samachara
www.samachara.com
ಅಂತರ್ಜಾತಿ ವಿವಾಹ ಮತ್ತು ಮೂರಾಬಟ್ಟೆಯಾದ ಬದುಕು
PRISON STORIES

ಅಂತರ್ಜಾತಿ ವಿವಾಹ ಮತ್ತು ಮೂರಾಬಟ್ಟೆಯಾದ ಬದುಕು

ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಾದ ವಿಚಾರವಾಗಿದ್ದರೂ ಅಂತಹ ಮನಸ್ಥಿತಿಗಳು ಸಮಾಜದಲ್ಲಿ ಇನ್ನೂ ಬೆಳೆದಿಲ್ಲ. ಹೀಗಾಗಿ ಇಂತಹ ಘಟನೆಗಳು ಜರುಗುತ್ತಲೇ ಇರುತ್ತವೆ.

ಅವನು ಹಿಂದುಳಿದ ಅಲೆಮಾರಿ ಬುಡಕಟ್ಟು ಪಂಗಡದ ಹುಡುಗ. ಮೈಸೂರು ಜಿಲ್ಲೆಗೆ ಹೊಂದಿಕೊಂಡಿದ್ದ ಚಾಮರಾಜನಗರ ಜಿಲ್ಲೆಯ ಒಂದು ಹಳ್ಳಿಯ ಇವನ ಹೆಸರು ರಾಜು. ಮನೆಗೆ ಒಬ್ಬನೇ ಗಂಡು ಮಗನಿವನು. ಅಕ್ಕ ಒಬ್ಬಳಿದ್ದಳು. ಆಕೆಗೆ ಮದುವೆಯಾಗಿತ್ತು. ಮನೆಯಲ್ಲಿ ಇವನೊಂದಿಗೆ ತಾಯಿ ಮಾತ್ರ ಇದ್ದರು. ತಂದೆ ತೀರಿ ಅದಾಗಲೇ ನಾಲ್ಕೈದು ವರ್ಷವಾಗಿತ್ತು. ಇವನು ಮತ್ತು ಇವನ ತಾಯಿ ಹಳ್ಳಿ ಬಿಟ್ಟು ಮೈಸೂರು ಜಿಲ್ಲೆಯ ಹುಣಸೂರು ಕಡೆ ಬಂದು ನೆಲೆಸಿದ್ದರು.

ಊರಲ್ಲಿ ಇದ್ದ ಎರಡು ಏಕರೆಯಷ್ಟು ಒಣ ಜಮೀನನ್ನು ಯಾರಿಗೋ ಕೃಷಿ ಮಾಡಲು ಕೊಟ್ಟಿದ್ದರು. ಅವರು ಇವರಿಗೆ ವರ್ಷಕ್ಕೆ ಇಂತಿಷ್ಟು ಅಂತ ಹಣ ಕೊಡುತ್ತಿದ್ದರು. ಅದು ಇವರ ಜೀವನಕ್ಕೆ ಸಾಕಾಗುವಷ್ಟು ಇರಲಿಲ್ಲ. ಉಳಿದಂತೆ ಇವನು ಹಾಗೂ ಆ ತಾಯಿ ಮಾಡುತ್ತಿದ್ದ ಕೂಲಿಯೇ ಆಧಾರವಾಗಿತ್ತು. ರಾಜನೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಸೆಂಟ್ರಿಂಗ್ ಕೆಲಸ ಗೊತ್ತಿತ್ತು. ಕೂಲಿ ಮಾಡಿ ಗಳಿಸುತ್ತಿದ್ದುದರಿಂದ ಜೀವನ ನಡೀತಿತ್ತು. 10ನೇ ತರಗತಿಯವರೆಗೆ ಓದಿದ್ದ ರಾಜು ಅಕ್ಷರಸ್ಥನೇ ಆಗಿದ್ದ. ವಿದ್ಯಾವಂತ ಅಂತ ಹೇಳುವುದು ಸಾಧ್ಯವಿರಲಿಲ್ಲ.

