ಮದ್ಯಪಾನ ಆರೋಗ್ಯಕ್ಕೆ ಹಾನಿಕರ; ಎಚ್ಚರ ತಪ್ಪಿದ್ದಕ್ಕೆ ಜೈಲು ಪಾಲಾದ ರಾಮಪ್ಪನ ಕತೆ!
PRISON STORIES

ಮದ್ಯಪಾನ ಆರೋಗ್ಯಕ್ಕೆ ಹಾನಿಕರ; ಎಚ್ಚರ ತಪ್ಪಿದ್ದಕ್ಕೆ ಜೈಲು ಪಾಲಾದ ರಾಮಪ್ಪನ ಕತೆ!

ಅದೊಂದು ಕೋಣೆ. ಅಲ್ಲಿ ಅರೆಗತ್ತಲಿತ್ತು. ನಲವತ್ತು ವರ್ಷ ಪ್ರಾಯದ ವ್ಯಕ್ತಿಯೊಬ್ಬ ಗೋಡೆ ಬದಿಯಲ್ಲಿ ಕುಳಿತಿದ್ದ. ಇದವನ ಮಾಮೂಲಿ ದಿನಚರಿ. ಆತ ಜೈಲಿಗೆ ಬಂದು ಈಗಾಗಲೇ ಎಂಟು ವರ್ಷಗಳು ಮುಗಿದಿದೆ. ಆದರೂ ಆತ ಹಳೆಯ ಯೋಚನೆಗಳಿಂದ ಹೊರಬರುತ್ತಿಲ್ಲ. ಆ ಕೊಠಡಿಯಲ್ಲಿ ನಲವತೈದು ಜನರಿದ್ದಾರೆ. ಬಹುತೇಕ ಜನರು ರಾತ್ರಿ ಏಳುವರೆ ಒಳಗೆ ಊಟ ಮುಗಿಸಿ ತಮ್ಮ ಹಾಸಿಗೆಗಳಲ್ಲಿ ಮುದುಡಿಕೊಳ್ಳುತ್ತಾರೆ. ಬಹಳ‌ ಜನರಿಗೆ ನಿದ್ರೆ ಬರುವುದಿಲ್ಲ. ಬೀಡಿ ಎಳೆಯುತ್ತಾರೆ ಹಲವರು, ಗಾಂಜಾ ಸೇದುವ ಗುಂಪೂ ಇದೆ. ಅವೆಲ್ಲದರ ಹೊಗೆ ಕೊಠಡಿ ಎಲ್ಲಾ ಆವರಿಸುತ್ತದೆ.

ಹಾಸಿಗೆಯಲ್ಲೇ ಹಗಲುಗನಸು. ಹಾಗೇನೆ, ಇರುಳುಕನಸುಗಳನ್ನು ಕಾಣುತ್ತಿರುತ್ತಾರೆ. ಹೊದ್ದುಕೊಂಡು ಅಳುವವರು, ಮಾನಸಿಕ ಸ್ಥೀಮಿತ ಕಳೆದು ನಗುವವರೂ ಇದ್ದಾರೆ ಅಲ್ಲಿ. ತಮ್ಮಪಾಡಿಗೆ ತಾವಿದ್ದು ಯಾರ ಬಳಿಯೂ ತಮ್ಮ ನೋವುಗಳನ್ನು ಹಂಚಿಕೊಳ್ಳಲು ಸಾದ್ಯವಾಗದೆ ಒಳಗೊಳಗೇ ನರಳುವವರು ಹಲವರು. ಅಲ್ಲಿನ ಒಬ್ಬೊಬ್ಬರದು ಒಂದೊಂದು ದಾರುಣ ಕತೆ.  ಅವರಲ್ಲಿ ಹೆಚ್ಚಿನವರು ಬಡವರೆ.  ಮಧ್ಯಮ ವರ್ಗದವರು ಒಂದಿಬ್ಬರಿರಬಹುದು; ದಲಿತರು ಹಿಂದುಳಿದವರೇ ಎಲ್ಲರೂ. ಮೇಲು ಜಾತಿ ಎನಿಸಿಕೊಂಡವರು ಅಲ್ಲಿ ಇಲ್ಲ. ಹಳೇ ಮೈಸೂರಿನ ಜಿಲ್ಲೆಗೆ ಸೇರಿದವರು ಅಲ್ಲಿದ್ದಾರೆ. ತುಂಡುಭೂಮಿ ಇರುವವರಿದ್ದಾರೆ. ಕೂಲಿ ಮಾಡುವವರು ಇದ್ದಾರೆ. ಒಂದಿಬ್ಬರು ಮಧ್ಯಮ ರೈತರಿರಬಹುದು. ಅವರಲ್ಲಿ ಈ ಯುವಕ ಒಬ್ಬ; ಹೆಸರು ರಾಮಪ್ಪ.

