ಅಮಾಯಕ ಆದಿವಾಸಿ ಸಿದ್ಧ; ಪೊಲೀಸರು ತೋಡಿದ ಗಾಂಜಾ ಖೆಡ್ಡಾಕ್ಕೆ ಬಿದ್ದ ಕತೆ!
PRISON STORIES

ಅಮಾಯಕ ಆದಿವಾಸಿ ಸಿದ್ಧ; ಪೊಲೀಸರು ತೋಡಿದ ಗಾಂಜಾ ಖೆಡ್ಡಾಕ್ಕೆ ಬಿದ್ದ ಕತೆ!

ನಿಜವಾದ ದಂಧೆಕೋರರನ್ನು ಪಾರುಮಾಡಿ, ಅಮಾಯಕರನ್ನು ಸಿಲುಕಿಸಿ, ಬದುಕು ನಾಶ ಮಾಡುವ, ಪೊಲೀಸ್ ವ್ಯವಸ್ಥೆಯ ಭ್ರಷ್ಟತೆ, ಬೇಜವಾಬ್ದಾರಿತನ ಸಿದ್ಧನಂತಹ ಎಷ್ಟೋ ಅಮಾಯಕರನ್ನು ಈ ದೇಶದಲ್ಲಿ ಬಲಿ ತೆಗೆದುಕೊಳ್ಳುತ್ತಲೇ ಇದೆ

ಚಾಮರಾಜ ನಗರವೆಂದರೆ ಬೆಟ್ಟಕಾಡಿನಿಂದಾವೃತವಾಗಿರುವ ರಾಜ್ಯದ ಗಡಿ ಜಿಲ್ಲೆ. ಜಾನಪದ ಸಂಪತ್ತು ಅಗಾಧವಿದೆ ಇಲ್ಲಿ. ಆದಿವಾಸಿ ಜನಸಮುದಾಯಗಳು ದೊಡ್ಡ ಸಂಖ್ಯೆಯಲ್ಲಿ ಈ ಜಿಲ್ಲೆಯ ಗಿರಿಜನ ಹಾಡಿಗಳಲ್ಲಿದ್ದಾರೆ. ಆದಿವಾಸಿಗಳಷ್ಟೇ ಅಲ್ಲದೆ ಇತರ ಲಕ್ಷಾಂತರ ಜನಸಮೂಹ ನಡೆದುಕೊಳ್ಳುವ ಮಂಟಯ್ಯ,  ಮಲೆಯ ಮಾದಪ್ಪ, ಸಿದ್ದಪ್ಪಾಜಿ, ನೀಲಗಾರ, ಮೊದಲಾದ ಪರಂಪರೆಗಳ ತವರೂರು ಈ ಜಲ್ಲೆ.

ಸಿದ್ದ ಇದೇ ಜಿಲ್ಲೆಯ ಗಿರಿಜನ ಹಾಡಿಯೊಂದರ ವ್ಯಕ್ತಿ. ಮದುವೆಯಾಗಿತ್ತು; ಮಕ್ಕಳಿರಲಿಲ್ಲ. ಮದುವೆಯಾಗಿದ್ದು ಎಲ್ಲರನ್ನೂ ಕಳೆದುಕೊಂಡಿದ್ದ ಒಬ್ಬ ಬಡ ಅನಾಥ ಮದ್ಯವಯಸ್ಕಳನ್ನು. ಇವನ ವಯಸ್ಸೂ ಕೂಡ ನಲವತೈದರ ಆಜೂಬಾಜೂ ಇತ್ತು. ಇವನಿಗೂ ತನ್ನವರೆನ್ನಲು ಯಾರೂ ಇದ್ದಿರಲಿಲ್ಲ. ಅದೇ ಹಾಡಿಯವಳೇ ಆಗಿದ್ದಳು ಆಕೆ. ಇಬ್ಬರಿಗೂ ಅಕ್ಷರಾಭ್ಯಾಸ ಇಲ್ಲ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದರು. ಸಿದ್ದನಿಗೆ ಆಕೆ ಒಳ್ಳೆ ಜೊತೆಗಾತಿಯಾಗಿದ್ದಳು. ಅದೇ ರೀತಿ ಸಿದ್ದ ಕೂಡ ಆಕೆಗೆ ಒಳ್ಳೆ ಜೊತೆಗಾರನಾಗಿದ್ದ. ಇಬ್ಬರೂ ಮುಗ್ಧ ಗಿರಿಜನರಾಗಿದ್ದರು. ಅವರಿಬ್ಬರ ಪ್ರೀತಿಯೂ ಮುಗ್ಧವಾಗಿತ್ತು. ಸಹಜವಾದ ಅಮಾಯಕತನ ಇಬ್ಬರಲ್ಲೂ ಇತ್ತು. ಪೇಟೆ, ನಗರ ಕಂಡವರಲ್ಲ.ಅವರ ಪಾಲಿಗೆ ಪೇಟೆಯೆಂದರೆ ಹಾಡಿಯಿಂದ ನಾಲ್ಕೈದು ಕಿ.ಮೀ ದೂರದಲ್ಲಿರುವ ನಾಗಣ್ಣನ ಅಂಗಡಿಯೇ ಆಗಿತ್ತು. ಅಲ್ಲೇ ಮನೆಗೆ ಬೇಕಾದ ಮೆಣಸು, ಜೀರಿಗೆ, ಕೊತ್ತಂಬರಿ ಹೀಗೆ ತುಂಬಾ ಅಗತ್ಯದ ವಸ್ತುಗಳ ಇವರ ಖರೀದಿ ನಡೆಯುತ್ತಿತ್ತು.

