samachara
www.samachara.com
ಸಾಫ್ಟ್‌ವೇರ್ ತಮ್ಮ ಅಣ್ಣನನ್ನು ಕೊಂದು ಜೈಲಿಗೆ ಬಂದ 
PRISON STORIES

ಸಾಫ್ಟ್‌ವೇರ್ ತಮ್ಮ ಅಣ್ಣನನ್ನು ಕೊಂದು ಜೈಲಿಗೆ ಬಂದ 

ಪ್ರಕರಣದ ವಿಚಾರಣೆ ಮೂರು ವರ್ಷಗಳ ಕಾಲ ನಡೆದು ಧೀರಜ್‌ಗೆ ಜೀವಾವಧಿ ಶಿಕ್ಷೆಯಾಯಿತು. ಆತ ಎಷ್ಟು ದಿನ ಜೀವಂತವಾಗಿರಬಹುದೆಂದು ಈಗ ಹೇಳಲು ಬರುವುದಿಲ್ಲ.

ಕೆಲವು ವರ್ಷಗಳ ಹಿಂದೆ ಸಾಫ್ಟ್‌ವೇರ್‌ ಉದ್ಯೋಗವೆಂದರೆ ಯುವಜನತೆಗೆ ಆಕರ್ಷಣೆ. ಧೀರಜ್ ಅಂತಹ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ಆರೇಳು ವರ್ಷದವನಿದ್ದಾಗಲೇ ತಂದೆ ತಾಯಿ ಅಪಘಾತವೊಂದರಲ್ಲಿ ತೀರಿಕೊಂಡಿದ್ದರು. ಅಲ್ಲಿಂದ ಇವನನ್ನು ಅಣ್ಣನೇ ಸಾಕಿ ಸಲಹಿದ್ದು.

ಈಗ ದೀರಜ್‌ಗೆ ಮೂವತ್ತು ವಯಸ್ಸು. ಊರಲ್ಲಿ ವಾಸಕ್ಕೆ ಮನೆಯಿತ್ತು. ಅರ್ಧ ಏಕರೆಯಷ್ಟು ಭೂಮಿ ಇತ್ತು. ಅದರಲ್ಲಿ ತೆಂಗು ಅಡಿಕೆ ಮರಗಳಿದ್ದವು. ಇದಿಷ್ಟು ಬಿಟ್ಟರೆ ಬೇರೆ ಯಾವುದೇ ಆಸ್ತಿಯಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟದ ತಪ್ಪಲಿನ ಒಂದು ಹಳ್ಳಿ ಇವನದು. ಧೀರಜ್‌ನ ಅಣ್ಣ 10ನೇ ತರಗತಿಯವರೆಗೆ ಮಾತ್ರ ಓದಿದ್ದ. ನಂತರ ಓದು ಮುಂದುವರೆಸಲು ಅವನಿಂದ ಸಾಧ್ಯವಾಗಲಿಲ್ಲ. ತಮ್ಮನ ಜವಾಬ್ದಾರಿ ತೆಗೆದುಕೊಂಡು ಇಂಜಿನಿಯರ್‌ ಓದಿಸಿದ್ದ. ಹೀಗಾಗಿ ಇನ್ನೂ ಆತ ಮದುವೆಯೂ ಆಗಿರಲಿಲ್ಲ. ಮದುವೆಯಾದರೆ ಖರ್ಚು ಜಾಸ್ತಿ ಎಂಬ ಭಯವಿತ್ತು.

