samachara
www.samachara.com
ಹಾದಿ ತಪ್ಪಿದ ಮಗ; ಜೈಲಿಗೆ ಬಂದರೂ ಸುಧಾರಣೆಯಾಗಲಿಲ್ಲ
PRISON STORIES

ಹಾದಿ ತಪ್ಪಿದ ಮಗ; ಜೈಲಿಗೆ ಬಂದರೂ ಸುಧಾರಣೆಯಾಗಲಿಲ್ಲ

ಅನುರೂಪನಂತಹವರು ಬೆಳೆಯಲು ಇರುವ ಈ ವ್ಯವಸ್ಥೆಯ ಸಾಂಸ್ಥಿಕ ರಚನೆಗಳ ಮತ್ತು ಕೌಟುಂಬಿಕ ಕಾರಣಗಳ ಬಗ್ಗೆ ಸಮಾಜ ಚಿಂತಿಸಿ ಪರಿಹಾರ ಕಾಣದಿದ್ದರೆ ಎಲ್ಲರ ಮನೆಗಳಲ್ಲೂ ಅಂತಹವರು ಹುಟ್ಟುವ ಸಾಧ್ಯತೆಗಳು ಇದ್ದೇ ಇರುತ್ತದೆ.

ನಂದಕುಮಾರ್ ಕೆ. ಎನ್‌

ನಂದಕುಮಾರ್ ಕೆ. ಎನ್‌

ಅವನಿಗೆ ಸತ್ರ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾದ ದಿನವದು. ಅವನ ತಂದೆ ತಾಯಿ ಅಣ್ಣ ಅಂದು ನ್ಯಾಯಾಲಯಕ್ಕೆ ಬಂದಿದ್ದರು. ಮಗ ಆರೋಪದಿಂದ ಬಿಡುಗಡೆ ಆಗಬಹುದೆಂದು ಎಣಿಸಿದ್ದರವರು. ಇದರಿಂದ ಹೇಗಾದರೂ ಮಗ ಬಚಾವಾದರೆ ಮುಂದೆಂದೂ ಅವನು ತಪ್ಪು ಮಾಡದಂತೆ ಕಣ್ಣಲ್ಲಿ ಕಣ್ಣಿಟ್ಟು ಕಾದು ನೋಡಿಕೊಳ್ಳಬಹುದೆಂದು ಅವರು ಎಣಿಸಿದ್ದರು.

ಅವನನ್ನು ಬಚಾವು ಮಾಡಪ್ಪ ಎಂದು ಸಿಕ್ಕಸಿಕ್ಕ ದೇವರಿಗೆಲ್ಲಾ ಹರಕೆ ಹೊತ್ತಿದ್ದರು. ಸಿಕ್ಕ ಎಲ್ಲಾ ಜ್ಯೋತಿಷಿಗಳ ಮೊರೆ ಹೋಗಿದ್ದರು. ಎಲ್ಲ ಪೂಜೆ, ಪುನಸ್ಕಾರ, ವ್ರತಗಳನ್ನು ಮಾಡಿದ್ದರು. ಆದರೆ ಪರಿಸ್ಥಿತಿ ಕೈಯಲ್ಲಿರಲಿಲ್ಲ. ಈಗ ನ್ಯಾಯಾಲಯದ ತೀರ್ಪು ಅವರನ್ನು ಒಮ್ಮೆಗೆ ಆಘಾತಕ್ಕೆ ದೂಡಿತು. ಆ ಹೆತ್ತವರ ದುಃಖಕ್ಕೆ ಮಿತಿ ಇರಲಿಲ್ಲ.

ಅವರಿಗೆ ಎರಡು ಗಂಡು ಮಕ್ಕಳು. ಹಿರಿಯವನು ವೃತ್ತಿಪರ ಶಿಕ್ಷಣದಲ್ಲಿ ಮುಂದುವರೆದಿದ್ದ. ಎರಡನೆಯನೇ ಈ ಕತೆಯ ನಾಯಕ, ವಿಲನ್ ಕೂಡ ಅವನೇ. ಹೆಸರು ಅನುರೂಪ್. ಹತ್ತೊಂಬತ್ತು ವರ್ಷದ ಇವನು ಪಿಯುಸಿ ಮುಗಿಸಿದ್ದ. ನಂತರ ವಿಧ್ಯಾಭ್ಯಾಸ ಮುಂದುವರಿಸಲಿಲ್ಲ. ಅನುರೂಪನ ತಂದೆ ಯಾವುದೋ ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಅನುರೂಪ ಕೂಡ ಯಾವುದೋ ಕೆಲಸ ಅಂತ ಓಡಾಡುತ್ತಾ ತಿಂಗಳಿಗೆ ಏಳೆಂಟು ಸಾವಿರ ಗಳಿಸುತ್ತಿದ್ದ. ಆದರೆ ಮನೆಗೆ ದುಡ್ಡು ಕೊಡುತ್ತಿದ್ದುದು ಅಪರೂಪ.