ಅಲ್ಪ ಸ್ವಲ್ಪ ಕಾಸು ಬೇಕಿದ್ದರೂ ನಾಗಣ್ಣನ ಅಂಗಡಿಯೇ  ಇವರ ಹಾಡಿಯ ಹಲವರಿಗೆ ಬ್ಯಾಂಕ್. ಒಂದೇ ಶರತ್ತು; ಬೆಳೆದ ಬೆಳೆ, ಸಂಗ್ರಹಿಸಿದ ಕಾಡುತ್ಪತ್ತಿ ಏನೇ ಇದ್ದರೂ ನಾಗಣ್ಣನ ಅಂಗಡಿಗೇ ತಂದು ಹಾಕಬೇಕು. ಅದಕ್ಕೆ ಅವನೇಳಿದ್ದೇ ರೇಟು. ನಾಗಣ್ಣ ಬಂಪರ್ ಲಾಭ ಹೊಡೆಯುತ್ತಾ ಇದರಿಂದಲೇ ಶ್ರೀಮಂತನಾಗಿದ್ದು. ಇನ್ನು ಅಕ್ಕಿ, ಊರಿನಲ್ಲಿ ಬೆಳೆಯುವವರ ಬಳಿಯೇ  ತಗೊಳ್ಳೋದು, ಬದಲಿಗೆ ಇವರಲ್ಲಿರುವ ರಾಗಿ-ಗೀಗಿ ಕೊಡೋದು. ಸಾರು ಸಾಂಬಾರು ಎಲ್ಲಾ  ಅಲ್ಲೇ ಸಿಗುವ ಏನಾದರೂ ಹಾಕಿ ಮಾಡೋದೆ ರೂಢಿ. ಅದಕ್ಕೆಂದೇ ತರಕಾರಿ ಖರೀದಿ ಅಪರೂಪ. ಹಬ್ಬನೋ ಜಾತ್ರೆನೋ ಇದ್ದಾಗ ಮಾತ್ರ ಕುರಿ ಕಡಿದು ಅಡುಗೆ ಮಾಡೋದೇ ಪರಂಪರೆ. ಇನ್ನು ಫಾರೆಸ್ಟ್ನವರ ಕಣ್ಣು ತಪ್ಪಿಸಿ ಯಾರಾದರೂ ಬೇಟೆಯಾಡಿದರೆ , ಅಲ್ಪ ಸ್ವಲ್ಪ ಮಾಂಸ ಸಿಗುತ್ತದೆ. ಅಂದಿನ ಅಡುಗೆಯೇ ವಿಶೇಷ ಎನ್ನಬಹುದು.

