ಗಂಡನ ಮನೆಯೆಂಬ ಬಾಣಲಿಯಿಂದ ಜೈಲೆಂಬ ಬೆಂಕಿಗೆ ಬಿದ್ದಾಕೆ ಫಾತಿಮಾ
PRISON STORIES

ಗಂಡನ ಮನೆಯೆಂಬ ಬಾಣಲಿಯಿಂದ ಜೈಲೆಂಬ ಬೆಂಕಿಗೆ ಬಿದ್ದಾಕೆ ಫಾತಿಮಾ

ನಾನು ಹುಟ್ಟಿ ಬೆಳೆದು, ನೋಡಿದ ಹಳ್ಳಿ ಹೇಗಿತ್ತು. ಈಗ ಎಷ್ಟೊಂದು ಬದಲಾವಣೆ. ನನಗೆ ಗೊತ್ತಿರುವವರ್ಯಾರೂ ಕಾಣುತ್ತಿಲ್ಲವಲ್ಲ. ನನ್ನ ದೂರದ ಬಂಧುಗಳ ಮನೆಗಳಿದ್ದವು. ಈಗ ಎಲ್ಲಿದ್ದಾರೋ? ಅರೆ ಪರಿಚಯವಿರುವವರು ಕೂಡ ನನ್ನ ಗುರುತು ಹಿಡಿಯುತ್ತಿಲ್ಲವಲ್ಲ. ನಾನು ಅಷ್ಟೊಂದು ಬದಲಾಗಿ ಕಾಣಿಸುತ್ತಿದ್ದೇನೆಯೇ? ಆಗೆಲ್ಲಾ ಇವರು ಅಷ್ಟೊಂದು ಚೆನ್ನಾಗಿ ಪ್ರೀತಿಯಿಂದ ಮಾತಾಡಿಸುತ್ತಿದ್ದರಲ್ಲ. ಈಗ ಯಾಕೆ ಹೀಗೆ? ತನ್ನ ಗೆಳತಿಯರು ಯಾರೂ ಇಲ್ಲಿರಲಿಕ್ಕಿಲ್ಲ. ಮದುವೆಯಾಗಿ ಎಲ್ಲೆಲ್ಲೋ ಹೋಗಿರಬೇಕು. ಅವರಾದರೂ ಗುರುತು ಹಿಡಿದು ಮಾತಾಡಿಸುತ್ತಿದ್ದರೇನೋ. ಯಾರನ್ನು ಕೇಳಿದರೂ ಏನೂ ಮಾಹಿತಿ ಸಿಗುತ್ತಿಲ್ಲ. ಪರಿಚಯವಿದ್ದವರು ಇಲ್ಲ ಅನ್ನುತ್ತಿದ್ದಾರಲ್ಲ. ಇನ್ನು ಯಾರನ್ನು ಕೇಳೋದು. ಎಲ್ಲಿಗೆ ಹೋಗೋದು. ಗಂಡನ ಮನೆಯವರ ಬಳಿ ಹೋಗಲೂ ಸಾಧ್ಯವೇ ಇಲ್ಲ. ಅಯ್ಯೋ ದೇವರೇ, ಬಿಡುಗಡೆಯಾಗದೇ ಇದ್ದಿದ್ದರೆ ಒಳ್ಳೆಯದಿತ್ತಲ್ಲ. ಯಾಕಾದರೂ ಬಿಡುಗಡೆ ಮಾಡಿದರೋ. ಈಗ ನಾನು ನರಕಕ್ಕೇ ಬಂದು ಬಿಟ್ಟೆನಲ್ಲ. ನಾನೆಲ್ಲಿಗೆ ಹೋಗಲಿ ಈಗ...

ಫಾತಿಮಾ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದಳು. ಆಕೆ ಜೈಲಿನಲ್ಲಿ ಸುಧೀರ್ಘ ಹದಿನಾಲ್ಕು ವರ್ಷ ಕಳೆದ ನಂತರ ಇದೀಗ ಸನ್ನಡತೆಯಡಿ ಸರ್ಕಾರ ಆಕೆಯನ್ನು ಬಿಡುಗಡೆ ಮಾಡಿತ್ತು. ಫಾತಿಮಾಳಿಗೆ ಏನೊಂದೂ ತೋಚುತ್ತಿಲ್ಲ.

