samachara
www.samachara.com
‘ಸಣ್ಣಯ್ಯನ ದೊಡ್ಡ ಕತೆ’: ಸಂಬಂಜ ಅಲ್ಲ; ಆಸ್ತಿ ಅನ್ನಾದು ದೊಡ್ದು ಕನಾ!
PRISON STORIES

‘ಸಣ್ಣಯ್ಯನ ದೊಡ್ಡ ಕತೆ’: ಸಂಬಂಜ ಅಲ್ಲ; ಆಸ್ತಿ ಅನ್ನಾದು ದೊಡ್ದು ಕನಾ!

ಎಲ್ಲವೂ ವಿಚಿತ್ರ ಎನಿಸತೊಡಗಿವೆ. ರಸ್ತೆಗಳ ನುಣುಪು, ವಿಸ್ತಾರ, ಅಂಗಡಿಗಳು, ಕಟ್ಟಡಗಳು, ಅಲಂಕಾರಗಳು ಹೀಗೆ ಒಂದೇ ಎರಡೇ? ತುಂಬಾನೇ ಬದಲಾವಣೆಯಾದಂತಾಗಿದೆ. ಬಸ್ಸುಗಳು, ಕಾರುಗಳು ಮತ್ತು ಬೈಕುಗಳು ಹೀಗೆ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ರಸ್ತೆಯಲ್ಲಿ ತುಂಬಿಕೊಂಡಿವೆ. ಸ್ಕೂಟರುಗಳು ಕಣ್ಮರೆಯಾದಂತೆ ಅನಿಸುತ್ತಿದೆ. ವೆಸ್ಪಾ, ಬಜಾಜ್  ಜೊತೆಗೆ ಲೂನಾ, ಟಿವಿಎಸ್ ಮೊಪೆಡ್ ಅಂತ ಇದ್ದವು. ಆದರೆ ಅವೆಲ್ಲಾ ಈಗೇನಾದವೋ…?

ಹುಡುಗ ಹುಡುಗಿಯರ ವೇಷ ಭೂಷಣಗಳೂ ಬದಲಾಗಿವೆ. ಕೆಲವರು ಬಟ್ಟೆ ಹಾಕಿಲ್ಲವೇನೋ ಎನಿಸುವಷ್ಟು ಚರ್ಮಕ್ಕೆ ಅಂಟಿಕೊಂಡಿರುವ ಮತ್ತು ಚರ್ಮದ್ದೇ ತರಹದ ಬಟ್ಟೆಯನ್ನು ಹಾಕಿಕೊಂಡಿದ್ದಾರೆ. ಚರ್ಮ ಮತ್ತು ಬಟ್ಟೆಯ ಬಣ್ಣದ ವ್ಯತ್ಯಾಸವೂ ಸರಿಯಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಅದನ್ನು ಗಮನಿಸಿ ನೋಡಿದರೆ ಮಾತ್ರ ಗೊತ್ತಾಗುತ್ತದೆ. ಹಾಗೆ ನೋಡಲು ಹೋದರೆ, ಅವರೇನು ತಿಳಕೊಳ್ತಾರೋ ಗೊತ್ತಿಲ್ಲ. ಆದರೆ ಮನಸ್ಸಿನಲ್ಲಿ ಮೂಡಿದ ಕುತೂಹಲ ತಣಿಯಬೇಕಾದರೆ ನೋಡಲೇಬೇಕಲ್ಲವೇ…?