ಸಿದ್ದನಿಗೆ  ಒಂದೆಕರೆಯಷ್ಟು ಜಮೀನಿದ್ದು, ಅವನ ಹಾಡಿ ಪಕ್ಕದಲ್ಲೇ ಇದ್ದ ಆ ಜಮೀನಿನಲ್ಲೇ ಒಂದು ಸಣ್ಣ ಗುಡಿಸಿಲಿನಲ್ಲಿ ಅವನ ಸಂಸಾರ ಸಾಗಿತ್ತು. ಆ ಜಮೀನು  ಅವರ ಹೆಸರಿನಲ್ಲಿದೆ ಅನ್ನೋದಕ್ಕೆ ಕಾಗದ ಪತ್ರಗಳೇನೂ ಇರಲಿಲ್ಲ. ಜಮೀನು ಮನೆ ವಿಚಾರದಲ್ಲಿ ಬಹುತೇಕ ಗಿರಿಜನರ ಕತೆ ಇದೇನೆ.ಅವರಿಗೆ ಎರಡು ಸಣ್ಣ ಕರುಗಳು ಇದ್ದವು. ಹಾಲು ಕುಡಿಯೋದು ನಿಲ್ಲಿಸಿದಂತಹವು. ಅದೇ  ದೊಡ್ಡ ಆಸ್ತಿ ಅವರಿಗೆ. ಇಬ್ಬರೂ ಕೂಲಿ ಮಾಡುತ್ತಾ ತುಂಬಾ ಖುಷಿಯಿಂದಲೇ ಜೀವನ ನಡೆಸುತ್ತಿದ್ದರು. ಹೊಲದಲ್ಲೂ ಅದೂ ಇದೂ ಬೆಳೆಯುತ್ತಿದ್ದ. ಸಿದ್ಧ ತನ್ನ ಹೊಲ, ಮನೆ, ಹೆಂಡತಿ,  ಕರುಗಳು, ಕೋಳಿ ಅಂತ ಇದ್ದವ.ಹೀಗೆ ಇರಬೇಕಾದರೆ, ಒಂದು ದಿನ ಪೇಟೆಯಿಂದ ಪೊಲೀಸರು ಬಂದಿದ್ದಾರೆ. ಅದೇನೋ ಹುಡುಕಾಡುತ್ತಿದ್ದಾರೆ ಅಂತ ಹಾಡಿ ತುಂಬಾ ಗುಲ್ಲೆದ್ದಿತ್ತು. ಹಾಡಿಯ ಕೆಲವರಿಗೆ ಆತಂಕವಾದರೂ ನಮ್ಮ ಸಿದ್ದನಿಗೆ ಯಾವ ಆತಂಕವೂ ಆಗಿರಲಿಲ್ಲ.

ಸುಮಾರು ಒಂದು ಗಂಟೆ ಕಳೆದಿರಬಹುದು. ಸಿದ್ಧನ ಮನೆಗೇ ಪೊಲೀಸರ ಗುಂಪು ಬಂದೇ ಬಿಡ್ತು. ಈಗ ಸಿದ್ಧ ಗಾಬರಿಯಾದ ಅವನ ಹೆಂಡತಿ ಆ ಗುಂಪನ್ನು ನೋಡಿ ನಡುಗಿಹೋದಳು. ಇವರಿಗೆ ಇದೆಲ್ಲಾ ಹೊಸತು. ಯಾರು, ಯಾಕೆ ಬಂದಿದ್ದಾರೆ ಅನ್ನೋದೆಲ್ಲಾ ಗೊತ್ತೇ ಇಲ್ಲ. ಆದರೆ ಪೊಲೀಸರೆಂದರೆ ಅಪಾಯ ಅಂತ ಅವರಿವರಿಂದ ಕೇಳಿದ್ದರು. ಈಗ ನೋಡಿದರೆ ಇವರ ಗುಡಿಸಿಲಿನ ಬಾಗಿಲಿಗೇ ಬಂದು ಬಿಟ್ಟಿದ್ದಾರೆ. ಅವರಲ್ಲೊಬ್ಬರ ಕೈಯಲ್ಲಿ ಒಂದು ಯಾವುದೋ ಗಿಡವಿತ್ತು. ಪೊಲೀಸರು ಬಂದವರೆ ಸಿದ್ಧನ ಹೆಸರನ್ನು ಕೂಗಿ ಕರೆದರು. “ಯಾಕೋ ಗಾಂಜಾ ಬೆಳಿತೀಯಾ, ಇನ್ನು ಎಲ್ಲೆಲ್ಲಿ ಬೆಳಿದಿದೀಯಾ ಹೇಳು “ ಎಂದೆಲ್ಲಾ ಬೆದರಿಸತೊಡಗಿದರು. ಅಷ್ಟರಲ್ಲೇ ಅವರಲ್ಲೊಬ್ಬ ಸಿದ್ಧನನ್ನು ಹಿಡಿದು ಬಾರಿಸ ತೊಡಗಿದ. ಇದನ್ನೆಲ್ಲಾ ನಿರೀಕ್ಷಿಸಿರದ ಸಿದ್ಧ ಭಯ, ಆತಂಕಗಳಿಂದ ಕಂಗಾಲಾದ. “ನಾನ್ಯಾವ ಗಾಂಜಾ ಗಿಡನೂ ಬೆಳೆದಿಲ್ಲ, ನನಗೆ ಗೊತ್ತಿಲ್ಲ. ನನ್ನನ್ನು ಬಿಡಿ ಸ್ವಾಮಿ” ಎಂದೆಲ್ಲಾ ಅತ್ತು ಗೋಗರೆದರೂ ಏನೂ ಪ್ರಯೋಜನವಾಗಲಿಲ್ಲ.