ಧೀರಜ್ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಯಾರ ಬಳಿಯೂ ಒಡನಾಟ ಮತ್ತು ಸ್ನೇಹವನ್ನು ಬೆಳೆಸುವ ಗುಣ ಅವನಲ್ಲಿ ಮೊದಲಿನಿಂದಲೂ ಇರಲಿಲ್ಲ. ಅಣ್ಣನ ಬಳಿ ಕೂಡ ಹೆಚ್ಚಿನ ಮಾತುಕತೆ ಮೊದಲಿನಿಂದಲೂ ಇರಲಿಲ್ಲ. ತಾನು ಹುಟ್ಟಿದ ಹಳ್ಳಿಯಲ್ಲಾಗಲೀ, ಓದಿದ ಶಾಲೇಲಾಗಲೀ ಕೊನೆಗೆ ಕೆಲಸ ಮಾಡುವ ಸ್ಥಳದಲ್ಲಾಗಲೀ ಅವನಿಗೆ ಆತ್ಮೀಯರು ಇರಲಿಲ್ಲ. ಯಾರನ್ನೂ ಭಾವನಾತ್ಮಕವಾಗಿ ಹಚ್ಚಿಕೊಳ್ಳುವ ಸ್ವಭಾವ ಅವನದಾಗಿರಲಿಲ್ಲ. ಕೇವಲ ವ್ಯವಹಾರಿಕವಾಗಿ ಮಾತ್ರ ಮಾತನಾಡಿಸುತ್ತಿದ್ದ. ಅಗತ್ಯವಿದ್ದಾಗ ಮಾತ್ರ ವಿಷಯಕ್ಕೆ ಸೀಮಿತವಾಗಿ ಮಾತನಾಡುತ್ತಿದ್ದ. ತನ್ನ ಲೋಕದಲ್ಲಿರುತ್ತಿದ್ದ. ಬೇರೆ ಯಾವುದನ್ನೂ ತಿಳಿದುಕೊಳ್ಳಲು ಹೋಗುವ ಅಭ್ಯಾಸವನ್ನೇ ಅವನು ಬೆಳೆಸಿಕೊಂಡಿರಲಿಲ್ಲ.

ಅಣ್ಣ ಊರಿನಲ್ಲಿದ್ದುಕೊಂಡು ಜಿಲ್ಲಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ಧೀರಜ್ ಆಗಾಗ ಊರಿಗೆ ಹೋಗಿಬರುತ್ತಿದ್ದ. ಆದರೆ ಊರಿನಲ್ಲಿ ಹೆಚ್ಚು ದಿನಗಳ ಕಾಲ ಇರುತ್ತಿರಲಿಲ್ಲ. ಬರಬರುತ್ತಾ ಧೀರಜ್‌ಗೆ ತನ್ನ ಮೇಲೇಯೇ ವಿಶ್ವಾಸದ ಕೊರತೆ ಕಾಣಿಸತೊಡಗಿತು. ಅವನ ಸ್ವಭಾವಕ್ಕೆ ಸಹಜವಾಗಿ ಇತರರನ್ನು ನಂಬಲು ಸಾಧ್ಯವಾಗುತ್ತಿರಲಿಲ್ಲ. ತನ್ನನ್ನು ಸಾಕಿ ಸಲಹಿ ದೊಡ್ಡವನನ್ನಾಗಿ ಮಾಡಿದ್ದ ಸ್ವಂತ ಅಣ್ಣನ ಮೇಲೂ ನಂಬಿಕೆ ಕಳೆದುಕೊಳ್ಳತೊಡಗಿದ. ಬರಬರುತ್ತಾ ಕೆಲಸ ಮಾಡಲು ಅಸಾಧ್ಯವಾದ ಸ್ಥಿತಿ ಶುರುವಾಯಿತು. ಆತನ ಕೆಲಸಗಳ ಬಗ್ಗೆ ಕಂಪನಿಯ ಅಧಿಕಾರಿಗಳಿಂದ ಆಕ್ಷೇಪಣೆಗಳು ಬರತೊಡಗಿತು.

