ಪೀಚಲು ‘ದೇಶಪ್ರೇಮಿ’ಯೊಬ್ಬ ಜೈಲು ಪಾಲಾದಾಗ; ಬದುಕು, ಭ್ರಮೆ ಮತ್ತು ವಾಸ್ತವ!
PRISON STORIES

ಪೀಚಲು ‘ದೇಶಪ್ರೇಮಿ’ಯೊಬ್ಬ ಜೈಲು ಪಾಲಾದಾಗ; ಬದುಕು, ಭ್ರಮೆ ಮತ್ತು ವಾಸ್ತವ!

ಕೊಲೆಗೆ ಯತ್ನ, ದೊಂಬಿ, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿದ್ದು, ಅಂತೆಲ್ಲಾ ಪ್ರಕರಣಗಳನ್ನು ದಾಖಲಿಸಿ ಬಿಟ್ಟರು ಪೊಲೀಸರು; ಅದು ಕೋಮು ಗಲಭೆಯಾಗಿತ್ತು.

ಅವರಿಬ್ಬರೂ ಶಿಕ್ಷಕ ವೃತ್ತಿಯಲ್ಲಿರುವವರು. ಒಬ್ಬರು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರೆ; ಮತ್ತೊಬ್ಬರು ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿಗಿದ್ದವರು. ಇಬ್ಬರದೂ ಕರಾವಳಿ ಜಿಲ್ಲೆ. ‘ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗಳು’ ಅಂತ ಇತ್ತಲ್ವ? ಅದೇ ತರಹ ಇವರಿಗೆ ಇಬ್ಬರು ಮಕ್ಕಳು. ಒಂದು ಗಂಡು. ಒಂದು ಹೆಣ್ಣು. ಹಿಂದುಳಿದ ಸಮುದಾಯಕ್ಕೆ ಸೇರಿದ ಇವರಿಗೆ ವಾಸಕ್ಕೆ ನಗರದಲ್ಲೇ ಸ್ವಂತ ಮನೆಯಿದೆ. ಹಳ್ಳಿಯಲ್ಲಿ ತಮ್ಮ ಪಾಲಿಗೆ ಬಂದ ಒಂದು ಏಕರೆ ಜಮೀನಿದೆ. ಅದರಲ್ಲಿ ಅಡಿಕೆ, ಗೇರು, ತೆಂಗು ಹಾಕಿದ್ದಾರೆ. ಯಾರನ್ನೋ ನೋಡಿಕೊಳ್ಳಲು ಬಿಟ್ಟು ವಾರ್ಷಿಕ ಇಂತಿಷ್ಟು ಅಂತ ಆದಾಯ ಗಳಿಸುತ್ತಿದ್ದಾರೆ. ಹುಡುಗಿ ಈಗಿನ್ನೂ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹುಡುಗ ಪ್ರಭಾಷ್. ಮೊದಲ ಪಿಯುಸಿ ವಿಜ್ಞಾನ ಓದುತ್ತಿದ್ದ. ತುಂಬಾ ಬಡತನವೂ ಅಲ್ಲದ ಕುಟುಂಬ ಅವರದ್ದು.

ಇಲ್ಲಿ ಹೇಳಹೊರಟಿರುವುದು ಪ್ರಭಾಷ್‌ನದ್ದೇ ಕತೆ. ಚೆನ್ನಾಗಿ ವ್ಯಾಸಂಗ ಮಾಡುತ್ತಿದ್ದ ಪ್ರಭಾಷ್‌ಗೆ ಪಿಯುಸಿಯಲ್ಲಿ ಹೊಸ ಗೆಳೆಯರು ಸಿಕ್ಕಿದ್ದರು. ಆರಂಭದಲ್ಲಿ ಪರಿಚಯವಷ್ಟೇ ಇದ್ದಿದ್ದು, ನಂತರದ ಕಾಲದಲ್ಲಿ ಗೆಳೆತನವು ಕ್ರಮೇಣ ಗಾಢವಾಗುತ್ತಾ ಹೋಯಿತು. ಪ್ರವಾಸ, ಮೋಜು-ಮಸ್ತಿ ಅಂತೆಲ್ಲ ಸುತ್ತಾಟಗಳು ಶುರುವಾದವು. ಬರಬರುತ್ತಾ ಸಂಘಟನೆ ಅಂತ ಈ ಗುಂಪಿನ ಮಾತುಗಳು ಕೇಳಿಬಂದವು.