ಒಂದು ಕಡೆ ಭಯ ಮತ್ತೊಂದು ಕಡೆ ಗಂಡನ ಸ್ಥಿತಿ ನೋಡಲಾಗದೇ ಹೆಂಡತಿ  ಪೊಲೀಸರಲ್ಲಿ ಗಂಡನಿಗೆ ಏನೂ ಮಾಡಬೇಡಿರೆಂದು ಅಂಗಲಾಚಿ ಬೇಡಿಕೊಳ್ಳತೊಡಗಿದಳು. ಉಪಯೋಗವಾಗಲಿಲ್ಲ. ಹಾಡಿಯ ಬೇರೆ ಕೆಲವರು ಅಲ್ಲಿ ಸೇರಿದ್ದರೂ ಹೆದರಿ ಕಂಗಾಲಾಗಿದ್ದ ಅವರಿಗೆ ಮಾತಾಡುವ ದೈರ್ಯವೇ ಬರಲಿಲ್ಲ. ಸಿದ್ಧನನ್ನು ಬಂದಿಸಿದ ಪೊಲೀಸರು ಬೇಡಿ ಹಾಕಿ ತಮ್ಮೊಂದಿಗೆ ಕರೆದೊಯ್ದರು. ಎಲ್ಲಿಗೆ, ಏನು, ಅನ್ನೋ ಬಗ್ಗೆ ಯಾರಿಗೂ ಗೊತ್ತಾಗಲಿಲ್ಲ. ಏನು ಮಾಡಬೇಕು ಅನ್ನೋದೂ ತಿಳಿಯದ ಸಂಕಟ ಅಲ್ಲಿ ಹೆಪ್ಪುಗಟ್ಟತೊಡಗಿತು. ಸಿದ್ಧನ ಹೆಂಡತಿ ಗೋಳಂತೂ ನೋಡಲಾಗುತ್ತಿಲ್ಲ.ಹಾಡಿಯ ಅಕ್ಕದ ಕಾಡುಗಳಲ್ಲಿ ಗಾಂಜಾ ಬೆಳೆದು ಮಾರುವ ದೊಡ್ಡ ದಂದೆಕೋರರು ಇದ್ದರು. ಕೇರಳ, ತಮಿಳುನಾಡುಗಳಿಂದ ಜನರನ್ನು ಕೂಲಿಗೆ ಕರೆತಂದು ಅವರಿಂದ ಗಾಂಜಾ ಕೃಷಿ ಮಾಡಿಸುವ ದಂಧೆಯೂ ನಡೆಯುತಿತ್ತು.

