‘ಎಜ್ಯೂಕೇಟೆಡ್ ಫೂಲ್ಸ್’: ಎರಡನೇ ಮದುವೆಯಾಗಿ ಜೈಲೂಟ ಅನುಭವಿಸಿದ ಸಿವಿಲ್ ಎಂಜಿನಿಯರ್!
PRISON STORIES

‘ಎಜ್ಯೂಕೇಟೆಡ್ ಫೂಲ್ಸ್’: ಎರಡನೇ ಮದುವೆಯಾಗಿ ಜೈಲೂಟ ಅನುಭವಿಸಿದ ಸಿವಿಲ್ ಎಂಜಿನಿಯರ್!

ಹೆಸರು ಗಂಗಾಧರ. ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳದ ಉದ್ಯೋಗದಲ್ಲಿದ್ದ.

ಗ್ರಾಮೀಣ ಹಿನ್ನೆಲೆ ಆತ ಚಾಮರಾಜನಗರ ಕಡೆಯವನು. ಆರೇಳು ಎಕರೆ ಭೂಮಿಯಿತ್ತು. ತಂದೆ-ತಾಯಿ ರೈತಾಪಿ ಹಿನ್ನಲೆಯವರೇ. ಮನೆಗೆ ಇವನೊಬ್ಬನೇ ಗಂಡು ಮಗ ಬೇರೆ. ಈತ ಓದಿನ ಕಾರಣಕ್ಕಾಗಿ ನಗರಗಳಲ್ಲಿಯೇ ಬೆಳೆದಿದ್ದ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಾತ್ರ ಗ್ರಾಮೀಣ ಭಾಗದಲ್ಲಿ ಪಡೆದಿದ್ದ. ಉದ್ಯೋಗ ಸಿಕ್ಕಿದ ಮೇಲೆ ನೆಂಟರಿಷ್ಟರ ಕುಟುಂಬವೊಂದರ ಹುಡುಗಿಯೊಂದಿಗೆ ಮದುವೆ ಮಾಡಿದ್ದರು. ಎರಡು ಮಕ್ಕಳೂ ಆಗಿದ್ದವು.ಈತನ ಇಬ್ಬರು ಅಕ್ಕಂದಿರಿಗೆ ಮದುವೆ ಮಾಡಿ ಕಳಿಸಿದ್ದರು.

ತೀರ ಬಡತನದ ಕುಟುಂಬವೇನಲ್ಲ. ಇವರ ಪ್ರದೇಶದಲ್ಲಿ ಸುಮಾರಾಗಿ ಮಳೆ ಬೀಳುತ್ತಿತ್ತು. ಬೋರು, ಬಾವಿಯಲ್ಲಿ ನೀರು ಇದ್ದಿದ್ದರಿಂದ ಇವರ ಭೂಮಿ ಹಸಿರಿನಿಂದಲೇ ಕೂಡಿತ್ತು. ಇವರ ಊರು ಹಾಗೂ ಸುತ್ತ ಮುತ್ತಲ ಹಳ್ಳಿಗಳೂ ಹಿಂದುಳಿದಿದ್ದವು. ಇವರು ಹಿಂದುಳಿದ ಪಂಗಡಕ್ಕೆ ಸೇರಿದವರಾಗಿದ್ದರು. ಹಳೇ ಶೋಷಕ ವಿಚಾರಗಳ ಪ್ರಭಾವ ಸ್ವಲ್ಪ ಜಾಸ್ತಿಯಿತ್ತು. ಈತನ ಹೆಂಡತಿ ಹೈ-ಸ್ಕೂಲ್ ಮೆಟ್ಟಿಲು ಹತ್ತಿದವಳು.

ಮದುವೆಯಾದ ಹೊಸತರಲ್ಲಿ ಎಲ್ಲಾ ಸರಿಯಾಗಿ ನಡೆಯುತ್ತಿತ್ತು. ಮಕ್ಕಳಿಬ್ಬರೂ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದರು. ಆದರೆ ಬರುಬರುತ್ತಾ ಈತನಿಗೆ ಹೆಂಡತಿಯೊಂದಿಗೆ ಹೊಂದಾಣಿಕೆ ಕಡಿಮೆಯಾಗುತ್ತಾ ಬಂತು. ಈತನಿಗೆ ಆಕೆ ತನಗೆ ಸರಿಯಾದ ಜೋಡಿಯಲ್ಲ ಎಂದು ಅನಿಸತೊಡಗಿತು.