ಹನ್ನೆರಡು ವರ್ಷಗಳ ಹಿಂದೆ ಈತ ಕೃಷಿಕನಾಗಿದ್ದ. ವಾಸಕ್ಕೆ ಮನೆಯಿತ್ತು. ಮದುವೆಯಾಗಿ ಮಕ್ಕಳಿಬ್ಬರಿದ್ದರು. ಅದರಲ್ಲಿ ಒಂದು ಹೆಣ್ಣು. ಈತನ ಊರು ಸಕಲೇಶಪುರ ಹಾಸನ ಮಧ್ಯದಲ್ಲಿದೆ. ನಾಲ್ಕು ಎಕರೆ ಭೂಮಿಯಿತ್ತು. ಕಾಫಿ ಅಡಿಕೆ ಭತ್ತದ ಬೆಳೆಗಳಿದ್ದವು. ಜೊತೆಗೆ  ಏಲಕ್ಕಿ ಮೆಣಸು ಸ್ವಲ್ಪವಿತ್ತು. ಎಸ್ ಎಸ್ ಎಲ್ ಸಿ ವರೆಗೆ ಓದಿದ್ದ. ಸಾಕಷ್ಟು ಆದಾಯ ಬರುತ್ತಿದ್ದುದ್ದರಿಂದ ಮನೆ ಪೇಟೆ ಎಂದು ಓಡಾಡಿಕೊಂಡಿದ್ದ. ಮರಮುಟ್ಟು, ಮೆಣಸುಗಳ ಸಣ್ಣ ವ್ಯಾಪಾರ ವಹಿವಾಟು ಮಾಡುತ್ತಿದ್ದ. ಅದೇನೂ ಗಂಭೀರ ಕೆಲಸವಾಗಿರಲಿಲ್ಲ.

ತಿರುಗಾಡಲು ಏನಾದರೂ ನೆಪ‌ ಬೇಕಲ್ಲಾ? ಅದೇ ವಲಯದ ಸ್ನೇಹಿತರಿದ್ದರು, ಓಡಾಡಲು ಬೈಕಿತ್ತು. ಮನೆ ಜಮೀನಿನಲ್ಲಿ ಒಂದಿಬ್ಬರು ಕೆಲಸಗಾರರಿದ್ದರು. ಈತನಿಗೆ ಹೊರಗಿನ ಸೆಳೆತಗಳೇ ಅಧಿಕ. ಈತನೊಬ್ಬನೆ ಮಗ. ತಂದೆ ತಾಯಿ ಐದು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಹೆಂಡತಿಯೇ ಮನೆ ಜಮೀನು ನೋಡಿಕೊಳ್ಳುವುದು. ಅದು ಇವನಿಗೆ ಹೊರಗೆ ತಿರುಗಾಡಲು ಸುಲಭ ಮಾಡಿತ್ತು. ಗಂಡು ಮಗು ಮೂರನೇ ತರಗತಿ, ಹೆಣ್ಣು ಮಗು ನಾಲ್ಕನೇ ತರಗತಿ ಓದುತ್ತಿತ್ತು. ಹೊರಗಿನ ತಿರುಗಾಟ, ವ್ಯಾಪಾರವೆಂದು ಹಲವರ ಸಖ್ಯ, ಪ್ರತಿಷ್ಟೆಯ ಸಂಕೇತವೆಂದು ಕುಡಿತ ಬೆಳೆಸಿಕೊಂಡಿದ್ದ. ಜೊತೆಗೆ ಇರಲಿ ಎಂದು ಜೂಜು ಆಡುತ್ತಿದ್ದ. ಹೆಂಡತಿಗೂ ಇದೆಲ್ಲಾ ಗೊತ್ತಿಲ್ಲದೇ ಇರಲಿಲ್ಲ. ಆಕೆ ನಿಯಂತ್ರಿಸಿದರೂ ಈತ ಬಿಟ್ಟಿರಲಿಲ್ಲ.