ಆದರೆ ಇಲ್ಲಿ ಅವರ್ಯಾರನ್ನೂ ಹಿಡಿದಿರಲಿಲ್ಲ. ಯಾವುದೋ ದೂರು ಬಂದಿದೆ ಎಂಬ ನೆಪ ಹಿಡಿದು ಹಾಡಿಗಳಿಗೆ ದಾಳಿ ಮಾಡಿದ ಪೊಲೀಸರು ಸಿದ್ದನ ಜಮೀನಿನಲ್ಲಿ ಎಲ್ಲೋ, ಒಂದು ಗಾಂಜಾಗಿಡ ಸಿಕ್ಕಿತೆಂದು ಹೇಳಿ ಸಿದ್ಧನ ಮೇಲೆ ಮಾದಕ ವಸ್ತುಗಳ ಕಾಯಿದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿ ಬಿಟ್ಟರು.  ಅಕ್ರಮ ಗಾಂಜಾ ದಂಧೆಕೋರರ ವಿರುದ್ದ ಈ ರೀತಿ  ಭಾರಿ ಯಶಸ್ವಿ ಕಾರ್ಯಾಚರಣೆ ಮಾಡಿ ಮುಗಿಸಿದ್ದರು ಪೊಲೀಸರು!?ನಗರವನ್ನೇ ನೋಡಿರದ ಸಿದ್ಧ ಈಗ ಈ ರೀತಿ ನಗರ ನೋಡಿದ. ಅದೂ ಸಾಲದು ಅಂತ ಜೈಲನ್ನೂ ತೋರಿಸಿದರು ಪೊಲೀಸರು! ಜೈಲು ಅಂದರೆ ಏನು ಎಂದಾಗಲೀ, ಅಲ್ಲಿನ ವ್ಯವಸ್ಥೆ, ಪ್ರಕರಣ, ನ್ಯಾಯಾಲಯ, ವಿಚಾರಣೆ ಹೀಗೆ ಯಾವುದರ ಬಗ್ಗೆಯೂ ಕನಸು ಮನಸಿನಲ್ಲಿಯೂ ಯೋಚನೆ ಬಂದಿರಲಿಲ್ಲ ಸಿದ್ಧನಿಗೆ. ನಿನ್ನನ್ನು ಏನೂ ಮಾಡುವುದಿಲ್ಲ ಎರಡು ದಿನ  ಆದ ಮೇಲೆ ಬಿಟ್ಟು ಕಳಿಸಿಬಿಡುತ್ತಾರೆ ಅಂತ ಪೊಲೀಸರು ಹೇಳಿದ್ದನ್ನ ಬಲವಾಗಿಯೇ ನಂಬಿಬಿಟ್ಟಿದ್ದ ಸಿದ್ದ.

ಮೊದಲೇ ಅಮಾಯಕನಾಗಿದ್ದ ಸಿದ್ಧನನ್ನು ಜೈಲಿನಲ್ಲಿ ಎಲ್ಲರೂ ಗೋಳು ಹುಯ್ದುಕೊಳ್ಳುವವರೇ.  ಹಲವರು ಹೊಡೆಯುತ್ತಿದ್ದರು. ಕುಳಿತರೂ, ನಿಂತರೂ ಬೈಯ್ಯುತ್ತಿದ್ದವರಿದ್ದರು. ಇದನ್ನೆಲ್ಲಾ ನೋಡಿದ ಹಲವರು ಸಿದ್ಧನ ನೆರವಿಗೆ ಬಂದ ಮೇಲೆ ಈ ಕಾಟ ಕಡಿಮೆಯಾಯಿತು.ಸಿದ್ಧ ತನಗಿಂತಲೂ ಹೆಂಡತಿಯ ಸ್ಥಿತಿಯನ್ನು ನೆನೆದು ದಿನವೂ ಕಣ್ಣೀರಿಡತೊಡಗಿದ. ಅವರು ಯಾವತ್ತೂ ಪರಸ್ಪರ  ಬಿಟ್ಟು ಇದ್ದವರೇ ಅಲ್ಲ. ಸಿದ್ಧ ಎಷ್ಟು ಮುಗ್ಧ ಅಂದರೆ, ತನ್ನ ಊರಿನ ವಿಳಾಸವಾಗಲೀ, ಯಾವ ಕಡೆಯಿಂದ ಅಲ್ಲಿಗೆ  ಬಸ್ಸಿನಲ್ಲಿ ಹೋಗಬಹುದು ಅನ್ನೋದಾಗಲೀ ಅವನಿಗೆ ಗೊತ್ತೇ ಇರಲಿಲ್ಲ. ಇನ್ನು ನ್ಯಾಯಾಲಯದಲ್ಲಿ ಜಾಮೀನು ಮಾಡಿಸುವುದು, ವಕೀಲರನ್ನಿಡುವುದು ಆತನ ಎಣಿಕೆಗೂ ನಿಲುಕದ ವಿಷಯ. ತಿಂಗಳುಗಳು ಕಳೆದವು. ಸಿದ್ಧ ದಿನವೂ ಕುಸಿಯತೊಡಗಿದ.