ಈ ನಗರದಲ್ಲಿ ಕೆಲವರು ಮಾತ್ರವೇ ಹಿಂದೆ ಹಳ್ಳೀಲಿ ಇದ್ದ ರೈತರ ತರಹ ಇದ್ದಾರಲ್ವ? ಹೀಗೆ ಏನೇನೋ ಯೋಚನೆಗಳು. ಯಾವುದೂ ಒಂದೇ ರೀತಿಯಲ್ಲಿ ಮೂಡುತ್ತಿಲ್ಲ. ಹಲವು ಭಾವನೆಗಳು ಒಮ್ಮೆಗೆ ನುಗ್ಗಿ ಬಂದಂತೆ ಅನಿಸಿ, ಅವುಗಳು ಒಂದಕ್ಕೊಂದು ಗುದ್ದಿ ಅಲ್ಲಿಂದ ಟಿಸಿಲಾಗಿ ಪುಟಿದು ತಲೆಯೊಳಗೆ ತೂರಿ ಬರುತ್ತಿರುವ ಅನುಭವವಾಗುತ್ತಿದೆ ಅವನಿಗೆ.

ಅವನು ಇದೀಗಷ್ಟೇ ಜೈಲಿನಿಂದ ಹೊರಬಂದಿದ್ದಾನೆ; ಹೆಸರು ಸಣ್ಣಯ್ಯ. ವಯಸ್ಸೀಗ ಅರವತ್ತಕ್ಕೆ ಸಮೀಪಿಸುತ್ತಿದೆ. ಓದಲು ಬರೆಯಲು ಬರವಷ್ಟು ಅಕ್ಷರಭ್ಯಾಸವಿದೆ. ಕಳೆದ 13 ವರ್ಷಗಳಿಂದ ಜೈಲಿನಲ್ಲಿ ಬಂಧಿಯಾಗಿದ್ದ. ಹಾಗಂತ ಕಾನೂನು ರೀತಿ ಯಾವುದೇ ಶಿಕ್ಷೆ ವಿಧಿಸಿರಲಿಲ್ಲ. ಆದರೂ ಸಣ್ಣಯ್ಯ ಅಷ್ಟು ವರ್ಷಗಳು ‘ಕೃಷ್ಣನ ಜನ್ಮಸ್ಥಾನ’ ಅಂತ ಕರೆಸಿಕೊಳ್ಳುವ ಜಾಗದಲ್ಲಿಯೇ ಬಂದಿಯಾಗಿದ್ದ. ಇದು ಅವನದೇ ಜೀವನದ ಕಥೆ.

ಹಳೇ ಮೈಸೂರು ಪ್ರಾಂತ್ಯದ ಹಳ್ಳಿಗೆ ಸೇರಿದವನು ಸಣ್ಣಯ್ಯ. ಇವರ ಮನೆಯದ್ದು ಅಂತ ಒಟ್ಟು ಇಪ್ಪತ್ತು ಏಕರೆಯಷ್ಟು ಭೂಮಿಯಿತ್ತು. ನೀರಾವರಿಯೇನೂ ಇರಲಿಲ್ಲ. ಒಂದೆರಡು ಬೋರು ಹೊಡೆಸಿದ್ದರು. ಅದರ ನೀರು ಆರೇಳು ಏಕರೆಗೆ ಆಗುತ್ತಿತ್ತು. ಕಬ್ಬು, ಭತ್ತ, ತೆಂಗು ಬೆಳೆಯುತ್ತಿದ್ದರು. ಮನೇಲಿ ಒಟ್ಟು ಹನ್ನೆರಡು ಮಕ್ಕಳು. ಇವನೇ ಸಣ್ಣವನು. ಅದರಲ್ಲಿ ಮೂರು ಜನ ಅಕ್ಕಂದಿರಿದ್ದರು. ಅವರಿಗೆ ಮದುವೆ, ಮಕ್ಕಳು ಆಗಿದ್ದವು. ತಂದೆ ತೀರಿಕೊಂಡಿದ್ದರು. ತಾಯಿ ಸೇರಿದಂತೆ  ಅಣ್ಣ ತಮ್ಮರೆಲ್ಲಾ ಒಟ್ಟಾಗಿರುವ ಒಂದು ಅವಿಭಕ್ತ ಕುಟುಂಬವಾಗಿತ್ತು ಇವರದು.