ಓಡಾಡಲು ಸಾಲ ಮಾಡಿ ತೆಗೆದುಕೊಂಡ ಒಂದು ಬೈಕಿತ್ತು. ಹೈಸ್ಕೂಲು ಕಾಲೇಜು ಹುಡುಗಿಯರು ಶಾಲಾ ಕಾಲೇಜಿನಿಂದ ಹೊರಬರುವ ಸಮಯ ನೋಡಿ ತನ್ನ ಬೈಕಿನೊಂದಿಗೆ ಅಲ್ಲಿ ಠಳಾಯಿಸುತ್ತಿದ್ದ ಅನುರೂಪ್. ಆಗಿನಿಂದಲೂ ಹುಡುಗಿಯರನ್ನು ಪಟಾಯಿಸಿ ಒಂದಷ್ಟು ದಿನ ಅವರೊಂದಿಗೆ ಒಡಾಡಿ ಅವರಿಗೆ ಅದೂ ಇದೂ ಕೊಡಿಸುತ್ತಾ ಖುಷಿ ಪಡಿಸುತ್ತಿದ್ದ.

ತಾನು ಅವರೊಂದಿಗೆ ದೈಹಿಕ ಸಂಪರ್ಕ ಹೊಂದುವವರೆಗೂ ಇದನ್ನೆಲ್ಲಾ ಮಾಡುತ್ತಿದ್ದ. ಯಾವಾಗ ಅದು ಮುಗಿಯುತ್ತದೋ ನಂತರ ಅವರ ಸಂಪರ್ಕವನ್ನು ಕಡಿದುಕೊಂಡು ಬಿಡುತ್ತಿದ್ದ. ತನ್ನ ಸಿಮ್ ಬದಲಾಯಿಸುತ್ತಿದ್ದ. ನಂತರ ಸ್ವಲ್ಪ ಕಾಲ ಆ ಕಡೆ ಸುಳಿಯುತ್ತಿರಲಿಲ್ಲ. ಬೇರೆ ಕಾಲೇಜು ಹೈಸ್ಕೂಲುಗಳ ಆವರಣದಲ್ಲಿ ಇರುತ್ತಿದ್ದ.

ಎಣ್ಣೆಗಪ್ಪಿನ ಮುದ್ದು ಮುಖವಿದ್ದ ಇವನಿಗೆ ಹುಡುಗಿಯರು ಸಲೀಸಾಗಿ ಬೀಳುತ್ತಿದ್ದರು. ಹಲವು ಹುಡುಗಿಯರು ಇವನನ್ನು ಅವರ ಮನೆಗಳಲ್ಲಿ ಯಾರೂ ಇಲ್ಲದಿದ್ದಾಗ ಮನೆಗೆ ಕರೆಯುತ್ತಿದ್ದರು. ಅದೂ ಇದೂ ಮಾತಾಡಿ ನಂತರ ದೈಹಿಕ ಬಳಕೆಯೇ ಅಲ್ಲಿ ನಡೆಯುತ್ತಿದ್ದುದು.

ವಯೋಸಹಜ ಮನೋದೈಹಿಕ ಬೆಳವಣಿಗೆ ಹೊಂದುತ್ತಿರುವ ಹುಡುಗ ಹುಡುಗಿಯರು ಪ್ರೀತಿ, ಕಾಮದ ಬಗೆಗಿನ ಸರಿಯಾದ ಆರೋಗ್ಯವಂತ ತಿಳುವಳಿಕೆ ಇಲ್ಲದಾಗ ಇಂತಹ ಎಡವಟ್ಟುಗಳಿಗೆ ಸಿಲುಕುತ್ತಾರೆ. ಪೋಷಕರು ತಂದೆ ತಾಯಿಗಳು ಅಂತಹ ವಿಷಯಗಳ ಬಗ್ಗೆ ಸರಿಯಾದ ತಿಳುವಳಿಕೆ ನೀಡುವ ಪರಿಪಾಟ ನಮ್ಮ ಸಮಾಜದಲ್ಲಿ ಬಹಳ ಕಡಿಮೆ.

