ರಿಪಬ್ಲಿಕ್ ಡೇ ತಂದ ಬಿಡುಗಡೆ ಭಾಗ್ಯ: 16 ವರ್ಷಗಳ ನಂತರ ಸಾಮಾನ್ಯ ಬದುಕಿಗೆ ಮರಳಿದ ಜಯಂತ್ ಕತೆ
PRISON STORIES

ರಿಪಬ್ಲಿಕ್ ಡೇ ತಂದ ಬಿಡುಗಡೆ ಭಾಗ್ಯ: 16 ವರ್ಷಗಳ ನಂತರ ಸಾಮಾನ್ಯ ಬದುಕಿಗೆ ಮರಳಿದ ಜಯಂತ್ ಕತೆ

ಇವತ್ತು ಗಣರಾಜ್ಯೋತ್ಸವ; ಜಯಂತ್ ಜೈಲಿನಿಂದ ಬಿಡುಗಡೆಯಾಗುವನು. ಜೈಲುವಾಸ ಮುಗಿಯುತ್ತದೆಂದು, ಸರಕಾರ ಮಾಡುವ ಅಕಾಲಿಕ ಬಿಡುಗಡೆಯ ಪಟ್ಟಿಯಲ್ಲಿ  ತನ್ನ ಹೆಸರು ಸೇರಿದೆ ಎಂದು ಅವನಿಗೆ ಗೊತ್ತಾಗಿತ್ತು. ಆದರೂ ಆತಂಕವಿದೆ ಅವನ ಮುಖದಲ್ಲಿ; ಅದಕ್ಕೆ ಕಾರಣಗಳೂ ಇವೆ. ಬಿಡುಗಡೆ ಎಂದು ಬಟ್ಟೆಗಿಟ್ಟೆ ತಯಾರು ಮಾಡಿಕೊಂಡು ನಿಂತಿದ್ದವರಿಗೆ, ಕೊನೆ ಘಳಿಗೆಯಲ್ಲಿ ಅವರ ಬಿಡುಗಡೆಯನ್ನು ರದ್ದುಗೊಳಿಸಲಾಗಿದೆ ಎಂಬ ಸುದ್ದಿ ಕೇಳಿ ಹತಾಶರಾಗಿ ಕುಸಿದು ಕುಳಿತವರನ್ನು ಬಹಳ ಸಾರಿ ಕಣ್ಣಾರೆ ನೋಡಿದ್ದಾನೆ ಜಯಂತ್. ಅದರಿಂದಲೇ ಇಂದು ಆತಂಕ, ಕಸಿವಿಸಿ, ದುಗುಡಗಳಿಂದ ತುಂಬಾ ದಣಿದವನಂತೆ ಕಾಣುತ್ತಾನೆ.

ಜಯಂತನ ಊರು ಕೊಡಗು ಹಾಸನ ಜಿಲ್ಲೆಗಳ ಗಡಿಯಲ್ಲಿದೆ. ಬಡ ರೈತ ಕುಟುಂಬದಿಂದ ಬಂದವನು. ಮನೆಗೆ ಆಸ್ತಿ ಅಂತ ಇದ್ದದ್ದು ಮುಕ್ಕಾಲು ಎಕರೆ ತೋಟ. ತೋಟವೆಂದರೆ ಸ್ವಲ್ಪ ರೊಬಾಸ್ಟಾ ಕಾಫಿ, ಹತ್ತು ಅಡಿಕೆ, ಐದಾರು ತೆಂಗಿನ ಮರಗಳಿರುವ ಜಾಗ. ಇರಲಿಕ್ಕೆ ಒಂದು ಸಣ್ಣ ಮನೆಯಿತ್ತು. ಮಾಡು ಹಂಚಿನದಾದರೂ ಗೋಡೆಗಳು ಶಿಥಿಲಗೊಂಡಿದ್ದವು. ಜಯಂತನಿಗೆ ಒಬ್ಬಳು ತಂಗಿ ಮಾತ್ರ. ಅಪ್ಪ ಅಮ್ಮ ಇವರಿಬ್ಬರಿಗೂ ಎಸ್‌ಎಸ್‌ಎಲ್‌ಸಿವರೆಗೆ ಓದಿಸಿದ್ದರು.