ಹಣಕಾಸು ಮುಗ್ಗಟ್ಟು ಅಂತ ಏನೂ ಇರಲಿಲ್ಲ. ಎಲ್ಲರೂ ಅಲ್ಪ ಸ್ವಲ್ಪ ಓದಿಕೊಂಡಿದ್ದರು. ಜಾಸ್ತಿ ಓದೋ ಅವಶ್ಯಕತೆ ಅವರಿಗೆ ಅನಿಸಿರಲಿಲ್ಲವೋ ಅಥವಾ ಜಮೀನಿನಲ್ಲಿ ದುಡಿಯುವ ಅವಶ್ಯಕತೆ ಇದ್ದಿದ್ದರಿಂದಲೋ ಪ್ರೌಢಶಾಲೆ ಮೆಟ್ಟಿಲನ್ನು ಮಾತ್ರ ಯಾರೂ ತುಳಿದಿರಲಿಲ್ಲ. ಎಲ್ಲರೂ ದುಡೀತಾ ಒಟ್ಟಾಗಿ ಇದ್ದಿದ್ದರಿಂದ ಜೀವನ ಸಾಗುತ್ತಿತ್ತು. ಹಿರಿಯಣ್ಣನ ನೇತೃತ್ವದಲ್ಲಿ ಎಲ್ಲರೂ ಸಾಕಷ್ಟು ಹೊಂದಿಕೊಂಡು ಹೋಗುತ್ತಿದ್ದರು. ಎಲ್ಲರಿಗೂ ಮದುವೆಯೂ ಆಗಿತ್ತು. ಹಲವರಿಗೆ ಮಕ್ಕಳುಗಳು ಆಗಿದ್ದವು. ಆದರೆ ಈ ಸಣ್ಣಯ್ಯನಿಗೆ ಮಕ್ಕಳಿರಲಿಲ್ಲ.

ಮನೆಯ ಕೆಲವು ಮಕ್ಕಳು ಕಾಲೇಜು ಮೆಟ್ಟಿಲು ಹತ್ತಿದ್ದವು. ಹೀಗೆ ಇರಬೇಕಾದರೆ ಕೂಡು ಕುಟುಂಬದಲ್ಲಿ ಅಪಸ್ವರಗಳು ಹೆಚ್ಚಾಗತೊಡಗಿದವು. “ನಾವು ಬೇರೆಯಾಗೋದೆ ಒಳ್ಳೇದಲ್ವ. ಸುಮ್ಮನೆ ಮನಸು ಮುರಿದುಕೊಂಡು ಒಟ್ಟಿಗೇ ಇರಬೇಕೆಂಬ ಹಠ ಯಾಕೆ? ನಮ್ಮ ಪಾಡಿಗೆ ನಾವು ಹಾಯಾಗಿ ಯಾಕೆ ಇರಬಾರದು. ಈಗ ಎಲ್ಲರೂ ಹಾಗೇ ತಾನೆ ಇರೋದು. ಅಪ್ಪ ನೆಟ್ಟ ಆಲದ ಮರಕ್ಕೆ ನೇತು ಹಾಕಿಕೊಳ್ಳೋ ರೀತಿ ಯಾರು ಈಗ ಯೋಚನೆ ಮಾಡುತ್ತಾರೆ,” ಹೀಗೆಲ್ಲಾ ವಾದಗಳು ಮನೆಯಲ್ಲಿ ಶುರುವಾದವು.

ಹೊಸ ತಲೆಮಾರಿನವರು ಬೆಳೆಯುತ್ತಾ ಬರುತ್ತಿದ್ದರಲ್ಲ. ಅವರಿಗೆ ಸಹಜವಾಗಿ ಅವರವರ ಪಾಲನ್ನು ಪಡೆದು ಬೇರೆ ಬೇರೆ ಮನೆ ಮಾಡುವುದರ ಬಗ್ಗೇನೆ ಒಲವು ಜಾಸ್ತಿ ಇತ್ತು. ಈ ತರ್ಕಗಳ ನಡುವೆ ಒಮ್ಮೆ ಸ್ವಲ್ಪ ಗಲಾಟೆ ಅಣ್ಣ ತಮ್ಮಂದಿರ ನಡುವೆ ಆಯಿತು. ಅದರ ಮಧ್ಯೆ ಮಾತುಗಳು ಸ್ವಲ್ಪ ಮೊನಚಾಯಿತು. ಅದು ಆಸ್ತಿ ಹಂಚಿಕೆ ಮಾಡಿಕೊಳ್ಳುವ ಬಗೆಗಿನ  ತಕರಾರಾಗಿತ್ತು. ಯಾವ ಆಸ್ತಿ ಯಾರಿಗೆ ಎಷ್ಟೆಷ್ಟು ಎಂಬ ಬಗೆಗಿನ ಚರ್ಚೆ ಅದಾಗಿತ್ತು. ಬಹುತೇಕ ಎಲ್ಲರೂ ತನ್ನ ಬಗ್ಗೆ ತಾರತಮ್ಯ ಮಾಡುತ್ತಿದ್ದಾರೆಂಬಂತೆ ಸಣ್ಣಯ್ಯನಿಗೆ ಅನಿಸತೊಡಗಿ, ತಡೆಯಲಾಗದ ಸಿಟ್ಟಿನಿಂದ ಕೂಗಾಡಿಬಿಟ್ಟ.

ಆತ ಕೂಗಾಡಿದ್ದಕ್ಕೆ ಬಲವಾದ ಕಾರಣವೂ ಇತ್ತೆನ್ನಿ. “ಹೇಗೂ ಮಕ್ಕಳಿಲ್ಲವಲ್ಲ, ಇನ್ನು ಆಸ್ತಿಯ ಅವಶ್ಯಕತೆ ಏನಿದೆ? ಹಾಗಾಗಿ ಏನೋ ಒಂದು ಸ್ವಲ್ಪ ಕೊಟ್ಟರಾಯಿತು,” ಎಂಬ ಧಾಟಿಯಲ್ಲಿ ಎಲ್ಲರೂ ಮಾತಾಡತೊಡಗಿದ್ದರು. ಸಣ್ಣಯ್ಯನನ್ನು ಮನೆಯಿಂದ ದೂರ ಮಾಡಲು ಏನು ಬೇಕಾದರೂ ಮಾಡುವ ಮಟ್ಟಕ್ಕೆ ಮನೆಯ ಸದಸ್ಯರು ಯೋಚಿಸತೊಡಗಿದ್ದರು. ಹಾಗಂತ ಅಲ್ಲಿಯ ಎಲ್ಲರಿಗೂ ಸಣ್ಣಯ್ಯನಿಗೆ ಅನ್ಯಾಯ ಮಾಡಬೇಕೆಂಬ ಯೋಚನೆ ಇತ್ತೆಂದಲ್ಲ. ಆದರೆ ಅವರು ಬೇರೆ ಬೇರೆ ಕಾರಣಗಳಿಂದಾಗಿ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದವರು. ಸಣ್ಣಯ್ಯ ಒಬ್ಬಂಟಿಯಾಗಿ ಬಿಟ್ಟ. ತೀವ್ರ ಆಘಾತವಾಗಿ ಮಾನಸಿಕವಾಗಿ ಘಾಸಿಮಾಡಿಬಿಟ್ಟಿತು. ಇದರಿಂದ ಆತ ಕುಸಿದು ಹೋದ.

ಅದುವರೆಗೂ ಅವನು ಮನೆ ಮತ್ತು ತನ್ನವರು ಎಂದು ಪ್ರಾಮಾಣಿಕವಾಗಿ ದುಡಿದವನಾಗಿದ್ದ. ಎಲ್ಲರಿಗಿಂತ ಹೆಚ್ಚು ದುಡಿಮೆ ಮಾಡುತ್ತಿದ್ದ. ತಾನು ಅಷ್ಟೊಂದು ಹಚ್ಚಿಕೊಂಡಿದ್ದ ಮನೆಯವರೆಂದರೆ ಇವರೇನಾ? ಅನ್ನೋ ಅನುಮಾನ ಅವನಿಗೀಗ ಕಾಡತೊಡಗಿತು. ಹೆಂಡತಿ ಮತ್ತು ಆಕೆಯ ಮನೆಯವರು ಕೂಡ ಏನೂ ಮಾಡಲಾರದ ಸ್ಥಿತಿಗೆ ಬಂದರು. ಊರಿನವರು ಕೂಡ ಮನೆಯ ಹಿರಿಯವರ ಪರವಾಗಿಯೇ ಮಾತಾಡತೊಡಗಿದರು. ಅದರ ಹಿಂದೆ ಅವರದೇ ಆದ ಹಲವು ಲೆಕ್ಕಾಚಾರಗಳಿದ್ದವು. ಎಲ್ಲವೂ ಸಣ್ಣಯ್ಯನಿಗೆ ಅರ್ಥವಾಗುತ್ತಿತ್ತು. ಒಟ್ಟಾರೆಯಾಗಿ ಎಲ್ಲಾ ರೀತಿಯಿಂದಲೂ ಆತನ ಮೇಲೆ ಗಂಭೀರ ಪರಿಣಾಮ ಬೀರಿತು. ಮಾನಸಿಕವಾಗಿ ಕ್ಷೋಭೆಗೆ ಒಳಗಾಗಿದ್ದ ಸಣ್ಣಯ್ಯ, ಮನೆಯವರ ಮೇಲೆ ಆಗಾಗ ರೇಗತೊಡಗಿದ್ದ. ಇದು ನಂತರ ವಿಕೋಪಕ್ಕೂ ಹೋಯಿತು.

ಮನೆಯ ಹಿರಿತಲೆಗಳು ಹೀಗಾಗಬೇಕೆಂದು ಕಾದು ಕೂತಿದ್ದರೇನೋ? ‘ಕೊಲೆ ಬೆದರಿಕೆ ಹಾಕಿದ’ ಎಂದು ಇವನ ಮೇಲೆ ಪೊಲೀಸ್‌ರಿಗೆ ದೂರು ದಾಖಲಿಸಿಬಿಟ್ಟರು. ಜೊತೆಗೆ, ವ್ಯವಸ್ಥಿತ ಪಿತೂರಿ ಮಾಡಿ ಸಣ್ಣಯ್ಯನನ್ನು ಜೈಲಿಗೆ ತಳ್ಳಿದರು. ಮನೆಯವರಿಗೆ ಹೇಗಾದರೂ ಮಾಡಿ ಸಣ್ಣಯ್ಯನನ್ನು ಆಸ್ತಿ ವ್ಯವಹಾರದಿಂದ ದೂರ ಇರಿಸಬೇಕಿತ್ತಲ್ಲ? ಅದಕ್ಕೆ ಒಂದು ಬಲವಾದ ಕಾರಣ ಅವರು ಕಂಡುಕೊಳ್ಳಬೇಕಾಗಿತ್ತು. ಅವರ ದುಷ್ಟ ಉದ್ಧೇಶಕ್ಕೆ ಇದನ್ನು ಚೆನ್ನಾಗಿಯೇ ಬಳಸಿಕೊಂಡರು.

ಆಗ ಅವನಿಗೆ ಹೇಳಿಕೊಳ್ಳೋ ರೀತಿಯಲ್ಲಿ ಬೆಂಬಲಕ್ಕೆ ಯಾರೂ ಇರಲಿಲ್ಲ. ಕೃಷಿ ಕೆಲಸ ಬಿಟ್ಟರೆ ಇಂತಹ ಕಾನೂನು ಮತ್ತು ವ್ಯಾವಹಾರಿಕ ವಿಷಯಗಳನ್ನು ನಿಭಾಯಿಸುವುದು ಕೂಡ ಸಣ್ಣಯ್ಯನಿಗೆ ಗೊತ್ತಿರಲಿಲ್ಲ. ಪೇಟೆ, ಮಾರುಕಟ್ಟೆಯ ವ್ಯವಹಾರವನ್ನು ಮಾಡಿದವನೂ ಅವನಾಗಿರಲಿಲ್ಲ. ಸಣ್ಣಯ್ಯ ಮೊದಲಿನಿಂದಲೂ ತಾನಾಯಿತು ಮತ್ತು ತನ್ನ ಮನೆಯ ಕೆಲಸವಾಯಿತು ಅಂತ ಇದ್ದವನು. ಆದರೆ ಈಗ ಮಾನಸಿಕವಾಗಿ ಕುಗ್ಗಿ ಹೋಗಿಬಿಟ್ಟಿದ್ದ.

ಜೈಲಿನ ವಾತಾವರಣ ಅವನನ್ನು ಆರಂಭದಲ್ಲಿ ಮತ್ತಷ್ಟು ಕುಸಿಯುವಂತೆ ಮಾಡಿತು. ಅಣ್ಣತಮ್ಮರ ಸಂಬಂಧ ಇಷ್ಟೇನಾ? ಎಂಬ ಪ್ರಶ್ನೆ ಮೂಡಿತು. ಒಡಹುಟ್ಟಿದವರು ಈ ಮಟ್ಟಕ್ಕೂ ಇಳಿಯಬಲ್ಲರೇ? ಎಂದು ಹಗಲು-ರಾತ್ರಿ ಯೋಚಿಸಿದ. ಆರಂಭದಲ್ಲಿ ಯಾರೊಂದಿಗೂ ಹೆಚ್ಚಿಗೆ ಮಾತಾಡುತ್ತಿರಲಿಲ್ಲ. ಏನಾದರೂ ಕೇಳಿದರೆ ಎಷ್ಟು ಬೇಕೋ ಅಷ್ಟು ಮಾತ್ರ ಉತ್ತರಿಸುತ್ತಿದ್ದ. ಯಾರನ್ನೂ ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಯಾರ ಮೇಲೇಯೂ ವಿಶ್ವಾಸವಿಲ್ಲದ ಸ್ಥಿತಿಗೆ ತಲುಪಿಬಿಟ್ಟಿದ್ದ.

ದಿನಗಳು ಹಾಗೂ ತಿಂಗಳುಗಳು ಕಳೆದಂತೆ ಸಣ್ಣಯ್ಯನೂ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳತೊಡಗಿದ. ಮನೆಯವರಿಗಿಂತಲೂ ಹಲವು ಪಟ್ಟು ಒಳ್ಳೆಯವರು ಜೈಲಿನಲ್ಲಿ ಇದ್ದಾರೆ ಎಂದು ಅವನಿಗೆ ಈಗೀಗ ಅನಿಸತೊಡಗಿತು. ಸಾಕಷ್ಟು ಜನರು ಇವನನ್ನು ಕಾಳಜಿಯಿಂದ ಮಾತಾಡಿಸುತ್ತಿದ್ದರು. ಧೈರ್ಯ ಹೇಳಿ ಸಾಂತ್ವನ ಹೇಳುತ್ತಿದ್ದರು. ನಿಧಾನವಾಗಿ ಸಣ್ಣಯ್ಯನಿಗೆ ಸ್ನೇಹಿತರು ಸಿಗತೊಡಗಿದರು. ಹಾಗಂತ ಕೀಟಲೆ ಮಾಡುವವರು ಇರಲಿಲ್ಲವೆಂದಲ್ಲ, ಆದರೆ ಸ್ನೇಹಿತರ ಬೆಂಬಲ ಸಿಕ್ಕತೊಡಗಿದ್ದರಿಂದ ಅವೆಲ್ಲಾ ದೊಡ್ಡದಾಗಿ ಕಾಣಿಸಲಿಲ್ಲ.

