ತಿರಲಿಲ್ಲ. ಇದ್ದ ಒಬ್ಬ ತಾಯಿ ಅಷ್ಟೊಂದು ಹಣ ಖರ್ಚು ಮಾಡಿ ಸುಮಾರು 700 ಕಿಮೀ ದೂರ ಪ್ರಯಾಣ ಮಾಡಿ ಅಲ್ಲಿಗೆ ಹೋಗಲು ಸಾಧ್ಯವಿರಲಿಲ್ಲ. ಮೂರು ನಾಲ್ಕು ತಿಂಗಳುಗಳು ಕಳೆದಿರಬಹುದು ಅದೊಂದು ದಿನ ಗುರು ಆತ್ಮಹತ್ಯೆ ಮಾಡಿಕೊಂಡ ವರದಿ ಮಾದ್ಯಮಗಳಲ್ಲಿ ಬಂದಿತ್ತು. ಜೈಲಿನಲ್ಲಿ ಹಾಸಲು ಹೊದೆಯಲು ಕೊಟ್ಟಿದ್ದ ಬಟ್ಟೆಗಳನ್ನು ಬಳಸಿ ಕಿಟಕಿಯ ಸರಳನ್ನು ಬಳಸಿ ನೇಣು ಹಾಕಿಕೊಂಡು ಬಿಟ್ಟ. ಇಲ್ಲಿಗೆ ತನ್ನ ಜೀವನಕ್ಕೆ ಪೂರ್ಣವಿರಾಮವಿಟ್ಟ.