ರಾಜುವಿಗೆ ಬೀಡಿ ಸೇದುವ ಚಟವಿತ್ತು. ಕುಡಿತವೂ ಇತ್ತು. ಆದರೆ ಸೋಮಾರಿಯಲ್ಲ. ಒಳ್ಳೆ ಕೆಲಸಗಾರ ಕೂಡ. 20ರ ಹದಿಹರೆಯದ ವಯಸ್ಸಿನ ರಾಜುವಿಗೆ ಆ ವಯಸ್ಸಿನ ಸಹಜ ವ್ಯಾಮೋಹಗಳು ಗರಿಗೆದರತೊಡಗಿದ್ದವು. ಕನಸು ಕಾಣಲು ಬಡತನವೇನೂ ಅಡ್ಡಿಬರುವುದಿಲ್ಲವಲ್ಲ. ರಾಜೂ ಕೂಡ ಕನಸು ಕಾಣಲು ಆರಂಭಿಸಿದ. ಬಣ್ಣ ಬಣ್ಣದ ಚಿತ್ತಾರಗಳು ಅಲ್ಲಿ ಮೂಡುತ್ತಿದ್ದವು. ತಿರುಕನ ಕನಸು ಅನ್ನೊ ಪದ್ಯ ರಾಜುವಿಗೂ ಗೊತ್ತಿತ್ತು ಬಿಡಿ.

ಹೀಗಿರಲು ಅವನು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಕಡೆ ಕೆಲಸಕ್ಕೆ ಬರುತ್ತಿದ್ದ ಮುದ್ದು ಹುಡುಗಿಯೊಬ್ಬಳ ಬಗ್ಗೆ ರಾಜುವಿಗೆ ಆಕರ್ಷಣೆ ಶುರುವಾಯಿತು. ಆಕೆಯ ಅಪ್ಪ ಕೂಡ ಅಲ್ಲೇ ಕೆಲಸ ಮಾಡುತ್ತಿದ್ದರು. ರಾಜು ಬರಬರುತ್ತಾ ಆಕೆಯ ಬಗ್ಗೆ ವಿಪರೀತ ಆಸಕ್ತಿ ಬೆಳೆಸಿಕೊಂಡು ಬಿಟ್ಟ. ಆಕೆ ಪ್ರಾಥಮಿಕ ಅಕ್ಷರಾಭ್ಯಾಸ ಮಾಡಿದ್ದಳು. ಹುಡುಗಿ ಎಂದು ಅವಳ ತಂದೆ ತಾಯಿ ಹೆಚ್ಚಿಗೆ ಓದಿಸಿರಲಿಲ್ಲ. ಆಕೆಯ ವಯಸ್ಸು 16 ಕೂಡ ಆಗಿರಲಿಲ್ಲ.

ಆಕೆ ಬದುಕಿನ ಬಣ್ಣ ಬಣ್ಣದ ಕನಸು ಕಾಣಲು ತೊಡಗಿದ್ದಳು. ರಾಜುವಿನ ವಿಶೇಷ ಆಸಕ್ತಿಯನ್ನು ಆಕೆಯೂ ಆಸ್ವಾದಿಸತೊಡಗಿದಳು. ಹದಿನಹರೆಯವೇ ಅಂತಹುದು ತಮ್ಮನ್ನು ಯಾರಾದರೂ ವಿಶೇಷವಾಗಿ ಗಮನಿಸಬೇಕೆಂದು ಬಯಸುವುದು ಸಹಜವೇ. ತಾನು ಬೇರೆಯವರು ಗಮನಿಸಬಹುದಾದಷ್ಟು ಸುಂದರ ಅಂತ ಗೊತ್ತುಮಾಡಿಕೊಳ್ಳುವ ಹಂಬಲ ಸಾಮಾನ್ಯವಾಗಿ ಇರುತ್ತದೆ. ನವಿರಾದ ಮೋಹಕ ಜಗತ್ತಿನಲ್ಲಿ ತೇಲಾಡುವ ಹಂಬಲವೂ ಸೇರುತ್ತದೆ. ಆಕೆಗೂ ರಾಜುವಿನ ಮೇಲೆ ಆಕರ್ಷಣೆ ಬೆಳೆಯಲು ಸಮಯವೇನೂ ಬೇಕಾಗಲಿಲ್ಲ. ಈ ಹುಡುಗ ಹುಡುಗಿಯರಿಬ್ಬರೂ ತಾವೂ ಪ್ರೀತಿಸುತ್ತಿದ್ದೇವೆಂದು ತಿಳಿದು ಬಿಟ್ಟಿದ್ದರು.

