ಕಳುಹಿಸಿದ್ದು ಎಂಎಂಎಸ್‌, ಮರಳಿ ಬಂದಿದ್ದು ಗುಂಡು; ಪ್ರತಿಷ್ಠೆ ಮತ್ತು ಜೈಲೂಟದ ಪಾಠಗಳು!
PRISON STORIES

ಕಳುಹಿಸಿದ್ದು ಎಂಎಂಎಸ್‌, ಮರಳಿ ಬಂದಿದ್ದು ಗುಂಡು; ಪ್ರತಿಷ್ಠೆ ಮತ್ತು ಜೈಲೂಟದ ಪಾಠಗಳು!

ಮಲೆನಾಡು ಜಿಲ್ಲೆ ಚಿಕ್ಕಮಗಳೂರಿನ ಒಂದು ಹಳ್ಳಿ. ಕಾಫಿ ಸೀಮೆ. ಭತ್ತ, ಅಡಿಕೆ, ಏಲಕ್ಕಿ, ಬಾಳೆಗಳು ಈ ಪ್ರದೇಶವನ್ನು ಹಸಿರಾಗಿಟ್ಟಿವೆ. ಟಿವಿ, ಮೊಬೈಲುಗಳು ಈ ಹಳ್ಳಿಯನ್ನು ಹೊಕ್ಕಿ ಬಹಳ ಕಾಲ ಆಗಿದೆ. ಸಹಜವಾಗಿ ಯುವಕ ಯುವತಿಯರ ಕೈಯಲ್ಲಿ ಮೊಬೈಲುಗಳಿವೆ. ಆ ಹಳ್ಳಿಯಲ್ಲಿ ಬಹುತೇಕ ಎಲ್ಲರಿಗೂ ತೋಟ ಗದ್ದೆಗಳಿವೆ. ಕೆಲವರಿಗೆ ಹತ್ತರಿಂದ ಇಪ್ಪತ್ತು, ಹಲವರಿಗೆ ಒಂದರಿಂದ ಐದು ಏಕರೆಗಳವರೆಗೆ ಭೂಮಿಯಿದೆ. ಊರಿನ ಬಹುತೇಕ ಯುವಕ ಯುವತಿಯರು ವಿದ್ಯಾವಂತರು. ಪಿಯುಸಿ, ಪದವಿ ಓದಿದವರು. ಒಕ್ಕಲಿಗರ ಕುಟುಂಬಗಳೇ ಹೆಚ್ಚಿವೆ. ಇಲ್ಲಿ ಕಾಫಿ, ಅಡಿಕೆ ತೋಟಗಳ ಮಾಲೀಕರು ಎಂದರೆ ಅದೊಂದು ಸಾಮಾಜಿಕ ಸ್ಥಾನಮಾನದ ವಿಚಾರ.

ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ’ ಎಂಬ ನಾಣ್ಣುಡಿ ಇಲ್ಲಿಗೂ ಅಲ್ಪ ಮಾರ್ಪಾಡಿನೊಂದಿಗೆ ಒಪ್ಪುವಂತಹುದೆ. ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎನ್ನೋ ಸಿನಿಮಾ ಹಾಡು ಮಾತ್ರ ಇಲ್ಲಿಗೆ ಸರಿಯಾಗೆ ಒಪ್ಪಿಬಿಡುತ್ತದೆ. ಹಳೇ ಕಾಲದ ಒಣ ಪ್ರತಿಷ್ಠೆ, ಸೋಗಲಾಡಿತನಗಳ ಪ್ರಭಾವ ಸ್ವಲ್ಪ ಜಾಸ್ತೀನೆ ಅನ್ನಬಹುದು. ಒಂದು ಬೂಟು ಕೊಳ್ಳಬೇಕಾದರೂ ಬೆಂಗಳೂರಿಗೆ ಕಾರಿನಲ್ಲಿ ಹೋಗುವ ಮನೋಭಾವದವರಿಗೇನೂ ಇಲ್ಲಿ ಕೊರತೆಯಿಲ್ಲ. ಹತ್ತು ಹಲವು ಕೊಚ್ಚೆಗಳು ತುಂಬಿ ರಾಡಿಯಾಗಿದ್ದರೂ ಮನೆತನ, ಶ್ರೇಷ್ಠತೆಯ ಒಣ ಗೀಳು ಕೂಡ ಹೆಚ್ಚಿದೆಯೆಂದೇ ಹೇಳಬಹುದು. ಲಕ್ಷಾಂತರ ರೂಪಾಯಿಗಳ ಸಾಲ ಇಲ್ಲದವರು ಮಾತ್ರ ಕಡಿಮೆ.