ಕೊನೆಗೆ ಕಂಪನಿಯೇ ಇವನನ್ನು ಕೆಲಸದಿಂದ ತೆಗೆದು ಹಾಕಿತು. ಈ ಬೆಳವಣಿಗೆಗಳು ಪೂರ್ತಿಯಾಗಿ ಇವನ ಅಣ್ಣನಿಗೆ ತಿಳಿದಿರಲಿಲ್ಲ. ಕೆಲಸ ಕಳೆದುಕೊಂಡ ಮೇಲೆ ಮನೆಗೆ ಬಂದ ಧೀರಜ್. ಮೊದಲಿನಂತೆ ಮನೆಯಲ್ಲಿ ಕಂಪ್ಯೂಟರ್ ಗೇಮ್‌ನಲ್ಲಿ ಕಾಲ ಕಳೆಯುತ್ತಿದ್ದ. ಹೊರಗೆಲ್ಲೂ ಹೋಗುತ್ತಿರಲಿಲ್ಲ. ಅಣ್ಣ ಜೊತೆ ಮೊದಲಿನಿಂದಲೂ ಮಾತನಾಡುವುದು ಅಷ್ಟಕ್ಕಷ್ಟೆ. ಮನೆಯಲ್ಲಿ ಏನನ್ನೂ ಮಾಡುತ್ತಿರಲಿಲ್ಲ. ಅಣ್ಣ ವಾರಕ್ಕೆ ಒಮ್ಮೆ ಮನೆಗೆ ಬರುತ್ತಿದ್ದ. ತಮ್ಮನ ಸ್ವಭಾವ ತಿಳಿದಿದ್ದರಿಂದ ಹೆಚ್ಚಿಗೆ ಯೋಚಿಸದೇ ಸರಿಹೋಗಬಹುದು ಎಂದು ಸುಮ್ಮನಾದ.

ಧೀರಜ್‌ಗೆ ಬರಬರುತ್ತಾ ವ್ಯಗ್ರತೆ, ಅಸಂತೋಷ, ಅಸಮಾಧಾನ, ಅತೃಪ್ತಿ, ಅಪನಂಬಿಕೆ ಹೆಚ್ಚಾಗತೊಡಗಿದವು. ತಿಂಗಳುಗಳಾದರೂ ಧೀರಜ್ ಕೆಲಸಕ್ಕೆ ಹೋಗದಿರುವುದನ್ನು ಕಂಡು, ಅಣ್ಣ ಒಂದು ದಿನ ತಮ್ಮನೊಂದಿಗೆ ಮಾತಿಗಿಳಿದ. “ಯಾಕೆ ಕೆಲಸಕ್ಕೆ ಹೋಗುತ್ತಿಲ್ಲ. ಎಷ್ಟು ದಿನ ರಜೆ ಹಾಕಿದ್ದೀಯಾ” ಎಂದೆಲ್ಲಾ ಕೇಳಿದ. ಅದಕ್ಕೆ ಚುಟುಕಾಗಿ ಉತ್ತರಿಸಿದ ಧೀರಜ್, “ಎರಡು ದಿನ ಬಿಟ್ಟು ಹೋಗಬೇಕೆಂದು,” ಹೇಳಿದ. ಕೆಲಸ ಕಳೆದುಕೊಂಡ ವಿಷಯ ಬೇರೆಯವರ ಮೂಲಕ ತಿಳಿದುಕೊಂಡಿದ್ದ ಧೀರಜ್ ನ ಅಣ್ಣ, ಬೇರೆ ಕಂಪನಿಗೆ ಸೇರಿಕೊಳ್ಳಲು ಸಮಯ ಹಿಡಿಯುತ್ತದೆಯೇನೊ ಎಂದುಕೊಂಡು ಸುಮ್ಮನಾದ.

ಆದರೆ 2 ತಿಂಗಳಾದರೂ ಧೀರಜ್ ಕೆಲಸಕ್ಕೆ ಸೇರಿಕೊಳ್ಳಲಿಲ್ಲ. ಸೋಮಾರಿ ರೀತಿ ಕಾಲ ಕಳೆಯುತ್ತಿರುವುದನ್ನು ನೋಡಿ ಅಣ್ಣ ಈ ಬಾರಿ ಸ್ವಲ್ಪ ಸವಿಸ್ತಾರವಾಗಿ ಪ್ರಶ್ನಿಸಿದ. “ಹೀಗೆ ಕಾಲ ಕಳೆದರೆ ಹೇಗೆ? ಯಾವುದಾದರೂ ಕಂಪನಿಯಲ್ಲಿ ಕೆಲಸ ಸಿಗುತ್ತೆ ಹೋಗಿ ಸೇರಿಕೋ. ಸಂಬಳ ಕಡಿಮೆ ಆದರೂ ಚಿಂತೆ ಮಾಡಬೇಡ,” ಎಂದೆಲ್ಲಾ ಹೇಳಿದ.