ಅದರಂತೆ ಇಬ್ಬರೂ ಒಂದೇ ಕಡೆ ಕೆಲಸ ನೋಡಿಕೊಳ್ಳುತ್ತಿದ್ದರು. ಹುಡುಗಿ ಅಪ್ಪ ಬೇರೆಡೆ ಕೆಲಸಕ್ಕೆ ಹೋಗಬೇಕಾಗುತ್ತಿತ್ತು. ನೋಟ, ಕಣ್ಸನ್ನೆ, ನಗು ಇವೆಲ್ಲವನ್ನೂ ವಿನಿಮಯ ಮಾಡಿಕೊಳ್ಳುತ್ತಾ ಕೆಲಸ ಮಾಡುತ್ತಿದ್ದಾಗ ಸಮಯ ಹೋಗುವುದು, ಆಯಾಸವಾಗುವುದೂ ಕೂಡ ತಿಳಿಯುತ್ತಿರಲಿಲ್ಲ. ಎಲ್ಲವೂ ರೋಚಕವೆನಿಸಿತ್ತು ಈ ಜೋಡಿಗೆ. ಇವರ ಪ್ರೀತಿ ಇತರ ಕೆಲಸಗಾರರಿಗೆ ಗೊತ್ತಗದೇ ಇರಲಿಲ್ಲ. ಆದರೆ ಹುಡುಗಿಯ ತಂದೆ ಕಿವಿಗೆ ಹಾಕಿರಲಿಲ್ಲವಷ್ಟೇ. ರಾಜುವಿನ ಸ್ವಭಾವ ಯಾರಿಗೂ ಇಷ್ಟವಾಗುತ್ತಿರಲಿಲ್ಲ. ಮಹಾ ಜಗಳಗಂಟ ಸ್ವಭಾವದವನಾಗಿದ್ದ. ಹಾಗಾಗಿ ಆತನೊಂದಿಗೆ ಯಾರೂ ಸಲುಗೆ ವಹಿಸಿ ಮಾತಾಡುತ್ತಿರಲಿಲ್ಲ.

ಹೀಗೆ ಇದ್ದಾಗ ರಾಜು ಮತ್ತು ಆ ಹುಡುಗಿ ಒಮ್ಮೆಲೇ ಕಾಣೆಯಾಗಿ ಬಿಟ್ಟರು. ಎಲ್ಲೋ ದೂರದ ಕೇರಳದ ಕಡೆ ಹೋಗಿ ಮದುವೆ ಕೂಡ ಆಗಿಬಿಟ್ಟರು. ಆ ಮದುವೆಗೆ ರಾಜುವಿನ ಬಂಧುಗಳು ಸಾಕ್ಷಿಯಾಗಿದ್ದರು. ರಾಜುವಿನ ತಾಯಿಗೆ ವಿಷಯ ಮೊದಲೇ ತಿಳಿದಿತ್ತು. ರಾಜುವಿನ ತಾಯಿ ಕೇರಳದ ಕಡೆಯವರು. ರಾಜುವಿನ ತಂದೆ ಕರ್ನಾಟಕದ ಅಲೆಮಾರಿ ಬುಡಕಟ್ಟಿಗೆ ಸೇರಿದವರಾಗಿದ್ದರು. ಅವರಿಬ್ಬರದೂ ಅಂತರ್ಜಾತಿ ಪ್ರೇಮ ವಿವಾಹವಾಗಿತ್ತು. ಅದನ್ನು ಅಂತರ್ಪಂಗಡದ ಮದುವೆ ಅಂತ ಹೇಳೋದೆ ಸರಿಯಾಗುತ್ತದೆ.

ಹುಡುಗಿಯ ತಂದೆಗೆ ಈಗ ರಾಜು ಮತ್ತು ತನ್ನ ಮಗಳ ಪ್ರೇಮ ಕತೆ ತಿಳಿಯಿತು. ಆತ ಕೆರಳಿ ಕೆಂಡವಾಗಿಬಿಟ್ಟ. ಜಾತಿ ವಿಚಾರ ಕೂಡ ಆತನಿಗೆ ದೊಡ್ಡ ವಿಷಯವಾಗಿತ್ತು. ರಾಜುವಿನ ಪರಿಚಯ ಅವನಿಗೆ ಇದ್ದರೂ ಆತನಿಗೆ ರಾಜುವನ್ನು ಕಂಡರೆ ಅಷ್ಟಕ್ಕಷ್ಟೆ. ಹುಡುಗಿಯ ಬಂಧುಗಳಿಗೂ ಜಾತಿ ವಿಚಾರ ದೊಡ್ಡದಾಗಿತ್ತು. ಅವರೆಲ್ಲರೂ ರಾಜುವಿನದಕ್ಕಿಂತ ಉನ್ನತ ಜಾತಿಯೆಂಬ ಹಮ್ಮಿನಲ್ಲಿದ್ದರು. ಆಳಿಗೊಂದು ಮಾತಾಡುತ್ತಾ ವಿಷಯ ಬೆಳೆದು ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಆಗಲೇ ರಾಜು ಆ ಹುಡುಗಿಯನ್ನು ಮದುವೆಯಾಗಿ ತಿಂಗಳಾಗಿತ್ತು.