ಆ ಹಳ್ಳಿಯ ಎರಡು ಮದ್ಯಮ ರೈತ ಕುಟುಂಬಗಳು ಮೊದಲಿನಿಂದ ಅನ್ಯೋನ್ಯವಾಗೇ ಇದ್ದವು. ಹೊಂದಾಣಿಕೆ ಕೂಡ ಚೆನ್ನಾಗೇ ಇತ್ತು. ಎರಡೂ ಕುಟುಂಬಗಳಲ್ಲಿ ತಂದೆ ತಾಯಿ ಮಕ್ಕಳು ಇದ್ದರು. ಭೂಮಿಯ ಆದಾಯ ಕೂಡ ಚೆನ್ನಾಗೆ ಇತ್ತು. ಮಕ್ಕಳೆಲ್ಲಾ ಹೈಸ್ಕೂಲು, ಕಾಲೇಜು ಮೆಟ್ಟಿಲು ಹತ್ತಿದ್ದರು. ಕೆಲವರು ಪದವಿ ಪಡೆದಿದ್ದರು.ಹೀಗೆ ಇರಬೇಕಾದರೆ ಸಣ್ಣ ಅಸಮಾಧಾನ ಆ ಕುಟುಂಬಗಳ ನಡುವೆ ಬೇರು ಬಿಡಲಾರಂಭಿಸಿತ್ತು. ಅಂತಹ ದೊಡ್ಡ ಕಾರಣವೇನೂ ಆಗಿರಲಿಲ್ಲ. ಕುಟುಂಬದಲ್ಲಿ ನಡೆದ ಒಂದು ಮದುವೆ ಸಂಧರ್ಭದಲ್ಲಿ ಮತ್ತೊಬ್ಬರನ್ನು ಸರಿಯಾಗಿ ಆಮಂತ್ರಿಸಲಿಲ್ಲ, ಗೌರವಿಸಲಿಲ್ಲ ಎನ್ನೋದೇ ಕಾರಣ. ಜೊತೆಗೆ ಸ್ವಲ್ಪ ಸಾಲ ತಗೊಂಡಿದ್ದು ಕಾಲಕ್ಕೆ ಸರಿಯಾಗಿ ಹಿಂದಿರುಗಿಸಲಿಲ್ಲ ಎನ್ನೋದು ಸೇರಿಕೊಂಡಿತು. ಆದರೂ ಮಾತುಕತೆ ಭೇಟಿಗಳು ನಡೆಯುತ್ತಿದ್ದವು.

ಹದಿಹರೆಯದ ಪ್ರಾಯ, ವಿಷಯಾಸಕ್ತಿ, ಕುತೂಹಲ ಚಿಗುರೊಡೆದ ಸಮಯ. ಬೆರಳ ತುದಿಯಲ್ಲೇ ಎಲ್ಲವನ್ನೂ ಎಟುಕಿಸುವ ಸ್ಮಾರ್ಟ್ ಫೋನ್ ಬೇರೆ ಇದೆ. ಒಂದು ಎಮ್‌ಎಮ್‌ಎಸ್ ಅನ್ನು ಹೈಸ್ಕೂಲು ಓದುತ್ತಿದ್ದ ಹುಡುಗ ಪಕ್ಕದ ಕುಟಂಬದ ಹರೆಯದ ಹುಡುಗಿಗೆ ಕಳಿಸಿಬಿಟ್ಟ. ಅದು ಲೈಂಗಿಕತೆಯ ವಿಚಾರವಾಗಿತ್ತು. ಅದನ್ನು ನೋಡಿದ ಆ ಹುಡುಗಿ ಸುಮ್ಮನಿದ್ದಳು. ಅವಳ ಮೊಬೈಲಿನಲ್ಲಿದ್ದ ಸಂದೇಶವನ್ನು ಆಕೆಯ ಅಣ್ಣ ನೋಡಿಬಿಟ್ಟ. ಅದು ಎಲ್ಲಿಂದ ಬಂತು, ಯಾರು ಕಳಿಸಿದ್ದು ಎಂದೆಲ್ಲಾ ತಿಳಿಯಲು ತಡವಾಗಲಿಲ್ಲ. ಅಷ್ಟೇ ಬೇಗ ಕುಟುಂಬದ ಇತರರಿಗೂ ಗೊತ್ತಾಗಿ ಹೋಯಿತು. ವಿವೇಚನೆಗೆ ಅಲ್ಲಿ ಅವಕಾಶವೇ ಇಲ್ಲದಾಯಿತು.

