ಹಣದಾಸೆಗಾಗಿ ದಾರಿ ತಪ್ಪಿ ರಾಯಚೂರಿನ ಜೈಲಿನಲ್ಲಿ ಬಂಧಿಯಾದ ತೆಲಂಗಾಣದ ಯುವಕನ ಕತೆ
PRISON STORIES

ಹಣದಾಸೆಗಾಗಿ ದಾರಿ ತಪ್ಪಿ ರಾಯಚೂರಿನ ಜೈಲಿನಲ್ಲಿ ಬಂಧಿಯಾದ ತೆಲಂಗಾಣದ ಯುವಕನ ಕತೆ

ಹಿಂದಿನ ಆಂಧ್ರಪ್ರದೇಶದ ತೆಲಂಗಾಣ ಭಾಗ (ಈಗ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿದೆ) ತೀರಾ ಹಿಂದುಳಿದ ಪ್ರದೇಶ. ಕೃಷಿ, ಕೈಗಾರಿಕೆ, ಬೆಳವಣಿಗೆ ಇಲ್ಲ. ಇಲ್ಲಿ ಭೂಹೀನ ರೈತರೇ ಹೆಚ್ಚು. ಕರಾವಳಿ ಆಂಧ್ರ ಹಾಗೂ ರಾಯಲಸೀಮೆ ಆಂಧ್ರಕ್ಕೆ ಹೋಲಿಸಿದರೆ ತೆಲಂಗಾಣ ವಿಚಾರದಲ್ಲಿ ಅತೀ ಹಿಂದುಳಿದಿರುವಿಕೆ ಎದ್ದು ಕಾಣುತ್ತಿತ್ತು. ಈ ಭಾಗದ ಬಡಗಿ ಕುಟುಂಬದ ಹುಡುಗ ರಘು. ಮನೆಕಡೆ ಎರಡೆಕರೆ ಒಣಭೂಮಿ ಇತ್ತು. ಅಪ್ಪ ಮಾಡುತ್ತಿದ್ದ ಬಡಗಿ ಕೆಲಸವೇ ಜೀವನಾಧಾರ. ತಂದೆ ತಾಯಿ ತಂಗಿಯಿರುವ ಕುಟುಂಬ ಈತನದು. ತಂಗಿ ಎಂಟನೇ ತರಗತಿ ಓದುತ್ತಿದ್ದಳು. ಇವನ ಹಳ್ಳಿಯಲ್ಲಿ ಹಣಕಾಸು ಓಡಾಟ ಕಡಿಮೆಯೇ. ಊರಿನ ಬಡಗಿ ಕೆಲಸಗಳನ್ನು ಮಾಡಿಕೊಟ್ಟಿದ್ದಕ್ಕೆ ಊರಿನ ದೊಡ್ಡ ಭೂಹಿಡುವಳಿದಾರರು ಇತರ ರೈತಾಪಿಗಳು ವರ್ಷಕ್ಕೆ ಇಂತಿಷ್ಟು ಎಂದು ಜೋಳ ಕೊಡುತ್ತಿದ್ದರು. ಅದರಲ್ಲಿ ಕೆಲವರು ಮಾತ್ರ ಒಂದಷ್ಟು ಹಣವನ್ನು ನೀಡುತ್ತಿದ್ದರು.