ಆಕೆಯದು ಹಳೇ ಮೈಸೂರು ಭಾಗದ ಹಳ್ಳಿ. ಸಣ್ಣ ವಯಸ್ಸಿನಲ್ಲೇ ಆಕೆಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳಿಸಿಬಿಟ್ಟಿದ್ದರು. ಆಕೆಗೆ ಆಗ ಹದಿಮೂರೋ ಹದಿನಾಲ್ಕೋ ವರ್ಷವಿರಬೇಕು ಅಷ್ಟೆ. ಮನೆಯಲ್ಲಿ ಹೇಳತೀರದ ಬಡತನವಿತ್ತು. ಈಕೆಗೆ ಬೇರೆ ಒಡಹುಟ್ಟಿದವರು ಯಾರೂ ಜೀವಂತವಾಗಿ ಉಳಿದಿರಲಿಲ್ಲ. ತಾಯಿಗೆ ಇದ್ದ ಏಳು ಮಕ್ಕಳಲ್ಲಿ ಈಕೆಯೊಬ್ಬಳೇ ಬಾಕಿಯಾಗಿದ್ದವಳು. ಬಡತನ ಅವರನ್ನೆಲ್ಲಾ ಕಿತ್ತುಕೊಂಡಿತ್ತು. ಅದ್ಹೇಗೋ ಫಾತಿಮಾ ಉಳಿದುಕೊಂಡುಬಿಟ್ಟಿದ್ದಳು.

ಮದುವೆಯಾಗಿ ಗಂಡನ ಮನೆಗೆ ಹೋದ ಫಾತಿಮಾಳಿಗೆ ನೆಮ್ಮದಿಯೇನೂ ಸಿಕ್ಕಿರಲಿಲ್ಲ. ಸಿಕ್ಕಿದ ಸಂಬಂಧವೆಂದು ಹಿಂದೆ ಮುಂದೆ ಯೋಚಿಸದೆ ಫಾತಿಮಾಳ ಮದುವೆ ಮಾಡಿ ಮುಗಿಸಿದ್ದರು. ಹಾಗೆಲ್ಲಾ ಹಿಂದೆ ಮುಂದೆ ಯೋಚಿಸಿ ಸಂಬಂಧ ಕುದುರಿಸಿ ಮದುವೆ ಮಾಡಿ ಕಳಿಸುವ ಪರಿಸ್ಥಿತಿಯಲ್ಲಿ ಫಾತಿಮಾಳ ಕುಟುಂಬ ಕೂಡ ಇರಲಿಲ್ಲ. ಅವೆಲ್ಲಾ ಅವರಿಗೆ ಕೈಗೆಟುಕದ ವಿಚಾರವೇ ಆಗಿತ್ತು. ಗಂಡನ ಮನೆಯವರು ಕೂಡ ಅನುಕೂಲಸ್ಥರೇನೂ ಆಗಿರಲಿಲ್ಲ. ಒಂದು ಹರಕಲು ಮನೆ ಬಿಟ್ಟರೆ ಬೇರೇನೂ ಇರಲಿಲ್ಲ.

ಮನೆಯಲ್ಲಿ ಗಂಡು ಹೆಣ್ಣು ಅಂತ ಆರೇಳು ಜನರಿದ್ದರು. ಕೂಲಿ, ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕುಟುಂಬವಾಗಿತ್ತು ಅದು. ಬೇರೆ ಮನೆಗಳಿಂದ ಮದುವೆಯಾಗಿ ಬಂದ ಹೆಣ್ಣು ಮಕ್ಕಳು ಒಂದಿಬ್ಬರಿದ್ದರು ಅಲ್ಲಿ. ಫಾತಿಮಾ ವಿದ್ಯಭ್ಯಾಸವೇನೂ ಮಾಡಿರಲಿಲ್ಲ. ಗಂಡನ ಕತೇನೂ ಅಷ್ಟೇ ಆಗಿತ್ತು. ಮೂವತ್ತರ ಆಸುಪಾಸಿನಲ್ಲಿ ಇದ್ದ ಆತನಿಗೆ ಫಾತಿಮಾ ಎರಡನೆಯ ಹೆಂಡತಿಯಾಗಿದ್ದಳು. ಆತನ ಮೊದಲ ಹೆಂಡತಿ ತೀರಿಕೊಂಡಿದ್ದಳು. ಆಕೆಯಿಂದ ಇಬ್ಬರು ಗಂಡು ಮಕ್ಕಳನ್ನು ಆತ ಪಡೆದಿದ್ದ. ಆ ಮಕ್ಕಳು ಮೂರು ನಾಲ್ಕು ವಯಸ್ಸಿಗೆ ಬೆಳೆದಿದ್ದರು. ಶಾಲೆಗೇನೂ ಹೋಗುತ್ತಿರಲಿಲ್ಲ.