ಅವರಿವರು ಹೇಳುತ್ತಿದ್ದ ದೈರ್ಯದ ಮಾತುಗಳು ಮಾತ್ರ ಅವನಿಗೆ ಸಮಾದಾನ ಕೊಡುತ್ತಿದ್ದವು. ಅವನನ್ನು ನೋಡಲು ಊರಿಂದ ಯಾರೂ ಬರಲಿಲ್ಲ. ಬರಲು ಸಾಧ್ಯವೂ ಇರಲಿಲ್ಲ ಬಿಡಿ.  ತನ್ನವರೆಂದು ಹೆಂಡತಿ ಬಿಟ್ಟರೆ ಅವನಿಗೆ ಬೇರೆ ಯಾರೂ ಇರಲಿಲ್ಲ. ಆಕೆ ಬರುವುದನ್ನು ಸಿದ್ಧ ನಿರೀಕ್ಷಿಸಿರಲೂ ಇಲ್ಲ. ಅದು ಆಕೆಯಿಂದ ಸಾದ್ಯವಾಗದ ಕೆಲಸ. ಆಕೆಯ ಕೈಯಲ್ಲಿ ಕಾಸು ಕೂಡ ಇಲ್ಲವೆನ್ನೋದು ಸಿದ್ಧನಿಗೆ ಗೊತ್ತಿದ್ದ ವಿಚಾರ. ಕಾಸನ್ನು ಯಾರಿಂದಲಾದರೂ ಕಡ ತಗೊಂಡರೂ, ಬಸ್ಸು, ನಗರ, ರಸ್ತೆಗಳ ಬಗ್ಗೆ  ಏನೂ ಗೊತ್ತಿಲ್ಲದ ಆಕೆ ಈ ನಗರಕ್ಕೆ ಬರೋದು , ಜೈಲಿಗೆ ಬಂದು ತನ್ನನ್ನು ನೋಡೋದನ್ನು ಸಿದ್ದನಿಗೆ ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿರಲಿಲ್ಲ.ಅವರಿವರು ಕೊಟ್ಟ ಬಟ್ಟೆ, ಸೋಪು, ಪೇಸ್ಟುಗಳಿಂದ, ಜೈಲು ಜೀವನ ನಿಭಾಯಿಸತೊಡಗಿದ ಸಿದ್ಧ. ಜೈಲಿನಲ್ಲಿ ಬಟ್ಟೆಸೋಪು, ಮೈಸೋಪು , ಹಲ್ಲುಜ್ಜಲು ಪೇಸ್ಟ್ ಕೊಡಬೇಕೆಂದು  ನಿಯಮವಿದ್ದರೂ, ಅದು ಕೊಟ್ಟರೆ ಕೊಟ್ಟರು, ಸಿಕ್ಕರೆ ಸಿಕ್ತು ಅಷ್ಟೆ. ಸರಿಯಾಗಿ ಕೊಡುತ್ತಿರಲಿಲ್ಲ. ಆದರೆ ಅದರ ಬಿಲ್ಲು ಮಾಡಿ ಹಣ ಮಂಜೂರು ಮಾಡಿಸಿಕೊಳ್ಳೋದು ಮಾತ್ರ  ನಿಲ್ಲೋದಿಲ್ಲ. ಈ ಮದ್ಯೆ ಹೇಗೇಗೊ ಮಾಡಿ ಒಂದು ಪತ್ರವನ್ನು ಅಂಚೆ ಮೂಲಕ ಸಿದ್ದನ ಹೆಂಡತಿಗೆ ತಲುಪಿಸುವ ಪ್ರಯತ್ನ ನಡೆಯಿತು. ಮೊಬೈಲು ಫೋನು ಹೇಗೂ ಇರಲಿಲ್ಲ ಆಕೆಯ ಬಳಿ.

ಸುಮಾರು ನಾಲ್ಕು ತಿಂಗಳಾಗಿರಬಹುದು ಸಿದ್ಧನ ಹೆಂಡತಿ ಕಾಣಲು ಬಂದಳು. ಪತ್ರವೇನೂ ಆಕೆಗೆ ತಲುಪಿರಲಿಲ್ಲ. ಆಕೆ ಇದ್ದ ಒಂದು ಕರುವನ್ನು ಮಾರಿ ಆ ದುಡ್ಡು ಹಿಡಿದುಕೊಂಡು ಯಾರ್ಯಾರದೊ ಕಾಲು ಹಿಡಿದು ಸಹಾಯ ಪಡೆದು ಬಂದಿದ್ದಳು.  ಇಬ್ಬರಿಗೂ ದುಃಖ ತಾಳಲಾಗುತ್ತಿಲ್ಲ. ಕಣ್ಣೀರು ಬಿಟ್ಟರೆ ಮಾತನಾಡಲೇ ಆಗುತ್ತಿಲ್ಲ. ಪರಸ್ಪರ ನೋಡಿದ ಸಮಾದಾನ ಮಾತ್ರ ಅವರದಾಯಿತು. ಇದಕ್ಕೆಲ್ಲಾ ಎಷ್ಟೊಂದು ಕಷ್ಟಪಟ್ಟಳೆಂಬುದು ಆಕೆಗೊಬ್ಬಳಿಗೇ ಗೊತ್ತು.ಇದಾಗಿ ಎರಡು ತಿಂಗಳ ನಂತರ ಸಿದ್ಧನ ಅವಸ್ಥೆ ಗೊತ್ತಿದ್ದ ಒಬ್ಬರು ಜೈಲಿನಿಂದ ಬಿಡುಗಡೆಯಾಗಿ ಹೋದರು. ನ್ಯಾಯಾಲಯದ ಕಾನೂನು ನೆರವಿನಡಿ  ಸಿದ್ದನಿಗೆ ವಕೀಲರನ್ನು ನೇಮಿಸಿ,  ಜಾಮೀನು ಮಾಡಿಸಿ ಬಿಡಿಸಿದರು. ಒಂದೆರಡು ತಿಂಗಳು ಊರಿನಲ್ಲಿ ಇದ್ದ ಸಿದ್ಧ ಮತ್ತೆ ಜೈಲಿಗೆ ಬಂದ. ಕಾರಣ ನ್ಯಾಯಾಲಯದ ವಿಚಾರಣೆಗೆ ಹೋಗದೇ ಇದ್ದಿದ್ದು. ವಿಚಾರಣೆ, ತಾರೀಖು, ಹಾಜರಾಗೋ ಬಗ್ಗೆ ಸಿದ್ದನಿಗೆ ಗೊತ್ತಾಗಿರಲಿಲ್ಲ. ಅವನ್ನೆಲ್ಲಾ ನಿಭಾಯಿಸೋದು ಅವನಿಗೆ ನಿಲುಕದ ವಿಷಯ. ವಿಚಾರಣೆ ಎರಡು ವರ್ಷಗಳ ಕಾಲ ನಡೆದು ಸಾಕ್ಷ್ಯಾದಾರಗಳಿಲ್ಲವೆಂದು ನ್ಯಾಯಾಲಯ ಸಿದ್ಧನನ್ನು ಬಿಡುಗಡೆ ಮಾಡಿತು. ಸಿದ್ದನಿಗೆ ಇದ್ದ ಕರುಗಳು ಕೋಳಿಗಳನ್ನೆಲ್ಲಾ ಮಾರಿಯಾಗಿತ್ತು. ಜಮೀನು ತುಂಬಾ ಕುರುಚಲು ಕಳೆಗಳು ಬೆಳೆದಿದ್ದವು. ನಿಜವಾದ ದಂಧೆಕೋರರನ್ನು ಪಾರುಮಾಡಿ, ಅಮಾಯಕರನ್ನು ಸಿಲುಕಿಸಿ, ಬದುಕು ನಾಶ ಮಾಡುವ, ಪೊಲೀಸ್ ವ್ಯವಸ್ಥೆಯ ಭ್ರಷ್ಟತೆ, ಬೇಜವಾಬ್ದಾರಿತನ ಸಿದ್ಧನಂತಹ ಎಷ್ಟೋ ಅಮಾಯಕರನ್ನು ಈ ದೇಶದಲ್ಲಿ ಬಲಿ ತೆಗೆದುಕೊಳ್ಳುತ್ತಲೇ ಇದೆ.

(ಇಲ್ಲಿ ವ್ಯಕ್ತಿಗಳ ಹೆಸರನ್ನು ಬದಲಾಯಿಸಲಾಗಿದೆ)