ಇವನು ಪಿಯುಸಿ ಮುಗಿಸಿ ಕೆಲವರ್ಷ ಹಳ್ಳಿಯಲ್ಲಿ ಕಳೆದ. ನಂತರ ಕೆಲಸಕ್ಕೆಂದು ಸ್ನೇಹಿತರೊಬ್ಬರ ನೆರವಿನಿಂದ ಹೈದರಾಬಾದ್‌ಗೆ ಹೋದ. ಆರಂಭದ ಒಂದು ವಾರ ಕೆಲಸಕ್ಕಾಗಿ ಹುಡುಕಾಟ. ಒಂದೆರಡು ಅಂಗಡಿಗಳಲ್ಲಿ ಮಾರಾಟದ ಹುಡುಗನಾಗಿ ಒಂದು ತಿಂಗಳು ಕೆಲಸ ಮಾಡಿದ. ನಂತರ ದೊಡ್ಡ ಮಾಲ್ ಒಂದರಲ್ಲಿ ಮಾರಾಟಗಾರನಾಗಿ ಕೆಲಸಕ್ಕೆ ಸೇರಿಕೊಂಡ. ದೊಡ್ಡ ನಗರ, ಥಳಕು, ಬಳಕು ಜಾಸ್ತಿ. ಹುಡುಗ ರೋಮಾಂಚಿತನಾಗಿದ್ದ. ಕೆಲವರು ಪರಿಚಯಸ್ಥರಾದರು. ಊಟಕ್ಕೆ ಹಾಗೇನೆ ತಿರುಗಾಡುವಷ್ಟು ಸಂಬಳವಿತ್ತು. ಸ್ನೇಹಿತನೊಂದಿಗೆ ಕೊಠಡಿ ಹಂಚಿಕೊಂಡಿದ್ದ. ಮನೆಯವರಿಗೆ ಕಳಿಸಲು ಹಣ ಉಳಿಯುತ್ತಿರಲಿಲ್ಲ. ಹೀಗೆ ಸಾಗಿತ್ತು ಅವನ ಬದುಕು.

ನಗರದ ನಕಾರಾತ್ಮಕ ಗುಣಗಳು ಅವನಿಗೂ ಅರ್ಥವಾಗತೊಡಗಿದ್ದವು. ವ್ಯವಹಾರಿಕ ಮನೋಭಾವವೇ ಅಧಿಕ ಅಂತ ಅನಿಸತೊಡಗಿತು. ನಂಬಿಕೆ, ಕಾಳಜಿ, ಪ್ರಾಮಾಣಿಕತೆಗಳು ಇವನು ಕೆಲಸ ಮಾಡುವ ವಲಯದಲ್ಲಿ ಕಡಿಮೆ ಎನಿಸತೊಡಗಿತು.ಇಂತಹ ಸಂದರ್ಭದಲ್ಲಿ ಇವನಿಗೆ ಒಂದು ಹುಡುಗಿಯ ಪರಿಚಯವಾಗುತ್ತದೆ. ಅವಳ ಹೆಸರು ಸೀತ. ಇವನು ಕೆಲಸ ಮಾಡುವ ಮಾಲ್ ನಲ್ಲೇ ಅವಳೂ ಇದ್ದಳು. ಪರಿಚಯ ಆಕರ್ಷಣೆಯಾಗಿ ಪ್ರೇಮಕ್ಕೆ ತಿರುಗಲು ಬಹಳ ಕಾಲ ಬೇಕಾಗಲಿಲ್ಲ. ಸಿನಿಮಾಗಳಲ್ಲಿ ತೋರಿಸುವ ಪ್ರೇಮದ ಮಾದರಿ ನೈಜವೆಂದುಕೊಂಡಿರುವವರು ಅಧಿಕವಲ್ಲವೇ. ಇವರ ಕತೆಯೂ ಹಾಗೆಯೇ. ಸೀತಾಗೆ ಇರೋದು ಒಬ್ಬಳು ತಾಯಿ ಮಾತ್ರ. ತಾಯಿಯೊಂದಿಗೆ ಹೈದರಾಬಾದ್ ನಗರದ ಜೋಪಡಿಯೊಂದರಲ್ಲಿ ಇವಳ ವಾಸ. ದಲಿತ ಹಿನ್ನೆಲೆ, ತಂದೆ ಬಹಳ ಹಿಂದೆಯೇ ತೀರಿಕೊಂಡಿದ್ದರು. ಕುಡಿತ ಅವರ(ತಂದೆಯ) ಸಂಗಾತಿಯಾಗಿತ್ತಂತೆ. ತಾಯಿ ಅಕ್ಕ ಪಕ್ಕದ ಅನುಕೂಲಸ್ಥರ ಬಟ್ಟೆ ತೊಳೆದು, ಕಸಮುಸುರೆಯ ಕೆಲಸ ಮಾಡುತ್ತಿದ್ದರು. ಅವರಿಬ್ಬರ ದುಡಿಮೆಯೇ ಅವರ ಆದಾಯ. ಆ ತಾಯಿ ಈ ಹುಡುಗಿಯನ್ನು ತನ್ನ ಕಷ್ಟಕಾರ್ಪಣ್ಯಗಳ ನಡುವೆಯೂ ಹತ್ತನೆ ತರಗತಿಯವರೆಗೆ ಓದಿಸಿದ್ದರು.