ಠಾಣೆಯ ಮೆಟ್ಟಿಲು ಹತ್ತಿದ ಮೇಲೆ ಈ ಪ್ರೇಮ ಜೋಡಿಯನ್ನು ಹಿಡಿಯಲು ತಡವೇನೂ ಆಗಲಿಲ್ಲ. ಪ್ರೀತಿ, ಮದುವೆ ಎನ್ನೋದೆಲ್ಲಾ ಠಾಣೆಯಲ್ಲಿ ಕೆಲಸಕ್ಕೆ ಬರಲಿಲ್ಲ. ಹುಡುಗಿಗೆ 18 ವರ್ಷ ಆಗಿರಲಿಲ್ಲ. ಕಾನೂನು ಪ್ರಕಾರ ಮದುವೆ ಅಸಿಂದುವಾಗಿತ್ತು. ರಾಜುವಿನ ಮೇಲೆ ಅಪಹರಣ, ಅತ್ಯಾಚಾರ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಿದರು. ಮನೆಯವರ ಜೊತೆ ಹೋಗಲು ಒಪ್ಪದ ಹುಡುಗಿಯನ್ನು ಮಹಿಳಾ ಸುರಕ್ಷಾ ಕೇಂದ್ರಕ್ಕೆ ಕಳುಹಿಸಲಾಯಿತು.

ಹುಡುಗಿಯ ಅಳು, ಮಾತುಗಳಿಗೆ ಬೆಲೆಯೇನೂ ಇರಲಿಲ್ಲ. ರಾಜುವಿನ ತಾಯಿಯ ದುಃಖ ಲೆಕ್ಕಕ್ಕೇ ಇರಲಿಲ್ಲ. ಹುಡುಗಿಯ ಮೇಲೆ ಈಗ ಒತ್ತಡ ವಿಪರೀತವಾಯಿತು. ತಂದೆ ತಾಯಿ, ಬಂಧು ಬಳಗ ಜೊತೆಗೆ ಪೊಲೀಸರದು ಒತ್ತಡ ಸೇರಿ ಹುಡುಗಿ ಕಕ್ಕಾಬಿಕ್ಕಿಯಾದಳು. ಆಕೆಯ ವಯಸ್ಸಿಗೆ ಪ್ರಭುದ್ಧತೆ ಕೂಡ ಇರಲಿಲ್ಲ. ಜೊತೆಗೆ ಲೋಕಜ್ಞಾನವೂ ಬೆಳೆದಿರಲಿಲ್ಲ. ಹೊರ ಪ್ರಪಂಚ ನೋಡಿದ್ದೇ ಇತ್ತೀಚಿಗೆ.

ರಾಜುವಿನ ಪರಿಸ್ಥಿತಿ ಇಕ್ಕಟ್ಟಿನಲ್ಲಿ ಸಿಲುಕಿತ್ತು. ಹಣದ ಮುಗ್ಗಟ್ಟು ಇತ್ತು. ಅವನಿಗೆ ಜೈಲು ಹೊಸದು. ಬಯಸಿ ಕಷ್ಟಪಟ್ಟು ಮಾಡಿಕೊಂಡ ಮದುವೆ ತನ್ನನ್ನು ಜೈಲುಪಾಲು ಮಾಡಿದ್ದು ಅವನಿಗೆ ಸಹಿಸಲು ಸಾಧ್ಯವಾಗದ ಸಂಕಟ ತಂದಿತ್ತು. ಏನೋ ಸಂತೋಷದಿಂದ ಇರಬಹುದು ಅಂತ ಅಂದುಕೊಂಡಿದ್ದರೆ ಈಗ ಅವನ ಬದುಕಿನಲ್ಲಿ ದುಃಖ ಸಂಕಟಗಳೇ ತುಂಬಿ ಹೋಗಿತ್ತು . ಜೊತೆಗೆ ಜೈಲಿನ ಅಮಾನವೀಯ ವಾತಾವರಣವಿತ್ತು. ಗತ ಕಾಲದ ಸವಿನೆನಪುಗಳು ಆಗಾಗ ಇಣುಕಿ ನೋಡುತ್ತಿದ್ದವು. ಯಾಕೆಂದರೆ ಅವನ ಈಗಿನ ಸಂಕಟಗಳ ಮದ್ಯೆ ಅವುಗಳು ತೂರಿ ಬರಲು ಅವಕಾಶ ಕಡಿಮೆ ಇತ್ತು. ಅಲ್ಲದೆ ಅವನಿಗೆ ತನ್ನ ಹೆಂಡತಿ ಬಗ್ಗೆ ಸಿಗುತ್ತಿದ್ದ ಸುದ್ದಿಗಳು ಭರವಸೆ ಮೂಡಿಸುವಂತೆ ಇರಲಿಲ್ಲ. ಆಗಾಗ ಸ್ನೇಹಿತರು, ಬಂಧುಗಳು ತರುತ್ತಿದ್ದ ಸುದ್ದಿಗಳು ನಿರಾಶದಾಯಕವಾಗಿದ್ದವು.

ಹುಡುಗಿಯನ್ನು ಆಕೆಯ ಮನೆಯವರು ಒತ್ತಡ ಹಾಕಿ ಪುಸಲಾಯಿಸಿ ತಮ್ಮೊಂದಿಗೆ ಸುರಕ್ಷಾ ಕೇಂದ್ರದಿಂದ ಕರೆದೊಯ್ದರು. ಹುಡುಗಿ ತನ್ನ ಮನಸು ಬದಲಾಯಿಸುವಂತೆ ಮಾಡಲಾಯಿತು. ಆಕೆಯ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ರಾಜುವಿನ ವಿರುದ್ಧವಾಗಿ ಕೊಡಿಸಲಾಯಿತು. ಪೊಲೀಸರು ಹೇಳಿಕೊಟ್ಟಂತೆ ಆಕೆ ತನ್ನ ಹೇಳಿಕೆಯನ್ನು ನೀಡಿದಳು. ಇದರಲ್ಲಿ ಮನೆಯವರ ಒತ್ತಡವೂ ಇತ್ತು. ಆಕೆಯ ಅಸಹಾಯಕತೆಯನ್ನು ಬಳಸಿಕೊಳ್ಳಲಾಯಿತು. ಆಕೆಗೆ ಬೇರೆ ಆಯ್ಕೆಗಳು ಇರಲಿಲ್ಲ. ಹೆಣ್ಣಿಗೆ ಸ್ವಂತ ತೀರ್ಮಾನ ಕೈಗೊಳ್ಳಲು ಹತ್ತಾರು ನಿರ್ಭಂಧಗಳು ಸಮಾಜದಲ್ಲಿವೆ. ಇಲ್ಲಿ ಕಾನೂನಿನ ಅಡ್ಡಿಯೂ ಸೇರಿಕೊಂಡು ಬಿಟ್ಟಿತ್ತು.

ರಾಜುವಿಗೆ ಜಾಮೀನು ಸಿಗಲಿಲ್ಲ. ಖರ್ಚು ಮಾಡಲು ರಾಜುವಿನ ಬಳಿ ಇರಲಿಲ್ಲ. ವಿಚಾರಣೆ 2-3 ವರ್ಷಗಳ ಕಾಲ ಹಿಡಿಯಿತು. ಹುಡುಗಿಯ ಹೇಳಿಕೆ ಮತ್ತು ಹುಡುಗಿಯ ತಂದೆ ತಾಯಿಯರ ದೂರಿನ ಆದಾರದ ಮೇಲೆ ರಾಜುವಿನ ಅಪರಾಧ ಸಾಬೀತಾಯಿತು. ನ್ಯಾಯಾಲಯ ರಾಜುವಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ, ತೀರ್ಪು ನೀಡಿತು.

ವಿವೇಚನೆ ಮತ್ತು ತಿಳುವಳಿಕೆ ಹೊಂದದಿದ್ದಾಗ ಅಮಾನವೀಯ ಸಾಮಾಜಿಕ ಕಟ್ಟಳೆಗಳು, ಕಾನೂನಿನ ತೊಡಕುಗಳೂ ಅದರೊಂದಿಗೆ ಸೇರಿಕೊಂಡರೆ ಆಗುವ ದುರಂತಗಳಿಗೆ ಇದು ಒಂದು ಜೀವಂತ ಉದಾಹರಣೆ.

ಎರಡು ಜೀವಗಳ ಹಾಗೂ ಮನೆಯವರ ಬದುಕು ಅನಗತ್ಯ ಸಂಕಷ್ಟಕ್ಕೀಡಾಗಬೇಕಾಯಿತು. ಎರಡೂ ಕುಟುಂಬಗಳು ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಾದ ವಿಚಾರವಾಗಿದ್ದರೂ ಅಂತಹ ಮನಸ್ಥಿತಿಗಳು ಸಮಾಜದಲ್ಲಿ ಇನ್ನೂ ಬೆಳೆದಿಲ್ಲ. ಹೀಗಾಗಿ ಇಂತಹ ಘಟನೆಗಳು ಘಟಿಸುತ್ತಲೇ ಇರುತ್ತವೆ.