“ಇದು ನಮ್ಮ ದೇಶ. ಬೇರೆಯವರನ್ನು ಇಲ್ಲಿಂದ ಓಡಿಸಬೇಕು. ನಾವೆಲ್ಲಾ ಒಂದಾಗಬೇಕು,” ಅಂತ ಹೇಳತೊಡಗಿದರು. “ಅವರು ನಮ್ಮವರ ಮೇಲೆ ರೇಪು, ಹಲ್ಲೆ, ಕೊಲೆ, ಗಲಾಟೆ ಮಾಡುತ್ತಾ ಎಲ್ಲವನ್ನೂ ಆಕ್ರಮಿಸಿಕೊಳ್ಳುತ್ತಾ ಹೋಗುತ್ತಿದ್ದಾರೆ. ಹೀಗೆ ಬಿಟ್ಟರೆ ಮುಂದೆ ಕೆಲವೇ ದಿನಗಳಲ್ಲಿ ನಮ್ಮನ್ನೆಲ್ಲಾ ಓಡಿಸಿಬಿಡುತ್ತಾರೆ. ನಮಗೆ ಸಿಗಬೇಕಾದ ಅವಕಾಶಗಳೆಲ್ಲಾ ಅವರು ದೋಚುತ್ತಿದ್ದಾರೆ. ಅಲ್ಲದೆ ಅವರ ಜನಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ,” ಅಂತ ಹೀಗೆ ಏನೇನೋ ಮಾತುಕತೆಗಳು ಇವರ ನಡುವೆ ಆರಂಭವಾದವು. ಈ ಎಲ್ಲಾ ಮಾತುಕತೆಗಳ ಬಗ್ಗೆ ಪ್ರಭಾಷ್ ಆರಂಭದಲ್ಲಿ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ತಮ್ಮ ಸುತ್ತಾಟದ ಭಾಗವಾಗಿ ಸಭೆ, ಭಾಷಣ ಅಂತೆಲ್ಲಾ ಹೋಗತೊಡಗಿದ್ದ ಪ್ರಭಾಷ್.

ತನ್ನ ಮನೆ ಓದು ಅಂತ ಇದ್ದವನು ಪ್ರಭಾಷ್. ಆತನಿಗೆ ಪಠ್ಯಪುಸ್ತಕ ಹೊರತು ಪಡಿಸಿ ಬೇರೇನನ್ನೂ ಓದುವ ಅಭ್ಯಾಸವೂ ಇರಲಿಲ್ಲ. ತಾನು ನೋಡಿದ್ದು, ಕೇಳಿದ್ದು ಅದೇ ಅವನ ಗ್ರಹಿಕೆಯಾಗತೊಡಗಿತು. ಬಹಳ ಕಾಲ ಒಂದೇ ವಿಚಾರಗಳನ್ನು ಕೇಳುವುದು, ನೋಡುವುದು ಮಾಡಿದಾಗ ಸಹಜವಾಗಿ ಅದಕ್ಕೆ ಆಕರ್ಷಿತರಾಗುವುದು ಸಹಜ. ಇಲ್ಲಿ ಪ್ರಭಾಷ್‌ಗೆ ಆಗಿದ್ದೂ ಕೂಡ ಅದೇ. ತನ್ನ ಸ್ನೇಹಿತರಾಡುವ ಮಾತುಗಳು, ತನ್ನ ಗ್ರಹಿಕೆಗೆ ಬರುವ ನಡೆಯುತ್ತಿರುವ ವಿದ್ಯಮಾನಗಳು ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ಪೋಣಿಸಿ ನೋಡತೊಡಗಿದ.