ಫಾತಿಮಾಳ ಗಂಡ ಸೋಮಾರಿಯಲ್ಲದಿದ್ದರೂ ಕುಡಿತದ ಚಟ ಅಂಟಿಸಿಕೊಂಡಿದ್ದ. ಬೀಡಿ ಹೇಗೂ ಮಾಮೂಲಿ. ಆಟವಾಡುವ ಎಳೆಯ ಪ್ರಾಯದ ಫಾತಿಮಾ ಗಂಡನ ಮನೆಯಲ್ಲಿ ತೀರಾ ಒಂಟಿಯಾಗಬೇಕಾಯಿತು. ಆಕೆಯ ವಾರೆಗಿತ್ತಿಯರೊಂದಿಗೆ ಗೆಳೆತನ ಕುದುರದೇ ಹೋಯಿತು. ಅದಕ್ಕೆ ವಯಸ್ಸಿನ ಅಂತರವೂ ಕಾರಣವಾಗಿತ್ತೇನೋ. ಗಂಡ ಕೂಡ ಫಾತಿಮಾಳೊಂದಿಗೆ ಕಾಲ ಕಳೆಯುತ್ತಿದ್ದುದು ಕಡಿಮೆ. ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದನೆಂದರೆ ಮತ್ತೆ ಬರುವುದು ರಾತ್ರಿಗೆ. ಅದೂ ಕೂಡ ಎಂಟೋ, ಹತ್ತೋ ಗಂಟೆಗೆ. ಆಗಲೇ ತೀರ್ಥ ಹೊಟ್ಟೆ ತುಂಬಾ ತುಂಬಿಸಿಕೊಂಡೇ ಬರುತ್ತಿದ್ದ. ಫಾತಿಮಾಳೊಂದಿಗೆ ಒಂದೋ ಎರಡೋ ಮಾತಾಡಿದರೆ ಆಡಿದ ಅಷ್ಟೆ. ದೊಡ್ಡ ಅನುಮಾನ ಸ್ವಭಾವದವನಾಗಿದ್ದ ಆತ ಫಾತಿಮಾಳನ್ನೂ ಅನುಮಾನದಿಂದಲೇ ನೋಡುತ್ತಿದ್ದ. ಆಕೆಯ ಮೇಲೆ ಪ್ರೀತಿ ಅಕ್ಕರೆ ಬೆಳೆಸಿಕೊಳ್ಳುವ ಗೊಡವೆಗೆ ಆತ ಹೋಗಿರಲಿಲ್ಲ.

ಫಾತಿಮಾಳ ತಂದೆತಾಯಿಯರು ಈಕೆ ಮದುವೆಯಾದ ವರ್ಷದಲ್ಲಿಯೇ ತೀರಿಕೊಂಡು ಬಿಟ್ಟಿದ್ದರು. ಹಾಗಾಗಿ ಫಾತಿಮಾ ಮಾನಸಿಕವಾಗಿ ದಿನೇ ದಿನೇ ಕುಗ್ಗಿ ಹೋಗತೊಡಗಿದಳು. ಅಭದ್ರತೆ, ಆತಂಕ, ದುಃಖ, ಅಸಹಾಯಕತೆಗಳಿಂದ ದಿನ ದೂಡತೊಡಗಿದ್ದಳು. ದಿನೇ ದಿನೇ ಬದುಕು ಅಸಹನೀಯವಾಗಿ ಉಸಿರು ಕಟ್ಟುವ ಪರಿಸ್ಥಿತಿಗೆ ಜಾರತೊಡಗಿತ್ತು. ಅಕ್ಕಪಕ್ಕದವರೊಂದಿಗೆ ಬೆರೆಯಲು ಕೂಡ ಕಷ್ಟಕರವಾದ ವಾತಾವರಣ.