ಮೊದಲೇ ವ್ಯಗ್ರತೆ ಬೆಳೆಸಿಕೊಂಡಿದ್ದ ಧೀರಜ್ ಎಂದೂ ಅಣ್ಣನಿಗೆ ಎದುರು ಮಾತನಾಡದವನು ಅಂದು ಕೂಗಾಡಿ ಬಿಟ್ಟ. ಜೊತೆಗೆ “ಈ ಮನೆಯಲ್ಲಿ ನಂದೂ ಪಾಲಿದೆ. ನಾನು ಎಷ್ಟು ದಿನವಾದರೂ ಇಲ್ಲಿ ಇರುತ್ತೀನಿ” ಹೇಳಿದ. ಈ ಮಾತುಗಳು ಅವನ ಅಣ್ಣನಿಗೆ ಆಶ್ಚರ್ಯದ ಜೊತೆಗೆ ಸಿಟ್ಟನ್ನು ತರಿಸಿತು. “ಈ ಮನೆ ನಿಂದಲ್ಲ ಅಂತ ನಾನು ಹೇಳಿಲ್ವಲ್ಲ. ಕೂತು ಉಂಡರೆ ಕುಡಿಕೆ ಹೊನ್ನು ಸಾಲದು ಅಂತ ಗಾದೇನೆ ಇದೆ. ಇಷ್ಟು ವರ್ಷ ನಾನು ನಿನಗೆ ಓದಿಸಿ ನೋಡಿಕೊಂಡೆ ಇನ್ನೂ ನಾನೇ ನೋಡಿಕೊಳ್ಳಬೇಕೆಂದರೆ ಹೇಗೆ” ಎಂದೆಲ್ಲಾ ಸ್ವಲ್ಪ ಗಟ್ಟಿ ದ್ವನಿಯಲ್ಲಿ ಹೇಳಿದ. ಆಗ ಸುಮ್ಮನಿದ್ದ ಧೀರಜ್ ನಿಗೆ ನಂತರ ಏನನ್ನಿಸಿತೋ ಏನೋ ಅಲ್ಲೆಲ್ಲೋ ಇದ್ದ ಮರದ ರೀಪಿನ ತುಂಡು ಹಿಡಿದುಕೊಂಡು ಅವನ ಅಣ್ಣನಿಗೆ ಹಿಂದಿನಿಂದ ತಲೆಗೆ ಹೊಡೆದ. ಆ ಏಟಿಗೆ ಅಣ್ಣ ನೋವಿನಿಂದ ಕುಸಿದು ಬಿದ್ದ. ತಲೆಯಿಂದ ರಕ್ತ ಸುರಿಯತೊಡಗಿತು.

ಅಕ್ಕಪಕ್ಕದ ಮನೆಗಳು ಹತ್ತಿರದಲ್ಲಿ ಇರಲಿಲ್ಲವಾದ್ದರಿಂದ ಯಾರಿಗೂ ಇವರ ಕೂಗಾಟ ಕೇಳಲಿಲ್ಲ. ತನ್ನಅಣ್ಣನ ಸ್ಥಿತಿ ಏನಾಗುತ್ತಿದೆ ಎಂಬ ಬಗ್ಗೆ ದೀರಜ್‌ ಕಿಂಚಿತ್ತೂ ಲೆಕ್ಕಿಸದೇ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನವನ್ನೂ ಮಾಡಲಿಲ್ಲ. ಅಕ್ಕಪಕ್ಕದ ಮನೆಯವರನ್ನು ಸಹಾಯಕ್ಕೆ ಕರೆಯುವ ಗೋಜಿಗೆ ಹೋಗಲಿಲ್ಲ. ಸ್ವಂತ ಒಡಹುಟ್ಟಿದ, ತನ್ನನ್ನು ಸಾಕಿ ಸಲಹಿ ಓದಿಸಿ ದೊಡ್ಡವನನ್ನಾಗಿ ಮಾಡಿದ ಅಣ್ಣನನ್ನೇ ಬಲಿ ಪಡೆದು ಬಿಟ್ಟಿದ್ದ.