ವ್ಯಾಪಾರ ವಹಿವಾಟು ಮಾಡಲು ಇದೆಲ್ಲಾ ಅಗತ್ಯವೆಂದೇ ವಾದಿಸುತ್ತಾ ಆಕೆಯ ಬಾಯಿ ಮುಚ್ಚಿಸಲು ನೋಡುತ್ತಿದ್ದ. ಪೇಟೆಯ ಬಾರುಗಳೆಲ್ಲಾ ಪರಿಚಯ ಈತನಿಗೆ. ಕೈಯಲ್ಲಿ ಕಾಸು ಸರಾಗವಾಗಿ ಓಡಾಡುತ್ತಿತ್ತು. ಒಣಪ್ರತಿಷ್ಟೆ, ದರ್ಪ, ಅಹಂಕಾರವೂ ಸಾಕಷ್ಟಿತ್ತು. ಬುದ್ಧಿ ಮಂಕಾಗಲು ಬೇರೆ ಕಾರಣ ಬೇಡ ತಾನೆ? ಹೀಗೆ ಸಾಗುತ್ತಿತ್ತು ಅವನ ಬದುಕು.ಅದೊಂದು ದಿನ ಮಾಮೂಲಿನಂತೆ ಪೇಟೆಯಲ್ಲಿ ಸಾಕಷ್ಟು ತೀರ್ಥ ಏರಿಸಿಕೊಂಡು ಸ್ನೇಹಿತನೊಂದಿಗೆ ಬೈಕಿನಲ್ಲಿ ಬರುತ್ತಿದ್ದ. ಹಾಗೆ ಹೀಗೆ ಮಾತಾಡುತ್ತಿದ್ದರು. ಇಬ್ಬರ ಹೊಟ್ಟೆಲೂ ತೀರ್ಥ ಸಾಕಷ್ಟು ತುಂಬಿತ್ತು. ಮಾತಿನಲ್ಲೂ ಕಾಣುತ್ತಿತ್ತು. ಮಾತುಕತೆ ಬಿರುಸಾಗತೊಡಗಿತು.

ಲೋಕಾಭಿರಾಮವಾಗಿ ಶುರುವಾಗಿದ್ದು ತೀರಾ ವೈಯಕ್ತಿಕವಾಗತೊಡಗಿತು. ತೀರ್ಥದ ಮಹಿಮೆ, ಇಬ್ಬರೂ ಮುಕ್ತರಾಗಿ ಮಾತು ಹರಿಸಲು ಶುರುಮಾಡಿದರು. ಒಬ್ಬ ತಮಾಷೆಯೆಂದು ಮಾತನಾಡಿದ್ದು ಮತ್ತೊಬ್ಬನಿಗೆ ಗಂಭೀರವೆನಿಸಲಾರಂಭಿಸಿತು. ಪರಸ್ಪರ ಹೀಗೆ ವಾಗ್ವಾದ ನಡೀತಿತ್ತು. ಮತ್ತೊಬ್ಬನ ಯಾವುದೋ ಮಾತಿಗೆ ಈತ ಬೈಕ್ ನಿಲ್ಲಿಸಿದ್ದೇ ಅವನ ಕಾಲರ್ ಪಟ್ಟಿ ಹಿಡಿದ. ಅವನೂ ಸುಮ್ಮನಿರಲಿಲ್ಲ, ಇವನ ಕಾಲರ್ ಪಟ್ಟಿ ಹಿಡಿದ. ಹೊಡೆದಾಟ ಶುರುವಾಯಿತು; ದಾರಿ ಮಧ್ಯೆ.

ಎಂಟೊಂಭತ್ತು ಗಂಟೆಯ ಹೊತ್ತು. ಯಾರಿರ್ತಾರೆ ಅಲ್ಲಿ, ಇವರನ್ನು ಬಿಡಿಸಲು. ಏನಾಯಿತೋ ಗೊತ್ತಿಲ್ಲ. ಇವನು ತಳ್ಳಿದ ರಭಸಕ್ಕೆ ಬಿದ್ದ ಅವನು ಮೇಲೇಳಲಿಲ್ಲ. ಮಾತು ನಿಂತೇ ಹೋಯಿತು. ಸಾಕಷ್ಟು ನಶೆ ಇಳಿದಿತ್ತು. ಕತ್ತಲು ಬೇರೆ. ತಡಕಾಡುತ್ತಾ ರಸ್ತೆಯ ಕೆಳಭಾಗದಲ್ಲಿ ಹೋಗಿ ನೋಡುತ್ತಾನೆ. ಇವನ ಸ್ನೇಹಿತನ ತಲೆಗೆ ಏನೋ ಬಲವಾದುದು ತಾಗಿ ಒಡೆದು ರಕ್ತ ಸುರಿಯುತ್ತಿತ್ತು. ಉಸಿರಾಟ ನಿಂತಿತ್ತು. ಇವನಿಗೆ ಗಾಬರಿಯಾಯಿತು. ಏನು ಮಾಡಲೂ ತೋಚಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಅಲ್ಪ ಸಾವರಿಸಿಕೊಂಡ. ಯಾರಿಗೂ ಗೊತ್ತಾಗಿಲ್ಲ. ತನಗೂ ಗೊತ್ತಿಲ್ಲದಂತೆ ಇದ್ದರಾಯಿತು ಎಂದುಕೊಂಡ.ಈಗವನ ನಶೆ ಪೂರ್ತಿ ಇಳಿದಿತ್ತು. ಛೇ, ಎಂಥಾ ಕೆಲಸ ಆಗೋಯ್ತು. ಏನು ಮಾಡೋದು ಎಂದೆಲ್ಲಾ ಆಲೋಚಿಸಿದ. ಯಾರಾದರೂ ಕೇಳಿದರೆ ಏನು ಹೇಳೋದು ಬೇಡ ಅಂದುಕೊಂಡ. ಮನೆಗೆ ಬರುವಾಗ ರಾತ್ರಿ ಹನ್ನೊಂದಾಗಿತ್ತು.

ಹೆಂಡತಿ ಗಂಡನ ಅಸಹಜ ಇರುವಿಕೆಯನ್ನು ಗಮನಿಸಿದ್ದಳು. ಏನಾಯಿತು ಎಂದು ವಿಚಾರಿಸಿದರೂ ಆಕೆಗೆ ಏನೇನೋ ಹೇಳಿದ. ಊಟ ಆಗಿದೆ ಎಂದು ಮಲಗಿದ. ಮಾರನೇ ದಿನ ಊರೆಲ್ಲಾ ಗುಸು ಗುಸು. ಆ ಸಾವಿನದ್ದೇ ಸುದ್ಧಿ. ಪೋಲಿಸರಿಗೆ ಇವನ ಬಳಿ ಬರಲು ಬಹಳ ಸಮಯ ಹಿಡಿಯಲಿಲ್ಲ. ರಾತ್ರಿ ಪಟ್ಟಣದ ಬಾರೊಂದರಲ್ಲಿ ಇಬ್ಬರೂ ಒಟ್ಟಿಗೆ ಕುಡಿದು ಒಂದೇ ಬೈಕಿನಲ್ಲಿ ಅಲ್ಲಿಂದಲೇ ಹೊರಟಿದ್ದರು. ಅದನ್ನು ನೋಡಿದವರೂ ಇದ್ದರು. ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ನಡೆದದ್ದನ್ನೆಲ್ಲಾ ಹೇಳಬೇಕಾಯಿತು. ಕೊಲೆ ಪ್ರಕರಣದಡಿ ಜೈಲಿಗೆ ದೂಡಿದರು. ಜಾಮೀನು ಮೂರು ತಿಂಗಳವರೆಗೆ ಸಿಗಲಿಲ್ಲ.

ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಮೇಲೆ ಹೇಗೇಗೋ ಮಾಡಿ ಜಾಮೀನು ಪಡೆದ. ಆದರೂ ಪ್ರಕರಣ ಬಿಗಿಯಾಗೇ ಇತ್ತು. ಸಾಕ್ಷ್ಯಾಧಾರಗಳೂ ಸಾಕಷ್ಟಿದ್ದವು.ನಾಲ್ಕು ವರ್ಷಗಳ ವಿಚಾರಣೆಯ ನಂತರ ಪ್ರಕರಣ ಸಾಬೀತಾಗಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿತು. ಪ್ರಕರಣದ ವಾದ ನಡೆಸಲು ಎರಡು ಲಕ್ಷಕ್ಕೂ ಹೆಚ್ಚು ಖರ್ಚಾಯಿತು. ಜಾಮೀನು ಪಡೆದು ಹೊರಗಿದ್ದ ಸಮಯದಲ್ಲಿ ಈತನ ಜೀವನ ಅಲ್ಲೋಲ ಕಲ್ಲೋಲವಾಯಿತು. ಕುಡಿತ ಜೂಜು ಹೆಚ್ಚಿತ್ತು. ಹೆಂಡತಿಯ ಮಾತನ್ನು ಪೂರ್ಣವಾಗಿ ಕಡೆಗಣಿಸಲಾರಂಭಿಸಿದ. ಜೂಜು ಜಾಸ್ತಿಯಾಗಿ ಸಹಜವಾಗಿ ಲಕ್ಷಾಂತರ ರುಪಾಯಿ ಕಳೆದುಕೊಂಡ.

ಹತ್ತಾರು ಲಕ್ಷಗಳ ಸಾಲಗಾರನಾದ. ಸಾಲ ತೀರಿಸಲು ಜಮೀನಿನ ಸ್ವಲ್ಪ ಸ್ವಲ್ಪ ಭಾಗವನ್ನು ಮಾರುತ್ತಾ ಬಂದ. ಹೀಗೆ ಆಸರೆಯಾಗಿದ್ದ ಆಸ್ತಿ ಸಾಕಷ್ಟು ಕರಗಿಹೋಯಿತು. ಶಿಕ್ಷೆಯಾಗಿ ಜೈಲಿಗೆ ಹೋಗುವ ವೇಳೆಗೆ ಇರುವ ತುಂಡು ಭೂಮಿಯನ್ನು, ಮನೆಯೊಂದನ್ನು ಬಿಟ್ಟಿದ್ದ ಅಷ್ಟೇ. ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲು ಮತ್ತೂ ಒಂದೆರಡು ಲಕ್ಷ ಬೇಕಾಯಿತು. ಜೈಲಿನಲ್ಲಿದ್ದಾಗಲೇ ಅದಕ್ಕಾಗಿ ಇದ್ದ ಜಮೀನು ಹಾಗು ಮನೆಯನ್ನು ಮಾರಿದ.

