samachara
www.samachara.com
ತಿರುಚ್ಚಿಯ ಸೆಲ್ವಂ ಮತ್ತೆ ಜೈಲಿಗೆ ಬಂದು ಬಿದ್ದ!
PRISON STORIES

ತಿರುಚ್ಚಿಯ ಸೆಲ್ವಂ ಮತ್ತೆ ಜೈಲಿಗೆ ಬಂದು ಬಿದ್ದ!

ಆರು ವರ್ಷಗಳ ಜೈಲು ಶಿಕ್ಷೆಯಿಂದ ಜರ್ಜರಿತವಾಗಿದ್ದ ಸೆಲ್ವಂ, ಹೆಂಡತಿಯೊಂದಿಗೆ ಚಂದವಾದ ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ತಂದಿದ್ದ. ಆದರೆ ಹೊಟ್ಟೆಪಾಡಿಗೆಂದು ಸೇರಿದ ಕೆಲಸ ಮತ್ತೆ ಆತನನ್ನು ಕಂಬಿಗಳ ಹಿಂದೆ ದಿನ ದೂಡುವಂತೆ ಮಾಡಿತ್ತು. 

ಹೆಸರು ಸೆಲ್ವಂ. ತಮಿಳುನಾಡಿನ ತಿರುಚ್ಚಿ ಬಳಿಯ ಯಾವುದೋ ಹಳ್ಳಿ ಇವನ ಊರು. ಕೆಲಸ ಕೂಲಿ. ಹಂಡತಿ ಇಬ್ಬರು ಮಕ್ಕಳು ಇವನಿಗಿದ್ದಾರೆ. ಮಗಳಿಗೆ ಈಗಾಗಲೆ ಮದುವೆಯಾಗಿದೆ. ಮಗ ಕೊಯಂಬತ್ತೂರಿನಲ್ಲಿ ಅಂಗಡಿ ಕೆಲಸಕ್ಕಿದ್ದಾನೆ. ಇವನಿಗೂ ಇವನ ಹೆಂಡತಿಗೂ ವಿದ್ಯಾಭ್ಯಾಸ ಇಲ್ಲದಿದ್ದರೂ ಮಕ್ಕಳಿಗೆ ಪ್ರಾಥಮಿಕ ವಿದ್ಯಾಭ್ಯಾಸ ಮಾತ್ರ ಹೇಗೋ ಕೊಡಿಸಿದ್ದರು. ಈಗ ಹಳ್ಳೀಲಿ ಸಣ್ಣದಾದ ಮನೆಯೊಂದರಲ್ಲಿ ವಾಸ. ಅದು ಸರ್ಕಾರ ಕೊಟ್ಟ ಮನೆ. ಹೆಂಡತಿ ಕೂಡ ಕೂಲಿ ಮಾಡಿದರೆ ಮಾತ್ರ ಹೊಟ್ಟೆಗೆ ಶಾಂತಿ. ಇವನ ಕೂಲಿ ಮದ್ಯದಂಗಡಿಗೇ ಸಾಲುತ್ತಿರಲಿಲ್ಲ. ದಿನವೂ ದುಡಿಯುತ್ತಿದ್ದರೂ ಹಣ ಮಾತ್ರ ಮನೆಗೆ ಬರುತ್ತಿರಲಿಲ್ಲ.