ಶವವನ್ನು ಮನೇಲಿ ಹಾಗೇ ಇತ್ತು. ಕೊಳೆತ ವಾಸನೆ ಹರಡಿದಾಗಲೇ ಏನೋ ಸಂಭವಿಸಿದೆ ಎಂದು ಪಕ್ಕದ ಮನೆಯವರಿಗೆಲ್ಲಾ ಗೊತ್ತಾಗಿದ್ದು. ಅಲ್ಲದೆ ಮೂರು ದಿನಗಳ ಹಿಂದೆ ಧೀರಜನ ಅಣ್ಣನನ್ನು ಅವರೆಲ್ಲಾ ನೋಡಿದ್ದರು. ಅವರೊಂದಿಗೆ ಧೀರಜ್ ವರ್ತನೆ ಬಗ್ಗೆ ಅಣ್ಣ ಹಂಚಿಕೊಳ್ಳುತ್ತಿದ್ದ. ಮೂರು ದಿನ ತಾನು ರಜೆಯಲ್ಲಿರುವುದಾಗಿಯೂ ಮನೆಯ ತೋಟದಲ್ಲಿ ಸ್ವಲ್ಪ ಕೆಲಸ ಮಾಡಬೇಕು ಎಂದೆಲ್ಲಾ ಹೇಳಿದ್ದ. ನಂತರ ಅವನನ್ನು ಯಾರೂ ನೋಡಿರಲಿಲ್ಲ.

ಸುದ್ಧಿ ಹರಡಿದ ನಂತರ ಪೊಲೀಸರು ಬಂದು ಪ್ರಶ್ನಿಸಿದಾಗಲೇ ಕೊಲೆಯ ಮೂಲ ಹೊರಜಗತ್ತಿಗೆ ತಿಳಿದದ್ದು. ಕೊಲೆ ಪ್ರಕರಣದಲ್ಲಿ ಧೀರಜ್ ಜೈಲಿಗೆ ಬಿದ್ದ. ಇಂಟರ್ನೆಟ್ ಗೇಮ್ ಆಡಲು ಜೈಲಿನಲ್ಲಿ ಅವಕಾಶ ಇರಲಿಲ್ಲ. ದೀರಜ್ ನ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಕೈಯಲ್ಲಿ ಕಾಸು ಕೂಡ ಇಲ್ಲ.

“ಸಾಕಿ ಸಲುಹಿದ ಒಡಹುಟ್ಟಿದ ಅಣ್ಣನನ್ನೇ ತಾನು ಕೊಂದು ಹಾಕಿದೆನಲ್ಲ. ಈಗ ನನ್ನವರು ಅಂತ ಯಾರೂ ಇಲ್ಲವಲ್ಲ. ತಾನೆಂತಹ ಕೆಲಸ ಮಾಡಿದೆ. ಅಣ್ಣ ನನ್ನನ್ನು ಕೇಳಿದ್ದರಲ್ಲಿ ಏನೂ ತಪ್ಪಿರಲಿಲ್ಲವಲ್ಲ. ಸಾಕಿ ಸಲಹಿದ ಅಣ್ಣನಿಗೆ ಅಷ್ಟು ಹೇಳುವ ಹಕ್ಕು ಇತ್ತು. ಎಂತಹ ಪರಿಸ್ಥಿತಿ ತಂದುಕೊಂಡೆನಲ್ಲ,” ಎಂದೆಲ್ಲ ಅಂತರ್ಮುಖಿಯಾಗಿ ಯೋಚಿಸತೊಡಗಿದ. ಆದರೆ ಕಾಲ ಮಿಂಚಿ ಹೋಗಿತ್ತು. ಪ್ರಕರಣದ ವಿಚಾರಣೆ ಮೂರು ವರ್ಷಗಳ ಕಾಲ ನಡೆದು ಧೀರಜ್ ನಿಗೆ ಜೀವಾವಧಿ ಶಿಕ್ಷೆಯಾಯಿತು. ಧೀರಜ್ ಎಷ್ಟು ದಿನ ಜೀವಂತವಾಗಿರಬಹುದೆಂದು ಈಗ ಹೇಳಲು ಬರುವುದಿಲ್ಲ.