ಅಲ್ಲದೇ ಅಂತಹ ವಿಚಾರಗಳನ್ನು ಮುಕ್ತವಾಗಿ ಮಾತನಾಡುವುದು ನಿಷಿದ್ಧವೆಂಬ ಭಾವನೆ ಬೇರೆ ದಟ್ಟವಾಗಿದೆ. ಹಾಗಾಗಿ ಸಹಜವಾಗಿ ಪ್ರೌಢ ವಯಸ್ಸಿಗೆ ಬರುವ ಯುವ ಜನಾಂಗ ಅಂತಹ ವಿಷಯಗಳಲ್ಲಿ ಕುತೂಹಲ ಹೊಂದುವುದು ನಂತರ ಅವಕಾಶ ಸಿಕ್ಕಾಗ ಅದನ್ನು ಪರೀಕ್ಷಿಸಲು ಹೊರಡುವುದು ನಡೆಯುತ್ತವೆ.

ಅನುರೂಪನಂತಹವರು ಅದನ್ನು ಬಳಸಿಕೊಳ್ಳುತ್ತಾರೆ. ಅನುರೂಪನಿಗೆ ಬೀಡಿ, ಸಿಗರೇಟಿನ ಅಭ್ಯಾಸವಿತ್ತು. ಆಗಾಗ ಎಣ್ಣೆ ಸೇವನೆಯೂ ಇತ್ತು. ಮನೆಯವರಿಗೆ ಅನುರೂಪ ಆಗಾಗ ಬೀಡಿ ಸೇದುತ್ತಿದ್ದಾನೆಂಬುದು ಮಾತ್ರ ಗೊತ್ತಿತ್ತು. ಉಳಿದ ವಿಷಯಗಳು ಗೊತ್ತೇ ಇರಲಿಲ್ಲ. ಬೀಡಿ ಸೇದುವ ಬಗ್ಗೆ ಬೈಯ್ಯುತ್ತಲೂ ಇದ್ದರು.

ಹೀಗೆ ಇದ್ದ ಅನುರೂಪ ಒಂದು ನಾಲ್ಕೈದು ವರ್ಷದ ಹೆಣ್ಣು ಮಗುವನ್ನು ತನ್ನ ಗೆಳೆಯರ ಬಳಿ ಕರೆದುಕೊಂಡು ಬಂದು ಬಿಟ್ಟ. ಆ ಮಗುವಿನ ಕೈ ತುಂಬಾ ಚಾಕೋಲೇಟುಗಳಿದ್ದವು. ನಂತರ ತನ್ನ ಗೆಳೆಯರಿಗೆ ಎನೋ ಹೇಳಿ ಎಲ್ಲಿಗೋ ಕಳಿಸಿದ. ಇವನು ಆ ಮಗುವನ್ನು ಕರೆದುಕೊಂಡು ಅಲ್ಲೇ ಒಂದು ಕಡೆ ನೀರಿರುವ ಕಡೆ ಹೋಗಿ ಈಜಾಡಲು ತೊಡಗಿದ. ಮಗು ಅಲ್ಲೇ ಬದಿಯಲ್ಲಿ ಚಾಕೋಲೆಟ್ ತಿನ್ನುತ್ತಾ ಕುಳಿತಿತ್ತು. ಅರ್ದ ಗಂಟೆ ಕಳೆದಿರಬಹುದು ಹಲವರು ಇವನಿದ್ದಲ್ಲಿಗೆ ಬಂದು ಸುತ್ತುವರೆದರು. ಅವರು ಪೊಲೀಸರಾಗಿದ್ದರು.

ಅನುರೂಪ ತನ್ನ ಗೆಳೆಯರೊಂದಿಗೆ ಕೂಡಿ ಹೇಗಾದರೂ ದುಡ್ಡು ಗಳಿಸುವ ಯೋಜನೆ ಹಾಕಿದ್ದ. ಆ ಯೋಜನೆ ಪ್ರಕಾರವೇ ಅವನು ಆ ಮಗುವನ್ನು ಪುಸಲಾಯಿಸಿ ಕರೆದುಕೊಂಡು ಬಂದು ಆ ಮಗುವಿನ ಅಪ್ಪನಿಗೆ ಕೆಲವು ಲಕ್ಷಗಳನ್ನು ಕೊಟ್ಟರೆ ಮಾತ್ರ ಮಗು ಜೀವಂತವಾಗಿ ಸಿಗುತ್ತದೆ ಎಂದು ಫೋನಿನಲ್ಲಿ ಧಮಕಿ ಹಾಕಿದ್ದ.