ಬರಬರುತ್ತಾ ಕಾಲೇಜು ಹಾಗೂ ಓದಿನ ಕಡೆ ಗಮನ ಕಡಿಮೆಯಾಗತೊಡಗಿತು. ಮನಸ್ಸಿನಲ್ಲಿ ವ್ಯಗ್ರತೆ, ಸಿಟ್ಟು, ಅಸಮಾಧಾನ ಹೆಚ್ಚತೊಡಗಿತು. ದೈನಂದಿನ ಎಲ್ಲಾ ವಿಚಾರಗಳಲ್ಲೂ ಇವೆಲ್ಲಾ ಕಾಣತೊಡಗಿತು. ಸ್ನೇಹಿತರು ಹೇಳಿದರೆಂದು ಸಾಂತ್ವನ, ಸಮಾಧಾನ, ಸಂತೋಷದ ನೆಪದಲ್ಲಿ ಮೊದಲಿಗೆ ಬೀಡಿ, ನಂತರ ಗಾಂಜಾ ಸೇದುವುದನ್ನು ರೂಢಿಸಿಕೊಂಡ, ನಂತರ ಕುಡಿತವೂ ಶುರುವಾಯಿತು. ಇವೆಲ್ಲವುಗಳ ಜೊತೆ ಸಭೆಗಳು ಭಾಷಣಗಳಲ್ಲೂ ಹಾಜರಾತಿಗಳೂ ಇರುತ್ತಿದ್ದವು.

ಪೀಚು ಹುಡುಗನಾಗಿದ್ದ ಪ್ರಭಾಷ್ ಈಗಾಗಲೇ ಹಲವು ಹೊಡೆದಾಟಗಳಲ್ಲಿ ಭಾಗಿಯಾಗಿದ್ದ. ಹಾಗಂತ ಇವನೇ ಅದರ ಸೂತ್ರದಾರನಾಗುತ್ತಿರಲಿಲ್ಲ. ಆದರೆ ಅವರ ಜೊತೆಗೆ ಇರುತ್ತಿದ್ದ. ಪ್ರೇಮಿಗಳನ್ನು ಹಿಂಸಿಸುವುದರಲ್ಲೂ ಜೊತೆಗೂಡಿದ್ದ. ಇದರಲ್ಲಿ ವಿಕೃತ ಆನಂದ ಅನುಭವಿಸುವ ತನ್ನ ಸ್ನೇಹಿತರನ್ನು ಕಣ್ಣಾರೆ ನೋಡಿದ್ದ. ನಂತರ ತಾನೂ ಅದೇ ಮನಸ್ಥಿತಿಗೆ ಜಾರಿದ. ಶಿಕ್ಷಕರಾಗಿದ್ದ ತಂದೆ ತಾಯಿಗಳು ಮಗನನ್ನು ತಿದ್ದುವ ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆ ಮಟ್ಟದ ನಿರ್ಲಕ್ಷ್ಯವನ್ನು ಮಗನ ಬಗ್ಗೆ ವಹಿಸಿದ್ದರು. ಕೇಳಿದಾಗೆಲ್ಲಾ ಹಣವನ್ನೂ ಕೊಡುತ್ತಾ ಬಂದರು.

ಹೀಗಿರಲು…. ಪ್ರಭಾಷ್ ಮತ್ತವನ ಸ್ನೇಹಿತರು ಕೆಲವರೊಂದಿಗೆ ಸೇರಿಕೊಂಡು ಒಂದು ದೊಡ್ಡ ಗಲಾಟೆಯಲ್ಲಿ ಪಾಲ್ಗೊಂಡರು. ಇದರಲ್ಲಿ ಎದುರು ಪಕ್ಷದ ಹಲವರಿಗೆ ಗಂಭೀರ ಗಾಯಗಳಾದವು. ಪ್ರಕರಣವು ಠಾಣೆಯ ಮೆಟ್ಟಿಲು ಹತ್ತಿ ಗಲಾಟೆಯಲ್ಲಿ ಪಾಲ್ಗೊಂಡ ಹಲವರನ್ನು ಬಂಧಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕೊಲೆಗೆ ಯತ್ನ, ದೊಂಬಿ, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿದ್ದು, ಅಂತೆಲ್ಲಾ ಪ್ರಕರಣಗಳನ್ನು ದಾಖಲಿಸಿ ಬಿಟ್ಟರು ಪೊಲೀಸರು. ಅದು ಕೋಮು ಗಲಭೆಯಾಗಿತ್ತು.