ತಂಗಿಗೆ ಮದುವೆಯಾದ ಮೇಲೆ ಜಯಂತನಿಗೆ ಕೂಡ ಮದುವೆಯಾಯಿತು. ಹುಡುಗಿ ಕೂಡ ಅದೇ ಭಾಗದವಳು. ಆಕೆ ಪಿಯುಸಿ ಓದಿದ್ದಳು. ಬಡ ಕುಟುಂಬವಾಗಿದ್ದರಿಂದ ಆಕೆಯ ತಂದೆ ತಾಯಿಗಳು ಬಂದ ಸಂಬಂಧ ಬಿಡಬಾರದೆಂದು ಜಯಂತನ ಜೊತೆ ಮದುವೆ ಮಾಡಿದ್ದರು. ಆರಂಭದಲ್ಲಿ ಎಲ್ಲವೂ ‘ಈಸ್ಟ್‌ಮನ್’ ಸಿನಿಮಾದಂತೆ ಇತ್ತು. ಜಯಂತ್ ಕೂಲಿನಾಲಿ, ಸಣ್ಣ ಪುಟ್ಟ ವ್ಯಾಪಾರ ಮಾಡುತ್ತ ಕುಟುಂಬಕ್ಕಾಗುವಷ್ಟು ಗಳಿಸುತ್ತಿದ್ದ. ಕಾಳು ಮೆಣಸು, ಏಲಕ್ಕಿ, ಗೇರುಬೀಜ, ಸಣ್ಣ ಪುಟ್ಟ ಮರಮುಟ್ಟುಗಳು ಅವನು ನಡೆಸುತ್ತಿದ್ದ ವ್ಯಾಪಾರ ವಹಿವಾಟುಗಳಲ್ಲಿ ಸೇರಿರುತ್ತಿದ್ದವು.

ಒಂದೆರಡು ವರ್ಷಗಳಲ್ಲಿ ಇಬ್ಬರು ಮಕ್ಕಳ ತಂದೆಯೂ ಆದ. ಅಷ್ಟರಲ್ಲಿ ಜಯಂತನ ತಂದೆ ತೀರಿಕೊಂಡಿದ್ದರು. ಅವರೂ ಒಳ್ಳೆಯ ದುಡಿಮೆಗಾರರಾಗಿದ್ದರು. ಕುಡಿತದ ಚಟ ಇದ್ದಿದ್ದರಿಂದ ಅವರು ವಯಸ್ಸಿಗೆ ಮೀರಿದ ವೃದ್ಧಾಪ್ಯಕ್ಕೆ ಜಾರಿದರು. ಕರುಳು ಕೈಕೊಟ್ಟಿತ್ತು. ಇವರೇ ಕರುಳಿಗೆ ಕೈಕೊಟ್ಟರೆಂದು ಹೇಳುವುದು ಸರಿಯಾಗುತ್ತದೆ. ಆ ಮಟ್ಟದ ಕುಡಿತದ ದಾಸ್ಯಕ್ಕೆ ಅವರು ಜಾರಿಬಿದ್ದಿದ್ದರು. ಜಯಂತ್ ಈಗ ಹೆಂಡತಿ, ಎರಡು ಮಕ್ಕಳು, ತಾಯಿಯೊಂದಿಗೆ ಜೀವನ ನಡೆಸುತ್ತಿದ್ದ. ಮಕ್ಕಳು ಮೂರು ನಾಲ್ಕು ವರ್ಷ ಪ್ರಾಯಕ್ಕೆ ಬರುವವರೆಗೆ ಜಯಂತನ ಮನಸ್ಸು ಹಾಗು ಕುಟುಂಬದಲ್ಲಿ ಯಾವುದೇ ಬಿರುಗಾಳಿ ಬೀಸಿರಲಿಲ್ಲ. ಆದರೆ ಜಯಂತ್ ಆಗಾಗ್ಗೆ ಕುಡಿಯಲು ಶುರುಮಾಡಿದ.

ಹೆಂಡತಿ ಕೇಳಿದಾಗ ವ್ಯಾಪಾರ ಗೀಪಾರ ಮಾಡುವವರು ಬೇರೆಯವರೊಂದಿಗೆ ಸಂಪರ್ಕ ಸಾಧಿಸಲು ಕುಡಿಯದಿದ್ದರೆ ಸಾಧ್ಯವಾಗುವುದಿಲ್ಲ, ಅವರಿಗೆ ಕಂಪನಿ ಕೊಡದಿದ್ದರೆ ಸಂಬಂಧ ಹಾಳಾಗಿ ವ್ಯಾಪಾರಕ್ಕೆ ತೊಂದರೆಯಾಗುತ್ತದೆ- ಹೀಗೆಲ್ಲಾ ಸಾಮಾನ್ಯವಾಗಿ ಕುಡಿತದ ಚಟ ಬೆಳೆಸಿಕೊಂಡವರು ಹೇಳುವ ಹಾಗೆ ಇವನೂ ಹೇಳಿ ಬಾಯಿ ಮುಚ್ಚಿಸುತ್ತಿದ್ದ. ಮೈಕೈ ನೋವು ಹೋಗಬೇಕಾದರೆ ಸರಾಯಿ ಅಗತ್ಯ ಎಂದೂ ಸೇರಿಸುತ್ತಿದ್ದ. ದಿನಗಳು, ವಾರಗಳು, ತಿಂಗಳುಗಳು ಉರುಳುತ್ತಿದ್ದವು. ಅದ್ಯಾವಗೋ ಈತನಿಗೆ ಹೆಂಡತಿಯ ಬಗ್ಗೆ ಅನುಮಾನ ಬೆಳೆಯಲು ಶುರುವಾಯಿತು. ಆಕೆಯ ನಡುವಳಿಕೆಯಲ್ಲಿ ಈತನಿಗೆ ತಪ್ಪುಗಳೇ ಕಾಣಲು ತೊಡಗಿದವು.

ಈ ಹೊತ್ತಿಗೆ ಜಯಂತನ ಕುಡಿತ ಮಿತಿಮೀರಿಬಿಟ್ಟಿತ್ತು. ಸಾಮಾನ್ಯವಾಗಿ ಎಲ್ಲಾ ಗಂಡಸರಿಗೂ ಇರುವ ಹಾಗೆ ಜಯಂತನಿಗೆ ಗಂಡೆಂದರೆ ಮೇಲು, ಗಂಡ ಹೇಳಿದಂತೆಲ್ಲಾ ಹೆಂಡತಿಯಾದವಳು ಕೇಳುತ್ತಾ ಬಿದ್ದಿರಬೇಕು ಎಂಬ ಅಭಿಪ್ರಾಯವೇ ಇತ್ತು. ಕುಡಿತ ಮಿತಿ ಮೀರಿದ ಪ್ರಭಾವವೋ ಅಥವಾ ಅವರಿವರು ಕಡ್ಡಿ ಆಡಿಸಿದ್ದರಿಂದಲೋ, ಜಯಂತನ ಸಂಸಾರದಲ್ಲಿ ಬಿರುಗಾಳಿ ಎದ್ದು ಬೀಸಲಾರಂಭಿಸಿತು. ದಿನವೂ ರಾತ್ರಿ ಜಗಳ, ಬೈಗುಳ, ಹೊಡೆತಗಳಿಗೆ ಹೆಂಡತಿ ಸಿದ್ಧಳಾಗಿಯೇ ಕುಳಿತಿರಬೇಕಾದ ಸ್ಥಿತಿ.

ಗಂಡಸರು ಹಾಳಾಗಲು ಹೆಂಗಸರೇ ಕಾರಣ ಎಂಬ ಪೂರ್ವಸಿದ್ಧ ಚಿಂತನೆ ಜಯಂತನಲ್ಲಿ ಗಾಢವಾಗಿತ್ತು. ರೋಸಿ ಹೋದ ಸಮಯದಲ್ಲಿ ಹೆಂಡತಿ ಜಯಂತನಿಗೆ ಪ್ರತ್ಯುತ್ತರ ನೀಡುತ್ತಿದ್ದಳು. ಆಗ ಜಯಂತ್ ಮತ್ತೂ ರೊಚ್ಚಿಗೇಳುತ್ತಿದ್ದ. ಯಾವುದೇ ನಿಯಂತ್ರಣವಿಲ್ಲದೆ ಕೈಗೆ ಸಿಕ್ಕ ವಸ್ತುಗಳನ್ನು ಹೆಂಡತಿಯ ಮೇಲೆ ಪ್ರಯೋಗಿಸುತ್ತಿದ್ದ. ಇದು ಜಯಂತನಿಗೆ ನಿತ್ಯದ ದಿನಚರಿಯಾಯಿತು. ಬೆಳೆಯುತ್ತಿದ್ದ ಮಕ್ಕಳು ಭಯ, ಗಾಬರಿಯಿಂದ ಮುದುರಿ ಮೂಲೆ ಸೇರತೊಡಗಿದರು.