ಗಾಬರಿಯ ವಿಚಾರವೆಂದರೆ ಆ ಮಗು ಮತ್ತದರ ಕುಟುಂಬ ಇವನಿಗೆ ತುಂಬಾ ಪರಿಚಿತವಾಗಿತ್ತು. ಆ ಮಗು ಇವನನ್ನು ಅಣ್ಣಾ ಎಂದು ಕರೆಯುತ್ತಾ ಆಟವಾಡುತ್ತಿತ್ತು. ಇವನ ಕುಟುಂಬ ಮತ್ತು ಆ ಮಗುವಿನ ಕುಟುಂಬ ಒಂದೇ ವಠಾರದವರೇ ಆಗಿದ್ದರು. ಆ ಕುಟುಂಬದ ಬಳಿ ಹಲವು ಲಕ್ಷಗಳ ಆಸ್ತಿ ಮಾರಿದ ಹಣ ಬಂದು ಸೇರಿದೆ ಎನ್ನುವುದು ಅನುರೂಪನಿಗೆ ಗೊತ್ತಿತ್ತು. ಅವರಿಗೆ ಇರುವ ಈ ಒಂದೇ ಮಗುವಿನ ಮೇಲಿನ ಅವರ ಪ್ರೀತಿಯೂ ಅವನಿಗೆ ಚೆನ್ನಾಗಿಯೇ ಗೊತ್ತಿತ್ತು. ಅದನ್ನು ಉಪಯೋಗಿಸಿ ಅವರಿಂದ ಸುಲಭವಾಗಿ ಹಣ ಕೀಳಬಹುದೆಂದುಕೊಂಡೇ ಈ ಯೋಜನೆ ಹಾಕಿದ್ದ.

ಆ ಕುಟುಂಬ ಪೊಲೀಸರವರೆಗೆ ಹೋಗದೇ, ಹಣ ತಂದುಕೊಡುತ್ತಾರೆಂಬ ಲೆಕ್ಕಾಚಾರ ಇವನದಾಗಿತ್ತು. ಆದರೆ ಫೋನಿನಲ್ಲಿ ಬಂದ ಧಮಕಿಯಿಂದ ತತ್ತರಿಸಿ ಹೋದ ಆ ಕುಟುಂಬ ಸಿಕ್ಕಾಪಟ್ಟೆ ಗಾಬರಿಯಿಂದ ಸಿಕ್ಕಸಿಕ್ಕ ತಮ್ಮ ಬಂಧುಗಳೊಂದಿಗೆ ಮಗುವಿನ ಅಪಹರಣ ಮತ್ತು ಲಕ್ಷಾಂತರ ರೂಪಾಯಿಗಳ ಹಣಕ್ಕಾಗಿನ ಒತ್ತಾಯದ ವಿಚಾರವನ್ನು ತಿಳಿಸಿಬಿಟ್ಟಿತ್ತು. ಅವರಲ್ಲಿ ಯಾರೋ ಒಬ್ಬರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ನಂತರ ನಡೆದಿದ್ದು ಎಲ್ಲವೂ ಪೊಲೀಸರ ಅಣತಿಯಂತೆ.

ಮನೆಯವರಿಗೆ ಮಗುವಿನ ಭದ್ರತೆ ಬಗ್ಗೆ ತುಂಬಾ ಗಾಬರಿಯಾಗಿದ್ದರೂ ಇಬ್ಬಂದಿತನದಿಂದಲೇ ಪೊಲೀಸರು ಹೇಳಿದಂತೆ ಮಾಡಬೇಕಾಯಿತು. ಹಣ ನೀಡಲು ಮಗುವಿನ ಮನೆಯವರು ಒಪ್ಪಿದ್ದಾರೆಂದು ತಿಳಿದದ್ದರಿಂದಲೇ ಅದನ್ನು ಇಸ್ಕೊಂಡು ಬರಲು ಅನುರೂಪ ತನ್ನ ಗೆಳೆಯರನ್ನು ಯಾವುದೋ ಜಾಗಕ್ಕೆ ಕಳಿಸಿದ್ದು. ಮೊದಲೇ ಅಲ್ಲಿ ಕಾದು ಕುಳಿತಿದ್ದ ಪೊಲೀಸರು ಅವರನ್ನು ಹಿಡಿದಾಕಿದ್ದರು. ನಂತರವೇ ಇವನಿರುವ ಜಾಗ ತಿಳಿದು ಹುಡುಕಿ ಬಂದಿದ್ದರು.