ಆಕೆ ಇದ್ದದ್ದು ಹೆಚ್ಚಾಗಿ ಹಳ್ಳಿಯಲ್ಲೇ. ಮದುವೆಯಾದ ಮೇಲೂ ಆಕೆ ಇವನ ಹಳ್ಳಿಯ ಮನೆಯಲ್ಲಿಯೇ ಇದ್ದಳು. ಆಗಾಗ ಇವನು ವಾಸಿಸುತ್ತಿದ್ದ ನಗರದ ಮನೆಗೆ ಬಂದು ಹೋಗುತ್ತಿದ್ದಳು. ಇವನೂ ರಜೆಯಿದ್ದಾಗ ಹಳ್ಳಿಯ ಮನೆಗೆ ಹೋಗುತ್ತಿದ್ದ. ತಿಂಗಳು, ವರ್ಷಗಳು ಉರುಳಿದವು. ಇವನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿನ ಹುಡುಗಿಯೊಬ್ಬಳೊಂದಿಗೆ ಇವನ ಸಲಿಗೆ ಬೆಳೆಯಿತು. ಅದು ಆಕರ್ಷಣೆಯ ಹಂತ ದಾಟಿ, ಅವಳೊಂದಿಗೆ ಮದುವೆಯೂ ಮಾಡಿಕೊಂಡ. ಮುಂದೆ ಹೇಗಾದರೂ ಮಾಡಿ ಹಳ್ಳಿಯ ಹೆಂಡತಿಯೊಂದಿಗೆ ಸಂಬಂಧ ಕಡಿದುಕೊಳ್ಳಬಹುದು ಎಂದೆಣಿಸಿ, ಮದುವೆಯಾಗಿ ಮಕ್ಕಳಿವೆ ಎಂಬ ವಿಚಾರ ಈ ಹೊಸ ಹೆಂಡತಿಗೆ ಗೊತ್ತಾಗದಂತೆ ನೋಡಿಕೊಂಡಿದ್ದ.

ಇವನೀಗ ನಗರದಲ್ಲಿ ವಾಸವಿದ್ದ ಹಳೇ ಮನೆ ಬಿಟ್ಟು ಬೇರೆಡೆಗೆ ಸ್ಥಳಾಂತರಗೊಂಡ. ಯಾವಾಗಲಾದರೂ ಹಳ್ಳಿಗೆ ಹೋದರೂ ಅಲ್ಲಿ ಉಳಿಯುತ್ತಿರಲಿಲ್ಲ. ಹೆಂಡತಿ ಮಕ್ಕಳೊಂದಿಗೆ ಸರಿಯಾಗಿರುತ್ತಿರಲಿಲ್ಲ. ಅಪ್ಪ ಅಮ್ಮನೊಂದಿಗೆ ಮಾತನಾಡಿದ ಹಾಗೆ ಮಾಡಿ, ಒಂದಷ್ಟು ದುಡ್ಡು ಕೊಟ್ಟು ಬಂದು ಬಿಡುತ್ತಿದ್ದ. ನಗರದ ಮನೆಯಲ್ಲಿಲ್ಲವೆಂದು ತಾನು ಸ್ನೇಹಿತರೊಂದಿಗೆ ಒಂದು ಬಾಡಿಗೆ ಕೊಠಡಿಯಲ್ಲಿ ಇರುತ್ತಿದ್ದೇನೆ ಎಂದೆಲ್ಲಾ ಮನೆಯಲ್ಲಿ ಹೇಳಿದ. ಹೇಗೋ ಹೆಂಡತಿ ನಗರಕ್ಕೆ ಬಂದು ಈತನೊಂದಿಗೆ ಇರುವ ಸಾಧ್ಯತೆಗಳನ್ನು ತಪ್ಪಿಸಿದ.