ಹೀಗಿರಲು ಒಂದು ದಿನ ಆಕ್ರೋಶಗೊಂಡ ಜಯಂತನ ಕೈಗೆ ಮಂಡೆ ಕತ್ತಿ ಸಿಕ್ಕಿಬಿಟ್ಟಿತು. ಅದನ್ನು ದಿನವೂ ಮಸೆದು ಇಡುತ್ತಿದ್ದರು. ಏನೋ ಹೇಳಿದಳೆಂದು ಸಿಟ್ಟಿನಲ್ಲಿ ಕುದಿದುಹೋದ ಜಯಂತ ಹೆಂಡತಿಯತ್ತ ಕತ್ತಿ ಬೀಸಿ ಬಿಟ್ಟ. ಇವನ ಆರ್ಭಟಕ್ಕೆ ತಾಯಿಯತ್ತ ಮಕ್ಕಳು ಓಡಿ ಬರುವುದಕ್ಕೂ, ಇವನು ಕತ್ತಿ ಬೀಸುವುದಕ್ಕೂ ಸೆಂಕಿಡಿನ ವ್ಯತ್ಯಾಸವೂ ಇರಲಿಲ್ಲ. ಹೆಂಡತಿಯತ್ತ ಬೀಸಿದ ಕತ್ತಿಯ ಪೆಟ್ಟು ಮಕ್ಕಳ ಮೇಲೆ ಬಿತ್ತು. ಆದರೂ ಜಯಂತ ವಾಸ್ತವ ಜಗತ್ತಿಗೆ ಬರಲಿಲ್ಲ. ಮತ್ತೆರಡು ಮೂರು ಬಾರಿ ಬೀಸಿದ. ಹೆಚ್ಚಿನ ಪೆಟ್ಟು ಮಕ್ಕಳ ಮೇಲೆ ಅದಾಗಲೇ ಬಿದ್ದಾಗಿತ್ತು. ಹೆಂಡತಿಗೂ ಗಂಭೀರ ಗಾಯಗಳಾದವು. ಬಿದ್ದ ಪೆಟ್ಟಿಗೆ ಆ ಮಕ್ಕಳ ಪ್ರಾಣ ಅದಾಗಲೇ ಹೋಗಿಬಿಟ್ಟಿತ್ತು.

ಹೆಂಡತಿ ತನಗಾದ ಗಂಭೀರ ಗಾಯದ ಮಧ್ಯೆ ಶಕ್ತಿ ಮೀರಿ ಮಕ್ಕಳಿಗಾಗಿ ರೋಧಿಸತೊಡಗಿದಳು. ತಾನು ಹೆತ್ತು ಬೆಳೆಸಿದ ಎಳೆ ಮಕ್ಕಳು ಕಡಿಸಿಕೊಂಡು ತನ್ನ ಮಡಿಲಲ್ಲೆಯೇ ಸತ್ತು ಬಿದ್ದಿರುವ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಹೊರಳಾಡತೊಡಗಿದಳು. ಅಂದು ಜಯಂತನ ತಾಯಿ ಮನೆಯಲ್ಲಿ ಇರಲಿಲ್ಲ. ಅವರ ತಾಯಿಯ ಸಂಬಂಧದವರ ಮನೆಗೆ ಹೋಗಿದ್ದರು. ಹಾಗಾಗಿ ಕಾಡಿನ ಮಧ್ಯೆ ಇರುವ ಆ ಒಂಟಿ ಮನೆಯಲ್ಲಿ ಜಯಂತನನ್ನು ತಡೆಯುವವರ್ಯಾರೂ ಇರಲಿಲ್ಲ. ಜಯಂತನ ನಿಶೆ, ರೋಷ ನಿಧಾನವಾಗಿ ಈಗ ಇಳಿಯತೊಡಗಿತು. ಏನು ಪ್ರಯೋಜನ, ಅನಾಹುತ ಅದಾಗಲೇ ನಡೆದುಹೋಗಿತ್ತು.

ಅದಕ್ಕೆ ಕಾರಣವೂ ಇವನೇ ಆಗಿದ್ದ. ಎರಡು ಬೆಳೆಯುತ್ತಿದ್ದ ತನ್ನ ಎಳೆ ಮಕ್ಕಳ ಬದುಕಿಗೆ ತಾನೇ ಮುಳುವಾಗಿಬಿಟ್ಟ. ಅರಳಬೇಕಾದ ಜೀವಗಳನ್ನು ಮುಗಿಸಿಯೇ ಬಿಟ್ಟ. ಹೆಂಡತಿ ಸಾವು ಬದುಕುಗಳ ಮಧ್ಯೆ ಒದ್ದಾಡಿ ಹೇಗೋ ಬದುಕಿ ಬಂದಳು.ಜಯಂತ ಜೈಲುಪಾಲಾದ. ವಿಚಾರಣೆ ನಡೆಸಿದ ಸತ್ರ ನ್ಯಾಯಾಲಯ ಜಯಂತನಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿತು.ಇವೆಲ್ಲಾ ನಡೆದು ಈಗಾಗಲೇ ಹದಿನಾರು ವರ್ಷಗಳು ಕಳೆದಿವೆ. ಈ ಹದಿನಾರು ವರ್ಷಗಳನ್ನು ಜಯಂತ ಜೈಲಿನಲ್ಲೇ ಕಳೆದಿದ್ದಾನೆ. ಈಗವನಿಗೆ ಐವತ್ತರ ಪ್ರಾಯ. ಹೆಂಡತಿ ಇವನ ಸಹವಾಸವೇ ಬೇಡೆಂದು ತೊರೆದು ಎಷ್ಟೋ ವರ್ಷಗಳಾಗಿವೆ.

ಈಗ ಇವನಿಗೆ ತಾಯಿ ಮಾತ್ರ ದಿಕ್ಕು. ಆ ಅಮ್ಮ ಹೆತ್ತ ತಪ್ಪಿಗೆ ಇಳಿವಯಸ್ಸಿನಲ್ಲಿಯೂ ಕಣ್ಣೀರು ಹಾಕುತ್ತ ತನ್ನ ಮಗನ ಬರುವಿಕೆಗಾಗಿ ಕಾಯುತ್ತ ಜೀವಿಸುತ್ತಿದ್ದಾರೆ. ಅದೂ ಇದೂ ಕೆಲಸ, ಹಾಗೇ ತೋಟದಿಂದ ಬರುವ ಅಲ್ಪ ಆದಾಯದಿಂದ ತನ್ನ ಜೀವನ ನೋಡಿಕೊಳ್ಳುವ ಜೊತೆಗೆ ಜಯಂತನನ್ನೂ ಆಗಾಗ್ಗೆ ಕಂಡು ಅಷ್ಟೋ ಇಷ್ಟೋ ಕಾಸು ಕೊಟ್ಟು ಹೋಗುತ್ತಾರೆ. ಅವರಿಗೆ ಈಗಾಗಲೇ ಎಪ್ಪತ್ತೈದರ ಪ್ರಾಯ. ಜಯಂತನ ವಿಚಾರಣೆಯ ಕಾಲದಲ್ಲಿ ವಕೀಲರಿಗೆ ಶುಲ್ಕವೆಂದು ಮೂರು ಲಕ್ಷದಷ್ಟು ಕೈಬಿಟ್ಟಿತ್ತು.