ಯಾಕೆ ಈ ಕೆಲಸ ಮಾಡಿದ್ದು ಎಂದು ಕೇಳಿದ ಪೊಲೀಸರಿಗೆ ವ್ಯಾಪಾರ ಮಾಡಲು ಹಣ ಬೇಕಾಗಿತ್ತು ಅದಕ್ಕೆ ಈ ರೀತಿ ಮಾಡಿದರೆ ಸುಲಭದಲ್ಲಿ ಹಣ ಸಿಗುತ್ತದೆ ಅಂತ ಮಾಡಿದ್ದು ಎಂದು ಅನುರೂಪ ಉತ್ತರಿಸಿದ್ದ. ಇವನ ಗೆಳೆಯರು ಹದಿನಾಲ್ಕು, ಹದಿನೈದರ ಅಪ್ರಾಪ್ತ ವಯಸ್ಕರಾಗಿದ್ದರಿಂದ ಬಾಲಭವನಕ್ಕೆ ಅವರನ್ನು ಕಳುಹಿಸಿ ಇವನನ್ನು ಮಾತ್ರ ಜೈಲಿಗೆ ತಳ್ಳಿದ್ದರು. ಇವನ ಗೆಳೆಯರಿಗೆ ಕೆಲವೇ ದಿನಗಳಲ್ಲಿ ಜಾಮೀನು ಸಿಕ್ಕಿದ್ದರೂ ಇವನಿಗೆ ಮಾತ್ರ ಸಿಕ್ಕಿರಲಿಲ್ಲ.

ಅನುರೂಪ ಈಗಾಗಲೇ ನಾಲ್ಕು ವರ್ಷಗಳ ಜೈಲುವಾಸ ಪೂರೈಸಿ ಆಗಿತ್ತು. ಈ ನಾಲ್ಕು ವರ್ಷಗಳಲ್ಲಿ ಜೈಲಿಗೆ ಒಗ್ಗಿಕೊಂಡು ಬಿಟ್ಟಿದ್ದ. ಗಾಂಜಾ ಸೇದುವುದನ್ನು ಶುರು ಮಾಡಿದ್ದ. ಬೇರೆ ಅಮಾಯಕ ಬಂಧಿಗಳ ತಲೆ ಒಡೆಯೋ ಕೆಲಸಗಳನ್ನೂ ಮಾಡತೊಡಗಿದ. ಆ ಕೆಲಸ ಮಾಡಿಕೊಡ್ತೀನಿ, ಈ ಕೆಲಸ ಮಾಡಿ ಕೊಡ್ತೀನಿ ಎಂದೆಲ್ಲಾ ಭರವಸೆ ನೀಡಿ ಅವರಿಂದ ಹಣವನ್ನು ಕೇಳಿ ಇಸ್ಕೊಳ್ಳುವುದು, ಕ್ರಿಕೆಟ್ ಬೆಟ್ಟಿಂಗ್ ಕಟ್ಟುವುದನ್ನು ಮಾಡುತ್ತಿದ್ದ.

ಬೆಟ್ಟಿಂಗ್ ವ್ಯವಹಾರ ಜೈಲಿನಲ್ಲಿ ಹಲವು ಲಕ್ಷಗಳವರೆಗೆ ನಡೆಯುತ್ತದೆ. ಮಾಫಿಯಾಗಳು, ರೌಡಿ ಗುಂಪುಗಳು ಇದರಲ್ಲಿ ಸಕ್ರಿಯರಾಗಿರುತ್ತಾರೆ. ಅನುರೂಪನಂತಹವರನ್ನೂ ಅದಕ್ಕೆ ಸೆಳೆದುಕೊಳ್ಳುತ್ತಾರೆ.

ಅನುರೂಪನ ತಾಯಿ ಆಗಾಗ ಜೈಲಿಗೆ ಬಂದು ಬೇಟಿಯಾಗಿ ಕೈಗೆ ಒಂದಷ್ಟು ಹಣ ಕೊಟ್ಟು ಹೋಗುತ್ತಿದ್ದರು. ಆದರೆ ತಂದೆ ಮಾತ್ರ ಬರುತ್ತಿರಲಿಲ್ಲ. ಅವರಿಗೆ ಇವನ ಮೇಲೆ ಆ ಮಟ್ಟದ ಸಿಟ್ಟಿತ್ತು. ಅರೆಹೊಟ್ಟೆ ಉಂಡು ಮಕ್ಕಳನ್ನು ಬೆಳಸಿದ್ದರು ಅವರು. ಸಣ್ಣ ಮನೆ ಬಿಟ್ಟರೆ ಬೇರೇನೂ ಇರಲಿಲ್ಲ ಅವರಿಗೆ.