ಕೆಲವು ಲಕ್ಷ ಖರ್ಚು ಮಾಡಿ ಹೆಂಡತಿ ಮಕ್ಕಳನ್ನು ಬೇರೆಡೆಗೆ ಸ್ಥಳಾಂತರಿಸಿದ. ಸಣ್ಣದಾದ ಜಾಗ ಪುಟ್ಟ ಮನೆ ಅಲ್ಲಿತ್ತು. ಹೆಂಡತಿ ಈಗ ದು:ಖ ನೋವು ಸಂಕಟಗಳನ್ನು ಅನುಭವಿಸುತ್ತಾ ಟೈಲರಿಂಗ್ ಮಾಡುತ್ತ ಮಕ್ಕಳನ್ನು ಸಾಕುತ್ತಿದ್ದಾಳೆ.ಇವನಿಗೆ ಜೈಲಿನಲ್ಲಿ ದುಶ್ಚಟಗಳ ವಾಸನೆ, ಗಾಂಜಾ ಇಲ್ಲದೇ ಸಾಧ್ಯವೇ ಇಲ್ಲ ಅನ್ನೋ ಸ್ಥಿತಿ. ಅದಕ್ಕಾಗಿ ಅವರಿವರನ್ನು ಸುಲಿಯುತ್ತಾನೆ. ಹೊಸದಾಗಿ ಜೈಲಿಗೆ ಬರುವವರ ಬಳಿ ನನಗೆ ವಕೀಲರುಗಳು ಪರಿಚಯವಿದ್ದಾರೆ, ಜಾಮೀನು ಮಾಡಿಸಿ ಬಿಡಿಸುತ್ತೇನೆ, ಹೀಗೆ ಏನೇನೋ ಹೇಳಿ ನಂಬಿಸಿ ಅವರಿಂದೆಲ್ಲಾ ಸುಲಿಗೆ ಮಾಡುವ ಕಲೆ ಕರಗತವಾಗಿದೆ.

ಉದ್ದೇಶಪೂರ್ವಕವಾಗಿ ಕೊಲೆಗಾರನಾಗದೇ ಇದ್ದರೂ ಈಗ ಉದ್ದೇಶಪೂರ್ವಕವಾಗಿ ಮೋಸಗಾರ, ವಂಚಕನಾಗಿ ಬದಲಾಗಿದ್ದಾನೆ. ಈ ಮಧ್ಯೆ ಉಚ್ಚ ನ್ಯಾಯಾಲಯವು ಈತನ ಮೇಲಿನ ಕೊಲೆ ಅಪರಾಧವನ್ನು ಖಾಯಂಗೊಳಿಸಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗೋ ಶಕ್ತಿ ಈಗ ಉಳಿದಿಲ್ಲ. ದಿನವೂ ಇವೆಲ್ಲವೂ ಅವನ ಮನಸ್ಸಿನಲ್ಲಿ ಮೂಡುತ್ತವೆ. ಕುಡಿತದ ಅಮಲಿನಲ್ಲಿ ಅಪರಾಧಗಳು ಜರುಗಿ ಸಿಲುಕಿ ಬಂದವರು ಜೈಲಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.

ಕುಡಿತದ ನಶೆ ಎಂದರೆ ಇರುವ ವಿವೇಚನೆಗೂ ಬುದ್ಧಿಗೂ ಜಾಗವಿಲ್ಲದ ಸ್ಥಿತಿ. ಕುಡಿತದ ಚಟ ಇಂತಹ ಲಕ್ಷಾಂತರ ಜನರು ಅಪರಾಧವೆಸಗುವಂತೆ ಮಾಡುತ್ತಿದೆ. ಲಕ್ಷಾಂತರ ಕುಟುಂಬಗಳು ಮನೆ ಮಕ್ಕಳನ್ನು ಕಳೆದುಕೊಂಡಿವೆ. ಅಷ್ಟೇ ಸಂಖ್ಯೆಯಲ್ಲಿ ಜೈಲುವಾಸ ಅನುಭವಿಸುವವರಿದ್ದಾರೆ.