ಇಡೀ ಕುಟುಂಬ ಸಿಟ್ಟು ಆಕ್ರೋಶಗಳಿಂದ ಕುದ್ದು ಹೋಯಿತು. ಗೋಡೆಗೆ ನೇತು ಬಿದ್ದಿದ್ದ ತೋಟಕೋವಿ ಕೈಗೆ ಬಂತು. ಮೊದಲೇ ಲೋಡ್ ಇತ್ತು. ಹುಡುಗನ ಮನೆಗೆ ನುಗ್ಗಿದ್ದೇ, ಟ್ರಿಗರ್ ಅದುಮಿದರು. ಅವರ ಇಬ್ಬರು ಗಂಡುಮಕ್ಕಳಲ್ಲಿ ಒಬ್ಬ, ಅದೂ ಹಿರಿಮಗ ಕುಸಿದು ಬಿದ್ದ. ರಕ್ತ ಕಾಲುವೆಯಾಗತೊಡಗಿತು. ನೋಡಿ ಆಘಾತಗೊಂಡ ಆ ಕುಟುಂಬವೂ ವಿವೇಚನೆಯನ್ನು ಹತ್ತಿರ ಬಿಟ್ಟುಗೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆಕ್ರೋಶ, ಕೋಪಗಳಿಂದ ಕುದ್ದುಹೋದ ಪರಿಣಾಮ ಅವರೂ ತಾವೇನು ಕಡಿಮೆಯೇ ಎಂದು ಕೈಯಲ್ಲಿ ತೋಟಕೋವಿ ಹಿಡಿದರು. ಲೋಡೂ ಇತ್ತು. ಕಾಡತೂಸುಗಳಿಗೇನೂ ಬರವಿರಲಿಲ್ಲ. ಹುಡುಗಿಯ ಮನೆಯ ಇಬ್ಬರು ಗಂಡು ಮಕ್ಕಳ ಎದೆಗಳು ತೂತಾಗಿ ರಕ್ತ ಚಿಮ್ಮತೊಡಗಿತು. ಮನಯೆಲ್ಲಾ ರಕ್ತದ ಮಡು. ಆಗಲೇ ಆ ಯುವಜೀವಗಳ  ಪ್ರಾಣ ಹಾರಿಹೋಗಿತ್ತು. ಚೀತ್ಕಾರ ಕೂಗಾಟಗಳು ಮುಗಿಲಿನತ್ತ ಹೋಗುತ್ತಿದ್ದವು. ತಾಯಿಯಂತೂ ಮೂರ್ಛೆ ಬಂದು ಬಿದ್ದೇಹೋದರು. ವಿವೇಚನೆ ಅಲ್ಲಿ ಸುಳಿದಾಡಲು ಇನ್ನೂ ಒದ್ದಾಡುತ್ತಿತ್ತು. ಮತ್ತೂ ದೊಡ್ಡ ಅನಾಹುತ ನಡೆಯುತ್ತಿತ್ತೇನೋ ಅಷ್ಟರಲ್ಲಿ ಮನೆಯ ಹೆಣ್ಣುಮಕ್ಕಳು ತಡೆದು ನಿಲ್ಲಿಸಿದರು. ಸೇರಿದ ಊರಿನವರೂ ತಡೆಯಲು ನೆರವಾದರು. ಹಾರಿದ್ದು ಕಾಡತೂಸುಗಳು. ಅದು ಹಾರಿಸಿದ್ದು ಯಾರು ಎಂದೆಲ್ಲಾ ನೋಡೋದಿಲ್ಲ. ಎಲ್ಲಿಗೆ ತೂರಿಹೋಗಬೇಕು ಎಂದು ಮಾತ್ರ ನೊಡುತ್ತದೆ. ಗುರಿ ಸರಿಯಾಗಿ ಮುಟ್ಟಿದ್ದರಿಂದ ಮೂರು ಅಮೂಲ್ಯ ಜೀವಗಳು ನೆಲಕ್ಕೊರಗಿ, ಎರಡು ಕುಟುಂಬಗಳು ಸಂಕಟದ ಮಡುವಿನಲ್ಲಿ ಬಿದ್ದವು.

ಸರಿ, ಮುಂದೆ ದೂರು ಪ್ರತಿದೂರುಗಳು ದಾಖಲಾದವು. ಎರಡೂ ಕುಟುಂಬಗಳ ಎಲ್ಲಾ ಗಂಡಸರ ಮೇಲೆ ಅಕ್ರಮ ಪ್ರವೇಶ ಹಾಗೂ ಕೊಲೆ ಪ್ರಕರಣಗಳು ಬಿದ್ದವು. ಒಬ್ಬಿಬ್ಬರು ತಲೆಮರೆಸಿ ಇರಲು ಪ್ರಯತ್ನಿಸಿದರಾದರೂ ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ವಿಫಲವಾಗಿ ಶರಣಾಗಬೇಕಾಯಿತು. ಎರಡೂ ಮನೆಯ ಗಂಡಸರೆಲ್ಲಾ ಜೈಲಲ್ಲಿ ಇರಬೇಕಾಯಿತು. ಜೈಲಿನ ಅನುಭವ ಶುರು. ಮನೆ, ಪೇಟೆ, ಬೈಕು, ಕಾರು ಎಂದೆಲ್ಲಾ ಓಡಾಡಿಕೊಂಡಿದ್ದವರು. ಜೈಲಿನ ನಾಲ್ಕು ಗೋಡೆಗಳ ನಡುವೆ ಹಲವು ನಿರ್ಭಂದಗಳಲ್ಲಿ ಇರಲು ಬಹಳ ಕಷ್ಟಪಟ್ಟರು. ಹಣ ಖರ್ಚು ಮಾಡಲು ತಯಾರಿದ್ದುದರಿಂದ ಜೈಲಧಿಕಾರಿಗಳು ಇವರಿಗೆ ವಿಶೇಷವಾಗೆ ಸೌಲಭ್ಯಗಳಿಗೆ ಅವಕಾಶ ಕೊಟ್ಟರು.  ಹೊರಗಿನಿಂದ ಊಟ ತಿಂಡಿ ಬರುತ್ತಿತ್ತು. ಜೈಲಿನಲ್ಲಿ ಒಂದಷ್ಟು ಸ್ವಾತಂತ್ರ್ಯವನ್ನು ಹಣ ನೀಡಿ ಇವರು ಕೊಂಡುಕೊಂಡರು. ಮೂರು ಕೊಲೆಗಳ ಪ್ರಕರಣವಾದ್ದರಿಂದ ಜಾಮೀನು ಸಿಗಲು ಐದಾರು ತಿಂಗಳುಗಳು ಹಿಡಿದವು. ಲಕ್ಷಾಂತರ ರೂಪಾಯಿಗಳನ್ನು ಕೈಬಿಡಲು ಸಿದ್ಧರಾದುದರಿಂದ ವಾದಿಸಬಲ್ಲ ವಕೀಲರುಗಳನ್ನು ನೇಮಿಸಿಕೊಂಡರು.

ವಿವೇಚನೆಗೆ ಇದುವರೆಗೂ ಇವರೆಡೆಗೆ ಸುಳಿಯಲು ಸಾದ್ಯವಾಗಿರಲಿಲ್ಲ. ಆದರೆ ಈಗ, ಜೈಲಿನ ನಾಲ್ಕು ಗೋಡೆಗಳ ನಡುವೆ ಇವರು ಬಂಧಿಗಳಾದ ನಂತರ ವಿವೇಚನೆಗೆ ಜಾಗ ಸಿಗತೊಡಗಿತು. ಆದರೆ ಆಗಲೇ ಬಹಳ ದೂರ ಸಾಗಿ ಬಂದಾಗಿತ್ತು. ಆದರೂ ಇದನ್ನು ಇನ್ನೂ ಮುಂದುವರೆಸಿದರೆ ಇನ್ನಷ್ಟು ಕಷ್ಟನಷ್ಟಗಳಾಗುತ್ತವೆ. ಹಾಗಾಗಿ,  ಆಗಿದ್ದು ಆಗಿಹೋಯಿತು, ರಾಜಿಯಾಗೋಣ. ನ್ಯಾಯಾಲಯದ ಕುಣಿಕೆಯಿಂದ ಬಚಾವಾಗೋಣ ಎಂದೆಲ್ಲಾ ಮಾತನಾಡಿಕೊಂಡರು. ಹಾಗಂತ ನ್ಯಾಯಾಲಯದ ಕುಣಿಕೆಯಿಂದ ಪಾರಾದ ಮೇಲೆ, ಬೇರೆ ರೀತಿಯಲ್ಲಿ ಪಾಠ ಕಲಿಸಬೇಕು ಎಂದೆಲ್ಲಾ ಯೋಜಿಸುವ ಮನಸ್ಸುಗಳು ಅಲ್ಲಿ ಇರಲಿಲ್ಲವೆಂದಲ್ಲ. ಅದು ಕೂಡ ಇತ್ತು. ಆದರೆ ಅದಕ್ಕೆ ಮೊದಲಿನ ಬೆಂಬಲ ಈಗ ಇರಲಿಲ್ಲ ಹಾಗೂ ಹೀಗೂ ಮಾಡಿ, ಲಕ್ಷಾಂತರ ಖರ್ಚು ಮಾಡಿ ಜಾಮೀನು ಪಡೆಯುವಲ್ಲಿ ಎರಡೂ ಕಡೆಯವರು ಯಶಸ್ವಿಯಾದರು. ಪ್ರಕರಣದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿದೆ.

ಸಿಟ್ಟಿನ ಕೈಗೆ ಬುದ್ಧಿ ಕೊಡದೆ ಬುದ್ಧಿಯ ಕೈಯಲ್ಲಿ ಸಿಟ್ಟನ್ನು ನಿಯಂತ್ರಿಸಿ ಇಟ್ಟುಕೊಂಡಿದ್ದರೆ ಮೂರು ಅಮೂಲ್ಯ ಪ್ರಾಣಗಳು ಉಳಿಯುತ್ತಿದ್ದವು. ತಪ್ಪು ಮಾಡಿದ ಹುಡುಗನನ್ನು ತಿದ್ದಲು ಸಾದ್ಯವಿತ್ತು. ಅದರ ಕಡೆಗೆ ಗಮನ ಕೊಡುವ ವಿವೇಚನೆಗೆ ಅವಕಾಶ ನೀಡದ್ದರಿಂದ ಎರಡು ಕುಟುಂಬಗಳ ನೆಮ್ಮದಿ, ಸಮಾಧಾನ, ಆರ್ಥಿಕತೆ ನಾಶವಾಯಿತು. ಅದನ್ನೆಲ್ಲಾ ಸ್ವಯಂ ನಾಶ ಮಾಡಿಕೊಂಡರು ಎಂದು ಹೇಳುವುದೇ ಸರಿಯಾಗುತ್ತದೆ. ಮನುಷ್ಯ ಸಂಬಂಧಗಳನ್ನು ವಿರೋಧಿಸುವಂತಹ ಹಳೇಕಾಲದ ಒಣಪ್ರತಿಷ್ಠೆಗಳು, ತಾವೇ ಶ್ರೇಷ್ಠರು, ತಮ್ಮ ಕುಟುಂಬದ ಹಿನ್ನೆಲೆ ಬಹಳ ದೊಡ್ಡದು, ತಾವೇ ಶೂರರು ಎಂಬೆಲ್ಲಾ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಲು ತಯಾರಿಲ್ಲದವರು ಇಂತಹ ಹತ್ತು ಹಲವು ದುರಂತಗಳನ್ನು ದಿನನಿತ್ಯ ಮಾಡಿಕೊಳ್ಳುತ್ತಿದ್ದಾರೆ. ಒಣ ಸೋಗಲಾಡಿತನಗಳು, ಢಾಂಬಿಕ ಬಂಡಾಚಾರಗಳು ಸಹಜತೆ ಹಾಗೂ ಮನುಷ್ಯತ್ವವನ್ನೇ ಬಲಿ ಪಡೆಯುತ್ತವೆ. ಕೃತಕತೆ, ಅಸಹಜತೆಗಳ ನಡುವೆ ಸಿಲುಕಿ ಉಸಿರುಗಟ್ಟಿ ಸಾಯಬೇಕಾದ ಸ್ಥಿತಿಗಳಿಗೂ ಕಾರಣವಾಗುತ್ತದೆ.