ಇದುವರೆಗೂ ಪೊಲೀಸ್ ಠಾಣೆ, ಕೇಸು ಅಂತೆಲ್ಲಾ ನೋಡದಿದ್ದ ಪ್ರಭಾಷ್, ಇದರಿಂದ ಗಾಬರಿಯಾಗಿದ್ದ. ನಶೆಯಲ್ಲಿಯೇ ಪಾಲ್ಗೊಂಡಿದ್ದ ಪ್ರಭಾಷ್‌ಗೆ ಎಲ್ಲರೊಂದಿಗೆ ಜೈಲಿಗೆ ಬಂದು ಬೀಳುವಾಗಲೇ ನಶೆ ಇಳಿದಿದ್ದು. ಜೊತೆಗೆ ದೊಡ್ಡ ಗುಂಪು ಇದ್ದಿದ್ದರಿಂದ ಮೊದಲಿಗೆ ಸಹಜವಾಗಿಯೇ ಇದ್ದ ಪ್ರಭಾಷ್. ಊಟ ತಿಂಡಿಯನ್ನು ಯಾರೋ ಮೊದಮೊದಲಿಗೆ ತಂದುಕೊಟ್ಟರು.

ಜೈಲಿನಲ್ಲಿ ಗಾಂಜಾ, ಬೀಡಿ, ಪಾನ್ ಪರಾಗ್ ಇವುಗಳಿಗೆ ಕೊರತೆಯಾಗದೇ ಆತನಿಗೆ ಸಮಸ್ಯೆ ಅನಿಸಲಿಲ್ಲ. ಹಣಕ್ಕೆ ಕೂಡ ಕೊರತೆ ಇರಲಿಲ್ಲ. ಒಂದೆರಡು ದಿನಗಳಲ್ಲಿ ಜೊತೆಗೆ ಬಂದವರಲ್ಲಿ ಹಲವರು ಬಿಡುಗಡೆಯಾಗಿ ಹೋದರು. ಅವರ ಮೇಲೆ ಇದ್ದ ಪ್ರಕರಣಗಳು ಅಷ್ಟೊಂದು ಗಂಭೀರವಾಗಿರಲಿಲ್ಲವಾಗಿದ್ದರಿಂದ ಜಾಮೀನು ದೊರಕಿತ್ತು. ಆದರೆ ಪ್ರಭಾಷ್ ಆ ಗಲಾಟೆಯಲ್ಲಿ ಪ್ರಧಾನ ಪಾತ್ರಧಾರಿ ಆಗಿರದಿದ್ದರೂ ಆತನ ಮೇಲೆ ಗಂಭೀರವಾದ ಪ್ರಕರಣಗಳು ದಾಖಲಾಗಿದ್ದವು.

ಮೊದಲಿದ್ದ ಸಹಜತೆ ಈಗ ಕಡಿಮೆಯಾಗತೊಡಗಿತು. ಆ ಜೈಲಿನ ವಾತಾವರಣ ಬೇರೆ ಅತ್ಯಂತ ಕೆಟ್ಟದಾಗಿತ್ತು. ಊಟ ತಿಂಡಿಗಳ ಕತೆ ಹೇಳೋದೇ ಬೇಡ ಅನ್ನೋ ರೀತಿ ಇತ್ತು. ಕುಡಿಯಲು ಬಳಸಲು ನೀರಿನ ತೀವ್ರ ಸಮಸ್ಯೆ ಬೇರೆ. ಗಲೀಜಿನ ವಿಚಾರ ಕೇಳೋದೇ ಬೇಡ. ಸ್ನಾನ ಶೌಚಾದಿಗಳಿಗೂ ತತ್ತರಿಸಬೇಕಾದ ಸ್ಥಿತಿ. ಅಧಿಕಾರಿಗಳ ಎಗ್ಗಿಲ್ಲದ ಲೂಟಿ ಹಾಗೂ ನಿರ್ಲಕ್ಷ್ಯತೆಗಳಿಂದಾಗಿ ಜೈಲಿನ ಸ್ಥಿತಿ ದಯನೀಯವಾಗಿತ್ತು.

