samachara
www.samachara.com
ಪ್ರೀತಿಯಲ್ಲಿ ಇರೋ ಸುಖ ಜೈಲಿಗೆ ತಂದು ಬಿಟ್ಟಿತು; ಹುಡುಗಿಯ ಬದುಕು ಕಸಿಯಿತು
PRISON STORIES

ಪ್ರೀತಿಯಲ್ಲಿ ಇರೋ ಸುಖ ಜೈಲಿಗೆ ತಂದು ಬಿಟ್ಟಿತು; ಹುಡುಗಿಯ ಬದುಕು ಕಸಿಯಿತು

ಅಲ್ಲಿ ಜನರ ದೊಡ್ಡ ಗುಂಪು ಸೇರಿತ್ತು. ಅದು ಆ ಊರಿನ ಪಂಚಾಯಿತಿ. ಹೆಚ್ಚುಕಮ್ಮಿ ಎಲ್ಲರೂ ಸೇರಿದ್ದರು. ಸಾಮಾನ್ಯವಾಗಿ ಊರಿನ ಪಂಚಾಯಿತಿಗಳಲ್ಲಿ ಅಷ್ಟೊಂದು ಜನ ಸೇರುತ್ತಿರಲಿಲ್ಲ. ಆದರೆ ಇಲ್ಲಿನ ವಿಷಯ ಹಾಗಿತ್ತು. ಅದೊಂದು ಪ್ರೀತಿ ವಿಚಾರ. ಬರೀ ಪ್ರೀತಿಯೆಂದರೂ ಅಷ್ಟೊಂದು ಜನ ಸೇರುತ್ತಿರಲಿಲ್ಲ. ಒಕ್ಕಲಿಗ ಹುಡುಗ ದಲಿತ ಹುಡುಗಿಯನ್ನು ಪ್ರೀತಿಸಿದ್ದು ಇಲ್ಲಿ ಭಾರಿ ದೊಡ್ಡ ವಿಚಾರವಾಗಿ ಬಿಟ್ಟಿತ್ತು. ಅವರ ಪ್ರೀತಿ ಒಂದೆರಡು ದಿನದ್ದಲ್ಲ. ಸುಮಾರು ಒಂದು ವರ್ಷದ್ದು. ಗುಟ್ಟಾಗಿದ್ದ ಪ್ರೀತಿ ಈಗ ರಟ್ಟಾಗಿ ಬಿಟ್ಟಿತ್ತು. ರಟ್ಟಾಗಿದ್ದಕ್ಕೆ ಕಾರಣ ಹುಡುಗ ತನ್ನ ಮನೆಯವರ ಒತ್ತಡದಿಂದ ಹುಡುಗಿಯಿಂದ ತಪ್ಪಿಸಿಕೊಂಡು ತಿರುಗಲು ಶುರುಮಾಡಿದ್ದೇ ಆಗಿತ್ತು.

ಇದರ ಹಿಂದೆ ಒಂದು ಕತೆಯಿದೆ. ಅವನ ಹೆಸರು ನಾಗರಾಜ. ಊರು ಮೈಸೂರು ಬಳಿಯ ಒಂದು ಹಳ್ಳಿ. ಹಳ್ಳಿಯೆಂದರೆ ಬೇರೆ ಹಳ್ಳಿಗಳ ತರಹ ಅಲ್ಲ. ಅಂಗಡಿಗಳು ಸಂತೆ ಎಲ್ಲಾ ಅಲ್ಲಿ ನಡೆಯುತ್ತಿದ್ದವು. ರಾಷ್ಟ್ರೀಯ ಹೆದ್ದಾರಿ ಆ ಊರಿನ ಮೂಲಕ ಹಾದು ಹೋಗಿತ್ತು. ಊರಿನ ಅಕ್ಕ ಪಕ್ಕ ರಾಗಿ ಹೊಲಗಳು ಇದ್ದವು. ನೀರಾವರಿ ಕೃಷಿ ಇರಲಿಲ್ಲ. ಬೋರು ಹೊಡೆಸಿ ನೀರು ಪಡೆದವರದು ಮಾತ್ರ ನೀರಾವರಿ ಕೃಷಿ ಎನ್ನಬಹುದು. ದೊಡ್ಡ ಭೂ ಹಿಡುವಳಿಗಳು ಇರಲಿಲ್ಲ. ಆದರೆ ಕೆಲವು ರಿಯಲ್ ಎಸ್ಟೇಟ್ ಕುಳಗಳು ಸಣ್ಣ ಪುಟ್ಟ ರೈತರಿಂದ ಜಮೀನುಗಳನ್ನು ಪಡೆದು ಐವತ್ತು, ನೂರು ಏಕರೆಗಳಷ್ಟು ಹೊಡೆದುಕೊಂಡು ನಿವೇಶನಗಳು, ಲೇಔಟ್ ಅಂತೆಲ್ಲಾ ಮಾಡಿದ್ದಾರೆ. ಇವುಗಳ ಮಾಲಿಕರಲ್ಲಿ ಮಾಜಿ ಮಂತ್ರಿಗಳು, ಹಾಲಿ ಶಾಸಕರುಗಳೂ ಸೇರಿದ್ದಾರೆ. ತಮ್ಮ ಭೂಮಿಯ ಮಾರುಕಟ್ಟೆ ಬೆಲೆ ಮಾತ್ರ ಹೆಚ್ಚಿನ ರೈತರ ಕೈಗೆ ಹೋಗಿರಲಿಲ್ಲ. ಬೆದರಿಕೆಗಳಿಂದಲೂ ಹಲವು ರೈತರ ಭೂಮಿಗಳನ್ನು ವಶ ಪಡಿಸಿಕೊಂಡಿದ್ದು ಕೂಡ ಇತ್ತು.

ನಾಗರಾಜನ ಮನೆಯವರಿಗೂ ಮೂರು ಏಕರೆಯಷ್ಟು ಒಣ ಜಮೀನು ಇತ್ತು. ಅದನ್ನು ಅವರು ಬೇಸಾಯ ಮಾಡೋದು ಬಿಟ್ಟು ಬಹಳ ಕಾಲ ಆಗಿತ್ತು. ಅದರಲ್ಲೀಗ ಕುರುಚಲು ಕಾಡು ಬೆಳೆದು ಬಿಟ್ಟಿದ್ದವು. ಊರಿನಲ್ಲಿ ಅವರಿಗೆ ಸಣ್ಣದೊಂದು ವ್ಯಾಪಾರವಿತ್ತು. ಈ ಹುಡುಗ ನಾಗರಾಜ ಅದೇ ಊರಿನ ಪಕ್ಕದ ಪೇಟೆಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪಿಯುಸಿವರೆಗೆ ಓದಿಕೊಂಡಿದ್ದ. ಹೆಚ್ಚೇನೂ ಓದದ ಅಣ್ಣನೊಬ್ಬನಿದ್ದ. ಮದುವೆಯಾಗದ ಅವನು ವ್ಯಾಪಾರ ವಹಿವಾಟು ಅಂತ ಓಡಾಡಿಕೊಂಡಿದ್ದ, ಆದಾಯ ಕೂಡ ಚೆನ್ನಾಗೇ ಇತ್ತು. ಸ್ವಂತದ್ದೆಂಬ ಮನೆ, ಓಡಾಡಲು ಬೈಕ್ ಇತ್ತು. ಒಂದು ಅನುಕೂಲಸ್ಥ ಮದ್ಯಮ ವರ್ಗದ ಕುಟುಂಬ ಅವರದಾಗಿತ್ತು.