ಮನೆಯವರಿಗೆ ಸಣ್ಣಯ್ಯ ಜೈಲಿನಿಂದ ಹೊರಬರುವುದು ಇಷ್ಟವಾಗದ ವಿಚಾರವಾಗಿತ್ತು. ಹಾಗಾಗಿಯೇ ಅವರು ಇವನಿಗೆ ಜಾಮೀನು ಸಿಗದಂತೆ ನೋಡಿಕೊಂಡರು. ನಂತರ ಮಾನಸಿಕ ಅಸ್ವಸ್ಥನೆಂದು ನ್ಯಾಯಾಲಯದಲ್ಲಿ ಆತನನ್ನು ಬಿಂಬಿಸಿ ವಿಚಾರಣೆಯನ್ನು ಮುಂದೂಡಿಸುತ್ತಾ ಬಂದರು. ಅದಕ್ಕೆ ಬೇಕಾದ ದಾಖಲೆಗಳನ್ನು ಸೃಷ್ಟಿಸಿದ್ದರು. ಇಂತಹ ನೂರಾರು ಕಾರಣ ಹಿಡಿದು ವಿಚಾರಣೆ ಮುಂದೂಡುವುದು ಮಾಮೂಲಿ ಪರಿಪಾಠವಾಗತೊಡಗಿತು. ಸಣ್ಣಯ್ಯ ವಿಚಾರಣೆಯ ಹೆಸರಿನಲ್ಲಿ ಕೆಲವು ವರ್ಷಗಳನ್ನೇ ಜೈಲಿನಲ್ಲಿ ಕಳೆಯಬೇಕಾಯಿತು. ಮದ್ಯೆ ಮದ್ಯೆ ಹಲವು ತಿಂಗಳುಗಳ ಕಾಲ ಚಿಕಿತ್ಸೆ ಹೆಸರಿನಲ್ಲಿ ಆತನನ್ನು ಆಸ್ಪತ್ರೆಗೆ ಕಳಿಸಿಬಿಡುತ್ತಿದ್ದರು. ಆಗೆಲ್ಲಾ ವಿಚಾರಣೆ ಮತ್ತಷ್ಟು ಮುಂದಕ್ಕೆ ಹೋಗುತ್ತಿತ್ತು.

ಹೀಗೆಲ್ಲಾ ಮಾಡುತ್ತಾ… ಸಣ್ಣಯ್ಯನನ್ನು ಜೈಲಿನಲ್ಲೇ ಕೊಳೆಯುವಂತೆ ಮಾಡಲಾಯಿತು. ಮಾನಸಿಕ ಸಧೃಡತೆ ಬಗ್ಗೆ ವೈದ್ಯರ ಪ್ರಮಾಣ ಪತ್ರವಿಲ್ಲದೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲವೆಂಬ ನ್ಯಾಯಾಲಯದ ನಿಲುವು, ವೈದ್ಯರ ಪ್ರಮಾಣ ಪತ್ರ ಪಡೆಯಲು ಸಣ್ಣಯ್ಯನಿಗೆ ಸಾಧ್ಯವಾಗದೇ ಹೋಗಿದ್ದು ಮತ್ತು ಮನೆಯ ಒಡಹುಟ್ಟಿದವರ ಸಂಚುಗಳು ಎಲ್ಲಾ ಸೇರಿ ಸಣ್ಣಯ್ಯ ಒಂದಲ್ಲ ಎರಡಲ್ಲ ಹದಿಮೂರು ವರ್ಷಗಳ ಕಾಲ ಜೈಲಿನಲ್ಲೇ ಉಳಿಯಬೇಕಾಯಿತು. ಅದೂ ವಿಚಾರಣಾಬಂಧಿಯಾಗಿಯೇ!

ಇದರ ಮಧ್ಯೆ ಇವನಿಗೆ ಕೊಡಬೇಕಾಗಿದ್ದ ಆಸ್ತಿಯನ್ನು ಕೊಡದೆ, ಸ್ವಲ್ಪ ಕೊಟ್ಟಂತೆ ಮಾಡಿ ಆಸ್ತಿ ಪತ್ರಕ್ಕೆ ಸಹಿ ಪಡೆದುಕೊಳ್ಳಲು ಮನೆಯ ಒಡಹುಟ್ಟಿದವರು ಯಶಸ್ವಿಯಾಗಿದ್ದರು. ‘ಸಹಿ ಹಾಕಿದರೆ ಜೈಲಿನಿಂದ ಬಿಡಿಸುತ್ತೇವೆ’ ಎಂದು ಆಮಿಷ ಒಡ್ಡಿದಾಗ ಅಸಹಾಯಕ ಸ್ಥಿತಿಯಲ್ಲಿದ್ದ ಸಣ್ಣಯ್ಯ ಸಹಿ ಹಾಕಿ ಬಿಟ್ಟಿದ್ದ. ಈತ ಜೈಲಿಗೆ ಹೋದ ನಂತರ ಹೆಂಡತಿ ಕೆಲ ವರ್ಷಗಳಲ್ಲೇ ತೀರಿಕೊಂಡಿದ್ದಳು. ಬಡ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದ ಆಕೆ ಗಂಡನ ಮನೆಯಲ್ಲಿಯೇ ಅನಾಥ ಸ್ಥಿತಿಯಲ್ಲೇ ಜೀವ ಸವೆಸಿ ತನ್ನ ಯಾತ್ರೆಯನ್ನು ಮುಗಿಸಿದ್ದಳು.

ಜೈಲಿಗೆ ಬಂದಾಗಲೂ ಸಣ್ಣಯ್ಯ ಒಬ್ಬಂಟಿಯಾಗಿದ್ದ. ಈಗ ನ್ಯಾಯಾಲಯದಿಂದ ಖುಲಾಸೆಗೊಂಡು ಬಿಡುಗಡೆಯಾದ ನಂತರ, ಹೆಂಡತಿ ಕೂಡ ಜೀವಂತವಾಗಿಲ್ಲದ ತನ್ನೂರಿಗೆ ಒಬ್ಬಂಟಿಯಾಗಿಯೇ ಹೊರಟಿದ್ದಾನೆ. ಅಲ್ಲಿ ತನಗೇನು ಉಳಿಸಿದ್ದಾರೆ? ತಾನೇನು ಮಾಡಬಹುದು? ಎಂಬ ಬಗ್ಗೆ ಯಾವ ಆಲೋಚನೆಗಳೂ ಸಣ್ಣಯ್ಯನಿಗೆ ಈಗ ಇಲ್ಲ. ಆದರೆ ಬದಲಾದ ಜಗತ್ತಿನ ಬಗ್ಗೆ ಹಲವು ಯೋಚನೆಗಳ ತಾಕಲಾಟ, ತೊಳಲಾಟವನ್ನು ಮನಸ್ಸಿನ ತುಂಬ ತುಂಬಿಕೊಂಡಿದ್ದ. ಆಸ್ತಿ ಸಂಪತ್ತಿನ ಮುಂದೆ ವ್ಯಕ್ತಿಗಳು ಹೇಗೆಲ್ಲ ಅಮಾನವೀಯವಾಗಿ ನಡೆದುಕೊಳ್ಳುತ್ತಾರೆ? ನಮ್ಮ ಸಾಮಾಜಿಕ ಸಂರಚನೆಗಳು ಇವುಗಳನ್ನು ಹೇಗೆಲ್ಲಾ ಪೋಷಿಸುತ್ತಾ ಬಳಸಿಕೊಳ್ಳುತ್ತವೆ ಎನ್ನುವುದಕ್ಕೆ ಒಂದು ಜೀವಂತ ಕಥೆಯಿದು.

(ವಿ.ಸೂ: ಇಲ್ಲಿ ಹೆಸರು ಮತ್ತು ಊರುಗಳನ್ನು ಬದಲಾಯಿಸಲಾಗಿದೆ)