ಆದರೆ ಮಗ ಆರೋಪ ಮುಕ್ತನಾಗಿ ಬರಲಿ, ಅವನನ್ನು ತಿದ್ದಬಹುದು ಎಂಬ ಆಸೆ ಅವರೊಳಗಿತ್ತು. ಅದಕ್ಕಾಗಿ ಸಾಲ ಮಾಡಿ ಎರಡು ಲಕ್ಷಗಳವರೆಗಿನ ಹಣ ವಕೀಲರ ಶುಲ್ಕವಾಗಿ ಖರ್ಚು ಕೂಡ ಮಾಡಿದ್ದರು. ಅದಲ್ಲದೆ ಪೂಜೆ, ಹರಕೆ, ಭವಿಷ್ಯ ಎಂದು ಮತ್ತೊಂದು ಅರವತ್ತು ಸಾವಿರದವರೆಗೆ ಕೈ ಬಿಟ್ಟಿತ್ತು. ಆದರೆ ಅವರ ನಿರೀಕ್ಷೆಯಂತೆ ನ್ಯಾಯಾಲಯದ ತೀರ್ಪು ಬರಲಿಲ್ಲ.

ಮಗು ವಿಚಾರಣೆಯ ಸಮಯದಲ್ಲಿ ಅನುರೂಪನನ್ನು ನ್ಯಾಯಾಧೀಶರೆದುರು ಗುರ್ತಿಸಿ ತನ್ನನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದ ಬಗ್ಗೆ ಹೇಳಿತ್ತು. ಮಗುವಿನ ತಂದೆಯ ಸಾಕ್ಷ್ಯ ಇತ್ತು. ಹಾಗಾಗಿ ಆರೋಪ ಸಾಬೀತಾಗಿ ಮಗುವಿನ ಅಪಹರಣ ಮತ್ತು ಕೊಲೆಬೆದರಿಕೆ ಹಾಕಿದ್ದು, ಹಣಕ್ಕೆ ಒತ್ತಾಯಿಸಿದ್ದು ಎಲ್ಲಾ ಸೇರಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು.

ಇವನ ಎಳೆಯ ಗೆಳೆಯರನ್ನು ವಿಚಾರಣೆ ಮಾಡಿದ ಬಾಲಾಪರಾಧಿಗಳಿಗೆಂದೇ ಇರುವ ವಿಶೇಷ ನ್ಯಾಯಾಲಯ ಎರಡು ವರ್ಷ ಮೊದಲೇ ಅವರನ್ನು ಆರೋಪಗಳಿಂದ ಮುಕ್ತಗೊಳಿಸಿತ್ತು. ಅನುರೂಪ ಏನಾಗಿ ಉಳಿಯುತ್ತಾನೆಂದು ಈಗಲೇ ಹೇಳಲಾಗುವುದಿಲ್ಲ. ಪ್ರಜ್ಞಾಪೂರ್ವಕವಾಗಿದ್ದು ತಮ್ಮನ್ನು ತಾವು ಅಲ್ಲಿನ ವಾತಾವರಣದಿಂದ ರಕ್ಷಿಸಿಕೊಳ್ಳಲಾಗದವರ ಕತೆ ಅಷ್ಟೇನೆ.

ಅನುರೂಪನಂತಹವರು ಬೆಳೆಯಲು ಇರುವ ಈ ವ್ಯವಸ್ಥೆಯ ಸಾಂಸ್ಥಿಕ ರಚನೆಗಳ ಮತ್ತು ಕೌಟುಂಬಿಕ ಕಾರಣಗಳ ಬಗ್ಗೆ ಸಮಾಜ ಚಿಂತಿಸಿ ಪರಿಹಾರ ಕಾಣದಿದ್ದರೆ ಎಲ್ಲರ ಮನೆಗಳಲ್ಲೂ ಅಂತಹವರು ಹುಟ್ಟಿಬೆಳೆಯುವ ಸಾಧ್ಯತೆಗಳು ಇದ್ದೇ ಇರುತ್ತದೆ.