ದಿನಗಳು..... ತಿಂಗಳುಗಳು… ಕಳೆದಂತೆ ಮೊದಲು ಬರುತ್ತಿದ್ದ ಊಟ ತಿಂಡಿ ಕ್ರಮೇಣ ಕಡಿಮೆಯಾಗತೊಡಗಿತು. ಭೇಟಿಗೆ ಬರುವವರು ಕೂಡ ಕಡಿಮೆಯಾದರು. ಬಂದರೆ ಮನೆಯವರು ಮಾತ್ರ ಬರುವ ಸ್ಥಿತಿ ಬಂದಿತು. ಮನೆಯಿಂದ ತಂದೆ ತಾಯಿ ಆಗಾಗ್ಗೆ ಬರುತ್ತಿದ್ದರು. ಅವರಿಗೆ ಮಗನ ಸ್ಥಿತಿಯ ನೋವು ಈಗ ಸ್ವಲ್ಪ ಮುಟ್ಟಿತ್ತು. ಆದರೆ ಕಾಲ ಮಿಂಚಿ ಹೋಗಿತ್ತು. ಅವನನ್ನು ಸಹಜತೆಗೆ ತರುವುದು ಅಷ್ಟು ಸುಲಭವಾಗಿರಲಿಲ್ಲ. ಪ್ರಭಾಷ್‌ನನ್ನು ಮೊದಲಿದ್ದ ಗೆಳೆಯರು ಯಾರೂ ತಿರುಗಿ ನೋಡುತ್ತಿಲ್ಲ. ಅವರ ಪಾಡು ಅವರಿಗೇ ಜಾಸ್ತಿಯಾಗಿರೋವಾಗ ಇವನನ್ನು ಅವರು ಹೇಗೆ ಗಮನಿಸಿಯಾರು?

ಮನೆಯಿಂದ ಕೊಡುವ ಹಣ ಇವನಿಗೆ ಸಾಕಾಗುತ್ತಿಲ್ಲ. ಕೈಕಾಲು ಆಡಿಸಲೂ ಜಾಗವಿಲ್ಲದ, ಸೂರ್ಯಕಿರಣಗಳು ಬೀಳದ ದೊಡ್ಡ ಬೋನಿನಂತಿರುವ ಆ ಜೈಲಿನ ವಾತಾವರಣದಲ್ಲಿ ಪ್ರಭಾಷ್ ಮತ್ತಷ್ಟು ವ್ಯಗ್ರನಾಗತೊಡಗಿದ. ರೌಡಿ ಗ್ಯಾಂಗುಗಳಿಗೆ ಇಂತಹವರೇ ಒಳ್ಳೆ ಕ್ಯಾಂಡಿಡೇಟುಗಳು. ಅಲ್ಲಿನ ಪುಡಿ ರೌಡಿ ಗ್ಯಾಂಗ್‌ಗಳ ಜೊತೆ ಸೇರಿಕೊಂಡು ಅಮಾಯಕ ಖೈದಿಗಳ ಮೇಲೆ ಹಲ್ಲೆ ನಡೆಸುವುದು. ಅವರಲ್ಲಿ ಏನಾದರೂ ದುಡ್ಡು ಹಾಗೂ ಇನ್ನಿತರ ವಸ್ತುಗಳಿದ್ದರೆ ದೋಚುವುದನ್ನೂ ಮಾಡತೊಡಗಿದ. ಇವನ ಮೇಲೆ ಹಲವಾರು ಸಾರಿ ದೂರುಗಳು ಬಂದರೂ ಅಧಿಕಾರಿಗಳು ಬಿಗಿ ಕ್ರಮ ಕೈಗೊಂಡಿರಲಿಲ್ಲ.

