samachara
www.samachara.com
ಸಾಂದರ್ಬಿಕ ಚಿತ್ರ
PRISON STORIES

ಖಾಲಿ ಜೇಬಲ್ಲಿ ಜೈಲಿಗೆ ಬಂದ: ಅರ್ಚಕನಾಗಿ ಜೇಬು ತುಂಬಿಸಿಕೊಂಡು ಬಿಡುಗಡೆಯಾದ

ಭಾರದ್ವಾಜ್ ಖಾಲಿ ಜೇಬಿನಲ್ಲಿ ಜೈಲಿಗೆ ಬಂದಿದ್ದ. ಆದರೆ ಅಲ್ಲಿಂದ ಬಿಡುಗಡೆಯಾಗಿ ಹೊರ ಹೋಗುವಾಗ ಜೇಬು ತುಂಬಿಸಿಕೊಂಡು ಠೀವಿಯಿಂದಲೇ ಹೊರ ನಡೆದಿದ್ದ.

ಅವನಿಗೆ ಎಲ್ಲವೂ ಅಯೋಮಯವಾಗಿ ಕಾಣುತ್ತಿದೆ. ಮುಂದೆ ತನಗೆ ಏನಾಗುತ್ತೋ ಎಂಬ ಭಯ ಬೇರೆ ಕಾಡುತ್ತಿದೆ. ಎಂತೆಂಥವರು ಅಲ್ಲಿರುತ್ತಾರೋ, ನನ್ನ ಕತೆ ಏನಾಗುತ್ತದೋ, ಹೇಗಪ್ಪಾ ಅಲ್ಲಿರೋದು, ಊಟದ ಕತೆ ಏನು.... ಅಂತ ಹೀಗೆ ಏನೇನೋ ಆತಂಕದ ಅನೇಕ ಪ್ರಶ್ನೆಗಳು ಅವನಿಗೆ ಎದುರಾಗಿವೆ. ಕೆಲವು ವರ್ಷಗಳ ಹಿಂದೆ ಇವನ ಅಜಾಗರೂಕ ಕಾರು ಚಾಲನೆಯಿಂದ ಒಬ್ಬರ ಪ್ರಾಣ ಬಲಿಯಾಗಿತ್ತು. ಉದ್ದೇಶಪೂರ್ವಕದಿಂದ ಈ ರೀತಿ ಆಗಿರಲಿಲ್ಲ. ಹೀಗಾಗಿ ಉಚ್ಛ ನ್ಯಾಯಾಲಯದಲ್ಲಿ ಅವನಿಗೆ ಆರು ತಿಂಗಳ ಶಿಕ್ಷೆ ಖಾಯಂ ಆಯಿತು. ಜೈಲಿಗೆ ಹೋಗದಂತೆ ಪ್ರಯತ್ನ ಮಾಡಿದರೂ ಅದು ಫಲ ಕೊಡದೇ ಹೋಯಿತು. ಭಾರದ್ವಾಜ್ ಈಗ ಅನಿವಾರ್ಯವಾಗಿ ಜೈಲಿಗೆ ಹೋಗಲೇಬೇಕಾಗಿ ಬಂದಿತ್ತು.