ಫಾತಿಮಳ ಗಂಡನ ಮನೆಯವರಿಗೆ ಫಾತಿಮಾಳನ್ನು ಕಂಡರೆ ಅಷ್ಟಕ್ಕಷ್ಟೇ ಆಗಿತ್ತು. ಈಕೆಗೆ ಗಂಡನ ಬೆಂಬಲ ಕೂಡ ಇಲ್ಲದಿದ್ದರಿಂದ ಅವರೆಲ್ಲಾ ಈಕೆಯನ್ನು ನಿಂದಿಸುತ್ತಲೇ ಆ ಕೆಲಸ ಈ ಕೆಲಸ ಅಂತ ದುಡಿಸುವವರಾಗಿದ್ದರು. ಒಂದಿಬ್ಬರು ಇವಳ ಮೇಲೆ ಅನುಕಂಪದಿಂದ ನೋಡುತ್ತಿದ್ದರೂ ಅವರು ಚಿಕ್ಕವರಾಗಿದ್ದರು. ಅಲ್ಲದೇ ಅವರದು ಆ ಮನೆಯಲ್ಲಿ ನಿರ್ಧಾರಕ ಪಾತ್ರವೇನೂ ಆಗಿರಲಿಲ್ಲ. ಆಟವಾಡುವ ವಯಸ್ಸಿನ ಫಾತಿಮಾಳಿಗೆ ಇವನ್ನೆಲ್ಲಾ ನಿಭಾಯಿಸುವುದು ಬಹಳ ತ್ರಾಸದಾಯಕವಾಯಿತು.

ಈ ವಾತಾವರಣವನ್ನು ಬರಬರುತ್ತಾ ಫಾತಿಮಾ ಒಗ್ಗಿಸಿಕೊಳ್ಳತೊಡಗಿದಳು. ಹಾಗೂ ಹೀಗೂ ದಾಂಪತ್ಯ ಮುಂದುವರೆಯಿತು. ಮಕ್ಕಳೇನೂ ಆಗಲಿಲ್ಲ. ಆತನ ಸಮಸ್ಯೆಯೋ ಈಕೆಯ ಸಮಸ್ಯೆಯೋ ಗೊತ್ತಿಲ್ಲ. ಅದನ್ನು ವೈದ್ಯರ ಬಳಿ ಹೋಗಿ ತಿಳಿದುಕೊಳ್ಳುವ ಬಗ್ಗೆ ಅಲ್ಲಿ ಯಾರೂ ಯೋಚಿಸುವವರಾಗಿರಲಿಲ್ಲ. ಆದರೆ ದೂಷಣೆ ಮಾತ್ರ ಫಾತಿಮಾಳ ಮೇಲೆಯೇ ಇತ್ತು. ಗಂಡ ದಿನೇ ದಿನೇ ಕೃಶನಾಗತೊಡಗಿದ್ದ. ಫಾತಿಮಾಳಿಗೆ ಬೇರೆ ಸಂಬಂಧಗಳಿವೆಯೆಂದು ಜಗಳ ಮಾಡುತ್ತಿದ್ದ. ಫಾತಿಮಾ ಮನೆಕೆಲಸ ಮಾಡಿ ಬೀಡಿಕಟ್ಟುವ ಕೆಲಸವನ್ನೂ ಮಾಡಲು ತೊಡಗಿದ್ದರಿಂದ ಸ್ವಲ್ಪ ಸಂಪಾದನೆಯೂ ಅವಳಿಗೆ ಇತ್ತು. ಆದರೆ ಅದನ್ನು ಗಂಡ ಕಸಿದುಕೊಳ್ಳುವುದೂ ಕೂಡ ಆಗಾಗ್ಗೆ ನಡೀತಿತ್ತು. ಬೀಡಿ ಕಟ್ಟಲು ಶುರುಮಾಡಿದ್ದರಿಂದ ಆಗಾಗ ಮನೆಯಿಂದ ಹೊರಗೆ ಹೋಗುವ ಸಂದರ್ಭ ಇರುತ್ತಿತ್ತು. ಇದನ್ನೂ ಗಂಡ ದೂಷಿಸಲು ಬಳಸುತ್ತಿದ್ದ.