ಒಮ್ಮೆಯಂತೂ ಜೈಲಿನಲ್ಲಿ ಭಾರಿ ಹೊಡೆದಾಟವಾಗಿ ಹಲವರಿಗೆ ಗಂಭೀರ ಗಾಯಗಳಾದವು. ಜೈಲಿನ ಹಲವು ವಸ್ತುಗಳು ಪುಡಿಯಾಗಿದ್ದವು. ಜೈಲು ಸಿಬ್ಬಂದಿಗಳಿಗೂ ಹೊಡೆದಿದ್ದರು. ಅದು ಕೂಡ ಕೋಮು ನೆಪದಲ್ಲಿನ ರೌಡಿ ಗುಂಪುಗಳ ಹೊಡೆದಾಟ. ಈ ಗಲಾಟೆಯ ಸುದ್ಧಿಗಳು ಮಾಧ್ಯಮಗಳಲ್ಲಿ ಬಂದವು. ಅಧಿಕಾರಿಗಳು ಅನಿವಾರ್ಯವಾಗಿ ಹಲವರ ಮೇಲೆ ಪ್ರಕರಣ ದಾಖಲಿಸಬೇಕಾಯಿತು. ಅದರಲ್ಲಿ ಪ್ರಭಾಷ್ ಕೂಡ ಇದ್ದ. ಪ್ರಭಾಷ್ ಜೈಲಿನಿಂದ ಜಾಮೀನಿನಡಿ ಹೊರಹೋಗುವುದು ಇದು ಮತಷ್ಟು ಕಠಿಣ ಮಾಡಿತು.

ಅಧಿಕಾರಿಗಳು ಸಾಮಾನ್ಯವಾಗಿ ಮಾಡುವಂತೆ ಗಲಾಟೆಕೋರರನ್ನು ಬೇರ್ಪಡಿಸಿ ಹಲವು ಜೈಲುಗಳಿಗೆ ಕಳಿಸಿಬಿಟ್ಟರು. ಪ್ರಭಾಷ್ ಈಗ ಬಳ್ಳಾರಿ ಜೈಲಿಗೆ ಹೋದ. ಇವನ ಊರಿನಿಂದ ನೂರಾರು ಕೀ.ಮೀ ದೂರವಿರುವ ಅಲ್ಲಿಗೆ ಬಂದು ಇವನನ್ನು ಭೇಟಿ ಮಾಡುವುದು, ಸಹಾಯ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಹೆತ್ತವರು ಎರಡು ಮೂರು ತಿಂಗಳಿಗೊಮ್ಮೆ ಹೋಗಿ ಬರುತ್ತಿದ್ದರು. ಅಲ್ಲದೇ, ಅವರಿಗೂ ರಜೆ ಸಿಗಬೇಕು, ಮಗಳು ಬೇರೆ ಚಿಕ್ಕವಳು. ಪುಂಡ ಮಗನಿಗಾಗಿ ಇದ್ದ ಒಬ್ಬ ಮಗಳ ಭವಿಷ್ಯವನ್ನು ಹಾಳು ಮಾಡಲು ಅವರು ಸಿದ್ಧರಿರಲಿಲ್ಲ.

ಬಳ್ಳಾರಿ ಜೈಲಿನಲ್ಲಿ ಇವನಿಗೆ ಹೇಳಿಕೊಳ್ಳುವಂತಹ ಜೊತೆಗಾರರು ಯಾರೂ ಇರಲಿಲ್ಲ. ಪ್ರಭಾಷನ ಸ್ಥಿತಿ ಈಗ ಹೇಳಕೊಳ್ಳಲಾಗದ ಇಕ್ಕಟ್ಟಿಗೆ ಸಿಲುಕಿತು. ಇವನ ಚಟಗಳನ್ನು ಪೂರೈಸಿಕೊಳ್ಳಲು ಹಣದ ಮುಗ್ಗಟ್ಟು ಬೇರೆ ಇತ್ತು. ಇವನನ್ನು ಪ್ರಚೋದಿಸಿದ ಯಾವ ಭಾಷಣಕಾರರು, ಸಂಘಟನೆಕಾರರು ಮತ್ತವರ ಮನೆಯವರು ಜೈಲಿಗೆ ಬರಲಿಲ್ಲ. ಸಹಾಯ ಮಾಡುತ್ತೇವೆಂದು ಹೇಳಿದವರು ಈಗ ಯಾರೂ ಕಾಣಿಸುತ್ತಿಲ್ಲ. ಅವರ ಮೇಲೆ ಯಾವುದೇ ಪ್ರಕರಣಗಳೂ ದಾಖಲಾಗಿರಲಿಲ್ಲ.

ಯಾರೋ ಒಳ್ಳೆ ಅನುಕೂಲಸ್ಥರು, ರಾಜಕೀಯ ಪಕ್ಷದವರು, ಯಾವುದೋ ಸಂಘಟನೆಗಳು ಹೇಳಿದರೆಂದು; ಹಿಂದೂಗಳೆಂದೋ, ಹಿಂದೂ ಧರ್ಮವೆಂದೋ ತಮ್ಮನ್ನು ಗುರ್ತಿಸಿಕೊಂಡು, ಅದರ ರಕ್ಷಣೆಗೆಂದು ತಮ್ಮಂತೆಯೇ ಬಡಪಾಯಿಗಳ ಮೇಲೆ ಹಲ್ಲೆ ಮತ್ತು ಧಾಳಿ ಮಾಡುತ್ತಾ ಅವರ ಆಸ್ತಿಪಾಸ್ತಿ ಹಾಳು ಮಾಡುತ್ತಾ, ಅಮಾಯಕರ ಜೀವಗಳನ್ನೂ ತೆಗೆಯುತ್ತಾ, ಅವರ ಬದುಕುಗಳನ್ನೂ ಹಾಳು ಮಾಡಿ, ಹಲವು ಪ್ರಕರಣಗಳಡಿ ಜೈಲು ಪಾಲಾಗಿ ಮನಸ್ಸು ಹಾಗೂ ಬದುಕುಗಳನ್ನು ಕಳೆದುಕೊಂಡವರು ಮಾತ್ರ ಇವನಂತಹವರು. ಜೊತೆಗೆ ಇನ್ನೂ ಹಲವು ಬಡಪಾಯಿ ಯುವಕರಾಗಿದ್ದರು.

ಪ್ರಭಾಷ್ ಈಗೀಗ ಇದೆಲ್ಲವನ್ನೂ ಒಂದಷ್ಟು ಆಲೋಚನೆ ಮಾಡತೊಡಗಿದ್ದ. ಜೈಲಿನಿಂದ ಏನಾದರೂ ಮಾಡಿ ಜಾಮೀನು ಮಾಡಿಸಿ ಹೊರಗೆ ಹೋಗಬೇಕು. ನಾನು ಬದಲಾಗಲೇಬೇಕು. ನಾಲ್ಕು ಜನರಿಗೆ ಒಳ್ಳೆಯವನಾಗಿ ಅಪ್ಪ ಅಮ್ಮ ತಂಗಿಯೊಂದಿಗೆ ಚೆನ್ನಾಗಿ ಬದುಕಬೇಕು. ನಾನು ಹೀಗೆ ಮುಂದುವರೆಯಬಾರದು.... ಎಂದೆಲ್ಲಾ ಜೈಲಿಗೆ ಬಂದು ಆರೇಳು ತಿಂಗಳ ನಂತರ ತೀರ್ಮಾನಿಸತೊಡಗಿದ್ದ. ಅದು ಈಗ ಅಷ್ಟು ಸುಲಭದ್ದಲ್ಲ ಎಂಬುದು ಅವನಿಗೂ ಗೊತ್ತಿದೆ. ಆದರೂ ಅವನು ಅದರ ಬಗ್ಗೆ ಗಂಭೀರನಾಗಿ ಯೋಚಿಸುತ್ತಿದ್ದಾನೆ.....