ಇವನಂತಹವರಿಗೆ ಸಹಾಯ ಮಾಡುವ, ಸಹಜ ಸ್ಥಿತಿಗೆ ಬರುವಂತೆ ಮಾಡುವ ಆಡಳಿತ ವ್ಯವಸ್ಥೆ, ಯಂತ್ರಾಂಗ ನಮ್ಮ ದೇಶದ ಜೈಲುಗಳಲ್ಲಿ ಇನ್ನೂ ಬಂದಿಲ್ಲ. ಸದ್ಯಕ್ಕೆ ಬರುವ ಪರಿಸ್ಥಿತಿಯೂ ಇಲ್ಲ. ಆ ಬಗ್ಗೆ ಗಂಭೀರವಾಗಿ ಯೋಚಿಸುವರೂ ಬಹಳ ಕಡಿಮೆ. ಜೈಲುವಾಸಿಗಳನ್ನು ಮನುಷ್ಯರು ಅನ್ನೋ ರೀತಿಯಲ್ಲಿ ನೋಡುವವರು ನಾಗರಿಕರೆಂದು ಹೇಳುವವರು ಈ ಸಮಾಜದಲ್ಲಿ ಅತ್ಯಲ್ಪ. ಇನ್ನು ಸರ್ಕಾರಗಳ ಕತೆ ಹೇಳೋದು ಬೇಡ ಬಿಡಿ.

ಮನುಷ್ಯ ಸಂಬಂಧಗಳನ್ನು ಬೆಳೆಸಿಕೊಳ್ಳದೇ, ಸುತ್ತಮುತ್ತಲಿನ ಹಾಗೂ ಸಾಮಾಜಿಕ ಆಗುಹೋಗುಗಳ ಬಗ್ಗೆ ಗಮನಕೊಡದೇ, ತನ್ನದೇ ಪ್ರಪಂಚದಲ್ಲಿ ವಿಹರಿಸುವ ಮನೋಭಾವ ಬೆಳಸಿಕೊಂಡು ಬೇರೆ ಜನಸಾಮಾನ್ಯರ ಬಗ್ಗೆ ತುಚ್ಛ ಭಾವನೆ ಬೆಳೆಸಿಕೊಳ್ಳುವವರು ತಮ್ಮನ್ನು ತಾವೇ ತುಚ್ಚೀಕರಿಸಿಕೊಳ್ಳುವ ಪರಿಸ್ಥಿತಿ ತಂದುಕೊಳ್ಳುತ್ತಾರೆ. ವಾಸ್ತವತೆಗಿಂತ ಅವಾಸ್ತವದ ಜಗತ್ತಿನಲ್ಲಿ ವಿಹರಿಸುವವರಿಗೆ ಪ್ರಪಾತಕ್ಕೆ ಬೀಳುವವರೆಗೂ ಗೊತ್ತಾಗುವುದು ಕಷ್ಟ. ಬಿದ್ದ ಮೇಲೆ ಏಳುವುದೂ ಕಷ್ಟ. ಹಾಗೆ ಬಿದ್ದವರನ್ನು ಎಬ್ಬಿಸಿ ನಿಲ್ಲಿಸುವವರು ವಿರಳ.