ಹೀಗೆ ಫಾತಿಮಾಳ ದಾಂಪತ್ಯಕ್ಕೆ ಸುಮಾರು ಆರೇಳು ವರ್ಷ ಸಾಗಿರಬಹುದು. ಒಂದು ದಿನ ರಾತ್ರಿ ಮಲಗಿದ ಗಂಡ ಬೆಳಿಗ್ಗೆ ಏಳಲಿಲ್ಲ. ಆತ ರಾತ್ರಿ ಯಾವಾಗ ಏನು ಕುಡಿದನೋ? ವಿಷಪ್ರಾಷನವಾಗಿದೆಯೆಂದು ವೈದ್ಯರ ಪ್ರಮಾಣ ಪತ್ರ ಹೇಳಿತ್ತು. ಆ ದಿನ ಮನೆಯ ಹಲವರು ಬೇರೆ ಯಾವುದೋ ಮನೆಯ ಸಮಾರಂಭಕ್ಕೆಂದು ಹೋಗಿದ್ದರು. ಮನೆಯಲ್ಲಿ ಇದ್ದವರು ಚಿಕ್ಕ ಪುಟ್ಟ ಮಕ್ಕಳು ಮಾತ್ರ. ಗಂಡನ ತಂದೆತಾಯಿಗಳು ಫಾತಿಮಾಳೇ ತಮ್ಮ ಮಗನಿಗೆ ವಿಷ ತಿನ್ನಿಸಿ ಕೊಲೆ ಮಾಡಿದ್ದಾಳೆಂದು ನೀಡಿದ ದೂರಿನ ಮೇರೆಗೆ ಪೊಲೀಸರು ಫಾತಿಮಾಳನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು.

ಫಾತಿಮಾಳಿಗೆ ಹೇಳೋರು ಕೇಳೋರು ಯಾರೂ ಇಲ್ಲದಿದ್ದುದರಿಂದ ವಕೀಲರನ್ನು ಇಟ್ಟು ಜಾಮೀನು ಪಡೆಯಲು ಸಾಧ್ಯವಾಗಿರಲಿಲ್ಲ. ಮೊದಲೇ ಜೀವನದಲ್ಲಿ ನೊಂದು ಬಸವಳಿದಿದ್ದ ಆಕೆ ಈಗ ಕೊಲೆ ಪ್ರಕರಣದಲ್ಲಿ ಸಿಲುಕಿದ್ದಳು. ಬಂದಿದ್ದನ್ನು ಅನುಭವಿಸೋದು ಅಂತ ನಿರ್ಲಿಪ್ತಳಾಗಿ ಇದ್ದುಬಿಟ್ಟಳು ಫಾತಿಮಾ. ಇರುವ ಅವಕಾಶ ಅದೊಂದೆ ಎಂದು ಅವಳಿಗೆ ಅನಿಸಿರಬೇಕು

ಗಂಡನ ಮನೆಯ ಪರಿಸ್ಥಿತಿ ಒಂದು ತರಹದ್ದಾಗಿದ್ದರೆ ಜೈಲಿನದು ಮತ್ತೊಂದು ತರಹದ ಕಷ್ಟಗಳು. ಜೈಲಿನಲ್ಲಿ ಮಹಿಳೆಯರ ಪಾಡು ಅತ್ಯಂತ ನಿಕೃಷ್ಠವಾಗಿತ್ತು. ಅಲ್ಲಿನ ವಾರ್ಡರುಗಳಲ್ಲಿ ಹಲವರು ಬಳಸುವ ಭಾಷೆ ಕೇಳುವುದೇ ಬಹಳ ಹಿಂಸೆಯಾಯಿತು. ಮಹಿಳಾ ವಾರ್ಡರುಗಳೇ ಆಗಿದ್ದರೂ ಮಹಿಳಾ ಬಂಧಿಗಳನ್ನು ಬಹಳ ತುಚ್ಛವಾಗಿ ಕಾಣುವವರೇ ಹಲವರು.

ಇನ್ನು ಜೈಲಿನಲ್ಲಿ ಮಹಿಳೆಯರಿಗೆ ಗಂಡಸರಿಗೆ ಇಲ್ಲದ ಹಲವು ನಿರ್ಭಂಧಗಳಿದ್ದವು. ಮಹಿಳೆಯರು ಜೈಲಿನಲ್ಲಿ ಗಂಡಸರಿಗಿಂತ ಹಲವು ಪಟ್ಟು ಪಾಡು ಪಡಬೇಕಾಗಿತ್ತು. ಗಂಡಸರಿಗೆ ಓಡಾಡಲು ಒಂದಷ್ಟು ಅವಕಾಶ ಇರುತ್ತಿತ್ತು. ಮಹಿಳೆಯರಿಗೆ ಅದಕ್ಕೆ ಸ್ಥಳವಾಗಲೀ, ಅವಕಾಶವಾಗಲೀ ಬಹಳ ಕಡಿಮೆ ಇತ್ತು. ಶೌಚಾಲಯ, ನೀರಿನ ಸೌಲಭ್ಯ ಸರಿಯಾಗಿ ಇರಲಿಲ್ಲ. ಮಹಿಳೆಯರಿಗೆಂದೇ ಬೇಕಾಗುವ ಕೆಲವು ಅತ್ಯಗತ್ಯ ಸೌಲಭ್ಯಗಳು ಸಿಗುತ್ತಿರಲಿಲ್ಲ. ಪುರುಷ ಬಂಧಿಗಳಿಗೆ ಇರುವ ಹಲವಾರು ಅವಕಾಶ, ಸೌಲಭ್ಯಗಳು ಕೂಡ ಮಹಿಳಾ ಬಂಧಿಗಳಿಗೆ ಇರಲಿಲ್ಲ. ಅಧಿಕಾರಿಗಳಿಗೆ ಕೂಡಿಹಾಕುವ ವಿಷಯದಲ್ಲಿ, ಲೆಕ್ಕ ನೋಡಿಕೊಳ್ಳುವ ವಿಷಯದಲ್ಲಿ ಇರುವ ಶ್ರದ್ಧೆ ಅತ್ಯಗತ್ಯ ಸೌಲಭ್ಯ ಒದಗಿಸುವ ವಿಷಯದಲ್ಲಿ ಇರಲಿಲ್ಲ.

ಅಲ್ಲಿ ಗರ್ಭಿಣಿಯರು, ಬಾಣಂತಿಯರು, ಪುಟ್ಟ ಮಕ್ಕಳು ಇದ್ದರೂ ಅವರಿಗೆಲ್ಲಾ ಅತ್ಯಗತ್ಯ ವ್ಯವಸ್ಥೆ ಇಲ್ಲದೇ ಪರದಾಟದ ಬದುಕು. ಊಟ ತಿಂಡಿಗಳದ್ದು ತೀವ್ರ ಕಷ್ಟದಾಯಕ. ಜೈಲಿನಲ್ಲಿ ಫಾತಿಮಾ ಮತ್ತೊಂದು ಸಂಕಷ್ಟದ ಲೋಕವನ್ನು ಹೊಕ್ಕಂತಹ ಅನುಭವ ಪಡೆದಳು.

ಪ್ರಕರಣದ ವಿಚಾರಣೆ ಮೂರು ವರ್ಷ ನಡೆಯಿತು. ಫಾತಿಮಾಳಿಗೆ ಯಾರ ಸಹಾಯವೂ ಇಲ್ಲದಿದ್ದುದರಿಂದ ತನ್ನ ಪರವಾಗಿ ವಾದಿಸಲು ಸೂಕ್ತ ವಕೀಲರನ್ನು ನೇಮಿಸಲು ಸಾಧ್ಯವಾಗಿರಲಿಲ್ಲ. ಗಂಡನ ಮನೆಯವರ ಸಾಕ್ಷ್ಯ ಹಾಗೂ ಸಾಂಧರ್ಭಿಕ ಸಾಕ್ಷ್ಯ ಫಾತಿಮಾಳಿಗೆ ವಿರುದ್ಧವಾಗಿದ್ದರಿಂದ ನ್ಯಾಯಾಲಯ ಫಾತಿಮಾಳಿಗೆ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಹಾಗೇ ಜೈಲಿಗೆ ಸೇರಿಸಲ್ಪಟ್ಟ ಫಾತಿಮಾ ಹದಿನಾಲ್ಕು ವರ್ಷಗಳ ನಂತರ ಸನ್ನಡತೆಯಡಿ ಬಿಡುಗಡೆಗೊಂಡು ಹೊರಬಂದು ಮತ್ತೂ ಅತಂತ್ರ ಸ್ಥಿತಿಗೆ ಬಿದ್ದು ಅಸಹಾಯಕಳಾಗಿ ನಿಂತಿದ್ದಾಳೆ.

ಜೈಲೇ ನನಗೆ ಈ ಹೊರಗಿನ ಲೋಕಕ್ಕಿಂತ ಚೆನ್ನಾಗಿತ್ತಲ್ಲ. ಅಲ್ಲೇ ಸತ್ತಿದ್ದರೆ ಸಾಕಿತ್ತು, ಯಾಕಪ್ಪಾ ಇಲ್ಲಿಗೆ ಬಂದೆ ... ಹೀಗೆ ಏನೇನೋ ಅವಳ ಮನಸ್ಸಿನಲ್ಲಿ ಯೋಚನೆಗಳು ನುಗ್ಗಿ ಬರತೊಡಗಿದೆ. ವಾಪಾಸು ಜೈಲಿಗೆ ಹೋಗಿಬಿಡಲೇ ಎಂದೂ ಯೋಚಿಸಿದಳು. ಆದರೆ ಅದಕ್ಕೆ ಅವಕಾಶವಿದೆಯೋ ಇಲ್ಲವೋ ಗೊತ್ತಿಲ್ಲ.

ಹಲವು ಯೋಚನೆ ತಾಕಲಾಟಗಳ ಮಧ್ಯೆ ಆಕೆ ಜೈಲಿಗೆ ಭೇಟಿ ನೀಡುತ್ತಿದ್ದ ಪರಿಚಯದ ಸಾಮಾಜಿಕ ಕಾರ್ಯಕರ್ತರೊಬ್ಬರ ನೆನಪಾಯಿತು ಆಕೆಗೆ. ಯಾವಾಗಲೋ ಅವರ ದೂರವಾಣಿ ಸಂಖ್ಯೆಯನ್ನು ಬರೆದಿಟ್ಟುಕೊಂಡಿದ್ದುದೂ ಕೂಡ ಆಕೆಗೆ ನೆನಪಾಯಿತು. ಅವರಿಗೆ ಹೇಗಾದರೂ ಸಂಪರ್ಕಿಸುವ ಬಗ್ಗೆ ಯೋಚಿಸತೊಡಗಿದಳು ಆಕೆ ಈಗ.

ಸಮಾಜ ಮಹಿಳೆಯನ್ನು ಹತ್ತು ಹಲವು ಬಂಧನಗಳ ಮೂಲಕ ಹಿಡಿದಿಡಲು ನಿರಂತರವಾಗಿ ಪ್ರಯತ್ನಿಸುತ್ತಿರುವುದು ಒಂದು ಕಡೆಯಾದರೆ, ಜೈಲಿಗೆ ತಳ್ಳಲ್ಪಟ್ಟ ಮಹಿಳೆಯರು ಜೈಲಿನೊಳಗೊಂದು ಜೈಲಿನಲ್ಲಿ ಮತ್ತೂ ನಿರ್ಲಕ್ಷಿತರಾಗಿ ಇರಲೇಬೇಕಾದ ಸ್ಥಿತಿಯಿದೆ ಎಂಬುದು ನಾಗರಿಕ ಸಮಾಜವೆನಿಸಿದ ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ...