ನಿಸ್ವಾರ್ಥ ಸ್ನೇಹಕ್ಕೆ ಬೆಲೆ ಕೊಡಲು ಹೋಗಿ ಜೈಲು ಪಾಲಾದ ಭಾಸ್ಕರ
PRISON STORIES

ನಿಸ್ವಾರ್ಥ ಸ್ನೇಹಕ್ಕೆ ಬೆಲೆ ಕೊಡಲು ಹೋಗಿ ಜೈಲು ಪಾಲಾದ ಭಾಸ್ಕರ

ಅವರದ್ದು ನಾಲ್ಕೇ ಜನರ ಚಿಕ್ಕ ಕುಟುಂಬ. ಮಕ್ಕಳಲ್ಲಿ ಹಿರಿಯವಳು ಹುಡುಗಿ. ಆಕೆಯ ಮದುವೆಯಂತೂ ಆಗಿತ್ತು. ಜೊತೆಗೆ ಎರಡು ಮಕ್ಕಳೂ ಆಗಿದ್ದವು. ಇನ್ನುಳಿದವರು ಅಪ್ಪ ಅಮ್ಮ ಮತ್ತು ಇವನು. ಇವನ ಹೆಸರು ಭಾಸ್ಕರ. ಕರ್ನಾಟಕದ ಮಲೆನಾಡು ಭಾಗದ ಊರಿನವನಿವನು.

ಇವನ ಕುಟುಂಬಕ್ಕೆ ಒಟ್ಟು ಮೂರು ಏಕರೆಯಷ್ಟು ಜಮೀನಿತ್ತು. ಕಾಫಿ, ಅಡಿಕೆ ಮತ್ತು ಸ್ವಲ್ಪ ಏಲಕ್ಕಿ ಬೆಳೆಯುತ್ತಿದ್ದರು. ಹೊಲ ಮನೆ ಕೆಲಸಗಳನ್ನು ನೋಡಿಕೊಳ್ಳುತ್ತಲೇ ಅಪ್ಪ ಅಮ್ಮನೊಂದಿಗೆ ಇರೋದರಲ್ಲಿ ಪರವಾಗಿಲ್ಲ ಅಂತ ಇದ್ದವನಿವನು. ಪಿಯುಸಿವರೆಗೆ ಓದಿಕೊಂಡಿದ್ದ ಆದರೆ ಯಾವುದೇ ದುಶ್ಚಟಗಳೂ ಈತನಿಗೆ ಇರಲಿಲ್ಲ. ತನ್ನ ತೋಟ, ಜಮೀನು, ಅಪ್ಪ-ಅಮ್ಮ ಮತ್ತು ಕೆಲವು ಗೆಳೆಯರು ಅಂತ ಹೀಗೆ ಓಡಾಡಿಕೊಂಡು ಇದ್ದ.

ಜೀವನ ಆರಾಮಾಗಿ ಸಾಗುತ್ತಿರುವಾಗ, ಒಂದು ದಿನ ಬೆಳಿಗ್ಗೆ ಸುಮಾರು 10 ಗಂಟೆಗೆ ಗೆಳೆಯನೊಬ್ಬ “ಬಾ ಹೀಗೆ ಹೋಗಿ ಬರೋಣ,” ಎಂದು ಕರೆದ. ಅವನು ಕಾರಿನಲ್ಲಿ ಬಂದಿದ್ದ. ಅವನ ಜೊತೆಯಲ್ಲಿ ಒಂದಿಬ್ಬರೂ ಇದ್ದರು. ಮೊದಲಿನಿಂದ ಒಡನಾಟವಿದ್ದ ಕಾರಣದಿಂದ ಸರಿ ಎಂದು ಭಾಸ್ಕರ್‌ ಅವನೊಂದಿಗೆ ಹಿಂದೆ ಮುಂದೆ ವಿಚಾರಿಸದೇ ಹೊರಟ. ಆವತ್ತು ಬೇರೆ ತುರ್ತು ಕೆಲಸಗಳೇನೂ ಅವನಿಗಿರಲಿಲ್ಲ.

ಇವರ ಕಾರಿನ ಪ್ರಯಾಣದಲ್ಲಿ ಮದ್ಯೆ ಮತ್ತಿಬ್ಬರು ಸೇರಿಕೊಂಡರು. ಅವರು ಭಾಸ್ಕರನಿಗೆ ಪರಿಚಿತರೇನೂ ಆಗಿರಲಿಲ್ಲ. ಆದರೆ ಅದಕ್ಕೆ ಈತ ತಲೆ ಕೆಡಿಸಿಕೊಳ್ಳಲಿಲ್ಲ. ಹರಟೆ, ತಮಾಷೆ ಮಾಡುತ್ತ ಪ್ರಯಾಣ ಸಾಗುತ್ತಿತ್ತು. ಒಂದು ಹಳ್ಳಿಯ ಬಳಿ ಕಾರ್‌ ನಿಲ್ಲಿಸಿ ‘ಮತ್ತೊಬ್ಬರನ್ನು’ ಕರೆದುಕೊಂಡು ಕಾರಿನಲ್ಲಿ ಹತ್ತಿಸಿಕೊಂಡರು. ಭಾಸ್ಕರನಿಗೆ ಆತನ ಬಗ್ಗೆ ಗೊತ್ತಿತ್ತು. ಆದರೆ ಸ್ನೇಹವೇನೂ ಇರಲಿಲ್ಲ.

ನಂತರ ಇಪ್ಪತ್ತೈದು ಕಿ. ಮೀ ಪ್ರಯಾಣಿಸದ ಮೇಲೆ ಯಾವುದೋ ಗುಡ್ಡದ ಬದಿ ಮೂತ್ರಕ್ಕೆಂದು ಕಾರು ನಿಲ್ಲಿಸಿದರು. ಅದರ ಪಕ್ಕದಲ್ಲೇ ಕಾಡಿತ್ತು. ಕೆಳಗೆ ದೊಡ್ಡ ಪ್ರಪಾತವಿತ್ತು. ಕಾರಿನಿಂದ ಇಳಿದ ಕೂಡಲೇ ಅದು ಎರಡನೇ ಬಾರಿಗೆ ಯಾರನ್ನೋ ಹತ್ತಿಸಿಕೊಂಡಿದ್ದರಲ್ಲ ಆತನ ಹೊಟ್ಟೆಯನ್ನು ಬಗೆದೇ ಬಿಟ್ಟರು. ನೋಡು ನೋಡುತ್ತಿದ್ದಂತೆ ಆ ವ್ಯಕ್ತಿ ಕುಸಿದು ಬಿದ್ದೇ ಬಿಟ್ಟ. ಆತನನ್ನು ಮುಗಿಸಿ ಬಿಡಬೇಕೆಂದು ಇವರು ಹಟ ತೊಟ್ಟು ಬಂದಿದ್ದರು. ಆತ ಕುಸಿದು ಬಿದ್ದರೂ ಅಮಾನವೀಯವಾಗಿ ಚಚ್ಚೋದನ್ನು ಮಾತ್ರ ಇವರು ಬಿಡಲಿಲ್ಲ.

ಭಾಸ್ಕರನಿಗೆ ಒಂದು ಕ್ಷಣಕ್ಕೆ ಏನಾಗುತ್ತಿದೆ ಅಂತ ಗೊತ್ತಾಗಲಿಲ್ಲ. ಗಾಬರಿಯಾಗಿಬಿಟ್ಟ. ಅವನೊಳಗೆ ಹಲವಾರು ಭಾವಗಳು ಒಮ್ಮಿಂದೊಮ್ಮೆಲೆ ನುಗ್ಗಿ ಬರುತ್ತಿರುವಂತೆ ಭಾಸವಾಗತೊಡಗಿತು. ಭಯ, ಆತಂಕಗಳು ಉಂಟಾಗಿ ಏನು ಮಾಡಲೂ ತೋಚದೇ ಅವಕ್ಕಾಗಿ ಸ್ತಭ್ದನಾಗಿ ನಿಂತು ಬಿಟ್ಟ.

ಭಾಸ್ಕರನನ್ನು ಸ್ನೇಹದ ನೆಪದಲ್ಲಿ ಕರೆದುಕೊಂಡು ಹೋಗಿದ್ದೇ ಈ ಅಪರಾಧ ಕೃತ್ಯ ಮಾಡಲೆಂದಾಗಿತ್ತು. ಸ್ನೇಹದಿಂದ ಇದ್ದ ಆದರೆ ತನ್ನ ವೈಯಕ್ತಿಕ ದ್ವೇಷ ಹಾಗೂ ಪ್ರತೀಕಾರವನ್ನು ತೀರಿಸಿಕೊಳ್ಳಲು ಭಾಸ್ಕರ್‌ನ ಸ್ನೇಹಿತ ಹೀಗೆ ಮಾಡಿಬಿಟ್ಟಿದ್ದ. ಬಾಡಿಗೆ ಕೊಲೆಗಾರರು ಜೊತೆಗೆ ತನ್ನ ಸ್ನೇಹಿತರನ್ನೂ ಅವನು ಬಳಸಿಕೊಂಡಿದ್ದ. ಅದೂ ಕೊನೆ ಕ್ಷಣದವರೆಗೂ ಆ ಯಾರಿಗೂ ಗೊತ್ತಾಗದಂತೆ ಗುಟ್ಟಾಗಿಯೇ ಇಟ್ಟಿದ್ದ.

ಇನ್ನೇನು? ಮುಂದಿನ ನಡೆಗಳು ಮಾಮೂಲಿ ಅಲ್ಲವೇ. ಈ ಕೊಲೆ ಮಾಡಿದವರ ಬಗ್ಗೆ ಪೊಲೀಸರಿಗೆ ತಿಳಿಯಲು ತಡವೇನೂ ಆಗಲಿಲ್ಲ. ಭಾಸ್ಕರನ ಹೆಸರನ್ನೂ ತನಿಖೆಯಲ್ಲಿ ತಳಕುಹಾಕಿಕೊಂಡಿತು. ವಾಸ್ತವವ ತಿಳಿದು ತನಿಖೆ ನಡೆಸಿ ದೂರು ದಾಖಲಿಸುವ ಪರಿಪಾಠವನ್ನು ಭಾರತೀಯ ಪೊಲೀಸ್ ವ್ಯವಸ್ಥೆ ಇನ್ನೂ ರೂಢಿಸಿಕೊಂಡಿಲ್ಲದೇ ಇರುವುದರಿಂದ ಅಪರಾಧದಲ್ಲಿ ಯಾವುದೇ ಪಾತ್ರ ಇಲ್ಲದಿದ್ದರೂ ಭಾಸ್ಕರನಂತವರು ಬಂಧನಕ್ಕೊಳಗಾಗಿ ನಿರಪರಾಧಿಯೂ ಅಪರಾಧಿಯಾಗಿ ನಿಲ್ಲಬೇಕಾಗುತ್ತದೆ. ಹೀಗೆ ಅಪರಾಧಿಗಳೊಂದಿಗೆ ನಿರಪರಾಧಿಯಾದ ಭಾಸ್ಕರನೂ ಜೈಲು ಪಾಲಾದ.

ಆದರೆ ಇದು ಭಾಸ್ಕರನ ಕುಟುಂಬವನ್ನು ಇನ್ನಿಲ್ಲದಂತೆ ಬಾಧಿಸಿತು. ವೃದ್ಧಾಪ್ಯದಲ್ಲಿದ್ದ ಆತನ ತಂದೆ-ತಾಯಿ ಮಗನ ಆಸರೆಯಿಲ್ಲದೆ ಕುಸಿದು ಹೋದರು. ವಯಸ್ಸು ಮೂವತ್ತರ ಸನಿಹದಲ್ಲಿದ್ದ ಭಾಸ್ಕರನಿಗೆ ಮದುವೆಯೂ ಆಗಿರಲಿಲ್ಲ. ಇದ್ದ ಅಕ್ಕನಿಗೆ ಮದುವೆಯಾಗಿದ್ದರೂ ಆಕೆ ತಂದೆ-ತಾಯಿಯನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅಲ್ಲದೆ ಜಮೀನಿನ ಕೆಲಸಗಳನ್ನು ನೋಡಿಕೊಳ್ಳಲೂ ಈಗ ಯಾರೂ ಇಲ್ಲದಂತಾಯಿತು. ಇದರಿಂದ ತೋಟವೂ ಹಾಳಾಗತೊಡಗಿತು. ಭಾಸ್ಕರನ ತಂದೆ-ತಾಯಿ ದಿನೇ ದಿನೇ ಕೃಶರಾಗತೊಡಗಿದರು.

ಜೈಲಿನಲ್ಲಿ ಭಾಸ್ಕರನ ಸ್ಥಿತಿಯನ್ನಂತೂ ಹೇಳತೀರದು. ಮನೆಯ ತಂದೆ ತಾಯಿಯ ಚಿಂತೆ ಒಂದು ಕಡೆಯಾದರೆ, ಜಮೀನು ತೋಟದ ಚಿಂತೆ ಮತ್ತೊಂದು ಕಡೆ ಭಾಸ್ಕರನಿಗೆ. ಜೈಲಿನ ನರಕಯಾತನೆ ಅವನನ್ನು ಹಣ್ಣುಗಾಯಿ ಮಾಡಿತ್ತು. ನೆಂಟರಿಷ್ಟರ ಬೆಂಬಲವೂ ಹೇಳುಕೊಳ್ಳುವಂತಿರಲಿಲ್ಲ. ಅವರದದ್ದು ಲೆಕ್ಕಾಚಾರದ ವ್ಯವಹಾರಿಕ ಸಂಬಂಧವಾಗಿತ್ತು. ಭಾಸ್ಕರನ ಸ್ನೇಹಿತನೆಂಬ ಆ ವ್ಯಕ್ತಿ ಹೀಳಿದ್ದು ಹೀಗೆ, “ಬೇಗ ಜಾಮೀನಿನಡಿ ಬಿಡಿಸಿ ಕಳಿಸುತ್ತೇನೆ. ನ್ಯಾಯಾಲಯದ ಖರ್ಚು ವೆಚ್ಚಗಳನ್ನು ನೋಡಿಕೊಂಡು ಆರೋಪದಿಂದ ಮುಕ್ತಗೊಳಿಸುತ್ತೇನೆ. ನೀನೇನೂ ಹೆದರಬೇಡ. ಮನೆ ಮತ್ತು ತಂದೆ-ತಾಯಿ ಬಗ್ಗೆ ಚಿಂತೆ ಮಾಡಬೇಡ,” ಎಂದಿದ್ದ.

ಹೀಗೆ ಏನೇನೋ ಭರವಸೆಗಳನ್ನು ನೀಡಿದ್ದ. ಆದರೆ ಭಾಸ್ಕರನಿಗೆ ಆತನ ಮಾತುಗಳ ಮೇಲೆ ಪೂರ್ತಿ ನಂಬಿಕೆ ಬರಲಿಲ್ಲ. ಆದರೆ ಯಾರ ಸಹಾಯವೂ ಇಲ್ಲದಿದ್ದಾಗ ಈ ರೀತಿಯ ಭರವಸೆಗಳು ಮನುಷ್ಯನಲ್ಲಿ ಸಮಾಧಾನ ಉಂಟುಮಾಡುತ್ತವೆ. ಎಲ್ಲಾ ಪ್ರತಿಕೂಲವಾಗಿರುವಾಗ ಈ ರೀತಿಯ ಮಾತು ಮತ್ತು ಭರವಸೆಗಳು ಅನುಕೂಲವಾಗಬಹುದೆಂಬ ವಿಶ್ವಾಸವನ್ನು ಅಲ್ಪ ಸಮಯವಾದರೂ ನೀಡುವ ಸಾಧ್ಯತೆ ಇರುತ್ತದೆ. ಇಲ್ಲೂ ಕೂಡ ಭಾಸ್ಕರನಿಗೆ ಅಷ್ಟೇ ಆಯಿತು.

ಆ ಸ್ನೇಹಿತ ನೀಡಿದ ಭರವಸೆ ಪೂರ್ತಿ ನಿಜವಾಗಿರಲಿಲ್ಲ. ಆತ ಮನೆ ಕಡೆಗೆ ಒಂದಷ್ಟು ಸಹಾಯವನ್ನು ಮಾಡಿದ್ದ. ಹಾಗಂತ ಅದನ್ನು ಸಹಾಯ ಅಂತ ಹೇಳೋದು ಸರಿಯಾಗುವುದಿಲ್ಲ. ಆತ ಭಾಸ್ಕರನಿಗೆ ಯಾವುದನ್ನೂ ತಿಳಿಸದೇ ತನ್ನ ಸ್ವಾರ್ಥಕ್ಕಾಗಿ ಬಳಸಿದ್ದಲ್ಲದೆ, ಭಾಸ್ಕರನ ತಂದೆ ತಾಯಿ, ಭವಿಷ್ಯ, ಮನೆ, ಜಮೀನು ಎಲ್ಲವನ್ನೂ ಸಂಕಷ್ಟಕ್ಕೆ ದೂಡಿದ್ದ. ಇದು ಮಹಾದ್ರೋಹವೇ ತಾನೇ? ಸ್ನೇಹವನ್ನು ದುರುಪಯೋಗ ಪಡಿಸಿಕೊಂಡಿದ್ದು ಕಡಿಮೆ ಅಪರಾಧವೇನೂ ಅಲ್ಲವಲ್ಲ. ಹಲವು ಕೊಲೆಗಳಿಗೆ ಸಮನಾಗುವ ಕೃತ್ಯವನ್ನು ಆತ ಮಾಡಿದ್ದ.

ಆದರೆ ಪರಿಸ್ಥಿತಿ ಭಾಸ್ಕರನಿಗೆ ಅನುಕೂಲಕರವಾಗಿ ಮಾರ್ಪಡಲಿಲ್ಲ. ಕೊಲೆ ಪ್ರಕರಣವಾಗಿದ್ದರಿಂದ ಪೊಲೀಸರು ಆರೋಪಪಟ್ಟಿ ಹಾಜರು ಪಡಿಸುವವರೆಗೂ ಜಾಮೀನು ಸಿಗೋದು ಕಷ್ಟಕರವಾಗಿತ್ತು. ಭಾಸ್ಕರನಿಗೆ ಎಷ್ಟು ಬೇಗ ಸಾಧ್ಯವಾಗುತ್ತೋ ಅಷ್ಟು ಬೇಗ ಜಾಮೀನು ಪಡೆಯಬೇಕೆಂಬ ಧಾವಂತವಿತ್ತು. ಆದರೆ ಯಾವುದೂ ಭಾಸ್ಕರನಿಗೆ ಅನುಕೂಲವಾಗಿರಲಿಲ್ಲ. ಆರೋಪ ಪಟ್ಟಿ ಸಲ್ಲಿಸಲು 3 ತಿಂಗಳ ಗರಿಷ್ಠ ಅವಧಿ ಪೊಲೀಸರು ತೆಗೆದುಕೊಂಡರು.

ಅದಾದ ಮೇಲೆ ಜಾಮೀನಿಗೆ ಅರ್ಜಿ ಸಲ್ಲಿಸಿದರೂ ನ್ಯಾಯಾಲಯದಲ್ಲಿ ಜಾಮೀನಿಗೆ ವಿರುದ್ಧವಾಗಿ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಿದ್ದನ್ನು ಮಾನ್ಯ ಮಾಡಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿತು. ಭಾಸ್ಕರನ ವಿಚಾರವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಜವಾಬ್ದಾರಿ ಹೊತ್ತಿದ್ದ ವಕೀಲರು ಸರಿಯಾಗಿ ಕೆಲಸ ನಿರ್ವಹಿಸದ ಕಾರಣದಿಂದ ಭಾಸ್ಕರನ ಬಿಡುಗಡೆಯ ಭಾಗ್ಯ ಈಡೇರಲೇ ಇಲ್ಲ. ಜೈಲಿನಿಂದ ಹೊರಬರಲು ಸಾಧ್ಯವಾಗಲೇ ಇಲ್ಲ.

ಭಾಸ್ಕರನ ಸ್ನೇಹಿತ ಹೇಳಿದ ಭರವಸೆಗಳೂ ನೆರವಿಗೆ ಬರಲಿಲ್ಲ. ಆತ ಮೊದಲೇ ಅಪ್ರಮಾಣಿಕನಾಗಿದ್ದರಿಂದ ಆತನ ಮಾತು ಭರವಸೆಗಳು ತೋರುಗಾಣಿಕೆಯದಾಗಿದ್ದವು. ಆರಂಭದಲ್ಲಿ ಏನೋ ಚೂರು ಸಹಾಯ ಮಾಡಿದ್ದ. ಆದರೆ ಜಾಮೀನು ವಿಷಯದಲ್ಲಿ ಸ್ನೇಹಿತ ನೆರವಾಗಲೇ ಇಲ್ಲ. ಜೈಲಿನಲ್ಲಿಯೇ ದಿನಗಳು, ತಿಂಗಳುಗಳು, ವರ್ಷಗಳು ಸಾಗಿದವು. ನಾಲ್ಕು ವರ್ಷಗಳ ವಿಚಾರಣೆಯ ನಂತರ, ವಿಚಾರಣಾ ನ್ಯಾಯಾಲಯ ಆ ಪ್ರಕರಣದ ಎಲ್ಲರಿಗೂ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಿತು. ಈ ತೀರ್ಪು ಬಂದಾಗ ಭಾಸ್ಕರನ ಅಪ್ಪ ಅಮ್ಮ ಆಗಲೇ ತೀರಿಕೊಂಡಿದ್ದರು.

ಅವರನ್ನು ಕೊನೇ ಬಾರಿ ನೋಡಲು ಭಾಸ್ಕರ ಬಹಳ ಕಷ್ಟ ಪಡಬೇಕಾಯಿತು. ಕೊನೆಗೂ ಸಂಬಂಧಪಟ್ಟವರ ಕೈಬಿಸಿ ಮಾಡಿ ಪೊಲೀಸ್ ಬೆಂಗಾವಲಿನಲ್ಲಿ ಹೋಗಲು ಸಫಲನಾಗಿದ್ದ. ಬರುಬರುತ್ತ ಅವರಿಗಿದ್ದ ಭೂಮಿ ಮನೆ ಕರಗುತ್ತ ಹೋಯಿತು. ವಕೀಲರ ಫೀಜು, ಅಪ್ಪ ಅಮ್ಮನ ಚಿಕಿತ್ಸೆ ಖರ್ಚುಗಳಿಗಾಗಿ ಸ್ವಲ್ಪ ಸ್ವಲ್ಪ ಆಸ್ತಿಯನ್ನೂ ಮಾರಾಟ ಮಾಡಿಯಾಗಿತ್ತು. ಕೊನೆಗೆ ಮನೆ ಮಾತ್ರ ಉಳಿಯಿತು. ಕೊನೆಗೆ ಕುಟುಂಬವೇ ಕಣ್ಮರೆಯಾಗುವ ಹಾಗಾಯಿತು.

ಸುಮ್ಮನೆ ಕುಳಿತರೆ ಆಗುವುದಿಲ್ಲ ಎಂದುಕೊಂಡು ಉಚ್ಚ ನ್ಯಾಯಾಲಯದಲ್ಲಿ ತನ್ನ ವಿರುದ್ಧದ ತೀರ್ಪನ್ನು ಪ್ರಶ್ನಿಸಿ ಭಾಸ್ಕರ ಮನವಿ ಸಲ್ಲಿಸಿದ. ಅದು 4 ವರ್ಷಗಳ ನಂತರ ವಿಚಾರಣೆಗೆ ಬಂದು, ಭಾಸ್ಕರ ಆರೋಪಮುಕ್ತನೆಂಬ ತೀರ್ಪು ಬಂತು. ತಾನು ಮಾಡದ ಅಪರಾಧಕ್ಕಾಗಿ ಒಟ್ಟು 8 ವರ್ಷಗಳನ್ನು ಜೈಲಿನಲ್ಲಿ ಕೊಳೆಯಬೇಕಾದ ಸ್ಥಿತಿ ಭಾಸ್ಕರನದಾಯಿತು. ಆದರೆ ಜೈಲಿನ ಉಸಿರು ಕಟ್ಟಿಸುವ ವಾತಾವರಣದ ಜೊತೆಗೆ ತನಗಾಗುತ್ತಿರುವ ಮಾನಸಿಕ ಯಾತನೆಗಳ ಮಧ್ಯೆಯೂ ಕೆಟ್ಟವರ ಸಹವಾಸ ಮಾಡದೇ, ದುಶ್ಚಟಕ್ಕೆ ದಾಸನಾಗದೇ ಓದಿನಲ್ಲಿ ತೊಡಗಿಸಿಕೊಂಡು ಬಿಎ ಪದವೀಧರನಾಗಿದ್ದ.

ಸ್ನೇಹಿತ ಮನೆಗೆ ಬಂದು ಕರೆದನೆಂದು ಹಿಂದೆ ಮುಂದೆ ಯೋಚಿಸದೇ, ಆತನ ಜೊತೆಗೆ ಹೋಗಿದ್ದು, ಕಾರಿನಲ್ಲಿ ಅಪರಿಚಿತರಿದ್ದರೂ ಎಚ್ಚರ ವಹಿಸದೇ ಹೋಗಿದ್ದು ಇವು ಭಾಸ್ಕರನಿಗೆ ಭಾರಿ ಬೆಲೆ ತೆರುವಂತೆ ಮಾಡಿತು. ನಷ್ಟದ ಜೊತೆಗೆ ಜೀವನವನ್ನೇ ನರಕ ಮಾಡಿತು. ಇಂತಹ ಪರಿಸ್ಥಿತಿಗೆ ಸಿಲುಕುವ ಅಮಾಯಕರನ್ನು ರಕ್ಷಿಸುವುದು ಬಿಟ್ಟು ಅವರನ್ನೇ ಪ್ರಕರಣದಲ್ಲಿ ಸಿಲುಕಿಸಿ ಬದುಕುಗಳನ್ನೇ ಬರ್ಬಾದು ಮಾಡುವ ನಮ್ಮ ವ್ಯವಸ್ಥೆಯ ಸಾಂಸ್ಥಿಕ ಸಂರಚನೆಗಳ ಕತೆಯನ್ನು ಹೇಳಬೇಕೆನಿಲ್ಲ. ಭಾಸ್ಕರನಂತ ಹಲವರು ಈಗಲೂ ಇಂತಹ ವಿಷಯಗಳಲ್ಲಿ ಬಲಿಯಾಗುತ್ತಲೇ ಬರಬೇಕಾಗುತ್ತಿದೆ.

ವಿಶೇ‍ಷ ಸೂಚನೆ: ಇಲ್ಲಿ ಹೆಸರನ್ನು ಬದಲಾಯಿಲಾಗಿದೆ