ಅವನು ಈ ಮೊದಲು ಅಡುಗೆ ಗುತ್ತಿಗೆ ಹಿಡಿದುಕೊಂಡು ಕೆಲಸ ಮಾಡುತ್ತಿದ್ದವ. ಊರು ಶಿವಮೊಗ್ಗ ಭಾಗದಲ್ಲಿದೆ. ಇವನು ಮಾತ್ರ ಬೆಂಗಳೂರಿನಲ್ಲಿ ವಾಸವಾಗಿದ್ದ. ಮನೆಯವರು ಅಂತ ದೂರದ ಒಬ್ಬ ಮಾವ ಮಾತ್ರ ಇದ್ದಿದ್ದು, ಇವನು ಪ್ರಾಯಕ್ಕೆ ಬರುವುದರೊಳಗೆ ತಂದೆ ತಾಯಿ ತೀರಿಕೊಂಡಿದ್ದರು. ಭಾರದ್ವಾಜ್ ಅವರಿವರ ಮನೆಯಲ್ಲಿ ಹೇಗೋ ಬೆಳೆದಿದ್ದ. ಪಿಯುಸಿವರೆಗೆ ಓದಿ, ನಂತರ ಯಾರದೋ ಸಹಾಯದಿಂದ ಬೆಂಗಳೂರು ಸೇರಿಕೊಂಡ. ಅಂದಿನಿಂದ ಇಂದಿನವರೆಗೂ ಅಡುಗೆ ಮಾಡುವುದೇ ಅವನ ವೃತ್ತಿಯಾಗಿತ್ತು. ಪರಿಚಯದವರೆಲ್ಲಾ ‘ಅಡುಗೆ ಭಟ್ಟರೆ’ ಎಂದು ಕರೆಯುತ್ತಿದ್ದರು. ಊರಿನಲ್ಲಿ ಅವನದೆಂದು ಹೇಳಲು ಏನೂ ಇರಲಿಲ್ಲ. ಒಬ್ಬನೇ ಮಗನಾಗಿದ್ದರೂ ತಂದೆ ತಾಯಿ ಬಳುವಳಿ ಅಂತ ಆಸ್ತಿಯೇನೂ ಇರಲಿಲ್ಲ. ಇದ್ದ ಸಣ್ಣ ಮನೆಯೊಂದು ಅವರಿವರ ಪಾಲಾಗಿತ್ತು. ತಂದೆ ಮಾಡಿದ್ದ ಸಾಲದ ಲೆಕ್ಕಕ್ಕೆ ಅದನ್ನು ಅವರು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದರು. ಬಡ ಬ್ರಾಹ್ಮಣನಾಗಿದ್ದ ಇವನು ನಿಜಕ್ಕೂ ಬೀದಿ ಪಾಲಾಗಿಯೇ ಬೆಳೆದು ಬಂದಿದ್ದ. ಹಲವು ಬ್ರಾಹ್ಮಣರ ಮನೆಗಳಲ್ಲಿ ವಾರಾನ್ನ ಉಂಡವನಾಗಿದ್ದ.

ಅಡುಗೆ ಪರಿಣತಿ ಗಳಿಸಿದ್ದರಿಂದ ಅದು ಅವನಿಗೆ ವೃತ್ತಿಯಾಗಿ ಸಹಾಯಕ್ಕೆ ಬಂದಿತ್ತು. ಅವನಿಗೆ ಮೂವತ್ತೆರಡರ ಪ್ರಾಯ. ಮದುವೆ ಕೂಡ ಮಾಡಿಕೊಂಡಿದ್ದ. ತನ್ನ ಸಮುದಾಯದವರು ಯಾರೂ ಹೆಣ್ಣು ಕೊಡದೇ ಇರುವುದರಿಂದ ತಾನೇ ಮದುವೆ ದಲ್ಲಾಳಿಯ ಮೂಲಕ ಚಿಕ್ಕಮಗಳೂರು ಕಡೆಯ ಬಡ ಒಕ್ಕಲಿಗ ಹುಡುಗಿಯೊಬ್ಬಳನ್ನು ಮದುವೆ ಆಗಿದ್ದ. ಬಾಡಿಗೆ ಮನೆಯೊಂದನ್ನು ಮಾಡಿ ಸಂಸಾರವನ್ನೂ ಹೂಡಿದ್ದ. ಬದುಕಿನ ಅನಿವಾರ್ಯತೆಯೇ ಅವನಿಗೆ ಅಂತರ್ಜಾತಿ ಮದುವೆ ಆಗುವಂತೆ ಮಾಡಿತ್ತು. ಈತನ ಅಂತರ್ಜಾತಿ ವಿವಾಹವನ್ನು ವಿರೋದಿಸುವವರು ಮನಸಿನಲ್ಲಿ ಮಾತ್ರ ವಿರೋಧಿಸಿದರೆ ಹೊರತು ಅವರ್ಯಾರೂ ಇವನಿಗೆ ಹೆಣ್ಣು ಕೊಡಲು ತಯಾರಿರಲಿಲ್ಲ. ಜೊತೆಗೆ ಅವರ ಹೆಣ್ಣುಮಕ್ಕಳು ಸಹ ಅಡುಗೆ ಬಟ್ಟನೊಬ್ಬನನ್ನು ಮದುವೆಯಾಗಲು ಮಾತ್ರ ಸುತಾರಾಂ ಒಪ್ಪುತ್ತಿರಲಿಲ್ಲ. ಯಾವುದೇ ದುಷ್ಚಟ ಇರದ ಭಾರಧ್ವಾಜ ಮದುವೆಯಲ್ಲಿ ಮಾತ್ರ ಜಾತ್ಯಾತೀತನಂತೆ ಕಾಣಿಸಿಕೊಂಡಿದ್ದ.

ಅವನ ಸಂಸಾರ ಬಹಳ ಕಾಲವೇನೂ ನಡೆಯಲಿಲ್ಲ. ದಂಪತಿಗಳಿಬ್ಬರ ನಡುವೆ ಹೊಂದಾಣಿಕೆ ಕೊರತೆ ಕಾಣಿಸಿ ಹೆಂಡತಿ ತವರು ಮನೆಗೆ ಹೋಗಿ ಕುಳಿತು ಆಗಲೇ ಒಂದು ವರ್ಷ ಆಗಿಬಿಟ್ಟಿತ್ತು. ಮಕ್ಕಳೇನೂ ಆಗಿರಲಿಲ್ಲ. ಹಾಗಾಗಿ ಈಗವನು ಮತ್ತೆ ಒಂಟಿಯೇ ಆಗಿದ್ದ. ಸಂಸಾರವೆಂದು ಟಿವಿ, ಸಾಮಾನು ಸರಂಜಾಮುಗಳನ್ನು ಸಜ್ಜಾಗಿಟ್ಟುಕೊಂಡಿದ್ದ. ಬೆಂಗಳೂರಿನಲ್ಲಿ ಬದುಕುವಷ್ಟು ಆದಾಯವಿತ್ತು. ಆದರೆ ಬದುಕು ಈಗ ಈ ತಿರುವು ಪಡೆದು ಬಿಟ್ಟಿತ್ತು. ಆರು ತಿಂಗಳ ಜೈಲು ಶಿಕ್ಷೆಯು ಅಷ್ಟೇನೂ ದೊಡ್ಡ ವಿಷಯವಲ್ಲದಿದ್ದರೂ ಇವನಿಗೆ ಅದು ಭಾರಿ ದೊಡ್ಡದಾಗಿಯೇ ಕಂಡಿತು. ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ಜಾಮೀನು ಪಡೆದು ಪ್ರಕರಣ ನಡೆಸೋಣವೆಂದರೆ ಅದು ಹೆಚ್ಚು ಖರ್ಚಿನ ಬಾಬತ್ತು. ಅದು ಈಗ ಕಷ್ಟ. ಒಂದು ವೇಳೆ ಹೇಗಾದರೂ ಮಾಡಿ ಹೋದರೂ ಅಲ್ಲೂ ಇದಕ್ಕಿಂತ ಶಿಕ್ಷೆ ಕಡಿಮೆಯಾಗುವ ಸಾಧ್ಯತೆ ಕಡಿಮೆ ಅಂತ ಹಲವರು ಹೇಳಿದ್ದರು. ಹಾಗಾಗಿ ಆ ವಿಚಾರ ಕೈ ಬಿಟ್ಟಿದ್ದ. ಅಲ್ಲದೇ ದಂಡ ಹೆಚ್ಚು ಮಾಡುವ ಸಾಧ್ಯತೆ ಕೂಡ ಇದೆ ಅನ್ನೋ ಸಲಹೆ ಕೂಡ ಬಂದಿತ್ತು.