ಗಂಗಾಧರನ ನಗರದಲ್ಲಿನ ಮತ್ತೊಂದು ಸಂಸಾರದ ಕತೆ ಹಳ್ಳಿಗೆ ತಲುಪಲು ಬಹಳ ತಡವೇನೂ ಆಗಲಿಲ್ಲ. ಅವೆನ್ನೆಲ್ಲಾ ರಹಸ್ಯವಾಗಿಡೋದು ಅಷ್ಟು ಸುಲಭವಲ್ಲವಲ್ಲ. ಹೆಂಡತಿಗೆ ಮೊದಲೇ ಈತನ ನಡುವಳಿಕೆ ಬಗ್ಗೆ ಅನುಮಾನ ಮೂಡಿತ್ತು. ಅದನ್ನು ತನ್ನ ಹೆತ್ತ ತಂದೆ ತಾಯಿಗಳೊಂದಿಗೆ ಹಂಚಿಕೊಂಡಿದ್ದಳು. ಇದನ್ನು ಕೇಳಿದ ಅವರು ಈತನ ನಗರದಲ್ಲಿನ ಮದುವೆ ಸಂಸಾರದ ಕತೆಯಲ್ಲವನ್ನೂ ಪತ್ತೆ ಹಚ್ಚಿದ್ದರು. ನಂತರ ಗಂಡನೊಂದಿಗೆ ಜಗಳವಾಗಿ,  ಮುನಿಸಿಕೊಂಡ‌ ಈಕೆ ಮನೆ‌ ಬಿಟ್ಟು ತನ್ನ ತಂದೆ ತಾಯಿಯರೊಂದಿಗೆ ಇರಲಾರಂಭಿಸಿದಳು.

ಈತ ನಗರದ ಸಂಸಾರ ತೊರೆದು ತನ್ನೆಡೆಗೆ ಬರಬಹುದು ಎಂಬ ನಿರೀಕ್ಷೆಯಿತ್ತು ಆಕೆಗೆ. ಆದರೆ ಅದಾಗಲಿಲ್ಲ. ಈಗಾಗಲೇ ಈಕೆ ಕೇಳದಿದ್ದರೂ ಹತ್ತು ಹಲವು ಭೋಧನೆಗಳನ್ನು, ಸಲಹೆಗಳನ್ನು ಹಲವರು ಅವರಾಗಿಯೇ ಹೇಳಿದ್ದರು. ಅದರಲ್ಲಿ ಹಲವು ಹುಳಿ ಹಿಂಡುವಂತವಾಗಿದ್ದವು. ‘ಛೇ ನಿನಗೆ ಹೀಗಾಗಬಾರದಿತ್ತು,’ ಎಂಬ ಕುಹಕಪೂರಿತ ಮರುಕಗಳಿದ್ದವು. ನಗರದಲ್ಲಿರುವ ಈತನ ಸಂಬಂಧ ಬಿಡಿಸಲು ಹಲವು ಪ್ರಯತ್ನಗಳಾದವು. ನಗರದಲ್ಲಿನ ‌ಹೊಸ ಹೆಂಡತಿಗೆ ಇವನು ಮಾಡಿದ ಮೋಸ‌ ಗೊತ್ತಾಗಿದ್ದರೂ ತನ್ನನ್ನು ಉಪೇಕ್ಷಿಸುವುದಿಲ್ಲ ಎಂಬ ಇವನ ಮಾತನ್ನು ನಂಬಿ ಮುಂದುವರಿದಳು.