ನಾಗರಾಜನ ಪಕ್ಕದ ಊರಿನಲ್ಲಿ ಗಿರಿಜಳ ಕುಟುಂಬ ಇತ್ತು. ಬಡ ದಲಿತ ಕುಟುಂಬ ಅವರದು. ಒಬ್ಬಳೇ ಮಗಳು. ಅಪ್ಪ ಅಮ್ಮ ಕೂಲಿ ಮಾಡಿ ಗಿರಿಜಳನ್ನು ಓದಿಸುತ್ತಿದ್ದರು. ಒಂದು ಸಣ್ಣ ಮನೆಯಿತ್ತು ಅವರಿಗೆ. ಅವಳು ಮೊದಲ ವರ್ಷದ ಪಿಯುಸಿಗೆ ಆಗಷ್ಟೇ ಸೇರಿಕೊಂಡಿದ್ದಳು. ದಿನವೂ ಊರಿನಿಂದ ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದಳು. ನಾಗರಾಜ ತನ್ನ ಬೈಕಿನಲ್ಲಿ ಬರುವಾಗ ಬಸ್ ನಿಲ್ದಾಣದಲ್ಲಿ ನಿಂತಿರುತ್ತಿದ್ದ ಗಿರಿಜಳನ್ನು ದಿನವೂ ನೋಡುತ್ತಿದ್ದ. ಇವನಿಗೆ ಅವಳಲ್ಲಿ ಏನೋ ಆಕರ್ಷಣೆ ಕಾಣಿಸಲಾರಂಭಿಸಿತು. ನೋಡೋದನ್ನು ಜಾಸ್ತಿ ಮಾಡುತ್ತಾ, ಹಾಗೇನೆ ಆಕೆಯ ದೋಸ್ತಿ ಕೂಡ ಸಂಪಾದಿಸಿ ಬಿಟ್ಟ. ದೋಸ್ತಿ ಆದ ಮೇಲೆ ಅದನ್ನು ಪ್ರೀತಿಗೂ ಬದಲಾಯಿಸಿಕೊಂಡ. ಆ ದೋಸ್ತಿಯ ಉದ್ಧೇಶವೇ ಅದಾಗಿತ್ತು. ಗಿರಿಜಳಿಗೂ ಕೂಡ ನಾಗರಾಜ ಇಷ್ಟವಾಗಿಬಿಟ್ಟ. ಈಗಾಗಲೇ ಗಿರಿಜಳ ಎಲ್ಲಾ ವಿವರಗಳು ಅವನಿಗೆ ಗೊತ್ತಾಗಿದ್ದವು.

ಗಿರಿಜ ತನ್ನ ಮನೆಗೆ ಕರೆದುಕೊಂಡು ಹೋಗಿ ನಾಗರಾಜನಿಗೆ ಅಪ್ಪ ಅಮ್ಮನನ್ನು ಪರಿಚಯಿಸಿದ್ದಳು. ಹುಡುಗ ಒಕ್ಕಲಿಗ ಎಂದು ತಿಳಿದು ಆರಂಭದಲ್ಲಿ ಭಯಗೊಂಡಿದ್ದರೂ ನಂತರ ನಾಗರಾಜ ನೀಡಿದ ಭರವಸೆ, ಗಿರಿಜಳ ಹಟ ಎಲ್ಲಾ ಸೇರಿ ಅವರುಗಳು ಈ ಇಬ್ಬರ ಸಂಬಂಧವನ್ನು ಒಪ್ಪಿಕೊಳ್ಳುವಂತಾಗಿತ್ತು. ಇದೆಲ್ಲಾ ಆಗಿ ವರ್ಷ ಮುಗಿದಿದೆ. ಇದೆಲ್ಲದರ ಮದ್ಯೆ ನಾಗರಾಜ ಗಿರಿಜರ ನಡುವೆ ದೈಹಿಕ ಸಂಬಂಧವೂ ಏರ್ಪಟ್ಟಿತ್ತು. ಒಂದು ದಿನವೂ ಪರಸ್ಪರ ನೋಡದೆ ಇರುತ್ತಿರಲಿಲ್ಲ. ಆದರೆ ನಾಗರಾಜನ ಮನೆಯವರಿಗೆ ಇದರ ವಾಸನೆ ಹಲವು ತಿಂಗಳುಗಳವರೆಗೆ ಬಡಿದಿರಲಿಲ್ಲ. ಅವರಿಗೆ ವಿಷಯ ತಿಳಿದಾಗ ಬಹಳ ತಡವಾಗಿತ್ತು. ಆದರೂ ಅವರು ನಾಗರಾಜನನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಆರಂಭಿಸಿದರು. ಅದರ ಪರಿಣಾಮ ನಾಗರಾಜ ವಾರಗಟ್ಟಲೆ ಗಿರಿಜಳಿಗೆ ಕಾಣಿಸಿರಲಿಲ್ಲ. ಗಿರಿಜ ಮತ್ತವಳ ತಂದೆ ತಾಯಿಯರಿಗೆ ತಮ್ಮ ಆತಂಕ ನಿಜವಾಗುತ್ತಿದೆಯೇನೋ ಅನ್ನಿಸಲಾರಂಭಿಸಿತು. ಆದರೆ ಮಗಳು ಕೇಳುತ್ತಿಲ್ಲ.