ದುಡ್ಡು ಇಟ್ಕೊಂಡ್ರೆ ಜೈಲಿನ ಗೇಟಿನಲ್ಲೇ ಕಸಿದುಕೊಳ್ಳುತ್ತಾರೆ ಅಂತ ಯಾರೋ ಹೇಳಿದ್ದರಿಂದ ಎರಡು ಜೊತೆ ಬಟ್ಟೆ ಟವೆಲ್ ಸೋಪು, ಬ್ರಷ್, ಪೇಸ್ಟ್ ಹಿಡಿದುಕೊಂಡು ಖಾಲಿ ಜೇಬಿನಲ್ಲಿ ಜೈಲಿಗೆ ಬಂದು ಬಿಟ್ಟ. ಆರಂಭದಲ್ಲಿ ಹಂದಿಗೂಡಿನಂತಹ ಕಿಕ್ಕಿರಿದು ತುಂಬಿರುವ ಕೊಠಡಿಯೊಂದಕ್ಕೆ ಭಾರಧ್ವಾಜನನ್ನು ಕೂಡಿದರು. ಬೀಡಿ, ಗಾಂಜಾ ಹೊಗೆಯಿಂದಾಗಿ ಉಸಿರಾಡಲು ಕೂಡ ಕಷ್ಟ ಪಡತೊಡಗಿದ. ನಿಂತುಕೊಂಡು ನಿದ್ದೆಮಾಡಲು ಕೂಡ ಸ್ಥಳಾವಕಾಶ ಇರಲಿಲ್ಲ. ನಾಯಿಗಳಿಗೆ ಕೂಡ ಹಾಸಲಾಗದ ಜಮಖಾನೆ ತರಹದ ಒಂದು ತುಂಡು ಮತ್ತೊಂದು ಮಣ್ಣು ಕೊಳೆಗಳಿಂದ ಹಲವು ಬಣ್ಣ ಪಡೆದಿದ್ದ ಬಟ್ಟೆಯೊಂದನ್ನು ಕೊಟ್ಟರು. ಅದನ್ನು ಕೈಯಲ್ಲಿ ಹಿಡಿದುಕೊಳ್ಳಲೇ ಆತನಿಗೆ ಹೇಸಿಗೆಯಾಗಿ ಬಿಟ್ಟಿತ್ತು. ಆದರೆ ಅನುಭವಿಸಲೇ ಬೇಕು. ಹೇಗೋ ದಿನಗಳನ್ನು ಕಳೆಯ ತೊಡಗಿದ.

ಕೊಠಡಿ ಗುಡಿಸಿ ಸ್ವಚ್ಚಗೊಳಿಸುವವರಿಗೆ ಹಣ ಕೊಡಬೇಕು, ಸ್ನಾನದ ಜಾಗ, ಶೌಚಾಲಯ ಸ್ವಚ್ಚಗೊಳಿಸುವವರಿಗೆ ಹಣ ಕೊಡಬೇಕು ಎಂದೆಲ್ಲಾ ಕೇಳಲು ತೊಡಗಿದಾಗ ಇವನಿಗೆ ದಿಕ್ಕೇ ತೋಚಲಿಲ್ಲ. ಕೈಯಲ್ಲಿ ಕಾಸು ಬೇರೆ ಇರಲಿಲ್ಲ. ತಂದು ಕೊಡಲು ತಕ್ಷಣಕ್ಕೆ ಯಾರೂ ಇರಲಿಲ್ಲ. ತನ್ನ ಪರಿಚಯವನ್ನು ದೇವಸ್ಥಾನದ ಅರ್ಚಕನೆಂದು ಹೇಳಿಕೊಂಡು ಜೊತೆಗೆ ತಾನು ಬ್ರಾಹ್ಮಣ ಎಂದು ಎಲ್ಲರಿಗೂ ತಿಳಿಯುವಂತೆ ಮಾಡಿದ. ಒಂದಿಬ್ಬರು ಇವನ ಬಳಿ ತಮ್ಮ ಭವಿಷ್ಯ ಕೇಳಲು ಬಂದರು. ಇವನಿಗೆ ಆಶ್ಚರ್ಯವಾದರೂ ತೋರಿಸಿಕೊಳ್ಳದೇ ಭಾರಿ ಜ್ಯೋತಿಷಿಯಂತೆ ಫೋಸು ಕೊಟ್ಟು ಅದೇನೇನೂ ಹೇಳಿದ. ಅವರಿಗೆ ಏನನಿಸಿತೋ ಏನೋ ಭಾರಧ್ವಾಜನ ಕೈಗೆ ಕೈಗೆ ನೂರು ರೂಪಾಯಿ ಇಟ್ಟರು. ನಂತರ ಮತ್ತಿಬ್ಬರು ಬಂದು ತಮ್ಮ ಭವಿಷ್ಯ ಕೇಳಿ ಒಂದೆರಡು ನೋಟುಗಳನ್ನು ಇವನ ಕೈಯಲ್ಲಿಟ್ಟರು. ಹೀಗೆ ಮಾಡಿದರೆ ದುಡ್ಡಿನ ಸಮಸ್ಯೆಯೂ ಪರಿಹಾರವಾಗುತ್ತೆ ಮತ್ತು ದುಡಿಮೇನೂ ಆಗುತ್ತಲ್ಲ ಎಂದು ಆಲೋಚಿಸಿದ ಭಾರದ್ವಾಜ್. ಅಸಲಿಗೆ ಅವನಿಗೆ ಯಾವ ಜ್ಯೋತಿಷ್ಯವಾಗಲೀ, ಪೂಜಾ ಮಂತ್ರವಾಗಲೀ ಯಾವುದೂ ಗೊತ್ತಿರಲಿಲ್ಲ. ಆದರೂ ಅವನು ಜೈಲಿಗೆ ಬಂದು ಜ್ಯೋತಿಷಿಯಾಗಿ ಹಣ ಗಳಿಸತೊಡಗಿದ. ಈಗವನ ಸ್ಥಾನಮಾನವೂ ಬೇರೇನೆ ಆಯಿತು. ಅನುಕೂಲ ಹಾಗೂ ಹೆಚ್ಚು ಸೌಲಭ್ಯವಿರುವ ಕೋಣೆಗೆ ಹೋದ.

ಜೈಲಿನಲ್ಲಿ ಬಂಧಿಗಳು ಹತಾಶೆ ನಿರಾಶೆಗೆ ಒಳಗಾಗುವುದು ಮಾಮೂಲಿ ವಿಚಾರ. ಅಂತಹವರು ದೇವರು, ಜ್ಯೋತಿಷ್ಯ, ಪೂಜೆ, ಪುನಸ್ಕಾರ, ಹರಕೆ ಅಂತೆಲ್ಲಾ ಮಾಡುವುದು ಕೂಡ ಮಾಮೂಲಿಯೂ ಹೌದು. ಅದಕ್ಕೆಲ್ಲಾ ಹಣವನ್ನು ಹೇಗೇಗೊ ಹೊಂದಿಸುತ್ತಾರೆ. ಸಾಲ ಮಾಡಿಯಾದರೂ ಪೂಜೆ ಮಾಡಿಸುವವರೂ ಅಲ್ಲಿ ಇರುತ್ತಾರೆ. ಇನ್ನು ರೌಡಿ ಗ್ಯಾಂಗುಗಳು ಹಣ ಚೆಲ್ಲಿ ಪೂಜೆ ಮಾಡಿಸುವುದು, ಪ್ರಸಾದ ಹಂಚುವುದು ಇದ್ದೇ ಇರುತ್ತದೆ. ಜೈಲಿನಲ್ಲಿ ಒಂದು ದೇವಸ್ಥಾನವಿತ್ತು. ಅಲ್ಲಿ ಒಬ್ಬ ಬ್ರಾಹ್ಮಣೇತರ ವ್ಯಕ್ತಿ ಪೂಜೆ ಮಾಡುತ್ತಿದ್ದ. ಆತನಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಹಲವು ವರ್ಷಗಳಿಂದ ಅವನು ಅಲ್ಲಿದ್ದ. ಕೆಲವೇ ದಿನಗಳಲ್ಲಿ ಭಾರಧ್ವಾಜ ಆ ದೇವಸ್ಥಾನ ಸೇರಿ ಅವನ ಜೊತೆ ಗೂಡಿದ. ನಂತರ ಇವನೇ ಅಲ್ಲಿನ ಅರ್ಚಕನಾಗಿಬಿಟ್ಟ. ಅಧಿಕಾರಿಗಳೂ ಅದಕ್ಕೆ ಒಪ್ಪಿದ್ದರು.

ದಿನವೂ ಆ ಪೂಜೆ, ಈ ಪೂಜೆ ಅಂತ ಹಲವರು ಪೂಜೆ ಮಾಡಿಸುವುದು, ಇವನಿಗೆ ದಕ್ಷಿಣೆ ಕೊಡುವುದು ನಡೀತಿತ್ತು. ಯಾವ ಮಂತ್ರಗಳೂ ಗೊತ್ತಿರದಿದ್ದವನು ಈಗ ಮಂತ್ರ ಅಂತ ಗುನುಗತೊಡಗಿದ. “ಜನ ಮರುಳೋ ಜಾತ್ರೆ ಮರುಳೋ” ಅಂತ ಇವನ ಕೈಯಲ್ಲಿ ಪೂಜೆ ಮಾಡಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚ ತೊಡಗಿತು. ಭಾರಧ್ವಾಜ ಆರು ತಿಂಗಳಿನ ಶಿಕ್ಷೆಯನ್ನು ಐದು ತಿಂಗಳಿಗೆ ಮುಗಿಸಿದ. ಅಧಿಕಾರಿಗಳಿಗೆ ಲಂಚ ನೀಡಿದರೆ ಅವರಿಗಿರುವ ವಿವೇಚನಾಧಿಕಾರ ಬಳಸಿ ಸನ್ನಡತೆಯ ನೆಪದಲ್ಲಿ ಕೆಲವು ದಿನಗಳ ಶಿಕ್ಷಾವಧಿಯನ್ನು ಮಾಫಿ ಮಾಡಬಲ್ಲರು. ಒಬ್ಬೊಬ್ಬ ಅಧಿಕಾರಿಗೆ ಅವರ ಹುದ್ದೆಗಳಿಗೆ ತಕ್ಕಂತೆ ಇಂತಿಷ್ಟು ದಿನ ಶಿಕ್ಷಾವಧಿಯನ್ನು ಮಾಫಿ ಮಾಡುವ ಅಧಿಕಾರ ಇದೆ. ಯಾರಾದರೂ ಪ್ರಶ್ನಿಸಿದಾಗ ಅದಕ್ಕೆ ಬೇಕಾದ ದಾಖಲುಗಳನ್ನು ಒದಗಿಸಬೇಕಾಗುತ್ತದೆ. ಅದೆಲ್ಲವನ್ನೂ ಹೇಗೂ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಭಾರಧ್ವಾಜ ಅದೆಲ್ಲವನ್ನೂ ಚೆನ್ನಾಗಿಯೇ ಬಳಸಿಕೊಂಡ. ಲಂಚ ಕೊಡಲು ಹಣಕ್ಕೂ ಕೊರತೆಯಿರಲಿಲ್ಲ. ಅಷ್ಟೇ ಅಲ್ಲದೇ ಬಿಡುಗಡೆಯಾಗಿ ಹೋಗುವಾಗ ತನ್ನ ಜೊತೆಗೆ ಹತ್ತಾರು ಸಾವಿರ ರೂಪಾಯಿಗಳಷ್ಟು ಹಣ ಅವನ ಜೇಬಿನಲ್ಲಿತ್ತು. ಖಾಲಿ ಜೇಬಿನಲ್ಲಿ ಜೈಲಿಗೆ ಬಂದಿದ್ದ ಅವನು, ಹೋಗುವಾಗ ಜೇಬು ತುಂಬಿಸಿಕೊಂಡು ಠೀವಿಯಿಂದಲೇ ಹೊರನಡೆದಿದ್ದ.

( ಇಲ್ಲಿ ಹೆಸರನ್ನು ಬದಲಾಯಿಸಲಾಗಿದೆ )