ಸೆಲ್ವಂನ ಅಲೆಮಾರಿ ಸ್ವಭಾವ ಈಗ ಜಾಸ್ತಿಯಾಗಿತ್ತು. ಹೊಟ್ಟೆಗೆ ತೀರ್ಥ ಇಳಿಸಿದಾಗ ಇವನ ಸ್ವಭಾವಾನೇ ಬೇರೆ. ಅರಚಾಟ, ಕೂಗಾಟದ ಜೊತೆಗೆ ಹೊಡೆದಾಟ ಬೇರೆ ಇತ್ತು. ಹಾಗೆ ಹೊಡೆದಾಡಿ ನೂರಾರು ಬಾರಿ ಜೈಲಿನ ಅಥಿತಿ ಕೂಡ ಆಗಿದ್ದವನು ಸೆಲ್ವಂ. ಕೆಲವು ಹೊಡೆದಾಟಗಳು ಗಂಭೀರವಾಗಿ ಹಲವು ಬಾರಿ ಜೈಲು ಶಿಕ್ಷೆಗೆ ಕೂಡ ಗುರಿಯಾಗಿದ್ದ. ಹಾಗಾಗಿ ಸೆಲ್ವಂಗೆ ಜೈಲು ಒಂದು ತರಹ ವಿಶ್ರಾಂತಿಯ ಹಾಗೇನೆ ಕುಡಿತದಿಂದ ದೂರವಿರುವ ಜಾಗ. ಹೆಂಡತಿಗೂ ಕೂಡ ಜಗಳ ಹೊಡೆತಗಳಿಂದ ವಿರಾಮದ ಕಾಲ.

ಸೆಲ್ವಂ ನುರಿತ ಅಡುಗೆ ಕೆಲಸಗಾರ. ಅವನಿಂದ ಆಡುಗೆ ಮಾಡಿಸಲು ಹಲವರು ಆಗಾಗ್ಗೆ ಕರೆಯುತ್ತಿದ್ದರು. ಅದರಲ್ಲಿ ಅಡುಗೆ ಗುತ್ತಿಗೆಯವರು ಹಾಗೇನೆ ಬಿಡಿ ಮನೆಯವರು ಇದ್ದರು. ವಿಶೇಷ ಸಂದರ್ಭ ಇದ್ದಾಗ ಕರೆಯುತ್ತಿದ್ದರು. ಒಳ್ಳೆ ರೀತಿ ಹಣವನ್ನೂ ಕೊಡುತ್ತಿದ್ದರು. ಹೀಗೆ ಇರಲು ಒಮ್ಮೆ ಹೊಟ್ಟೆಗೆ ತೀರ್ಥ ಇಳಿಸಿ ಅದು ತಲೆಗೇರಿ ಮಾಡಿದ ಗಲಾಟೆ ಸ್ವಲ್ಪ ವಿಕೋಪಕ್ಕೆ ಹೋಗಿ ಬಿಡ್ತು. ಹೇಗೆ ಹೊಡೆದನೋ ಗೊತ್ತಿಲ್ಲ. ಎದುರಿದ್ದವನ ಹೊಟ್ಟೆ ಸೀಳಿಬಿಟ್ಟಿತ್ತು. ನೋಡಿದರೆ ಇವನ ಕೈಯಲ್ಲಿದ್ದ ಸಣ್ಣ ಚಾಕುವಿನಿಂದ ರಕ್ತ ಜಿನುಗುತ್ತಿತ್ತು. ಸರಿ, ಮತ್ತೇನು, ಜೈಲಿಗೇ ಪಯಣ.

ಆದರೆ ಇದು ಸ್ವಲ್ಪ ಗಂಭೀರ ಆಗಿದ್ದರಿಂದ 6 ವರ್ಷಗಳ ಶಿಕ್ಷೆಯಾಗಿ ಬಿಡ್ತು. ಆಗ ತಾನೆ ಶಿಕ್ಷೆ ಮುಗಿಸಿದ್ದ. ಇನ್ನು ಈ ರಗಳೆ, ಜಗಳ, ಹೊಡೆದಾಟ, ಜೈಲುವಾಸ ಸಾಕು ಅಂತ ಅಂದು ಕೊಂಡು ಜೈಲಿನಿಂದ ಹೊರಬಂದಿದ್ದ. ಈಗ ಅವನ ವಯಸ್ಸು ಕೂಡ 45ರ ಆಸುಪಾಸು. ಆದರೆ 60 ವರ್ಷದವನಂತೆ ಕಾಣುತ್ತಿದ್ದ. ಕುಡಿತ ಮಾತ್ರ ಸಾಲದು ಅಂತ ಜೊತೆಗೆ ಬೀಡಿ ಬೇರೆ ಇತ್ತಲ್ಲ. ಆಗಾಗ ಗಾಂಜಾ ಹೊಗೆ ಕೂಡ ಏರಿಸುತ್ತಿದ್ದ. ಹೊರಬಂದ ಮೇಲೆ ಮನೆಗೆ ಬಂದ. ಹೆಂಡತಿಯ ಜೀವನ ಕಷ್ಟಕರವಾಗಿತ್ತು. ಅಲ್ಲಿ ಇಲ್ಲಿ ಮಾಡುವ ಕೂಲಿಯೇ ಆದಾಯ. ಒಂಟಿ ಬೇರೆ. ಮಗ ಮನೆಗೆ ಬರೋದೆ ಅಪರೂಪ. ಅವನದು ಅಲ್ಲಿ ಏನಿದೆಯೋ ಗೊತ್ತಿಲ್ಲ. ಮಗಳಿಗೆ ತನ್ನ ಪಾಡು ನೋಡಿಕೊಳ್ಳೋದೇ ತಿಣುಕಾಟದ ವಿಷಯ. ಇವನೋ ಜೈಲಿನಿಂದ ಬಂದ ಖಾಲಿ ಕೈ ಪಕೀರ.