ಇವರಿಗೆ ಅವಳ ಭವಿಷ್ಯದ ಚಿಂತೆ ಬೇರೆ. ಸರಿ ನೇರವಾಗಿ ನಾಗರಾಜನ ಮನೆಯವರನ್ನೇ ಮದುವೆ ಮಾಡಿಕೊಡಲು ಕೇಳುವುದು ಎಂದುಕೊಂಡರು. ಹಾಗೇನೇ ಮಾಡಿದರು ಕೂಡ. ಆದರೆ ನಾಗರಾಜನ ಮನೆಯವರ ಪ್ರತಿಕ್ರಿಯೆ ಮಾತ್ರ ಕಟುವಾಗಿತ್ತು. ಅವರು ಮದುವೆಗೆ ಒಪ್ಪುವ ಪ್ರಶ್ನೆಯೇ ಇಲ್ಲವೆಂದು, ಇನ್ನು ಮನೆ ಕಡೆ ಕಾಲಿಡಬಾರದೆಂದೂ ಎಚ್ಚರಿಕೆ ಕೊಟ್ಟರು. ಇದರಿಂದ ಕಂಗಾಲಾದವರು ಗಿರಿಜ ಮತ್ತವಳ ತಂದೆ ತಾಯಿಗಳು. ಇರುವ ಒಬ್ಬಳೇ ಮಗಳ ಭವಿಷ್ಯದ ಮೇಲೆ ಕಾರ್ಮೋಡ ಕವಿಯುತ್ತಿರುವುದನ್ನು ಅವರಿಂದ ಸಹಿಸಲಾಗುತ್ತಿಲ್ಲ. ಗಿರಿಜ ಬೇರೆ, ನಾಗರಾಜನನ್ನು ಬಿಟ್ಟು ಬೇರೆ ಮದುವೆ ಆಗುವುದಿಲ್ಲ ಎನ್ನೋ ತನ್ನ ಪಟ್ಟನ್ನು ಬಿಡುತ್ತಿಲ್ಲ. ಸುಮ್ಮನೆ ಕುಳಿತರೆ ಆಗುವುದಿಲ್ಲ ಎಂದು ಯಾರ್ಯಾರನ್ನೋ ಹಿಡಿದು, ಹೇಗೋ ಮಾಡಿ ಊರ ಪಂಚಾಯಿತಿವರೆಗೆ ವಿಚಾರ ಮುಟ್ಟಿಸಿದರು. ಅದರಿಂದಲೇ ಅನಿವಾರ್ಯವಾಗಿ ಊರ ಪಂಚಾಯಿತಿ ಮಾಡಬೇಕಾಗಿ ಬಂದು ಬಿಡ್ತು. ಆದರೆ ಪಂಚಾಯಿತಿ ನ್ಯಾಯದ ಪರವಾಗಿ ನಿಲ್ಲಲು ವಿಫಲವಾಯಿತು.

ಕಾನೂನಾತ್ಮಕವಾಗಿ ಹೋಗಲು ಕೂಡ ಗಿರಿಜಳ ವಯಸ್ಸು ಇನ್ನೂ ಹದಿನೆಂಟು ಆಗಿರಲಿಲ್ಲ. ಈಗೇನು ಮಾಡೋದು ಎಂಬ ಚಿಂತೆ ಗಿರಿಜ ಮತ್ತವಳ ಮನೆಯವರಿಗೆ ಕಾಡಲು ಶುರುವಾಯಿತು. ಅಷ್ಟರಲ್ಲಾಗಲೇ ನಾಗರಾಜನಿಗೆ ಬೇರೆ ಹುಡುಗಿಯೊಂದಿಗೆ ಮದುವೆ ಮಾಡುವ ತಯಾರಿ ಶುರುವಾಗಿರೋ ವಿಚಾರ ಗಿರಿಜಳ ಮನೆಯವರ ಕಿವಿಗೆ ಬಿತ್ತು. ಇನ್ನು ತಡ ಮಾಡಿದರೆ ಆಗುವುದಿಲ್ಲ ಎಂದು ಕೊಂಡು ಯಾವುದೋ ಸರ್ಕಾರೇತರ ಸಂಸ್ಥೆಯೊಂದರ ಸಹಾಯ ಪಡೆದ ಗಿರಿಜಳ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದರು. ಮೊದಲು ಇವರು ದಲಿತರು ಅನ್ನೋ ಕಾರಣಕ್ಕಾಗಿ ದೂರು ಸ್ವೀಕರಿಸಲು ಸತಾಯಿಸಿದರು ಪೊಲೀಸರು. ಆದರೆ ಸಂಸ್ಥೆಯ ಒತ್ತಡದಿಂದ ದೂರು ಸ್ವೀಕರಿಸಿದ ಪೊಲೀಸರು ನಾಗರಾಜನ ಮೇಲೆ ದೂರು ದಾಖಲಿಸಿದರು. ಪೋಕ್ಸೊ ಕಾಯಿದೆಯ ಪ್ರಕಾರ ಅಪ್ರಾಪ್ತೆಯ ಅಪಹರಣ, ಅತ್ಯಾಚಾರ, ಅದಕ್ಕೆ ಬೆಂಬಲಿಸಿದ್ದು ಅಂತೆಲ್ಲಾ ದೂರು ದಾಖಲಿಸಿದರು. ಜಾಮೀನು ತಕ್ಷಣಕ್ಕೆ ಸಿಗದ ಪ್ರಕರಣವಾಯಿತು ಅದು. ನಾಗರಾಜನನ್ನು ಬಂಧಿಸಿ ಜೈಲಿಗೆ ತಳ್ಳಿದರು.

‘ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ’ ಅಂತ ಇದ್ದವನಿಗೆ ಈಗ ಜೈಲಿನಲ್ಲಿ ಇರೋ ಸುಖ ಏನು ಅಂತ ಗೊತ್ತಾಗತೊಡಗಿತು. ಬಂದ ಹೊಸದರಲ್ಲಿ ನಿಂತುಕೊಂಡು ನಿದ್ದೆ ಮಾಡಲು ಕೂಡ ನಾಗರಾಜನಿಗೆ ಆಗಿರಲಿಲ್ಲ. ಅಷ್ಟೊಂದು ಕಿಕ್ಕಿರಿದು ತುಂಬಿತ್ತು ಆ ಜೈಲು. ವಾರ ಕಳೆದ ಮೇಲೆ ಒಬ್ಬರ ಮೇಲೊಬ್ಬರು ಮಲಗೋ ರೀತಿ ಮಲಗಬೇಕಾದ ಸ್ಥಿತಿಯ ಕೊಠಡಿಯೊಂದಕ್ಕೆ ನಾಗರಾಜನನ್ನು ಹಾಕಿದರು. ಎಪ್ಪತ್ತು ಜನರಿದ್ದ ಆ ಕೊಠಡಿಯಲ್ಲಿ ಕೇವಲ ಒಂದೇ ಪಾಯಿಖಾನೆ ಇತ್ತು. ಊಟಕ್ಕೂ, ಪಾಯಿಖಾನೆಗೂ ಒಂದೇ ರೀತಿಯ ಸರತಿಸಾಲು. ಹೊಟ್ಟೆ ಹಾಳಾದವರ ಸ್ಥಿತಿ ಮಾತ್ರ ಹೇಳಲು ಸಾದ್ಯವಿಲ್ಲ. ನಾಗರಾಜನಿಗೆ ಬಹಳ ಕಷ್ಟವಾಯಿತು. ನಿದ್ದೆ ಇಲ್ಲ, ಸಮಾಧಾನ ಸಿಗುತ್ತಿಲ್ಲ. ಊಟ ಹೇಗೇಗೋ ಅನಿಸತೊಡಗಿತು. ಒಂದು ಕಡೆ ಪ್ರೀತಿಯ ಹುಡುಗಿಯ ವಿಚಾರ, ಮತ್ತೊಂದು ಕಡೆ ಕೇಸು, ಜೈಲಿನ ವಿಚಾರ, ಮನೆಯವರ ವಿಷಯ ಮಗದೊಂದು ಕಡೆ. ತಲೆ ಚಿಟ್ಟು ಹಿಡಿದು ನಾಗರಾಜ ಸುಸ್ತಾಗಿಹೋದ. ಗಿರಿಜಳೂ ಚಿಂತಿತಳಾದಳು.

ನಾಗರಾಜನನ್ನು ಜೈಲಿಗೆ ಹಾಕಿಸಬೇಕು, ಅವನಿಗೆ ಶಿಕ್ಷೆ ಆಗಬೇಕು ಅನ್ನೋದು ಅವಳ ಉದ್ಧೇಶವಾಗಿರಲಿಲ್ಲ. ದೂರು ಕೊಟ್ಟರೆ ನಾಗರಾಜನ ಜೊತೆ ತನ್ನ ಮದುವೆ ಮಾಡಿಸುತ್ತಾರೆ. ಬೇರೆ ಮದುವೆ ಮಾಡಿಸಲು ನಾಗರಾಜನ ಮನೆಯವರು ಹೋಗುವುದಿಲ್ಲ. ನಾಗರಾಜನಿಗೂ ಏನೂ ಆಗುವುದಿಲ್ಲ ಅಂತ ಅಂದುಕೊಂಡಿದ್ದಳು. ಹಾಗಂತ ಬೇರೆಯವರು ಕೂಡ ಪುಕ್ಕಟೆ ಸಲಹೆ ಬೇರೆ ಕೊಟ್ಟಿದ್ದರು. ತಿಂಗಳುಗಳು ಕಳೆದವು. ನಾಗರಾಜನಲ್ಲಿ ಬಹಳ ಬದಲಾವಣೆಗಳಾದವು. ಅವನಿಗೆ ಈಗ ಗಿರಿಜಳನ್ನು ಹೇಗಾದರೂ ಮನವೊಲಿಸಿ, ನ್ಯಾಯಾಲಯದಲ್ಲಿ ತನಗೆ ಅನುಕೂಲವಾಗುವಂತೆ ಹೇಳಿಸಿ, ಶಿಕ್ಷೆಯಾಗದಂತೆ ನೋಡಿಕೊಂಡು, ಹೇಗಾದರೂ ಮಾಡಿ ಜೈಲಿನಿಂದ ಹೊರಗೆ ಹೋಗಬೇಕೆನ್ನೋ ಒಂದು ಉದ್ಧೇಶ ಮಾತ್ರ ಗಟ್ಟಿಯಾಯಿತು. ಆದರೆ ಮನೆಯವರನ್ನು ಎದುರಿಸಿ ಗಿರಿಜಳಿಗೆ ನ್ಯಾಯ ನೀಡಲು ಅವನು ಈಗಲೂ ಸಿದ್ಧನಾಗಿರಲಿಲ್ಲ. ಅವನ ಪ್ರೀತಿಯ ಮಟ್ಟ ಅಷ್ಟೇ ಆಗಿತ್ತು. ಜೈಲಿನಲ್ಲೂ ಗಂಡು ಮನಸುಗಳ ಇಂತಹ ಮನೆಹಾಳು ಸಲಹೆಗಳಿಗೆ ಕೊರತೆಯೇನೂ ಇರಲಿಲ್ಲ. ಹಾಗಾಗಿ ಗಿರಿಜಳಿಗೆ ಯಾಮಾರಿಸಿ ಮೋಸ ಮಾಡಲು ಬೇಕಾದ ಎಲ್ಲಾ ಯೋಜನೆಗಳನ್ನು ರೂಪಿಸತೊಡಗಿದ. ಅವನು ಗಿರಿಜಳನ್ನು ಒಲಿಸಿಕೊಳ್ಳಲು ಕೂಡ ಇಷ್ಟೊಂದು ಯೋಚನೆ, ಯೋಜನೆ, ಚಿಂತನೆ ಮಾಡಿರಲಿಲ್ಲ.

ಗಿರಿಜ ದೂರು ನೀಡಲು ತೀರ್ಮಾನಿಸಿದಾಗ ಏನೇನು ಅಂದುಕೊಂಡಿದ್ದಳೋ ಅದಕ್ಕೆ ವಿರುದ್ದ ದಿಕ್ಕಿನಲ್ಲಿ ವಿಷಯಗಳು ಸರಿಯತೊಡಗಿದವು. ನಾಗರಾಜನನ್ನ ಜೈಲಿನಿಂದ ಬಿಡಲಿಲ್ಲ. ನಾಗರಾಜನ ಮನೆಯವರು ಜಗ್ಗಲಿಲ್ಲ. ಮಗ ದಲಿತ ಹುಡುಗಿಯೊಂದಿಗೆ ಶರೀರ ಹಂಚಿಕೊಂಡರೂ ಪರವಾಗಿಲ್ಲ. ಆದರೆ ದಲಿತ ಹುಡುಗಿಯೊಂದಿಗೆ ಮದುವೆಗೆ ಮಾತ್ರ ಒಪ್ಪಲು ಸಾದ್ಯವಿಲ್ಲ. ಮಗನಿಗೆ ಶಿಕ್ಷೆ ಆದರೂ ಪರವಾಗಿಲ್ಲ, ಎಂಬ ಹಠ ಅವರದು. ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ, ಗಿರಿಜ ತನ್ನ ಹೇಳಿಕೆಯಲ್ಲಿ ನಾಗರಾಜನನ್ನು ಪ್ರೀತಿಸುತ್ತಿದ್ದೇನೆಂದು, ಇನ್ನು ಕೆಲವೇ ದಿನಗಳಲ್ಲಿ ತಾನು ಹದಿನೆಂಟು ವಯಸ್ಸು ದಾಟುತ್ತೇನೆಂದು ಆಗ ನಾಗರಾಜನೊಂದಿಗೆ ತಾನು ಮದುವೆಯಾಗಲು ಬಯಸಿರುವುದಾಗಿಯೂ ಹೇಳಿದ್ದಳು. ನಾಗರಾಜನಿಗೆ ಶಿಕ್ಷೆ ಆಗುವುದು ತನ್ನ ಉದ್ಧೇಶವಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಳು. ನಾಗರಾಜ ತನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ. ತಾನು ಗಿರಿಜಳನ್ನು ಪ್ರೀತಿಸುತ್ತಿದ್ದೆ ಅನ್ನೋ ಸತ್ಯವನ್ನು ಕೂಡ ಸುಳ್ಳು ಎಂದ. ವಿಚಾರಣೆ ಮುಗಿಯಲು ಎರಡು ವರ್ಷಗಳು ಬೇಕಾಯಿತು. ಈ ಎರಡು ವರ್ಷ ನಾಗರಾಜ ಜೈಲಿನಲ್ಲಿ ಕಳೆದ.

ತನ್ನ ವಿರುದ್ದ ಹೇಳಿಕೆ ನೀಡದಂತೆ ಗಿರಿಜಳನ್ನು ಯಾಮಾರಿಸುವಲ್ಲಿ ನಾಗರಾಜ ಯಶಸ್ವಿಯಾಗಿದ್ದರಿಂದ ನಾಗರಾಜ ಶಿಕ್ಷೆಯ ಕುಣಿಕೆಯಿಂದ ತಪ್ಪಿಸಿಕೊಂಡ. ನ್ಯಾಯಾಲಯ ಅಪಹರಣ ಅತ್ಯಾಚಾರಗಳ ಬಗ್ಗೆ ಸಾಕ್ಷಿ ಇಲ್ಲವೆಂದು ನಾಗರಾಜನನ್ನು ಪ್ರಕರಣದಿಂದ ಖುಲಾಸೆಗೊಳಿಸಿತು. ಅಮಾಯಕ ಗಿರಿಜಳಿಗೆ ಆ ಕಡೆ ಪ್ರೀತೀನೂ ಸಿಗಲಿಲ್ಲ,ಈ ಕಡೆ ನ್ಯಾಯಾನೂ ಸಿಗಲಿಲ್ಲ. ಅವಳು ಮುರುಟಿ ಹೋದಳು. ಅಲ್ಲಲ್ಲ, ಅವಳನ್ನು ಹೊಸಕಿ ಹಾಕಿದರು. ಯಾಕೆಂದರೆ ಅವಳು ಹುಡುಗಿ, ಅವಳು ದಲಿತಳು, ಅವಳು ಬಡವಳು. ಅವಳ ಬದುಕಿನಲ್ಲಿ ಆಟ ಆಡಿದ ನಾಗರಾಜ ಮತ್ತವನ ಮನೆಯವರು ಅವಳನ್ನು ಬಳಸಿ ಬಿಸುಟಿದರು. ಅವರಿಗೆ ಜಾತಿ ಬಲವಿತ್ತು, ಸಮಾಜದ ಬಲವಿತ್ತು. ಗಂಡೆಂಬ ಗರಿಮೆಯಿತ್ತು. ಗಿರಿಜಳಿಗೆ ಮಾತ್ರ ಅದು ಯಾವುದೂ ಇರಲಿಲ್ಲ. ಈ ದೇಶದ ಎಷ್ಟೋ ಸಾಮಾನ್ಯ ಮನೆತನದ ಹುಡುಗಿಯರಿಗೆ ಅನ್ವಯವಾಗುವ ನೈಜ ಕತೆಯಿದು. (ವಿಶೇಷ ಸೂಚನೆ: ಇಲ್ಲಿ ಸ್ಥಳ ಮತ್ತು ವ್ಯಕ್ತಿಗಳ ಹೆಸರುಗಳನ್ನು ಬದಲಾಯಿಸಲಾಗಿದೆ.)