ಈಗ ಹಳ್ಳಿಯ ಹೆಂಡತಿಯ ಅಪ್ಪ ಅಮ್ಮನಿಗೆ ಇವನ ಮೇಲೆ ದೂರು ದಾಖಲಿಸುವುದೇ ಸರಿ ಎನಿಸಿತು. ಮೊದಲ ಹೆಂಡತಿಯು ವಿಧಿಯಿಲ್ಲದೆ ಸಮ್ಮತಿ ನೀಡಿ ಸಹಿ ಹಾಕಿದಳು. ಆಕೆಗೆ ಮಕ್ಕಳ ಭವಿಷ್ಯದ ಚಿಂತೆಯಿತ್ತು. ಕೊನೆಗೂ ಠಾಣೆಯಲ್ಲಿ ಈತನ ಮೇಲೆ‌ ದೂರು ದಾಖಲಿಸಿ ಅಕ್ರಮ ಮದುವೆ ಅಪರಾಧವೆಸಗಿದ ಕಾರಣಕ್ಕಾಗಿ ಈತನ ಬಂಧನವಾಯಿತು. ಹಳ್ಳಿಯ ಹೆಂಡತಿ ಈತನೊಂದಿಗೆ ಸಂಬಂಧ  ಕಡಿದುಕೊಳ್ಳುವುದು ಹಾಗೂ ಹದಿನೈದು ಲಕ್ಷ ಪರಿಹಾರಕ್ಕಾಗಿ‌ ನ್ಯಾಯಾಲಯಕ್ಕೆ ಕೇಳಿಕೊಂಡಳು. ಈತ ಜೈಲಿಗೆ ಬಂದ. ಅದುವರೆಗೆ ಇಂಜಿನಿಯರ್ ಆಗಿ ಭಾರಿ ಸಭ್ಯಸ್ಥಿಕೆ ತೋರಿಸಿಕೊಂಡಿದ್ದ ಈತ ಗುರುತರ ಅಪರಾಧಿ ಸ್ಥಾನದಲ್ಲಿ ನಿಂತುಕೊಂಡ.

ಇಷ್ಟೆಲ್ಲಾ ಆದರೂ ತಾನು ಪುರುಷ ಎಂಬ ಅಹಂಕಾರ ಅವನಿಂದ ಇಳಿಯಲಿಲ್ಲ. ಈ ಅಹಂಕಾರವೇ ಇಂತಹ ತಪ್ಪುಗಳನ್ನು ಮಾಡಲು ಕಾರಣವಾಗಿ ಅವನಿಗೆ ಜೈಲಿನ‌ ಬಾಗಿಲನ್ನು ತೋರಿಸಿದ್ದು ಎಂಬುದು ಅವನಿಗೆ ಅರ್ಥವಾಗಲಿಲ್ಲ. ನಾನು ಆಕೆಗೆ ಒಂದು ಪೈಸೆನೂ ಕೊಡುವುದಿಲ್ಲ ಎಂಬ ಒಣ ಹಠದಲ್ಲೇ ಇದ್ದ. ದುಡ್ಡು ಚೆಲ್ಲಿ ಒಳ್ಳೇ ವಕೀಲರನ್ನಿಟ್ಟು ಜೈಲಿನಿಂದ ‌ಹೊರಹೋಗುತ್ತೀನಿ  ಎಂದುಕೊಂಡ. ಆದರೆ ಆಗಿದ್ದು ಬೇರೆಯೇ.

ಜೈಲಿನಲ್ಲಿ ಇಂತಹವರ ಬಗ್ಗೆ ತಾತ್ಸಾರದ ಕುಹಕ ಇತ್ತು. ಇವನಲ್ಲಿ ದುಡ್ಡಿದೆ ಎಂದು ಅಧಿಕಾರಿಗಳು ಕಬಳಿಸಲು ಪ್ರಾರಂಭಿಸಿದರು. ರೌಡಿ ಗ್ಯಾಂಗುಗಳಿಗೂ ಈತ ಹಣ ಕೊಡಬೇಕಾಯಿತು. ಎಲ್ಲರೂ ಹಣ ಪಡೆದು ಎಲ್ಲಾ ಸರಿ ಮಾಡುತ್ತೇವೆ ಎಂದು ಹೇಳುವವರು, ಹಲವಾರು ಕಾನೂನು ಜ್ಞಾನವನ್ನು ನೀಡುವವರೇ ಆಗಿದ್ದರು. ಇವನು ಅವುಗಳನ್ನು ನಂಬಿದ್ದ. ಇವನು ಪುರುಷಾಹಂಕಾರಕ್ಕೆ ಇವರೆಲ್ಲಾ ತುಪ್ಪ ಸುರಿಯುತ್ತಿದ್ದರು. ಹೆಂಡತಿಗೆ ಏನೂ ಕೊಡೋ ಅಗತ್ಯ ಇಲ್ಲ‌ ಎಂದೆಲ್ಲಾ ಇವನನ್ನು ನಂಬಿಸಿ, ಸಾಧಯವಾದಷ್ಟು ಈತನ ಹಣವನ್ನು ಬಹುತೇಕರು ಲಪಟಾಯಿಸಿದರು.ಒಂದು ತಿಂಗಳು ಕಳೆಯಿತು. ಈಗ ಇವನಿಗೆ ಪರಿಸ್ಥಿತಿಯ ಬಿಸಿ ಸ್ವಲ್ಪ ತಟ್ಟತೊಡಗಿತು. ಜೈಲಿನ ವಾತಾವರಣ, ನಗರದಲ್ಲಿ ದೊಡ್ಡ ವ್ಯಕ್ತಿಯಂತೆ ಓಡಾಡಿಕೊಂಡಿದ್ದ ಇವನಿಗೆ ಸಹಿಸಲಾಗದಾಯಿತು.

ಆರಂಭದಲ್ಲಿ 'ಕೆಲವೇ ದಿನದೊಳಗೆ ಜಾಮೀನಿನಡಿ ಬಿಡಿಸುತ್ತೇನೆ, ಹೆದರಬೇಕಾಗಿಲ್ಲ,' ಎಂದ ಗೆಳೆಯರು, ವಕೀಲರು ಯಾರೂ ಸಹಾಯ ಮಾಡಲಿಲ್ಲ. ನ್ಯಾಯಾಲಯಕ್ಕೆ ಎರಡು ಮೂರು ಬಾರಿ ಹಾಜಾರಾಗಿದ್ದರೂ ಬಿಡುಗಡೆ ಲಕ್ಷಣ ಕಾಣಲಿಲ್ಲ. ನ್ಯಾಯಾಲಯದ ಮೂಲಕ ಹೋದರೆ ತನಗೆ ಶಿಕ್ಷೆಯಾಗುವ  ಸಂಭವವೇ ಹೆಚ್ಚು ಎನ್ನುವುದನ್ನು ಅರ್ಥ ಮಾಡಿಕೊಳ್ಳಲಾರಂಭಿಸಿದ. ಹಲವಾರು ಪುಸ್ತಕಗಳನ್ನು ಓದಲು ಪ್ರಯತ್ನಿಸಿದರೂ ಗಮನವಿಟ್ಟು ಓದಲಾಗುತ್ತಿಲ್ಲ, ದುಗುಡ, ಆತಂಕಗಳಿಂದ ಮತ್ತಷ್ಟು ಖಿನ್ನತೆಗೆ ಒಳಗಾದ.

ಇದೆಲ್ಲದರ ನಂತರ, ಕೊನೆಗೊಂದು ತೀರ್ಮಾನಕ್ಕೆ ಬಂದ. ಹಳ್ಳಿಯ ಹೆಂಡತಿ ಕೇಳಿದಷ್ಟು ಹಣ, ಪರಿಹಾರ ನೀಡಿ ನ್ಯಾಯಾಲಯದ ಹೊರಗೆ ಆಕೆಯೊಂದಿಗೆ ರಾಜಿ ಮಾಡಿಕೊಂಡು ವಿಚ್ಛೇದನ ಪಡೆಯೋದು ಒಳ್ಳೆಯದು. ಇಲ್ಲದಿದ್ದಲ್ಲಿ ಅಪಾಯವೆನ್ನುವುದನ್ನು ಮನಗಂಡ. ಈಗಲೂ ಹೆಂಡತಿ ಮಕ್ಕಳಿಗೆ ಮಾಡಿದ ಮೋಸದ ಬಗ್ಗೆ ಅವನಿಗೆ ಪಶ್ಚಾತ್ತಾಪ ಮೂಡಲಿಲ್ಲ. ತಾನು ಬಚಾವಾಗಬೇಕಾದರೆ ಏನು ಮಾಡಬೇಕೆಂಬುದರ ಕಡೆ ಮಾತ್ರ ಗಮನ ಹರಿಸಿದ. ಹಳ್ಳಿಯ ಹೆಂಡತಿಯ ಬಳಿ ತನ್ನವರನ್ನು ಸಂಧಾನ ಕುದುರಿಸಲು ಸಫಲನಾದ. ಇಂತವನೊಂದಿಗೆ ಇನ್ನೇಕೆ ಬಾಳಬೇಕು ಎಂದು ಆ ಹೆಂಡತಿಯೂ ತೀರ್ಮಾನಿಸಿದಳು. ಮಕ್ಕಳ ಭವಿಷ್ಯದ ಪರಿಹಾರವಾಗಿ ಹದಿನೈದು ಲಕ್ಷ ಹಣಕ್ಕೆ ಆಗ್ರಹಿಸಿದಳು.

ಕೊನೆಗೆ ಇವನು ತನ್ನ ಹೆಸರಲ್ಲಿದ್ದ ಆಸ್ತಿಗಳನ್ನು ಮಾರಿ ಅಷ್ಟು ಹಣ ಮೊದಲಿನ ಹೆಂಡತಿಗೆ ನೀಡಿ ಆಕೆಯೊಂದಿಗಿನ ವಿವಾಹ ಕಡಿದುಕೊಳ್ಳಲು, ರಾಜಿ ಕುದುರಿಸುವಲ್ಲಿ ಸಫಲನಾದ. ನ್ಯಾಯಾಲಯದ ನಿಬಂಧನೆಗೊಳಪಟ್ಟು ಜಾಮೀನು ಪಡೆದ. ಒಂದೆರಡು ವರ್ಷ ವಿಚಾರಣೆ ನಡೆಯಿತು. ಹೆಂಡತಿ ಇವನಿಗೆ ಶಿಕ್ಷೆ ಕೊಡಿಸಬೇಕೆಂಬ ಹಠಕ್ಕೆ ಬೀಳದೇ ‌ಇದ್ದಿದ್ದರಿಂದ ಕಾನೂನು ಕುಣಿಕೆಯಿಂದ‌ ಬಚಾವಾದ. ಹೆಂಡತಿ ಇವನ ಹಾಗೆಯೇ ಮನುಷ್ಯಜೀವಿ ಎಂಬ ಅರಿವಾಗಲೀ, ಆಕೆಯೊಂದಿಗೆ ನೇರವಾಗಿ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂಬ ಪ್ರಜ್ಞೆಯಾಗಲಿ ಮತ್ತು ಒಂದು ಮದುವೆಯಾದ ನಂತರ, ಮತ್ತೊಬ್ಬರಿಗೆ ಸುಳ್ಳು ಹೇಳಿ ಇನ್ನೊಂದು ಮದುವೆ ಆಗುವುದು ಅಪರಾಧ ಎಂಬ ಕನಿಷ್ಟ ಕಾನೂನು ಜ್ಞಾನವೂ ಈತನಿಗೆ ಇರದೇ ಹೋಯಿತು.

ಎಲ್ಲದ್ದಕ್ಕಿಂತಲೂ ಪ್ರಧಾನವಾಗಿ ತಾನು ಪುರುಷ, ಏನು ಬೇಕಾದರೂ ಮಾಡಬಹುದು ಎಂಬ ಅಹಂಕಾರದಿಂದ ತನ್ನ ಬದುಕನ್ನು ಹಾಳುಮಾಡಿಕೊಂಡು ಬಿಟ್ಟ. ಆ ಪುಟ್ಟ ಮಕ್ಕಳು ಅಪ್ಪನ ಪ್ರೀತಿಯಿಂದ ವಂಚಿತರಾಗಬೇಕಾಯಿತು. ‘ಎಜುಕೇಟೆಡ್ ಫೂಲ್ಸ್’ (ವಿದ್ಯಾವಂತ ಮೂರ್ಖರು) ಅಂತ ಇಂತಹವರುಗಳನ್ನೇ ಅಲ್ಲವೇ ಕರೆಯುವುದು?