ಬಹು ಕಷ್ಟದಿಂದ ಕೂಡಿಟ್ಟಿದ್ದ ಹಣ ಕೆಳ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯದ ಖರ್ಚುಗಳಿಗೆ ಕರಗಿತ್ತು. ಮಕ್ಕಳ ಸಾವು, ತನ್ನ ಕುಸಿದ ಬದುಕನ್ನು ನೆನೆ ನೆನೆದು ಜಯಂತ ಬಸವಳಿದು ಹೋಗಿದ್ದ. ಕೂತಲ್ಲಿ ನಿಂತಲ್ಲಿ ಮಲಗಿದಲ್ಲಿ ಎಲ್ಲಾ ಕಡೆಯೂ ಈ ಭೀಕರ ಕಹಿ ನೆನಪುಗಳು ಅವನನ್ನು ಕಾಡಿ ಇನ್ನಿಲ್ಲದಂತೆ ಹಿಂಸಿಸಿದ್ದವು. ಮಾನಸಿಕವಾಗಿ ಕುಸಿದುಹೋಗಿದ್ದ ಜಯಂತ್ ಪೂರ್ತಿ ಸುಧಾರಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ತನ್ನ ದುಗುಡ ದುಃಖ ದುಮ್ಮಾನಗಳನ್ನು ಮರೆಯಲು ಗಾಂಜಾ ಸೇದುವ ಪುಕ್ಕಟ್ಟೆ ಸಲಹೆ ಸ್ವೀಕರಿಸಿಬಿಟ್ಟಿದ್ದ. ಗಾಂಜಾ ಸೇದದೇ ಇರುಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ತಲುಪಿದ್ದ. ಅದಕ್ಕಾಗಿಯೇ ಕೆಲವು ಗೆಳೆಯರನ್ನು ಕಟ್ಟಿಕೊಂಡಿದ್ದ. ಹಣ ಬೇಕಲ್ಲಾ, ಅದಕ್ಕಾಗಿ ಜೈಲಿನಲ್ಲೇ ಅವರಿವರಿಗೆ ಟೋಪಿ ಹಾಕುವುದನ್ನು ಶುರು ಮಾಡಿದ್ದ. ಹಾಗೂ ಹೀಗೂ ಹದಿನಾರು ವರ್ಷಗಳನ್ನು ಜೈಲಿನಲ್ಲಿ ಕಳೆದುಬಿಟ್ಟಿದ್ದ ಜಯಂತ್.

ಸರಕಾರಗಳು ಸನ್ನಡತೆಯಡಿ ಅಕಾಲಿಕವಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಬಂಧಿಗಳನ್ನು ಆಗಾಗ್ಗೆ ಬಿಡುಗಡೆ ಮಾಡುವ ಪರಿಪಾಠವಿದೆ. ಒಂದಷ್ಟು ವರ್ಷಗಳು ನಿಂತೇ ಹೋಗಿದ್ದ ಈ ಪ್ರಕ್ರಿಯೆ ಈಗ ಶುರುವಾಗಿದೆ. ಸ್ವಾತಂತ್ರ ದಿನ, ಗಣರಾಜ್ಯೋತ್ಸವದಂತ ವಿಶೇಷ ದಿನಗಳಂದು ಮಾಫಿ ಸೇರಿ ಹದಿನಾಲ್ಕು ವರ್ಷ ಶಿಕ್ಷೆ ಅನುಭವಿಸಿದ ಬಂಧಿಗಳನ್ನು ಬಿಡುಗಡೆಗೊಳಿಸುವ ಕಾರ್ಯ ನಡೆಯಲು ಶುರುವಾಗಿ ಮೂರು ವರ್ಷ ಕಳೆದರೂ ಜಯಂತನ ಬಿಡುಗಡೆ ಆಗಿರಲಿಲ್ಲ. ಹಾಗಾಗಿ ಜಯಂತ್ ಹದಿನಾರು ವರ್ಷ ಪೂರ್ತಿಯಾಗಿ ಜೈಲಿನಲ್ಲಿರಬೇಕಾಯಿತು.

ಜಯಂತನ ಹೆಸರು ಬಿಡುಗಡೆ ಪಟ್ಟಿಯಲ್ಲಿ ಸೇರಿದ್ದು ಸುಲಭವಾಗಿ ಆಗಿರಲಿಲ್ಲ. ಕೆಲವರಿಗೆ ನೋಟುಗಳಿಂದ ಕೈಬಿಸಿ ಮಾಡಲೇ ಬೇಕಿತ್ತು. ಯಾರ್ಯಾರದೋ ಕಾಲು ಹಿಡುದು ಕಾಸು ಹೊಂದಿಸಿ ಅಗತ್ಯವಿದ್ದವರ ಕೈಬಿಸಿ ಮಾಡಿದ್ದ. ಒಂದೆರಡು ಬಾರಿ ಪರೋಲ್ ಸೌಲಭ್ಯ ಪಡೆದು ಊರಿಗೆ ಬಂದು ಮರಮುಟ್ಟು ಸೌದೆ ವ್ಯಾಪಾರ ಮಾಡಿ ಒಂದಷ್ಟು ಕಾಸು ಸಂಪಾದಿಸಿದ್ದ. ಆ ಕಾಸಿನಿಂದ ತನ್ನ ಅಗತ್ಯ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದ. ತನ್ನ ಬಳಿ ಇದ್ದದ್ದನ್ನು ಜೋಡಿಸಿ, ಬೇರೆಯವರ ಬಳಿ ದುಂಬಾಲು ಬಿದ್ದು ಅವರು ನೀಡಿದ್ದನ್ನು ಸೇರಿಸಿ ತನ್ನ ಬಿಡುಗಡೆ ಕೆಲಸಗಳಿಗೆ ಬಳಸಿದ್ದ. ಈತನ ಹೆಸರು ಮೂರು ಬಾರಿ ಮೊದಲನೇ ಹಂತದಲ್ಲೇ ತಿರಸ್ಕರಿಸಲ್ಪಟ್ಟಿತ್ತು. ಆಗೆಲ್ಲಾ ತನಗೆ ಇನ್ನು ಬಿಡುಗಡೆ ಭಾಗ್ಯವೇ ಇಲ್ಲ ಎಂದುಕೊಂಡಿದ್ದ. ಹತಾಶನಾಗಿದ್ದ. ಮಾನಸಿಕವಾಗಿ ಮತ್ತಷ್ಟು ಕುಗ್ಗಿಹೋಗಿದ್ದ.

ಆದರೆ ಈ ಬಾರಿ ಜಯಂತನ ಹೆಸರು ರಾಜ್ಯ ಮಟ್ಟದಲ್ಲಿ ಅಂಗೀಕಾರವಾಗಿರುವುದರಿಂದ ಬಿಡುಗಡೆಯ ಕನಸು ಗರಿಗೆದರಿ ನಿಂತಿತ್ತು.  ಜಯಂತ್‌ಗೆ ಬಿಡುಗಡೆಯ ಬಗ್ಗೆ ಆತಂಕವಿದ್ದರೂ ಭವಿಷ್ಯದ ಬದುಕಿನ ಬಗ್ಗೆ ಭರವಸೆ, ನಿರೀಕ್ಷೆಗಳನ್ನು ಬೆಳೆಸಿಕೊಂಡಿದ್ದಾನೆ.  ಬಿಡುಗಡೆಯ ದಿನ ಬಂದೇಬಿಟ್ಟಿತು. ಬೆಳಗ್ಗೆ ಎದ್ದ ಕೂಡಲೆ ತನ್ನ ಬಿಡುಗಡೆಯ ಬಗ್ಗೆ ಖಚಿತಪಡಿಸಿಕೊಂಡ. ಜಯಂತ್ ಲವಲವಿಕೆಯಿಂದ ಓಡಾಡುತ್ತಾ ಇದುವರೆಗೂ ಒಡನಾಟದಲ್ಲಿದ್ದ ಎಲ್ಲಾ ಗೆಳೆಯರ ಬಳಿ ತೆರಳಿ ವಿದಾಯ ಹೇಳಲು ತೊಡಗಿದ.

ಹೊಸಬಾಳಿನ ಕನಸುಗಳು ಅರಳತೊಡಗಿದವು.ಇವತ್ತು ಮತ್ತೆ ಅಂತಹದ್ದೇ ಮತ್ತೊಂದು ರಿಪಬ್ಲಿಕ್ ಡೇ ಬಂದಿದೆ. ದೇಶಾದ್ಯಂತ ಅದೆಷ್ಟೋ ಜಯಂತ್‌ಗಳ ಹೊಸ ಬಾಳಿನ ಕನಸು ನೆನಸಾಗಿರಬಹುದು. ಜೈಲು ಹೊರಗಿರುವವರ ಪಾಲಿಗೆ ಕುತೂಹಲದ ಕೇಂದ್ರ. ಒಳಗಿರುವವರ ಪಾಲಿಗೆ, ಹೊರಬಂದರೆ ಸಾಕು ಎನ್ನಿಸುವ ನರಕ. ಅದರ ತೀವ್ರತೆ ಎಷ್ಟಿರುತ್ತದೆ ಎಂಬುದು ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ದಿನಗಳು ಸಾರಿ ಹೇಳುತ್ತಲೇ ಇರುತ್ತವೆ.