ಪೆಚ್ಚಾದ ಸೆಲ್ವಂಗೆ ಏನೇನೋ ಅನಿಸಿ ಬಿಟ್ಟಿತ್ತು. ಇದುವರೆಗೂ ಹೆಂಡತಿ, ಕುಟುಂಬ ಎಂದೆಲ್ಲಾ ತಲೆ ಕೆಡಿಸಿ ಕೊಂಡವನಲ್ಲ. ಸರಿ, ಏನಾದರೂ ಮಾಡಿ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಂಬಲ ಈಗ ಜೋರಾಗತೊಡಗಿತು. ಮಧ್ಯೆ ಮಗಳ ಮನೆಗೆ ಹೋಗಿ ಬಂದ. ಹೀಗೆ ಇರಲು ಅಡುಗೆ ಕೆಲಸಕ್ಕೆಂದು ಬಂದು ಕರೆದರು. ಸರಿ, ಕೆಲಸ ಸಿಕ್ಕಿತಲ್ಲ ಎಂದು ಹೆಂಡತಿಗೆ ಹೇಳಿ ಹೊರಟ. ಬದಲಾಗಿರುವ ಗಂಡ ತನ್ನ ಜೊತೆ ಮನೆಯಲ್ಲೇ ಇರಬಾರದೆ ಎಂದು ಹೆಂಡತಿಗೆ ಅನಿಸದೇ ಇರಲಿಲ್ಲ. ಆದರೆ ಬದುಕು ಸ್ವಲ್ಪ ಉಸಿರಾಡುವಂತಾಗಬೇಕಾದರೆ ಗಂಡನ ದುಡಿಮೆ ಅತ್ಯಗತ್ಯ ಅಂತ ಆಕೆಗೆ ಗೊತ್ತಿತ್ತು.

ಸೆಲ್ವಂ ತನ್ನ ಊರಿನಿಂದ ನೂರಾರು ಕಿ. ಮೀ ದೂರಕ್ಕೆ ಬಂದು ಸೇರಿಕೊಂಡ. ಇಪ್ಪತ್ತು ಜನರಿಗಾಗುವಷ್ಟು ಅಡುಗೆ ಮಾಡೋದು ಅವನ ಕೆಲಸ. ಒಬ್ಬಿಬ್ಬರು ವಯಸ್ಸಾದವರು ಉಳಿದಂತೆ ಹರೆಯದವರು, ಮದ್ಯವಯಸ್ಕರು ಅಲ್ಲಿ ಒಂದು ಮನೆಯಲ್ಲಿ ಸೇರಿದ್ದರು. ದಿನವೂ ಬೆಳಿಗ್ಗೆ ಹೋಗುತ್ತಿದ್ದರು. ಸಂಜೆ ಇಲ್ಲವೆ ರಾತ್ರಿಗೆ ವಾಪಾಸಾಗುತ್ತಿದ್ದರು. ಮೂರು ನಾಲ್ಕು ದಿನ ಬಿಟ್ಟು ಬರೋ ಕೆಲವರಿದ್ದರು. ಸೆಲ್ವಂಗೆ ಮಾತ್ರ ಮನೆ ಬಿಟ್ಟು ಕದಲದಷ್ಟು ಕೆಲಸ ಇರುತ್ತಿತ್ತು. ಅವರುಗಳು ಎಲ್ಲಿಗೆ ಹೋಗುತ್ತಿದ್ದರು? ಏನು ಮಾಡುತ್ತಿದ್ದರು? ಯಾಕೆ ಆ ಮನೆಯಲ್ಲಿ ಸೇರಿದ್ದಾರೆ? ಇದನ್ನೆಲ್ಲಾ ಸೆಲ್ವಂಗೆ ಯಾರೂ ಹೇಳುತ್ತಿರಲಿಲ್ಲ. ಆದರೆ ಎಲ್ಲರೂ ಮುಕ್ತವಾಗಿ ಹರಟೆ ಹೊಡೀತಿದ್ದರು. ಈ ವಿಚಾರಗಳ ಸುಳಿವೂ ಕೂಡ ಅದರಲ್ಲಿ ಇರುತ್ತಿರಲಿಲ್ಲ.

ಹೆಂಡತಿಯ ಜತೆ ಆಗಾಗ್ಗೆ ಮೊಬೈಲಿನಲ್ಲಿ ಮಾತಾಡುತ್ತಿದ್ದ. ಉಭಯ ಕುಶಲೋಪರಿ ಇರುತ್ತಿತ್ತು. ಈ ಮದ್ಯೆ ಒಂದಷ್ಟು ಹಣವನ್ನು ಹೆಂಡತಿಗೆ ಕಳಿಸಿಕೊಟ್ಟಿದ್ದ. ಹೀಗೆ ಇಪ್ಪತ್ತು ದಿನ ಕಳೆದಿರಬಹುದು. ಮೂರು ದಿನಗಳ ಹಿಂದೆ ಹೋದ ಹಲವರು ಇನ್ನೂ ವಾಪಾಸಾಗಿರಲಿಲ್ಲ. ಒಂದು ವಾರ ಕಳೆದಿರಬಹುದು. ಅವರೆಲ್ಲಾ ಬಂದರು. ಅವರೊಂದಿಗೆ ಕೆಲವು ಬ್ಯಾಗುಗಳು ಇದ್ದವು. ಸ್ವಲ್ಪ ಗಡಿಬಿಡಿಯಲ್ಲಿ ಇದ್ದಂತೆ ಇತ್ತು. ನಮ್ಮ ಇಲ್ಲಿನ ಕೆಲಸ ಮುಗಿಯಿತು. ನೀವು ಹೋಗಿ ಎಂದು ಸೆಲ್ವಂಗೆ ಕೊಡಬೇಕಾಗಿದ್ದ ಕೂಲಿ ಹಣವನ್ನು ಕೊಟ್ಟು ಹೇಳಿದರು. ಸರಿ ಎಂದು ಸೆಲ್ವಂ ತಾನು ದುಡಿದ ಹಣ ಹೆಂಡತಿ ಕೈಗೆ ಕೊಟ್ಟುಬಿಡಬೇಕೆಂದು ತಕ್ಷಣ ಹೊರಟ. ಮದುವೆಯಾದ ಹೊಸದರಲ್ಲಿ ಬಿಟ್ಟರೆ ಸೆಲ್ವಂ ಹೆಂಡತಿ ಕೈಗೆ ದುಡಿದ ಹಣ ಕೊಡುವುದು ಈಗಲೇ.

ಮನೆಗೆ ಬಂದು ಒಂದು ವಾರ ಕಳೆದಿರಬಹುದು. ಒಂದು ಮುಂಜಾನೆ ಇಬ್ಬರು ಪೋಲೀಸರು ಮನೆಗೆ ಬಂದು ಠಾಣೆಗೆ ಬರಬೇಕೆಂದು ಸೆಲ್ವಂಗೆ ಹೇಳಿದರು. ಸೆಲ್ವಂಗೆ ಅದು ಸ್ವಲ್ಪ ಕಸಿವಿಸಿಯಾಯಿತು ಅಷ್ಟೆ. ಅವನ ಹೆಂಡತಿ ಮಾತ್ರ ಅಯ್ಯೋ, ಮನೆಗೆ ಮತ್ತೆ ಪೊಲೀಸರು ಬಂದರಲ್ಲ ಅಂತ ದುಃಖ ಮತ್ತು ಬೇಜಾರಾಯಿತು. ಪೊಲೀಸರು ಬರುವುದು, ಗಂಡನನ್ನು ಕರೆದುಕೊಂಡು ಹೋಗುವುದು ಮೊದಲಿನಿಂದ ಆಕೆಗೆ ಮಾಮೂಲಿ ವಿಷಯಾನೆ. ಆದರೆ ಈಗ ಮತ್ತೆ ಅದು ಶುರುವಾಗಿದ್ದು, ತನ್ನ ಗಂಡ ಸುಧಾರಿಸಿದಾನೆ ಅಂತ ಅಂದುಕೊಂಡಿದ್ದ ಆಕೆಯ ಭರವಸೆಗೆ ದೊಡ್ಡ ಪೆಟ್ಟುಕೊಟ್ಟಿತ್ತು.

ಸೆಲ್ವಂನನ್ನು ಬ್ಯಾಂಕ್ ದರೋಡೆ ಮಾಡಿದ ಆರೋಪದಡಿ ಬಂಧಿಸಿದ ಪೊಲೀಸರು ಬೇಕಾಬಿಟ್ಟಿ ಹೊಡೆದರು. ಕಾಲುಗಳು ಊದಿಕೊಂಡು ನಡೆಯಲಾರದಂತಾಗಿದ್ದವು. ಎಲ್ಲೆಲ್ಲಿ ದರೋಡೆ ಮಾಡಿದ್ದು, ಕಾಸು, ಚಿನ್ನ ಬಚ್ಚಿಟ್ಟ ಜಾಗಗಳನ್ನು ಹೇಳು, ಮಾರಾಟ ಮಾಡಿದ ಅಂಗಡಿಗಳ ಬಗ್ಗೆ ತಿಳಿಸು ಎಂಬುದು ಪೊಲೀಸರು ಪದೇ ಪದೇ ಕೇಳಿದ ಪ್ರಶ್ನೆ. ನನಗೇನೂ ಗೊತ್ತಿಲ್ಲ, ನಾನು ಅಡುಗೆ ಮಾತ್ರ ಮಾಡಿ ಕೊಟ್ಟಿದ್ದು ಎಂದರೂ, ಗೋಗರೆದರೂ, ಬಿಡದೇ ಚಚ್ಚಿದ್ದರು. ಹತ್ತು ದಿನಗಳು ಅನಧಿಕೃತವಾಗಿ ಇಟ್ಟುಕೊಂಡು ಚಿತ್ರಹಿಂಸೆ ನೀಡಿದರೂ ಸೆಲ್ವಂನಿಂದ ಹೆಚ್ಚೇನೂ ಪ್ರಯೋಜನ ಕಾಣದಾದಾಗ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ತಳ್ಳಿದರು. ಅಲ್ಲಿ ಸೆಲ್ವಂ ಅಡುಗೆ ಮಾಡಿಬಡಿಸಿದ್ದ ಆ ಮನೆಯಲ್ಲಿದ್ದವರೆಲ್ಲಾ ಇದ್ದರು. ಇದುವರೆಗೂ ಕೊನೆಗಾಣದೇ ಇದ್ದ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರಗಳ ಹತ್ತಾರು ಬ್ಯಾಂಕ್ ದರೋಡೆ ಪ್ರಕರಣಗಳನ್ನು ಸೆಲ್ವಂ ಮೇಲೂ ಹಾಕಲಾಯಿತು.

ಬ್ಯಾಂಕ್ ದರೋಡೆ ಮಾಡುವ ವೃತ್ತಿಪರ ತಂಡ ಅದಾಗಿತ್ತು. ಇಂತಹ ಹಲವು ತಂಡಗಳು ತಿರುಚ್ಚಿಯಲ್ಲಿವೆಯಂತೆ. ಈ ತಂಡಗಳು ಬ್ಯಾಂಕುಗಳನ್ನೇ ಗುರಿ ಮಾಡಿ, ಹಗಲಿನಲ್ಲೇ, ಅದೂ ಕೆಲಸದ ಅವಧಿಯಲ್ಲೇ, ಚಾಕಚಕ್ಯತೆಯಿಂದ, ಸಿಬ್ಬಂದಿಗಳನ್ನೇ ಯಾಮಾರಿಸಿ ಹಣವನ್ನು ಲಪಟಾಯಿಸುತ್ತವಂತೆ. ಯಾರನ್ನೂ ಹೊಡೆಯೋದಾಗಲೀ, ಶಸ್ತ್ರಗಳನ್ನು ಬಳಸೋದಾಗಲೀ ಮಾಡುವುದಿಲ್ಲವಂತೆ. ಈ ರೀತಿ ಪರಿಣತಿ ಪಡೆದು ನುರಿತ ತಂಡಗಳಲ್ಲಿ ಇದೂ ಒಂದಾಗಿತ್ತು.

ಸೆಲ್ವಂಗೆ ಈ ತಂಡದ ಬಗ್ಗೆ ಗೊತ್ತಿರದೇ ಇರಲಿಲ್ಲ. ಆದರೆ ನಾನು ಕೇವಲ ಅಡುಗೆ ಮಾಡೋದು ತಾನೆ, ಅವರ ಜೊತೆ ಹೋಗುವುದಿಲ್ಲವಲ್ಲ. ಸಮಸ್ಯೆ ಏನೂ ಆಗಲಾರದು ಅಂತ ಅಂದುಕೊಂಡಿದ್ದ. ಅಲ್ಲದೆ ಅವರು ಒಳ್ಳೆ ಸಂಬಳ ಕೊಡುವ ಭರವಸೆ ಬೇರೆ ಕೊಟ್ಟಿದ್ದರು. ಹಣದ ಅವಶ್ಯಕತೆ ಬಹಳ ಇದ್ದಿದ್ದರಿಂದ ಒಪ್ಪಿಕೊಂಡು ಸೆಲ್ವಂ ಬಂದಿದ್ದ. ಆದರೆ ಅದು ಮತ್ತೆ ಜೈಲಿನ ದಾರಿಯನ್ನೇ ಹಿಡಿಸುತ್ತದೆ ಎಂದು ಅವನು ಅಂದುಕೊಂಡಿರಲಿಲ್ಲ.

ಮನಸು ಶರೀರಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳದಿದ್ದರೆ, ಸಮಯಕ್ಕೆ ಸರಿಯಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಹಲವು ಬಾರಿ ಜಾರಿಬಿದ್ದ ಮೇಲೂ ಪಾಠಗಳನ್ನು ಕಲಿಯದಿದ್ದರೆ, ಕಲಿತ ಪಾಠಗಳನ್ನು ಸರಿಯಾಗಿ ಅಳವಡಿಸಿಕೊಳ್ಳದಿದ್ದರೆ, ಸಿಗುವ ಒಳ್ಳೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳದಿದ್ದರೆ ಮತ್ತೆ ಎದ್ದು ನಿಲ್ಲೋದು ಸುಲಭವಲ್ಲ. ಬೀಳಿಸುವ ಹಲವು ಕರಾಳ ಕೈಗಳಿರುತ್ತವೆ. ವ್ಯವಸ್ಥೆಗೆ ಅಷ್ಟು ಕರುಣೆ ಇನ್ನೂ ಬಂದಿಲ್ಲ.

( ಇಲ್ಲಿನ ವ್ಯಕ್ತಿ, ಸ್ಥಳಗಳ ಹೆಸರುಗಳನ್ನು ಬದಲಿಸಲಾಗಿದೆ)