ಇವರಿಬ್ಬರೂ ಈಗ ಪ್ರೇಮಿಗಳು. ರಘುವಿನ ಮನೆಯವರಿಗೆ ಇದೇನೂ ತಿಳಿದಿಲ್ಲ. ಸೀತೆಯ ತಾಯಿಗೆ ಮಗಳಲ್ಲಾದ ಬದಲಾವಣೆ ಗೊತ್ತಾಗಿತ್ತು. ಎಷ್ಟಾದರೂ ಹೆತ್ತ ತಾಯಿಯಲ್ಲವೆ, ನೇರವಾಗಿಯೇ ಮಗಳನ್ನು ಕೇಳಿದರು. ಆರಂಭದಲ್ಲಿ ಕೊಸರಾಡಿ ನಂತರ ತಾಯಿ ಬಳಿ ತನ್ನ ಪ್ರೇಮದ ಕತೆಯನ್ನು ಬಿಚ್ಚಿದ್ದಳು ಸೀತ. ರಘುವನ್ನು ಮನೆಗೆ ಕರೆತಂದಳು. ರಘುವಿಗೆ ತನ್ನ ಕತೆಯನ್ನೆಲ್ಲಾ ಹೇಳಿದ್ದಳು. ಅವನೂ ತನ್ನ  ಮನೆಕತೆಯನ್ನೆಲ್ಲಾ ಸೀತೆಯೊಂದಿಗೆ ಹಂಚಿಕೊಂಡಿದ್ದ. ಸೀತೆಯ ತಾಯಿಗೆ ಹುಡುಗ ಇಷ್ಟವಾದ. ರಘುವಿನ ಮನೆಯವರು ಮದುವೆಗೆ ಒಪ್ಪುವ ವಿಚಾರ ಎಲ್ಲರಿಗೂ ಆತಂಕದಲ್ಲಿತ್ತು. ಹುಡುಗನ ಮನೆಯವರು ವಿಶ್ವಕರ್ಮ ಬಡಗಿ ಪಂಗಡದ ಹಿನ್ನೆಲೆಯವರಾದ್ದರಿಂದ ಒಪ್ಪುವ ಪ್ರಶ್ನೆಯೇ ಇಲ್ಲವೆಂದು ಎಲ್ಲರಿಗೂ ಸ್ಪಷ್ಟವಾಯಿತು.

ರಘು ಮಾತ್ರ ಸೀತೆಯ ಹಾಗೆಯೇ ಅವನ ತಾಯಿಯ ಮೇಲೆ ಭರವಸೆಯ ಮೋಡಿ ಹಾಕಿದ್ದ. ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ವಾಗ್ದಾನ ಮಾಡಿದ್ದ. ಇಬ್ಬರೂ 23ರ ಪ್ರಾಯದವರು. ಸೀತೆಯ ತಾಯಿಗೆ ಇಬ್ಬರೂ ಬೇಗ ಮದುವೆ ಆಗಿಬಿಟ್ಟರೆ ಒಳ್ಳೆಯದು ಎಂಬ ಯೋಚನೆ. ರಘು ಸಣ್ಣದೊಂದು ಮನೆಯನ್ನು ಬಾಡಿಗೆಗೆ ಹಿಡಿದ. ಕೆಲ ತಿಂಗಳು ಅವರು ‘ಲೀವಿಂಗ್ ಟುಗೆದರ್’ ರೀತಿ ಜೀವನ ನಡೆಸಿದರು. ಹೈದರಾಬಾದ್ ನಗರದ ಕೆಲವು ಭಾಗಗಳಲ್ಲಿ ಲೀವಿಂಗ್ ಟುಗೆದರ್ ವಿಶೇಷವೇನಲ್ಲ. ಇದೆಲ್ಲಾ ಸರಿಯಲ್ಲ ಎಂದು ಸೀತೆಯ ತಾಯಿಗೆ ಅನಿಸಿತ್ತು. ಮಗಳ ಭವಿಷ್ಯದ ಆತಂಕ ಬೇರೆ ಇತ್ತು. ಸೀತೆಯ ತಾಯಿ ಹಠ ಹಿಡಿದಿದ್ದರಿಂದ ಅನಿವಾರ್ಯವಾಗಿ ನಂತರ ರಘು ಮತ್ತು ಸೀತ ಮದುವೆ ಮಾಡಿಕೊಂಡರು.

ಇಷ್ಟೆಲ್ಲಾ ಆದರೂ ರಘುವಿನ ಮನೆಯವರಿಗೆ ಇದ್ಯಾವುದೂ ಇನ್ನು ತಿಳಿದಿರಲಿಲ್ಲ. ದಿನಗಳು ಉರುಳಿದವು, ಇವರ ಕುಟುಂಬಕ್ಕೆ ಹೊಸ ಅಥಿತಿಯ ಆಗಮನ ಶುರುವಾಯಿತು. ಜವಾಬ್ದಾರಿ ಹೆಚ್ಚುತ್ತಲಿತ್ತು. ಹಾಗಿದ್ದಾಗ ಒಂದು ದಿನ ಕರ್ನಾಟಕದ ರಾಯಚೂರು ಜಿಲ್ಲೆಯ ಒಬ್ಬ ಸ್ನೇಹಿತ ರಘುವಿಗೆ ಕರೆ ಮಾಡಿದ. ಆತ ಇವನಿಗೆ ಹೈದರಾಬಾದಿನಲ್ಲೇ ಪರಿಚಯವಾದವನು. ಈ ಮೊದಲೇ ಇವನನ್ನು ತನ್ನ ಊರಿಗೆ ಆಮಂತ್ರಿಸಿದ್ದ. ಸರಿ ರಘು ಆ ಹುಡುಗನನ್ನು ಭೇಟಿ ಮಾಡಲು ತೆರಳಿದ. ಸೀತ ತನ್ನ ಗಂಡನನ್ನು ನೋಡಿದ್ದು ಅಂದೇ ಕೊನೆ. ಆಗ ಅವಳು ಮೂರು ತಿಂಗಳ ಗರ್ಭಿಣಿ.

ರಘು ರಾಯಚೂರಿಗೆ ತಲುಪುವ ಮುನ್ನವೇ ಮಾರ್ಗಮದ್ಯದ ರೇಲ್ವೇ ನಿಲ್ದಾಣದಲ್ಲಿ ಆ ಗೆಳೆಯ ಇವನನ್ನು ಭೇಟಿಯಾದ. ಮೊಬೈಲ್‌ ಇರುವುದರಿಂದ ಸಂಪರ್ಕಕ್ಕೆ ಕಷ್ಟವಾಗಲಿಲ್ಲ. ಅವನ(ಸ್ನೇಹಿತ) ಜೊತೆಗೆ ಒಂದು ಪುಟ್ಟ ಬಾಲಕಿಯಿದ್ದಳು. ರಘುವಿಗೆ ಆ ಬಾಲಕಿಯನ್ನು ಒಪ್ಪಿಸಿ, "ಇವಳು ನನ್ನ ಚಿಕ್ಕಪ್ಪನ ಮಗಳು. ನಾನು, ಚಿಕ್ಕಪ್ಪ ಈ ಪುಟ್ಟಿ ಇಲ್ಲೇ ನೆಂಟರ ಮನೆಗೆ ಬಂದಿದ್ವಿ. ಚಿಕ್ಕಪ್ಪನಿಗೆ ಏನೋ ಕೆಲಸವೆಂದು ಬೇರೆ ಕಡೆ ಹೋದರು. ನಾನು ಇವಳೊಂದಿಗೆ ಮನೆಗೆ ಹೋಗಬೇಕಿತ್ತು. ನನಗೆ ಪಕ್ಕದೂರಿನಲ್ಲಿ ಸ್ವಲ್ಪ ಕೆಲಸ ಇದೆ. ಅಲ್ಲಿಗೆ ಹೋಗಿ ಬರಬೇಕಾಗಿದೆ. ನೀನು ಹೇಗೂ ಊರಿಗೆ ಬರುತ್ತೀಯಲ್ಲಾ, ಇವಳನ್ನು ನಿನ್ನೊಂದಿಗೆ ಕರೆದುಕೊಂಡು ಬಾ. ನಾನು ನಿನಗೆ ಮುಂದಿನ ರೈಲ್ವೆ ಸ್ಟೇಷನ್ನಿನಲ್ಲಿ ಸಿಗುತ್ತೇನೆ. ಅಲ್ಲಿಂದ ನಾನೂ ನಿನ್ನೊಂದಿಗೆ ಬರುತ್ತೇನೆ," ಎಂದೆಲ್ಲಾ ಹೇಳಿದ.

ಆ ಏಳೆಂಟು ವರ್ಷದ ಹುಡುಗಿಗೆ ಈ ಅಂಕಲ್ ನಿನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ, ನಾನೂ ಮುಂದಿನ ನಿಲ್ದಾಣದಿಂದ ನಿಮ್ಮ ಜೊತೆ ಬರುತ್ತೀನಿ ಎಂದೆಲ್ಲಾ ಹೇಳಿ, ತಿಂಡಿಗಿಂಡಿ ಕೊಟ್ಟು ಪುಸಲಾಯಿಸಿ ಒಪ್ಪಿಸಿದ. ಆ ಪುಟ್ಟ ಹುಡುಗಿ ಮನೆಮಾತು ತೆಲುಗು. ರಘುವಿನ ಮಾತೃಭಾಷೆಯೂ ಅದೇ ಆಗಿತ್ತು. ಹಾಗಾಗಿ ಆ ಪುಟ್ಟ ಹುಡುಗಿಯನ್ನು ಪುಸಲಾಯಿಸಿ ಜೊತೆಗಿಟ್ಟುಕೊಳ್ಳುವುದು ಕಷ್ಟವಾಗಲಿಲ್ಲ. ರಘು ಆ ಪುಟ್ಟ ಬಾಲಕಿಯೊಂದಿಗೆ ತೆರಳಿದ.

ಅಲ್ಲಿಂದ ಇಪ್ಪತ್ತೈದು ಕಿಮೀ ಮುಂದಿನ ರೈಲ್ವೇ ಸ್ಟೇಷನ್. ಅಲ್ಲಿ ಪುಟ್ಟಿಯೊಂದಿಗೆ ರೈಲಿನಿಂದ ರಘು ಇಳಿದ. ನಿಲ್ದಾಣದಲ್ಲಿ ಹತ್ತು ನಿಮಿಷ ಕಾದರೂ ತನ್ನ ರಾಯಚೂರಿನ ಸ್ನೇಹಿತ ಬರಲಿಲ್ಲ. ಈ ಪುಟ್ಟ ಹುಡುಗಿ ಬೇರೆ ಮನೆಗೆ ಹೋಗಬೇಕೆಂದು ಹಠ ಮಾಡುತ್ತಿತ್ತು. ಸುಮಾರು ಹದಿನೈದು ನಿಮಿಷ ಕಳೆದಿರಬಹುದು. ಹಲವು ವ್ಯಕ್ತಿಗಳು ಇವನನ್ನು ಸುತ್ತುವರೆದರು. ಕೆಲವೇ ಕ್ಷಣಗಳಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸರು ಸೇರಿಕೊಂಡರು. ಮಗುವನ್ನು ಇವನಿಂದ ಬೇರ್ಪಡಿಸಿ ಕರೆದೊಯ್ದರು. ಇವನನ್ನು ‘ಭಾರತೀಯ ಪೋಲಿಸ್ ಭಾಷೆ’ಯಲ್ಲಿ ವಿಚಾರಣೆ ನಡೆಸಿ ಜೈಲಿಗೆ ತಳ್ಳಿದರು. ಇವನ ಜೊತೆ ಈತನ ರಾಯಚೂರಿನ ಸ್ನೇಹಿತ ಹಾಗೆಯೇ ಮತ್ತಿಬ್ಬರನ್ನು ಸೇರಿಸಿ ಜೈಲಿಗೆ ತಳ್ಳಿದರು.

ಆ ಮಗು ಅಪಹರಣಕ್ಕೀಡಾಗಿತ್ತು. ಈತನ ರಾಯಚೂರಿನ ಸ್ನೇಹಿತನೇ ಈ ಅಪಹರಣದ ಸೂತ್ರದಾರ. ಇಪ್ಪತ್ತು ಲಕ್ಷ ಹಣಕ್ಕೆ ಮಗುವಿನ ತಂದೆಗೆ ಆಗ್ರಹಿಸಲಾಗಿತ್ತು. ಮಗು ಆತನಿಗೆ ಅಪರಿಚಿತವಾಗಿರಲಿಲ್ಲ. ಏನೂ ತೊಂದರೆಯಾಗದೆ ಸುಲಭವಾಗಿ ಹಣ ಮಾಡಿ ಎಲ್ಲಾದರೂ ಜೀವನ ನಡೆಸಬಹುದು ಎಂದುಕೊಂಡಿದ್ದರು. ಆದರೆ ಆಗಿದ್ದು ಮಾತ್ರ ಬೇರೆ. ಈ ರಘು ಅದೇನೂ ತನಗೆ ತಿಳಿದಿರಲಿಲ್ಲ. "ಸ್ನೇಹಿತನನ್ನು ನೋಡಲೆಂದು ಮಾತ್ರ ಹೈದರಾಬಾದಿನಿಂದ ಬಂದೆ, ಆದರೆ ಹೀಗೆಲ್ಲಾ ಆಗುತ್ತದೆ ಎಂದು ಗೊತ್ತೇ ಇರಲಿಲ್ಲ," ಎಂದು ಹೇಳುತ್ತಾನೆ. ಆದರೆ ಅದು ಅಷ್ಟು ಸತ್ಯವೆನಿಸುವುದಿಲ್ಲ. ಈ ರಘುವಿಗೆ ಹಣದ ಅವಶ್ಯಕತೆ ಬಹಳ ಇತ್ತು. ರಾಯಚೂರಿನ ಸ್ನೇಹಿತನ ಬಳಿ ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು ಸಾಲಕ್ಕೆ ದುಂಬಾಲು ಬಿದ್ದಿದ್ದ. ತನ್ನ ಅಸಹಾಯಕತೆಯನ್ನು ಬಿಚ್ಚಿಟ್ಟಿದ್ದ.

ಅವನು ಇವನನ್ನು ಬಳಸಿಕೊಂಡು ಲಕ್ಷ ಲಕ್ಷ ಸಂಪಾದಿಸಿ ಒಂದಷ್ಟು ಇವನಿಗೆ ಕೊಟ್ಟು ಉಳಿದಿದ್ದನ್ನು ತಾನೇ ಅನುಭವಿಸಬಹುದು ಎಂದು ಈ ಕೃತ್ಯವನ್ನು ಸಂಘಟಿಸಿದ್ದ. ಪೋಲಿಸರು ಬಂಧಿಸಿ ಇವನನ್ನು ಜೈಲಿಗೆ ತಳ್ಳಿದ ಮೇಲೆಯೇ ಇವನ ಮನೆಯವರಿಗೆ ಇವನ ಕೃತ್ಯ ತಿಳಿದದ್ದು. ಇವನ ಮದುವೆ, ಸೀತೆ ಅವರಿಗೆ ಇನ್ನೂ ತಿಳಿದೇ ಇಲ್ಲ. ಅವಳಿಗೆ ಹಲವು ತಿಂಗಳ ಕಾಲ ಇವನೆಲ್ಲಿದ್ದಾನೆ ಎಂದೇ ಗೊತ್ತಿರಲಿಲ್ಲ. ತುಂಬು ಗರ್ಬಿಣಿಯಾಗಿದ್ದ ಕಾಲದಲ್ಲಿ, ತನ್ನ ಬಾಳಸಂಗಾತಿ ತನ್ನೊಂದಿಗೆ ಈಗ ಇರಬೇಕೆಂದು ತೀವ್ರವಾಗಿ ಬಯಸುವ ಸಮಯದಲ್ಲಿಯೇ ಈ ಆಘಾತಕಾರಿ ಸುದ್ದಿ ಅವಳಿಗೆ ಗೊತ್ತಾಗಿದ್ದು. ಆದರೆ ಆಕೆ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅಮ್ಮನೇ ನೋಡಿಕೊಳ್ಳಬೇಕಾಯಿತು. ಅವಳು ಐದು ವರ್ಷದ ಕೂಸಿನೊಂದಿಗೆ ಅವಳ ಅಮ್ಮನ ಜೊತೆಯಿದ್ದಾಳೆ. ದಿನದಿನವೂ ನೋವು ದುಃಖ ಹತಾಶೆಯಿಂದ ಬಸವಳಿದು ಇದೀಗ ಚೇತರಿಸಿಕೊಂಡಿದ್ದಾಳೆ. ಕೂಸಿನ ಜವಾಬ್ದಾರಿ ಆಕೆಯನ್ನು ಜೀವಂತವಾಗಿಟ್ಟಿದೆ.

ರಘು ಮೇಲಿನ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿ ಈಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇವನೊಂದಿಗೆ ಇವನ ಗೆಳೆಯರೂ ಇದ್ದಾರೆ. ಇವರು ಅಪಹರಿಸಿದ್ದ ಮಗು ಇವರುಗಳನ್ನು ನ್ಯಾಯಾಲಯದಲ್ಲಿ ಗುರುತು ಹಿಡಿದಿತ್ತು. ಜೊತೆಗೆ ರೈಲ್ವೇ ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮರಾ ಕೂಡ ಇವನನ್ನು ಸೆರೆ ಹಿಡಿದಿತ್ತು. ನ್ಯಾಯಾಲಯವು ಈ ಎಲ್ಲ ಸಾಕ್ಷಿಗಳನ್ನು ಪರಿಗಣಿಸಿ ತೀರ್ಪು ನೀಡಿತ್ತು. ಸುಲಭದಲ್ಲಿ ಹಣ ಸಂಪಾದಿಸಿ ಸುಖವಾಗಿ ಬದುಕಬೇಕೆಂಬ ದುರಾಸೆ ಯಾವಾಗ ಇವನ ಮನದಲ್ಲಿ ಮೂಡಿತ್ತೋ ಆಗಲೇ ಬದುಕು ದುರಂತವಾಗಿತ್ತು. ಸಾಲದ್ದಕ್ಕೆ ಅ ಹುಡುಗಿಯ, ಮಗುವಿನ ಬದುಕನ್ನೂ ನರಕವಾಗಿಸಿಬಿಟ್ಟಿದ್ದ. ದುರಾಸೆಗೆ ಒಬ್ಬ ವ್ಯಕ್ತಿ ಜಾರಿದಲ್ಲಿ ಹಲವರ ಬದುಕುಗಳಲ್ಲಿ ಎಂತಹ ಅನಾಹುತಗಳನ್ನು ಸೃಷ್ಟಿಸಬಲ್ಲ ಎಂಬುದಕ್ಕೆ ಇದೊಂದು ಉದಾಹರಣೆ.(ಇಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ).